ಶ್ರಾವಣದ ಮಳೆಯಂತೆ ತಂಪು ನಿನ್ನದೆ ನೆನಪು

4
447

ನನ್ನ ನೆಚ್ಚಿನ ವಿಜಯ ಕರ್ನಾಟಕ ಪತ್ರಿಕೆ ತನ್ನ ಪುಟ ಪುಟದ ಕಣ ಕಣದಲ್ಲೂ ಹೊಸತನ ತುಂಬಿ ಕೊಡುತ್ತದೆ.

ಅದರ ಸಾಪ್ತಾಹಿಕ ವಿಜಯದ ತಳಭಾಗದಲ್ಲಿ ಪ್ರಕಟವಾಗುವ ಕೆಲವೊಂದು ನವಿರಾದ ಸಾಲುಗಳು, ಚಿಂತನೆಗೆ ಹೊಸ ಹಾದಿ ತೋರಿಸುವ ಹಿರಿಯ ಕವಿಗಳ ಭಾವನೆಗಳು ಅದೆಷ್ಟು ಸೊಗಸಾಗಿರುತ್ತವೆ.

ಒಂದಿಡೀ ಕವನ ಓದುವಷ್ಟು ತಾಳ್ಮೆ ಇಲ್ಲದ ನನ್ನನ್ನು ಈ ಕವನದ ಸಾಲುಗಳು ಛಕ್ಕನೆ ಸೆಳೆದವು. ಆ ತುಣುಕುಗಳು ಗಮನ ಸೆಳೆದಿದ್ದರಿಂದ ಅದನ್ನೇ ಎತ್ತಿ ಇಲ್ಲಿ ತುರುಕಿಸುತ್ತಿದ್ದೇನೆ. ಇವೆಲ್ಲವೂ ಕೆ.ಎಸ್.ನರಸಿಂಹಸ್ವಾಮಿಯವರ ಸಾಲುಗಳು.

ನೀನು ಬಯಸಿದ ಹೂವು ಇಲ್ಲಿ ಸಿಕ್ಕುವುದಿಲ್ಲ
ಸಿಕ್ಕ ಹೂವನೆ ಮುಡಿದು ಜೊತೆಗೆ ಬಾರಾ
ನಿನಗಾಗಿ ನಾನು ಕಾಯುತ್ತ ನಿಲ್ಲುವುದಿಲ್ಲ
ಅರ್ಥವಾಗದು ನಿನಗೆ ಹೃದಯ ಭಾರ !
——-*********———-
ಧೂಳೆದ್ದ ಬೀದಿಯಲಿ ನಿನ್ನ ನೆನಪಾಗುತಿದೆ
ಬಿಳಿಮುಗಿಲು ಸರಿದಂತೆ ನಿನ್ನ ನೆನಪು
ಶ್ರಾವಣದ ಮಳೆಯಂತೆ ತಂಪು ನಿನ್ನದೆ ನೆನಪು
ನಾನು ಬೀದಿಗೆ ಬಂದೆ ನಿನ್ನ ನೆನೆದು!
——-*********———-
ನಗುವಿಗೂ ಅಳುವಿಗೂ ನಡುವೆ ನಿಂತಿಹೆ ನೀನು
ನಾನದನು ಒಲವೆಂದು ಕರೆಯಲಾರೆ
ಹಗಲಿಗೂ ಇರುಳಿಗೂ ನಡುವೆ ಬಂದಿದೆ ಸಂಜೆ
ನಾನದರ ಚೆಲುವನ್ನು ಮರೆಯಲಾರೆ!
——-*********———-
ಅನುಭವವೆ ನೆನಪಾಗಿ ಹೆಪ್ಪುಗಟ್ಟುವ ತನಕ
ನೀನು ಕವಿತೆಗೆ ಕೈಯ ಹಾಕಬೇಡ
ಮಳೆಯಿರದ ಮೋಡಗಳ ಚೆಲುವ ವರ್ಣಿಸಬೇಡ
ಇಲ್ಲದುದ ಇಹುದೆಂದು ಹಾಡಬೇಡ !

(ಇದು ನಮ್ಮಂಥವರಿಗೆ ಹೇಳಿದ್ದಿರಬಹುದೇ? 🙂 )

ಎಷ್ಟೊಂದು ಆಪ್ಯಾಯಮಾನ ಸಾಲುಗಳು! ಚೆನ್ನಾಗಿಲ್ಲವೇ…. ನೀವೇ ಹೇಳಿ.
Thanks To Vijaya Karnataka!

4 COMMENTS

  1. ಈ ಸಾಲುಗಳು ಬಹಳ ಸೊಗಸಾಗಿವೆ. ನಮ್ಮಂಥಹವರಿಗೇ ಹೇಳಿದ್ದು. ನಾನು ನನ್ನ ದೇವನಿಗೆ ಹೇಳಿದ್ದು. ನೀವು ನಿಮ್ಮ ಆಪ್ಯಾಯರಿಗೆ ಹೇಳ್ತಿರೋದು. ಅವರು ಅವರೊಂದಿಗರಿಗೆ ಹೇಳುತ್ತಿರುವುದು. ಎಂದಿಗೂ ಎಲ್ಲರಿಗೂ ನಿತ್ಯನೂತನ ಚಿರ ಸತ್ಯ.

    ವಾಹ್ – ಎಲ್ಲಿ ಕೊಂಡದ್ದು ಸಾರ್ (ರಿನ್) ಎಂದು ನಾನು ಕೇಳುವಂತಿಲ್ಲ, ನೀವಾಗ್ಲೇ ಹೇಳಿಬಿಟ್ಟಿದ್ದೀರಿ.

  2. ಶ್ರೀನಿವಾಸ್,
    ನಿಮಗೆ ಇಷ್ಟವಾಯಿತಲ್ಲಾ….ಅದುವೇ ನಮಗೆ ಸಂತೋಷ….
    ಯಾರಿಗೂ ಕೂಡ ನರಸಿಂಹಸ್ವಾಮಿ ಕವನಗಳು ಇಷ್ಟವಾಗದಿರಲು ಸಾಧ್ಯವೇ ಇಲ್ಲ. ಅಲ್ವೇ?

  3. ನೆನಪು ಶ್ರಾವಣದ ಮಳೆಯಂತೆ ತಂಪು ನಿಜ.. ಆದ್ರೆ ನೀವ್ಯಾಕೆ ಅವಿ ಬೆಂಗಳೂರ ಮಳೆಯಂತೆ ಅದೃಶ್ಯರಾಗಿ ಹೋದಿರಿ ?

LEAVE A REPLY

Please enter your comment!
Please enter your name here