ಆಪರೇಶನ್ನೇ ಬಿಜೆಪಿಯ ಎಲ್ಲ ಉಪದ್ವ್ಯಾಪಕ್ಕೂ ಕಾರಣ!

0
262

ಬಹುತೇಕ ಕಾಮನ್ವೆಲ್ತ್ ಗೇಮ್ಸ್ ಜತೆಜತೆಗೆಯೇ ಆರಂಭಗೊಂಡು ಅದರ ಸಮಾರೋಪದಂದೇ ವರ್ಣರಂಜಿತ ತೆರೆ ಕಂಡಿದೆ ರಾಜ್ಯ ರಾಜಕಾರಣದ ಕಾಮನ್ ‘ವೆಲ್ತ್’ಗಾಗಿನ ಹೈ ಡ್ರಾಮಾ. ಆದರಿದು ತಾತ್ಕಾಲಿಕ ತೆರೆ ಎಂಬುದನ್ನು ನಾವು ಗಮನಿಸಬೇಕು. ಇನ್ನು ಮುಂದೆ ರಾಜ್ಯದ ಜನತೆ ಇಷ್ಟೊಂದು ಹೀನಾಯ, ಅಸಹ್ಯ ರಾಜಕೀಯ ನಾಟಕವನ್ನು ನೋಡದಂತೆ ಹೇಗೆ ತಡೆಯುವುದು ಎಂಬುದಕ್ಕೆ ಮೊತ್ತಮೊದಲು ಮನಸ್ಸು ಮಾಡಬೇಕಿದೆ ಆಡಳಿತಾರೂಢ ಬಿಜೆಪಿ. ಈ ಮಾತು ಯಾಕೆ ಹೇಳಬೇಕಾಯಿತೆಂದರೆ, ಒಂದು ಮನೆಯೊಳಗೆ ನಡೆಯುವ ಕಲಹವೊಂದು ಈ ಪರಿಯಾಗಿ ಬೆಳೆದು, ರಾಜ್ಯದ ಜನತೆಯಿಂದ ಛೀ ಥೂ ಅನ್ನಿಸಿಕೊಳ್ಳುವವರೆಗೆ ಹೋಯಿತಲ್ಲಾ… ಇದರ ಕೇಂದ್ರಬಿಂದುವಾಗಿರುವ ಆಡಳಿತಾರೂಢ ಬಿಜೆಪಿಯೊಳಗೆ ಎಲ್ಲವೂ ಸರಿಯಾಗಿದ್ದಿದ್ದರೆ ಇದು ಖಂಡಿತಾ ನಡೆಯುತ್ತಿರಲಿಲ್ಲ ಎಂಬುದು ದಿಟ.

ಪಾಠ ಕಲಿಯಲಿಲ್ಲ…
ವರ್ಷದ ಹಿಂದೆ ರೆಡ್ಡಿ ಸಹೋದರರು ಬಂಡಾಯವೆದ್ದು ಹೈದರಾಬಾದ್‌ಗೆ ಹೋದಾಗ ನಡೆದ ಅನಾಹುತಕಾರಿ ರೆಸಾರ್ಟ್ ರಾಜಕಾರಣ, ಜಂಗೀಕುಸ್ತಿಯಿಂದ ಬಿಜೆಪಿ ಪಾಠವಿನ್ನೂ ಕಲಿತಂತಿಲ್ಲ. ಈಶ್ವರಪ್ಪ ಬಣ, ಶೆಟ್ಟರ್ ಬಣ, ರೆಡ್ಡಿ ಬಣ, ರೇಣುಕ ಬಣ… ಜೊತೆಗೆ ಯಡಿಯೂರಪ್ಪ ಬಣ ಹಾಗೂ ಅನಂತ್ ಬಣಗಳೆಂಬ ಎರಡು ಪ್ರಧಾನ ಕಳಶಗಳು ಬೇರೆ! ಇದು ರಾಜ್ಯ ಬಿಜೆಪಿಯ ಸ್ಥಿತಿಯಾದರೆ, ಕಳೆದ ಲೋಕಸಭಾ ಚುನಾವಣೆಗಳಲ್ಲಿ ಅವಮಾನಕಾರಿ ಸೋಲನ್ನಪ್ಪಿದ ಬಳಿಕವೂ ಬುದ್ಧಿ ಕಲಿಯದ ಬಿಜೆಪಿ ಕೇಂದ್ರೀಯ ನಾಯಕರೊಳಗೂ ಮೇಲಾಟದ ರಾಜಕೀಯ! ಬಹುಶಃ ಇದೇ ಬಿಜೆಪಿಯ ಈ ಪರಿಸ್ಥಿತಿಗೆ ಕಾರಣಗಳಲ್ಲಿ ಪ್ರಮುಖವಾದದ್ದು ಎನ್ನಬಹುದು.

ಕಾಡಿದ ನಾಯಕತ್ವದ ಕೊರತೆ…
ಶತಮಾನದಷ್ಟು ಹಳೆಯ ಪಕ್ಷ ಕಾಂಗ್ರೆಸ್ಸನ್ನು ನೋಡಿ. ಅಲ್ಲೊಬ್ಬ ಅಧಿನಾಯಕಿ ಇದ್ದಾರೆ. ಸೋನಿಯಾ ಗಾಂಧಿಯವರ ಮಾತೇ ಅಂತಿಮ. ಅವರಿಗೆ ಆಪ್ತಸಲಹೆಗಾರರು ಇದ್ದರೂ ಕೂಡ, ಎಲ್ಲ ಕಾಂಗ್ರೆಸಿಗರು ಶಿಸ್ತಿನಿಂದ ತಮ್ಮ ಅಧಿನಾಯಕಿಗೆ ಬದ್ಧರಾಗಿರುತ್ತಾರೆ. ಇತ್ತ ಕಡೆ ಬಿಜೆಪಿಯನ್ನು ನೋಡಿ, ಪಾರ್ಟಿ ವಿತ್ ಎ ಡಿಫರೆನ್ಸ್, ನಮ್ಮದು ಶಿಸ್ತಿನ ಪಕ್ಷ ಎಂದು ಕರೆಸಿಕೊಳ್ಳುತ್ತಿದ್ದ ಬಿಜೆಪಿಯೊಳಗೆ ಅಂತಹಾ ಕಟ್ಟುನಿಟ್ಟಿನ, ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರವುಳ್ಳ ನಾಯಕನ ಕೊರತೆ ಇದೆ ಅನ್ನಿಸುತ್ತಿಲ್ಲವೇ?

ರಾಜ್ಯದಲ್ಲಿ ಇಷ್ಟೂ ದಿನಗಳ ಕಾಲ ನಡೆದ ರಾಜಕೀಯ ಅರಾಜಕತೆಗೆ, ಜನರ ಮನಸ್ಸಿನಲ್ಲಿ ಎದ್ದ ತಳಮಳಕ್ಕೆ, ಛೀ…ಥೂ ಎಂಬ ಮನೋಭಾವಕ್ಕೆ ಜವಾಬ್ದಾರಿ ಹೊತ್ತುಕೊಳ್ಳಬಲ್ಲವರು ಯಾರು? ಬಿಜೆಪಿಯೇ? ಕಾಂಗ್ರೆಸ್ ಅಥವಾ ಜೆಡಿಎಸ್ ಈ ಹೊಣೆಗಾರಿಕೆ ಹೊರುತ್ತದೆಯೇ? ಇವರ ರೆಸಾರ್ಟ್ ಮೋಜಿಗೆ, ಕೈಬದಲಾಯಿಸಿದ ಕೋಟಿ ಕೋಟಿ ಕಾಂಚಾಣಕ್ಕೆ, ವಿಮಾನದಲ್ಲಿ ಬೇರೆ ರಾಜ್ಯಕ್ಕೆ ಹೋಗಿ ಕುದುರೆ ವ್ಯಾಪಾರಕ್ಕೆ ಸಿಲುಕಿಕೊಳ್ಳದಂತೆ ಅಡಗುವುದಕ್ಕೆ, ಹೆಲಿಕಾಪ್ಟರ್ ಹಾರಾಟಕ್ಕೆ, ವ್ಯರ್ಥ ಕಸರತ್ತಿಗಾಗಿ ರಾಜ್ಯದ ಮತದಾರರ ಅಂದರೆ ತೆರಿಗೆದಾರರ ಕೋಟ್ಯಂತರ ಹಣ ಖರ್ಚಾಗಿದೆ. ಇದರ ಹೊರೆ ಬೀಳುವುದು ಜನತೆಯ ಮೇಲಲ್ಲವೇ?

ಇಂಥದ್ದಕ್ಕೆಲ್ಲಾ ಇತಿಶ್ರೀ ಆಗಬೇಕಾಗಿದೆ. ರಾಜ್ಯದ ಜನತೆಗೆ ಅಭಿವೃದ್ಧಿ ಮಂತ್ರ ಮಾತ್ರವೇ ಬೇಕಿದೆ. ಬಿಜೆಪಿ ನಾಯಕರು ಅಭಿವೃದ್ಧಿ ಅಭಿವೃದ್ಧಿ ಅಂತ ಬರೇ ಬಾಯಲ್ಲಿ ಹೇಳಿದರೆ ಸಾಲದು. ಅದಕ್ಕೆ ಅಡ್ಡಿಯಾಗುತ್ತಿರುವ ಆಂತರಿಕ ಕಚ್ಚಾಟವನ್ನು ನಿಯಂತ್ರಿಸಿದರೆ, ಖಂಡಿತಾ ಅಭಿವೃದ್ಧಿಯತ್ತ ಗಮನ ಹರಿಸಲು ಪುರುಸೊತ್ತಾದರೂ ಸಿಗುತ್ತದೆ ಎಂಬುದು ಬಿಜೆಪಿಗೆ ಮನವರಿಕೆಯಾಗುವುದು ಯಾವಾಗ?

ಕಳೆದ ಎರಡು ವಾರಗಳಲ್ಲಿ ರಾಜ್ಯ ಕಂಡ, ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿದ ರೋಚಕವಾದ ಇಡೀ ಧಾರಾವಾಹಿಯಲ್ಲಿ ಎದ್ದು ಕಂಡದ್ದು ಸಮರ್ಥ ನಾಯಕತ್ವದ ಕೊರತೆ, ಅಥವಾ ನಾಯಕತ್ವದ ಸಾಮರ್ಥ್ಯದ ಕೊರತೆ.

ನೋವಿನ ಮನೆಯಾಗಿದೆ ಬಿಜೆಪಿ…
ಬಿಜೆಪಿ ಪಕ್ಷದ ಟಿಕೆಟ್‌ನಿಂದ ಸ್ಪರ್ಧಿಸಿ ಗೆದ್ದವರು ತಮಗೆ ಸೂಕ್ತ ಪಾಲು ದೊರೆಯಲಿಲ್ಲ ಎಂಬ ಕಾರಣಕ್ಕೆ ತಂದೆಯ ವಿರುದ್ಧವೇ ತಮ್ಮ ಮನೆಯಲ್ಲಿ ಬಂಡೆದ್ದಂತಿದ್ದರು. ಹೊರಗಿನಿಂದ ಮೊನ್ನೆ ಮೊನ್ನೆ ಬಂದು ಮನೆ ಸೇರಿಕೊಂಡವರು ಮನೆಯನ್ನು ಲಗಾಡಿ ತೆಗೆದು, ಸರಕಾರವನ್ನು ಅಲುಗಾಡಿಸುತ್ತಲೇ ದೊಡ್ಡ ದೊಡ್ಡ ಹುದ್ದೆಗಳನ್ನು, ಜವಾಬ್ದಾರಿಗಳನ್ನು ವಹಿಸಿಕೊಳ್ಳುವಂತಾದರು.

ತತ್ಪರಿಣಾಮ, ಹತ್ತಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿದವರು, ತಮ್ಮ ಪಕ್ಷದ ಸರಕಾರ ಅಧಿಕಾರಕ್ಕೆ ಬಂದರೂ ತಮಗೆ ಸೂಕ್ತ ಮನ್ನಣೆ – ಅಂದರೆ ವಾಸ್ತವಿಕ ಅರ್ಥ ಮಂತ್ರಿಗಿರಿ – ಸಿಗಲಿಲ್ಲ ಎಂಬ ನೋವಿಗೆ ಸಿಲುಕಿದರು! ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ, ಕೃಷ್ಣಯ್ಯ ಶೆಟ್ಟಿ ಮುಂತಾದ ನಿಷ್ಠಾವಂತ ಕಾರ್ಯಕರ್ತರು, ಕಳಂಕರಹಿತರು ಹೊರಗಿನಿಂದ ಬಂದವರಿಗಾಗಿ ತಮ್ಮ ಸ್ಥಾನ ತ್ಯಾಗ ಮಾಡಬೇಕಾಯಿತು. ಹಾಗಿದ್ದರೆ ಅವರಿಗೆಷ್ಟು ನೋವಾಗಿರಬೇಡ….! ಈ ಒಂದು ನೋವಿನ ಕಾರಣದಿಂದಾಗಿ, ಇಷ್ಟೊಂದು ಹೀನಾಯವಾಗಿ, ಕರ್ನಾಟಕದ ಮಾನವನ್ನು ಮೂರಾಬಟ್ಟೆಯಾಗಿಸುವ ಪರಿಸ್ಥಿತಿ ಬರಬೇಕಿತ್ತೇ? ಹಾಗಿದ್ದರೆ, ಇಲ್ಲೊಬ್ಬ ಮನೆ ನಡೆಸುವ ಜವಾಬ್ದಾರಿಯುತ ನಾಯಕನೊಬ್ಬ ಇರಬೇಕಿತ್ತು, ಮಕ್ಕಳು ತಪ್ಪಿದಾಗ ಗದರಿಸಿ ಬುದ್ಧಿ ಹೇಳುವ, ಕೇಳದಿದ್ದರೆ ಚಾಟಿ ಬೀಸುವ ಒಬ್ಬ ಸಮರ್ಥನೊಬ್ಬನ ಅವಶ್ಯಕತೆಯಿದೆ ಅನಿಸುತ್ತಿಲ್ಲವೇ?

ಬಹುತೇಕ ಎಲ್ಲ ಉಪಚುನಾವಣೆಗಳಲ್ಲಿಯೂ ವಿಜಯ ಸಾಧಿಸಿದ ಬಿಜೆಪಿ, ತನ್ನ ಸರಕಾರವನ್ನು ಉಳಿಸಿಕೊಳ್ಳಲು ಇಷ್ಟೊಂದು ತ್ರಾಸ ಪಡುವ, ಕಸರತ್ತು ನಡೆಸುವ ಪರಿಸ್ಥಿತಿಗೆ ಬಂದಿದ್ದೇಕೆ ಎಂಬುದರ ಬಗ್ಗೆ ಯೋಚಿಸಿದ್ದಾರಾ?

ಸಾಲ ಸೋಲ ಮಾಡಿಯೋ, ಇಡೀ ಜೀವನಪೂರ್ತಿ ದುಡಿದ ದುಡ್ಡು ಸುರಿದೋ… ಅದೆಲ್ಲಿಂದಲೋ ಹಣ ತಂದು ಖರ್ಚು ಮಾಡಿ ವಿಧಾನಸಭೆಗೆ ಆಯ್ಕೆಯಾಗುವ ಎಂಎಲ್ಎಗಳು, ಒಂದು ಹಿಡಿ ಅಧಿಕಾರಕ್ಕೋಸ್ಕರ, ಮಂತ್ರಿಗಿರಿಗೋಸ್ಕರ, ಆ ಗೆದ್ದ ಸ್ಥಾನವನ್ನೇ ಧಿಕ್ಕರಿಸುವ ಅಥವಾ ಕಳೆದುಕೊಳ್ಳುವ ಹಂತಕ್ಕೆ ತಲುಪುತ್ತಾರೆ ಎಂದಾದರೆ…. ಎಲ್ಲಿಗೆ ಬಂತು ಈ ‘ಜನಸೇವೆ’ ಎಂಬ ಮಾತಿನ ಅರ್ಥ!

ಫಲಕೊಟ್ಟಿದೆ ಆಪರೇಶನ್ ಕಮಲ….
ಈ ಎಲ್ಲ ಅಂಶಗಳನ್ನು ವಿಶ್ಲೇಷಿಸಿದಾಗ ಕೊಟ್ಟಕೊನೆಯಲ್ಲಿ ಎಲ್ಲರ ಕೈಗಳು ಬೆಟ್ಟುಮಾಡುವುದು ಆಪರೇಶನ್ ಕಮಲ ಎಂಬ ಕಾರ್ಯಾಚರಣೆಯತ್ತ. ಅದುವೇ ಬಿಜೆಪಿಗೆ ಮುಳುವಾಗುತ್ತಿದೆ. ಸರಕಾರಕ್ಕೆ ಸ್ಥಿರತೆ ತಂದುಕೊಡಲೆಂದು ಆರಂಭವಾದ ಈ ಕಾರ್ಯಾಚರಣೆಯಲ್ಲಿ, ಬೇರೆ ಪಕ್ಷಗಳಿಂದ ಬಂದವರೆಂದಿಗೂ ಪಕ್ಷ ನಿಷ್ಠೆ ತೋರುತ್ತಿಲ್ಲ ಎಂಬುದು ಸುಸ್ಪಷ್ಟವಾಗಿದೆ. ಇನ್ನಾದರೂ ಬಿಜೆಪಿ ಎಚ್ಚೆತ್ತುಕೊಳ್ಳದಿದ್ದರೆ, ದಕ್ಷಿಣ ಭಾರತದ ಮೊದಲ ಸರಕಾರವೆಂದಿರುವ ಹೆಗ್ಗಳಿಕೆಯು ಕೊನೆಯ ಸರಕಾರವೂ ಆದೀತು. ಹಾಗಾಗಲು ಬಿಡದೇ ಇರುವುದು ಬಿಜೆಪಿ ನಾಯಕತ್ವದ ಕೈಯಲ್ಲಿದೆ.

ಜವಾಬ್ದಾರಿ ಮರೆಯುತ್ತಿವೆ ಪ್ರತಿಪಕ್ಷಗಳು…
ಪ್ರತಿಪಕ್ಷಗಳ ಬಗೆಗೂ ಹೇಳಲೇಬೇಕಿದೆ. ಅವು ತಮಗೆ ಸರಕಾರ ರಚಿಸುವಷ್ಟು, ಒಂದು ಜನತೆಯ ಆಕಾಂಕ್ಷೆಯಾಗಿರುವ ಸ್ಥಿರ ಸರಕಾರ ಕೊಡುವಷ್ಟು ಸಂಖ್ಯಾಬಲವಿಲ್ಲದಿದ್ದರೂ, ಸರಕಾರವನ್ನು ಅಸ್ಥಿರಗೊಳಿಸುವುದೇ ಮತ್ತು ವ್ಯಕ್ತಿಗತವಾದ ಹೀಯಾಳಿಕೆಯನ್ನೇ ಗುರಿಯಾಗಿರಿಸಿಕೊಂಡು ರಾಜಕೀಯ ಮಾಡುತ್ತಿರುವುದು ಕೂಡ ಸರಿಯಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲಿಸಲಿ, ಭ್ರಷ್ಟಾಚಾರದ ವಾಸನೆ ಬಂದಲ್ಲಿ ಇನ್ನಿಲ್ಲದಂತೆ ಹೋರಾಡಿ, ಅದನ್ನು ತಡೆಯಬೇಕಾಗಿರುವುದು ಜವಾಬ್ದಾರಿಯುತ ಪ್ರತಿಪಕ್ಷಗಳ ಕರ್ತವ್ಯ ಮತ್ತು ಹಕ್ಕು ಕೂಡ ಹೌದು. ಆದರೆ ಅವರಿಗೆ ರಚನಾತ್ಮಕ ಪ್ರತಿಪಕ್ಷವಾಗಿ ಕೆಲಸ ಮಾಡಲು ಬರುವುದಿಲ್ಲವೋ ಎಂಬ ಶಂಕೆ ಮೂಡುತ್ತದೆ. ಇರಲೂಬಹುದು, ಯಾಕೆಂದರೆ ಇದುವರೆಗೆ ಅಧಿಕಾರದ ಹೊರಗಿದ್ದು ಗೊತ್ತೇ ಇಲ್ಲ ಅವರಿಗೆ. ಈ ಕುರಿತ ಚಡಪಡಿಕೆಯೇ ಅವರನ್ನು ಈ ರೀತಿ ಆಟ ಆಡಿಸುತ್ತಿದೆಯೋ ಏನೋ…

ಹಿಂದೆಯೇ ಹೇಳಿದಂತೆ, ಅಕ್ಷರಶಃ ವಿರೋಧ ಪಕ್ಷವಾಗಬೇಡಿ, ಪ್ರತಿಪಕ್ಷಗಳಾಗಿ. ಸರಕಾರಕ್ಕೆಷ್ಟು ಜವಾಬ್ದಾರಿಯಿದೆಯೋ, ನಿಮಗೂ ಅಷ್ಟೇ ಜವಾಬ್ದಾರಿ ಇದೆ ಎಂಬುದು ಮನದಟ್ಟು ಮಾಡಿಕೊಳ್ಳಿ. ಅದು ಬಿಟ್ಟು, ಸರಕಾರದ ಪ್ರತಿ ಹೆಜ್ಜೆಯಲ್ಲೂ ಹುಳುಕು ಹುಡುಕುವುದು, ಪ್ರತೀ ಕ್ರಮಕ್ಕೂ ವಿರೋಧಿಸುವುದು…. ಸಲ್ಲದು.

ಆಡಳಿತ ಪಕ್ಷ, ವಿರೋಧ ಪಕ್ಷಗಳೆರಡಕ್ಕೂ ಮನವಿ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಮೂಲೆಗಿಟ್ಟು, ದಯವಿಟ್ಟು ಕನ್ನಡ ನಾಡಿನ ಅಭಿವೃದ್ಧಿಗೆ ಸಹಕರಿಸಿ. ಸಹಕರಿಸದಿದ್ದರೂ, ಮೊನ್ನೆ ಆಗಿರುವಂತೆ, ನಮ್ಮ ನಾಡಿನ ಹೆಸರು ಹಾಳಾಗದಂತೆ ನೋಡಿಕೊಳ್ಳಿ… ಅಷ್ಟು ಸಾಕು!

ದಿನಾ ಬೆಳಿಗ್ಗೆ ಟಿವಿಯಲ್ಲಿ ಈ ರಾಜಕಾರಣಿಗಳ ಮುಖವನ್ನು ನೋಡಿ ನೋಡಿ… ಇವ್ನು ದೊಡ್ಡ ಕಳ್ಳ, ದೊಡ್ಡ ಭ್ರಷ್ಟಾಚಾರಿ, ಕಳ್ಳ ಕೊರಮ ಎಂಬಿತ್ಯಾದಿಯಾಗಿ ಜನರು ಪ್ರತೀ ದಿನ ಹಳಿಯುತ್ತಿರುತ್ತಾರೆ, ರಾಜಕಾರಣಿಗಳಿಗೆ ಒಂದಿಷ್ಟು ಇರುವ ಮರ್ಯಾದೆಯೆಲ್ಲವೂ ಮೂರಾಬಟ್ಟೆಯಾಗಿದೆ… ರಾಜಕಾರಣಿಗಳೆಷ್ಟೇ ಶುದ್ಧ ಹಸ್ತರಾಗಿದ್ದರೂ ಎಲ್ಲರನ್ನೂ ಅನುಮಾನದ ದೃಷ್ಟಿಯಿಂದ ನೋಡುವುದು ಅಭ್ಯಾಸವೂ, ಅನಿವಾರ್ಯವೂ ಆಗಿಬಿಟ್ಟಿದೆ. ಜನರ ಮನದಿಂದ ಈ ಭಾವನೆ ತೊಡೆದು ಹಾಕುವ ಪ್ರಯತ್ನ ರಾಜಕಾರಣಿಗಳಿಂದ ಮೊದಲು ನಡೆಯಬೇಕಾಗಿದೆ.

ಈಗ ಯಡಿಯೂರಪ್ಪನವರು ಎರಡೆರಡು ಬಾರಿ ವಿಶ್ವಾಸಮತವೇನೋ ತಾಂತ್ರಿಕವಾಗಿ ಸಾಬೀತುಪಡಿಸಿದ್ದಾರೆ. ಗೆದ್ದರೂ ನಿರಾಳವಾಗಿ ಆಡಳಿತ ಮಾಡುವಂತಿದೆಯೇ? ಜನರ ವಿಶ್ವಾಸ ಗೆಲ್ಲಬೇಕಿದ್ದರೆ, ಇನ್ನಾದರೂ ಕಚ್ಚಾಟ ಬಿಟ್ಟು ಜನರ ಬೇಡಿಕೆಗಳೇನು, ಊರಿನ ಅವಶ್ಯಕತೆಗಳೇನು ಎಂಬುದರತ್ತ ಗಮನ ಹರಿಸಿ ಅಭಿವೃದ್ಧಿ ಚಟುವಟಿಕೆ ಸಮರೋಪಾದಿಯಲ್ಲಿ ನಡೆಯಬೇಕಿದ್ದರೆ, ಮೊದಲು ತಮ್ಮ ಮನೆ ಸರಿಪಡಿಸಿಕೊಳ್ಳಬೇಕಿದೆ. ಈ ಬಂಡಾಯವೆಂಬ, ಭಿನ್ನಮತವೆಂಬ ಗೆದ್ದಲು ಹುಳಕ್ಕೆ ಮೊದಲಿಂದಲೇ ಮದ್ದು ಅರೆಯಬೇಕು. ಬೇರು ಗಟ್ಟಿ ಮಾಡಿಕೊಳ್ಳಬೇಕು. ಯಡಿಯೂರಪ್ಪ ಅಥವಾ ಅವರ ಹೈಕಮಾಂಡ್ ಆಗಿರುವ ಕೇಂದ್ರೀಯ ನಾಯಕರು ಕೇಳಿಸಿಕೊಳ್ಳುತ್ತಿದ್ದಾರಾ?
[ವೆಬ್ ದುನಿಯಾಕ್ಕಾಗಿ]

LEAVE A REPLY

Please enter your comment!
Please enter your name here