ಮಕ್ಕಳಾಟವಿಲ್ಲದ ಮಕ್ಕಳ ದಿನಾಚರಣೆ

ಪುಟಾಣಿ ಮಕ್ಕಳ ಆಟವನ್ನು ಕಣ್ತುಂಬಾ ನೋಡುತ್ತಾ, ಅವುಗಳ ಚೇಷ್ಟೆ, ಮುದ್ದು ಮಾತುಗಳಿಗೆ ಸ್ಪಂದಿಸುತ್ತಾ, ಅದರ ಜತೆ ಜತೆಗೇ ನಮ್ಮ ಜೀವನವನ್ನೂ ಸಿಹಿಸಿಹಿಯಾಗಿಸಿಕೊಳ್ಳುವ ಆ ದಿನಗಳು ಎಲ್ಲಿ ಹೋದವು? ಬಹುಶಃ ನಾವು ನಮ್ಮ ಮಕ್ಕಳು ಆಟವಾಡುತ್ತಿರುವುದನ್ನು ನೋಡುವುದನ್ನೇ ಮರೆತುಬಿಟ್ಟಂತಿದ್ದೇವೆ. ಮಕ್ಕಳ ಆಟವನ್ನೊಂದು ಬಿಟ್ಟು ಬೇರೆಲ್ಲಾ ನಮಗೆ ಬೇಕಿದೆ, ಟೀವಿ ಧಾರಾವಾಹಿಗಳು, ಕ್ರಿಕೆಟ್ ಪಂದ್ಯ, ಸಿನೆಮಾ… ಇತ್ಯಾದಿಗಳೆಲ್ಲವನ್ನೂ ನಾವು ತಪ್ಪದೆ ನೋಡುತ್ತೇವೆ. ಆದರೆ ಮಕ್ಕಳಾಟ, ಮಕ್ಕಳೊಂದಿಗೆ ಮಕ್ಕಳಾಗಿ ಆಡಲು ಸಮಯವಿಲ್ಲವೇಕೆ?

“ಮಕ್ಕಳಾಟವು ಚಂದ ಮತ್ತೆ ಯೌವನ ಚಂದ, ಮುಪ್ಪಿನಲಿ ಚಂದ ನರೆಗಡ್ಡ ಜಗದೊಳಗೆ, ಎತ್ತ ನೋಡಿದರೂ ನಗು ಚಂದ” ಎಂಬೋ ಜಾನಪದ ಹಾಡಿನ ಸಾಲುಗಳು ಆಯಾ ಕಾಲಕ್ಕೆ ಯಾವುದು ಯಾವುದು ಚಂದ ಎಂಬುದರ ಮಹತ್ವವನ್ನು ತಿಳಿಸುತ್ತವೆ. ಅಂತೆಯೇ ಮಕ್ಕಳು ಏನು ಮಾಡಿದರೂ ಚಂದವೇ. ಮಕ್ಕಳಾಟ ಎನ್ನುವುದು ಇದಕ್ಕೇ ಅಲ್ಲವೇ? ಜಗತ್ತಿನ ಆಗು ಹೋಗುಗಳು, ಅನ್ಯಾಯ ಅಕ್ರಮಗಳು, ಅಸತ್ಯ, ವಂಚನೆ ಇತ್ಯಾದಿ ಏನೂ ಅರಿಯದ ಮುಗ್ಧ ಮನಸ್ಸು ಅವುಗಳದು. ಬಾಲ್ಯದಲ್ಲಿ ಆಟ ಆಡದೆ, ದೊಡ್ಡವರಾದ ಮೇಲೆ ಈ ಮಕ್ಕಳಾಟ ಮಾಡಿದರೆ ಖಂಡಿತಾ ಚಂದವಲ್ಲ. ಹೀಗಾಗಿ ಮಕ್ಕಳಿಗೆ ಮಕ್ಕಳಾಗಿರುವಾಗ ಸ್ವಾತಂತ್ರ್ಯ ಬೇಕಿದೆ.

ಕೆಟ್ಟದ್ದನ್ನು ಪಕ್ಕನೆ ತಮ್ಮದಾಗಿಸಿಕೊಳ್ಳುವ ವಿಚಾರ ಮನುಷ್ಯ ಸಹಜ ಗುಣ. ಹೆತ್ತವರು ನಮ್ಮ ಬೆಳವಣಿಗೆ ಬಗ್ಗೆ, ಅದು ಶಾರೀರಿಕವಿರಲಿ, ಮಾನಸಿಕವಿರಲಿ, ಗಮನ ಹರಿಸಿದ ಪರಿಣಾಮ ನಮಗಿಂದು ಒಳ್ಳೆಯದು ಯಾವುದು, ಕೆಟ್ಟದ್ಯಾವುದು ಎಂಬುದರ ವಿವೇಚನೆ ಮಾಡುವ ಶಕ್ತಿ ದೊರೆತಿದೆ. ಆದರೆ ಮಕ್ಕಳಿಗಿನ್ನೂ ಬುದ್ಧಿ ಬೆಳೆಯಬೇಕಲ್ವಾ… ಟೀವಿಯಲ್ಲಿ, ಚಲನಚಿತ್ರದಲ್ಲಿ, ಇತರ ಮಾಧ್ಯಮಗಳಲ್ಲಿ ಬರಬಹುದಾದ ಚಲನಚಿತ್ರಗಳು, ಧಾರಾವಾಹಿಗಳೇ ಮುಂತಾದ ಕಾರ್ಯಕ್ರಮಗಳಲ್ಲಿ ಕ್ರೌರ್ಯ, ವಂಚನೆ, ದ್ರೋಹ ಇತ್ಯಾದಿಗಳನ್ನು ಬಗೆಬಗೆಯಾಗಿ ವೈಭವೀಕರಿಸಲಾಗುತ್ತಿದೆ. ಇವುಗಳು ಖಂಡಿತವಾಗಿಯೂ ಮಕ್ಕಳ ಮನಸ್ಸನ್ನು ಸೆಳೆಯುತ್ತವೆ. ಇಂಥ ಸಂದರ್ಭಗಳಲ್ಲಿ ಮಕ್ಕಳ ಪೋಷಕರಾಗಿ ನಮಗೂ ಕರ್ತವ್ಯವಿದೆ. ಸೂಕ್ಷ್ಮ ಮನಸ್ಸಿನ ಅವುಗಳ ಮನಸ್ಸು ನೇತ್ಯಾತ್ಮಕ ವಿಚಾರಗಳತ್ತ ಹೊರಳದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಹಕ್ಕು ಮತ್ತು ಕರ್ತವ್ಯ – ಎರಡೂ ಆಗಿರುವ ಈ ಜವಾಬ್ದಾರಿಯನ್ನು ನಾವೆಷ್ಟು ಮಂದಿ ನಿಭಾಯಿಸುತ್ತಿದ್ದೇವೆ?

ಹೇಳಿ ಕೇಳಿ ಇದು ಅವಸರದ ಯುಗ. ಕೌಟುಂಬಿಕ ಸಂಬಂಧಗಳಿಗಿಂತಲೂ ಬಾಹ್ಯ ಸಂಬಂಧಗಳೇ ಹೆಚ್ಚು ಮಹತ್ವವಾಗಿಬಿಡುತ್ತಿರುವ ಕಾಲವಿದು. ಅವಿಭಕ್ತ ಕುಟುಂಬ ನೀಡುತ್ತಿದ್ದ ಸಂತೋಷ, ನೆಮ್ಮದಿ ಮತ್ತು ನಮ್ಮನ್ನು ನಾವು ಸಮಾಜಕ್ಕೆ ಒಡ್ಡಿಕೊಳ್ಳಲು ಬೇಕಿರುವ ಧೈರ್ಯದ ಪಾಠ/ಅವಕಾಶ… ಇವೆಲ್ಲಾ ಇಂದಿನ “ನಾನು-ನನ್ನದು” ಎಂಬಷ್ಟಕ್ಕೇ ಸೀಮಿತವಾದ ಕುಟುಂಬ ಪದ್ಧತಿಯಲ್ಲಿ ನಿರೀಕ್ಷಿಸುವುದೂ ಸಾಧ್ಯವಿಲ್ಲ. ಇಂತಿರುವಾಗ, ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸಲು ನಮಗೆ ಸಮಯವೆಲ್ಲಿದೆ?

ಮಕ್ಕಳ ಬಾಲ್ಯ ಕಳೆದು ಹೋಗುತ್ತಿರುವುದೆಲ್ಲಿ?
ಶಿಕ್ಷಣವೆಂಬುದು ಬಹುತೇಕ ವ್ಯಾಪಾರದ ಸೊತ್ತಾಗಿಬಿಟ್ಟಿದೆ. ಅತೀ ಹೆಚ್ಚು ಹೋಮ್ ವರ್ಕ್ ನೀಡುವ ಶಾಲೆಯೇ ಅತ್ಯಂತ ಹೆಚ್ಚು ಹೆಸರು ಪಡೆಯುತ್ತಿದೆ. ಹೋಮ್ ವರ್ಕ್ ಕೊಡದಿದ್ದರೆ, ಅದೊಂದು ಶಾಲೆಯೇ ಅಲ್ಲ, “ಅದು ಸರಕಾರಿ ಶಾಲೆಯಂತೆ” ಎಂಬಂತಹ ತಾತ್ಸಾರ ಮನೋಭಾವ ಬೆಳೆದುಬಿಟ್ಟಿದೆ. ಈ ಹೋಮ್ ವರ್ಕ್ ಹೊರೆ, ಪುಸ್ತಕಗಳ ಯಮಭಾರ, ಶಾಲೆ ಬಿಟ್ಟು ಮನೆಗೆ ಬಂದರೆ, ಟ್ಯೂಷನ್‌ಗೆ ಹೋಗು, ಸಂಗೀತ ಕ್ಲಾಸಿಗೆ ನಡೆ, ಭರತ ನಾಟ್ಯ ತರಗತಿಗೆ, ಕರಾಟೆ, ಕ್ರಿಕೆಟ್, ಫುಟ್ಬಾಲ್ ಇತ್ಯಾದಿ ತರಬೇತಿಗೆ ಓಡು… ಹೀಗೆ ಮಕ್ಕಳನ್ನು “ಸರ್ವಜ್ಞ”ರನ್ನಾಗಿ, ಸಕಲ ಕಲಾ ವಲ್ಲಭರನ್ನಾಗಿ ಮಾಡುವ, ಆ ಮೂಲಕ ಸಮಾಜದಲ್ಲಿ, ಸಮುದಾಯದಲ್ಲಿ “ಪ್ರತಿಷ್ಠಿತ” ವ್ಯಕ್ತಿಗಳಾಗುವ ಹೆತ್ತವರ ಅತಿ-ಆಸೆಯ ಕಾರಣದಿಂದಾಗಿ ಮಕ್ಕಳ ಬಾಲ್ಯ ಮುರುಟಿ ಹೋಗುತ್ತಿದೆ.

ಆಡುತ್ತಾಡುತ್ತಾ ಜೀವನಮುಖಿ ವಿಚಾರಗಳನ್ನು ಮನದಲ್ಲಿ ತುಂಬಿಕೊಂಡು, ಜೀವನವೆಂಬ ಶಿಕ್ಷಣವನ್ನೂ ಕಲಿಯಬೇಕಿರುವ ಮಕ್ಕಳ ಮನಸ್ಸಿಂದು ಜರ್ಝರಿತವಾಗಿಬಿಡುತ್ತಿದೆ. ಕಾಸ್ಮೋಪಾಲಿಟನ್ ಸಂಸ್ಕೃತಿಯು ಈ ಎಳೆಯರ ಬಾಲ್ಯವನ್ನೇ ಕಸಿದುಕೊಂಡಿದೆ ಎಂದರೂ ತಪ್ಪಲ್ಲ. ಅಮ್ಮನ ಮಡಿಲಲ್ಲಿ ತಲೆಯಿಟ್ಟು… “ಅಮ್ಮಾ ಒಂದಿನಾನಾದ್ರೂ ನಂಗೆ ನಿನ್ನ ಕೈತುತ್ತು ಕೊಡಮ್ಮಾ” ಅಂತ ಪ್ರೀತಿಪೂರ್ವಕವಾಗಿ, ಆಸೆಯಿಂದ, ಮಮತೆಯಿಂದ, ವಾಂಛೆಯಿಂದ ಕೇಳುವ ಮಕ್ಕಳಿಗೆ… ಹೋಗಾಚೆ… ನಂಗೆ ಟೈಮಿಲ್ಲ ಎಂಬ ಸಿಡುಕಿನ ಉತ್ತರ ದೊರೆತರೆ ಹೇಗಿರುತ್ತೆ ಹೇಳಿ?

ಅಥವಾ, ಅಮ್ಮಾ… ಅಪ್ಪ ಯಾವಾಗ ಬರ್ತಾರಮ್ಮ, ನಾನೀ ಬಾರಿ ಕ್ಲಾಸಿನಲ್ಲಿ ಫಸ್ಟ್ ಬಂದಿದ್ದು ಅವ್ರಿಗೆ ಹೇಳ್ಬೇಕೂ ಅಂತ ಮನದೊಳಗೆ ಆತಂಕವನ್ನಿಟ್ಟುಕೊಂಡೇ ಕೇಳುವ ಮಗುವಿಗೆ, “ಅವ್ರೇನು… ಅವರಿಗೆ ಆಫೀಸಾಯ್ತು, ಅವ್ರ ಕೆಲ್ಸ ಆಯ್ತು… ಮನೆಗೇ ರಾತೋ ರಾತ್ರಿ ಬರ್ತಾರೆ, ಬೆಳಕು ಹರಿಯೋ ಮುಂಚೆನೇ ಹೊರಟ್ಬಿಡ್ತಾರೆ” ಎಂಬ ಉತ್ತರ ಬರುವಾಗ ಆ ಮಗುವಿನ ಮನಸ್ಸು ಎಷ್ಟೊಂದು ನೊಂದುಕೊಂಡಿರಬಹುದು ಎಂಬುದನ್ನು ಆಲೋಚಿಸಿದವರಿದ್ದಾರೆಯೇ? ಇಲ್ಲ… ಪುರುಸೊತ್ತಿಲ್ಲ… ಇಂಥದ್ದನ್ನೆಲ್ಲಾ ಯೋಚಿಸಲು ಪುರುಸೊತ್ತೆಲ್ಲಿದೆ ಎಂಬುದೇ ಹೆಚ್ಚಿನವರ ಬಾಯಿಯಿಂದ ಬರಬಹುದಾದ ಉತ್ತರ.

ಹಾಗಂತ, ಪಾಶ್ಚಾತ್ಯ ಸಂಸ್ಕೃತಿಗೆ ಒಗ್ಗಿಕೊಳ್ಳುತ್ತಿರುವ ಭಾರತೀಯ ಮನಸ್ಸುಗಳು ಸಂಪೂರ್ಣವಾಗಿ ಅತ್ತ ಕಡೆ ವಾಲಿದೆ ಎಂದರ್ಥವಲ್ಲ. ನಗರೀಕರಣ ಎಲ್ಲಿ ಅಧಿಕವಾಗಿದೆಯೋ ಅಲ್ಲೆಲ್ಲಾ ಈ ವಿದ್ಯಮಾನಗಳನ್ನು, ವೈಪರೀತ್ಯಗಳನ್ನು ಕಾಣಬಹುದು. ಮುದುಡಿ ಹೋಗುವುದು ಮಾತ್ರ ಅದೇ ಏನೂ ಅರಿಯದ ಮುಗ್ಧ ಕಂದಮ್ಮಗಳ ಮನಸ್ಸು. ಆದರೆ, ಅದೇ ಗ್ರಾಮೀಣ ಪ್ರದೇಶಕ್ಕೆ ಹೋಗಿ… ಅಲ್ಲಿ ಹಿರಿಯರ ಮನಸ್ಸೇ ಮಕ್ಕಳಷ್ಟೇ ಮೃದು ಮತ್ತು ಮುಗ್ಧ. ಮಾನವೀಯ ಮೌಲ್ಯಗಳಿನ್ನೂ ಜಾಗೃತಾವಸ್ಥೆಯಲ್ಲೇ ಇವೆ. ಕಿತ್ತು ತಿನ್ನುವ ಬಡತನವಿದ್ದರೂ, ಮಾನವೀಯ ಪ್ರೇಮಕ್ಕೆ ಮತ್ತು ಮಕ್ಕಳಿಗೆ ದೊರೆಯುವ ಪ್ರೀತಿಗೆ, ಜೀವನ ಪ್ರೀತಿಯ ರೀತಿಗೆ ಅಲ್ಲಿ ಬಡತನವಿರುವುದಿಲ್ಲ.

ಹಾಲ್ಬೇಡಿ ಅತ್ತಾನ ಕೋಲ್ಬೇಡಿ ಕುಣುದಾನ
ಮೊಸರ್ಬೇಡಿ ಕೆಸರಾ ತುಳುದಾನ
ಕಂದನ ಕುಸುರಾದ ಗೆಜ್ಜೆ ಕೆಸರಾಯ್ತು

ಅಂತಾನೇ ಗ್ರಾಮೀಣ ಜನರು ಮಕ್ಕಳನ್ನು ನೋಡಿಕೊಳ್ಳುತ್ತಾರೆ.

ಮಗ ಓದಿ ಬೆಳೆದು ದೊಡ್ಡವನಾಗಿ, ಕೈ ತುಂಬಾ ಸಂಬಳ ಬರೋ ಕೆಲಸದೊಂದಿಗೆ ಪಟ್ಟಣ ಸೇರಿದ ಬಳಿಕವೂ

ಎಲ್ಲಾದರು ಇರಲವ್ವ ಹುಲ್ಲಾಗಿ ಬೆಳೆಯಾಲಿ
ನೆಲ್ಲಿ ಬುಡ್ಯಾಗಿ ಚಿಗಿಯಾಲಿ
ನನ ಕಂದ ಜಯವಂತನಾಗಿ ಮೆರೆಯಾಲಿ

ಎಂದೇ ಪ್ರತಿಯೊಂದು ತಾಯಿಯ ಮನಸ್ಸೂ ಹಾರೈಸುತ್ತದೆ. ಆದರೆ ಪಟ್ಟಣ ಸೇರಿದ ಬಳಿಕ ಮಾನವೀಯ ಮೌಲ್ಯಗಳು ಅದ್ಯಾವ ಗಾಳಿಯ ನಡುವೆ ತೂರಿ ಹೋಗುತ್ತವೆಯೋ? ಮಕ್ಕಳು ದೊಡ್ಡವಾಗುತ್ತಾರೆ, ಅವರ ಮನಸ್ಸೂ ಬದಲಾಗುತ್ತದೆ.

ಈ ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಸಾರ್ವತ್ರಿಕ ಅಲ್ಲ. ಇದಕ್ಕೆ ಅಪವಾದವಾಗಿರುವ ಅದೆಷ್ಟೋ ಕುಟುಂಬಗಳು, ಮಾನವೀಯ ಮನಸ್ಸುಗಳು ಇವೆ. ಮತ್ತು ಇರಲೇ ಬೇಕು. ಇಳೆಯೊಳಿರುವ ಮಕ್ಕಳೆಲ್ಲ ದೇವರಂತೆ ಎಂದು ನಮ್ಮದೇ ಮಾಧ್ಯಮಗಳು ನಮಗೆ ಕಲಿಸಿಕೊಟ್ಟಿವೆ. ಆ ಮಕ್ಕಳನ್ನು ಮಕ್ಕಳಾಗಿರಲು ಬಿಡಬೇಕು. ಮಗುಗಳ ಮಾಣಿಕ್ಯವನ್ನು ಜತನದಿಂದ ಕಾಯ್ದುಕೊಂಡು, ಅವುಗಳ ಮುಗ್ಧ ಮನಸ್ಸಿನಲ್ಲಿ ಸನ್ನಡತೆ, ಸನ್ಮಾರ್ಗದ ಬೀಜ ಬಿತ್ತಿ ಅವರನ್ನು ನಿಜ ಅರ್ಥದಲ್ಲಿ ಸತ್ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ನಮ್ಮದು. ಮಗುಗಳ ಮನಸ್ಸು ಹಸೀ ಮಣ್ಣು. ಅದು ಯಾವ ರೂಪಕ್ಕಾದರೂ ತಿರುಗಬಹುದು. ಅದನ್ನು ತೀಡಿ ಸರಿಯಾದ ರೂಪ ಕೊಡಬೇಕಾಗಿರುವುದು ನಮ್ಮ ಕರ್ತವ್ಯ. ಹಾಗಿದ್ದಾಗ ಮಕ್ಕಳಿಗೆ ಎಂದೂ ಮರೆಯದ ಬಾಲ್ಯವೊಂದು ರೂಪುಗೊಳ್ಳಬಹುದು. ಹಾಗಾಗಲಿ. ಚಾಚಾ ನೆಹರೂ ಅವರು ಮಕ್ಕಳ ಮೇಲಿಟ್ಟಿದ್ದ ಪ್ರೀತಿಗೊಂದು ಬೆಲೆ ಬರಲಿ. ಮಕ್ಕಳಿಗೆ ಮಕ್ಕಳಾಟದ ಪ್ರೀತಿ ಲಭಿಸಲಿ, ಬಾಲ್ಯದ ಸವಿನೆನಪುಗಳು ದೊಡ್ಡವರಾದ ಬಳಿಕ ಕಾಡುವಂತಾಗಲಿ…

ನೀವೇನಂತೀರಿ?

(ಇದು ವೆಬ್‌ದುನಿಯಾಕ್ಕಾಗಿ ಸಿದ್ಧಪಡಿಸಿದ ಲೇಖನ)

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ಒಂದೇ ಫೋನ್‌ನಲ್ಲಿ ಎರಡು WhatsApp ಖಾತೆ ಬಳಸುವುದು ಹೇಗೆ?

ಕಳೆದ ಅಕ್ಟೋಬರ್ 19ರಂದು ಮೆಟಾ ಒಡೆತನದ WhatsApp ಸಂಸ್ಥೆಯೇ ತನ್ನ ಆ್ಯಪ್‌ಗೆ ಹೊಸ ಅಪ್‌ಡೇಟ್ ನೀಡಿದ್ದು, ಎರಡು ವಾಟ್ಸ್ಆ್ಯಪ್ ಖಾತೆಗಳನ್ನು…

6 months ago

AI Images: Text ಬಳಸಿ ಚಿತ್ರ ತಯಾರಿಸುವುದು ಹೇಗೆ?

AI Images: ನಮ್ಮ ಕಲ್ಪನೆಯನ್ನು ಎಐ ಎಂಜಿನ್‌ಗೆ ಟೆಕ್ಸ್ಟ್ (ಪಠ್ಯ) ಮೂಲಕ ಊಡಿಸಿದರೆ ಸಾಕು, ಕ್ಷಣ ಮಾತ್ರದಲ್ಲಿ ನೀವಂದುಕೊಂಡ ಚಿತ್ರವೊಂದು…

6 months ago

ಬ್ರಾಡ್‌ಬ್ಯಾಂಡ್ ವೇಗ: ಎಂಬಿಪಿಎಸ್ ಎಂದರೆ ಏನು? ನೀವು ಯಾಮಾರುವುದು ಎಲ್ಲಿ?

ಹಾರ್ಡ್ ಡ್ರೈವ್ ಅಥವಾ ಸ್ಟೋರೇಜ್ ಡ್ರೈವ್‌ಗಳಲ್ಲಿರುವ ಫೈಲ್‌ಗಳ ವಿನಿಮಯದ ಸಂದರ್ಭದಲ್ಲಿ ಬಳಸುವುದು ಮೆಗಾಬೈಟ್ಸ್ ಎಂಬ ಪ್ರಮಾಣವನ್ನು. ಇಂಟರ್ನೆಟ್ ವೇಗವನ್ನು ಅಳೆಯುವುದು…

7 months ago

Apple iPhone 15 Plus Review: ಪ್ರೊ ಮಾದರಿಗಳ ವೈಶಿಷ್ಟ್ಯವಿರುವ ಐಫೋನ್ 15 ಪ್ಲಸ್

Apple iPhone 15 Plus Review: ಲೈಟ್ನಿಂಗ್ ಪೋರ್ಟ್ ಬದಲು ಟೈಪ್ ಸಿ ಚಾರ್ಜಿಂಗ್ ಪೋರ್ಟ್, ಡೈನಮಿಕ್ ಐಲೆಂಡ್, ಹೊಸ…

7 months ago

Type in Kannada: ಐಫೋನ್, ಆಂಡ್ರಾಯ್ಡ್ ಫೋನ್‌ಗಳಲ್ಲಿ ಕನ್ನಡ ಟೈಪಿಂಗ್ ಈಗ ಮತ್ತಷ್ಟು ಸುಲಭ

Type in Kannada: ಗೂಗಲ್‌ನ ಆಂಡ್ರಾಯ್ಡ್ ಹಾಗೂ ಆ್ಯಪಲ್‌ನ ಐಫೋನ್ ಸ್ಮಾರ್ಟ್‌ಫೋನ್‌ಗಳಲ್ಲಿ ಕನ್ನಡ ಟೈಪಿಂಗ್ ಸುಲಭವಾಗಿಸುವ ಸಾಕಷ್ಟು ಖಾಸಗಿ ಕೀಬೋರ್ಡ್…

8 months ago

iPhone 15 Pro Max Review: ಗೇಮರ್‌ಗಳಿಗೆ ಹಬ್ಬ – ಆ್ಯಪಲ್‌ನ ಶಕ್ತಿಶಾಲಿ, ಐಷಾರಾಮಿ ಸಾಧನ

iPhone 15 Pro Max Review: ವಿನೂತನವಾದ ಟೈಟಾನಿಯಂ ಚೌಕಟ್ಟು ಐಷಾರಾಮದ ಅನುಭವ. ಲೈಟ್ನಿಂಗ್ ಪೋರ್ಟ್ ಬದಲು ಯುಎಸ್‌ಬಿ ಸಿ…

8 months ago