ಆಂಡ್ರಾಯ್ಡ್ ಫೋನ್‌ನಲ್ಲಿ ಆ್ಯಪ್ ಅಳವಡಿಸಿಕೊಳ್ಳುವ ಮೊದಲು ಇದನ್ನು ಓದಿ!

0
421

Install Apps with careವಾಟ್ಸ್ಆ್ಯಪ್‌ಗೆ ಸ್ಫರ್ಧೆಯೊಡ್ಡಲು ಪತಂಜಲಿ ಸಂಸ್ಥೆ ಹೊರತಂದಿರುವ ಕಿಂಭೋ ಎಂಬ ಆ್ಯಪ್ ಬಂದಿದ್ದು, ಮಾಯವಾಗಿದ್ದು ಮತ್ತು ಅದರ ಹೆಸರಲ್ಲಿ ಸಾಕಷ್ಟು ನಕಲಿ ಆ್ಯಪ್‌ಗಳು ಬಂದು ನಮ್ಮ ಖಾಸಗಿ ಮಾಹಿತಿಯನ್ನು ಕಬಳಿಸಲು ಪ್ರಯತ್ನಿಸಿರುವ ಬಗ್ಗೆ ಕಳೆದ ವಾರ ಬರೆದಿದ್ದೆ. ಆಂಡ್ರಾಯ್ಡ್ ಸಾಧನಗಳಿಗೆ ಗೂಗಲ್‌ನ ಪ್ಲೇ ಸ್ಟೋರ್‌ನಲ್ಲಿ ಲಕ್ಷಾಂತರ ಆ್ಯಪ್‌ಗಳು ಲಭ್ಯವಿದ್ದು, ಇವುಗಳಲ್ಲಿ ಉತ್ತಮವಾದುದನ್ನು ಆಯ್ಕೆ ಮಾಡಿಕೊಳ್ಳುವುದು ತ್ರಾಸದಾಯಕ ಕೆಲಸ. ಆ್ಯಪಲ್ ಸಾಧನಗಳಿಗೆ ಹೋಲಿಸಿದರೆ, ಗೂಗಲ್ ಪ್ಲೇ ಸ್ಟೋರ್‌ಗೆ ಡೆವಲಪರ್‌ಗಳು ಆ್ಯಪ್‌ಗಳನ್ನು ತಯಾರಿಸಿ ಸೇರ್ಪಡೆಗೊಳಿಸುವುದು ತುಂಬಾ ಸುಲಭವಾಗಿರುವುದರಿಂದಾಗಿ ಇಲ್ಲಿ ಇಷ್ಟೊಂದು ಆ್ಯಪ್‌ಗಳ ರಾಶಿ ಕಾಣಸಿಗುತ್ತವೆ. ಆದರೆ, ಆ್ಯಪಲ್‌ನ ಐಟ್ಯೂನ್ ಸ್ಟೋರ್‌ನಲ್ಲಿ ಹಾಗಿಲ್ಲ. ಅಲ್ಲಿರುವ ಹೆಚ್ಚಿನ ಆ್ಯಪ್‌ಗಳು ಉತ್ತಮ ಗುಣಮಟ್ಟದವೇ ಆಗಿರುತ್ತವೆ ಮತ್ತು ಸ್ಟೋರ್‌ನಲ್ಲಿ ಆ್ಯಪ್ ಸೇರ್ಪಡೆಗೊಳಿಸಲು, ಅಪ್‌ಡೇಟ್ ಮಾಡಲು, ಸಾಕಷ್ಟು ಪ್ರಕ್ರಿಯೆಗಳಿರುತ್ತವೆ ಮತ್ತು ಇದಕ್ಕೆ ಸುಲಭದಲ್ಲಿ ಅನುಮತಿಯೂ ಸಿಗುವುದಿಲ್ಲ. ಈ ಕಾರಣಕ್ಕಾಗಿಯೇ ಆ್ಯಪಲ್ ಸ್ಟೋರ್‌ನಲ್ಲಿ ಆ್ಯಪ್‌ಗಳ ಸಂಖ್ಯೆ ಕಡಿಮೆ.

ಆಂಡ್ರಾಯ್ಡ್‌ನಲ್ಲಿ ಆ್ಯಪ್ ಅಳವಡಿಸಲು ನಿಯಮಾವಳಿಗಳು ಸಡಿಲ ಇರುವುದರಿಂದಾಗಿಯೇ ಅದರಲ್ಲಿ ನಕಲಿ ಆ್ಯಪ್‌ಗಳ ಹಾವಳಿಯೂ ಹೆಚ್ಚು. ಯಾವುದಾದರೂ ಒಂದು ಆ್ಯಪ್ ನಿರ್ದಿಷ್ಟ ದಿನದಂದು ಸಾಕಷ್ಟು ಸದ್ದು ಅಥವಾ ಪ್ರಚಾರ ಆಗಿದೆಯೆಂದಾದರೆ, ನಕಲಿ ಆ್ಯಪ್‌ಗಳ ಡೆವಲಪರ್‌ಗಳು ಅದರ ಲಾಭವನ್ನು ಪಡೆದುಕೊಂಡು, ಅದೇ ಹೆಸರಿನಲ್ಲಿ ತಮ್ಮದೇ ಆ್ಯಪ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ತಕ್ಷಣವೇ ಅಳವಡಿಸಿರುತ್ತಾರೆ. ಹೀಗಾಗಿ ಪ್ಲೇ ಸ್ಟೋರ್‌ನಲ್ಲಿರುವ, ಒಂದೇ ಹೆಸರಿನ, ನೋಡಲು ಕೂಡ ಒಂದೇ ರೀತಿಯಾಗಿರುವ ಆ್ಯಪ್‌ಗಳನ್ನು ಅಳವಡಿಸಿಕೊಳ್ಳುವ ಮೊದಲು ನಾವು ಎಚ್ಚರಿಕೆ ವಹಿಸಲೇಬೇಕಾಗುತ್ತದೆ. ಇದಕ್ಕೆ ಉದಾಹರಣೆ, ಪತಂಜಲಿಯ ಕಿಂಭೋ. ಅದನ್ನು ಪತಂಜಲಿಯು ಸದ್ಯಕ್ಕೆ ಹಿಂತೆಗೆದುಕೊಂಡಿದ್ದರೂ, ಆ ಹೆಸರಿನಲ್ಲಿ ಸಾಕಷ್ಟು ಆ್ಯಪ್‌ಗಳು ಇನ್ನೂ ಕೂಡ ‘ಒರಿಜಿನಲ್ ಆ್ಯಪ್’ ಎಂಬ ಮುದ್ರೆಯೊಂದಿಗೆ ಕೂಡ ಇವೆ ಎಂದಾದರೆ, ಇಲ್ಲಿರುವ ಆ್ಯಪ್‌ಗಳ ಸಾಚಾತನದ ಬಗ್ಗೆ ನಾವು ಎಷ್ಟು ಎಚ್ಚರಿಕೆ ವಹಿಸಬೇಕೆಂಬುದು ವೇದ್ಯವಾಗುತ್ತದೆ.

ಈ ಹಾವಳಿಗಳಿಂದಾಗಿಯೇ ತನ್ನ ಪ್ಲೇ ಸ್ಟೋರ್‌ನಿಂದ ಅಪಾಯಕಾರಿ ಆ್ಯಪ್‌ಗಳನ್ನು ಗೂಗಲ್ ತನ್ನ ಗಮನಕ್ಕೆ ಬಂದಾಗಲೆಲ್ಲಾ ಆಗಾಗ್ಗೆ ತೆಗೆದುಹಾಕುತ್ತದೆ. ಆದರೆ, ಅದು ಎಷ್ಟೇ ಎಚ್ಚರಿಕೆ ವಹಿಸಿದರೂ, ನಕಲಿ ಮತ್ತು ಅಪಾಯಕಾರಿ ಆ್ಯಪ್‌ಗಳು ನುಸುಳಿಬಿಡುತ್ತವೆ. ಕಳೆದ ವರ್ಷದಲ್ಲಿ (2017) ಈ ರೀತಿಯ 7 ಲಕ್ಷ ಆ್ಯಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಿರುವುದಾಗಿ ಗೂಗಲ್ ಹೇಳಿತ್ತು. ಆದರೆ, ಅಂಥವು ಇನ್ನೂ ಇವೆ. ಈ ಕುರಿತಾಗಿ ತಂತ್ರಜ್ಞಾನದ ಭದ್ರತಾ ಸಂಸ್ಥೆಗಳಾದ ಸಿಮಾಂಟೆಕ್, ಚೆಕ್ ಪಾಯಿಂಟ್, ಇ-ಸೆಟ್ ಮುಂತಾದವು ಆಗಾಗ್ಗೆ ಎಚ್ಚರಿಕೆ ನೀಡುತ್ತಲೇ ಇರುತ್ತವೆ. ಹೆಚ್ಚಿನವು ನಮ್ಮ ಮೊಬೈಲ್‌ನ ನಿರ್ವಹಣೆಗೆ ಬೇಕಾದ ಸೆಕ್ಯುರಿಟಿ ಆ್ಯಪ್, ಆ್ಯಂಟಿ ವೈರಸ್, ಕ್ಯಾಶ್ ಕ್ಲಿಯರಿಂಗ್ ಮುಂತಾದ ಹೆಸರಿನಲ್ಲಿ ಬಳಕೆದಾರರನ್ನು ವಂಚಿಸುತ್ತವೆ. ಅಥವಾ ಗೇಮ್ಸ್, ಶೈಕ್ಷಣಿಕ ಆ್ಯಪ್‌ಗಳ ರೂಪದಲ್ಲಿಯೂ ತಲೆಮರೆಸಿಕೊಂಡು ಕುಳಿತಿರುತ್ತವೆ.

ಇಂಥ ನಕಲಿ ಆ್ಯಪ್ ತಯಾರಕರು (ಡೆವಲಪರ್‌ಗಳು) ಈ ಆ್ಯಪ್ ಹೋಮ್ ಸ್ಕ್ರೀನ್‌ನಲ್ಲಿ ಕಾಣಿಸದಂತೆ ಕೋಡ್ ರೂಪಿಸಿರುತ್ತಾರೆ. ಇಂಥ ಹೆಚ್ಚಿನ ಆ್ಯಪ್‌ಗಳು, ಜಾಹೀರಾತು ಮೂಲಕ ಅಥವಾ ಪಾಪ್ ಅಪ್ ವಿಂಡೋಗಳ ಮೂಲಕ ಬೇರೆಯೇ ಹಲವು ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡುವಂತೆ ಬಳಕೆದಾರರನ್ನು ಪ್ರಚೋದಿಸುತ್ತಲೇ ಇರುತ್ತವೆ ಮತ್ತು ಅದು ಕೂಡ ದುರುದ್ದೇಶಪೂರಿತ (ಮಾಲ್‌ವೇರ್) ಕಿರು ತಂತ್ರಾಂಶಗಳೇ ಆಗಿರುತ್ತವೆ.

ಇತ್ತೀಚೆಗೆ ಸೆಕ್ಯುರಿಟಿ ತಂತ್ರಜ್ಞರು ಎಚ್ಚರಿಸಿದ ಪ್ರಕಾರ, ಗೂಗಲ್ ಪ್ಲೇ ಸ್ಟೋರ್‌ನಿಂದ ವೈರಸ್ ಕ್ಲೀನರ್, ವೈರಸ್ ಬೂಸ್ಟರ್, ಆ್ಯಂಟಿ ವೈರಸ್, ಆ್ಯಪ್ ಲಾಕ್, ಕ್ಲೀನರ್, ಆ್ಯಂಟಿ ವೈರಸ್ ಫ್ರೀ, ವೈರಸ್ ರಿಮೂವರ್, ಗೇಮ್ ಬಿಲಿಯರ್ಡ್ಸ್, ಗೇಮ್ ಯುವರ್‌ಸೆಲ್ಫ್, ಮಲ್ಟಿಪ್ಲಿಕೇಶನ್ ಟೇಬಲ್ ಗೇಮ್, ಚಿಲ್ಡ್ರನ್ ಪೊಲೀಸ್, ಗೇಮ್ ಆಫ್ ಕಾರ‍್ಸ್… ಹೀಗೆಲ್ಲ ವಿಭಿನ್ನ ಹೆಸರುಗಳಲ್ಲಿರುವ ಆ್ಯಪ್‌ಗಳನ್ನು ಅಳವಡಿಸಿಕೊಳ್ಳುವಾಗ ಎಚ್ಚರಿಕೆಯಿಂದಿರಿ. ಇವೆಲ್ಲ ಅಪಾಯಕಾರಿ ಆ್ಯಪ್‌ಗಳು. ಹೀಗಾಗಿ ಹೆಚ್ಚು ಜನಜನಿತವಾದ ಬ್ರ್ಯಾಂಡ್‌ಗಳ ಆ್ಯಪ್ ಮಾತ್ರವೇ ಬಳಸಿ. ಪ್ರಾತಿನಿಧಿಕ ಚಿತ್ರ ನೋಡಿ. ಪ್ಲೇ ಸ್ಟೋರ್‌ನಲ್ಲಿ ‘ಆ್ಯಂಟಿ ವೈರಸ್’ ಅಂತ ಹುಡುಕಿದರೆ ನೂರಾರು ಆ್ಯಪ್‌ಗಳು ಗೋಚರಿಸುತ್ತವೆ. ಇದಕ್ಕಾಗಿ ಕ್ಯಾಸ್ಪರ್‌ಸ್ಕಿ, ಎವಿಜಿ, ಅವಾಸ್ಟ್, ನಾರ್ಟನ್, ಮೆಕಾಫಿ, ಸಿಮಾಂಟೆಕ್ ಮುಂತಾದ ಜನಪ್ರಿಯ ಬ್ರ್ಯಾಂಡ್‌ಗಳ ಆ್ಯಪ್‌ಗಳನ್ನಷ್ಟೇ ಆಯ್ದುಕೊಳ್ಳಬೇಕು.

ಒಳ್ಳೆಯ ಆ್ಯಪ್ ಗುರುತಿಸುವುದು ಹೇಗೆ?
ನಿಮಗೆ ಬೇಕಾಗಿರುವ ಆ್ಯಪ್ ಸಾಚಾವೇ ಅಥವಾ ಸರಿ ಇದೆಯೇ, ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆಯೇ ಎಂದೆಲ್ಲ ತಿಳಿದುಕೊಳ್ಳಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

* ಮೊದಲು ಆ್ಯಪ್‌ನ ಹೆಸರು ಪರೀಕ್ಷಿಸಿ.
* ಅದರ ಡೆವಲಪರ್ ಯಾರೆಂದು ನೋಡಿ.
* ಬೇರೆ ಬಳಕೆದಾರರು ಅಲ್ಲೇ ಮಾಡಿರುವ ಕಾಮೆಂಟ್ಸ್ (ರಿವ್ಯೂ) ಓದಿ.
* ಎಷ್ಟು ಜನ ಡೌನ್‌ಲೋಡ್ ಮಾಡಿದ್ದಾರೆಂದು ನೋಡಿ.
* ಆ್ಯಪ್‌ಗೆ ಇರುವ ರೇಟಿಂಗ್ಸ್ ಗಮನಿಸಿ.
* ಹೆಚ್ಚು ಮಂದಿ ರೇಟಿಂಗ್ಸ್ ನೀಡಿದ್ದರೆ ಮತ್ತು ಅದರ ರೇಟಿಂಗ್ 4ಕ್ಕಿಂತ ಮೇಲ್ಪಟ್ಟು ಇದ್ದರೆ ಆಯ್ಕೆ ಮಾಡಿಕೊಳ್ಳಿ.

ಮಾಹಿತಿ@ತಂತ್ರಜ್ಞಾನ ವಿಜಯ ಕರ್ನಾಟಕ ಅಂಕಣ for 18 ಜೂನ್ 2018 by ಅವಿನಾಶ್ ಬಿ.

LEAVE A REPLY

Please enter your comment!
Please enter your name here