ಮೂರಕ್ಕೇ ಮೂವತ್ತು ವರ್ಷದಷ್ಟು ಸುಸ್ತಾದ ಬಿಜೆಪಿ ಸರ್ಕಾರ!

2
405

ದಕ್ಷಿಣ ಭಾರತದಲ್ಲಿ ಮೊದಲ ಬಿಜೆಪಿ ಸರಕಾರವನ್ನು ಕಟ್ಟಲು ಮೂರು ದಶಕಕ್ಕೂ ಅಧಿಕ ಕಾಲ ಕಠಿಣ ಪರಿಶ್ರಮ ಪಟ್ಟಿದ್ದ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರಿಗೆ ಆಡಳಿತದಲ್ಲಿ ಕಳೆದಿರುವ ಮೂರು ವರ್ಷಗಳಂತೂ ಮೂವತ್ತು ವರ್ಷಗಳನ್ನು ಕಳೆದಂತಾಗಿದೆ. ನಿಮಿಷಕ್ಕೊಂದು ಹಗರಣಗಳ ಆರೋಪ, ಮಂತ್ರಿಗಳ ವಿರುದ್ಧ ಕೇಸು, ಸ್ವಯಂ ಯಡಿಯೂರಪ್ಪ ಮೇಲೆ ಕೇಸು, ಪಕ್ಷದೊಳಗಿನ ಆಂತರಿಕ ಕಚ್ಚಾಟ ಸರಕಾರಕ್ಕೇ ಮುಳುವಾಗುವ ಪರಿಸ್ಥಿತಿ, ನಿಮಿಷಕ್ಕೊಮ್ಮೆ ಎಂಬಂತೆ ಪ್ರತಿಪಕ್ಷಗಳು ಹೀನಾಮಾನ ದೂಷಣೆಗೆ ಉತ್ತರಿಸುವ ಅನಿವಾರ್ಯತೆ, ರಾಜ್ಯಪಾಲರ ಕಿರಿಕಿರಿ, ಇವೆಲ್ಲವುಗಳ ನಡುವೆ “ಅಭಿವೃದ್ಧಿಯೇ ನಮ್ಮ ಮೂಲಮಂತ್ರ” ಎಂಬುದನ್ನು ಸಾಬೀತುಪಡಿಸಿ ತೋರಿಸಬೇಕಾಗಿರುವುದು ಮತ್ತು ಜನತೆಯಲ್ಲಿ ಆಡಳಿತದ ಮೇಲೆ ವಿಶ್ವಾಸ ಉಳಿಸಿಕೊಳ್ಳುವ ಹೊಣೆಗಾರಿಕೆ… ಈ ಪರಿಸ್ಥಿತಿಗಳ ನಡುವೆ ಮುಖ್ಯಮಂತ್ರಿಗೆ ಕಳೆದ ಮೂರು ವರ್ಷವಂತೂ ಮುಳ್ಳಿನ ಹಾಸಿಗೆಯಾಗಿದ್ದಂತೂ ದಿಟ.

ಪ್ರತಿಪಕ್ಷಗಳ ಆರೋಪದ ಆಂದೋಲನವು ಎಷ್ಟರ ಮಟ್ಟಿಗೆ ಮುಟ್ಟಿತ್ತೆಂದರೆ, ಸ್ವತಃ ಬಿಜೆಪಿ ಕೇಂದ್ರೀಯ ನಾಯಕತ್ವವೇ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕಿತ್ತೆಸೆಯಲಿದೆ ಎಂಬಲ್ಲಿವರೆಗೂ ತಲುಪಿತ್ತು. ಆದರೆ, ಕೇಂದ್ರೀಯ ನಾಯಕತ್ವವು ಕೊನೆಗೂ ಯಡಿಯೂರಪ್ಪ ಮೇಲೆ ಆರೋಪಗಳ ಆಧಾರದಲ್ಲಿ ಕ್ರಮ ಕೈಗೊಳ್ಳಬೇಕಾಗಿಲ್ಲ, ಹಿಂದಿನ ಸರಕಾರಗಳು ಸಾಗಿದ ದಾರಿಯಲ್ಲೇ ಸಾಗಿದ್ದಾರೆಯೇ ಹೊರತು, ಅವೆಲ್ಲವೂ ಭ್ರಷ್ಟಾಚಾರವಲ್ಲ ಎಂಬುದನ್ನು ಮನಗಂಡು, ಅವರನ್ನೇ ನಾಯಕ ಎಂದು ಗಟ್ಟಿಯಾಗಿ ಹೇಳಿಕೊಂಡಿದೆ. ಸ್ವಜನ ಪಕ್ಷಪಾತ ಆರೋಪವನ್ನೂ ಮುಖ್ಯಮಂತ್ರಿ ತೊಳೆದುಕೊಂಡಿರುವುದು ಮಗ ಮತ್ತು ಅಳಿಯನಿಗೆ ಕೊಡಲಾಗಿದ್ದ ಡೀನೋಟಿಫಿಕೇಶನ್ ಭೂಮಿಯನ್ನು ವಾಪಸ್ ಪಡೆಯುವುದಾಗಿ ಪ್ರಕಟಿಸುವ ಮೂಲಕ. ಆದರೂ ಭ್ರಷ್ಟಾಚಾರದ ಕಳಂಕವಂತೂ ಈಗಲೂ ಕೇಳಿ ಬರುತ್ತಿದೆ, ಮುಂದೆಯೂ ನಿಲ್ಲುವ ಲಕ್ಷಗಳು ಗೋಚರಿಸುತ್ತಿಲ್ಲ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಾಯಿಯಲ್ಲಿ ಪ್ರತೀ ಸುದ್ದಿಗೋಷ್ಠಿಯಲ್ಲಿ ಬರುವ ಶಬ್ಧಗಳು “ಯಡಿಯೂರಪ್ಪ ಭ್ರಷ್ಟ, ಲಜ್ಜೆಗೆಟ್ಟ, ಭಂಡ ಮುಖ್ಯಮಂತ್ರಿ” ಎಂಬುದನ್ನು ಕೇಳಿದರೆ, ಮುಖ್ಯಮಂತ್ರಿಯ ಬಗೆಗೆ ವಿರೋಧ ಪಕ್ಷಗಳು ಯಾವ ಭಾವನೆ ಹೊಂದಿವೆ ಎಂಬುದನ್ನು ಎತ್ತಿ ತೋರಿಸುತ್ತದೆ.

ಆಡಿಸಿ ನೋಡು ಬೀಳಿಸಿ ನೋಡು…
ಪಕ್ಷದೊಳಗಿನ ಭಿನ್ನಮತವು ಏನಿಲ್ಲವೆಂದರೂ ಕನಿಷ್ಠ ಮೂರು ಬಾರಿ (2009ರಲ್ಲಿ ರೆಡ್ಡಿ ಸೋದರರು ಬಂಡಾಯವೆದ್ದಾಗ, ನಂತರ 2010ರಲ್ಲಿ ಪಕ್ಷೇತರ ಮಂತ್ರಿಗಳಾದ ಗೂಳಿಹಟ್ಟಿ ಶೇಖರ್ ಮತ್ತು ಶಿವನಗೌಡ ನಾಯ್ಕ್ ಅವರನ್ನು ವಜಾಗೊಳಿಸಿ ಸಂಪುಟ ಪುನಾರಚನೆಗೆ ಮುಂದಾದಾಗ ಬಿಜೆಪಿಯ ಶಾಸಕರೂ ಬಂಡಾಯವೆದ್ದು ರಿಸಾರ್ಟ್ ರಾಜಕಾರಣ ನಡೆದಾಗ ಹಾಗೂ ಆನಂತರ ವಿಶ್ವಾಸಮತದ ಸಂದರ್ಭ ತಮ್ಮ ಶಾಸಕರನ್ನೇ ಅನರ್ಹಗೊಳಿಸಿ, ಅವರು ಅರ್ಹರು ಎಂದು ಸುಪ್ರೀಂ ಕೋರ್ಟಿನಿಂದ ತೀರ್ಪು ದೊರೆತು, ರಾಜ್ಯಪಾಲರು ಸರಕಾರ ವಜಾಗೊಳಿಸಲು ಶಿಫಾರಸು ಮಾಡಿದಾಗ) ಅವರ ನಾಯಕತ್ವಕ್ಕೆ ದೊಡ್ಡ ಹೊಡೆತ ಬಿದ್ದಿತ್ತು. ರಾಷ್ಟ್ರಪತಿ ಆಳ್ವಿಕೆಯ ತೂಗುಗತ್ತಿಯು ನೆತ್ತಿಯ ಮೇಲೆ ಇದ್ದು, ಎರಡು ಬಾರಿ ಈಗಾಗಲೇ ಪಾರಾಗಿದ್ದಾರೆ. ಅವುಗಳ ನಡುವೆ, ಯಡಿಯೂರಪ್ಪ ಭ್ರಷ್ಟಾಚಾರ ನಡೆಸಿದ್ದಾರೆ, ಅವರ ಮೇಲೆ ಕೇಸು ಹಾಕಲು ಅನುಮತಿ ಕೊಡಿ ಎಂಬ ವಿಚಾರವು ನ್ಯಾಯಾಲಯದಲ್ಲಿ ಇನ್ನೂ ಕುಂಟುತ್ತಾ ಸಾಗುತ್ತಿದೆ.

ಒಂದೆಡೆ ವೀರಶೈವ ಸಮಾಜದ ಧಾರ್ಮಿಕ ಮುಖಂಡರ ಜನ ಬೆಂಬಲ ಗಟ್ಟಿಯಾಗತೊಡಗಿದಾಗ, ರಾಜ್ಯದ ಮತದಾರರು ಒಕ್ಕಲಿಗ ಮತ್ತು ವೀರಶೈವ ಓಟು ಬ್ಯಾಂಕುಗಳಾಗಿ ಧ್ರುವೀಕರಣಗೊಳ್ಳುತ್ತಾರೆಯೋ ಎಂಬ ಆತಂಕವೂ ಸೃಷ್ಟಿಯಾಗಿತ್ತು. ಎರಡು ಬಾರಿಯೂ ರಾಜ್ಯಪಾಲ ಹಂಸರಾಜ ಭಾರದ್ವಾಜರು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಮಾಡಿದ ಶಿಫಾರಸು ಕೇಂದ್ರದಿಂದ ತಿರಸ್ಕಾರಗೊಂಡಿತು. ಪ್ರತಿಪಕ್ಷಗಳು ಹಗರಣದ ಆರೋಪದಲ್ಲಿ ಜನಾಂದೋಲನ, ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದ ಯಾತ್ರೆ, ದಿನಕ್ಕೊಂದರಂತೆ ಪತ್ರಿಕಾಗೋಷ್ಠಿ ಮುಂತಾದವುಗಳನ್ನು ನಡೆಸಿ ಬಿಜೆಪಿ ಸರಕಾರವನ್ನು ಉರುಳಿಸುವ ಸರ್ವ ಪ್ರಯತ್ನವನ್ನೂ ಮಾಡಿದವು. ಆದರೆ, ಆಡಿಸಿ ನೋಡು, ಬೀಳಿಸಿ ನೋಡು, ಉರುಳಿ ಹೋಗದು ಎಂಬಂತೆ ಗಟ್ಟಿ ಜೀವವಾಗಿ ನಿಂತಿತು.

ಮುಚ್ಚಿಹೋದ ಅಭಿವೃದ್ಧಿ ಕಾರ್ಯಗಳು…
ಬಹುಶಃ ಯಾವುದೇ ಮುಖ್ಯಮಂತ್ರಿ ತಮ್ಮ ಜೀವಮಾನ ಕಾಲದಲ್ಲಿ ಎದುರಿಸದೇ ಇದ್ದಷ್ಟು ಹಗರಣದ ಆರೋಪಗಳು, ಪ್ರತ್ಯಾರೋಪಗಳು, ಟೀಕೆಗಳು, ನಿಂದನೆಗಳನ್ನು ಸಂದು ಹೋದ ಮೂರು ವರ್ಷಗಳಲ್ಲಿ ಯಡಿಯೂರಪ್ಪ ಕಂಡಿದ್ದಾರೆ, ಕೇಳಿದ್ದಾರೆ. ಆದರೂ ಗಟ್ಟಿ ಗುಂಡಿಗೆ. ಆದರೆ ಬಿಜೆಪಿ ಹೆಸರಿಗೆ ಕಳಂಕ ಬಂತೇ ಹೊರತು, ಬಿಜೆಪಿ ಸರಕಾರವು ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಜನಹಿತ ಯೋಜನೆಗಳು ಎಲ್ಲವೂ ಪ್ರಚಾರವಿಲ್ಲದೆ ಸೊರಗಿದವು ಅಥವಾ ಹಗರಣಗಳ ಆರೋಪಗಳ ಮುಸುಕಿನೊಳಗೆ ಸೇರಿಹೋದವು ಎಂಬುದು ಹೆಚ್ಚು ಸೂಕ್ತ. ಒಂದಿಷ್ಟು ಸುದ್ದಿ ಮಾಡಿದ್ದು ಭಾಗ್ಯಲಕ್ಷ್ಮಿ ಯೋಜನೆ. ಅದರಲ್ಲಿಯೂ ಸೀರೆ ವಿತರಣೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಪ್ರತಿಪಕ್ಷಗಳು ಕೂಗೆಬ್ಬಿಸಿದವು. ಮತ್ತೊಂದು ಗಮನಿಸಬೇಕಾದ ಕಾರ್ಯಕ್ರಮವೆಂದರೆ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ. ಸೈಕಲ್ ಖರೀದಿಯಲ್ಲೂ ಅವ್ಯವಹಾರ ನಡೆಯಿತು ಎಂದವು ಪ್ರತಿಪಕ್ಷಗಳು. ಆದರೆ, ರೈತರಿಗೆ ಶೇ.1ರ ಬಡ್ಡಿ ದರದಲ್ಲಿ ಸಾಲ, ಬಡ ವರ್ಗದವರಿಗೆ ಪಿಂಚಣಿ ಯೋಜನೆ… ಇತ್ಯಾದಿ ಕಾರ್ಯಕ್ರಮಗಳೆಲ್ಲವೂ ಹಗರಣ ಆರೋಪಗಳ ನಡುವೆ ಸದ್ದಿಲ್ಲದೆ ಅಡಗಿಯೇ ಹೋದವು.

ಬಿಜೆಪಿ ಸರಕಾರಕ್ಕೆ ತನ್ನ ಸಾಧನೆಗಳನ್ನು ಸಮರ್ಥವಾಗಿ ಬಿಂಬಿಸಿಕೊಳ್ಳುವ ಸಾಮರ್ಥ್ಯವೂ ಇಲ್ಲದೇ ಹೋಯಿತು. ಒಂದಾದ ಬಳಿಕ ಒಂದರಂತೆ ಪೇರಿಸುತ್ತಲೇ ಇರುವ ಆರೋಪಗಳ ರಾಶಿಯಲ್ಲಿ ಯಾವುದಕ್ಕೆಂದು ಉತ್ತರಿಸುವುದು? ಬಿಜೆಪಿಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ತತ್ತರಿಸಿದರು. ಅಥವಾ ಈ ನಿಟ್ಟಿನಲ್ಲಿ ವಿಫಲರಾದರು ಎಂದೇ ಹೇಳಬಹುದು. ಧನಂಜಯ ಕುಮಾರ್ ಅಥವಾ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಪುಟ್ಟಸ್ವಾಮಿ ಬಿಟ್ಟರೆ, ಬೇರಾವುದೇ ಬಿಜೆಪಿ ನಾಯಕರೂ ತಮ್ಮದೇ ಸರಕಾರವನ್ನು ಸಮರ್ಥಿಸುವ ಗೋಜಿಗೆ ಹೋಗಲಿಲ್ಲ. ತೀರಾ ಇತ್ತೀಚೆಗಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ “ನಾವೆಲ್ಲರೂ ಒಂದೇ, ಯಡಿಯೂರಪ್ಪರೇ ನಮ್ಮ ನಾಯಕ” ಅಂತೆಲ್ಲಾ ಹೇಳತೊಡಗಿದ್ದಾರೆ. ಅನರ್ಹ ಸಾಸಕರೂ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ. ಸಮರ್ಥಿಸಿಕೊಳ್ಳಲು ಗಟ್ಟಿ ಜನ ಯಾರೂ ಇಲ್ಲವಾದ ಕಾರಣದಿಂದಾಗಿ, ಬಿಜೆಪಿ ಸರಕಾರ ಏನು ಮಾಡಿದೆ ಎಂದು ಜನರು ತಿಳಿಯುವ ಬದಲು, ಈ ಹಗರಣದ ಬಗ್ಗೆ ಪಕ್ಷವೇನು ಹೇಳುತ್ತದೆ ಎಂದೇ ಕಾದು ಕುಳಿತುಕೊಳ್ಳುವಂತಹಾ ಪರಿಸ್ಥಿತಿ.

ಚುನಾವಣೆಯೆಂಬ ಅದೃಷ್ಟ…
ಇಷ್ಟೆಲ್ಲಾ ಬಿಕ್ಕಟ್ಟುಗಳ ನಡುವೆಯೂ ‘ಆಪರೇಶನ್ ಕಮಲ’ ಎಂಬೊಂದು ರಾಜಕೀಯ ಭೂತವು ತನ್ನ ಕೆಲಸ ಮಾಡುತ್ತಲೇ ಇತ್ತು. ತತ್ಫಲವಾಗಿ, ಒಂದಷ್ಟು ಉಪ ಚುನಾವಣೆಗಳು. ಆದರೆ ಉಪ ಚುನಾವಣೆಗಳಲ್ಲಿ ಬಿಜೆಪಿಯೇ ಮೇಲುಗೈ ಸಾಧಿಸುತ್ತಿರುವುದು, ಜನರು ಈ ಹಗರಣದ ಆರೋಪಗಳಿಗೆ ಸೊಪ್ಪು ಹಾಕಲಿಲ್ಲ ಎಂಬ ಕಾರಣಕ್ಕೆ ಅನ್ನುವುದು ಬಿಜೆಪಿ ಹೇಳಿಕೆಯಾದರೆ, ಬಿಜೆಪಿ ಗೆದ್ದದ್ದು ಹಣ ಹಂಚಿಯೇ ಎಂಬುದು ಪ್ರತಿಪಕ್ಷಗಳ ವಾದ. ಆದರೆ, ಆಯಾ ಊರಿನ ಮತದಾರರಿಗೇ ನಿಜ ಸಂಗತಿ ಏನೂಂತ ಗೊತ್ತಿರುತ್ತದೆ ಎಂಬುದು ಕನಿಷ್ಠ ಜ್ಞಾನ.

2008ರಿಂದೀಚೆಗೆ ನಡೆದ ಹೆಚ್ಚಿನ ಉಪ ಚುನಾವಣೆಗಳಲ್ಲಿ ಬಿಜೆಪಿಯೇ ಮೇಲುಗೈ ಸಾಧಿಸಿದ್ದಂತೂ ನಿಜ. ಅಧಿಕಾರಕ್ಕೆ ಬಂದ ಬಳಿಕ 2009ರಲ್ಲಿ ರಾಜ್ಯದ 28ರಲ್ಲಿ 19 ಲೋಕಸಭಾ ಸ್ಥಾನಗಳು ಬಿಜೆಪಿಗೇ ದೊರೆತವು. ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗಳು ಕೂಡ ಯಡಿಯೂರಪ್ಪ ಅವರ ಪ್ರತಿಷ್ಠೆ ಹೆಚ್ಚಿಸಲು ಕಾರಣವಾಯಿತು. ಕಳೆದ ವರ್ಷ ನಡೆದ ಪ್ರತಿಷ್ಠಿತ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯಲ್ಲಿಯೂ ದಿಗ್ವಿಜಯ ಸಾಧಿಸಿದರೆ, ತೀರಾ ಇತ್ತೀಚೆಗೆ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ವಿಜಯ ಗಳಿಸಿದ್ದು. ಅದರಲ್ಲೂ, ಜೆಡಿಎಸ್ ಮತ್ತು ಗೌಡರ ಕುಟುಂಬದ ಭದ್ರಕೋಟೆಯಾದ ಚನ್ನಪಟ್ಟಣದಲ್ಲಿ ಅದನ್ನು ಮಗುಚಿ ಹಾಕಿದ್ದು, ಹಗರಣಗಳ ಸರಮಾಲೆಯ ಆರೋಪ ಮಾಡಿದವರಿಗೇ ಅಚ್ಚರಿ ಮೂಡಿಸಿದ ಸಂಗತಿ ಎಂಬುದು ಸುಳ್ಳಲ್ಲ.

ಆದರೂ ಎದ್ದುಕಾಣುವ ವಿಶ್ವಾಸ…
3 ವರ್ಷ ಪೂರೈಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಆತ್ಮವಿಶ್ವಾಸದಿಂದ ಹೇಳಿದ ಮಾತುಗಳನ್ನೇ ಕೇಳಿ: “ಹೆಮ್ಮೆಯಿಂದ ಹೇಳುತ್ತಾ ಇದ್ದೇನೆ, ಪ್ರತಿಪಕ್ಷಗಳ ಕಾಟದ ನಡುವೆಯೂ ನಾವು ಅಭಿವೃದ್ಧಿ ಮಾಡಿದ್ದೇವೆ. ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ, ಯೋಜನೆ ಅನುಷ್ಠಾನದಲ್ಲಿ ನಮ್ಮ ರಾಜ್ಯ ಮೊದಲ ಸ್ಥಾನ, ಎರಡನೇ ಸ್ಥಾನದಲ್ಲಿದೆ. ಪ್ರತಿಪಕ್ಷಗಳ ಕಾಟವಿಲ್ಲದೇ ಹೋಗಿದ್ದರೆ, ಖಂಡಿತವಾಗಿಯೂ ಎಲ್ಲ ಕ್ಷೇತ್ರಗಳಲ್ಲಿಯೂ ನಂ.1 ಆಗುತ್ತಿದ್ದೆವು. ನಮ್ಮ ಸಾಧನೆಯನ್ನು ದಾಖಲೆಗಳೇ ಹೇಳುತ್ತವೆ. ನಮ್ಮ ಕಳೆದ 3 ವರ್ಷಗಳ ಅಡಳಿತದಲ್ಲಿ, ಯಾವುದೇ ವಿಭಾಗದಲ್ಲಿ ಹಿಂದಿನ ಸರಕಾರಗಳಿಗೆ ಹೋಲಿಕೆ ಮಾಡಿ, ನಾವು ಹಿಂದೆ ಬಿದ್ದಿದ್ದೇವೆ ಎಂಬ ಒಂದೇ ಒಂದು ಉದಾಹರಣೆ ತೋರಿಸಿ!” ಎನ್ನುತ್ತಾ, ಪ್ರತಿಪಕ್ಷಗಳಲ್ಲಿ ಕೇಳಿಕೊಂಡಿದ್ದಾರೆ “ಇನ್ನೆರಡು ವರ್ಷವಾದ್ರೂ ಸರಿಯಾಗಿ ಒಳ್ಳೆಯ ಕೆಲಸ ಮಾಡಲು ಅವಕಾಶ ಮಾಡಿಕೊಡಿ, ತಪ್ಪಿದ್ದರೆ ತಿಳಿಹೇಳಿ. ಇಲ್ಲ ಸಲ್ಲದ ಆರೋಪ ಮಾಡುತ್ತಾ ಕಾಲ ಕಳೆಯಬೇಡಿ!”

ಇದು ಬೆನ್ನು ತಟ್ಟಿಕೊಂಡ ಹೇಳಿಕೆಯಾಗಿದ್ದರೂ ಕೂಡ, ಜನ ಪರ ಯೋಜನೆಗಳು ಮಾಡಿರುವ ಸಂಗತಿಯನ್ನು ಜನರಿಗೆ ತಲುಪಿಸಲು ಅಷ್ಟೇ ವಿಫಲವಾಗಿದೆ ಎಂಬುದಂತೂ ಅಷ್ಟೇ ನಿಜ.

ಅಧಿಕಾರಕ್ಕೆ ಬಂದಾಗ ಬಹುಮತ ಕೊರತೆಯಿಂದಾಗಿ ಪಕ್ಷೇತರರ ಊರುಗೋಲು ಪಡೆದಿದ್ದ ಬಿಜೆಪಿಗೆ ಸದ್ಯಕ್ಕೆ 224 ಸದಸ್ಯರ ವಿಧಾನಸಭೆಯಲ್ಲಿ ಸ್ಪೀಕರ್ ಸಹಿತವಾಗಿ 120 ಸ್ಥಾನಗಳನ್ನು ಸ್ವಂತ ಬಲವೇ ಇದೆ. ಇದರಲ್ಲಿ ಆಪರೇಶನ್ ಕಮಲದ ಶ್ರೀರಕ್ಷೆಯೇ ಅತ್ಯಧಿಕ. ಪಕ್ಷದೊಳಗೆ ಮತ್ತೆ ಭಿನ್ನಮತವೇನಾದರೂ ಕಾಣಿಸಿಕೊಂಡಿಲ್ಲವೆಂದರೆ ಮತ್ತು ಹಗರಣದ ಆರೋಪಗಳು ಇತ್ಯರ್ಥವಾದರೆ, ಸರಕಾರದ ಗಾಲಿಗಳು ಸರಾಗವಾಗಿ ತಿರುಗಬಹುದು. ಅಲ್ಲವೇ ಆಗಾಗ್ಗೆ ಪಂಕ್ಚರ್ ಹಾಕಿಸುತ್ತಾ ಮುಂದುವರಿಯಬೇಕಾಗುತ್ತದೆ.

ಕೊನೆ ಮಾತು:
ಹಿಂದೆ ಜನತಾ ದಳದಲ್ಲಿ ಬಿಚ್ಚು ಮಾತಿಗೆ ಪ್ರಸಿದ್ಧರಾಗಿದ್ದ ಮತ್ತು “ಮದಿರೆ ಮಾನಿನಿ ಪ್ರಿಯ ನಾನು” ಅಂತ ಘಂಟಾಘೋಷವಾಗಿ ಸಾರಿದ್ದ ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದ ಕಾಲ. ಪ್ರತಿಪಕ್ಷಗಳಂತೂ ಸಿಕ್ಕಾಪಟ್ಟೆ ಕೂಗಾಟ ಎಬ್ಬಿಸಿ, ಪಟೇಲ್ ರಾಜೀನಾಮೆಗೆ ಒತ್ತಾಯಿಸಿದಾಗ, ಸರಕಾರ ಪತನವಾಗಲಿದೆ ಎಂದೆಲ್ಲಾ ಹೇಳಿಕೆ ನೀಡಿದ ಸಂದರ್ಭದಲ್ಲಿ ಪಟೇಲರು ಸದನದಲ್ಲೇ ಒಂದು “ಹೋರಿ ಬೀಜದ ಕಥೆ” ಹೇಳಿದ್ದರು. ಅದೆಂದರೆ, ಹೋರಿಯೊಂದು ಮುಂದೆ ಹೋಗುತ್ತಿದ್ದಾಗ ಹಿಂದಿನಿಂದ ನಾಯಿಗಳು, ಹೋರಿಯ ಬೀಜ ಈಗ ಬೀಳುತ್ತದೆ, ಮತ್ತೆ ಬೀಳುತ್ತದೆ ಎಂದು ಕಾಯುತ್ತಾ ಹಿಂಬಾಲಿಸುತ್ತಿದ್ದವಂತೆ! ತಮ್ಮ ಸರಕಾರವೆಂದೂ ಬೀಳುವುದಿಲ್ಲ ಎಂದು ಪ್ರತಿಪಕ್ಷಗಳಿಗೆ ತಿಳಿ ಹೇಳಲು ಪಟೇಲರು ಬಳಸಿದ್ದು ಈ ದೃಷ್ಟಾಂತವನ್ನು!
[ವೆಬ್‌ದುನಿಯಾಕ್ಕಾಗಿ ಮೊನ್ನೆ ಬರೆದದ್ದು]

2 COMMENTS

  1. ಇದೇ ರೀತಿ, ಕೇಂದ್ರದಲ್ಲಿ ಮೋನ್‌ಮೋನ್‌ ಸಿಂಗ್‌ ಸರ್ಕಾರ ಅತಿ ಭ್ರಷ್ಟ, ಲಜ್ಜೆಗೆಟ್ಟ, ಭಂಡ ಬೋ***ಳ ಸರ್ಕಾರ. 2ಜಿ ಹಗರಣ, ಸಿಡಬ್ಲ್ಯೂಜಿ ಹಗರಣ, ಅಮೆರಿಕಾ, ಪಾಕಿಸ್ತಾನಗಳ ದೇಶಗಳ ಮೇಲಿನ ಅಂಧವಿಶ್ವಾಸ, ಪಾಕಿಸ್ತಾನದ ಐಎಸ್‌ಐ ಮತ್ತು ಅಲಕಾಯಿದಾ ನಂಟಿನ ಬಗ್ಗೆ ಡೇವಿಡ್‌ ಹೆಡ್ಲಿ ಒಂದೊಂದಾಗಿ ಹೊರಗೆಡಹುತ್ತಿದ್ದರೂ ಮನಮೋಹನ ಸಿಂಗ ಪಾಕಿಸ್ತಾನದೊಂದಿಗೆ ಮಾತುಕತೆ ಮುಂದುವರೆಸಲು ಕಾತರನಾಗಿದ್ದಾನೆ. ಪೆದ್ದು, ಗೂಬೆ ಮುಂಡೇದಕ್ಕೆ ಅರ್ಥ ಆಗಲ್ವಾ?

  2. ಹೌದು ನಾರಾಯಣ ಅವರೇ,
    ನಮ್ಮ ಕೇಂದ್ರ ಸರಕಾರವಂತೂ ಆಡಳಿತ ನಡೆಸುವುದು ಹೇಗೆ ಎಂಬುದನ್ನೇ ಮರೆತುಬಿಟ್ಟಂತಿದೆ, ಅಲ್ವಾ?

LEAVE A REPLY

Please enter your comment!
Please enter your name here