ಕಾಲ ಎನ್ನುವುದು ಎಲ್ಲ ಬೇಸರಗಳನ್ನು ಎಷ್ಟು ಬೇಗನೆ ಕಳೆದುಬಿಡುತ್ತದಲ್ಲ…!
ಹೀಗೆಯೇ ಬೇಸರ ಕಳೆಯಲು ಚೆನ್ನೈಯ ಮರೀನಾ ಬೀಚಿಗೆ ಹೋಗಿದ್ದೆ.
ಶನಿವಾರ ಸಂಜೆ ಆದುದರಿಂದ ಹೆಚ್ಚಿನ ಐಟಿ ಕಂಪನಿಗಳಿಗೆ ರಜೆ. ಬಹುಶಃ ಅದೇ ಕಾರಣಕ್ಕೆ ಬೀಚಿಗೆ ಹೋಗುವ ಕೆಥಡ್ರಲ್ ರೋಡ್‌ನಲ್ಲಿ ಬೈಕಲ್ಲಿ ಸಾಗುವುದೇ ಒಂದು ರೀತಿಯ ಮಜಾ. ಸ್ಲೋ ಸೈಕಲ್ ರೇಸ್ ಅಂತ ಚಿಕ್ಕದಿರುವಾಗ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ಬಹುಶಃ ಇಲ್ಲಿ ಬೈಕ್ ರೈಡ್ ಮಾಡೋಕೆ ಒಳ್ಳೆ ಸಹಾಯಕ್ಕೆ ಬಂತು. ಎಷ್ಟು ಸಾಧ್ಯವೇ ಅಷ್ಟು ಸ್ಲೋ ಹೋಗಬೇಕಾಗುತ್ತದೆ.
ಪಕ್ಕದಲ್ಲೇ ಕಿಲ ಕಿಲ ನಗುವಿನ, ತಬ್ಬಿಕೊಂಡೇ ಬೈಕಲ್ಲಿ ಕುಳಿತುಕೊಂಡು ಪ್ರಪಂಚ ಮರೆತು ಸಮುದ್ರತೀರವೆಂಬ ಮಾಯಾಲೋಕದತ್ತ ಆಮೆನಡಿಗೆಯಲ್ಲಿ ಧಾವಿಸುವ ಯುವ ಜೋಡಿ, ಎದುರಿನಿಂದ ಬರುವ ರಸ್ತೆಯಲ್ಲಿ ರೊಯ್ಯನೇ ಧಾವಿಸಿ, ಬೀಚ್ ವೀಕ್ಷಣೆ ಮುಗಿಸಿ ಮರಳುತ್ತಿರುವ ಜೋಡಿ ಹಕ್ಕಿಗಳು…. ಇವನ್ನೆಲ್ಲಾ ಆರಾಮವಾಗಿ ನೋಡುತ್ತಾ ಸಾಗಬಹುದು. ಬೀಚಿನತ್ತ ಹೋಗುವ ರಸ್ತೆ ವಾಹನಗಳಿಂದ ಗಿಜಿಗುಟ್ಟುತ್ತಿದ್ದರೆ, ಬರುವ ರಸ್ತೆಯಲ್ಲಿ ಒಂಥರಾ ವಾಹನಗಳಿಲ್ಲದ ಕಾರಣ Free way.
ಅಂತೂ ಬೀಚ್ ತಲುಪಿದಾಗ ಸಮುದ್ರದ ಭೋರ್ಗರೆತ ಕೇಳಿದಾಗ ಥಟ್ಟನೆ ನೆನಪಾದದ್ದು ಸುನಾಮಿ. ವರ್ಷದ ಹಿಂದೆ ಕಾಡಿದ ಇದೇ ಸಮುದ್ರದ ಅಲೆಗಳು ಎಷ್ಟೊಂದು ಜೀವಗಳನ್ನು ಅಯಾಚಿತವಾಗಿ, ಅಚಾನಕ್ಕಾಗಿ ತನ್ನೊಳಗೆ ಸೆಳೆದುಕೊಂಡಿತಲ್ಲ… ದೇಶ ವಿದೇಶಗಳಲ್ಲಿ ಮರೀನಾ ಬೀಚ್ ಹೆಸರು (ಕು)ಖ್ಯಾತಿ ಪಡೆಯಲು ಕಾರಣವಾಯಿತಲ್ಲ….
ಆದರಿಂದು ಅದೇ ಬೀಚು ಏನೂ ಆಗದಂತೆ ತಣ್ಣನೆ ಗಾಳಿ ಬೀಸುತ್ತಾ, ತನ್ನತ್ತ ಬರುವವರಿಗೆ ತಂಪಿನ ಸಿಂಚನ ನೀಡುತ್ತಿದೆ. ಚೆನ್ನೈಯ ಬಿಸಿಲಿಗೆ ಬಸವಳಿದವರಿಗೆ ವೀಕೆಂಡ್ ಕಳೆಯಲು ಇದೇ ಬೀಚ್ ಬೇಕು.
ಜನ ಮರೆತಿದ್ದಾರೆ ಈ ಸಮುದ್ರರಾಜನ ಕೋಪವನ್ನು…. ಮತ್ತದೇ ಬೀಚಿಗೆ ಮನೋವ್ಯಾಕುಲತೆಯನ್ನೋ, ನಿರಾಶೆಗಳ ಗಂಟನ್ನೋ ಕಳೆದು ಬಿಸಾಡಲು ಬರುತ್ತಿದ್ದಾರೆ. ವಾರವಿಡೀ ದಣಿವರಿಯದ ದುಡಿತದಿಂದ ಕೊಂಚ ‘ಬದಲಾವಣೆ’ ಇರಲಿ ಅಂತ ಬಂದ ದಣಿದ ಮೈ ಮನಗಳಿಗೆ ಸಾಂತ್ವನ ನೀಡುತ್ತಿದ್ದಾನೆ ಸಮುದ್ರ ರಾಜ. ಬಿಸಿಲಿನ ಬೇಗೆಯಿಂದ ದಣಿದ ತನುವಿಗೂ, ಏನೇನೋ ಯೋಚಿಸುತ್ತಾ ಕೆಡಿಸಿಕೊಂಡ ಮನಕ್ಕೂ ತಣ್ಣನೆಯ ಗಾಳಿಯ ಸಿಂಚನ….
ಕಾಲ ಎನ್ನುವುದು ಎಲ್ಲ ಬೇಸರಗಳನ್ನು ಎಷ್ಟು ಬೇಗನೆ ಕಳೆದುಬಿಡುತ್ತದಲ್ಲ…!
Comment problem solve ಆಗಿಲ್ಲ. ಆದುದರಿಂದ ದಯವಿಟ್ಟು ಈ ಲಿಂಕ್ ಕ್ಲಿಕ್ಕಿಸಿ.:
ಜೋಡಿ ಹಕ್ಕಿಗಳನ್ನು ನೋಡಿದಾಗ ಒಂಟಿ ಬೇಜಾರಾಗತ್ತೆ ಅಲ್ವಾ?
ಜೋಡಿ ಬೇಡೋ ಕಾಲವಮ್ಮ – ನೀವು ಗಂಟು ಹಾಕುವ ದಿನದ ನಿರೀಕ್ಷೆಯಲ್ಲಿರುವೆ
ಶ್ರೀನಿವಾಸರೆ,
ಒಂಟಿ ಜೀವನಕ್ಕಿಂತ ಜಂಟಿ ಜೀವನವೇ ಲೇಸು ಅನ್ನೋದರಲ್ಲಿ ನಾನ್ಯಾವತ್ತೋ ನಂಬಿಕೆ ಇಟ್ಟಾಗಿದೆ. ಇನ್ನೇನಿದ್ದರೂ ಗಂಟು ಬಿಚ್ಚಿ ಕರಗಿಸುವುದು… 😛