ಕರ್-ನಾಟಕ: ಇದು ಬೆಲೆ ಏರಿಕೆಗೆ ವಿರೋಧ ಮಟ್ಟ ಹಾಕುವ ತಂತ್ರ!

0
327

ಇದು ಯಾವತ್ತೋ ಮನಸ್ಸಿನಲ್ಲಿ ಸುಳಿದಿತ್ತು. ಅದೀಗ ನಿಜಾತಿನಿಜ ಅನ್ನೋ ಭಾವನೆ ದೃಢವಾಗುತ್ತಿದೆ. ಹೀಗಾಗಿಯೇ ನಿಮ್ಮೊಂದಿಗೆ ಹಂಚಿಕೊಳ್ಳಲು ಮನಸ್ಸು ಮಾಡಿದ್ದು. ಕರ್ನಾಟಕದಲ್ಲಿ ಕಳೆದೊಂದು ವಾರದಿಂದ ನಡೆದ ದೊಂಬರಾಟ, ಗದ್ದಲ, ಉದ್ವಿಗ್ನ ಸ್ಥಿತಿ, ಬೀದಿಜಗಳ… ಇವೆಲ್ಲವೂ ಕೇಂದ್ರದ ಕಾಂಗ್ರೆಸ್ ನೇತೃತ್ವದಲ್ಲಿಯೇ ನಡೆದ ನಾಟಕ. ಈ ಕೆಳಗಿನ ಅಂಶಗಳನ್ನು ಓದಿ ಇಂತಹಾ ಅಭಿಪ್ರಾಯ ನಿಮಗೂ ಬಾರದಿದ್ದರೆ ಮತ್ತೆ ಕೇಳಿ!

1. ಮೇ 13ರಂದು ವಿಧಾನಸಭಾ ಚುನಾವಣೆ ಫಲಿತಾಂಶಗಳು ಬರುವ ದಿನವೇ ಸುಪ್ರೀಂ ಕೋರ್ಟು ಅನರ್ಹ ಶಾಸಕರ ಕುರಿತಾದ ತೀರ್ಪು ನೀಡಿದ್ದು. ಅದೇ ದಿನ ಅಲ್ಲಿ ನಮ್ಮ ಘನತೆವೆತ್ತ ಕರ್ನಾಟಕದ ರಾಜ್ಯಪಾಲರು ಕೂಡ ದೆಹಲಿಯಲ್ಲೇ ಇದ್ದು, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ಕೇಂದ್ರ ಸಂಪುಟದ ಹಲವರನ್ನು ಭೇಟಿಯಾಗಿದ್ದರು ಎಂಬುದು ಹೌದಲ್ಲವೇ?

2. ಮೇ 13ರ ಶುಕ್ರವಾರ ವಿಧಾನಸಭಾ ಚುನಾವಣೆಗಳ ಫಲಿತಾಂಶ ಪ್ರಕಟವಾದ ತಕ್ಷಣ, ಅಂದರೆ ಮರುದಿನ ಈಗಾಗಲೇ ಕಳೆದೆರಡು ವರ್ಷಗಳಿಂದ ಬೆಲೆ ಏರಿಕೆಯೆಂಬ ಪೀಡೆಯಿಂದ ಕೆಟ್ಟು ಕಂಗೆಟ್ಟು ಹೋಗಿರುವ ಮತದಾರರ ಮೇಲೆ ಮತ್ತೊಂದು ಬಂಡೆಕಲ್ಲಿನ ಮಾದರಿಯಲ್ಲಿ ಬಂದು ಬಿದ್ದಿತ್ತು ಪೆಟ್ರೋಲ್ ಬೆಲೆ ಲೀಟರಿಗೆ 5 ರೂಪಾಯಿ ಏರಿಕೆಯಾಗುತ್ತದೆ ಎಂಬ ಘೋಷಣೆ!

3. ಪೆಟ್ರೋಲ್ ಬೆಲೆ ಏರಿಕೆ ಜಾರಿಗೆ ತಂದಿರುವುದು ಬಹುತೇಕ ವಿರಾಮದ ದಿನವೆಂದೇ ಹೆಚ್ಚಿನವರು ಭಾವಿಸಿರುವ ಶನಿವಾರ ಮಧ್ಯರಾತ್ರಿಯಿಂದ.

ಈ ಮೂರೂ ಅಂಶಗಳಿಗೆ ಎಲ್ಲೋ ಒಂದು ಲಿಂಕ್ ಏನಾದರೂ ಕಾಣಿಸುತ್ತಿದೆಯಾ?

ಮತ್ತಷ್ಟು ಪ್ರಶ್ನೆಗಳು ನಿಮಗೆ ನೀವೇ ಕೇಳಿಕೊಳ್ಳಬೇಕಾಗಿರುವುದು ಇಲ್ಲಿದೆ:
1. ಮೇ 13ರ ತೀರ್ಪಿನ ಬಳಿಕ ಸುಪ್ರೀಂ ಕೋರ್ಟಿನ ತೀರ್ಪಿನಿಂದ ಪುನಃ ಅರ್ಹರಾಗಿಬಿಟ್ಟ ಬಳಿಕ ಬಿಜೆಪಿಗೆ ಬೆಂಬಲ ಘೋಷಿಸಿದ ಬಿಜೆಪಿಯ 10 ಶಾಸಕರು ಬೆಂಗಳೂರಿನ ರಾಜಭವನದಲ್ಲಿ ರಾಜ್ಯಪಾಲರ ಭೇಟಿಗೆ (ಬೆಂಬಲ ವಾಪಸ್ ತೆಗೆದುಕೊಂಡ ಕುರಿತು ಹಿಂದೆ ನೀಡಿದ ಪತ್ರವನ್ನು ವಾಪಸ್ ತೆಗೆದುಕೊಳ್ಳುವ ನಿಟ್ಟಿನಲ್ಲಿ) ಅನುಮತಿ ಕೇಳಿದಾಗ ಸಿಬ್ಬಂದಿ ಕೊರತೆಯಿದೆ ಎಂಬ ಕಾರಣವೊಡ್ಡಿ ರಾಜ್ಯಪಾಲರಾದ ಹಂಸರಾಜ ಭಾರದ್ವಾಜರು ಅನುಮತಿ ನಿರಾಕರಿಸಿದ್ದು ಏಕೆ? (ಕಾಲಾಯಾಪನೆ ಉದ್ದೇಶ)

2. ಶುಕ್ರವಾರವೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೇ 16ರಿಂದ ವಿಧಾನಸಭೆ ಅಧಿವೇಶನಕ್ಕೆ ಅವಕಾಶ ಮಾಡಿಕೊಡಿ ಎಂದು ಕೇಳಿದಾಗಲೂ ಇದರ ಬಗ್ಗೆ ನಿರ್ಧಾರವನ್ನೇ ತೆಗೆದುಕೊಳ್ಳದೆ, ರಾಜ್ಯಪಾಲರು ಸುಮ್ಮನಿದ್ದುದು ಏಕೆ? (ಕಾಲಾಯಾಪನೆ ಉದ್ದೇಶ)

3. ಶನಿವಾರ ಪೆಟ್ರೋಲ್ ಬೆಲೆ ಏರಿಕೆ ಘೋಷಣೆಯಾಗಿಯೇ ಬಿಟ್ಟಿತು. ಭಾನುವಾರ ರಾತೋರಾತ್ರಿ ರಾಜ್ಯಪಾಲರಿಂದ ಕೇಂದ್ರಕ್ಕೆ “ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಎದುರಾಗಿದೆ. ಸರಕಾರವನ್ನು ವಜಾಗೊಳಿಸಿ, ವಿಧಾನಸಭೆಯನ್ನು ಅಮಾನತಿನಲ್ಲಿಡಿ” ಎಂಬ ಒಕ್ಕಣೆಯುಳ್ಳ ವರದಿಯನ್ನು ರವಾನಿಸಿಯೇ ಬಿಟ್ಟರು. ಯಾಕೆಂದರೆ, ಮರುದಿನ ಸೋಮವಾರ. ಚಟುವಟಿಕೆಗಳು ಆರಂಭವಾಗುವ ದಿನ. ಹಿಂದಿನ ದಿನ ರಾತೋರಾತ್ರಿ ಈ ಕುರಿತ ಊಹಾಪೋಹವನ್ನು ಮಾಧ್ಯಮಗಳಿಗೆ ಹರಿಯಬಿಟ್ಟಿದ್ದು ಯಾರು ಮತ್ತು ಕೇಂದ್ರದಲ್ಲಿ ಪ್ರಧಾನ ಪ್ರತಿಪಕ್ಷವಾದ ಬಿಜೆಪಿಯನ್ನು ಕೆರಳಿಸಿ, ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದು ಯಾರು ಮತ್ತು ಯಾಕೆ? (ಬೆಲೆ ಏರಿಕೆಯ ಬದಲು, ಬಿಜೆಪಿ ಬಿಕ್ಕಟ್ಟಿನತ್ತಲೇ ಗಮನ ಹರಿಸಲಿ ಎಂಬ ಉದ್ದೇಶ)

4. ಈಗ ಅನರ್ಹಗೊಂಡ ಬಿಜೆಪಿ ಶಾಸಕರೆಲ್ಲರೂ ಅನಿರೀಕ್ಷಿತವೋ ಎಂಬಂತೆ ಬಿಜೆಪಿ ಸರಕಾರಕ್ಕೆ ಮಾತ್ರವೇ ಅಲ್ಲ, ಯಡಿಯೂರಪ್ಪ ಅವರ ನಾಯಕತ್ವದಲ್ಲೇ ವಿಶ್ವಾಸವಿರಿಸಿ ಲಿಖಿತ ಬೆಂಬಲ ಘೋಷಿಸಿದಾಗ, ಸಹಜವಾಗಿ ಮತ್ತು ತಾಂತ್ರಿಕವಾಗಿ ಬಿಜೆಪಿಯ ಸಂಖ್ಯಾಬಲವು ಬಹುಮತಕ್ಕೆ ಬೇಕಾಗಿದ್ದ 113ಕ್ಕಿಂತ ಹತ್ತು ಹೆಚ್ಚೇ ಆಗಿತ್ತು. ಹೀಗಿರುವ ಸಂವಿಧಾನದ 356ನೇ ವಿಧಿ ಪ್ರಯೋಗಿಸಿ ಚುನಾಯಿತ ಮತ್ತು ಬಹುಮತವುಳ್ಳ ಸರಕಾರವನ್ನು ವಜಾಗೊಳಿಸುವುದು ಸಾಧ್ಯವಿಲ್ಲ ಎಂಬುದು ಇಷ್ಟು ವರ್ಷ ದೇಶವಾಳಿದ, ಮಹಾಮಹಿಮ ಕಾನೂನು ಪಂಡಿತರಿರುವ (ಕೇಂದ್ರದ ಮಾಜಿ ಕಾನೂನು ಸಚಿವರಾಗಿದ್ದ ರಾಜ್ಯಪಾಲರೂ ಸೇರಿದಂತೆ) ಕೇಂದ್ರೀಯ ಕಾಂಗ್ರೆಸ್ ನಾಯಕರಿಗೆ ಗೊತ್ತಿರಲಿಲ್ಲವೇ? (ಖಂಡಿತಾ ಗೊತ್ತಿತ್ತು)

5. ಒಂದು ವೇಳೆ, ಕಾನೂನಿನ ಸೂಕ್ಷ್ಮ ಎಳೆಯೊಂದರ ದೌರ್ಬಲ್ಯವನ್ನು ಪರಿಗಣಿಸಿ, ರಾಜ್ಯ ಸರಕಾರವನ್ನು ವಜಾಗೊಳಿಸಬಹುದು ಅಥವಾ ವಿಧಾನಸಭೆಯನ್ನು ಅಮಾನತಿನಲ್ಲಿಡಬಹುದು ಎಂಬುದು ಕೇಂದ್ರ ಸರಕಾರಕ್ಕೆ ಮನವರಿಕೆಯಾಯಿತು ಎಂದಿಟ್ಟುಕೊಳ್ಳೋಣ. ಹಾಗಿದ್ದರೆ, ಈಗಾಗಲೇ ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಕಾಂಗ್ರೆಸ್ ಮಿತ್ರಕೂಟದ ಕೈಯಿಂದ ಹೀನಾಯವಾಗಿ ದಂಡಿಸಿಕೊಂಡು ಗಾಯಗೊಂಡ ಹುಲಿಯಂತಾಗಿದ್ದ ಎಡಪಕ್ಷಗಳ ಬೆಂಬಲ ಪಡೆಯುವುದು ಸಾಧ್ಯವಿರಲಿಲ್ಲ ಎಂಬುದು ಗೊತ್ತಾಗಿಯೂ, ಈ ಕುರಿತ ನಿರ್ಣಯದ ಅಂಗೀಕಾರಕ್ಕೆ ರಾಜ್ಯಸಭೆಯ ಬೆಂಬಲ (245 ಸದಸ್ಯಬಲದ ಸಂಸತ್ ಮೇಲ್ಮನೆಯಲ್ಲಿ 123 ಬೇಕು) ದೊರೆಯುವುದು ಅಸಾಧ್ಯ ಎಂಬುದು ಕೇಂದ್ರಕ್ಕೆ ಖಚಿತವಾಗಿ ಗೊತ್ತಿರಲಿಲ್ಲವೇ? (ಗೊತ್ತಿತ್ತು ಎನ್ನುವುದನ್ನು ಚಿದಂಬರಂ ಅವರೇ ಒಪ್ಪಿಕೊಂಡರಲ್ಲಾ…)

6. ಸುಪ್ರೀಂ ಕೋರ್ಟು ತನ್ನ ತೀರ್ಪಿನಲ್ಲಿ ಮುಖ್ಯಮಂತ್ರಿ ಮತ್ತು ಸ್ಪೀಕರ್ ಕ್ರಮವನ್ನು ಟೀಕಿಸಿದೆ, ಅಥವಾ ಅವರಿಗೆ ‘ತಪರಾಕಿ’ ನೀಡಿದೆ. ಹೀಗಾಗಿ ಸರಕಾರವನ್ನು ವಜಾಗೊಳಿಸಬೇಕು ಎಂಬ ವಾದವು ಎಷ್ಟು ಪ್ರಸ್ತುತವಾಗುತ್ತದೆ? 2ಜಿ ಹಗರಣಕ್ಕೆ ಸಂಬಂಧಿಸಿದಂತೆ, ಮಹಾನ್ ತೆರಿಗೆ ಕಳ್ಳ ಹಸನ್ ಅಲಿ ಖಾನ್‌ನ ಮೇಲೆ ಕೇಸು ದಾಖಲಿಸುವುದಕ್ಕೆ ಸಂಬಂಧಿಸಿದಂತೆ, ಸಿವಿಸಿ ನೇಮಕಾತಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟು ಅದೆಷ್ಟು ಬಾರಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರಕಾರಕ್ಕೇ ತಥಾಕಥಿತ ‘ತಪರಾಕಿ’ ನೀಡಿಲ್ಲ? ಅವರ್ಯಾರೂ ರಾಜೀನಾಮೆ ನೀಡಿಲ್ಲ. ಹೀಗಿರುವಾಗ ಇವರು ರಾಜೀನಾಮೆ ನೀಡಿಯಾರೇ? ಎಂಬ ಪ್ರಶ್ನೆಯೂ ಅಲ್ಲಿ ಏಳುತ್ತದೆ. (ರಾಜೀನಾಮೆ ನೀಡುವುದಿಲ್ಲ ಎಂಬುದು ಕೂಡ ಖಂಡಿತಾ ಗೊತ್ತಿದೆ)

6. ಕೊಟ್ಟ ಕೊನೆಯಲ್ಲಿ, ರಾಜ್ಯದಲ್ಲಿ ಹಿಂದೆ ಚರ್ಚ್ ಮೇಲಿನ ದಾಳಿಗಳು ನಡೆದ ದಿನಗಳಲ್ಲಿದ್ದ, ರೈತರ ಮೇಲಿನ ದೌರ್ಜನ್ಯವಾದ ದಿನಗಳಲ್ಲಿದ್ದ, ಅಥವಾ, ವಿಶ್ವಾಸಮತ ಸಾಬೀತುಪಡಿಸುವಾಗಿನ ದಿನಗಳಲ್ಲಿದ್ದ ಪರಿಸ್ಥಿತಿ ಈಗ ರಾಜ್ಯದಲ್ಲಿತ್ತೇ? ರಾಷ್ಟ್ರಪತಿ ಆಳ್ವಿಕೆ ಹೇರುವಂತಹಾ ಅತ್ಯಂತ ಗಂಭೀರವಾದ ಅರಾಜಕತೆಯೋ, ಸಾಂವಿಧಾನಿಕ ಬಿಕ್ಕಟ್ಟೋ ಇತ್ತೇ? (ಇಲ್ವೇ ಇಲ್ಲ, ಹೆದರಿಸೋಕೆ ಏನಂತೆ, ಪ್ರತಿಪಕ್ಷಗಳ ಗಮನ ಅತ್ತ ಕಡೆ ಹೋದರಾಯಿತಲ್ಲಾ….)

ಇವೆಲ್ಲವುಗಳನ್ನು ಗಮನಿಸಿ ನೋಡಿದರೆ ಈ ಪ್ರಶ್ನೆಗಳಿಗೆ ಉತ್ತರ ನಿಮ್ಮಲ್ಲೇ ಸಿಗುತ್ತದೆ. ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ನೀಡಿದ ತೀರ್ಪಿನ ಪ್ರಕಾರ, ಸರಕಾರವೊಂದರ ಭವಿಷ್ಯ ರಾಜಭವನದಲ್ಲಲ್ಲ, ಸದನದಲ್ಲೇ ನಿರ್ಣಯವಾಗಬೇಕು. ಈ ತೀರ್ಪಿನ ಬಲವಿರುವಾಗ, ಮತ್ತು ಈ ಬಾರಿಯ ವರದಿಗೆ ಆಧಾರವಾಗಿರುವ ಸಾಕಷ್ಟು ಅಂಶಗಳು ಇಲ್ಲದಿರುವಾಗ ಸರಕಾರವನ್ನು ವಜಾಗೊಳಿಸುವುದು ಖಂಡಿತಾ ಸಾಧ್ಯವಿಲ್ಲ ಎಂಬುದು ಕಾನೂನು ಪಂಡಿತರೇ ಇರುವ ಕೇಂದ್ರೀಯ ನಾಯಕರಿಗೆ ಖಂಡಿತವಾಗಿಯೂ ಗೊತ್ತಿತ್ತು ಎನ್ನುವುದು ಎಷ್ಟು ನಿಜವೋ, ರಾಜ್ಯಪಾಲರ ಶಿಫಾರಸಿನ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ಅಷ್ಟೇ ವಿಳಂಬ ಮಾಡಿತು ಎಂಬುದು ಕೂಡ ಅಷ್ಟೇ ನಿಜ!

ಆದರೆ ಪಾಪ, ರಾಜ್ಯ ಕಾಂಗ್ರೆಸಿಗರಿಗೆ ಈ ಎಲ್ಲ ‘ನಾಟಕ’ಗಳ ಅರಿವೇ ಇಲ್ಲವೆಂಬಂತೆ ತೋರುತ್ತಿದೆ. ಅವರು ಎಷ್ಟೆಲ್ಲಾ ಕಷ್ಟಪಟ್ಟು ದೆಹಲಿ ಯಾತ್ರೆ ನಡೆಸಿ, ಕೇಂದ್ರದ ಮೇಲೆ ಒತ್ತಡ ತರಲು ತುಂಬಾ ಕಷ್ಟಪಟ್ಟರು. ಬಹುಶಃ ಕೇಂದ್ರೀಯ ನಾಯಕರು ಇವರ ಪಾಡು ಕಂಡು ಒಳಗೊಳಗೇ ನಗುತ್ತಿದ್ದಿರಬಹುದೇ? ಜೆಡಿಎಸ್‌ಗೂ ಇದರ ಅರಿವಿರಲಿಲ್ಲ. ಯಡಿಯೂರಪ್ಪರನ್ನು ಕೆಳಗಿಳಿಸುವುದರತ್ತಲೇ ಅದರ ದೃಷ್ಟಿ ನೆಟ್ಟಿತ್ತು. ಬಿಜೆಪಿಗೂ ಇದು ಗೊತ್ತೇ ಇಲ್ಲ. ಸರಕಾರ ಉಳಿಸಿಕೊಳ್ಳುವುದರ ಮೇಲೆಯೇ ಅದರ ಗಮನ ಕೇಂದ್ರೀಕೃತವಾಗಿತ್ತು!

ಒಟ್ಟಾರೆ ವಿಷಯ ಇಲ್ಲಿದೆ. ಮೇ 14ರ ಮಧ್ಯರಾತ್ರಿ ಸರಕಾರಿ ಸ್ವಾಮ್ಯದ ತೈಲ ವಿತರಣಾ ಕಂಪನಿಗಳು ಪೆಟ್ರೋಲ್ ಬೆಲೆ ಏರಿಕೆ ಮಾಡಿದ್ದು ಸಾಮಾನ್ಯದ್ದೇನಲ್ಲ. ಲೀಟರಿಗೆ 5 ರೂಪಾಯಿ! ಇದು ಅಭೂತಪೂರ್ವ ಏರಿಕೆ. ಅಂದರೆ ಕಳೆದ ಒಂದು ವರ್ಷದಲ್ಲಿ 9ನೇ ಬಾರಿಗೆ ಏರಿಕೆಯಾಗುತ್ತಿರುವುದು. ಹಿಂದೆಯೇ ಬೆಲೆ ಏರಿಕೆ ಘೋಷಿಸಬೇಕಿತ್ತು. ಆದರೆ ಐದು ರಾಜ್ಯಗಳಲ್ಲಿ (ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿ) ವಿಧಾನಸಭೆ ಚುನಾವಣೆಗಳು ಘೋಷಣೆಯಾಗಿದ್ದವು. ಬೆಲೆ ಏರಿಕೆ ಘೋಷಿಸಿದ್ದರೆ, ಈಗಾಗಲೇ ಬೆಲೆ ಏರಿಕೆಯಿಂದ ಕುದಿಯುತ್ತಿರುವ ಮತದಾರ ಏನು ಮಾಡುತ್ತಿದ್ದನೋ ಏನೋ!

ಅಷ್ಟು ಮಾತ್ರವಲ್ಲ ಇನ್ನೂ ಒಂದು ಸೆರಗಿನೊಳಗಿನ ಕೆಂಡ ಇದೆ. ಅದು ಯಾವಾಗ ಬೇಕಾದರೂ ನಮ್ಮನ್ನು ಸುಡಬಹುದಾಗಿದೆ. ಪ್ರಸಕ್ತ ಜಾಗತಿಕ ಕಚ್ಚಾ ತೈಲ ಬೆಲೆಯನ್ನು ನೋಡಿದರೆ, ಲೀಟರಿಗೆ 10 ರೂಪಾಯಿ ಏರಿಸಬೇಕಾಗಿತ್ತು ಎಂದಿವೆ ಈಗಾಗಲೇ ಪೆಟ್ರೋಲ್ ಬೆಲೆ ನಿಯಂತ್ರಣವನ್ನು ಸರಕಾರದ ಕೈಯಿಂದ ವರ್ಗಾಯಿಸಿಕೊಂಡಿರುವ ತೈಲ ಕಂಪನಿಗಳು. ಸದ್ಯೋಭವಿಷ್ಯದಲ್ಲಿ ಯಾವುದೇ ಚುನಾವಣೆಗಳಿಲ್ಲ, ಹೀಗಾಗಿ ಗದಾ ಪ್ರಹಾರಕ್ಕೆ ವೇದಿಕೆಯೊಂದು ಸಜ್ಜಾಗಿದೆ. ಹಣದುಬ್ಬರ ದರ ಏರಲು ಪೆಟ್ರೋಲ್ ಬೆಲೆ ಏರಿಕೆಯೂ ಒಂದು ಕಾರಣ. ಈ ಹಣದುಬ್ಬರ ನಿಯಂತ್ರಣಕ್ಕೆ ಸಾಲದ ಮೇಲಿನ ಬಡ್ಡಿ ದರಗಳ ಏರಿಕೆ. ಪ್ರಸಕ್ತ ದರ ಏರಿಕೆ ಯುಗದಲ್ಲಿ ಸಾಲ ಮಾಡಿಯೇ ಜೀವನ ಮಾಡುತ್ತಿರುವ ಜನ ಸಾಮಾನ್ಯನ ಪಾಡು ಯಾರಿಗೆ ಬೇಕು?

ಈಗ ಪರಿಸ್ಥಿತಿ ಅರ್ಥವಾಗಿರಬಹುದು. ನೇರವಾಗಿಯೇ ಹೇಳಿಬಿಡೋಣವೆಂದರೆ, 2ಜಿ ಹಗರಣಕ್ಕೆ ಸಂಬಂಧಿಸಿ ಪ್ರತಿಪಕ್ಷಗಳ ಪ್ರತಿಭಟನೆ ಕೊನೆ ಮುಟ್ಟಿ, ಜೆಪಿಸಿ ರಚನೆಯಾಗಿದೆ. ಇನ್ನು, ಹೀಗೆಯೇ ಬಿಟ್ಟರೆ, ಬಿಜೆಪಿಯು ತೀವ್ರವಾಗಿ ಪ್ರತಿಭಟನೆ ಮಾಡಿದರೆ, ಪೆಟ್ರೋಲ್ ಬೆಲೆ ಏರಿಕೆಯನ್ನೂ ಹಿಂತೆಗೆದುಕೊಳ್ಳಬೇಕಾದೀತು ಅಥವಾ ಏರಿಕೆಯ ಪ್ರಮಾಣ ಕಡಿಮೆ ಮಾಡಬೇಕಾದೀತು. ಈ ಭಯದಿಂದಲೇ, ಪ್ರಧಾನ ಪ್ರತಿಪಕ್ಷವಾದ ಬಿಜೆಪಿಯನ್ನು ಒಂದಿಷ್ಟು “ಬ್ಯುಸಿ”ಯಾಗಿರುವಂತೆ ಮಾಡಿದರೆ ಹೇಗೆ? ಈ ನಿರ್ಧಾರವೇ ಕರ್-ನಾಟಕಕ್ಕೆ ಕಾರಣ ಅಂತ ವಿಶ್ಲೇಷಿಸಬಹುದು. ರಾಜ್ಯಪಾಲರ ವರದಿಯ ಮೇಲೆ ಒಂದು ವಾರ ಕುಳಿತುಬಿಟ್ಟರೆ, ದರ ಏರಿಕೆಯ ಕಾವು ಒಂದಿಷ್ಟು ಕಡಿಮೆಯಾಗುತ್ತದೆ. ಯಾಕೆಂದರೆ, ದಿನದೂಡಿದಷ್ಟು ಜನರಿಗೆ ಮರೆವು ಜಾಸ್ತಿ.

ಅಲ್ಲಲ್ಲಿ ಏನೋ ಕೆಲವು ಸಂಘಟನೆಗಳು ಪ್ರತಿಭಟನೆ ಮಾಡಿದವಷ್ಟೇ. ಅದು ಲೆಕ್ಕಕ್ಕಿಲ್ಲ. ಪ್ರಧಾನ ಪ್ರತಿಪಕ್ಷ ಏನಾದರೂ ಬೀದಿಗಿಳಿದರೆ, ಬೊಬ್ಬೆ ಜೋರಾದರೆ, ಗಲಾಟೆ ಜೋರಾದರೆ? ಬಡಪಾಯಿ ಬಿಜೆಪಿ ಕೂಡ ಈ ಕರ್-ನಾಟಕದ ಬಲೆಗೆ ಬಿದ್ದೇ ಬಿಟ್ಟಿತು. ಬಿಜೆಪಿ ಕೇಂದ್ರೀಯ ಮುಖಂಡರೆಲ್ಲರೂ ದಕ್ಷಿಣ ಭಾರತದ ತಮ್ಮ ಮೊದಲ ಸರಕಾರವನ್ನು ಉಳಿಸುವುದರಲ್ಲೇ ‘ಬ್ಯುಸಿ’ಯಾಗಿಬಿಟ್ಟರು. ಬೇರೇನೂ ಕೂಡ ಅವರಿಗೆ ಕಾಣಿಸುತ್ತಿಲ್ಲ, ಜನರ ಬವಣೆಯೂ ಗೋಚರಿಸುತ್ತಿಲ್ಲ. ಸರಕಾರ ಉಳಿಸುವುದು ಹೇಗೆಂಬುದು ಮಾತ್ರವೇ ಅವರಿಗೆ ಕಾಣಿಸುತ್ತಿದ್ದುದು. ಹಾಗನಿಸುವುದಿಲ್ಲವೇ?

ಈ ವಾದ ಬಾಲಿಶ ಅಂತ ಕಾಣಿಸಬಹುದು. ಇದರ ಹಿಂದೆ ಉದ್ದೇಶವಿದೆ. ಈ ಬೆಲೆ ಏರಿಕೆಯ ತಲೆಯ ಮೇಲೆ ಹೊಡೆದಂತೆ ಪೆಟ್ರೋಲ್ ಬೆಲೆಯೇರಿಕೆಯ “ಭೀಕರ” ಹೊಡೆತದ ಬಗ್ಗೆ ಜನರನ್ನು ಪ್ರತಿನಿಧಿಸಬೇಕಿರುವ ಬಿಜೆಪಿಯಾಗಲೀ, ಸ್ವತಃ ಜನರಾಗಲೀ ‘ಇದು ಮಾಮೂಲಿ, ಯಾವಾಗ ನೋಡಿದ್ರೂ ಬೆಲೆ ಏರಿಕೆ ಆಗ್ತಾನೇ ಇರುತ್ತೆ, ನಮಗೇನು’ ಅನ್ನುವ ಧೋರಣೆಯೊಂದಿಗೆ ಸುಮ್ಮನಾಗಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳು ರಾಷ್ಟ್ರಪತಿ ಆಳ್ವಿಕೆಯ ಪರ ಹಾಗೂ ವಿರೋಧವಾಗಿ ಕೇಂದ್ರದ ಮೇಲೆ ಒತ್ತಡ ಹೇರಿದಷ್ಟೇ ಬಿಗಿಯಾಗಿ, ಈಗಾದ್ರೂ ಎಚ್ಚೆತ್ತುಕೊಂಡು ಒತ್ತಡ ಹೇರಿ, ‘ಹೌದು, ನಮಗೂ ಜನ ಪರ ಹೋರಾಟ ಮಾಡಲು ಗೊತ್ತಿದೆ, ಜನರಿಗಾಗಿ ಏನಾದರೂ ಮಾಡಿ ಗೊತ್ತಿದೆ, ನಾವೂ ಜನ ನಾಯಕರು’ ಅಂತ ತೋರಿಸಿಕೊಳ್ಳಬಹುದಲ್ಲವೇ?
[ವೆಬ್‌ದುನಿಯಾಕ್ಕಾಗಿ]

LEAVE A REPLY

Please enter your comment!
Please enter your name here