TECNO i3: ಕಡಿಮೆ ಬೆಲೆ, ಉತ್ತಮ ಸ್ಪೆಸಿಫಿಕೇಶನ್ ಇರುವ ಮತ್ತೊಂದು ಚೀನಾ ಮೊಬೈಲ್

ಆಫ್ರಿಕಾ, ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದ ಚೀನಾ ಮೂಲದ ಟ್ರಾನ್ಸ್‌ಶನ್ (Transsion) ಕಂಪನಿಯ ಐಟೆಲ್ ಮೊಬೈಲ್ ಬ್ರ್ಯಾಂಡ್ 2016ರಲ್ಲಿ ಭಾರತ ಪ್ರವೇಶಿಸಿ ಸದ್ದು ಮಾಡಿತ್ತು. ಇದೀಗ ಅದೇ ಕಂಪನಿಯು ಟೆಕ್ನೋ ಹೆಸರಿನಲ್ಲಿ ಎರಡು ಸ್ಮಾರ್ಟ್ ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ, ಐ3 ಹಾಗೂ ಐ3 ಪ್ರೋ. ಐಟೆಲ್, ಇನ್‌ಫಿನಿಕ್ಸ್ ಹಾಗೂ ಸ್ಪೈಸ್ ಎಂಬ ಬ್ರ್ಯಾಂಡ್‌ಗಳಲ್ಲಿ ಕೂಡ ಈ ಕಂಪನಿಯು ಸ್ಮಾರ್ಟ್ ಫೋನನ್ನು ಹೊರತಂದಿದೆ.

Tecno Mobile

ಕಡಿಮೆ ಬೆಲೆಗೆ ಅತ್ಯುತ್ತಮ ಸ್ಪೆಸಿಫಿಕೇಶನ್ ನೀಡುತ್ತಿರುವ ಚೀನೀ ಕಂಪನಿಗಳ ಸಾಲಿಗೆ ಟೆಕ್ನೊ ಮೊಬೈಲ್ ಕೂಡ ಸೇರಿಕೊಂಡಿದೆ. ಟೆಕ್ನೋ ಐ3 ಮೊಬೈಲ್ ಬಿಡುಗಡೆಯಾಗಿದ್ದು 2017ರ ಏಪ್ರಿಲ್ ತಿಂಗಳಲ್ಲಿ. 5 ಇಂಚು ಸ್ಕ್ರೀನ್, 2 ಜಿಬಿ RAM, 16 ಜಿಬಿ ಇಂಟರ್ನಲ್ ಸ್ಟೋರೇಜ್ ಇರುವ ಇದರ ಬೆಲೆ 7590 ರೂ.

Tecno i3 ಮೊಬೈಲ್‌ನಲ್ಲಿ 1.3 GHz ಕ್ವಾಡ್ ಕೋರ್ ಮೀಡಿಯಾಟೆಕ್ MT6737 ಪ್ರೊಸೆಸರ್ ಇದೆ ಮತ್ತು 128 ಜಿಬಿ ವರೆಗೂ ಮೆಮೊರಿಯನ್ನು ವಿಸ್ತರಿಸಬಹುದಾಗಿದೆ.

ಪ್ರೈಮರಿ ಹಾಗೂ ಸೆಲ್ಫೀ ಎರಡೂ ಕ್ಯಾಮೆರಾಗಳು 8 ಮೆಗಾಪಿಕ್ಸೆಲ್ ಸಾಮರ್ಥ್ಯ ಹೊಂದಿರುವುದು ವಿಶೇಷ. ಆಂಡ್ರಾಯ್ಡ್ 7.0 (ನೌಗಾಟ್) ಆಪರೇಟಿಂಗ್ ಸಿಸ್ಟಂ ಆಧಾರಿತವಾಗಿ ‘ಹಾಯ್’ ಎಂಬ ಕಸ್ಟಮೈಸ್ಡ್ ಒಎಸ್ ತಂತ್ರಾಂಶವನ್ನು ಹೊಂದಿರುವ ಈ ಫೋನ್‌ನಲ್ಲಿ. 3050 mAh ತೆಗೆಯಲಾಗದ ಬ್ಯಾಟರಿ ಇದೆ. ಇದರ ಸುತ್ತಳತೆ 142.75 x 70.50 x 7.90 ಮತ್ತು ತೂಕ 145.00 ಗ್ರಾಂ.

ಡ್ಯುಯಲ್ ಸಿಮ್ (ನ್ಯಾನೋ) ಅವಕಾಶವಿದ್ದು, Wi-Fi, GPS, ಬ್ಲೂಟೂತ್, ಹೆಡ್‌ಫೋನ್, 3G ಮತ್ತು 4G ಹಾಗೂ VoLTE ಸಂಪರ್ಕ ವ್ಯವಸ್ಥೆಯಿದೆ. ಪ್ರಾಕ್ಸಮಿಟಿ ಸೆನ್ಸರ್ ಹಾಗೂ ಏಂಬಿಯಂಟ್ ಲೈಟ್ ಸೆನ್ಸಾರ್‌ಗಳು ಕೂಡ ಇವೆ.

ಕಪ್ಪು, ಬೂದು ಹಾಗೂ ಶಾಂಪೇನ್ ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿರುವ ಈ ಫೋನ್ ತೆಳುವಾದ ಆಕಾರದಿಂದ ಗಮನ ಸೆಳೆಯುತ್ತದೆ. ಸ್ಲಿಮ್ ಆಗಿರುವುದರಿಂದ ಹಿಡಿದುಕೊಳ್ಳುವುದು ಸುಲಭ. ಬಾಕ್ಸ್‌ನಲ್ಲೇ ಬ್ಯಾಕ್ ಕವರ್ ಹಾಗೂ ಇಯರ್ ಫೋನ್ ಲಭ್ಯವಿದೆ.

ವಿಶೇಷತೆಗಳು
* ಕನ್ನಡ ಸಹಿತ ಭಾರತೀಯ ಭಾಷೆಗಳ ಇನ್‌ಪುಟ್ ಕೀಬೋರ್ಡುಗಳಿವೆ.
* ಇದರಲ್ಲಿರುವ ಮೈಕ್ರೋ ಇಂಟೆಲಿಜೆನ್ಸ್ ವೈಶಿಷ್ಟ್ಯಗಳು ಗಮನ ಸೆಳೆಯುತ್ತವೆ.
* ಮೂರು ಬೆರಳುಗಳಿಂದ ಸ್ಕ್ರೀನ್‌ನಲ್ಲಿ ಕೆಳಗೆ ಸ್ಲೈಡ್ ಮಾಡಿದರೆ ಸ್ಕ್ರೀನ್ ಶಾಟ್ ತೆಗೆಯಬಹುದು.
* ಫ್ಲಿಪ್ ಮಾಡಿದರೆ ರಿಂಗಿಂಗ್ ಸದ್ದು ಮ್ಯೂಟ್ ಆಗುತ್ತದೆ.
* ಸ್ಕ್ರೀನ್ ಕವರ್ ಮಾಡಿದರೂ ಸೈಲೆಂಟ್ ಆಗುತ್ತದೆ.
* ಮುಂಭಾಗ ಹಾಗೂ ಹಿಂಭಾಗದಲ್ಲಿ ಫ್ಲ್ಯಾಶ್ ಇದೆ.
* ಹೋಮ್ ಕೀಲಿ ದೀರ್ಘವಾಗಿ ಒತ್ತಿದರೆ ಫ್ಲ್ಯಾಶ್ ಆನ್ ಆಗುತ್ತದೆ.
* ಕಸ್ಟಮರ್ ಕೇರ್‌ಗೆ ಪ್ರತ್ಯೇಕ ಆ್ಯಪ್ ಇದೆ.
* ಗೇಮಿಂಗ್ ಇಷ್ಟವಾದರೆ Aha ಎಂಬ ತಾಣಗಳ ಆ್ಯಪ್ ಇದೆ.
* ಯಾವುದೇ ಆ್ಯಪ್ ನಿರ್ದಿಷ್ಟ ಕಾಲ ಕೆಲಸ ಮಾಡದಂತೆ ಇರಿಸುವ ‘ಫ್ರೀಜರ್’ ಎಂಬ ವ್ಯವಸ್ಥೆಯಿದೆ.
* ಕ್ಯಾಮೆರಾದಲ್ಲಿ ಫೋಟೋ ತಿದ್ದುಪಡಿ ಮಾಡುವ ಆಯ್ಕೆಗಳು ಕೂಡ ಸಾಕಷ್ಟಿವೆ.
* ಜೇಬಿನಲ್ಲಿಟ್ಟಾಗ ಸ್ವಯಂಚಾಲಿತವಾಗಿ ಲಾಕ್ ಆಗುವ ವ್ಯವಸ್ಥೆ ಇದರಲ್ಲಿದೆ.

5 ಇಂಚು ಸ್ಕ್ರೀನ್, ತೆಳುವಾದ ಸುತ್ತಳತೆ, ಹಗುರ ಮತ್ತು ಉತ್ತಮ ಇಯರ್‌ಫೋನ್‌ಗಳಿಂದ ಈ ಫೋನ್ ಗಮನ ಸೆಳೆಯುತ್ತದೆ. ಸ್ಕ್ರೀನ್‌ನ ಮೇಲೆ ಬ್ಯಾಕ್/ಹೋಮ್/ರೀಸೆಂಟ್ ಬಟನ್‌ಗಳಿಗೆ ಹಿನ್ನೆಲೆ ಬೆಳಕು ಇಲ್ಲದಿರುವುದರಿಂದ ಕತ್ತಲಲ್ಲಿ ಆ ಬಟನ್ ಬಳಸಲು ಸ್ವಲ್ಪ ಕಷ್ಟ.

In VK

Leave a Reply

Your email address will not be published. Required fields are marked *