Sony WF-LS900N Earbuds: ನಿಶ್ಶಬ್ದ ವಾತಾವರಣದಲ್ಲಿ ಆಲಿಸುವ ಇಂಪು

Sony Earbuds WF-LS900N

Sony WF-LS900N Earbuds Review:

ಸ್ಮಾರ್ಟ್‌ಫೋನ್‌ಗಳ ಆಧುನಿಕತೆಯೊಂದಿಗೆ ಅವುಗಳಿಗೆ ಸಂವಾದಿಯಾಗಿ ಇಯರ್‌ಫೋನ್ ಅಥವಾ ಇಯರ್‌ಬಡ್‌ಗಳ ತಂತ್ರಜ್ಞಾನದಲ್ಲೂ ಸಾಕಷ್ಟು ಸುಧಾರಣೆ ಕಂಡಿದೆ. ವೈರ್ ಇರುವ ಇಯರ್‌ಫೋನ್‌ಗಳನ್ನು ದಾಟಿ ವೈರ್‌ಲೆಸ್ ಇಯರ್‌ಬಡ್‌ಗಳು ಈಗಿನ ಯುವ ಜನತೆಯ ಹೊಸ ಆಕರ್ಷಣೆ. ಇದನ್ನೇ ದೃಷ್ಟಿಯಲ್ಲಿಟ್ಟುಕೊಂಡು ಸೋನಿ ಇಂಡಿಯಾ ನವೆಂಬರ್ 21ರಂದು ತನ್ನ ಹೊಸ WF-LS900N ಇಯರ್‌ಬಡ್ಸ್ ಅನ್ನು ಬಿಡುಗಡೆ ಮಾಡಿದೆ. ಇದು ನವೆಂಬರ್ 25ರಿಂದ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಬಿಡುಗಡೆಗೆ ಮುನ್ನ ಪ್ರಜಾವಾಣಿಗೆ ರಿವ್ಯೂಗೆ ದೊರೆತ ಸೋನಿ WF-LS900N ಇಯರ್‌ಬಡ್‌ಗಳನ್ನು ಎರಡು ವಾರ ಬಳಸಿ ನೋಡಿದಾಗ ಹೇಗಿದೆ? ಇಲ್ಲಿದೆ ಮಾಹಿತಿ.

ವಿನ್ಯಾಸ
ಕಪ್ಪು, ಬಿಳಿ ಹಾಗೂ ಬೀಜ್ (ನಸು ಕಂದು) ಬಣ್ಣಗಳಲ್ಲಿ ಇಯರ್‌ಬಡ್‌ಗಳು ಲಭ್ಯ ಇವೆ. ರಿವ್ಯೂಗೆ ದೊರೆತದ್ದು ನಸು ಕಂದು ಬಣ್ಣದ ವಿಶಿಷ್ಟವಾದ ಇಯರ್‌ಬಡ್ಸ್. ಚಾರ್ಜಿಂಗ್ ಕೇಸ್, ಟೈಪ್-ಸಿ ಕೇಬಲ್, 3 ವಿಭಿನ್ನ ಗಾತ್ರದ ಇಯರ್ ಟಿಪ್ಸ್ ಇರುವ ಬಾಕ್ಸ್‌ನಲ್ಲಿ ಪರಿಸರಕ್ಕೆ ಹಾನಿಯಾಗುವ ಯಾವುದೇ ಪ್ಲಾಸ್ಟಿಕ್ ಮತ್ತಿತರ ಅಂಶಗಳಿಲ್ಲ.

ಇಯರ್‌ಬಡ್‌ಗಳು ಕಿವಿಯ ಹೊರಕುಹರಗಳಲ್ಲಿ ಚೆನ್ನಾಗಿ ಕೂರುವಂತಹಾ ವಿನ್ಯಾಸ ಗಮನ ಸೆಳೆದಿದೆ. ಹಿಂದಿನ ಲಿಂಕ್‌ಬಡ್ಸ್‌ಗೆ ಹೋಲಿಸಿದರೆ ಚಿಕ್ಕದಾಗಿಯೂ, ಹಗುರವಾಗಿಯೂ ಇರುವುದರಿಂದ ಹೆಚ್ಚು ಕಾಲ ಕಿವಿಯಲ್ಲಿರಿಸಿದರೆ ನೋವಿನ ಅನುಭವವಾಗುವುದಿಲ್ಲ. ಸೋನಿ WF-LS900N ಸಾಧನದ ಪ್ಲಾಸ್ಟಿಕ್ ಚಾರ್ಜಿಂಗ್ ಕೇಸ್ ಕೂಡ ಹಗುರವಾಗಿದೆ, ಒಯ್ಯಲು ಸುಲಭ ಮತ್ತು ಇಯರ್‌ಬಡ್‌ಗಳ ಬ್ಯಾಟರಿ ಸಾಮರ್ಥ್ಯವನ್ನು ಎಲ್ಇಡಿ ಬೆಳಕಿನಲ್ಲಿ ಬಣ್ಣಗಳ ಆಧಾರದಲ್ಲಿ ತೋರಿಸುತ್ತದೆ.

ವೈಶಿಷ್ಟ್ಯಗಳು
ಧ್ವನಿ ತಂತ್ರಜ್ಞಾನದಲ್ಲಿ ಸಾಕಷ್ಟು ಮುಂಚೂಣಿಯಲ್ಲಿರುವ ಸೋನಿ ಕಂಪನಿ ಹೊರತಂದಿರುವ Sony WF-LS900N ಇಯರ್‌ಬಡ್ಸ್‌ನಲ್ಲಿ ಪ್ರಮುಖವಾಗಿ ಗಮನ ಸೆಳೆದಿದ್ದೆಂದರೆ ಅದರ ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ (ANC – ಎಂದರೆ ಸುತ್ತಲಿನ ಧ್ವನಿ ಕೇಳಿಸದಂತೆ ಮಾಡಿ, ಇಯರ್‌ಬಡ್ಸ್‌ನಿಂದ ಬರುವ ಧ್ವನಿಯನ್ನು ಮಾತ್ರ ಕೇಳಿಸುವ) ವ್ಯವಸ್ಥೆ. ವಾಹನದಲ್ಲಿ ಪ್ರಯಾಣಿಸುತ್ತಿರುವಾಗ ಸಂಗೀತ ಕೇಳುವ ಅಭ್ಯಾಸವಿರುವವರಿಗೆ ಇದು ಅತ್ಯಂತ ಇಷ್ಟವಾಗಬಹುದು. ಸುತ್ತಮುತ್ತಲಿರುವ ಗದ್ದಲ – ಸದ್ದನ್ನು ಕಡಿಮೆ ಮಾಡಿ, ಏಕಾಂತ ಕೊಠಡಿಯಲ್ಲಿ ಕೂತಂತೆ ನಿಶ್ಶಬ್ದ ವಾತಾವರಣದಲ್ಲಿ ಹಾಡುಗಳನ್ನು ಕೇಳಲು ಅನುವು ಮಾಡಿಕೊಡುತ್ತದೆ ಈ ನಾಯ್ಸ್ ಕ್ಯಾನ್ಸಲೇಶನ್ (ಧ್ವನಿ ರದ್ದುಪಡಿಸುವ) ವ್ಯವಸ್ಥೆ.

ಹೆಡ್‌ಫೋನ್ಸ್ ಆ್ಯಪ್
ಇಯರ್‌ಬಡ್ಸ್ ಮೇಲಿನ ಸ್ಪರ್ಶ ಸಂವೇದನೆಯಿರುವ ಬಿಂದುವಿಗೆ ನಾವು ಹೆಚ್ಚು ಬಳಸುತ್ತಿರುವ ಕಾರ್ಯಗಳನ್ನು ಹೊಂದಿಸಬಹುದು. ಉದಾಹರಣೆಗೆ, ವಾಲ್ಯೂಮ್, ಪ್ಲೇಬ್ಯಾಕ್, ಅಥವಾ ಏಂಬಿಯೆಂಟ್ ಸೌಂಡ್/ನಾಯ್ಸ್ ಕಂಟ್ರೋಲ್ ಇತ್ಯಾದಿ. ಇದಕ್ಕಾಗಿ ಆಂಡ್ರಾಯ್ಡ್ ಅಥವಾ ಆ್ಯಪಲ್ (ಐಒಎಸ್) ಫೋನ್‌ಗಳಿಗಾಗಿ ಲಭ್ಯ ಇರುವ ಸೋನಿ ಕಂಪನಿಯದೇ ಸೋನಿ ಹೆಡ್‌ಫೋನ್ಸ್ ಕನೆಕ್ಟ್ ಎಂಬ ಆ್ಯಪ್ ಅಳವಡಿಸಿಕೊಳ್ಳಬೇಕಾಗುತ್ತದೆ. ಇದನ್ನು ಬಳಸಿ ಫೋನ್ ಜೊತೆಗೆ ಸಂಯೋಜಿಸಬಹುದು (ಪೇರ್ ಮಾಡಬಹುದು). ಇದೇ ಆ್ಯಪ್‌ನಲ್ಲಿ ಹಲವಾರು ನಿಯಂತ್ರಣಗಳು, ಇಯರ್‌ಬಡ್ಸ್ ತಂತ್ರಾಂಶ ಅಪ್‌ಡೇಟ್ಸ್, ಬ್ಯಾಟರಿ ಪ್ರಮಾಣವೆಷ್ಟಿದೆ ಎಂಬ ಸೂಚಕ ಮುಂತಾದವುಗಳಿವೆ. ಜೊತೆಗೆ, ನಮಗೆ ಬೇಕಾದಂತೆ ಹಾಡುಗಳ ಬೇಸ್-ಟ್ರೆಬಲ್ ಹೊಂದಿಸಿ ಆಲಿಸುವುದಕ್ಕಾಗಿ ಪೂರ್ವನಿಗದಿತ ಮೋಡ್‌ಗಳಿರುವ ಈಕ್ವಲೈಜರ್ ಕೂಡ ಇದೆ.

ಗುಣಮಟ್ಟದ ಆಲಿಸುವಿಕೆ
ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲಿಂಗ್ ವ್ಯವಸ್ಥೆ ಆನ್ ಮಾಡಿದರೆ, ನಾವು ಕೇಳುವ ಹಾಡುಗಳು ಇಂಪಾಗಿ, ಸ್ಪಷ್ಟವಾಗಿ ಸ್ಟೀರಿಯೊ ಪರಿಣಾಮದೊಂದಿಗೆ ಕೇಳಿಸುತ್ತವೆ. ಹೊರಗಿನ ಧ್ವನಿ ಬಹುತೇಕ ಕೇಳಿಸುವುದೇ ಇಲ್ಲ. ಹೊರಗಿನ ಗಾಳಿಯ ಧ್ವನಿಯನ್ನೂ ಫಿಲ್ಟರ್ ಮಾಡುವಲ್ಲಿ ಇಯರ್‌ಬಡ್ಸ್ ಹೊರಗಿರುವ ಜಾಲರಿ (ಮೆಶ್) ಯಶಸ್ವಿಯಾಗಿದೆ.

ಕಿವಿಯಲ್ಲಿರಿಸಿಕೊಂಡಾಗ ಹೊರಗಿನ ಧ್ವನಿಯೂ ಕೇಳಬೇಕು ಎಂಬ ಹಾಗಿದ್ದರೆ (ಉದಾಹರಣೆಗೆ ಯಾರಾದರೂ ಕರೆದರೆ ಅಥವಾ ಪ್ರಯಾಣಿಸುತ್ತಿರುವಾಗ/ವಾಹನ ಚಲಾಯಿಸುತ್ತಿರುವಾಗ ಇಲ್ಲವೇ ನಡೆದು ಹೋಗುತ್ತಿರುವಾಗ ಹಾರ್ನ್ ಸದ್ದು ಕೇಳಬೇಕು ಎಂದಾದರೆ) ಏಂಬಿಯೆಂಟ್ ಸೌಂಡ್ ಮೋಡ್‌ಗೆ ಬದಲಿಸಿಕೊಳ್ಳಲು ಕೇವಲ ಒಂದು ತಟ್ಟುವಿಕೆ (ಟ್ಯಾಪ್ ಮಾಡುವುದು) ಸಾಕಾಗುತ್ತದೆ. ಹೀಗೆ ಬದಲಾಗಲು ಸ್ವಯಂಚಾಲಿತ ವ್ಯವಸ್ಥೆಯೂ ಇದೆ. ನಾವು ಈ ನಾಯ್ಸ್ ಕ್ಯಾನ್ಸಲೇಶನ್ ವ್ಯವಸ್ಥೆಯನ್ನು ಮಿತವಾಗಿ ಬಳಸಬೇಕು ಯಾಕೆಂದರೆ, ಇದಕ್ಕೆ ಹೆಚ್ಚಿನ ಬ್ಯಾಟರಿ ಚಾರ್ಜ್ ಬೇಕಾಗುತ್ತದೆ. ಹೀಗಾಗಿ, ಅಗತ್ಯವಿದ್ದಾಗ ಮಾತ್ರವೇ ಬಳಸಬಹುದು.

ಅಲೆಕ್ಸಾ ಧ್ವನಿ ಸಹಾಯಕ (ವಾಯ್ಸ್ ಅಸಿಸ್ಟೆಂಟ್) ವೈಶಿಷ್ಟ್ಯವನ್ನು ಮೂಲತಃ ಈ ಇಯರ್‌ಬಡ್ಸ್ ಬೆಂಬಲಿಸುತ್ತವೆ. ಗೂಗಲ್ ಅಸಿಸ್ಟೆಂಟ್ ಹಾಗೂ ಸಿರಿ ಧ್ವನಿಸಹಾಯಕ ವೈಶಿಷ್ಟ್ಯಗಳನ್ನೂ ಬಳಸಬಹುದು. ಅತ್ಯುತ್ತಮ ಗುಣಮಟ್ಟದ ಎಂದರೆ ಹೈ ರೆಸೊಲ್ಯುಶನ್ ಇರುವ ಆಡಿಯೊ ಫೈಲ್‌ಗಳನ್ನೂ ಇದು ಸಮರ್ಥವಾಗಿ ಬೆಂಬಲಿಸುತ್ತದೆ. ಫೋನ್ ಕರೆಗೆ ಉತ್ತರಿಸುವಾಗ ಧ್ವನಿ ಸ್ಪಷ್ಟವಾಗಿ ಕೇಳಿಸುತ್ತದೆ ಅಂತ ಅತ್ತ ಕಡೆ ಇರುವವರು ಕೂಡ ಖಚಿತಪಡಿಸಿದ್ದಾರೆ. ಇಷ್ಟಲ್ಲದೆ, ಎರಡು ಸಾಧನಗಳಿಗೆ ಇದನ್ನು ಸಂಪರ್ಕಿಸಬಹುದಾಗಿದೆ.

ಗಮನ ಸೆಳೆದ ಮತ್ತೊಂದು ಅಂಶವೆಂದರೆ, ಅಡಾಪ್ಟಿವ್ ಸೌಂಡ್ ಕಂಟ್ರೋಲ್ ಎಂಬ ವ್ಯವಸ್ಥೆ. ಕಿವಿಯಿಂದ ಇಯರ್‌ಬಡ್‌ಗಳನ್ನು ತೆಗೆದಾಗ ಹಾಡು ತಾನಾಗಿ ಆಫ್ ಆಗುತ್ತದೆ ಮತ್ತು ಪುನಃ ಧರಿಸಿದಾಗ ಮುಂದುವರಿಯುತ್ತದೆ ಮತ್ತು ಹಾಡು ಕೇಳುತ್ತಿರುವಾಗ ಫೋನ್ ಕರೆ ಬಂದರೆ, ಹಾಡು ತಾನಾಗಿ ನಿಲ್ಲುತ್ತದೆ.

ಬ್ಯಾಟರಿ
ಸೋನಿ WF-LS900N ಇಯರ್‌ಬಡ್ಸ್ ಒಮ್ಮೆ ಚಾರ್ಜ್ ಮಾಡಿದರೆ, ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ವೈಶಿಷ್ಟ್ಯ ಬಳಸಿದಾಗ, ಐದುವರೆಯಿಂದ ಆರು ಗಂಟೆವರೆಗೂ ಬಾಳಿಕೆ ಬಂದಿದೆ. ಕೇಸ್ ಚಾರ್ಜ್ ಒಳಗೊಂಡು ಹೇಳುವುದಾದರೆ, ನಿರಂತರವಾಗಿ ಬಳಸುವುದಾದಲ್ಲಿ 24 ಗಂಟೆಗಳ ಬ್ಯಾಟರಿಗೆ ಯಾವುದೇ ಸಮಸ್ಯೆಯಿಲ್ಲ. ಆದರೆ, ನಾವು ದಿನಕ್ಕೆ ಹೆಚ್ಚೆಂದರೆ ಐದಾರು ಗಂಟೆಗಳಷ್ಟೇ ಬಳಸುತ್ತೇವೆ ಎಂಬುದನ್ನೂ ನೆನಪಿಡಬೇಕು.

ಒಟ್ಟಾರೆಯಾಗಿ ಹೇಳುವುದಾದರೆ, ಸೋನಿ WF-LS900N ಇಯರ್‌ಬಡ್ಸ್ ಸಮೃದ್ಧವಾದ ಆಡಿಯೊ ಗುಣಮಟ್ಟವನ್ನು ನೀಡುತ್ತದೆ ಮತ್ತು ಹಾಡುಗಳನ್ನು ಕಿವಿಗೆ ಇಂಪಾಗಿಸುತ್ತದೆ. ಇದರ ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ವ್ಯವಸ್ಥೆಯಂತೂ ತುಂಬ ಅನುಕೂಲಕರ ಮತ್ತು ಸಮರ್ಥವಾಗಿದೆ. ಸೋನಿ LS900N ಬೆಲೆ ₹13,990. ಆಫ್‌ಲೈನ್ ಮಳಿಗೆಗಳಲ್ಲಿ ಹಾಗೂ ಇಕಾಮರ್ಸ್ ಸ್ಟೋರ್‌ಗಳಲ್ಲಿ ಲಭ್ಯವಿದೆ.

GAdget Review by Avinash B Published in Prajavani on 22/23 Nov 2022

Leave a Reply

Your email address will not be published. Required fields are marked *