Cyber Tips: ಮುಖ ಸುಂದರವಾಗಿಸುವ ಆ್ಯಪ್: ಬಳಕೆಯಲ್ಲಿ ಎಚ್ಚರ ಇರಲಿ

0
242

Cyber Tips: ಕಳೆದೆರಡು ವಾರಗಳಿಂದ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸಾಮಾಜಿಕ ಜಾಲತಾಣಗಳಲ್ಲೆಲ್ಲಾ ಕಪ್ಪು ಬಿಳುಪಿನ, ಸುಂದರವಾದ ಕಲಾಕೃತಿಯಂತಿರುವ ಭಾವಚಿತ್ರಗಳು. ಎಲ್ಲರೂ ತಮ್ಮದೂ ಒಂದು ಇರಲಿ ಅಂತ ಇದನ್ನು ಬಳಸುವವರೇ! ಏನಿದು? ಅಂತ ಅಚ್ಚರಿಪಡುವವರಿಗೆ ಮತ್ತು ಇದನ್ನೂ, ಇಂಥ ಹಲವು ಆ್ಯಪ್‌ಗಳನ್ನು ಬಳಸುವವರಿಗೊಂದು ಎಚ್ಚರಿಕೆಯ ಮಾಹಿತಿ ಇಲ್ಲಿದೆ.

ಈಗ ವೈರಲ್ ಆಗುತ್ತಿರುವುದು ವೋಯ್ಲಾ ಎಐ ಆರ್ಟಿಸ್ಟ್ (Voila AI Artist) ಆ್ಯಪ್. ನೀವಿದನ್ನು ಇನ್‌ಸ್ಟಾಲ್ ಮಾಡಿಕೊಂಡು, ಅದಕ್ಕೆ ನಿಮ್ಮ ಸೆಲ್ಫೀ ಅಥವಾ ಈಗಾಗಲೇ ಇರುವ ಫೋಟೋ ಅಪ್‌ಲೋಡ್ ಮಾಡಿದರಾಯಿತು. ಆರ್ಜಿತ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ತಂತ್ರಜ್ಞಾನವನ್ನು ಬಳಸಿ ಅದು ಆ ಚಿತ್ರವನ್ನು ಸುಂದರವಾಗಿಸಿ, ನಿಮ್ಮ ಮನಸ್ಸನ್ನು ಖುಷಿಪಡಿಸಿ, ಕಾರ್ಟೂನ್ ಆಗಿಯೋ, ಕ್ಯಾರಿಕೇಚರ್ ಆಗಿಯೋ, ಅಥವಾ ಹಳೆಯ ಚಿತ್ರವಾಗಿಯೋ ಪರಿವರ್ತಿಸುತ್ತದೆ. ಇದನ್ನು ಶೇರ್ ಮಾಡುವ ಮೂಲಕ ಲೈಕುಗಳು, ಕಾಮೆಂಟ್‌ಗಳ ನಮ್ಮೊಳಗಿನ ಆಕಾಂಕ್ಷೆಯನ್ನು ಈಡೇರಿಸಿಕೊಳ್ಳಲು ನೆರವಾಗುತ್ತದೆ.

ಹಿಂದೆಯೂ ಪಿಕ್ಸಾರ್, ಫೇಸ್ಆ್ಯಪ್ ಹೆಸರಿನ ಆ್ಯಪ್‌ಗಳೂ ವೈರಲ್ ಆಗಿದ್ದವು. ಇಂಥ ಆ್ಯಪ್‌ಗಳು ವಯಸ್ಸಾದವರನ್ನು ತಾರುಣ್ಯದಲ್ಲಿರುವಂತೆಯೂ, ತಾರುಣ್ಯದಲ್ಲಿರುವವರು ವಯಸ್ಸಾದಾಗ ಹೇಗಿರಬಹುದು ಎಂತ ನೋಡುವ ಆಕಾಂಕ್ಷೆಯನ್ನು ಈಡೇರಿಸುತ್ತವೆ. ಡಿಸ್ನಿ ರಾಜಕುಮಾರಿಯಾಗಬಹುದು, ರಾಜಕುಮಾರನೂ ಆಗಬಹುದು. ವಿಷಯ ಇಷ್ಟೇ ಆದರೆ ಪರವಾಗಿರಲಿಲ್ಲ. ಆದರೆ, ಇಂಥ ಆ್ಯಪ್‌ಗಳು ನಮ್ಮ ಖಾಸಗಿ ಮಾಹಿತಿಗಳನ್ನು ಕದಿಯುತ್ತವೆ ಎಂಬ ಮುನ್ನೆಚ್ಚರಿಕೆ ನಮಗೆ ಇರಬೇಕಲ್ಲವೇ? ಇತ್ತೀಚೆಗಷ್ಟೇ ಸೋವಾ (Sova) ಎಂಬ ವೈರಸ್, ತಾನಾಗಿಯೇ ನಮ್ಮ ಸ್ಮಾರ್ಟ್‌ಫೋನ್ ಒಳಗೆ ಸೇರಿಕೊಂಡು, ಬ್ಯಾಂಕಿಂಗ್ ಆ್ಯಪ್‌ಗಳಿಂದ ಮಾಹಿತಿ ಕದ್ದು, ಪಾಸ್‌ವರ್ಡ್‌ಗಳನ್ನೂ ಕದ್ದು, ನಮ್ಮ ಖಾತೆಯನ್ನು ನಿಯಂತ್ರಿಸುವ ಅಪಾಯದ ಬಗ್ಗೆ ಸಾಕಷ್ಟು ಸದ್ದಾಗಿದೆ. ಈ ಹಂತದಲ್ಲಿ ನಾವಂತೂ ಇಂಟರ್ನೆಟ್ ಬಳಸಿ ಏನೆಲ್ಲಾ ಮಾಡುತ್ತೇವೆಯೋ, ಅದರಲ್ಲಿ ಒಂದೊಂದು ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇರಿಸಬೇಕಾಗುತ್ತದೆ ಎಂಬುದನ್ನು ಅರಿತಿರಬೇಕು.

ಮೊದಲನೆಯದಾಗಿ ಇಂಟರ್ನೆಟ್‌ನಲ್ಲಿ ಇರುವುದೆಲ್ಲವೂ ಸಾಚಾ ಅಲ್ಲ. ವಾಟ್ಸ್ಆ್ಯಪ್, ಟೆಲಿಗ್ರಾಂ, ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮುಂತಾಗಿ ನಾವು ಸಾಮಾನ್ಯವಾಗಿ ಬಳಸುವ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಯಾವುದೇ ಅಪರಿಚಿತ ಲಿಂಕ್‌ಗಳನ್ನಾಗಲೀ ಕ್ಲಿಕ್ ಮಾಡುವ ಮುನ್ನ ಮತ್ತು ಪಾಪ್-ಅಪ್ (ಸ್ಕ್ರೀನ್ ಮೇಲೆ ಧುತ್ತನೇ ಬರುವ) ವಿಂಡೋಗಳಲ್ಲಿರುವ ಬಟನ್‌ಗಳನ್ನು (Submit, Yes, Install, OK) ಕ್ಲಿಕ್ ಮಾಡುವ ಮುನ್ನ ಹಲವು ಬಾರಿ ಯೋಚನೆ ಮಾಡುವ ವಿವೇಚನೆ ರೂಢಿಸಿಕೊಳ್ಳಲೇಬೇಕು.

ಈಗ ವೋಯ್ಲಾ ಆ್ಯಪ್ ಅನ್ನೇ ತೆಗೆದುಕೊಂಡರೆ, ಅದು ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ ಎಂಬುದು ಹೌದು. ಆದರೆ, ಅದು ಸುರಕ್ಷಿತವೇ? ವೋಯ್ಲಾ ಅಥವಾ ಅಂಥದ್ದೇ ‘ಕ್ಲಿಕ್ ಮಾಡಿಸುವ’ ಆ್ಯಪ್‌ಗಳ ಸೇವಾ ನಿಯಮಗಳು ಹಾಗೂ ಖಾಸಗಿತನ ನೀತಿಯನ್ನು ಓದುವ ತಾಳ್ಮೆ ನಮಗಿದೆಯೇ? ಅಲ್ಲೊಂದು ವಾಕ್ಯವಿರುತ್ತದೆ – ಅದೆಂದರೆ, ನೀವು ಅಪ್‌ಲೋಡ್ ಮಾಡುವ ಚಿತ್ರಗಳನ್ನು ನಿಮಗೆ ಸೂಚಿಸದೆಯೇ ಅಥವಾ ಅದಕ್ಕಾಗಿ ಯಾವುದೇ ಹಣ ನೀಡದೆ ಅದನ್ನು ‘ಆ್ಯಪ್ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ’ ಯಾವುದೇ ರೀತಿ ಬಳಸಿಕೊಳ್ಳಬಹುದು. ಹೆಚ್ಚಿನ ಆ್ಯಪ್‌ಗಳ ಷರತ್ತುಗಳ ಪಟ್ಟಿಯಲ್ಲಿರುವ ಮತ್ತೊಂದು ವಾಕ್ಯ ಎಂದರೆ, ‘ನಿಮಗೆ ತಿಳಿಸದೆಯೇ ಈ ಷರತ್ತುಗಳನ್ನು ಮಾರ್ಪಡಿಸುವ ಹಕ್ಕು ನಮಗಿದೆ’ ಎಂಬುದು. ಸರಕಾರಕ್ಕೆ ನಮ್ಮ ಮಾಹಿತಿಯನ್ನು ನೀಡಲು ‘ಗೋಪ್ಯತೆ ಬಹಿರಂಗವಾಗುತ್ತದೆ’ ಎಂಬ ಕಾರಣಕ್ಕೆ ಹಿಂದೇಟು ಹಾಕುವ ನಾವು ವೈರಲ್ ಆಗುವ ಇಂಥ ಯಾವುದೇ ಆ್ಯಪ್‌ಗಳಿಗೆ ಮಾಹಿತಿಯನ್ನು ಕೈಯಾರೆ ಧಾರೆಯೆರೆದು ನೀಡುತ್ತೇವೆ ಎಂಬುದು ತಿಳಿದಿರಲಿ.

ಹೀಗಾಗಿ, ಹಲವು ಬಾರಿ ಹೇಳಿರುವಂತೆ, ಇಂಟರ್ನೆಟ್‌ಗೆ ನಾವು ಬಂದೆವೆಂದರೆ, ನಮ್ಮ ಖಾಸಗಿತನ ಅಥವಾ ಗೋಪ್ಯತೆಯ ಬಗೆಗಿನ ಕಾಳಜಿಯನ್ನು ಮರೆತುಬಿಡಬೇಕಾಗುತ್ತದೆ. ಇದೇ ರೀತಿ, ಕ್ಲಿಕ್ ಮಾಡಿ ಪ್ರೇರೇಪಿಸಿ, ಸ್ವಯಂಚಾಲಿತವಾಗಿ ಪೋಸ್ಟ್ ಮಾಡಿಸುವ ಹಲವಾರು ಆಟಗಳೂ ಫೇಸ್‌ಬುಕ್, ಇನ್‌ಸ್ಟಾಗ್ರಾಂನಲ್ಲಿ ಹರಿದಾಡುತ್ತವೆ. ಉದಾಹರಣೆಗೆ, “ಸಾವಿನ ದಿನಾಂಕ ಯಾವುದು ತಿಳಿಯಿರಿ, ನಿಮ್ಮ ಆತ್ಮೀಯ ಮಿತ್ರ ಯಾರು, ನಿಮ್ಮ ಉತ್ತಮ ಗುಣ ಯಾವುದು? ನಿಮ್ಮ ಹೆಸರಿನ ಅರ್ಥ ಏನು? ನಿಮ್ಮ ಭವಿಷ್ಯ ತಿಳಿಯಲು ಕ್ಲಿಕ್ ಮಾಡಿ” ಅಂತೆಲ್ಲ ಇರುತ್ತವಲ್ಲ? ಸಾಕಷ್ಟು ಮಂದಿ ಇದನ್ನು ಶೇರ್ ಮಾಡಿಕೊಳ್ಳುತ್ತಾರೆ ಮತ್ತು ಅವರ ಸ್ನೇಹಿತರೂ ಆ ಲಿಂಕ್ ಒತ್ತಿ, ತಮ್ಮದೂ ಇರಲಿ ಎಂದುಕೊಳ್ಳುತ್ತಾರೆ.

ಈ ಸಂದರ್ಭದಲ್ಲೆಲ್ಲಾ, ನಮ್ಮ ಫೇಸ್‌ಬುಕ್ ಮಾಹಿತಿಯನ್ನು, ನಮ್ಮ ಅಸ್ತಿತ್ವವನ್ನು, ನಮ್ಮ ಗುರುತನ್ನು, ನಮ್ಮ ಚಿತ್ರವನ್ನಷ್ಟೇ ಅಲ್ಲ, ನಮ್ಮ ಸ್ನೇಹಿತರ ಪಟ್ಟಿಯನ್ನೂ ಈ ರೀತಿಯ ಆ್ಯಪ್‌ಗಳಿಗೆ ನಿಮಗರಿವಿಲ್ಲದಂತೆಯೇ ನೀಡಿರುತ್ತೇವೆ! ಯಾಕೆಂದರೆ, ಯಾರು ಕೂಡ ಆ ಆ್ಯಪ್‌ನ ಸೇವಾ ನಿಯಮಗಳನ್ನಾಗಲೀ, ಷರತ್ತುಗಳನ್ನಾಗಲೀ ಓದಲು ಹೋಗುವುದಿಲ್ಲ, ಓದಿದರೂ ಅವುಗಳು ಅರ್ಥವಾಗದಿರುವ ಕಾನೂನು ಪರಿಭಾಷೆಯಲ್ಲಿರುತ್ತವೆ! ಒಟ್ಟಿನಲ್ಲಿ ಇಂಥ ಅನಗತ್ಯ ಆ್ಯಪ್‌ಗಳನ್ನು ನಾವೇ ವೈರಲ್ ಮಾಡಿರುತ್ತೇವೆ!

ಇದೇ ರೀತಿ ಅಶ್ಲೀಲ ವಿಡಿಯೊಗಳನ್ನು ನೋಡುವವರು ಅಥವಾ ಗೇಮ್‌ಗಳನ್ನು ಆಡುವವರಿಗೆ ಹಾಗೂ ಕೆಲವೊಂದು ಬ್ರೌಸರ್‌ಗಳಲ್ಲಿ ಅರಿವಿಲ್ಲದೆ ಯಾವುದೋ ಲಿಂಕ್ ಕ್ಲಿಕ್ ಮಾಡಿದ ಬಳಿಕ, ಪದೇ ಪದೇ ನಕಲಿ ಎಚ್ಚರಿಕೆ ನೀಡುವ ಪಾಪ್-ಅಪ್ ವಿಂಡೋಗಳು ಗೋಚರಿಸುತ್ತವೆ. ‘ನಿಮ್ಮ ಫೋನ್ ಅಪಾಯದಲ್ಲಿದೆ, ಆ್ಯಂಟಿ ವೈರಸ್ ಇನ್‌ಸ್ಟಾಲ್ ಮಾಡಿಕೊಳ್ಳಲು ಕ್ಲಿಕ್ ಮಾಡಿ’ ಎಂದೋ, ‘ನಿಮ್ಮ ಫೋನ್ ಕ್ಲೀನ್ ಮಾಡಲು ಕ್ಲಿಕ್ ಮಾಡಿ’ ಅಂತಲೋ ಸಂದೇಶ ಗೋಚರಿಸುತ್ತದೆ. ಅಧಿಕೃತ ಆ್ಯಪ್ ಸ್ಟೋರ್‌ನಿಂದ ಮಾತ್ರವೇ ಆ್ಯಪ್‌ಗಳನ್ನು ಅಳವಡಿಸಿಕೊಳ್ಳಬೇಕು ಎಂದು ಎಷ್ಟು ಬಾರಿ ಎಚ್ಚರಿಸಿದರೂ, ನಾವು ಕ್ಲಿಕ್ ಮಾಡುತ್ತೇವೆ. ಅವು ಫಿಶಿಂಗ್ (phishing) ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡುವ ಲಿಂಕ್‌ಗಳಾಗಿರಬಹುದು. ಎಸ್ಎಂಎಸ್, ಇಮೇಲ್, ವಾಟ್ಸ್ಆ್ಯಪ್, ಟೆಲಿಗ್ರಾಂ ಮೂಲಕ ಇಂಥವು ಸಾಕಷ್ಟು ಲಿಂಕ್‌ಗಳು ಬರುತ್ತವೆ. ಕ್ಲಿಕ್ ಮಾಡಿದರೆ, ನಿಮಗೆ ತಿಳಿಯದೆಯೇ ಅಥವಾ ತಿಳಿದೇ ಕೆಲವೊಂದು ಆ್ಯಪ್‌ಗಳು (ಎಪಿಕೆ ಫೈಲ್‌ಗಳು) ಇನ್‌ಸ್ಟಾಲ್ ಆಗಿಬಿಡುತ್ತವೆ. ಅವುಗಳು ನಿಮ್ಮ ಮೊಬೈಲ್‌ನಲ್ಲಿದ್ದ ಎಲ್ಲ ಮಾಹಿತಿಯನ್ನೂ ಕದ್ದು, ಆ್ಯಪ್ ಸೃಷ್ಟಿಕರ್ತರಿಗೆ ರವಾನಿಸಬಲ್ಲವು.

ಹೀಗಾಗಿ ಆನ್‌ಲೈನ್‍ನಲ್ಲಿ ಸುರಕ್ಷಿತವಾಗಿರಬೇಕಿದ್ದರೆ ಏಕೈಕ ದಾರಿ ಎಂದರೆ ವಿವೇಚನೆ ಬಳಸುವುದು. ಕ್ಲಿಕ್ ಮಾಡುವ ಮುನ್ನ, ಮುಖ್ಯವಾದ ಮಾಹಿತಿ ಹಂಚಿಕೊಳ್ಳುವ ಮುನ್ನ ಈ ಲೇಖನವನ್ನು ಮತ್ತೊಮ್ಮೆ ನೆನಪಿಸಿಕೊಳ್ಳಿ.

My article (Avinash B) published in Prajavani on 20/21 September 2022

LEAVE A REPLY

Please enter your comment!
Please enter your name here