ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ -80, ಜೂನ್ 02, 2014
ಸ್ಮಾರ್ಟ್‌ಫೋನ್ ಬಳಸುವವರು ಹೆಚ್ಚಾಗಿ ದೂರುವ ಸಂಗತಿಯೆಂದರೆ ಬ್ಯಾಟರಿ ಚಾರ್ಜ್ ನಿಲ್ಲುವುದಿಲ್ಲ ಅಂತ. ಸಾಮಾನ್ಯ ಫೀಚರ್ ಫೋನ್‌ಗಳಲ್ಲಾದರೆ ಎರಡು – ಮೂರು ದಿನಕ್ಕೊಮ್ಮೆ, ತೀರಾ ಕಡಿಮೆ ಮಾತನಾಡುವವರಾದರೆ ನಾಲ್ಕೈದು ದಿನಕ್ಕೊಮ್ಮೆ ಬ್ಯಾಟರಿ ಚಾರ್ಜ್ ಮಾಡಿದರೆ ಸಾಕಾಗುತ್ತದೆ. ಫೀಚರ್ ಫೋನ್‌ಗಳಲ್ಲಿ ಎಫ್ಎಂ, ಹಾಡುಗಳು, ವೀಡಿಯೋ ಮತ್ತು ಕರೆಗಳು ಹೊರತುಪಡಿಸಿ, ಇನ್ಯಾವುದೇ ವಿಶೇಷ ಸೌಕರ್ಯಗಳ ಬಳಕೆ ಕಡಿಮೆಯಿರುವುದು ಇದಕ್ಕೆ ಕಾರಣ.
ಆದರೆ ಸ್ಮಾರ್ಟ್‌ಫೋನ್‌ಗಳಲ್ಲಿ ಹಾಗಲ್ಲ. ಬಹುತೇಕ ದಿನಕ್ಕೊಮ್ಮೆ ಚಾರ್ಜ್ ಮಾಡಬೇಕಾಗುತ್ತದೆ. ಜಾಸ್ತಿ ಬಳಸಿದರೆ ಕೆಲವೇ ಗಂಟೆಗಳಲ್ಲಿ ಬ್ಯಾಟರಿ ಡೌನ್ ಆಗಿರುತ್ತದೆ. ಇದಕ್ಕಾಗಿ, ಬ್ಯಾಟರಿ ಉಳಿತಾಯ ಮಾಡಿ, ಸ್ವಲ್ಪ ಹೆಚ್ಚು ಕಾಲ ಚಾರ್ಜ್ ಉಳಿಯುವಂತೆ ಮಾಡುವ ವಿಧಾನಗಳು ಇಲ್ಲಿವೆ.
ಸ್ಮಾರ್ಟ್‌ಫೋನ್ ಎಂದರೆ ಇಂಟರ್ನೆಟ್ (ಮೊಬೈಲ್ ಡೇಟ) ಬೇಕೇಬೇಕು. ಇಂಟರ್ನೆಟ್ ಬಳಕೆಗೆ ಹೆಚ್ಚು ಬ್ಯಾಟರಿ ಬೇಕಾಗುತ್ತದೆ; ವಿಶೇಷವಾಗಿ 2ಜಿಗಿಂತಲೂ 3ಜಿ ಇಂಟರ್ನೆಟ್ ಸಂಪರ್ಕ ಬಳಸಿದರೆ ಅದು ಹೆಚ್ಚು ಬ್ಯಾಟರಿ ಹೀರಿಕೊಳ್ಳುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡರೆ, ಬೇಕಾದಾಗ ಮಾತ್ರ ಇಂಟರ್ನೆಟ್ ಆನ್ ಮಾಡಿಕೊಳ್ಳುವುದು ಸೂಕ್ತ. ಇದಕ್ಕಾಗಿ ನೋಟಿಫಿಕೇಶನ್ ಪ್ರದೇಶದಲ್ಲಿ ಡೇಟ ಆನ್/ಆಫ್ ಮಾಡುವ ಶಾರ್ಟ್‌ಕಟ್ ಬಟನ್ ಬಳಸಬಹುದು. ಅದರ ಹೊರತಾಗಿ, ಮೊಬೈಲ್ ಇಂಟರ್ನೆಟ್ ಬದಲು, ಲಭ್ಯವಿರುವಲ್ಲೆಲ್ಲಾ ವೈ-ಫೈ ಸಂಪರ್ಕವನ್ನು ಬಳಸಿಕೊಳ್ಳಿ. ಯಾಕೆಂದರೆ, ವೈ-ಫೈಗೆ ಮೊಬೈಲ್ ಇಂಟರ್ನೆಟ್‌ನಷ್ಟು ಬ್ಯಾಟರಿ ಬೇಕಾಗುವುದಿಲ್ಲ.
ಇನ್ನು, ಗೇಮ್ಸ್, ಮ್ಯಾಪ್, ವೆಬ್ ಸರ್ಫಿಂಗ್ ಜತೆಗೆ ಕರೆಗಳು, ಸಂದೇಶಗಳನ್ನು ಕಳುಹಿಸಲು ಕೂಡ ಸಾಕಷ್ಟು ಬ್ಯಾಟರಿ ಬಳಕೆಯಾಗುತ್ತದೆ. ಸಾಕಷ್ಟು ಆ್ಯಪ್‌ಗಳನ್ನು (ಅಪ್ಲಿಕೇಶನ್) ಅಳವಡಿಸಿಕೊಂಡಿರುತ್ತೀರಿ. ಅವುಗಳು ಕೂಡ ಬ್ಯಾಕ್‌ಗ್ರೌಂಡ್‌ನಲ್ಲಿ ಚಲಾವಣೆಯಾಗುತ್ತಾ, ಬ್ಯಾಟರಿಯನ್ನು ಹೀರಿಕೊಳ್ಳುತ್ತವೆ. ಹೆಚ್ಚಿನ ಸ್ಮಾರ್ಟ್‌ಫೋನ್‌ಗಳಲ್ಲಿರುವ ಹೋಂ ಬಟನ್ ಅನ್ನು ಎರಡು ಬಾರಿ ಕ್ಲಿಕ್ ಮಾಡಿದಾಗ, ಇತ್ತೀಚೆಗೆ ಬಳಕೆಯಾಗಿರುವ ಅಪ್ಲಿಕೇಶನ್‌ಗಳು ಕಾಣಿಸಿಕೊಳ್ಳುತ್ತವೆ. ಅವುಗಳನ್ನೆಲ್ಲಾ ಬೆರಳಿನಿಂದ ಸ್ಪರ್ಶಿಸಿ, ಸ್ವೈಪ್ (ಬಲದಿಂದ ಎಡಕ್ಕೆ ಅಥವಾ ಎಡದಿಂದ ಬಲಕ್ಕೆ) ಮಾಡಿದರೆ, ಅವುಗಳು ಹಿನ್ನೆಲೆಯಲ್ಲಿ ಚಾಲನೆಯಲ್ಲಿರುವುದನ್ನು ನಿಲ್ಲಿಸಬಹುದು.
ಮತ್ತೊಂದು ಬ್ಯಾಟರಿ ಉಳಿತಾಯ ವಿಧಾನವೆಂದರೆ, ಸ್ಕ್ರೀನ್‌ನ ಬ್ರೈಟ್‌ನೆಸ್ ಕಡಿಮೆ ಮಾಡುವುದು. ಹೊರಗೆ ಬಿಸಿಲಿನಲ್ಲಿರುವಾಗ ಮಾತ್ರ ಸ್ಕ್ರೀನ್ ಬ್ರೈಟ್‌ನೆಸ್ ಹೆಚ್ಚಿಸಿಕೊಳ್ಳಿ. ಅದನ್ನು ಬದಲಾಯಿಸಿಕೊಳ್ಳಲು ಕೂಡ ನಿಮ್ಮ ಫೋನ್‌ನಲ್ಲಿಯೇ ಇರುವ ವಿಡ್ಗೆಟ್ (ಬಟನ್‌ಗಳು) ಬಳಸಿ. ಸ್ಕ್ರೀನ್ ಬ್ರೈಟ್‌ನೆಸ್ ಅನ್ನು ಆಟೋಮ್ಯಾಟಿಕ್‌ಗೆ ಹೊಂದಿಸಬಹುದು ಅಥವಾ ಅದಕ್ಕೂ ಕಡಿಮೆ ಮಾಡಿಕೊಳ್ಳಬಹುದು. ಅಂತೆಯೇ, ಫೋನ್ ಕೆಲಸ ಆದ ತಕ್ಷಣ ಅದರ ಸ್ಕ್ರೀನ್ ಡಿಸ್‌ಪ್ಲೇ ಆಫ್ ಮಾಡಿ ಅಥವಾ ಸ್ಕ್ರೀನ್ ಡಿಸ್‌ಪ್ಲೇ ಸಮಯವನ್ನು 1 ನಿಮಿಷ ಇಲ್ಲವೇ 30 ಸೆಕೆಂಡುಗಳಿಗೆ ಹೊಂದಿಸಿಟ್ಟರೆ, ಸಾಕಷ್ಟು ಬ್ಯಾಟರಿ ಉಳಿತಾಯವಾಗುತ್ತದೆ.
ಸೆಲ್ಯುಲಾರ್ ಸಿಗ್ನಲ್ ಕ್ಷೀಣವಾಗಿದ್ದರೆ ಕೂಡ ಬ್ಯಾಟರಿ ಚಾರ್ಜ್ ಸಾಕಷ್ಟು ಖರ್ಚಾಗುತ್ತದೆ, ಯಾಕೆಂದರೆ ಸೆಲ್ ಫೋನು ನೆಟ್‌ವರ್ಕ್ ಸಿಗ್ನಲ್‌ಗಾಗಿ ಸರ್ಚ್ ಮಾಡುತ್ತಾ ಇರುತ್ತದೆ. ಇದನ್ನು ತಡೆಯಬೇಕಿದ್ದರೆ, ವಾಹನದಲ್ಲಿ ದೂರದೂರಿಗೆ ಪ್ರಯಾಣ ಮಾಡುತ್ತಿರುವಾಗ ಹಾಗೂ ಸಿಗ್ನಲ್ ಸಾಮರ್ಥ್ಯ ಕಡಿಮೆ ಇರುವಲ್ಲಿ ಅಗತ್ಯವಿದ್ದ ಹೊರತಾಗಿ, ಫೋನನ್ನು ಏರೋಪ್ಲೇನ್/ಫ್ಲೈಟ್ ಮೋಡ್‌ನಲ್ಲಿ ಇರಿಸಿ. ಈ ಮೋಡ್‌ನಲ್ಲಿ ನೆಟ್‌ವರ್ಕ್ ಸಿಗ್ನಲ್ ಆಫ್ ಆಗುವುದರಿಂದ ಕರೆಗಳಾಗಲೀ, ಸಂದೇಶವಾಗಲೀ ಬರುವುದಿಲ್ಲ ಎಂಬುದು ನೆನಪಿರಲಿ.
ಮ್ಯಾಪ್ ಹಾಗೂ ನ್ಯಾವಿಗೇಶನ್‌ಗೆ ಬಳಕೆಯಾಗುವ ಜಿಪಿಎಸ್ (ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ – ಅಂದರೆ ನೀವಿರುವ ಸ್ಥಳವನ್ನು ಉಪಗ್ರಹ ಮೂಲಕ ಗುರುತಿಸುವ ವ್ಯವಸ್ಥೆ) ಅಗತ್ಯವಿಲ್ಲದಿದ್ದರೆ ಆಫ್ ಮಾಡಿ. ಅಂತೆಯೇ ಬ್ಲೂಟೂತ್ ಮತ್ತು ವೈ-ಫೈಗಳನ್ನು ಅಗತ್ಯವಿದ್ದರೆ ಮಾತ್ರವೇ ಆನ್ ಮಾಡಿ.
ಸಾಕಷ್ಟು ವೈರ್‌ಲೆಸ್ ಡೇಟ ಬಳಸುವಂತಹಾ, ಉದಾಹರಣೆಗೆ ಆನ್‌ಲೈನ್ ವೀಡಿಯೋ, ಗೇಮ್ಸ್ ಅಥವಾ ಸಂಗೀತ, ಮ್ಯಾಪ್/ನ್ಯಾವಿಗೇಶನ್ ಮುಂತಾದವು ಡೇಟ ಸ್ವೀಕರಿಸಲು ಮತ್ತು ಕಳುಹಿಸಲು ಸಾಕಷ್ಟು ಬ್ಯಾಟರಿ ಉಪಯೋಗಿಸಿಕೊಳ್ಳುತ್ತವೆ. ಆಗಾಗ್ಗೆ ಅಪ್‌ಡೇಟ್ ಆಗುವ ಫೇಸ್‌ಬುಕ್, ಟ್ವಿಟರ್, ಇಮೇಲ್, ಸಂದೇಶ ಸೇವೆ ಮುಂತಾದ ಅಪ್ಲಿಕೇಶನ್‌ಗಳು ಬ್ಯಾಟರಿ ಚಾರ್ಜ್ ಕಬಳಿಸುತ್ತವೆ. ಮತ್ತೊಂದು ಗಮನಿಸಬೇಕಾದ ಅಂಶವೆಂದರೆ, ಲೈವ್ ವಾಲ್‌ಪೇಪರ್‌ಗಳನ್ನು (ಅಂದರೆ ಸ್ಕ್ರೀನ್‌ನಲ್ಲಿ ಚಲಿಸುವಂತೆ ಕಂಡುಬರುವ ಚಿತ್ರಗಳು) ಸಕ್ರಿಯಗೊಳಿಸಿದರೆ ಬ್ಯಾಟರಿ ಬೇಗನೇ ಖಾಲಿಯಾಗುವುದು ಖಚಿತ.
ವಾರಕ್ಕೊಂದು ಬಾರಿಯಾದರೂ ನಿಮ್ಮ ಫೋನನ್ನು ರೀಬೂಟ್ (ಆಫ್ ಮಾಡಿ ಆನ್ ಮಾಡುವುದು) ಮಾಡುವುದರಿಂದ ನಿಮಗೆ ಗೊತ್ತಿಲ್ಲದಂತೆ ಬ್ಯಾಕ್‌ಗ್ರೌಂಡ್‌ನಲ್ಲಿ ರನ್ ಆಗುವ ಹಾಗೂ ಕೆಲವೊಮ್ಮೆ ಹ್ಯಾಂಗ್ ಆಗುವ ಅಪ್ಲಿಕೇಶನ್‌ಗಳನ್ನು ಸ್ಥಗಿತಗೊಳಿಸಬಹುದು. ಬ್ಯಾಟರಿಯು ಹೆಚ್ಚು ಕಾಲ ಬರಬೇಕೆಂದಾದರೆ, ಪೂರ್ತಿ ಚಾರ್ಜ್ ಆದ ಬಳಿಕ ಪ್ಲಗ್‌ನಿಂದ ಬೇರ್ಪಡಿಸಬೇಕು. ಸುಮ್ಮನೇ ಚಾರ್ಜ್‌ಗಿಟ್ಟರೆ ಬ್ಯಾಟರಿ ಸವಕಳಿಯಾಗುತ್ತದೆ, ಅದರ ಆಯುಷ್ಯ ಕಡಿಮೆಯಾಗುತ್ತದೆ.