“ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ”
ನಮ್ಮಲ್ಲಿಲ್ಲದ್ದನ್ನು ಅಪ್ಪಿಕೊಳ್ಳುವುದರಲ್ಲಿ ಭಾರತೀಯರು ಒಂದು ಕೈ ಮುಂದೆಯೇ ಎಂಬುದು ಅದೆಷ್ಟೊ ದೃಷ್ಟಾಂತಗಳಿಂದ ಈಗಾಗಲೇ ಸಾಬೀತಾಗಿದೆ. ತೀರಾ ಇತ್ತೀಚೆಗೆ ಭಾರತೀಯವಲ್ಲದ ಆದರೆ ಭಾರತೀಯ ಯುವಜನಾಂಗವೆಲ್ಲಾ ಪ್ರೀತಿಯಿಂದ ಅಪ್ಪಿಕೊಂಡಿರುವ ಸಂಪ್ರದಾಯವಾದ ವ್ಯಾಲೆಂಟೈನ್ಸ್ ದಿನವನ್ನು ಇಡೀ ದೇಶವೇ ಭರ್ಜರಿಯಾಗಿ ಆಚರಿಸಿತು.
ಇಂಥದ್ದನ್ನು ಆಚರಿಸಬೇಕು, ಇಂಥದ್ದನ್ನು ಆಚರಿಸಬಾರದು ಎಂಬುದೆಲ್ಲಾ ಅವರವರ ಮನೋಭಾವಗಳಿಗೆ ಬಿಟ್ಟ ವಿಷಯ. ಆದರೆ ಈ ಆಚರಣೆಯಲ್ಲಿ ಮಾಧ್ಯಮಗಳ ಪಾತ್ರ ಎಷ್ಟು ಎಂಬುದರ ಬಗ್ಗೆ ಸ್ವಲ್ಪ ತಲೆಕೆಡಿಸಿಕೊಳ್ಳಬೇಕಾಗುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಮುದ್ರಣ ಮಾಧ್ಯಮದಲ್ಲಾಗಲಿ, ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಾಗಲಿ ಇಂಥದ್ದೊಂದು ಸಂಪ್ರದಾಯದ ಕುರಿತು ಭರ್ಜರಿ ಪ್ರಚಾರ ನೀಡಿರುವುದನ್ನು ಗಮನಿಸಿದ್ದೀರಾ? ಸುದ್ದಿ ಬಿತ್ತರಿಸಬೇಕಾದ ಚಾನೆಲ್‌ಗಳು ಕೂಡ ಈ ಪ್ರೇಮಿಗಳ ದಿನಾಚರಣೆ ಕುರಿತಾಗಿ ವಿಶೇಷ ಎಪಿಸೋಡ್‌ಗಳನ್ನು ಸೃಷ್ಟಿ ಮಾಡಿ ಪದೇ ಪದೇ ಬಿತ್ತರಿಸುತ್ತಿದ್ದವು. ಮುದ್ರಣ ಮಾಧ್ಯಮಗಳಲ್ಲೂ ಇದಕ್ಕಾಗಿಯೇ ವಿಶೇಷ ಪುರವಣಿ ಅಥವಾ ಕನಿಷ್ಠ ಒಂದು ಲೇಖನ ಮೀಸಲಿಡದ ಪತ್ರಿಕೆ/ಮ್ಯಾಗಜಿನ್ ಇಲ್ಲವೇ ಇಲ್ಲ ಎಂದೇ ಹೇಳಬಹುದು.
ಇದು ಗ್ರೀಟಿಂಗ್ ಕಾರ್ಡ್ಸ್ ಅಥವಾ ಚಿನ್ನ, ಉಡುಗೆ ಮುಂತಾದವುಗಳನ್ನು ಮಾರಾಟ ಮಾಡುವ ಕಂಪನಿಗಳ ಜಾಹೀರಾತಿಗೆ, ಮಾರಾಟ ವರ್ಧನೆಗೊಂದು ಒಳ್ಳೆಯ ಅವಕಾಶವಾಗಿಬಿಟ್ಟಿರುವುದರಿಂದ ಇಂಥದ್ದೊಂದು ದಿನಗಳಿಗೆ ಭರ್ಜರಿ ಪ್ರಚಾರ ಸಿಕ್ಕಿರುತ್ತದೆ ಎನ್ನುವುದನ್ನೂ ಅಲ್ಲಗಳೆಯಲಾಗದು. ಇದು ಪ್ರೇಮಿಗಳ ದಿನಕ್ಕೆ ಮಾತ್ರವಲ್ಲ, ಅಪ್ಪನ ದಿನ, ಅಮ್ಮನ ದಿನ, ಮಹಿಳೆಯರ ದಿನ, ಪುರುಷರ ದಿನ, ಯುವಕರ ದಿನ, ಹಿರಿಯರ ದಿನ, ಮಕ್ಕಳ ದಿನ, ಶಿಕ್ಷಕರ ದಿನ, ವೈದ್ಯರ ದಿನ, ಗೆಳೆಯರ ದಿನ ಎಂಬಿತ್ಯಾದಿ ಸಕಲ ಜೀವರಾಶಿಗಳಿಗೂ ಒಂದೊಂದು ದಿನದೊಂದಿಗೆ, ಮೂರ್ಖರಿಗೂ ಒಂದು ದಿನ ಇದ್ದು, ಅವುಗಳು ಕೂಡ ಕಾರ್ಪೊರೇಟ್ ಸಂಸ್ಕೃತಿಯ ಕರಿಛಾಯೆಯಡಿಯಲ್ಲಿ ಆಚರಣೆಗೊಳ್ಳುತ್ತಿವೆ.
ಇದರಿಂದಾಗಿಯೇ ಮಾಧ್ಯಮಗಳಲ್ಲೂ ಈ ದಿನಗಳ ಆಚರಣೆಗೊಂದು hype ಹುಟ್ಟಿಕೊಂಡಿವೆ. ಅಂಥಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದರಿಂದ ವೀಕ್ಷಕರು ಖಂಡಿತವಾಗಿ ಅದರ ಪ್ರಭಾವಕ್ಕೊಳಗಾಗುತ್ತಾರೆ ಎಂಬುದು ಸ್ಪಷ್ಟ.
ಆದರೆ ತಪ್ಪುಗಳನ್ನು (Negative effect) ಒಪ್ಪಿಕೊಳ್ಳುವಷ್ಟು ಶೀಘ್ರವಾಗಿ ಧನಾತ್ಮಕ ವಿಷಯಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗದಿರುವುದು ಮಾನವ ಸಹಜ ಗುಣ. ಹಾಗಾಗಿ ಭವಿಷ್ಯಕ್ಕೆ ಮೆಟ್ಟಿಲಾಗಬೇಕಾದ ಕಾಲೇಜು ಜೀವನದಲ್ಲಿ ಪ್ರೇಯಸಿ-ಪ್ರಿಯಕರರಿಗಾಗಿ ಮನಬಂದಂತೆ ಖರ್ಚು ಮಾಡುವುದು ತಪ್ಪಲ್ಲ, ಭರ್ಜರಿ, ಐಷಾರಾಮಿ, ದುಬಾರಿ ಉಡುಗೊರೆ ಕೊಟ್ಟರಷ್ಟೇ ತಮ್ಮ ಪ್ರೀತಿ, ಪ್ರೇಮ ಅಮರವಾಗುತ್ತದೆ, ಮಧುರವಾಗುತ್ತದೆ, ಹಿರಿಯರ, ಪೋಷಕರ ಮೇಲೆ ಗೌರವ ಹೆಚ್ಚುತ್ತದೆ (ಅಪ್ಪ-ಅಮ್ಮನ ದಿನಾಚರಣೆ, ಹಿರಿಯರ ಅಥವಾ ಶಿಕ್ಷಕರ ದಿನಾಚರಣೆಯಲ್ಲಾದರೆ) ಎಂಬಿತ್ಯಾದಿ ತಪ್ಪು ಕಲ್ಪನೆಗಳೂ ಸುಲಭವಾಗಿಯೇ ಆವರಿಸಿಕೊಂಡುಬಿಡುತ್ತದೆ. ಇನ್ನೊಂದೆಡೆ ದುಬಾರಿ ಉಡುಗೊರೆ ಖರೀದಿಸಲು ಶಕ್ತರಾಗದವರು ತನ್ನ ಪ್ರೀತಿಯೇ ಸರಿ ಇಲ್ಲ, ಪ್ರೀತಿಸಲು ನಾನು ನಾಲಾಯಕ್ಕು, ಹಿರಿಯರ ಬಗ್ಗೆ ನನಗೊಂದಿಷ್ಟೂ ಗೌರವವಿಲ್ಲ ಮುಂತಾಗಿ ಒಳಗೊಳಗೇ ಕೊರಗುವ ಸಾಧ್ಯತೆಗಳನ್ನೂ ಅಲ್ಲಗಳೆಯಲಾಗದು.
ಒಟ್ಟಿನಲ್ಲಿ ಪ್ರೀತಿ ತೋರಿಸಲು, ಗೌರವ ತೋರಿಸಲು, ಮೆಚ್ಚುಗೆ ತೋರಿಸಲು ನಮಗೊಂದು ನೆವನ ಬೇಕು ಅಷ್ಟೆ. ಉಳಿದ ದಿನಗಳಲ್ಲಿ ಈ ರೀತಿ ಮಾಡಿದರೆ ಅದು ನಾಟಕೀಯವಾಗುತ್ತದೆ ಎಂಬಷ್ಟರ ಮಟ್ಟಿಗೆ ಕಾಲ ಬದಲಾಗಿಬಿಟ್ಟಿದೆ.
ಹಾಗಿದ್ದರೆ ಪ್ರೀತಿ, ಪ್ರೇಮ, ಗೌರವ, ಮೆಚ್ಚುಗೆ ಇಂಥ ಭಾವನೆಗಳೆಲ್ಲವನ್ನೂ ನಾವು ಆಯಾ ದಿನಗಳಿಗಷ್ಟೇ ಸೀಮಿತವಾಗಿರಿಸಬೇಕೇ? ಬೇರೆ ದಿನಗಳಲ್ಲಿ ಈ ಭಾವಾಭಿವ್ಯಕ್ತಿಗಳೆಲ್ಲವೂ ನಾಟಕೀಯ ಎಂದಾಗದಂತೆ ಮಾಡಲು ಏನು ಮಾಡಬೇಕು? ಇದರಲ್ಲಿ ಮುದ್ರಣ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮಗಳ ಜವಾಬ್ದಾರಿಯೇನು? ಇವುಗಳ ಬಗ್ಗೆ ಚರ್ಚೆಯಾಗಲಿ.
hi,
“ನಮ್ಮಲ್ಲಿಲ್ಲದ್ದನ್ನು ಅಪ್ಪಿಕೊಳ್ಳುವುದರಲ್ಲಿ… ” what thing we dont have ? love ? Affection? Friendship? They are global.
So if there was no Valentine day wasn’t introduced in India, we would have celebrated some other day with some other name. But we surely would have.
About celebrating it on particular is general tendency. We are patriots only on 26th Jan and 15th Aug isn’t it?
Personally I believe in “everyday Valentines day”.
ಬಚ್ಚೋಡಿ ಅವರೆ,
ನಮ್ಮಲ್ಲಿ ಎಲ್ಲವೂ ಇದೆ. ಪ್ರೀತಿ ಇದೆ, ವಾತ್ಸಲ್ಯ ಇದೆ, ಗೆಳೆತನವಿದೆ ಎಲ್ಲವೂ ಇದೆ. ಆದರೆ ಪಾಶ್ಚಾತ್ಯರ ಒಳ್ಳೆಯ ಸಂಗತಿಗಳಿಂದ ಕೆಟ್ಟ ಸಂಗತಿಗಳನ್ನು ಬೇಗನೇ ನಾವು ಅಪ್ಪಿಕೊಂಡುಬಿಡುತ್ತಿದ್ದೇವೆ. ಬಹುಶಃ ನಮಗೆ ಅವುಗಳ ಕೊರತೆ ಇದೆ ಎಂಬುದು ಬಲುಬೇಗನೇ ಮನಸ್ಸಿಗೆ ನಾಟುವುದು ಇದಕ್ಕೆ ಕಾರಣವಿರಬಹುದು.
ಖಂಡಿತವಾಗಿಯೂ ವ್ಯಾಲೆಂಟೈನ್ಸ್ ಡೇ ಇಲ್ಲದಿದ್ದರೆ ಬೇರಾವುದೋ ದಿನವನ್ನು ನಾವು ಆಚರಿಸುತ್ತಿದ್ದೆವು. ಆಚರಿಸುತ್ತೇವೆ ಕೂಡ. ಆದರೆ ದುಬಾರಿ ಉಡುಗೊರೆಯೇ ಪ್ರೀತಿ ವ್ಯಕ್ತಪಡಿಸುವ ಏಕಮಾತ್ರ ಮಾರ್ಗ ಎಂದು ಬಿಂಬಿಸುವುದು, ಇಂಥದ್ದನ್ನೇ ಕೊಳ್ಳಿರಿ ಎಂದು ಜನತೆಯನ್ನು ಪ್ರಚೋದಿಸುವುದು ಎಷ್ಟು ಸರಿ ಎಂಬುದಷ್ಟೇ ನನ್ನ ಕಳಕಳಿ.
ಮತ್ತು ಜ.26 ಅಥವಾ ಆಗಸ್ಟ್ 15ರಂತೆ ಒಂದೇ ದಿನಕ್ಕೆ ನಮ್ಮ ದೇಶಪ್ರೇಮ ಸೀಮಿತವಾದಂತೆ ಪ್ರೀತಿ ಪ್ರೇಮವೂ, ಹಿರಿಯರ ಬಗೆಗಿನ ಗೌರವ, ವಾತ್ಸಲ್ಯವೂ ಸೀಮಿತವಾಗದಿರಲಿ ಎಂದು ಹಾರೈಕೆ.
Personally I believe in “everyday Valentines day” ಎಂಬ ನಿಮ್ಮ ಮಾತು ಇಷ್ಟವಾಯಿತು.
ಅವೀ,
ಪ್ರೀತಿಯನ್ನು ಗ್ರೀಟಿಂಗ್-ಗಿಪ್ಟ್-ರಿಂಗ್ ಗಳಲ್ಲಿ ಕೂಡಿಟ್ಟ ‘ಪ್ರೀತಿಯ’ ವ್ಯಾಪಾರಿಗಳಿಗೆ ವಂದನೆಗಳು…ಅದಕ್ಕೆ ನೀರೇರೆದು ಬೆಳೆಸುತ್ತಿರುವ ಸುದ್ದಿಮಧ್ಯಮಗಳಿಗೆ ಇನ್ನೊಂದು..
ಒಳ್ಳೆದು ವ್ಯಾಲೆಂಟೆನ್ ದಿವಸ ಆಚರಿಸೋಣ..ಆದರೆ ಆ ದಿವಸ ಅಂದರೆ ಅರ್ಕಿಸ್,ಹಾಲ್ಮಾರ್ಕ್ ಅಂದರೆ..ಹೂಂ ಹೂಂ..
ವ್ಯಾಲೆಂಟೆನ್ ದಿವಸಕ್ಕೆ ಕಾಯಬೇಕಾ ಪ್ರೀತಿ ವ್ಯಕ್ತಮಾಡೋಕೇ..ಅಭಿವ್ಯಕ್ತ ಪಡೀಸೋಕೇ?
ಶಿವ್ ಅವರೆ
ಪ್ರೀತಿ ಮಾಡೋಕೆ ವ್ಯಾಲೆಂಟೀನ್ ದಿನವೇ ಬೇಕಾ ಎಂಬ ನಿಮ್ಮ ಅಭಿಪ್ರಾಯ ಎಲ್ಲರಲ್ಲೂ ಮೂಡಿದರೆ ಪ್ರೀತಿಗೊಂದು ಬೆಲೆ. ಎಲ್ಲರೂ ಅರ್ಥೈಸಿಕೊಳ್ಳುವಂತಾಗಲಿ ಎಂಬುದು ಹಾರೈಕೆ.
ತಡವಾಗಿ ಇಲ್ಲಿ ಬಂದೆ, ವಿಷಯ ಹಳತಲ್ಲ.
ಮೀಡಿಯಾ ಹೈಪ್ ಎಲ್ಲವನ್ನೂ ಭೂತಗನ್ನಡಿ ಹಿಡಿದು ಅರ್ಧಬೆಂದ ಬುದ್ಧಿಗಳಿಗೆ ಬಡಿಸಿದರೆ ಅವುಗಳಿಗೆ ಅದ್ಭುತವಾಗಿ ಕಾಣದೇ ಇನ್ನೇನಾದೀತು? ಪ್ರತೀ ವರ್ಷ ಅದೆಷ್ಟು ಹುಡುಗಿಯರು “ತನ್ನ ಗೆಳೆಯ ತನ್ನ ಪ್ರಿಯತಮ ಅಲ್ಲ” ಅನ್ನುವ ಅರಿವಾದಾಗ, ಇದೇ ದಿನದ ನೆವನ ಹೇಳಿ ಹೆತ್ತವರ ಪ್ರೀತಿಯನ್ನೂ ಗಡೆಗಣಿಸಿ ಪ್ರಾಣ ತೆರುವುದಿಲ್ಲ? ಇದಕ್ಕೆ ಯಾರು ಹೊಣೆ? ಮೀಡಿಯಾ ಅದನ್ನೂ ಸುದ್ದಿಯಾಗಿಸಿಕೊಳ್ಳುತ್ತದೆ. ಯಾರ ಹೊಟ್ಟೆ ಸುಟ್ಟರೆ ಅದಕ್ಕೇನು?
ಮನಸ್ಸು ಕಸಿವಿಸಿ ಮಾಡುವ ವಿಷಯ ಇದು. ಪ್ರೀತಿಗೇ ಒಂದು ದಿನ, ಅಮ್ಮನಿಗೇ ಒಂದು ದಿನ, ಅಪ್ಪನಿಗೊಂದು ದಿನ… ದಿನ ದಿನವೂ ಬದುಕಿರಬೇಕಾದ ಈ ಸಂಬಂಧಗಳನ್ನು ಒಂದೊಂದು ದಿನಗಳಿಗೆ ಕಟ್ಟಿಹಾಕಿದಾಗ, ಸಂಸಾರವೆಂಬ ಕಂಪೆನಿ ಬಿಟ್ಟು ಬೇರೆಲ್ಲ ಕಂಪೆನಿಗಳೂ ಉದ್ಧಾರವಾಗುತ್ತಿವೆ. ನಮಗೆ ಬೇಕಾ ಈ ಸಂಸ್ಕೃತಿ? ನಿಮ್ಮ ಶೀರ್ಷಿಕೆ ಸರಿಯಾಗಿದೆ.