ಆ್ಯಪಲ್ ಫೋನ್‌ಗಳು ಆಂಡ್ರಾಯ್ಡ್ ಜನಪ್ರಿಯ ವೈಶಿಷ್ಟ್ಯಗಳನ್ನು ಪಡೆಯುತ್ತಿವೆ!

0
334

ಬಳಕೆಗೆ ಸುಲಭವಾಗಿರುವ ಮತ್ತು ಜೇಬಿಗೆ ಪೂರಕವಾಗಿರುವ ಆಂಡ್ರಾಯ್ಡ್ ಸ್ಮಾರ್ಟ್ ಫೋನ್‌ಗಳನ್ನೇ ಭಾರತದಲ್ಲಿ ಹೆಚ್ಚು ಮಂದಿ ಇಷ್ಟಪಡುತ್ತಾರೆ. ಅಮೆರಿಕ ಹಾಗೂ ಕೆಲವು ಅನ್ಯ ರಾಷ್ಟ್ರಗಳಲ್ಲಿ ಆ್ಯಪಲ್ ಫೋನ್ ಬಳಕೆ ಹೆಚ್ಚು. ಆಂಡ್ರಾಯ್ಡ್ ಸಾಧನಗಳನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವ ಆಯ್ಕೆಯಿದ್ದರೆ, ಆ್ಯಪಲ್‌ನಲ್ಲಿ ‘ಸುರಕ್ಷತೆ’ ಹೆಚ್ಚೆಂಬ ವಾದವೂ, ಪ್ರತಿಷ್ಠೆಯೂ ಮೇಳೈಸಿ ಅದರ ಬಳಕೆದಾರರ ವರ್ಗವೇ ಬೇರೆ. ಆದರೀಗ, ಆ್ಯಪಲ್ ಕೂಡ ಆಂಡ್ರಾಯ್ಡ್ ಸಾಧನಗಳಲ್ಲಿನ ಸೌಕರ್ಯಗಳನ್ನು ತನ್ನ ಬಳಕೆದಾರರಿಗೂ ನೀಡಲು ಹೊರಟಿದೆಯೇ ಎಂಬುದು ಕಳೆದ ವಾರ ಘೋಷಣೆಯಾದ ಪರಿಷ್ಕೃತ ಕಾರ್ಯಾಚರಣಾ ವ್ಯವಸ್ಥೆ – ಐಒಎಸ್-14ರಲ್ಲಿರುವ ವೈಶಿಷ್ಟ್ಯಗಳನ್ನು ಪರಾಮರ್ಶಿಸಿದರೆ ಅರಿವಿಗೆ ಬರುವ ವಿಚಾರ.

ಆ್ಯಪಲ್ ಪ್ರತಿ ವರ್ಷ ನಡೆಸುವ ವಾರ್ಷಿಕ ಡೆವಲಪರ್ಸ್ ಸಮಾವೇಶ (WWDC 2020) ಈ ಬಾರಿ ಕೋವಿಡ್ ಕಾರಣದಿಂದಾಗಿ ಆನ್‌ಲೈನ್‌ನಲ್ಲೇ ನಡೆದಿದೆ. ಈ ಸಂದರ್ಭ ಹೊಸ ಐಫೋನ್‌ಗಳಿಗೆ ಪರಿಷ್ಕೃತ ಕಾರ್ಯಾಚರಣೆ ವ್ಯವಸ್ಥೆಯನ್ನು ಘೋಷಿಸಲಾಗಿದೆ. ಇದು ಸದ್ಯಕ್ಕೆ ಡೆವಲಪರ್‌ಗಳಿಗೆ ಲಭ್ಯವಿದ್ದು, ವರ್ಷಾಂತ್ಯದಲ್ಲಿ ಬಳಕೆದಾರರ ಫೋನ್‌ಗಳಿಗೆ ದೊರೆಯಲಿವೆ.

ಹೊಸ ವೈಶಿಷ್ಟ್ಯಗಳೇನು?
ಪ್ರಮುಖವಾಗಿ ಹೋಂ ಸ್ಕ್ರೀನ್‌ನಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಯನ್ನೇ ಹೋಲುತ್ತಿರುವುದು ಇಂಟರ್ನೆಟ್‌ನಲ್ಲಿ ಭಾರಿ ವ್ಯಂಗ್ಯಕ್ಕೂ ಕಾರಣವಾಗಿದೆ. ಇನ್ನು ಐಫೋನ್ ಬಳಕೆದಾರರು ಕೂಡ ಹೋಂ ಸ್ಕ್ರೀನ್‌ನಲ್ಲಿ ಆ್ಯಪ್‌ಗಳನ್ನು ತಮಗೆ ಬೇಕಾದ ಕಡೆ ಸರಿಸಬಹುದು, ಹಲವು ಆ್ಯಪ್‌ಗಳನ್ನು ಒಟ್ಟು ಸೇರಿಸಿ ಪ್ರತ್ಯೇಕ ಗುಂಪು ರಚಿಸಬಹುದು. ನಿರ್ದಿಷ್ಟ ಕೆಟಗರಿಯ ಅನುಸಾರ ಸ್ವಯಂಚಾಲಿತವಾಗಿ ಆ್ಯಪ್‌ಗಳ ಗುಂಪು ರಚನೆಯಾಗುವ ವ್ಯವಸ್ಥೆಯೂ ಇದೆ. ಜೊತೆಗೆ ಹೋಂ ಸ್ಕ್ರೀನ್‌ನಲ್ಲಿ ಆ್ಯಪ್‌ಗಳ ವಿಜೆಟ್‌ಗಳು ಹೊಸದಾಗಿ ಸೇರ್ಪಡೆಯಾಗಿವೆ. ಈ ವಿಜೆಟ್‌ಗಳನ್ನು ತಮಗೆ ಬೇಕಾದ ಕಡೆ ಸರಿಸಬಹುದು.

ಚಿತ್ರದೊಳಗೆ ಮತ್ತೊಂದು ಚಿತ್ರ (ಪಿಕ್ಚರ್ ಇನ್ ಪಿಕ್ಚರ್) ಮೋಡ್ ಕೂಡ ಹೊಸದಾಗಿ ಪರಿಚಯಿಸಲಾಗಿದೆ. ಸಣ್ಣ ವಿಂಡೋದಲ್ಲಿ ವಿಡಿಯೊ ವೀಕ್ಷಿಸುತ್ತಲೇ ಬೇರೆ ಕೆಲಸಗಳನ್ನು ನಿಭಾಯಿಸಲು ಇದು ಅನುಕೂಲ. ಅಂತೆಯೇ, ಸಂದೇಶ ಕಳುಹಿಸುವ ‘ಆ್ಯಪಲ್ ಮೆಸೇಜಸ್’ ಆ್ಯಪ್‌ನಲ್ಲಿ ಹೊಸ ಮೆಮೋಜಿಗಳನ್ನು ಪರಿಚಯಿಸಿದ್ದು, ವಾಟ್ಸ್ಆ್ಯಪ್‌ನಂತೆ ನಿರ್ದಿಷ್ಟ ಕಾಮೆಂಟ್‌ಗೆ ಉತ್ತರಿಸುವ, ನಿರ್ದಿಷ್ಟ ವ್ಯಕ್ತಿ ಅಥವಾ ಗುಂಪನ್ನು ಮೇಲ್ಭಾಗದಲ್ಲೇ ಇರುವಂತೆ ಪಿನ್ ಮಾಡಿಡುವ, ಗ್ರೂಪಿನಲ್ಲಿರುವವರಿಗೆ ನಿರ್ದಿಷ್ಟವಾಗಿ ಖಾಸಗಿಯಾಗಿ ಸಂದೇಶ ಕಳುಹಿಸುವ, ನೋಟಿಫಿಕೇಶನ್‌ಗಳನ್ನು ನಿಯಂತ್ರಿಸುವ ಆಯ್ಕೆಗಳು ದೊರೆಯಲಿವೆ.

ಆ್ಯಪಲ್‌ನ ಧ್ವನಿ ಸಹಾಯಕ ಕಿರು ತಂತ್ರಾಂಶವಾಗಿರುವ ‘ಸಿರಿ’ಗೆ ಹೊಸ ರೂಪ ಬಂದಿದ್ದು, ಇಡೀ ಸ್ಕ್ರೀನನ್ನು ಆವರಿಸದೆ, ಕೆಳಭಾಗದಲ್ಲಿ ದೊಡ್ಡ ಗೋಳಾಕಾರದಲ್ಲಿ ಕಾಣಿಸಲಿದೆ. ಧ್ವನಿ ಸಂದೇಶಗಳನ್ನು ಕಳುಹಿಸಲು ಸಿರಿ ಬೆಂಬಲಿಸಲಿದೆ.

ಕಾರ್ ಕೀ ಎಂಬ ಹೊಸ ವೈಶಿಷ್ಟ್ಯ ಪರಿಚಯಿಸಲಾಗುತ್ತಿದ್ದು, ಐಫೋನ್ ಬಳಕೆದಾರರು ಬೆಂಬಲಿಸುವ ಅತ್ಯಾಧುನಿಕ ಕಾರುಗಳನ್ನು ವೈರ್‌ಲೆಸ್ ಆಗಿಯೇ ಅನ್‌ಲಾಕ್ ಮಾಡಬಹುದು ಮತ್ತು ಸ್ಟಾರ್ಟ್ ಮಾಡಬಹುದು. ಇಷ್ಟಲ್ಲದೆ, ಈ ಡಿಜಿಟಲ್ ಕಾರ್ ಕೀಗಳನ್ನು ಸಂದೇಶಗಳು ಅಥವಾ ಐಕ್ಲೌಡ್ ಮೂಲಕ ಬೇರೆಯವರಿಗೆ ಶೇರ್ ಮಾಡುವ ವ್ಯವಸ್ಥೆಯಿರುತ್ತದೆ.

ಇದರ ಜೊತೆಗೆ, ಇನ್‌ಸ್ಟಾಲ್ ಮಾಡದೆಯೇ (ಆಂಡ್ರಾಯ್ಡ್‌ನ ಇನ್‌ಸ್ಟೆಂಟ್ ಆ್ಯಪ್ಸ್ ರೀತಿ) ಆ್ಯಪ್‌ನ ನಿರ್ದಿಷ್ಟ ವೈಶಿಷ್ಟ್ಯವನ್ನಷ್ಟೇ ಬಳಸಲು ಅನುಕೂಲವಾಗುವ ‘ಆ್ಯಪ್ ಕ್ಲಿಪ್ಸ್’ ಪರಿಚಯಿಸಲಾಗಿದೆ. ಆ್ಯಪಲ್‌ನ ಸಫಾರಿ ಬ್ರೌಸರ್‌ನಲ್ಲಿ ಹೆಚ್ಚುವರಿ ಸುರಕ್ಷತಾ ವೈಶಿಷ್ಟ್ಯಗಳನ್ನು ಸೇರಿಸಲಾಗಿದ್ದು, ಪಾಸ್‌ವರ್ಡ್ ಮಾನಿಟರಿಂಗ್ ವ್ಯವಸ್ಥೆಯು ಹ್ಯಾಕ್ ಆಗಿರುವ ಬಗ್ಗೆ ಎಚ್ಚರಿಕೆ ನೀಡುತ್ತದೆ. ಈ ಪ್ರಮುಖ ಬದಲಾವಣೆಗಳಲ್ಲದೆ, ಮತ್ತಷ್ಟು ವೈವಿಧ್ಯಮಯ ವೈಶಿಷ್ಟ್ಯಗಳೊಂದಿಗ, ಸೆಪ್ಟೆಂಬರ್-ಅಕ್ಟೋಬರ್ ತಿಂಗಳ ವೇಳೆಗೆ iOS 14 ಐಫೋನ್ 6ಎಸ್ ಹಾಗೂ ಅದರ ನಂತರದ ಫೋನ್‌ಗಳಿಗೆ ಲಭ್ಯವಾಗಲಿದೆ.

My article Published in Prajavani

LEAVE A REPLY

Please enter your comment!
Please enter your name here