Micromax in-1: ಚೀನಾ ಫೋನ್‌ಗಳಿಗೆ ಸಮರ್ಥ ಸವಾಲು

0
283

ಚೀನಾದ ಫೋನ್‌ಗಳ ಭರಾಟೆ ನಡುವೆ ನಲುಗಿ ಅಜ್ಞಾತವಾಸದಲ್ಲಿದ್ದು ಇದೀಗ ಮತ್ತೆ ಮಾರುಕಟ್ಟೆಗೆ ಇಳಿದಿರುವ ಭಾರತದ ಮೈಕ್ರೋಮ್ಯಾಕ್ಸ್, ಇತ್ತೀಚೆಗಷ್ಟೇ ಇನ್ 1ಬಿ ಹಾಗೂ ಇನ್ ನೋಟ್ 1 ಸಾಧನಗಳನ್ನು ಬಿಡುಗಡೆಗೊಳಿಸಿತ್ತು. ಇದೀಗ ಇನ್ 1ಬಿ ಸಾಧನದ ಸುಧಾರಿತ ಆವೃತ್ತಿಯನ್ನು ಇನ್ 1 ಹೆಸರಿನಲ್ಲಿ ಬಿಡುಗಡೆಗೊಳಿಸಿದೆ. ಪ್ರಜಾವಾಣಿಗೆ ರಿವ್ಯೂಗೆ ದೊರೆತಿರುವ ಈ ಸ್ಮಾರ್ಟ್ ಫೋನ್ ಹೇಗಿದೆ? ತಿಳಿಯೋಣ.

ವಿನ್ಯಾಸ, ಡಿಸ್‌ಪ್ಲೇ
ನೋಡಿದ ತಕ್ಷಣ ಈಗಿನ ಯುವಜನರಿಗೆ ಆಪ್ತವಾಗುವ ದೊಡ್ಡ ಸ್ಕ್ರೀನ್, ಹಿಂಭಾಗದಲ್ಲಿ ಗಮನ ಸೆಳೆಯುವ ಕ್ಯಾಮೆರಾ ಸೆಟಪ್ ಹಾಗೂ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇದೆ. ಪಾಲಿಕಾರ್ಬೊನೇಟ್ ಬಾಡಿ, ಹಿಂಭಾಗದಲ್ಲಿ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಬರುವ ಟೆಕ್ಸ್‌ಚರ್ ವಿನ್ಯಾಸ, ಆಕರ್ಷಕವಾದ ಕ್ಯಾಮೆರಾ ಪ್ಯಾನೆಲ್ ಇದೆ. ಆಧುನಿಕವಾದ ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಇರುವುದು ಇದರ ಮತ್ತೊಂದು ವಿಶೇಷತೆ. ಬಾಕ್ಸ್‌ನಲ್ಲೇ ಬ್ಯಾಕ್ ಕವರ್ ನೀಡಲಾಗಿದೆ.

48 ಮೆಗಾಪಿಕ್ಸೆಲ್ ಸಾಮರ್ಥ್ಯದ ಪ್ರಧಾನ ಕ್ಯಾಮೆರಾ ಹಾಗೂ 5000 mAh ಚಾರ್ಜಿಂಗ್ ಸಾಮರ್ಥ್ಯದ ಬ್ಯಾಟರಿಯು ಚೀನಾದ ಪ್ರಮುಖ ಪ್ರತಿಸ್ಫರ್ಧಿಗಳಿಗೆ ಸವಾಲೊಡ್ಡುತ್ತಿದ್ದರೆ, ಸ್ಟಾಕ್ ಆಂಡ್ರಾಯ್ಡ್, ಅಂದರೆ ಯಾವುದೇ ಬ್ಲಾಟ್‌ವೇರ್‌ಗಳಿಲ್ಲದ ಪರಿಶುದ್ಧ ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆ ಆಕರ್ಷಕವಾಗಿದೆ. ಮುಂಭಾಗದಲ್ಲಿ ಪಂಚ್-ಹೋಲ್ ಸೆಲ್ಫೀ ಕ್ಯಾಮೆರಾ (8 ಮೆಗಾಪಿಕ್ಸೆಲ್) ಸೆಟಪ್ ಇದೆ. 395 ಪಿಪಿಐ ಸ್ಪಷ್ಟತೆಯಿರುವ ಸ್ಕ್ರೀನ್, ಹಿಂದಿನ ಇನ್-1ಬಿಗೆ ಹೋಲಿಸಿದರೆ ಅತ್ಯುತ್ತಮ ಸುಧಾರಣೆ ಕಂಡಿದ್ದು, ಚಿತ್ರಗಳು ಸ್ಫುಟವಾಗಿ ಗೋಚರಿಸುತ್ತವೆ.

ತಂತ್ರಾಂಶ ಮತ್ತು ಯೂಸರ್ ಇಂಟರ್ಫೇಸ್
ಗೂಗಲ್‌ನ ಆಂಡ್ರಾಯ್ಡ್ 10 ಕಾರ್ಯಾಚರಣಾ ವ್ಯವಸ್ಥೆಯೊಂದಿಗೆ ಸ್ಟಾಕ್ ಆಂಡ್ರಾಯ್ಡ್ ಯೂಸರ್ ಇಂಟರ್ಫೇಸ್ ಗಮನ ಸೆಳೆಯುತ್ತದೆ. ಇಂಟಲಿಜೆಂಟ್ ಅಸಿಸ್ಟೆನ್ಸ್ ಎಂಬ ವೈಶಿಷ್ಟ್ಯವಿದ್ದು, ಇದರಲ್ಲಿ ಫೋನ್ ತಿರುಗಿಸಿದರೆ ಕರೆ ನಿಶ್ಶಬ್ಧವಾಗಿಸುವುದು, ಫೋನ್ ಬಂದಾಗ ಕಿವಿಯ ಬಳಿ ಹಿಡಿದಾಕ್ಷಣ ಉತ್ತರಿಸಬಹುದಾದ ‘ಸ್ಮಾರ್ಟ್ ಆನ್ಸರ್’ ವ್ಯವಸ್ಥೆ, ಮೂರು ಬೆರಳುಗಳಲ್ಲಿ ಸ್ಕ್ರೀನ್ ಮೇಲೆ ಎಳೆದರೆ ಸ್ಕ್ರೀನ್ ಶಾಟ್ ತೆಗೆಯುವ ವ್ಯವಸ್ಥೆ, ಫೋನ್ ಎತ್ತಿಕೊಂಡಾಕ್ಷಣ ಸ್ಕ್ರೀನ್ ಆನ್ ಆಗುವುದು, ಕರೆ ಬಂದಾಗ ಬೆಳಕು ಫ್ಲ್ಯಾಶ್ ಆಗುವ ವ್ಯವಸ್ಥೆ – ಮುಂತಾದ ಆಸಕ್ತಿದಾಯಕ ವೈಶಿಷ್ಟ್ಯಗಳಿವೆ.

ಇದರೊಂದಿಗೆ ಡ್ಯೂರಾ ಸ್ಪೀಡ್ ಎಂಬ ಸೆಟ್ಟಿಂಗ್ ಮೂಲಕ, ಹಿನ್ನೆಲೆಯಲ್ಲಿ ನಿರ್ದಿಷ್ಟ ಆ್ಯಪ್‌ಗಳು ಕೆಲಸ ಮಾಡುವುದನ್ನು ಸ್ಥಗಿತಗೊಳಿಸಿ, ಮುನ್ನೆಲೆಯಲ್ಲಿರುವ ಆ್ಯಪ್‌ಗಳಿಗೆ ಹೆಚ್ಚು ವೇಗ ದೊರಕಿಸಿಕೊಡುವ ವ್ಯವಸ್ಥೆ ಚೆನ್ನಾಗಿ ಕೆಲಸ ಮಾಡುತ್ತದೆ. ಅಂತೆಯೇ ಹೊಸ ಫೋನ್‌ಗಳಲ್ಲಿರುವಂತೆ, ಎಡದಿಂದ ಅಥವಾ ಬಲದಿಂದ ಒಳಕ್ಕೆ ಸ್ವೈಪ್ ಮಾಡಿದರೆ, ಹಿಂದಿನ ಸ್ಕ್ರೀನ್‌ಗೆ ಹೋಗುವ ವ್ಯವಸ್ಥೆಯೂ ಕ್ಷಿಪ್ರವಾಗಿದೆ. ಇದು ಬ್ಯಾಕ್ ಬಟನ್‌ಗೆ ಪರ್ಯಾಯ.

ಹಾರ್ಡ್‌ವೇರ್, ಕಾರ್ಯನಿರ್ವಹಣೆ
ಮೈಕ್ರೋಮ್ಯಾಕ್ಸ್ ಇನ್ ನೋಟ್ 1ನಲ್ಲಿರುವುದಕ್ಕಿಂತ ಸ್ವಲ್ಪ ಹಿಂದಿನ ಪ್ರೊಸೆಸರ್ ಇದರಲ್ಲಿದೆ. ಅಂದರೆ, ನೋಟ್ 1ನಲ್ಲಿ ಹೀಲಿಯೊ ಜಿ85 ಚಿಪ್ ಇದ್ದರೆ, ಇದರಲ್ಲಿರುವುದು ಮೀಡಿಯಾಟೆಕ್ ಹೀಲಿಯೊ ಜಿ80 ಚಿಪ್. ಕಾರ್ಯನಿರ್ವಹಣೆಯಲ್ಲಿ ಹೆಚ್ಚೇನೂ ವ್ಯತ್ಯಾಸವಿಲ್ಲ. ವೇಗದ ಮತ್ತು ತೂಕದ ಹಾಗೂ ಭರ್ಜರಿ ಗ್ರಾಫಿಕ್ಸ್ ಇರುವ ಗೇಮ್ಸ್‌ಗೆ, ಫುಲ್ ಹೆಚ್‍‌ಡಿ ವಿಡಿಯೊ ವೀಕ್ಷಣೆಗೆ ಯಾವುದೇ ತೊಡಕಾಗಿಲ್ಲ. ಫಿಂಗರ್‌ಪ್ರಿಂಟ್ ಹಾಗೂ ಮುಖಚಹರೆ ಅನ್‌ಲಾಕ್ ತಂತ್ರಜ್ಞಾನವು ವೇಗವಾಗಿ ಕೆಲಸ ಮಾಡುತ್ತದೆ.

ಕ್ಯಾಮೆರಾ
ಇದರ ಬಗ್ಗೆ ಹೇಳಲೇಬೇಕು. ಹಿಂಭಾಗದಲ್ಲಿ 48 ಮೆಗಾಪಿಕ್ಸೆಲ್ ತ್ರಿವಳಿ ಕ್ಯಾಮೆರಾದ ಆಕರ್ಷಕ ಲಂಬ ಪ್ಯಾನೆಲ್ ಇದೆ. ತಲಾ 2 ಮೆಗಾಪಿಕ್ಸೆಲ್ ಸಾಮರ್ಥ್ಯದ ಮ್ಯಾಕ್ರೋ ಮತ್ತು ಡೆಪ್ತ್ ಸೆನ್ಸರ್ ಇದೆ. ಆದರೆ ಆಧುನಿಕ ಫೋನ್‌ಗಳಲ್ಲಿರುವಂತೆ ವೈಡ್ ಆ್ಯಂಗಲ್ ಸೆನ್ಸರ್ ಇಲ್ಲ. ಮುಂಭಾಗದಲ್ಲಿ 8MP ಸಾಮರ್ಥ್ಯದ ಸೆಲ್ಫೀ ಕ್ಯಾಮೆರಾ ವಿಡಿಯೊ ಕರೆಗೂ ಸೂಕ್ತವಾಗಿದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಅಡಕವಾಗಿರುವ ಕ್ಯಾಮೆರಾ ಸೆಟಪ್‌ನಲ್ಲಿರುವ ಹಲವು ಮೋಡ್‌ಗಳು ಆಸಕ್ತಿ ಹುಟ್ಟಿಸುತ್ತವೆ. ಅಪರ್ಚರ್ ಮೋಡ್, ಪ್ರೋ ಮೋಡ್, ಪೋರ್ಟ್ರೇಟ್, ನೈಟ್, HDR, ಮ್ಯಾಕ್ರೋ, ಬ್ಯೂಟಿ, ಟೈಮ್ ಲ್ಯಾಪ್ಸ್, ಸ್ಲೋ ಮೋಶನ್, ಪಾನೋರಮಾ ಮೋಡ್‌ಗಳೊಂದಿಗೆ ಫಿಲ್ಟರ್‌ಗಳು, ಇಂಟಲಿಜೆಂಟ್ ಸ್ಕ್ಯಾನಿಂಗ್ ಗಮನ ಸೆಳೆಯುತ್ತದೆ. ಅಪರ್ಚರ್ ಮೋಡ್‌ನಲ್ಲಿ ಬೊಕೆ ಎಫೆಕ್ಟ್ (ಹಿನ್ನೆಲೆಯನ್ನು ಮಸುಕಾಗಿಸುವುದು) ತುಂಬಾ ಚೆನ್ನಾಗಿದೆ. ಸೂಕ್ತ ಬೆಳಕಿರುವೆಡೆ ಅತ್ಯುತ್ತಮ ಫೋಟೋ ಹಾಗೂ ವಿಡಿಯೊಗಳು ಮೂಡಿಬಂದಿವೆ. ಆಟೋ-ಫೋಕಸ್ ಹಾಗೂ ವೈಡ್ ಆ್ಯಂಗಲ್ ವ್ಯವಸ್ಥೆ ಇಲ್ಲ ಎನ್ನುವುದು ಈ ಬೆಲೆಗೆ ಹೋಲಿಸಿದರೆ ದೊಡ್ಡ ತೊಡಕಾಗಲಾರದು.

ಬ್ಯಾಟರಿ ಮತ್ತು ಚಾರ್ಜಿಂಗ್
ಯುಎಸ್‌ಬಿ ಟೈಪ್-ಸಿ ಪೋರ್ಟ್ ಇರುವುದು ಈಗಿನ ಹೊಸ ಟ್ರೆಂಡ್. ಭರ್ಜರಿ ಅನ್ನಿಸುವ 5000 mAh ಬ್ಯಾಟರಿ ಇರುವುದರಿಂದ ಫೋನ್ ಸ್ವಲ್ಪ ತೂಕ ಹೊಂದಿದೆ. ಸಾಮಾನ್ಯ ಬಳಕೆಯಲ್ಲಿ, ಅಂದರೆ ಕರೆ, ಎಸ್ಸೆಮ್ಮೆಸ್, ಇ-ಮೇಲ್, ವಾಟ್ಸ್ಆ್ಯಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಬಳಕೆ ಮತ್ತು ಕೆಲವು ಫೊಟೊಗಳನ್ನು ತೆಗೆದಾಗ, 2 ದಿನಗಳ ಬ್ಯಾಟರಿ ಚಾರ್ಜ್‌ಗೆ ಸಮಸ್ಯೆಯಾಗಲಿಲ್ಲ. ಒಂದಿಷ್ಟು ವಿಡಿಯೊ ವೀಕ್ಷಿಸಿದರೆ ಒಂದುವರೆ ದಿನ.

ಬಾಕ್ಸ್‌ನಲ್ಲಿಯೇ ಬಂದಿರುವ 18W ಫಾಸ್ಟ್ ಚಾರ್ಜರ್ ಕೂಡ ಈ ಬೆಲೆಯಲ್ಲಿ ಚೆನ್ನಾಗಿಯೇ ಕೆಲಸ ಮಾಡುತ್ತಿದೆ. 5000mAh ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆಗಲು ಸುಮಾರು 2 ಗಂಟೆ ಬೇಕಿದ್ದರೆ, ಒಂದು ಗಂಟೆಯಲ್ಲಿ ಅರ್ಧಕ್ಕರ್ಧ ಚಾರ್ಜ್ ಆಗುತ್ತದೆ.

ಒಟ್ಟಾರೆ ಹೇಗಿದೆ?
5000mAh ಬ್ಯಾಟರಿ, 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ದೊಡ್ಡ ಸ್ಕ್ರೀನ್, ನೀಟ್ ಆಂಡ್ರಾಯ್ಡ್ ನೋಟದೊಂದಿಗೆ ಚೀನಾದ ಡಿವೈಸ್‌ಗಳಿಗೆ ಈ ಭಾರತೀಯ ಕಂಪನಿಯ ಫೋನ್ ಸ್ಫರ್ಧೆ ನೀಡುತ್ತಿದೆ. ಯಾವುದೇ ಬ್ಲಾಟ್‌ವೇರ್‌ಗಳಿಲ್ಲದ ತಂತ್ರಾಂಶವಿರುವುದು ಅದಕ್ಕೆ ಹೆಚ್ಚುವರಿ ಬಲ. ಚೀನಾದ ಫೋನ್‌ಗಳು ಬೇಡ, ಹತ್ತು ಸಾವಿರ ರೂ. ಆಸುಪಾಸಿನಲ್ಲಿ ಭಾರತದ ಫೋನೇ ಇರಲಿ ಎಂದುಕೊಂಡವರಿಗೆ ಇದು ಸೂಕ್ತ. ಫೋನ್ ಎರಡು ಮಾದರಿಗಳಲ್ಲಿ ಬರುತ್ತದೆ. 4ಜಿಬಿ+64ಜಿಬಿ ಹಾಗೂ 6ಜಿಬಿ+128ಜಿಬಿ ಸಾಮರ್ಥ್ಯವುಳ್ಳದ್ದು. ಒಂದುವರೆ ಸಾವಿರ ರೂ. ಬೆಲೆ ವ್ಯತ್ಯಾಸ.

ಮುಖ್ಯವಾದ ಸ್ಪೆಸಿಫಿಕೇಶನ್‌ಗಳು
ಡಿಸ್‌ಪ್ಲೇ: 6.67- ಇಂಚಿನ IPS ಡಿಸ್‌ಪ್ಲೇ, Full HD+ ರೆಸೊಲ್ಯುಶನ್ (2,400 x 1,080 ಪಿಕ್ಸೆಲ್), 60 Hz ರಿಫ್ರೆಶ್ ರೇಟ್, 20:9 ಆಸ್ಪೆಕ್ಟ್ ಅನುಪಾತ ಹಾಗೂ 395 ppi ಸ್ಪಷ್ಟತೆ. ಜೊತೆಗೆ, ಪಂಚ್-ಹೋಲ್ ಸೆಲ್ಫೀ ಕ್ಯಾಮೆರಾ.
ತಂತ್ರಾಂಶ: ಆಂಡ್ರಾಯ್ಡ್ 10.
ಸಿಪಿಯು: 12 nm ಮೀಡಿಯಾಟೆಕ್ ಹೀಲಿಯೊ G80 ಒಕ್ಟಾ-ಕೋರ್ 2.0 GHz
ಮೆಮೊರಿ: 4 GB / 6 GB RAM LPDDR4X
ಸ್ಟೋರೇಜ್: 64 GB / 128 GB, ವಿಸ್ತರಿಸಬಹುದು
ಪ್ರಧಾನ ಕ್ಯಾಮೆರಾ: AI ತ್ರಿವಳಿ ಕ್ಯಾಮೆರಾ (48 MP f/1.79 ಪ್ರಧಾನ + 2 MP f/2.4 ಮ್ಯಾಕ್ರೋ + 2 MP f/2.4 ಡೆಪ್ತ್ ಸೆನ್ಸರ್), LED ಫ್ಲ್ಯಾಶ್
ಸೆಲ್ಫೀ ಕ್ಯಾಮೆರಾ: 8 MP f/2.0
ಸಂಪರ್ಕ: USB ಟೈಪ್-C, 3.5 ಮಿಮೀ ಪೋರ್ಟ್, IR, Wi-Fi, ಬ್ಲೂಟೂತ್, ಜಿಪಿಎಸ್
ಸುರಕ್ಷತೆ: ಫಿಂಗರ್‌ಪ್ರಿಂಟ್ ಸ್ಕ್ಯಾನರ್. ಮುಖಚಹರೆ ಅನ್‌ಲಾಕ್
ಪಾರ್ಶ್ವದಲ್ಲಿ ಗೂಗಲ್ ಅಸಿಸ್ಟೆಂಟ್ ಕೀ
ಡ್ಯುಯಲ್ 4G, ನ್ಯಾನೋ SIMಗಳು, ಪ್ರತ್ಯೇಕ ಮೈಕ್ರೋಎಸ್‌ಡಿ ಕಾರ್ಡ್ ಸ್ಲಾಟ್
ಬ್ಯಾಟರಿ: 5,000 mAh
ಚಾರ್ಜಿಂಗ್: 18W ವೇಗದ ಚಾರ್ಜಿಂಗ್
ಬಣ್ಣಗಳು: ನೀಲಿ ಮತ್ತು ನೇರಳೆ
ಬೆಲೆ: ₹10,499 – 4 GB RAM & 64 GB ಸ್ಟೋರೇಜ್ ಹಾಗೂ ₹11,999 – 6 GB RAM & 128 GB ಸ್ಟೋರೇಜ್

My Micromax In 1 Review published in Prajavani on 6 Apr 2021

LEAVE A REPLY

Please enter your comment!
Please enter your name here