ವಿಂಡೋಸ್, ಮ್ಯಾಕ್ ಕಂಪ್ಯೂಟರುಗಳಲ್ಲಿ ಸ್ಕ್ರೀನ್ ರೆಕಾರ್ಡ್ ಮಾಡುವುದು ಹೇಗೆ?

0
449

ಈ ಡಿಜಿಟಲ್ ಕಾಲದಲ್ಲಿ ಫೇಸ್‌ಬುಕ್, ಯೂಟ್ಯೂಬ್, ಝೂಮ್ ಮುಂತಾದ ವೇದಿಕೆಗಳ ಮೂಲಕ ಕಾರ್ಯಕ್ರಮಗಳ ನೇರ ಪ್ರಸಾರ, ವೆಬಿನಾರ್, ಮೀಟಿಂಗ್‌ಗಳು – ಇವೆಲ್ಲವೂ ಅನಿವಾರ್ಯವೇ ಆಗಿಬಿಟ್ಟಂತಾಗಿದೆ. ಅದೇ ರೀತಿಯಲ್ಲಿ, ಮನೆಯಿಂದಲೇ ಕೆಲಸ ಮಾಡುವ ಈ ಕಾಲದಲ್ಲಿ ನಮ್ಮ ಕಂಪ್ಯೂಟರಿನಲ್ಲಿ ಏನೋ ತೊಂದರೆಯಾದಾಗ, ಏನು ಸಮಸ್ಯೆ ಅಂತ ಸ್ಕ್ರೀನ್ ರೆಕಾರ್ಡ್ ಮಾಡಿ ಕಳುಹಿಸಿ ಅಂತ ಐಟಿ ತಜ್ಞರು ಕೇಳಿಕೊಳ್ಳಬಹುದು. ಕಾರ್ಯಕ್ರಮಗಳು ಅಥವಾ ವೆಬಿನಾರ್‌ಗಳನ್ನು ರೆಕಾರ್ಡ್ ಮಾಡಿಕೊಳ್ಳಲು ಝೂಮ್‌ನಂತಹ ಕೆಲವು ಆ್ಯಪ್‌ಗಳಲ್ಲಿ ಅವಕಾಶ ಇರುತ್ತದೆ. ಇನ್ನು ಕೆಲವನ್ನು ಸ್ಕ್ರೀನ್ ರೆಕಾರ್ಡರ್ ಮೂಲಕ ನಾವೇ ರೆಕಾರ್ಡ್ ಮಾಡಿಕೊಳ್ಳಬಹುದು. ಇದು ಹೇಗೆ? ವಿಂಡೋಸ್ 10 ಅಥವಾ ಆ್ಯಪಲ್ ಮ್ಯಾಕ್ ಕಂಪ್ಯೂಟರ್‌ಗಳನ್ನು ಬಳಸುತ್ತಿರುವವರು ಇದಕ್ಕಾಗಿ ಪ್ರತ್ಯೇಕವಾದ ತಂತ್ರಾಂಶವನ್ನು ಅಳವಡಿಸಿಕೊಳ್ಳಬೇಕಿಲ್ಲ. ಅಂತರ್‌ನಿರ್ಮಿತ ತಂತ್ರಾಂಶಗಳಿಂದಲೇ ಇದು ಸಾಧ್ಯ. ಆದರೆ ಅದನ್ನು ನಾವು ಸಕ್ರಿಯಗೊಳಿಸಬೇಕಷ್ಟೇ. ಅದು ಹೇಗೆ ಅಂತ ತಿಳಿಯೋಣ ಬನ್ನಿ.

ಈಗ ಗೇಮಿಂಗ್ ಜಮಾನಾ ಆಗಿರುವುದರಿಂದಾಗಿ ಮೈಕ್ರೋಸಾಫ್ಟ್ ವಿಂಡೋಸ್ 10 ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ಗಳಲ್ಲಿ ಎಕ್ಸ್‌ಬಾಕ್ಸ್ ಗೇಮ್ ಬಾರ್ ಎಂಬ ತಂತ್ರಾಂಶವೊಂದು ಅಳವಡಿಕೆಯಾಗಿರುತ್ತದೆ. ಇದು ಎಕ್ಸ್‌ಬಾಕ್ಸ್ ಗೇಮಿಂಗ್‌ಗೆ ಸಹಕಾರಿ. ಇದನ್ನೇ ನಾವು ಸ್ಕ್ರೀನ್ ರೆಕಾರ್ಡ್ ಮಾಡಿಕೊಳ್ಳಲು ಬಳಸಬಹುದು.

ಇದನ್ನು ಹೇಗೆ ಸಕ್ರಿಯಗೊಳಿಸುವುದು ಎಂದರೆ, ಕೀಬೋರ್ಡ್‌ನಲ್ಲಿ ವಿಂಡೋಸ್ ಲೋಗೊ ಇರುವ ಒಂದು ಕೀಲಿ ಇದೆ. ಅದರ ಜೊತೆಗೆ G ಕೀಲಿಯನ್ನು (Win+G) ಒತ್ತಿಹಿಡಿದಾಗ, ಎಕ್ಸ್‌ಬಾಕ್ಸ್ ಗೇಮ್‌ಬಾರ್ ತೆರೆದುಕೊಳ್ಳುತ್ತದೆ. (ಇನ್‌ಸ್ಟಾಲ್ ಆಗಿಲ್ಲದಿದ್ದರೆ, ಮೈಕ್ರೋಸಾಫ್ಟ್ ಸ್ಟೋರ್‌ನಿಂದ ಅದನ್ನು ಪಡೆದುಕೊಳ್ಳಬಹುದು.) ಅಲ್ಲಿ Capture ಅಂತ ಎಲ್ಲಿದೆ ನೋಡಿ. ಅಲ್ಲಿರುವ ರೆಕಾರ್ಡ್ ಬಟನ್ ಒತ್ತಿದರೆ ತೆರೆದಿರುವ ಸ್ಕ್ರೀನ್ ಪೂರ್ತಿಯಾಗಿ ವಿಡಿಯೊ ರೂಪದಲ್ಲಿ ರೆಕಾರ್ಡ್ ಆಗುತ್ತದೆ.

ಯಾವ ಸ್ಕ್ರೀನ್ ರೆಕಾರ್ಡ್ ಮಾಡಬೇಕೆಂದು ನಿರ್ಧರಿಸಿದ್ದೀರೋ, ಅದನ್ನು ತೆರೆದು (ಉದಾ. ಯೂಟ್ಯೂಬ್ ವಿಡಿಯೊ ಅಥವಾ ಫೇಸ್‌ಬುಕ್ ವಿಡಿಯೊ) ನಂತರ Win+G ಬಟನ್ ಒತ್ತಿ, ರೆಕಾರ್ಡಿಂಗ್ ಆರಂಭಿಸಬೇಕು. ರೆಕಾರ್ಡಿಂಗ್ ಆರಂಭಿಸಲು Win+Alt+R ಕೀಲಿಗಳನ್ನೂ ಏಕಕಾಲದಲ್ಲಿ ಒತ್ತಬಹುದಾಗಿದೆ. ಕೆಂಪು ಬಟನ್ ಒತ್ತಿದರೆ ರೆಕಾರ್ಡಿಂಗ್ ನಿಲ್ಲಿಸಬಹುದು. ಯಾವುದೇ ವಿಡಿಯೊಗಳನ್ನು ಫುಲ್ ಸ್ಕ್ರೀನ್‌ನಲ್ಲಿ ಪ್ಲೇ ಆಗುವಂತೆ ಮಾಡಿದ ಬಳಿಕ ರೆಕಾರ್ಡ್ ಬಟನ್ ಒತ್ತಬೇಕು. ಇಲ್ಲವೆಂದಾದರೆ, ಹಿನ್ನೆಲೆಯ ಚಿತ್ರವೂ ರೆಕಾರ್ಡ್ ಆಗುತ್ತದೆ ಎಂಬುದು ಗಮನದಲ್ಲಿರಲಿ.

ಇಲ್ಲಿ ಹೊರಗಿನ ಧ್ವನಿಯೂ ರೆಕಾರ್ಡ್ ಆಗುವ ಸಾಧ್ಯತೆಗಳಿರುವುದರಿಂದ, ಅಲ್ಲೇ ಕಾಣಿಸುವ ಮೈಕ್ ಬಟನ್ ಒತ್ತಿ, ‘ಮ್ಯೂಟ್’ ಆಯ್ಕೆ ಮಾಡಿಕೊಂಡರೆ ಉತ್ತಮ ಧ್ವನಿಯುಳ್ಳ ವಿಡಿಯೊ ದೊರೆಯುತ್ತದೆ. ರೆಕಾರ್ಡ್ ಆದ ವಿಡಿಯೊಗಳು ಎಂಪಿ4 ರೂಪದಲ್ಲಿ ‘ಮೈ ಕಂಪ್ಯೂಟರ್‌’ನ ವಿಡಿಯೊಸ್ ಫೋಲ್ಡರ್‌ನಲ್ಲಿ ‘Captures’ ಹೆಸರಿನ ಸಬ್-ಫೋಲ್ಡರ್‌ನಲ್ಲಿ ಸೇವ್ ಆಗಿರುತ್ತದೆ. ಇದೇ ತಂತ್ರಾಂಶದ ಮೂಲಕ ಸ್ಕ್ರೀನ್-ಶಾಟ್ ತೆಗೆಯುವ ಆಯ್ಕೆಯೂ ಇದೆ.

ಇನ್ನು ಆ್ಯಪಲ್ ಕಂಪ್ಯೂಟರ್ (ಮ್ಯಾಕ್ ಒಎಸ್) ಬಳಸುವವರಿಗೆ ಕ್ವಿಕ್‌ಟೈಮ್ ಎಂಬ ಅಂತರ್‌ನಿರ್ಮಿತ ಪ್ಲೇಯರ್ ಮೂಲಕ ಸ್ಕ್ರೀನ್ ರೆಕಾರ್ಡ್ ಮಾಡಬಹುದು. ಇದನ್ನು ತೆರೆಯಲು, ಏಕಕಾಲದಲ್ಲಿ ಒತ್ತಬೇಕಾದ ಬಟನ್‌ಗಳೆಂದರೆ Command + Shift +5. ಅಥವಾ ಕ್ವಿಕ್‌ಟೈಮ್ ಎಂಬ ಆ್ಯಪ್ ತೆರೆದು, ‘ಫೈಲ್ಸ್’ ಎಂಬುದನ್ನು ಕ್ಲಿಕ್ ಮಾಡಿ, ‘New Screen Recording’ ಅಂತ ಒತ್ತಿದರೂ ಆಗುತ್ತದೆ. ಕಂಟ್ರೋಲ್ ಬಾರ್ ಕಾಣಿಸಿಕೊಳ್ಳುತ್ತದೆ, ಇದರಲ್ಲಿ ಸ್ಕ್ರೀನ್ ರೆಕಾರ್ಡ್ ಮಾತ್ರವಲ್ಲದೆ, ಸ್ಕ್ರೀನ್ ಶಾಟ್ ತೆಗೆಯುವ ಆಯ್ಕೆಯೂ ಇದೆ. ಇದರ ವಿಶೇಷತೆಯೆಂದರೆ, ಇಡೀ ಸ್ಕ್ರೀನ್ ಸಂಪೂರ್ಣವಾಗಿ ರೆಕಾರ್ಡ್ ಮಾಡಬಹುದು ಅಥವಾ ನಿರ್ದಿಷ್ಟ ಪ್ರದೇಶವನ್ನು ಮಾತ್ರವೇ ಸೆಲೆಕ್ಟ್ ಮಾಡಿ ರೆಕಾರ್ಡ್ ಮಾಡಿಕೊಳ್ಳಬಹುದು.

ಗಮನಿಸಿ: ವಿಂಡೋಸ್ ಅಥವಾ ಮ್ಯಾಕ್ ಕಂಪ್ಯೂಟರುಗಳಲ್ಲಿನ ಈ ರೆಕಾರ್ಡಿಂಗ್ ತಂತ್ರಾಂಶಗಳು ಎಲ್ಲ ಪ್ರೋಗ್ರಾಂಗಳು ಅಥವಾ ಆ್ಯಪ್‌ಗಳನ್ನು ರೆಕಾರ್ಡ್ ಮಾಡಿಕೊಳ್ಳಲೇಬೇಕೆಂದಿಲ್ಲ. ಕೆಲವು ರೆಕಾರ್ಡ್ ಆಗದಿರಲೂಬಹುದು.

My article Published in Prajavani on 2 Feb 2021

LEAVE A REPLY

Please enter your comment!
Please enter your name here