ಬ್ಯಾಂಕಿಂಗ್, ಯುಪಿಐ ಆ್ಯಪ್ ಬಳಕೆ ಬಗ್ಗೆ ಎಚ್ಚರಿಕೆಯಿರಲಿ

0
379

Safety for UPI appsತಂತ್ರಜ್ಞಾನವೆಂಬುದು ಎಷ್ಟು ಅನುಕೂಲಕಾರಿಯೋ, ಅಷ್ಟೇ ಅಪಾಯಕಾರಿಯೂ ಹೌದು. ಎರಡು ವಾರದ ಹಿಂದೆ ಆತಂಕಕಾಗಿ ಸುದ್ದಿಯೊಂದು ಬಂದಿತ್ತು. ಹಲವಾರು ಬ್ಯಾಂಕುಗಳ ನಕಲಿ ಆ್ಯಪ್‌ಗಳು ಗೂಗಲ್‌ನ ಆಂಡ್ರಾಯ್ಡ್ ಪ್ಲೇ ಸ್ಟೋರ್‌ನಲ್ಲಿ (ಆ್ಯಪ್‌ಗಳನ್ನು ಭಟ್ಟಿ ಇಳಿಸಿಕೊಳ್ಳುವ ತಾಣ) ಕಾರ್ಯಾಚರಿಸುತ್ತಿದ್ದು, ಹಲವಾರು ಮಂದಿ ತಮ್ಮ ಹಣ ಕಳೆದುಕೊಂಡಿದ್ದಾರೆ ಅಂತ. ಅಂದರೆ, ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿರುವಂತೆಯೇ, ವಂಚಕರೂ, ವಂಚನೆಯೂ ಅಪ್‌ಗ್ರೇಡ್ ಆಗುತ್ತಿರುತ್ತದೆ. ಹೀಗಾಗಿ, ನಮ್ಮ ಅನುಕೂಲಕ್ಕೆ ತಂತ್ರಜ್ಞಾನವಿದೆ ಎಂದು ಸುಮ್ಮನೆ ಕೂರುವಂತಿಲ್ಲ, ಎಚ್ಚರ ವಹಿಸಲೇಬೇಕು ಎಂಬುದಕ್ಕೆ ಪದೇ ಪದೇ ವರದಿಯಾಗುತ್ತಿರುವ ಇಂಥ ಸೈಬರ್ ವಂಚನೆ ಪ್ರಕರಣಗಳೇ ಸಾಕ್ಷಿ.

ಡಿಜಿಟಲ್ ಪೇಮೆಂಟ್ ಬಗ್ಗೆ ಅರಿವು ಹೆಚ್ಚಾಗಿರುವುದರೊಂದಿಗೆ ಜನರು ಅದನ್ನು ಹೆಚ್ಚು ಹೆಚ್ಚು ಬಳಸಲಾರಂಭಿಸಿದ್ದಾರೆ. ಈ ಡಿಜಿಟಲ್ ಪಾವತಿ ವ್ಯವಸ್ಥೆಗಳಲ್ಲಿ ಭೀಮ್, ಪೇಟಿಎಂ, ಫೋನ್‌ಪೇ, ಗೂಗಲ್ ಪೇ ಮತ್ತು ಆಯಾ ಬ್ಯಾಂಕ್‌ಗಳ ಯುಪಿಐ (ಸಾರ್ವತ್ರಿಕ ಪೇಮೆಂಟ್ ಇಂಟರ್ಫೇಸ್) ಆ್ಯಪ್‌ಗಳು ಜನಪ್ರಿಯವಾಗಿವೆ. ಹಣ ಪಾವತಿ ಅತ್ಯಂತ ಸುಲಭ, ಅಕೌಂಟ್ ಸಂಖ್ಯೆಯಾಗಲೀ, ಐಎಫ್ಎಸ್‌ಸಿ ಕೋಡ್ ಆಗಲೀ ಬೇಕಾಗಿಲ್ಲ, ಬೇರೆಯವರ ಖಾತೆಗೆ ನೇರವಾಗಿ ಹಣ ವರ್ಗಾಯಿಸಿಬಿಡಬಹುದು.

ಈ ಯುಪಿಐ ವ್ಯವಸ್ಥೆಯನ್ನು ಮುಂದಿಟ್ಟುಕೊಂಡು ಈಗ ಹೊಸದೊಂದು ಬ್ಯಾಂಕ್ ವಂಚನೆ ಪತ್ತೆಯಾಗಿದೆ. ಉದಾಹರಣೆ ಮೂಲಕ ಹೇಳುವುದಾದರೆ, ನೀವು ಏನನ್ನೋ ಮಾರಬೇಕೆಂದಿರುತ್ತೀರಿ (ಆನ್‌ಲೈನ್ ಅಥವಾ ಆಫ್‌ಲೈನ್). ಬೇರೊಬ್ಬರು ಖರೀದಿಗೆ ಮುಂದಾಗಿ, 15 ಸಾವಿರ ರೂ.ಗೆ ಡೀಲ್ ಪಕ್ಕಾ ಆಗುತ್ತದೆ. ಅವರೊಂದು ಎಸ್ಸೆಮ್ಮೆಸ್ ತೋರಿಸಿಯೋ ಅಥವಾ ಫಾರ್ವರ್ಡ್ ಮಾಡಿಯೋ ಹೇಳುತ್ತಾರೆ, ‘ಕ್ಷಮಿಸಿ, 15 ಬದಲು 25 ಸಾವಿರ ವರ್ಗಾಯಿಸಿಬಿಟ್ಟೆ. ತಕ್ಷಣ ನಿಮ್ಮ ಪೇಟಿಎಂ ಖಾತೆ ಮೂಲಕ 10 ಸಾವಿರ ವಾಪಸ್ ಮಾಡಿಬಿಡಿ’ ಅಂತ. ಅಂಥ ಆ್ಯಪ್ ಇಲ್ಲವೆಂದು ಹೇಳಿದರೆ, ಹೇಗೆ ಬಳಸುವುದು ಅಂತ ಅವರೇ ತಿಳಿಹೇಳಿ ಅವಸರಿಸಬಹುದು! ಅಂತೂ ನೀವು ಹತ್ತು ಸಾವಿರ ಅವರ ಖಾತೆಗೆ ‘ವಾಪಸ್’ ಮಾಡಿರುತ್ತೀರಿ. ವಾಸ್ತವವೆಂದರೆ, ಅವರು ನಿಮ್ಮ ಖಾತೆಗೆ 25 ಸಾವಿರ ವರ್ಗಾಯಿಸಿರುವುದೇ ಇಲ್ಲ. ಒಂದು ನಕಲಿ ಎಸ್ಸೆಮ್ಮೆಸ್ ತೋರಿಸಿ ಅವರು ವಂಚಿಸಿರುತ್ತಾರೆ. ತಕ್ಷಣಕ್ಕೆ ಸಿಕ್ಕಿ ಬೀಳುವುದರಿಂದ ತಪ್ಪಿಸಲು, ವಂಚಕರು ಬ್ಯಾಂಕ್ ರಜಾದಿನಗಳಲ್ಲೋ ಅಥವಾ ಬ್ಯಾಂಕ್ ತೆರೆಯುವ ಮುನ್ನವೋ ಚಾಕಚಕ್ಯತೆ ಮೆರೆಯುತ್ತಾರೆಂಬುದು ನೆನಪಿರಲಿ. ಈ ಕುರಿತು ಎಚ್ಚರವಿರಿ.

ತಂತ್ರಜ್ಞಾನಕ್ಕೆ ಹೊಸದಾಗಿ ತೆರೆದುಕೊಂಡಿರುವ ಜನ ಸಾಮಾನ್ಯರು ಹಾಗೂ ಕೆಲವು ಪರಿಣತರು ಕೂಡ, ಹೇಗೆ ಸುರಕ್ಷಿತವಾಗಿರಬಹುದು? ಇಲ್ಲಿವೆ ಕೆಲವು ಟಿಪ್ಸ್.

* ಬ್ಯಾಂಕ್ ಆ್ಯಪ್ ಮೊದಲ ಬಾರಿ ಇನ್‌ಸ್ಟಾಲ್ ಮಾಡಿಕೊಳ್ಳುವಾಗ, ಸಂದೇಹವಿದ್ದರೆ ಬ್ಯಾಂಕಿಗೆ ಹೋಗಿ, ಅಲ್ಲಿನ ಸಿಬ್ಬಂದಿಯ ಸಲಹೆ ಪಡೆದ ಬಳಿಕವೇ ಇನ್‌ಸ್ಟಾಲ್ ಮಾಡಿಕೊಳ್ಳುವುದು ಸೂಕ್ತ.
* ಯಾರೊಂದಿಗೆ ಕೂಡ ಬ್ಯಾಂಕ್ ಖಾತೆ ಸಂಖ್ಯೆ, ಪಿನ್ ನಂಬರ್, ಪಾಸ್‌ವರ್ಡ್ ಅಥವಾ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ಹಂಚಿಕೊಳ್ಳಲು ಹೋಗಬೇಡಿ.
* ಖಾತೆಯನ್ನು ಆಗಾಗ್ಗೆ ಪರಿಶೀಲಿಸುತ್ತಿರಿ ಮತ್ತು ಪಾಸ್‌ವರ್ಡ್ ಕೂಡ ಪದೇ ಪದೇ ಬದಲಾಯಿಸುವುದು ಸುರಕ್ಷತೆಯ ದೃಷ್ಟಿಯಿಂದ ಸೂಕ್ತ.
* ಬ್ಯಾಂಕಿನ ಲಿಂಕ್ ಹೆಸರಲ್ಲಿ ಬರುವ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಗೋಜಿಗೆ ಹೋಗಬೇಡಿ. ನೀವಾಗಿಯೇ ಬ್ಯಾಂಕ್ ಯುಆರ್‌ಎಲ್ ಟೈಪ್ ಮಾಡಿ ಮುಂದುವರಿಸಿ.
* ಸಾರ್ವಜನಿಕ ಕಂಪ್ಯೂಟರುಗಳಲ್ಲಿ (ಉದಾ. ಸೈಬರ್ ಕೆಫೆಗಳಲ್ಲಿ) ಆನ್‌ಲೈನ್ ಬ್ಯಾಂಕಿಂಗ್ ವಹಿವಾಟು ನಡೆಸಬೇಡಿ.

ನೆನಪಿಡಿ: ಗೂಗಲ್ ಪ್ಲೇ ಸ್ಟೋರ್‌ನಲ್ಲಿ ‘ಫೇಕ್ ಬ್ಯಾಂಕ್ ಅಕೌಂಟ್’ ಎಂಬ ಒಂದು ಆ್ಯಪ್ ಇದೆ! ಇದು ವಂಚನೆ ಮಾಡುವುದಿಲ್ಲ. ನಿಮ್ಮ ಸ್ನೇಹಿತರೆದುರು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಇಷ್ಟಿದೆ ಅಂತ ತೋರಿಸಿಕೊಳ್ಳಲು ಇರುವ ಆ್ಯಪ್ ಇದು. ಇದಿದ್ದರೆ ನೀವು ಕೋಟ್ಯಧಿಪತಿ ಅಂತ ಎದೆತಟ್ಟಿಕೊಂಡು ಹೇಳಿಕೊಳ್ಳಬಹುದು!

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಜಯ ಕರ್ನಾಟಕ ಅಂಕಣ, 05 ನವೆಂಬರ್ 2018

LEAVE A REPLY

Please enter your comment!
Please enter your name here