ಮಿಸ್ಡ್ ಕಾಲ್‌ನಿಂದ ಬ್ಯಾಂಕ್ ಖಾತೆಗೆ ಕನ್ನ: ಎಚ್ಚರ ವಹಿಸುವುದು ಹೇಗೆ?

0
286

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಜಯ ಕರ್ನಾಟಕ ಅಂಕಣ, 11 ಜನವರಿ 2019

ಐದಾರು ಮಿಸ್ಡ್ ಕಾಲ್ ಬಂದಿತ್ತು, ಇದರಿಂದಾಗಿ ಮುಂಬಯಿಯ ಉದ್ಯಮಿಯೊಬ್ಬರು ತಮ್ಮ ಬ್ಯಾಂಕಿನಿಂದ 1.86 ಕೋಟಿ ರೂ. ಹಣ ಕಳೆದುಕೊಂಡರು ಎಂಬ ಸುದ್ದಿ ಕಳೆದ ವಾರ ಪ್ರಕಟವಾಯಿತು. ಅರೆ, ಮಿಸ್ಡ್ ಕಾಲ್‌ನಿಂದ ಹಣ ಹೇಗೆ ಮಾಯವಾಗುತ್ತದೆ? ಅಂತ ಅಚ್ಚರಿ ಪಟ್ಟವರಲ್ಲಿ ನಾನೂ ಒಬ್ಬ. ಈ ಕುರಿತು ಒಂದಿಷ್ಟು ವಿಚಾರಣೆ ನಡೆಸಿದಾಗ, ನಾವೂ ನೀವೂ ಹೇಗೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂಬುದೂ ತಿಳಿಯಿತು.

ಈ ಮಿಸ್ಡ್ ಕಾಲ್ ಬಂದಿರುವುದು ಮಧ್ಯರಾತ್ರಿಯಲ್ಲಿ ಮತ್ತು ಇಂಥದ್ದೊಂದು ವಂಚನೆಗೆ ಕಾರಣವಾಗಿರುವುದು ಸಿಮ್ ಸ್ವ್ಯಾಪ್ ಎಂಬ ವಿಧಾನ. ಈ ಪದ ಈಗಾಗಲೇ ಚಾಲ್ತಿಯಲ್ಲಿದೆ. ನಿಮ್ಮ ಮೊಬೈಲ್ ನಂಬರನ್ನು ಬೇರೆಯ ಸಿಮ್ ಕಾರ್ಡ್‌ನಲ್ಲಿ ಆ್ಯಕ್ಟಿವೇಟ್ ಮಾಡಿಸಿಕೊಳ್ಳುವ ವಿಧಾನವೇ ಸಿಮ್ ಸ್ವ್ಯಾಪ್. ಡಿಜಿಟಲ್ ಜಗತ್ತಿನ ಬಗ್ಗೆ ತಿಳಿವು ಇರುವ ಸಾಕ್ಷರರೂ ಈ ಸೈಬರ್ ವಂಚನೆಗೆ ಈಡಾಗಬಲ್ಲರು ಎಂಬುದು ಹಲವು ಸಂದರ್ಭಗಳಲ್ಲಿ ಈಗಾಗಲೇ ಸಾಬೀತಾಗಿದೆ.

ಸರಿಯಾಗಿ ಸಿಗ್ನಲ್ ಸಿಗುತ್ತಿಲ್ಲ, ಕಾಲ್ ಡ್ರಾಪ್ (ಮಾತನಾಡುವ ಮಧ್ಯದಲ್ಲೇ ಕರೆ ಕಟ್) ಆಗುತ್ತಿದೆ, ಮೊಬೈಲ್ ಇಂಟರ್ನೆಟ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಅಂತೆಲ್ಲ ನೀವು ಮೊಬೈಲ್ ಸೇವಾ ಕಂಪನಿಗಳ (ಏರ್‌ಟೆಲ್, ವೊಡಾಫೋನ್, ಬಿಎಸ್ಸೆನ್ನೆಲ್, ಜಿಯೋ ಇತ್ಯಾದಿ) ಕಸ್ಟಮರ್ ಕೇರ್‌ಗೆ ದೂರು ನೀಡಿದರೆ ಅವರು ಹೇಳುವುದು ಸಿಮ್ ಕಾರ್ಡ್ ಬದಲಾಯಿಸಿಕೊಳ್ಳಿ ಅಂತ. ಇದುವೇ ಸಿಮ್ ಸ್ವ್ಯಾಪ್. ಇದಕ್ಕೆ ನಿಮ್ಮ ಸಿಮ್ ಕಾರ್ಡ್‌ನ ಹಿಂಭಾಗದಲ್ಲಿರುವ 20 ಅಂಕಿಗಳ ವಿಶಿಷ್ಟ ಸಂಖ್ಯೆಯೊಂದು ಬೇಕಾಗುತ್ತದೆ. ಈ ಸಂಖ್ಯೆಯು ಕ್ರಿಮಿನಲ್‌ಗಳ ಕೈಗೆ ಸಿಕ್ಕಿಬಿಟ್ಟರೆ, ಇಂಟರ್ನೆಟ್ ಬ್ಯಾಂಕಿಂಗ್‌ಗೆ ಲಿಂಕ್ ಆಗಿರುವ ನಿಮ್ಮ ಮೊಬೈಲ್ ನಂಬರ್ ಮೂಲಕ ಅವರು ಖಾತೆಯನ್ನು ಗುಡಿಸಿಹಾಕಬಲ್ಲರು!

ವಂಚನೆ ಎರಡು ಹಂತಗಳಲ್ಲಿ ನಡೆಯುತ್ತದೆ. ಮೊದಲು ವಂಚಕರು ನಿಮ್ಮ ಬ್ಯಾಂಕ್ ಖಾತೆಯ ಐಡಿ, ಪಾಸ್‌ವರ್ಡನ್ನು ಫಿಶಿಂಗ್ ಲಿಂಕ್‌ಗಳ ಮೂಲಕ ಪಡೆದುಕೊಂಡಿರುತ್ತಾರೆ. ಉದಾಹರಣೆಗೆ, ‘ನಿಮ್ಮ ಬ್ಯಾಂಕ್ ಖಾತೆಯನ್ನು ಇಲ್ಲಿ ಅಪ್‌ಡೇಟ್ ಮಾಡಿ’ ಅಂತ ಒಂದು ಲಿಂಕ್ ಕಳುಹಿಸುತ್ತಾರೆ. ಇದು ನೋಡುವುದಕ್ಕೆ ನಿಮ್ಮ ಬ್ಯಾಂಕಿನ ವೆಬ್‌ಸೈಟಿನಂತೆಯೇ ಇರುತ್ತದೆ. ಯುಆರ್‌ಎಲ್‌ನಲ್ಲಿ (ವೆಬ್ ವಿಳಾಸ) ಸುಲಭವಾಗಿ ಗುರುತಿಸಲು ಕಷ್ಟವಾಗುವಂತಹಾ ಬದಲಾವಣೆಯಿರುವ ಸ್ಪೆಲ್ಲಿಂಗ್ ಇರುತ್ತದೆ. ನೀವು ಅರಿವಿಲ್ಲದೆ ಎಲ್ಲವನ್ನೂ ನಮೂದಿಸಿರುತ್ತೀರಿ. ಇದಲ್ಲವಾದರೆ, ನಿಮ್ಮ ಪರಿಚಿತರೇ ನಿಮ್ಮ ಬ್ಯಾಂಕ್ ಖಾತೆಯನ್ನು ತಿಳಿದುಕೊಂಡಿರಬಹುದು.

ಎರಡನೇ ಹಂತವೆಂದರೆ, ವಂಚಕರು ನಿಮ್ಮ ಮೊಬೈಲ್ ಸೇವಾ ಕಂಪನಿಗಳ ಕಸ್ಟಮರ್ ಕೇರ್ ಹೆಸರಿನಲ್ಲಿ ಕರೆ ಮಾಡಿ, ನಿಮಗೆ ಉತ್ತಮ ಸೇವೆ ನೀಡುತ್ತೇವೆ, ಕಾಲ್ ಕಟ್ ಆಗುವುದನ್ನು ನಿವಾರಿಸುತ್ತೇವೆ, ಇಂಟರ್ನೆಟ್ ಸ್ಪೀಡ್ ಹೆಚ್ಚಿಸುತ್ತೇವೆ ಅಂತೆಲ್ಲ ಪುಸಲಾಯಿಸಿ, ನಿಮ್ಮಿಂದ 20 ಅಂಕಿಯ ನಂಬರ್ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಬಳಿಕ, ನಿಮಗೆ ಕರೆ ಬಂದಾಗ ಒಂದನ್ನು ಒತ್ತಿ ಅಂತನೂ ಹೇಳಿರುತ್ತಾರೆ. ಅಲ್ಲಿಗೆ ನಿಮ್ಮ ಸಿಮ್ ಕಾರ್ಡ್‌ನ ನಿಯಂತ್ರಣ ಅವರ ಕೈಸೇರುತ್ತದೆ. ತಮ್ಮಲ್ಲಿರುವ ಡೂಪ್ಲಿಕೇಟ್ (ಹೊಸ) ಸಿಮ್ ಕಾರ್ಡ್‌ಗೆ ನಿಮ್ಮ ನಂಬರನ್ನು ಬದಲಾಯಿಸುವಲ್ಲಿ ಯಶಸ್ವಿಯಾಗುತ್ತಾರೆ.

ರಾತೋರಾತ್ರಿ ಐದಾರು ಮಿಸ್ ಕಾಲ್ ಯಾಕೆ? ಒಂದು ಸಿಮ್ ಕಾರ್ಡ್‌ನಿಂದ ಮತ್ತೊಂದು ಸಿಮ್ ಕಾರ್ಡ್‌ಗೆ ಮೊಬೈಲ್ ನಂಬರ್ ವರ್ಗಾವಣೆಯಾಗಲು ಕನಿಷ್ಠ 4 ಗಂಟೆ ಬೇಕಾಗುತ್ತದೆ. ಆ ಸಮಯದಲ್ಲಿ ನೀವು ಅದನ್ನು ಬಳಸಬಾರದು, ರಾತ್ರಿ ನಿದ್ದೆಯಲ್ಲಿರುವಾಗ ಪದೇ ಪದೇ ಕಾಲ್ ಬಂದರೆ ಕಿರಿಕಿರಿಯಾಗಿ ನೀವದನ್ನು ಆಫ್ ಮಾಡುತ್ತೀರಿ ಅಥವಾ ಸೈಲೆಂಟ್ ಮೋಡ್‌ನಲ್ಲಿಡುತ್ತೀರಿ ಎಂಬ ಹುನ್ನಾರವಷ್ಟೇ. ನಿಮ್ಮ ನಂಬರ್ ಅವರ ಸಿಮ್ ಕಾರ್ಡ್‌ಗೆ ವರ್ಗಾವಣೆಯಾದಾಗ, ಬ್ಯಾಂಕ್‌ನಿಂದ ಹಣ ವರ್ಗಾವಣೆಗಾಗಿ ಬರುವ ಒಟಿಪಿ (ಒನ್ ಟೈಮ್ ಪಿನ್/ಪಾಸ್‌ವರ್ಡ್) ಅವರಿಗೇ ಸಿಗುತ್ತದೆ! ತಕ್ಷಣ ರಾತ್ರಿಯೇ ಅವರು ಹಣವನ್ನು ನಕಲಿ ಖಾತೆಯ ಮೂಲಕ ತಮ್ಮ ವಶಕ್ಕೆ ಪಡೆಯುತ್ತಾರೆ.

ಹೀಗಾಗಿ ಒಟಿಪಿ, ಸಿಮ್ ರಿಜಿಸ್ಟ್ರೇಶನ್ ನಂಬರನ್ನು, ಆಧಾರ್ ನಂಬರನ್ನು ಯಾವತ್ತೂ ಯಾರ ಜತೆಯೂ ಹಂಚಿಕೊಳ್ಳಲೇಬೇಡಿ.

LEAVE A REPLY

Please enter your comment!
Please enter your name here