‘ಕ್ರಿಕೆಟ್ ದೈವ’ ಸಚಿನ್ 200ಡುಲ್ಕರ್!

0
251

ಇದೇನು ರನ್ ಮೆಷಿನ್ನೋ ಅಥವಾ ಕ್ರಿಕೆಟ್ ದೇವತೆಯೋ? ಒಂದರ ಮೇಲೊಂದು ದಾಖಲೆಗಳನ್ನು ಗುಡ್ಡೆ ಹಾಕಿ ಅದರ ತುತ್ತ ತುದಿಯನ್ನೇರಿ ಕುಳಿತುಕೊಳ್ಳುವುದು ಈ ಹುಡುಗನ ಜಾಯಮಾನವೋ… 20 ವರ್ಷಗಳ ಸತತ ಕ್ರಿಕೆಟ್ ತಪಸ್ಸಿನ ಫಲವೋ… ಒಟ್ಟಿನಲ್ಲಿ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಹೃದಯ ಮಂದಿರದಲ್ಲಿ ಈಗಲೂ ದೇವರು, ಬ್ಯಾಟಿಂಗ್ ದೇವತೆ ಎಂದೇ ಆರಾಧಿಸಲ್ಪಡುವ ಮಾಸ್ಟರ್ ಬ್ಲಾಸ್ಟರ್ ಎಂಬ ಈ ರನ್ ಮೆಷಿನ್ ಏಕದಿನ ಕ್ರಿಕೆಟ್ ಚರಿತ್ರೆಯಲ್ಲೇ ದ್ವಿಶತಕ ಸಿಡಿಸಿದ ಮೊದಲ ಮತ್ತು ಏಕೈಕ ಬ್ಯಾಟ್ಸ್‌ಮನ್ ಆಗಿ ಶಿಖರಾಗ್ರದಲ್ಲಿ ಕುಳಿತಿದ್ದಾರೆ!

ಅದು 1997ರ ಮೇ 21ನೇ ತಾರೀಕು. ಚೆನ್ನೈ ಚೆಪಾಕ್‌ನಲ್ಲಿರುವ ಚಿದಂಬರಂ ಕ್ರೀಡಾಂಗಣದಲ್ಲಿ, ಪೆಪ್ಸಿ ಇಂಡಿಪೆಂಡೆನ್ಸ್ ಕಪ್ ಸರಣಿಯಲ್ಲಿ, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ಕಾದಾಡುತ್ತಿತ್ತು. ಭಾರತೀಯ ಕ್ರಿಕೆಟ್ ಪ್ರೇಮಿಯು ಈಗಲೂ ಹಲ್ಲು ಮಸೆಯುತ್ತಿರುವ ಪಾಕಿಸ್ತಾನೀ ಕ್ರಿಕೆಟಿಗ, ಚೆಂಡುಗಳನ್ನು ಹುಚ್ಚಾಪಟ್ಟೆ ಬಾರಿಸಬಲ್ಲ ಸಯೀದ್ ಅನ್ವರ್ ಎಂಬ ದೈತ್ಯ ದಾಂಡಿಗ ಅಂದು ಭಾರತೀಯ ವೆಂಕಟೇಶ್ ಪ್ರಸಾದ್, ಅನಿಲ್ ಕುಂಬ್ಳೆ ಮುಂತಾದವರ ದಾಳಿಗಳನ್ನೆಲ್ಲಾ ಮೈದಾನದ ಮೂಲೆ ಮೂಲೆಗೆ ಅಟ್ಟಿ ಅಟ್ಟಹಾಸ ಮಾಡುತ್ತಿದ್ದ.

194 ರನ್ನುಗಳನ್ನು ಸಿಡಿಸಿದ್ದ ಸಯೀದ್ ಅನ್ವರ್, 1984ರಲ್ಲಿ ವೆಸ್ಟ್ ಇಂಡೀಸಿನ ವಿವಿಯನ್ ರಿಚರ್ಡ್ಸ್ ಸಿಡಿಸಿದ್ದ ದಾಖಲೆಯನ್ನು ಪುಡಿಗಟ್ಟಿದ್ದ. 146 ಎಸೆತಗಳಲ್ಲಿ 22 ಬೌಂಡರಿ ಹಾಗೂ 5 ಸಿಕ್ಸರ್ ಸಿಡಿಸಿದ್ದ ಅನ್ವರ್ ಏಕದಿನ ಪಂದ್ಯದಲ್ಲೇ ಗರಿಷ್ಠ ವೈಯಕ್ತಿಕ ರನ್ ದಾಖಲಿಸಿದ್ದ. ಆದರೆ, ತನ್ನ 9ನೇ ಬೌಲಿಂಗ್ ದಾಳಿಗೆ ಇಳಿದಿದ್ದ ಇದೇ ಸಚಿನ್ ರಮೇಶ್ ತೆಂಡುಲ್ಕರ್ ಎಂಬ ಪಾರ್ಟ್ ಟೈಂ ಬೌಲರ್, ಅನ್ವರ್‌ನ ಇನ್ನಿಂಗ್ಸಿಗೆ ಮಂಗಳ ಹಾಡಿಸಿ, ‘ನೀನು ಮಾಡಿದ್ದು ಸಾಕು, ಒಂದಲ್ಲ ಒಂದು ದಿನ ನಿನ್ನ ದಾಖಲೆ ಮುರಿಯುತ್ತೇನೆ’ ಎಂದು ಶಪಥ ಹೊತ್ತಂತೆಯೋ ಎಂಬಂತೆ ಬೌಲಿಂಗ್ ಮಾಡಿ, ಅನ್ವರ್ ವಿಕೆಟ್ ಉರುಳಿಸಿದ್ದರು. ಅನ್ವರ್ ಸಿಡಿಸಿದ ಚೆಂಡು ಸೌರವ್ ಗಂಗೂಲಿಯ ಭದ್ರ ಮುಷ್ಟಿಗಳೊಳಗೆ ಕುಳಿತಿತ್ತು.

ಆದರೆ ಅದು ಇತಿಹಾಸ. ಅನ್ವರ್ ಆಟಾಟೋಪಕ್ಕೆ ಕಡಿವಾಣ ಹಾಕಿ, ಆ ದಾಖಲೆಯನ್ನು ತಿದ್ದಿ ಮುಂದುವರಿದ ಸಚಿನ್ ಬುಧವಾರ ಗ್ವಾಲಿಯರ್‌ನ ಕ್ಯಾಪ್ಟನ್ ರೂಪ್ ಸಿಂಗ್ ಸ್ಟೇಡಿಯಂನಲ್ಲಿ ಆರಂಭದಿಂದಲೇ ವಿಶ್ವದ ನಂ.2 ಕ್ರಿಕೆಟ್ ಪಡೆಯ ಬೌಲಿಂಗ್ ಕಟ್ಟಾಳುಗಳ ಬೆನ್ನು ಬಿದ್ದಿದ್ದರು. ಈಗಾಗಲೇ ಟೆಸ್ಟ್‌ನಲ್ಲಿ ಅತ್ಯಧಿಕ ರನ್, ಏಕದಿನದಲ್ಲಿ ಅತ್ಯಧಿಕ ರನ್, ಅತ್ಯಧಿಕ ಶತಕ ಮುಂತಾದ ದಾಖಲೆಗಳನ್ನು ಮಾಡಿ, ಕ್ರಿಕೆಟ್ ಶಿಖರದ ತುತ್ತ ತುದಿಗೇರಿದ್ದ ಸಚಿನ್‌ಗೆ ಬಹುಶಃ ಉಳಿದಿರುವುದು ಇದೊಂದೇ ದಾಖಲೆ ಎಂಬಂತೆ ಕಂಡಿತೋ ಏನೋ, ಎಲ್ಲಿಯೂ ಕೂಡ ಎಸೆತಕ್ಕಿಂತ ರನ್ ಕಡಿಮೆಯಾಗದಂತೆ ನೋಡಿಕೊಂಡೇ ಚೆಂಡುಗಳನ್ನು ಮೈದಾನದ ಮೂಲೆ ಮೂಲೆಗೂ ಅಟ್ಟಿದರು.

147 ಎಸೆತಗಳಲ್ಲಿ (ಅನ್ವರ್‌ಗಿಂತ ಕೇವಲ 1 ಎಸೆತ ಹೆಚ್ಚು) 200 ರನ್ ಸ್ಫೋಟಿಸಿದ ಸಚಿನ್, ಇನ್ನಿಂಗ್ಸ್ ಆರಂಭಿಸಿ, ಪೂರ್ತಿ 50 ಓವರುಗಳ ಕಾಲ ಕ್ರೀಸಿನಲ್ಲಿ (226 ನಿಮಿಷ) ಕ್ರೀಲಿನಲ್ಲಿ ಕಚ್ಚಿ ನಿಂತು ಅಜೇಯರಾಗುಳಿದರು. 25 ಬೌಂಡರಿಗಳು, 3 ಭರ್ಜರಿ ಸಿಕ್ಸರ್‌ಗಳು ಅವರ ಬ್ಯಾಟಿನಿಂದ ಹರಿದುಬಂದಿತ್ತು. ರನ್ ಸರಾಸರಿ 136.95 ! ಅನ್ವರ್ ದಾಖಲೆಯನ್ನು ಇತ್ತೀಚೆಗಷ್ಟೇ ಚಾರ್ಲ್ಸ್ ಕೋವೆಂಟ್ರಿ ಎಂಬ ಜಿಂಬಾಬ್ವೆ ವಿಕೆಟ್ ಕೀಪರ್ ಅಜೇಯನಾಗಿಯೇ (156 ಎಸೆತ, 16 ಬೌಂಡರಿ, 7 ಸಿಕ್ಸರ್ ) ಸರಿಗಟ್ಟಿದ್ದ. ಆದರೆ ಇದನ್ನು ಸಾಧಿಸಿದ್ದು ಬಾಂಗ್ಲಾ ದೇಶದ ವಿರುದ್ಧ 2009ರ ಆಗಸ್ಟ್ 16ರಂದು.

46ನೇ ಓವರಿನಲ್ಲಿಯೇ ಸಚಿನ್ ಅವರು 193ರಲ್ಲಿದ್ದಾಗ ಫೈನ್ ಲೆಗ್‌ಗೆ ಚೆಂಡು ಅಟ್ಟಿದಾಗ, ಏಕದಿನದ ಸರ್ವಾಧಿಕ ರನ್ನುಗಳ ದಾಖಲೆಯನ್ನು ಮೆಟ್ಟಿ ನಿಂತಿದ್ದರು. ದಾಖಲೆಯನ್ನು ಮತ್ತೂ ಮುಂದುವರಿಸಿದ ಅವರು, 200ರ ಗಡಿಯಲ್ಲಿಯೂ ನಿಂತರು. ಆದರೆ ಎಂದಿನಂತೆ ಬ್ಯಾಟ್ ಮೇಲೆತ್ತಿ ಎಂದಿನಂತೆ ಆಕಾಶದಲ್ಲಿರುವ ದೇವರಿಗೆ ನಮಸ್ಕರಿಸಲಿಲ್ಲ, ಬಹುಶಃ ಅಭಿಮಾನಿ ದೇವರುಗಳಿಗೆ ಮನಸ್ಸಿನಲ್ಲೇ ಇದನ್ನು ಅರ್ಪಿಸಿದ್ದರೋ ಏನೋ… ಮಾರ್ಕ್ ಬೌಚರ್‌ನ ಹಸ್ತ ಲಾಘವಕ್ಕೆ ಸ್ಪಂದಿಸಿ, ಏನೂ ಆಗಿಲ್ಲವೋ ಎಂಬಂತೆ ಮುಂದುವರಿದರು. ಕೈಯಲ್ಲಿ ಬ್ಯಾಟು ಇರುವಾಗ ಯಾವುದೇ ಭಾವನಾತ್ಮಕತೆಗೆ ಅವಕಾಶ ನೀಡಿದ್ದಿಲ್ಲ ಸಚಿನ್. ಬಹುಶಃ ಈ ಸೆಲೆಬ್ರೇಶನ್ ಅನ್ನು ಅವರು 200ಕ್ಕೆ ಮೀಸಲಿಟ್ಟಿದ್ದರು. ಚಾರ್ಲ್ ಲಾಂಗಿವೆಲ್ಟ್ ಅವರು ಎಸೆದ ಇನ್ನಿಂಗ್ಸ್‌ನ ಕೊನೆಯ ಓವರಿನ ಐದನೇ ಎಸೆತದಲ್ಲಿ 1 ರನ್ ಮಾಡಿದ ಸಚಿನ್ 200ರ ರನ್ ಪರ್ವತದಲ್ಲಿ ಅಜೇಯರಾಗಿ ಕುಳಿತುಬಿಟ್ಟರು!

ಆದರೆ ನಮ್ಮ ‘ಕ್ರಿಕೆಟ್ ಗಾಡ್’ ಸಚಿನ್ ಸಾಧಿಸಿದ್ದು, ಅಂತಿಂಥ ತಂಡಗಳ ವಿರುದ್ಧವೇ? ಅಲ್ಲ, ಟೆಸ್ಟ್ ಮತ್ತು ಏಕದಿನಗಳೆರಡರಲ್ಲೂ ಪಾರಮ್ಯ ಸಾಧಿಸಿ, ನಂ.1 ಪಟ್ಟಕ್ಕೆ ಏರಿದ್ದ ಮತ್ತು ಆಗಾಗ್ಗೆ ಆ ಪಟ್ಟಕ್ಕೆ ಏರುತ್ತಲೇ ಇರುವ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಎಂಬುದು ಯಾರೂ ಮರೆಯಲಾಗದ, ನಿರಾಕರಿಸಲಾಗದ ಹೆಮ್ಮೆಯೂ ಹೌದು. ಬಹುಶಃ ದಕ್ಷಿಣ ಆಫ್ರಿಕಾಕ್ಕೆ ಇದು ಅತ್ಯಂತ ಕ್ರೂರ ಎನಿಸಬಹುದಾದ ‘ದೌರ್ಜನ್ಯ’ವೂ ಹೌದು. ಆ ರೀತಿಯಿತ್ತು ಸಚಿನ್ ಯದ್ವಾತದ್ವಾ ಬೀಸುಗೆ. ಇದೇ ದಕ್ಷಿಣ ಆಫ್ರಿಕಾ ತಂಡವು ಆಸ್ಟ್ರೇಲಿಯಾ ಒಡ್ಡಿದ್ದ ವಿಶ್ವದಾಖಲೆಯ 434 ರನ್ನುಗಳನ್ನು ಚೇಸ್ ಮಾಡಿ ಮತ್ತೊಂದು ವಿಶ್ವದಾಖಲೆ ಸೃಷ್ಟಿಸಿತ್ತು ಎಂಬುದನ್ನು ಮರೆಯಲಾದೀತೇ? ಹೀಗಾಗಿ ಸಚಿನ್ ಸಾಧನೆ ಖಂಡಿತಾ ವಜ್ರದಷ್ಟು ಶುಭ್ರ, ಸ್ವಚ್ಛ.

ಸಚಿನ್ ಇಂದಿನ ಆಟ ನೋಡಿದವರಿಗೆ ಆತನ ಕಸುವಿನಲ್ಲಿ ಎಂತಹ ದೈತ್ಯ ಶಕ್ತಿ ಅಡಗಿದೆ ಎಂಬುದು ಮನದಟ್ಟಾಗುತ್ತಿತ್ತು ಮತ್ತು ಯಾವುದೇ ಹಂತದಲ್ಲಿ ಕೂಡ ‘ಈತ ದಾಖಲೆಗಾಗಿಯೇ ಆಡುತ್ತಾನೆ’ ಎಂದು ಟೀಕಾಕಾರರು ಕುಹಕವಾಡುವ ಸಂದರ್ಭಕ್ಕೆ ಅವಕಾಶವೇ ಇರಲಿಲ್ಲ. ಅದೊಂದು ಪರ್ಫೆಕ್ಟ್ ಕ್ವಾಲಿಟಿ ಇನ್ನಿಂಗ್ಸ್. ಇದಿರಿಲ್ಲ, ಕೊರತೆ ಹುಡುಕುವ ಹಾಗಿರಲಿಲ್ಲ! ಅವರು ಆಯ್ದುಕೊಂಡಿದ್ದ ಹೊಡೆತಗಳಂತೂ ಮನಮೋಹಕ. ಮುಖದಲ್ಲಿ ಎಂದಿಗೂ ಆತಂಕವೋ ಒತ್ತಡವೋ ಇರಲಿಲ್ಲ. ಸ್ಥಿತಪ್ರಜ್ಞೆ ಮನೆಮಾಡಿತ್ತು. ಟೀಕಾಕಾರರನ್ನೆಲ್ಲಾ ಸಚಿನ್ ಅವರು ಬಾಯಿ ಮುಚ್ಚಿಸಿದ್ದು ತಮ್ಮ ಇದೇ ಸ್ಥಿತಪ್ರಜ್ಞ ಭಾವದಿಂದಲೇ ಅಲ್ಲವೇ?

ದಿನೇಶ್ ಕಾರ್ತಿಕ್ ಮತ್ತು ನಾಯಕ ಧೋನಿಯೊಂದಿಗೆ ಶತಕದ ಜತೆಯಾಟಗಳನ್ನು ಕಟ್ಟಿದ ಸಚಿನ್ ಇನ್ನಿಂಗ್ಸ್ ಪೂರ್ತಿ ಕ್ರೀಸಿನಲ್ಲಿ ನಿಂತು ಅದನ್ನು ಸಾರ್ಥಕಪಡಿಸಿಕೊಂಡರು. ಭಾರತವು 401 ರನ್ನುಗಳ ಬೆಟ್ಟ ಪೇರಿಸಿತು.

ತಮ್ಮ ಜೋಳಿಗೆಯೊಳಗೆ 93 ಶತಕಗಳ (ಟೆಸ್ಟ್‌ನಲ್ಲಿ 47 ಹಾಗೂ ಏಕದಿನದಲ್ಲಿ 46ನೇ ಶತಕ, 1ನೇ ದ್ವಿಶತಕ) ಮೂಟೆಯನ್ನು, ಸರ್ವಾಧಿಕ ರನ್ನುಗಳ ಪೊಟ್ಟಣಗಳನ್ನೂ (ಟೆಸ್ಟ್‌ನಲ್ಲಿ 13,447 ಹಾಗೂ ಏಕದಿನದಲ್ಲಿ 17,598) ಕಟ್ಟಿಕೊಂಡಿರುವ ಈ ಮಾಸ್ಟರ್ ಬ್ಲಾಸ್ಟರ್, ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದ ಇಪ್ಪತ್ತು ವರ್ಷಗಳ ಬಳಿಕ ಸಚಿನ್ ಈ 200ನೇ ಮೈಲಿಗಲ್ಲಿನ ಮೇಲೆ ಕುಳಿತಿದ್ದಾರೆ. ಹಾಗಿದ್ದರೆ, ಸಚಿನ್ ಅವರ ವಯಸ್ಸು ಹೆಚ್ಚಾಗುತ್ತಿರುವಂತೆಯೇ ಅವರೊಳಗಿನ ಕ್ರಿಕೆಟ್ ದೈತ್ಯನ ಉತ್ಸಾಹ ಇಮ್ಮಡಿಸುತ್ತಿದೆಯೇ? ಹಾಗೆಯೇ ಆಗಲಿ ಎಂಬುದು ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಹಾರೈಕೆ.
[ವೆಬ್‌ದುನಿಯಾದಲ್ಲಿ ಪ್ರಕಟಿತ]

LEAVE A REPLY

Please enter your comment!
Please enter your name here