Google Photos ನಲ್ಲಿ ಆ್ಯನಿಮೇಶನ್, ವೀಡಿಯೋ ತಯಾರಿಸಲು ಹೀಗೆ ಮಾಡಿ

0
303

Google Photos Animation Videoಆಂಡ್ರಾಯ್ಡ್ ಹೊಸ ಆವೃತ್ತಿಯ ಫೋನ್‌ಗಳನ್ನು ಹೊಂದಿರುವವರಿಗೆ ಬೇರಾವುದೇ ಆ್ಯಪ್‌ಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿಲ್ಲದೆಯೇ, ಜೀವನದ ಅಮೂಲ್ಯ ಕ್ಷಣಗಳ ವೀಡಿಯೊಗಳನ್ನು ಕ್ಷಣ ಮಾತ್ರದಲ್ಲಿ ರಚಿಸುವ ಆಯ್ಕೆಯೊಂದಿದೆ. ನೀವು ಆಂಡ್ರಾಯ್ಡ್ ಫೋನ್‌ಗಳಲ್ಲಿ ಮೊದಲೇ ಇನ್‌ಸ್ಟಾಲ್ ಆಗಿ ಬರುವ ಗೂಗಲ್ ಫೋಟೋಸ್ ಎಂಬ ಆ್ಯಪ್ ಗಮನಿಸಿರಬಹುದು. ಇಲ್ಲಿ ಸ್ವಯಂಚಾಲಿತವಾಗಿ ಕ್ರಿಯೇಟ್ ಆಗಿರುವ ಅನೇಕ ಫೋಲ್ಡರ್‌ಗಳಲ್ಲಿ ಫೋಟೋ, ವೀಡಿಯೊಗಳು ಸೇವ್ ಆಗಿರುತ್ತವೆ.

ಇವುಗಳನ್ನು ಬಳಸಿ ಪೂರ್ವನಿರೂಪಿತ ಥೀಮ್‌ಗಳ ಮೂಲಕ ಸುಲಭವಾಗಿ ವೀಡಿಯೊ ರಚಿಸಬಹುದು.ಸದ್ಯಕ್ಕೆ ಲವ್ ಸ್ಟೋರಿ, ಡಾಗೀ ಮೂವೀ, ಮಿಯಾಂವ್ ಮೂವೀ, ಸೆಲ್ಫೀ ಮೂವೀ, ವ್ಯಾಲೆಂಟೀನ್ ಡೇ ಮೂವೀ, ಫಾದರ್ಸ್ ಡೇ ಮೂವೀ, ಸ್ಮೈಲ್ಸ್ ಆಫ್ 2017, ಮದರ್ಸ್ ಡೇ ಮೂವೀ, ಇನ್ ಲವಿಂಗ್ ಮೆಮೊರಿ, ದೇ ಗ್ರೋ ಅಪ್ ಸೋ ಫಾಸ್ಟ್ … ಈ ಥೀಮ್‌ಗಳಿವೆ. ಯಾವುದಾದರನ್ನೊಂದನ್ನು ಕ್ಲಿಕ್ ಮಾಡಿದರೆ, ಗೂಗಲ್ ಫೋಟೋಸ್‌ನಲ್ಲಿರುವ ಎಲ್ಲ ಫೋಟೋಗಳನ್ನು ತಾನಾಗಿ ಸ್ಕ್ಯಾನ್ ಮಾಡುತ್ತಾ, ಅತ್ಯುತ್ತಮವಾದುದನ್ನು ನಿಮ್ಮ ಫೋನೇ ಆಯ್ಕೆ ಮಾಡಿಕೊಂಡು ಒಂದು ಪುಟ್ಟ ಮೂವೀ ಕ್ಲಿಪ್ ರಚಿಸುತ್ತದೆ. ಅಲ್ಲದೆ, ನಮಗೆ ಬೇಕಾದ ಫೋಟೋಗಳನ್ನಷ್ಟೇ ಆಯ್ಕೆ ಮಾಡಿಕೊಂಡು, ಅದನ್ನು ‘ನ್ಯೂ ಮೂವೀ’ ಎಂಬ ಆಯ್ಕೆಯ ಮೂಲಕವೂ ವೀಡಿಯೊ ಮಾಡಬಹುದು. ವೀಡಿಯೊವನ್ನು ಫೇಸ್‌ಬುಕ್, ಟ್ವಿಟರ್, ವಾಟ್ಸ್ಆ್ಯಪ್, ಇನ್‌ಸ್ಟಾಗ್ರಾಂ ಮುಂತಾದೆಡೆ ಹಂಚಿಕೊಳ್ಳಬಹುದು. ಇದು ನಮ್ಮ ಅಮೂಲ್ಯ ನೆನಪುಗಳನ್ನು ವೀಡಿಯೊ ರೂಪದಲ್ಲಿ ಹೆಚ್ಚು ಮಂದಿಗೆ ತಲುಪಿಸಲು ನೆರವಾಗುತ್ತದೆ.

ಹೇಗೆ ಮಾಡುವುದು?:
ಹಳೆಯ ಫೋನ್‌ಗಳಲ್ಲಿ ಈ ವ್ಯವಸ್ಥೆ ಇರಲಾರದು. ಹೊಸ ಆಂಡ್ರಾಯ್ಡ್ ಫೋನ್‌ಗಳಲ್ಲಿ ಗೂಗಲ್ ಖಾತೆಗೆ ಸೈನ್ ಇನ್ ಆಗಿರುತ್ತೀರಿ. ಗೂಗಲ್ ಫೋಟೋಸ್ ಆ್ಯಪ್ ತೆರೆಯಿರಿ, ಅದರಲ್ಲಿ ಕೆಳಭಾಗದಲ್ಲಿರುವ ‘ಅಸಿಸ್ಟೆಂಟ್’ ಟ್ಯಾಬ್ ಸ್ಪರ್ಶಿಸಿ. ಮೇಲ್ಭಾಗದಲ್ಲಿ ನಾಲ್ಕು ಆಯ್ಕೆಗಳಿರುತ್ತವೆ. ಆಲ್ಬಮ್, ಮೂವೀ, ಆನಿಮೇಶನ್ ಹಾಗೂ ಕೊಲಾಜ್ ಅಂತ. ಈ ನಾಲ್ಕನ್ನೂ ಒಂದೊಂದಾಗಿ ಬಳಸಬಹುದಾಗಿದೆ.

‘ಆಲ್ಬಂ’ ಒತ್ತಿದರೆ, ಒಂದು ನಿರ್ದಿಷ್ಟ ಸನ್ನಿವೇಶದ ಹಲವು ಫೋಟೋಗಳನ್ನು ಒಂದು ಆಲ್ಬಂ ರೀತಿಯಲ್ಲಿ ಒಂದೇ ಚಿತ್ರದಲ್ಲಿ ತೋರಿಸಬಹುದು. ಆನಿಮೇಶನ್ ಕೂಡ ಇದೇ ರೀತಿ. ಹಲವು ಫೋಟೋಗಳನ್ನು ಸೇರಿಸಿ, ಜಿಫ್ ಫೈಲ್ ಮಾದರಿಯಲ್ಲಿ (ಪುಟ್ಟ ಮೂವೀ ರೀತಿ) ಆನಿಮೇಟೆಡ್ ಫೋಟೋಗಳು ಪ್ರದರ್ಶನವಾಗುತ್ತವೆ. ಕೊಲಾಜ್ ವೈಶಿಷ್ಟ್ಯ ಬಳಸಿದರೆ, ಒಂದಷ್ಟು ಆಯ್ದ ಚಿತ್ರಗಳನ್ನು ನಮಗೆ ಬೇಕಾದಂತೆ ಹೊಂದಿಸುವ, ಆಲ್ಬಂ ಮಾದರಿಯಲ್ಲಿಯೇ ಕೊಲಾಜ್ ಮಾಡುವ ಆಯ್ಕೆ ಸಿಗುತ್ತದೆ.

ಮೂವೀ ಮಾಡುವುದು: ‘ಮೂವೀ’ ಕ್ಲಿಕ್ ಮಾಡಿ, ‘ನ್ಯೂ ಫಿಲ್ಮ್’ ಆಯ್ಕೆ ಮಾಡಿದರೆ (ಅಥವಾ ಪೂರ್ವನಿರೂಪಿತ ಥೀಮ್‌ಗಳನ್ನೂ ಆಯ್ಕೆ ಮಾಡಿಕೊಳ್ಳಬಹುದು) ಗ್ಯಾಲರಿಯಲ್ಲಿರುವ ಫೋಟೋಗಳನ್ನು ಆಯ್ಕೆ ಮಾಡಲು ಕೇಳುತ್ತದೆ. ನಿಮಗೆ ಬೇಕಾದವುಗಳನ್ನು ಆಯ್ಕೆ ಮಾಡಿಕೊಳ್ಳಿ ಹಾಗೂ ಬಲ ಮೇಲ್ಭಾಗದಲ್ಲಿ ‘ಸೇವ್’ ಒತ್ತಿದರೆ, ಕೆಲವೇ ಕ್ಷಣಗಳಲ್ಲಿ ಮೂವೀ ಸಿದ್ಧವಾಗುತ್ತದೆ. ನಿರ್ದಿಷ್ಟ ಥೀಮ್‌ಗಳನ್ನು ಆಯ್ಕೆ ಮಾಡಿದರೆ, ಉದಾಹರಣೆಗೆ, ‘ಡಾಗೀ ಮೂವೀ’ ಒತ್ತಿದರೆ, ನಿಮ್ಮ ಗ್ಯಾಲರಿಯಲ್ಲಿ ನಾಯಿಗಳಿರುವ ಫೋಟೋಗಳು ಸಾಕಷ್ಟಿಲ್ಲ ಅಂತ ಸಿಸ್ಟಂ ನಿಮಗೆ ಹೇಳಬಹುದು. ಅಂದರೆ ಇದು ಕೂಡ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನ (ಕೃತಕ ಬುದ್ಧಿಮತ್ತೆ) ಒಂದು ರೂಪ. ನಗುವನ್ನು, ವ್ಯಕ್ತಿಗಳನ್ನು, ನಾಯಿ, ಬೆಕ್ಕುಗಳನ್ನು ಗುರುತಿಸುವ ತಂತ್ರಜ್ಞಾನ ಇಲ್ಲಿ ಅಡಕವಾಗಿದೆ, ಆದರೂ, ಡಾಗೀ ಮೂವೀ ರಚಿಸಲು ನಾಯಿಯ ಚಿತ್ರವೇ ಬೇಕಾಗಿಲ್ಲ, ಬೇರೊಬ್ಬರ (ಅಥವಾ ನಮ್ಮದೇ) ಚಿತ್ರವನ್ನೂ ಆಯ್ಕೆ ಮಾಡಿದರೆ, ಅದು ನಮಗೆ ಮೂವೀ ಕ್ರಿಯೇಟ್ ಮಾಡಿಕೊಡುತ್ತದೆ. ಇದನ್ನು ಎಡಿಟ್ ಮಾಡಬಹುದು, ನಮಗೆ ಬೇಕಾದ ಹಾಡುಗಳನ್ನು ಸೇರಿಸಬಹುದು. ಆಂಡ್ರಾಯ್ಡ್‌ನಲ್ಲಿ ಬೇರಾವುದೇ ಆ್ಯಪ್ ಅಗತ್ಯವಿಲ್ಲದೆಯೇ ಮಾಡಬಹುದಾದ ಈ ವ್ಯವಸ್ಥೆಯ ಪ್ರಯೋಜನ ಪಡೆದುಕೊಳ್ಳಿ.

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ., ಆಗಸ್ಟ್ 20, 2018 ಅಂಕಣ

LEAVE A REPLY

Please enter your comment!
Please enter your name here