“ಮಧುರ ಯಾತನಾ” ಪ್ರೇಮವಿದು ನಿತ್ಯ ನೂತನ

0
395

“ಮೇರಾ ದಿಲ್ ಭೀ ಕಿತ್‌ನಾ ಪಾಗಲ್ ಹೆ, ಯೇ ಪ್ಯಾರ್ ತೊ ತುಮ್ಸೇ ಕರ್‌ತಾ ಹೆ, ಪರ್ ಸಾಮ್ನೇ ಜಬ್ ತುಮ್ ಆತೇ ಹೋ, ಕುಛ್ ಭೀ ಕಹನೇ ಸೇ ಡರ್‌ತಾ ಹೈ” ಸಾಜನ್ ಚಿತ್ರದ ಈ ಹಾಡು ಅದೆಷ್ಟು ಮಂದಿಯ ಹೃದಯ ಬಡಿತದ ವೇಗವನ್ನು ಹೆಚ್ಚಿಸಿಲ್ಲ, ಅದೆಷ್ಟು ಕಾಲೇಜು ಹುಡುಗ/ಗಿಯರ ಹೃದಯವನ್ನು ಆರ್ದ್ರವಾಗಿಸಿಲ್ಲ, ಪ್ರೇಮಾಗ್ನಿಯಲ್ಲಿ ಮಿಂದ ಅದೆಷ್ಟು ಪ್ರೇಮಿಗಳು ಈ ಸಾಲುಗಳ ಅರ್ಥವನ್ನು ಮನಸಾ ಅನುಭವಿಸಿಲ್ಲ!

“ಏನ್ ಹುಚ್ಚು ನನ್ನೀ ಹೃದಯಕೆ, ಅದು ನಿನ್ನನ್ನೇ ಪ್ರೀತಿಸ್ತಿದೆ, ಆದ್ರೆ, ನೀನೇನಾದ್ರೂ ಎದುರಿಗೆ ಬಂದ್ರೆ, ಒಂದಕ್ಷರವೂ ಬಾಯಿಂದ ಉದುರೋಲ್ಲ” ಎಂಬರ್ಥದ ಸಾಲುಗಳ ಅನುಭವ ಪ್ರತಿಯೊಬ್ಬ ಪ್ರೇಮಿಗೂ ಆಗಿರುತ್ತದೆ. ಈ ಹುಚ್ಚು ಹೃದಯಕ್ಕೆ ಏನೇ ಹೇಳಿದ್ರೂ ಅದು ಕೇಳಲೊಲ್ಲದು. ಅದೆಷ್ಟು ಮುಗ್ಧ ಎಂದ್ರೆ, ಎಷ್ಟು ಹೇಳಿದ್ರೂ ಅದಕ್ಕೆ ಅರ್ಥವಾಗೋದೇ ಇಲ್ಲ, ದಿನ-ರಾತ್ರಿಯೆನ್ನದೆ ನಿನ್ನದೇ ಜಪ ಮಾಡ್ತಿರುತ್ತೆ, ಪ್ರತಿಯೊಂದು ಕ್ಷಣವೂ ನನ್ನನ್ನು ಆವರಿಸುತ್ತಿರುತ್ತದೆ, ನೇವರಿಸುತ್ತಿರುತ್ತದೆ, ಪ್ರತಿ ದಿನವೂ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುವಂತೆ ಮಾಡ್ತಿದೆ, ಅದು ನಿನಗಾಗಿಯೇ ಸಾಯ್ತಾ ಇದ್ರೆ, ನಿನಗೆ ಇದೆಲ್ಲಾ ಅರ್ಥವಾಗೋದಿಲ್ಲ, ಹುಚ್ಚು ಹೃದಯವಿದು… ನೈಜತೆಗೆ ಅದೆಷ್ಟು ಹತ್ತಿರವಾಗಿವೆ ಈ ಸಾಲುಗಳು!

ಪ್ರೀತಿ, ಪ್ರೇಮ. ಇದೊಂದು ಸುಮಧುರ ಅನುಭೂತಿ. ಇದು ಹಳೇ ಪುರಾಣ ಅಂದುಕೊಂಡಿರಾ? ಅಲ್ಲ, ಇದು ನಿತ್ಯ ನೂತನ! ಈ ಚರಾಚರ ಜಗತ್ತಿನ ಹುಟ್ಟು ಆಗಿದ್ದಾಗಿನಿಂದಲೂ, ಅಥವಾ ಅದಕ್ಕೂ ಮೊದಲೇ ಇದ್ದ ಈ ಪ್ರೇಮ ಎಂಬ ಶಬ್ದದ ಮಾಧುರ್ಯ, ಸುಕೋಮಲತೆ ಮಾಸಿಲ್ಲ. ಸವಿಜೇನ ಹನಿಯ ಮಧುರತೆ ಮಾಸಿಲ್ಲ. ಸೆನ್ಸೆಕ್ಸ್ ದಿನದಿಂದ ದಿನಕ್ಕೆ ಏರಿಳಿತ ಕಾಣುತ್ತಲೇ ಇರಬಹುದು. ಆದರೆ ಈ ಪ್ರೀತಿ ಪ್ರೇಮದ ಒಲವಿನ ಸೂಚ್ಯಂಕವಂತೂ ಸ್ಥಿರ, ಸುದೃಢ. ಅದನ್ನು ವಿಲಕ್ಷಣ ಎನ್ನಿ, ವಿಚಿತ್ರ ಎನ್ನಿ, ಸುಲಕ್ಷಣ ಎನ್ನಿ, ಸಚಿತ್ರ ಎನ್ನಿ. ಪ್ರೀತಿ ಕುರುಡು ಅಂತಾರೆ, ಆದ್ರೆ ಪ್ರೀತಿ ಪ್ರೀತಿಯೇ ಎಂದೆನ್ನುತ್ತೇನೆ ನಾನು.

ಪ್ರಿಯಕರ, ಪ್ರಿಯತಮನ ಇರುವಿಕೆಯಲ್ಲಿ, ಅಥವಾ ನನಗೂ ಒಬ್ಬ ಪ್ರೇಮಿ ಇದ್ದಾನೆ/ಳೆ ಎಂಬ ಭಾವನೆಯೊಂದರಲ್ಲೇ ಅದೆಷ್ಟು ಸುಖವಿದೆ, ಸಂತಸವಿದೆ. ಪ್ರೇಮದ ಬೆಳ್ಳಿರೇಖೆ ಪ್ರತಿಯೊಬ್ಬನ ಮನದ ಮೂಸೆಯಲ್ಲೂ ಒಂದಲ್ಲ ಒಂದು ಬಾರಿ ಮೂಡಿ ಮರೆಯಾಗುತ್ತದೆ. ಕಾಲೇಜು ಹುಡುಗನೊಬ್ಬ, ತನ್ನ ಮನೆಯ ಆರ್ಥಿಕ ಪರಿಸ್ಥಿತಿ, ಅಸಹಾಯಕತೆಗಳನ್ನೆಲ್ಲವನ್ನೂ ತನ್ನ ಇನಿಯಳ ಆಗಮನದ ನಿರೀಕ್ಷೆಯೊಂದರಿಂದಲೇ ಮರೆಯಬಲ್ಲ. ನೋವು ಮರೆಸುವ, ಮುಖದಲ್ಲಿ ನಗು, ಮನಸ್ಸಿನಲ್ಲಿ ನಲಿವು ಮೂಡಿಸುವ ಶಕ್ತಿ ಆ ಪ್ರೇಮಕ್ಕಿದೆ. ಆ ಬೆಚ್ಚನೆಯ ಸವಿಮಾತು, ಪ್ರೇಮಿಯನ್ನೊಮ್ಮೆ ನೋಡಬೇಕೆಂಬ ತುಡಿತ, ದೂರದಿಂದ ಕಂಡ ಕೂಡಲೇ ಮನಸ್ಸು ಗರಿ ಬಿಚ್ಚಿ ಹಾರಾಡುತ್ತದೆ.

ಅಲ್ಲಿ ಹುಸಿ ಮುನಿಸಿದೆ, ಜಗಳವಿದೆ, ಕೋಪವಿದೆ, ತಾಪವಿದೆ, ಪ್ರೀತಿಯಿದೆ, ಸವಿಮಾತುಗಳಿವೆ, ಧನ್ಯತಾ ಭಾವವಿದೆ. ಇವೆಲ್ಲವುಗಳೊಂದಿಗೆ ಮಿಳಿತವಾಗಿ, ಜೀವನವನ್ನು ಅರಳಿಸಿಕೊಳ್ಳುವ, ರೂಪಿಸಿಕೊಳ್ಳುವ ಛಲ, ಬಲ, ನೀಡುವ ಪ್ರೇರಣಾಶಕ್ತಿಯೂ ಇದೆ ಎಂಬ ವಾದವನ್ನು ಒಪ್ಪದಿರಲು ಸಾಧ್ಯವೇ?

ಅದ್ಯಾರೋ ಒಬ್ಬರ ಆಗಮನವಾಗುತ್ತಿದ್ದಂತೆಯೇ ಮನಸ್ಸು ಅರಳುತ್ತದೆ, ಹೃದಯದ ಬಡಿತ ನಿಯಂತ್ರಣಕ್ಕೆ ಸಿಲುಕದಷ್ಟು ವೇಗವಾಗತೊಡಗುತ್ತದೆ, ಯಾರೋ ಒಬ್ಬರ ಬರುವಿಕೆಗಾಗಿ ಕಾಯುವುದರಲ್ಲಿ ಇರುವ “ಮಧುರ ಯಾತನೆ”ಯನ್ನು ಎಷ್ಟೇ ಆದರೂ ತಡೆದುಕೊಳ್ಳಬಲ್ಲೆ ಎಂದನ್ನಿಸುತ್ತದೆ, ಅದ್ಯಾರೋ ಒಬ್ಬರ ಸ್ಪರ್ಶಮಾತ್ರದಿಂದಲೇ ಜೀವನಾಸಕ್ತಿಯು ಹಕ್ಕಿಯಂತೆ ಗರಿಬಿಚ್ಚಿ ಹಾರಾಡುವಂತಾಗುತ್ತೆ, ಬಾಳಿನ ನಲಿವಿಗೆ, ಗೆಲುವಿನ ಒಲವಿಗೆ ಮನಸ್ಸು ಕಾತರಿಸುತ್ತಿರುತ್ತದೆ ಎಂದಾಯಿತೇ? ಖಂಡಿತವಾಗಿ ಇದು ಪ್ರೇಮ ರೋಗವೇ. ಈ ರೋಗಕ್ಕೆ ಮದ್ದಿಲ್ಲ, ಪ್ರೀತಿಯ ಸಿಂಚನದ ಹೊರತಾಗಿ!

ಒಂದು ಸಲ ಈ ಪ್ರೇಮಜ್ವರದಲ್ಲಿ ಸಿಲುಕಿದವರ ಜೀವನವೇ ಬದಲಾಗುತ್ತದೆ, ಚರ್ಯೆ ಬದಲಾಗುತ್ತದೆ, ನಡೆ-ನುಡಿಗಳಲ್ಲಿ ಬದಲಾವಣೆ ಕಾಣಿಸುತ್ತದೆ, ಹೇಗಿದ್ದ ಹೇಗಾದ ಗೊತ್ತಾ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡು ಕೇಳುವಷ್ಟರ ಮಟ್ಟಿಗೆ ಪರಿವರ್ತನೆ ಮೂಡಿಸಬಲ್ಲ ಶಕ್ತಿ ಈ ಪ್ರೇಮದ್ದು. ಇದುವರೆಗೆ ಯಾವುದನ್ನು ಜೀವನದಲ್ಲೇ ಮಾಡಿಲ್ಲವೋ, ಅದನ್ನು ಮಾಡಿಸುವ ಮಾಂತ್ರಿಕ ಶಕ್ತಿ ಇಲ್ಲಿದೆ. ನಿಮಗೇನಿಷ್ಟವೇ ಇಲ್ಲವೋ, ಅದು ಇಷ್ಟವಾಗತೊಡಗುತ್ತದೆ, ಯಾವುದು ಅತ್ಯಂತ ಇಷ್ಟವಾಗಿರುತ್ತದೋ, ಪ್ರೀತಿಯಿಂದಾಗಿ ಅದು ಅನ್ಇಷ್ಟವೂ ಆಗಬಹುದು! ಅಂತಹಾ ತಾಕತ್ತು ಇರುವ, ಇಂಥ ಬದಲಾವಣೆಯ ಮಹಾನ್ ಹರಿಕಾರ ಎಂದನ್ನಿಸುವ ಪ್ರೇಮದ ಬಗ್ಗೆ ಬಣ್ಣಿಸಿ ಬಣ್ಣಿಸಿ, ಕವಿಗಳು, ಸಾಹಿತಿಗಳು ಸೋತಿದ್ದರೂ, “ಇಲ್ಲ, ಇಲ್ಲ ನಾವಿನ್ನೂ ಸೋತಿಲ್ಲ” ಎನ್ನುತ್ತಾ ಹೊಸ ಹೊಸ ಪ್ರೇಮರಾಗಗಳು ಒಡಮೂಡುತ್ತಲೇ ಇರುತ್ತವೆ. ನಿತ್ಯ ನಿರಂತರ ಸಂಶೋಧನೆಯ ವಸ್ತುವಾಗಿಬಿಟ್ಟಿದೆ ಪ್ರೇಮ. ಅನ್ಯತ್ರ ಅಲಭ್ಯವಾದ ಪ್ರೇರಣೆಯೂ ಆಗಿದೆ ಕವಿಗಳಿಗೆ, ರಸಿಕರಿಗೆ.

ತೀರಾ ಇತ್ತೀಚಿನವರೆಗೂ ಲವ್ ಎಂದರೆ ಮೂಗು ಮುರಿಯುತ್ತಿದ್ದ ಕಾಲವಿತ್ತು. ಆದರೀಗ ಕಾಲ ಬದಲಾಗಿದೆ. ಐ ಲವ್ ಯು ಹೇಳಲು ಯಾವುದೇ ಅಡ್ಡಿ ಇಲ್ಲ. ಪ್ರೇಮ ರೋಗಕ್ಕೆ ತುತ್ತಾದವರಿಂದಾಗಿ ಕಾಲೇಜಿನ ಮೂಲೆ ಮೂಲೆಗಳು, ಸಮೀಪದ ಬಸ್ ನಿಲ್ದಾಣಗಳು ಅಮೂಲ್ಯ ಸಾಹಿತ್ಯಗಳಿಂದ ಬೆಳಗುತ್ತಿರುತ್ತವೆ. ಹೆಚ್ಚೇಕೆ ನೋಟ್ಸ್ ಪುಸ್ತಕದ ಅದ್ಯಾವುದೋ ಮೂಲೆಯಲ್ಲಿ ಪ್ರೇಮ ಕವನವೊಂದು ಬೆಚ್ಚನೆ ಮನೆ ಮಾಡಿರುತ್ತದೆ. ಅಥವಾ ಶೈಶವಾವಸ್ಥೆಯಲ್ಲಿರುತ್ತದೆ! ಅಥವಾ ಇಲ್ಲೇ ನೋಡಿ, ಮೊನ್ನೆ ಮೊನ್ನೆ ಪ್ರೇಮಿಗಳ ದಿನಕ್ಕಾಗಿ ನೀವು ಬರೆಯಿರಿ ಎಂದು ಆಹ್ವಾನದ ನೀಡಿದ್ದಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿಯೂ ಹಲವರು ಒಂದೆರಡು ಸಾಲುಗಳಲ್ಲೇ ಪ್ರೇಮವನ್ನೂ, ಮತ್ತೆ ಕೆಲವರು ಪ್ರೇಮ ವೈಫಲ್ಯದ ಅನುಭವವನ್ನೂ ತೋಡಿಕೊಂಡಿದ್ದಾರೆ.

ಪ್ರೇಮದ ನೆನಪು ಎಷ್ಟು ಶಾಶ್ವತವೋ, ಅದು ತರುವ ವಿರಹವು ಕೂಡ ಅಷ್ಟೇ ಶಾಶ್ವತ ಎಂಬುದು ಬಹುಶಃ ಎಲ್ಲರಿಗೂ ಗೊತ್ತಿರುವ ಸಂಗತಿ. ಪ್ರೀತಿಯ ಸಂಗಾತಿಯೊಂದಿಗೆ ಕಳೆದ ಮಧುರ ಸ್ಮೃತಿಗಳನ್ನು ಆಗಾಗ್ಗೆ ಮೆಲುಕು ಹಾಕುತ್ತಲೇ ಜೀವನಪ್ರೀತಿಯಲ್ಲಿ ಮಿಂದೇಳುವವರೆಷ್ಟಿಲ್ಲ? ಅದಕ್ಕೇ ಅಲ್ಲವೇ ಜಯಂತ್ ಕಾಯ್ಕಿಣಿ ಅವರು ಇದನ್ನು ‘ಮಧುರ ಯಾತನೆ’ ಅಂತ ಕರೆದಿದ್ದು?

ಮನದ ಮೂಲೆಯಲ್ಲಿ ಬೆಚ್ಚನೆ ಕುಳಿತು, ಮೈಮನವನ್ನು ಬೆಳಗಿಸುವ, ಬೇಕೆಂದಾಗ ಪಕ್ಕನೇ ಚೇತನ ನೀಡಬಲ್ಲ ಶಕ್ತಿ ಇರುವುದು ಈ ಪ್ರೀತಿಗೆ, ಅದರ ರೀತಿಗೆ ಮತ್ತು ನೀತಿಗೆ. ಪ್ರೀತಿ-ಪ್ರೇಮ ಏಕಮುಖವಾದಲ್ಲಿ ಸಾಫಲ್ಯ ಕಡಿಮೆ. ಪ್ರೀತಿ ಎಂಬುದು ಕೊಟ್ಟು ತೆಗೆದುಕೊಳ್ಳುವ ಚೈತನ್ಯಶಕ್ತಿ. ಹಾಗಂತ, ಪ್ರೇಮ ಶಾಶ್ವತವೇ? ಪ್ರೀತಿ ಶಾಶ್ವತವಾದರೂ ಅದು ಬೆಸುಗೆ ಆಗಿಬಿಟ್ಟಿರುವ ಸಂಬಂಧವೊಂದು, ಜನುಮ-ಜನುಮದ ಅನುಬಂಧವೊಂದು ನಶ್ವರವಾಗುವುದು ಹೇಗೆ? ಪ್ರೇಮದ ಮಧ್ಯೆ ಸ್ವಾರ್ಥ ಅಡ್ಡ ಬಂದಾಗ!

ಎಲ್ಲಿ ಸ್ವಾರ್ಥವಿದೆಯೋ, ಅಲ್ಲಿ ಪ್ರೀತಿಗೆ ಜಾಗವಿಲ್ಲ. ನಿಸ್ವಾರ್ಥ ಪ್ರೀತಿ, ನಿಷ್ಕಾಮ ಪ್ರೇಮ ಎಂದಿಗೂ ಸುಮಧುರ, ಸುಕೋಮಲ, ನಿತ್ಯ ನೂತನ. ಪ್ರೀತಿಯು ಎಂತಹ ಅನುಭೂತಿಯೆಂದರೆ, ಅದನ್ನು ಪದಗಳಲ್ಲಿ ಹಿಡಿದಿಡುವುದು ಸಾಧ್ಯವಿಲ್ಲ. ಪ್ರೀತಿಸೋದಕ್ಕೆ, ಆದರೆ, ಪ್ರೀತಿ ವ್ಯಕ್ತಪಡಿಸಲು ಯಾರ ಅಡ್ಡಿ ಆತಂಕವೂ ಬೇಕಾಗಿಲ್ಲ. ಅಥವಾ ಐ ಲವ್ ಯು ಎಂದೆನ್ನಲು ಯಾರಿಗೂ ಕೂಡ ಪ್ರೇಮಿಗಳ ದಿನವೇ ಬೇಕಾಗಿಲ್ಲ ಎಂಬುದು ಇಲ್ಲಿ ಸುಸ್ಪಷ್ಟ. ವ್ಯಾಲೆಂಟೈನ್ಸ್ ಡೇ ಎಂಬುದು ವರ್ಷಕ್ಕೆ ಒಂದು ಬಾರಿ ಬರುತ್ತಿದ್ದರೂ, ಪ್ರೇಮಿಗಳಿಗೆ ಪ್ರತಿದಿನವೂ ವ್ಯಾಲೆಂಟೈನ್ಸ್ ದಿನವೇ ಎನ್ನಲಡ್ಡಿಯಿಲ್ಲ. ಅಲ್ಲವೇ? [ವೆಬ್‌ದುನಿಯಾ]

LEAVE A REPLY

Please enter your comment!
Please enter your name here