Micromax IN 1b: ಅಗ್ಗದ ಬೆಲೆಯಲ್ಲಿ ಉತ್ತಮ ದೇಸೀ ಫೋನ್

0
509

ಚೀನಾದ ಕಂಪನಿಗಳು ಅಗ್ಗದ ದರದಲ್ಲಿ ಅತ್ಯಾಧುನಿಕ ಸ್ಪೆಸಿಫಿಕೇಶನ್ ಇರುವ ಸ್ಮಾರ್ಟ್ ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಇಳಿಸಿದ ಧಾವಂತದಲ್ಲಿ, ಭಾರತೀಯ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಮೈಕ್ರೋಮ್ಯಾಕ್ಸ್, ಇಂಟೆಕ್ಸ್, ಲಾವಾ, ಕಾರ್ಬನ್, ಸೆಲ್ಕಾನ್, ಸ್ವೈಪ್, ಸ್ಪೈಸ್ ಮುಂತಾದ ಕಂಪನಿಗಳು ಮಾರುಕಟ್ಟೆಯಿಂದಲೇ ನಿರ್ಗಮಿಸಬೇಕಾಯಿತು. ಆದರೆ ತದನಂತರದಲ್ಲಿ ‘ಆತ್ಮನಿರ್ಭರ ಭಾರತ’ ಘೋಷಣೆಯಡಿ, ಚೀನಾ ವಿರೋಧಿ ಅಲೆಯಲ್ಲಿ ಮೈಕ್ರೋಮ್ಯಾಕ್ಸ್ ಹೊಸ ಉತ್ಸಾಹದೊಂದಿಗೆ ಮಾರುಕಟ್ಟೆಗೆ ಮರಳಿ ಬಂದಿದೆ ಮತ್ತು ನಿಧಾನವಾಗಿ ತನ್ನ ಛಾಪನ್ನು ಮರಳಿ ಬೀರುತ್ತಿದೆ.

ಇತ್ತೀಚೆಗೆ ಮೈಕ್ರೋಮ್ಯಾಕ್ಸ್ ‘ಇನ್’ (ಇಂಡಿಯಾದ ಹೃಸ್ವರೂಪ) ಹೆಸರಿನಲ್ಲಿ ನೋಟ್ 1 ಹಾಗೂ 1ಬಿ ಆಂಡ್ರಾಯ್ಡ್ ಫೋನ್‌ಗಳು ಮಾರುಕಟ್ಟೆಗೆ ಬಂದಿದ್ದು, ವಿಮರ್ಶೆಗೆ ದೊರೆತ ಮೈಕ್ರೋಮ್ಯಾಕ್ಸ್ ಇನ್ 1ಬಿ ಹೇಗಿದೆ ಅಂತ ನೋಡೋಣ.

ವಿನ್ಯಾಸ
6.52 ಇಂಚು ದೊಡ್ಡ ಸ್ಕ್ರೀನ್‌ನಲ್ಲಿ ಡ್ಯೂಡ್ರಾಪ್ ನಾಚ್ ಇರುವ ಡಿಸ್‌ಪ್ಲೇಯೊಂದಿಗೆ 20:9 ಆಸ್ಪೆಕ್ಟ್ ಅನುಪಾತ ಇರುವ ಫೋನ್ ನೋಡಲು ಸ್ವಲ್ಪ ಉದ್ದ (ಎತ್ತರ)ವಾಗಿದೆ. ಇದು ಇತ್ತೀಚೆಗೆ ಬಿಡುಗಡೆಯಾದ ನೋಕಿಯಾ 2.4 ಗಾತ್ರವನ್ನೇ ಹೋಲುತ್ತಿದೆ.

ಬಲಭಾಗದಲ್ಲಿ ಪವರ್ ಮತ್ತು ವಾಲ್ಯೂಮ್ ಬಟನ್‌ಗಳು ಹಾಗೂ ಎಡಭಾಗದಲ್ಲಿ ಗೂಗಲ್ ವಾಯ್ಸ್ ಅಸಿಸ್ಟೆಂಟ್ ಸಕ್ರಿಯಗೊಳಿಸುವ ಬಟನ್ ಮತ್ತು ಸಿಮ್ ಟ್ರೇ ಇದೆ. ಆಧುನಿಕ ಫೋನ್‌ಗಳಲ್ಲಿರುವಂತೆ ಯುಎಸ್‌ಬಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಇದ್ದು, ಕೆಳಭಾಗದಲ್ಲಿ 3.5 ಮಿಮೀ ಆಡಿಯೋ ಜಾಕ್ ಹಾಗೂ ಮೈಕ್ರೋಫೋನ್ ಇದೆ. ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಫ್ಲ್ಯಾಶ್ ಸಹಿತ ಡ್ಯುಯಲ್ ಕ್ಯಾಮೆರಾ ಇದೆ.

ಹಾರ್ಡ್‌ವೇರ್
ಮೀಡಿಯಾಟೆಕ್ ಹೀಲಿಯೊ ಜಿ35 ಪ್ರೊಸೆಸರ್, HD+ ರೆಸೊಲ್ಯುಶನ್ ಇದ್ದು, ಚಿತ್ರ-ವಿಡಿಯೊಗಳು ಈ ಬೆಲೆಯ ಶ್ರೇಣಿಯ ಫೋನ್‌ಗಳಿಗೆ ಹೋಲಿಸಿದರೆ ಚೆನ್ನಾಗಿಯೇ ಪ್ರದರ್ಶಿತವಾಗುತ್ತವೆ ಎನ್ನಬಹುದು. ಆದರೆ, ಸ್ಕ್ರೀನ್ ಗಾತ್ರ ದೊಡ್ಡದಾಗಿರುವುದರಿಂದ ರೆಸೊಲ್ಯುಶನ್ ಸಾಲುವುದಿಲ್ಲವೋ ಎಂದನ್ನಿಸಿದ್ದು ಸುಳ್ಳಲ್ಲ. ಸ್ಟಾಕ್ ಆಂಡ್ರಾಯ್ಡ್ 10 (ಯಾವುದೇ ಬ್ಲಾಟ್‌ವೇರ್‌ಗಳು ಅಂದರೆ ಅನಗತ್ಯ ಆ್ಯಪ್‌ಗಳು ಅಳವಡಿಕೆಯಾಗದೆ) ಕಾರ್ಯಾಚರಣೆ ವ್ಯವಸ್ಥೆಯಿದ್ದು, ಸ್ಕ್ರೀನ್ ತಳಭಾಗದಲ್ಲಿ ಸಾಂಪ್ರದಾಯಿಕವಾಗಿ ಮೂರು ವರ್ಚುವಲ್ ಬಟನ್‌ಗಳಿವೆ. ಹಿಂಭಾಗದ ಕವಚ ಆಕರ್ಷಕ ವಿನ್ಯಾಸದಿಂದ ಕೂಡಿದೆ. 188 ಗ್ರಾಂ ತೂಕ ಮತ್ತು 5000 mAh ಬ್ಯಾಟರಿ ಹೊಂದಿದ್ದು 10W ಚಾರ್ಜರ್ ಇದೆ.

ಫೋನ್ ಉದ್ದವಾಗಿದೆ ಎಂದನ್ನಿಸುವ ಕಾರಣ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇರುವ ಜಾಗ ಇನ್ನಷ್ಟು ಕೆಳಗೆ ಇದ್ದಿದ್ದರೆ ಚೆನ್ನಾಗಿತ್ತು ಅಂತ ಅನ್ನಿಸಿತು. ಅದೇ ರೀತಿ, ವಾಲ್ಯೂಮ್ ಬಟನ್ ಕೂಡ. ಒಂದು ಕೈಯಲ್ಲಿ ಹಿಡಿದುಕೊಂಡು ಕೆಲಸ ಮಾಡುವಾಗ ಈ ವ್ಯವಸ್ಥೆ ಅನುಕೂಲಕರ.

ಕ್ಯಾಮೆರಾ
ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಪ್ರಧಾನ ಸೆನ್ಸರ್ ಹಾಗೂ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಇರುವ ಕ್ಯಾಮೆರಾ ಸೆಟಪ್ ಇದ್ದು, ಉತ್ತಮ ಬೆಳಕಿರುವ ಪ್ರದೇಶದಲ್ಲಿ ತೆಗೆದ ಚಿತ್ರಗಳು ಸಾಕಷ್ಟು ಚೆನ್ನಾಗಿಯೇ ಇವೆ. ಕಡಿಮೆ ಬೆಳಕಿನಲ್ಲಿ ತೆಗೆದ ಫೋಟೊ ಮತ್ತು ವಿಡಿಯೊಗಳಲ್ಲಿ ಸ್ಪಷ್ಟತೆ (ಡೀಟೇಲ್ಸ್) ಕಡಿಮೆ ಇತ್ತಾದರೂ ಮೌಲ್ಯಕ್ಕೆ ತಕ್ಕ ಗುಣಮಟ್ಟ ಎನ್ನಬಹುದು. ಸಮೀಪದ (ಕ್ಲೋಸಪ್) ಫೋಟೊಗಳಿಗಿಂತ ಪೋರ್ಟ್ರೇಟ್ ಮೋಡ್‌ನಲ್ಲಿ ತೆಗೆದ ಫೋಟೊಗಳಲ್ಲಿ ಹೆಚ್ಚು ಸ್ಪಷ್ಟತೆ ಅನುಭವಕ್ಕೆ ಬಂದಿತು. ಸೆಲ್ಫೀ ಕ್ಯಾಮೆರಾದಲ್ಲಿಯೂ ಪೋರ್ಟ್ರೇಟ್ (ಅಂದರೆ ಹಿನ್ನೆಲೆಯನ್ನು ಬ್ಲರ್ ಆಗಿಸಿ, ವ್ಯಕ್ತಿಯನ್ನು/ಪ್ರಧಾನ ವಸ್ತುವನ್ನು ಸ್ಪಷ್ಟವಾಗಿ ತೋರಿಸುವ) ಮೋಡ್ ಚೆನ್ನಾಗಿಯೇ ಕೆಲಸ ಮಾಡಿದೆ.

ವಿಶೇಷತೆಗಳು
ಸೆಟ್ಟಿಂಗ್ಸ್‌ನಲ್ಲಿ ಹೋಗಿ ನೋಡಿದರೆ, ಸನ್ನೆಯ (ಗೆಶ್ಚರ್) ಕೆಲವು ವೈಶಿಷ್ಟ್ಯಗಳು ಗಮನ ಸೆಳೆದವು. ಉದಾಹರಣೆಗೆ, ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನಲ್ಲಿ ಮೇಲಿಂದ ಕೆಳಕ್ಕೆ ಸ್ವೈಪ್ ಮಾಡಿದರೆ, ನೋಟಿಫಿಕೇಶನ್ ಟ್ರೇ ತೆರೆದುಕೊಳ್ಳುತ್ತದೆ.

ಕೆಳಗಿದ್ದ ಫೋನ್ ಕೈಗೆತ್ತಿಕೊಂಡ ತಕ್ಷಣ ಸ್ಕ್ರೀನ್‌ನಲ್ಲಿ ಸಮಯ, ನೋಟಿಫಿಕೇಶನ್ ಮತ್ತಿತರ ಮಾಹಿತಿಗಳು ಕಾಣಿಸುವಂತೆ ಹೊಂದಿಸಬಹುದು. ಅದೇ ರೀತಿ, ಗೂಗಲ್ ಅಸಿಸ್ಟೆಂಟ್ ಬಟನ್ ಆಕಸ್ಮತ್ತಾಗಿ ಒತ್ತಿಹೋಗುತ್ತಿದೆ ಎಂದಾದರೆ, ಅದನ್ನು ಆಫ್ ಮಾಡಬಹುದು. ಸೆಟ್ಟಿಂಗ್ಸ್‌ನಲ್ಲಿ ಗೆಶ್ಚರ್ ಎಂಬಲ್ಲಿಗೆ ಹೋಗಿ ಈ ಸೆಟ್ಟಿಂಗ್‌ಗಳನ್ನು ಬದಲಾಯಿಸಿಕೊಳ್ಳಬಹುದು. ಜೊತೆಗೆ, ಮೂರು ಬೆರಳುಗಳಿಂದ ಮೇಲಿಂದ ಕೆಳಕ್ಕೆ ಸ್ವೈಪ್ ಮಾಡಿದರೆ, ಸುಲಭವಾಗಿ ಸ್ಕ್ರೀನ್ ಶಾಟ್ ತೆಗೆದುಕೊಳ್ಳಬಹುದು. ಈ ಎಲ್ಲ ವೈಶಿಷ್ಟ್ಯಗಳನ್ನು ಆಫ್ ಮಾಡುವುದು ಕೂಡ ಸಾಧ್ಯ.

ಇದರಲ್ಲಿ ಡ್ಯುರಾಸ್ಪೀಡ್ ಎಂಬ ಆಯ್ಕೆಯೊಂದಿದ್ದು, ಅದನ್ನು ಆನ್ ಮಾಡಿದರೆ, ಎಲ್ಲ ಆ್ಯಪ್‌ಗಳೂ ಹಿನ್ನೆಲೆಯಲ್ಲಿ ಚಲಾವಣೆಯಾಗುವುದನ್ನು ನಿಲ್ಲಿಸಿ, ಬಳಕೆಯಲ್ಲಿರುವ ಆ್ಯಪ್‌ಗಳ ಕಾರ್ಯಾಚರಣೆ ಹೆಚ್ಚು ವೇಗವಾಗಿ ನಡೆಯುತ್ತದೆ. ಹಿನ್ನೆಲೆಯಲ್ಲಿ ಯಾವುದು ಆನ್ ಇರಬೇಕೋ ಅದನ್ನು ಮಾತ್ರ ಸಕ್ರಿಯಗೊಳಿಸುವ ಆಯ್ಕೆಯೂ ಇದೆ.

ಆ್ಯಪ್‌ಗಳು ಲೋಡ್ ಆಗುವಲ್ಲಿಯೂ ಯಾವುದೇ ವಿಳಂಬವು ಅನುಭವಕ್ಕೆ ಬರಲಿಲ್ಲ. 4 ಜಿಬಿ RAM ಇರುವುದರಿಂದ ಮಲ್ಟಿಟಾಸ್ಕಿಂಗ್ (ಹಲವು ಆ್ಯಪ್‌ಗಳಲ್ಲಿ ಏಕಕಾಲದಲ್ಲಿ ಕೆಲಸ ಮಾಡುವುದಕ್ಕೆ) ಸಮಸ್ಯೆಯೆಂದು ಅನ್ನಿಸಲಿಲ್ಲ. 10W ವೇಗದ ಚಾರ್ಜರ್‌ನಲ್ಲಿ 5000 mAh ಬ್ಯಾಟರಿಯು ಶೂನ್ಯದಿಂದ ಪೂರ್ತಿಯಾಗಿ ಚಾರ್ಜ್ ಆಗಲು ಸುಮಾರು ಒಂದುವರೆ ಗಂಟೆ ತಗುಲಿತು.

ಬೆಲೆ: 2 ಜಿಬಿ RAM 32 ಜಿಬಿ ಸ್ಟೋರೇಜ್ ಇರುವ ಮಾಡೆಲ್‌ಗೆ 6999 ರೂ. ಹಾಗೂ 4 ಜಿಬಿ/64ಜಿಬಿ ಮಾಡೆಲ್‌ಗೆ 7,999 ರೂ.

ಒಟ್ಟಾರೆ ಹೇಗಿದೆ?
ಕಡಿಮೆ ಬಜೆಟ್‌ನಲ್ಲಿ ಸಾಮಾನ್ಯವಾದ, ದೊಡ್ಡ ಗಾತ್ರದ, ಉತ್ತಮ ಬ್ಯಾಟರಿಯುಳ್ಳ, ತಕ್ಕಮಟ್ಟಿಗೆ ಒಳ್ಳೆಯ ಫೋಟೊ, ವಿಡಿಯೊ ತೆಗೆಯಬಹುದಾದ ಫೋನ್ ಬೇಕು ಎಂದುಕೊಂಡವರಿಗೆ ಇದು ಸೂಕ್ತವಾಗಬಹುದು.

My article Published in Prajavani on 09 Feb 2021

LEAVE A REPLY

Please enter your comment!
Please enter your name here