Fraud Alert | Covid-19 Vaccine ಹೆಸರಲ್ಲಿ ವಂಚನೆ: ಹಿರಿಯರನ್ನು ರಕ್ಷಿಸಿ

0
475

ಕಳೆದ ವರ್ಷವಿಡೀ ಎಲ್ಲರನ್ನೂ ಕಾಡಿ ಮನೆಯೊಳಗೆ ಕೂರುವಂತೆ ಮಾಡಿದ ಮತ್ತು ಸರಿಯಾಗಿ ಉಸಿರೆತ್ತದಂತೆ ಮಾಡಿದ ಕೊರೊನಾ ವೈರಸ್ ತಂದಿಟ್ಟ ಸಮಸ್ಯೆಗಳು ಅಷ್ಟಿಷ್ಟಲ್ಲ. ಈಗಂತೂ, ಅಬ್ಬಾ ಈ ಸಾಂಕ್ರಾಮಿಕ ಮಹಾಮಾರಿಗೆ ಔಷಧಿ ಸಿಕ್ಕರೆ ಸಾಕು ಎಂದುಕೊಂಡಿದ್ದವರೆಲ್ಲರೂ, ಕೋವಿಡ್-19 ಕಾಯಿಲೆಗೆ ಲಸಿಕೆ ಬಂದಿದೆ ಎಂದು ನಿಟ್ಟುಸಿರುಬಿಟ್ಟಿದ್ದಾರೆ.

ಆದರೆ, ಈ ನಿಟ್ಟುಸಿರು ಅವಸರಕ್ಕೆ ಕಾರಣವಾಗಿ, ‘ಒಮ್ಮೆ ಲಸಿಕೆ ಪಡೆದುಕೊಳ್ಳೋಣ, ಹಿಂದಿನಂತೆ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳೋಣ’ ಎಂಬುದು ಎಲ್ಲರ ಧಾವಂತ. ಈ ತುಡಿತವನ್ನೇ ಬಂಡವಾಳ ಮಾಡಿಕೊಳ್ಳಲು ಹೊರಟಿದ್ದಾರೆ ಸೈಬರ್ ವಂಚಕರು. ಹೀಗಾಗಿ ಎಚ್ಚರಿಕೆ ವಹಿಸಿ.

ವಿಶೇಷವಾಗಿ ವೃದ್ಧರು ಈ ಸೈಬರ್ ವಂಚಕರ ಮೊದಲ ಟಾರ್ಗೆಟ್. ಅವರ ಮೊಬೈಲ್ ಫೋನ್‌ಗೆ ಕರೆ ಮಾಡಿ, ಲಸಿಕೆ ಪಡೆದುಕೊಳ್ಳಬೇಕಿದ್ದರೆ ನಿಮ್ಮ ಆಧಾರ್ ಸಂಖ್ಯೆ ಕೊಡಿ, ಬ್ಯಾಂಕ್ ಖಾತೆ ಸಂಖ್ಯೆ ಕೊಡಿ, ಮೊಬೈಲ್‌ಗೆ ಬಂದಿರುವ ಒಟಿಪಿ (ಏಕಕಾಲಿಕ ಪಾಸ್‌ವರ್ಡ್) ಕೊಡಿ ಅಂತೆಲ್ಲ ದುಂಬಾಲು ಬೀಳಲಾರಂಭಿಸಿದ್ದಾರೆ.

ಕಳೆದ ತಿಂಗಳಿಂದಲೇ ವಂಚಕರು ಸಕ್ರಿಯರಾಗಿದ್ದಾರೆ. ವೈದ್ಯರು ಮತ್ತು ಇತರ ಕೋವಿಡ್ ಯೋಧರಿಗಿಂತ ಮುಂಚಿತವಾಗಿ ಲಸಿಕೆ ಪಡೆಯಬೇಕಿದ್ದರೆ ಈಗಲೇ ನೋಂದಾಯಿಸಿ ಅಂತ ಭರವಸೆ ನೀಡಿದ ಫೋನ್ ಕರೆಗಳ ಬಗ್ಗೆ ಮಧ್ಯಪ್ರದೇಶ ರಾಜಧಾನಿ ಭೋಪಾಲದಲ್ಲಿ ಕನಿಷ್ಠ ಆರು ಪ್ರಕರಣಗಳು ದಾಖಲಾಗಿದ್ದವು.

ಸರ್ಕಾರದ ಏಜೆಂಟರೆಂಬ ಸೋಗಿನಲ್ಲಿ ಈ ವಂಚಕರು ಕರೆ ಮಾಡಿ, ಆದಷ್ಟು ಶೀಘ್ರವಾಗಿ ಎಲ್ಲರಿಗೂ ಲಸಿಕೆ ಪೂರೈಸುವ ಒತ್ತಡವಿದೆ, ಆಧಾರ್ ಸಂಖ್ಯೆ ಕೊಟ್ಟ ತಕ್ಷಣ ಬರುವ ಒಟಿಪಿಯನ್ನು ಶೇರ್ ಮಾಡಿ, ನೋಂದಾಯಿಸಿಕೊಳ್ಳಿ. ಇಲ್ಲವಾದಲ್ಲಿ ತಪ್ಪಿಹೋದರೆ ಸಮಸ್ಯೆಯಾಗಬಹುದು ಎಂಬ ಒತ್ತಡಪೂರ್ವಕ ಬೆದರಿಕೆಗಳಿಗೆ ಮಣಿದವರು ತಮ್ಮ ಬ್ಯಾಂಕ್ ಖಾತೆಯಿಂದ ಹಣ ಕಳೆದುಕೊಳ್ಳುವ ಸಾಧ್ಯತೆಗಳಿವೆ.

ಇನ್ನು ಕೆಲವರು ಲಸಿಕೆಗಾಗಿ ಮುಂಗಡ ಹಣ ಪಾವತಿಸುವಂತೆಯೂ ಕೇಳುವ ಸಾಧ್ಯತೆಗಳಿವೆ. ಕೆಲವು ಪ್ರಜ್ಞಾವಂತ ಜನರು ತಕ್ಷಣವೇ ಈ ಕುರಿತು ಪೊಲೀಸರಿಗೆ ದೂರು ನೀಡಿ ಜವಾಬ್ದಾರಿ ಮೆರೆದಿದ್ದಾರೆ.

ಜನರಿಂದಲೇ ಮುಂಗಡ ಬುಕಿಂಗ್ ನೆಪದಲ್ಲಿ ಹಣ ಪಾವತಿಸುವಂತೆ (ಆನ್‌ಲೈನ್ ನಗದು ವರ್ಗಾವಣೆ) ಕೇಳಿಕೊಳ್ಳಬಹುದು. ಇಲ್ಲವೇ, ಪುಸಲಾಯಿಸುವ ಮೂಲಕ ಬ್ಯಾಂಕ್ ಖಾತೆ ಸಂಖ್ಯೆ, ಫೋನ್ ಸಂಖ್ಯೆ, ಆಧಾರ್ ಸಂಖ್ಯೆ – ಇವುಗಳನ್ನು ಪಡೆದುಕೊಂಡು ಬ್ಯಾಂಕ್ ಖಾತೆಗೇ ನೇರವಾಗಿ ಕನ್ನ ಹಾಕಬಹುದು.

ಕೋವಿಡ್-19 ಕಾಡದಂತೆ ತಡೆಯುವ ಲಸಿಕೆ ಸಿದ್ಧವಾಗುತ್ತಿರುವ ಹೊತ್ತಿನಲ್ಲೇ ಅಂತರರಾಷ್ಟ್ರೀಯ ಪೊಲೀಸ್ ಜಾಲವಾಗಿರುವ ಇಂಟರ್‌ಪೋಲ್, ಈ ಕುರಿತ ಸುಳ್ಳು ಜಾಹೀರಾತು, ಲಸಿಕೆ ಕಳವು, ನಕಲಿ ಲಸಿಕೆ ಮುಂತಾದವುಗಳ ತಡೆಗೆ ತನ್ನ 194 ಸದಸ್ಯ ರಾಷ್ಟ್ರಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿತ್ತು. ಕೋವಿಡ್-19 ಪೀಡಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಕಲಿ ಚಿತ್ರ ತೋರಿಸಿ, ನೆರವು ನೀಡುವಂತೆ ಮನವಿ ಮಾಡುವ ವಂಚಕರೂ ಇರುತ್ತಾರೆ. ಈ ಬಗ್ಗೆಯೂ ಎಚ್ಚರಿಕೆ ವಹಿಸಬೇಕಿದೆ.

ಸುಶಿಕ್ಷಿತರೇ ಈ ಪರಿಯ ವಂಚನೆಗೆ ಬಲಿಯಾಗುತ್ತಿರುವ ಹಂತದಲ್ಲಿ, ನಮ್ಮ ಊರಲ್ಲಿರುವ ಮುಗ್ಧರಿಗೆ, ವಿಶೇಷವಾಗಿ ವಯೋವೃದ್ಧರಿಗೆ ಈ ಕುರಿತು ಅರಿವು ಮೂಡಿಸುವ ಕರ್ತವ್ಯ ನಮ್ಮೆಲ್ಲರದು. ಅಪರಿಚಿತರೊಂದಿಗೆ ಆಧಾರ್, ಒಟಿಪಿ, ಬ್ಯಾಂಕ್ ವಿವರ, ಪಾನ್ ಕಾರ್ಡ್ ವಿವರ ಹಂಚಿಕೊಳ್ಳಲೇಬಾರದು.

My Article Published in Prajavani in 13/14 Jan 2021

LEAVE A REPLY

Please enter your comment!
Please enter your name here