Samsung Galaxy Z Fold 4 Review: ಅಂಗೈಯಲ್ಲಿ ಕ್ಯಾಮೆರಾ – ಕಂಪ್ಯೂಟರ್

0
217

Samsung Galaxy Z Fold 4 Review: ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ವಿನೂತನ ಮತ್ತು ಆಧುನಿಕ ಆವಿಷ್ಕಾರಗಳ ಮಧ್ಯೆ ಗಮನ ಸೆಳೆಯುವುದೆಂದರೆ ಮಡಚುವ (ಫೋಲ್ಡಬಲ್) ಫೋನ್‌ಗಳು. ಸ್ಕ್ರೀನನ್ನೇ ಹೇಗೆ ಮಡಚಬಹುದು? ಅದಕ್ಕೆ ಹಾನಿಯಾಗುವುದಿಲ್ಲವೇ ಎಂಬ ಆತಂಕಗಳೆಲ್ಲ ದೂರವಾಗಿ ಕೆಲವು ಕಾಲವೇ ಕಳೆಯಿತು. ಈ ಹಂತದಲ್ಲಿ, ಸ್ಯಾಮ್‌ಸಂಗ್ ಕಂಪನಿಯು ಗ್ಯಾಲಕ್ಸಿ ಝಡ್ ಫೋಲ್ಡ್ ಸರಣಿಯಲ್ಲಿ ಹೊಚ್ಚ ಹೊಸ ಮಾದರಿಯನ್ನು ಭಾರತೀಯ ಮಾರುಕಟ್ಟೆಗಿಳಿಸಿದೆ. ಬಿಡುಗಡೆಗೆ ಮುನ್ನ ಪ್ರಜಾವಾಣಿಗೆ ರಿವ್ಯೂಗೆ ದೊರೆತ ಸ್ಯಾಮ್‌ಸಂಗ್ ಗ್ಯಾಲಕ್ಸಿ ಝಡ್ ಫೋಲ್ಡ್ 4 ಹೇಗಿದೆ? ಇಲ್ಲಿದೆ ಮಾಹಿತಿ.

ಮೊದಲ ನೋಟದಲ್ಲೇ ಗಮನ ಸೆಳೆಯುವ ಈ ಫೋನ್, ಐಷಾರಾಮದ ಮತ್ತು ಪ್ರತಿಷ್ಠೆಯ ಸಂಕೇತವೂ ಹೌದು. ಜೊತೆಗೆ, ಆಂಡ್ರಾಯ್ಡ್ ಫೋನ್‌ಗಳಲ್ಲೇ ಅತ್ಯುತ್ತಮವಾದ ಬಿಲ್ಡ್ ಗುಣಮಟ್ಟ, ಅಗಲವಾದ ಪರದೆ, ಮಡಚಿದರೆ ಜೇಬಿನೊಳಗೆ ಕೂರುವ ಈ ಅದ್ಭುತ ಫೋನ್, ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ತೂಕವನ್ನೂ ಹೊಂದಿದೆ. ಬಾಕ್ಸ್‌ನಲ್ಲಿ ಚಾರ್ಜಿಂಗ್ ಕೇಬಲ್ ಮತ್ತು ವಿವರಣಾ ಪತ್ರಗಳು ಮಾತ್ರ ಇದ್ದು, ಚಾರ್ಜರ್ ಅಥವಾ ಇಯರ್‌ಫೋನ್ ಇಲ್ಲ.

ವಿನ್ಯಾಸ
ಮಡಚಿದ್ದಾಗ ಸಾಮಾನ್ಯವಾದ, ಅಗಲ ಕಡಿಮೆಯ ಒಂದಿಷ್ಟು ಉದ್ದನೆಯ ಮತ್ತು ಗಟ್ಟಿಯಾದ ಫೋನ್ ಎಂಬಂತೆ ಭಾವನೆ ಬಂದರೂ, ತೆರೆದಾಗ ಅದರ ವೈಶಾಲ್ಯದ ಅರಿವಾಗುತ್ತದೆ. ಶಕ್ತಿಶಾಲಿ ಅಲ್ಯೂಮೀನಿಯಂ ಅಂಚುಗಳು, ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಸ್ಟೀರಿಯೋ ಸ್ಪೀಕರ್ ಗ್ರಿಲ್‌ಗಳು, ಕೆಳಭಾಗದಲ್ಲಿ ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಮತ್ತು ಮೈಕ್, ಎಡಭಾಗದಲ್ಲಿ ಸಿಮ್ ಕಾರ್ಡ್ ಟ್ರೇ ಹಾಗೂ ಬಲಭಾಗದಲ್ಲಿ ಪವರ್, ವಾಲ್ಯೂಮ್ ಬಟನ್‌ಗಳಿವೆ. ವಿಮರ್ಶೆಗೆ ದೊರೆತದ್ದು 12ಜಿಬಿ RAM ಹಾಗೂ 256ಜಿಬಿ ಸ್ಟೋರೇಜ್ ಸಾಮರ್ಥ್ಯದ ದೈತ್ಯ ಫೋನ್.

ಹಿಂಭಾಗದಲ್ಲಿ (ಮಡಚಿದಾಗ) ಮ್ಯಾಟ್ ಫಿನಿಶಿಂಗ್ ಇರುವ ಗಾಜಿನ ಪ್ಯಾನೆಲ್‌ನಲ್ಲಿ ತ್ರಿವಳಿ ಕ್ಯಾಮೆರಾಗಳು ಮತ್ತು ಫ್ಲ್ಯಾಶ್ ಇದೆ. ಮಡಚಿರುವಾಗ ಮುಂಭಾಗದಲ್ಲಿ ಮತ್ತು ತೆರೆದಾಗ ಕೇಂದ್ರಭಾಗದಲ್ಲಿ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ಲಸ್ – ಮಾದರಿಯ ಗಾಜಿನ ಪ್ಯಾನೆಲ್‌ಗಳಿದ್ದು, ಪ್ರತ್ಯೇಕವಾಗಿ ಎರಡು ಸೆಲ್ಫೀ ಕ್ಯಾಮೆರಾಗಳಿವೆ. ಐಪಿಎಕ್ಸ್8 ಜಲನಿರೋಧಕ ರೇಟಿಂಗ್ ಇರುವುದರಿಂದ, ಮಳೆಗಾಲದಲ್ಲಿ ನೀರಿನ ಹನಿಗಳಿಂದ ರಕ್ಷಣೆಯಿದೆ. ಇದು ಜಲನಿರೋಧಕತೆ ಇರುವ ಮಡಚುವ ಫೋನ್‌ಗಳಲ್ಲಿ ಇದೇ ಪ್ರಥಮ ಸಾಧನ ಎಂದು ಕಂಪನಿ ಹೇಳಿಕೊಂಡಿದೆ. ಮಡಚಲು ಅಥವಾ ತೆರೆಯಲು ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಹಿಂಜ್ (ಬಿಜಾಗರಿ) ರೂಪುಗೊಂಡಿದ್ದು, ಅದರ ಹಿಂಭಾಗದಲ್ಲಿ ಸ್ಯಾಮ್‌ಸಂಗ್‌ನ ಲೋಗೋ ಆಕರ್ಷಕವಾಗಿದೆ.

ಡಿಸ್‌ಪ್ಲೇಗಳು
ಮಡಚಿರುವಾಗ 6.2 ಇಂಚು ಅಮೊಲೆಡ್ 120Hz ಡಿಸ್‌ಪ್ಲೇ, ಅತ್ಯುತ್ತಮವಾದ ವೀಕ್ಷಣೆಯನ್ನು ಸಾಧ್ಯವಾಗಿಸುತ್ತದೆ. ಬೆಝೆಲ್ (ಸುತ್ತಲಿರುವ ಖಾಲಿ ಜಾಗ) ತೀರಾ ಕಡಿಮೆಯಿದ್ದು, ಮುಚ್ಚಿದಾಗ ಕೆಳಭಾಗದಲ್ಲಿ, ತೆರೆದಾಗ ಎಡ-ಬಲಗಳಲ್ಲಿ ಒಂದಿಷ್ಟು ಬೆಝೆಲ್ ಗೋಚರಿಸುತ್ತದೆ.

ತೆರೆದಾಗ 7.6 ಇಂಚಿನ ಡಿಸ್‌ಪ್ಲೇ ಗೋಚರಿಸುತ್ತದೆ. ಎರಡೂ ಡಿಸ್‌ಪ್ಲೇಗಳಲ್ಲಿ ಕಂಡೂ ಕಾಣದಂತಿರುವ ಸೆಲ್ಫೀ ಕ್ಯಾಮೆರಾಗಳಿವೆ. ವರ್ಣವೈವಿಧ್ಯ, ಬೆಳಕಿನ ಪ್ರಖರತೆ ಎಲ್ಲವೂ ಅಚ್ಚುಕಟ್ಟಾಗಿದ್ದು, ಚಿತ್ರಗಳು, ವಿಡಿಯೊಗಳ ವೀಕ್ಷಣೆ ಕಣ್ಣಿಗೆ ಹಬ್ಬ.

ಕ್ಯಾಮೆರಾಗಳು
ತೆರೆದಾಗ ವಿಶಾಲವಾದ ಡಿಸ್‌ಪ್ಲೇ ಒಳಗಿರುವ ಕ್ಯಾಮೆರಾ 4 ಮೆಗಾಪಿಕ್ಸೆಲ್ ಸಾಮರ್ಥ್ಯದ್ದಾಗಿದ್ದರೂ, ಸೆಲ್ಫೀ ಚಿತ್ರಗಳು ಸ್ಫುಟವಾಗಿ ಗೋಚರಿಸುತ್ತವೆ. ಉತ್ತಮ ಸಹಜ ಬೆಳಕಿರುವಲ್ಲಂತೂ ಚಿತ್ರಗಳ ಸ್ಪಷ್ಟತೆ ಇನ್ನೂ ಹೆಚ್ಚು. ಇನ್ನು ಮುಚ್ಚಿರುವಾಗಿನ ಸೆಲ್ಫೀ ಕ್ಯಾಮೆರಾದ ಲೆನ್ಸ್ (ಕವರ್ ಕ್ಯಾಮೆರಾ) ಸಾಮರ್ಥ್ಯ 10 ಮೆಗಾಪಿಕ್ಸೆಲ್.

ಮಳೆಯಿದ್ದ ರಾತ್ರಿ ಬೆಂಗಳೂರಿನ ಎಂ.ಜಿ.ರೋಡ್ ಸಮೀಪ ತೆಗೆದ ಚಿತ್ರ

ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಸಾಮರ್ಥ್ಯದ ವೈಡ್ ಆ್ಯಂಗಲ್ ಪ್ರಧಾನ ಸೆನ್ಸರ್, 12MP ಅಲ್ಟ್ರಾ-ವೈಡ್ ಹಾಗೂ 10 ಮೆಗಾಪಿಕ್ಸೆಲ್ ಸಾಮರ್ಥ್ಯದ ಟೆಲಿಫೋಟೋ ಸೆನ್ಸರ್ ಇದೆ. 3x ಆಪ್ಟಿಕಲ್ ಝೂಮ್ ಸಾಮರ್ಥ್ಯವೂ ಇದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (ಒಐಎಸ್) ಹಾಗೂ ವಿಡಿಯೊ ಸ್ಟೆಬಿಲೈಸೇಶನ್ ತಂತ್ರಜ್ಞಾನ ಉತ್ತಮವಾಗಿ ಕೆಲಸ ಮಾಡುತ್ತದೆ. ತತ್ಪರಿಣಾಮವಾಗಿ ಲಭ್ಯವಾಗುವ ಚಿತ್ರಗಳು, ವಿಡಿಯೊಗಳ ಗುಣಮಟ್ಟವಂತೂ ತುಂಬ ಚೆನ್ನಾಗಿದೆ. ರಾತ್ರಿ ಫೋಟೋಗ್ರಫಿ ಇಷ್ಟಪಡುವವರಿಗೆ ಅತ್ಯಂತ ಖುಷಿ ತರಬಲ್ಲ ಸಾಧನವಿದು. (ಮಳೆಯಿದ್ದ ರಾತ್ರಿ ಬೆಂಗಳೂರಿನ ಎಂ.ಜಿ.ರೋಡ್ ಸಮೀಪ ತೆಗೆದ ಚಿತ್ರ ಗಮನಿಸಿ).

ಸ್ಯಾಮ್‌ಸಂಗ್‌ನ ಸ್ಪೇಸ್ ಝೂಮ್ ತಂತ್ರಜ್ಞಾನದೊಂದಿಗೆ 3x ಆಪ್ಟಿಕಲ್ ಝೂಮ್ ವ್ಯವಸ್ಥೆಯು ದೂರದ ವಸ್ತುಗಳನ್ನು ಹೆಚ್ಚು ಸ್ಪಷ್ಟವಾಗಿ ಸೆರೆಹಿಡಿಯಲು ನೆರವಾಗುತ್ತದೆ. ಜೊತೆಗೆ 20x ನಷ್ಟು ಡಿಜಿಟಲ್ ಝೂಮ್ ಮಾಡಬಹುದಾಗಿದ್ದು, ವೃತ್ತಿಪರ ಛಾಯಾಗ್ರಾಹಕರಿರಿಂದಲೂ ಸೈ ಅನ್ನಿಸಿಕೊಳ್ಳುವ ವ್ಯವಸ್ಥೆಯಿದು. ಡಿಜಿಟಲ್ ಝೂಮ್‌ನಲ್ಲಿ ದೂರದ ಚಿತ್ರಗಳ ಗುಣಮಟ್ಟ ಸಹಜವಾಗಿ ಕಡಿಮೆಯಿರುತ್ತದೆ.

ಕಾರ್ಯಾಚರಣೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋಲ್ಡ್‌ನಲ್ಲಿ ಅತ್ಯಾಧುನಿಕ ಆಂಡ್ರಾಯ್ಡ್ 12L ಆಧಾರಿತ ಒನ್ ಯುಐ 4.1.1 ಕಾರ್ಯಾಚರಣಾ ವ್ಯವಸ್ಥೆಯಿದೆ. 12L ಎಂಬುದು ಇತ್ತೀಚೆಗೆ ದೊಡ್ಡ ಪರದೆಯ ಸ್ಮಾರ್ಟ್‌ಫೋನ್‌ಗಳಿಗೆಂದೇ ಗೂಗಲ್ ಬಿಡುಗಡೆ ಮಾಡಿದ ಕಾರ್ಯಾಚರಣಾ ವ್ಯವಸ್ಥೆಯಾಗಿದ್ದು, ಅದರೊಂದಿಗೆ ಮಾರುಕಟ್ಟೆಗೆ ಬಂದಿರುವ ಮೊದಲ ಸ್ಮಾರ್ಟ್‌ಫೋನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ ಝಡ್ ಫೋಲ್ಡ್ 4. ಇದರಲ್ಲಿ ಕಂಪ್ಯೂಟರಿನಂತೆಯೇ ಟಾಸ್ಕ್ ಬಾರ್ (ಸ್ಕ್ರೀನ್ ಕೆಳಭಾಗದಲ್ಲಿ ಇತ್ತೀಚೆಗೆ ಬಳಸಿದ ಆ್ಯಪ್‌ಗಳ ಸಾಲು, ಕ್ಷಿಪ್ರವಾಗಿ ಪುನಃ ಅಲ್ಲಿಗೆ ಹೋಗಲು ಅನುಕೂಲ) ಕೂಡ ಇರುವುದರಿಂದ, ಬಹುತೇಕ ಡೆಸ್ಕ್‌ಟಾಪ್‌ನಲ್ಲಿ ಕೆಲಸ ಮಾಡಿದಂತಾಗುತ್ತದೆ. ಇನ್ನೊಂದು ವಿಶೇಷವೆಂದರೆ, ಸ್ಯಾಮ್‌ಸಂಗ್ ಡೆಕ್ಸ್ ಎಂಬ ಆ್ಯಪ್ ಮೂಲಕವಾಗಿ, ಕಂಪ್ಯೂಟರ್ (ಅಥವಾ ಲ್ಯಾಪ್‌ಟಾಪ್) ಪರದೆಯಲ್ಲಿ ಫೋನ್‌ನ ಕಂಟೆಂಟ್ ಅನ್ನು ವೀಕ್ಷಿಸಬಹುದು. 120Hz ರೀಫ್ರೆಶ್ ರೇಟ್ ಇರುವುದರಿಂದ, ದೊಡ್ಡ ಪರದೆಯಲ್ಲಿ ಸುಲಲಿತವಾದ ಬ್ರೌಸಿಂಗ್ ಅನುಭೂತಿ ಅನುಭವಕ್ಕೆ ಬರುತ್ತದೆ.

ಫೋನನ್ನು 90 ಡಿಗ್ರಿಯಷ್ಟು ತೆರೆದು ಅಡ್ಡವಾಗಿರಿಸಿದರೆ (ಹಾರಿಜಾಂಟಲ್), ಈ ಫ್ಲೆಕ್ಸ್ ಮೋಡ್‌ನಲ್ಲಿ ಸ್ಕ್ರೀನ್‌ನ ಕೆಳಗಿನ ಅರ್ಧಭಾಗವು ಟ್ರ್ಯಾಕ್ ಪ್ಯಾಡ್ ರೂಪದಲ್ಲಿ ಕೆಲಸ ಮಾಡುವುದು ವಿಶೇಷ. ಬ್ರೌಸ್ ಮಾಡಲು, ಝೂಮ್ ಮಾಡಲು ಈ ಟ್ರ್ಯಾಕ್ ಪ್ಯಾಡ್ ಉಪಯೋಗಕ್ಕೆ ಬರುತ್ತದೆ. ಮತ್ತು ಈ ರೀತಿ ಮಡಚಿಟ್ಟರೆ ವಿಡಿಯೊ ಶೂಟ್ ಮಾಡುವುದಕ್ಕೂ ಅನುಕೂಲ. ಸ್ಕ್ರೀನ್ ತೆರೆದರೆ, ಅಗಲವಾದ ಪರದೆಯಲ್ಲಿ ಇಮೇಲ್ ಇತ್ಯಾದಿ ಪರಿಶೀಲಿಸುವುದು, ಕಂಪ್ಯೂಟರ್ ಅನುಭವವನ್ನು ನಮ್ಮದಾಗಿಸುತ್ತದೆ. ಮಲ್ಟಿಟಾಸ್ಕಿಂಗ್ ಮಾಡುವುದಕ್ಕೂ ಈ ಅವಳಿ ಸ್ಕ್ರೀನ್ ಅನುಕೂಲ ಮಾಡಿಕೊಡುತ್ತದೆ.

ಕ್ವಾಲ್‌ಕಂ ಸ್ನ್ಯಾಪ್‌ಡ್ರ್ಯಾಗನ್ 8+ 1ನೇ ಪೀಳಿಗೆಯ ಚಿಪ್‌ಸೆಟ್‌ನೊಂದಿಗೆ ಗ್ಯಾಲಕ್ಸಿ ಝಡ್ ಫೋಲ್ಡ್4 ಫೋನ್ ಮಾಡಬಹುದಾದ ಯಾವುದೇ ಕಾರ್ಯವೂ ಕೂಡ ಯಾವುದೇ ಅಡಚಣೆಯಿಲ್ಲದೆ, ವೇಗವಾಗಿ ನಡೆಯುತ್ತದೆ. ಏಕಕಾಲದಲ್ಲಿ ಗರಿಷ್ಠ ಆ್ಯಪ್‌ಗಳ ಬಳಕೆಯ ವೇಳೆ, ಸಾಕಷ್ಟು ಗ್ರಾಫಿಕ್ಸ್ ಇರುವ ಹೆವಿ ಗೇಮ್‌ಗಳನ್ನು ಆಡುವಾಗಲೂ ಯಾವುದೇ ರೀತಿಯಲ್ಲಿಯೂ ವಿಳಂಬದ ಅಥವಾ ಸ್ಥಾಗಿತ್ಯದ ಅನುಭವ ಕಂಡುಬರಲೇ ಇಲ್ಲ. ಇದರಲ್ಲಿರುವ 12ಜಿಬಿ RAM ಹಾಗೂ 1ಟಿಬಿವರೆಗಿನ ಸ್ಟೋರೇಜ್ ಸಾಮರ್ಥ್ಯದೊಂದಿಗೆ, ಸಾಕಷ್ಟು ದತ್ತಾಂಶಗಳನ್ನು ಸಂಗ್ರಹಿಸಿಟ್ಟುಕೊಳ್ಳಬಹುದು, ಸಾಕಷ್ಟು ಆ್ಯಪ್‌ಗಳನ್ನು ಕೂಡ ಅಳವಡಿಸಿಕೊಳ್ಳಬಹುದು. ಇದರಲ್ಲಿ ಮೈಕ್ರೋಎಸ್‌ಡಿ ಕಾರ್ಡ್ ಸ್ಲಾಟ್ ಇಲ್ಲ ಎಂಬುದನ್ನು ಗಮನಿಸಬೇಕು. ಆಂತರಿಕವಾಗಿ ಸ್ಟೋರೇಜ್ ಸಾಮರ್ಥ್ಯಗಳು ಫೋನ್ ಮಾಡೆಲ್‌ಗಳ ಬೆಲೆಗೆ ತಕ್ಕಂತೆ ಹೆಚ್ಚಿರುತ್ತವೆ.

ಪವರ್ ಬಟನ್‌ನಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇದ್ದು, ಮುಖ ಗುರುತಿಸುವ ತಂತ್ರಜ್ಞಾನವೂ ಅತ್ಯುತ್ತಮವಾಗಿ, ವೇಗವಾಗಿ ಕೆಲಸ ಮಾಡುತ್ತದೆ. ಡ್ಯುಯಲ್ ಮೆಸೆಂಜರ್ ವ್ಯವಸ್ಥೆಯಿದ್ದು, ಫೇಸ್‌ಬುಕ್, ಮೆಸೆಂಜರ್, ವಾಟ್ಸ್ಆ್ಯಪ್, ಟೆಲಿಗ್ರಾಂಗಳ ಎರಡೆರಡು ಖಾತೆಗಳನ್ನು ಒಂದೇ ಸಾಧನದಲ್ಲಿ ನೋಡಬಹುದು.

ಬ್ಯಾಟರಿ
4,400 mAh ಸಾಮರ್ಥ್ಯದ ಬ್ಯಾಟರಿ ಅಳವಡಿಸಲಾಗಿದ್ದು, ಇದರ ಕಾರ್ಯಾಚರಣೆ ವ್ಯವಸ್ಥೆಯೂ ಬ್ಯಾಟರಿ ಕಾರ್ಯಕ್ಷಮತೆಗೆ ಪೂರಕವಾಗಿರುವುದರಿಂದ, ಸಾಮಾನ್ಯ ಬಳಕೆಯಲ್ಲಿ ಎರಡು ದಿನಗಳಿಗೆ ಯಾವುದೇ ಸಮಸ್ಯೆಯಾಗದು. ವೈಫೈ ಬಳಸಿದರೆ ಹೇಗೂ ಇನ್ನೂ ಒಂದು ದಿನ ಹೆಚ್ಚು ಚಾರ್ಜ್ ಇರುತ್ತದೆ. ದೊಡ್ಡ ಸ್ಕ್ರೀನ್ ಇರುವುದರಿಂದ, ಹೆಚ್ಚಿನ ಬ್ಯಾಟರಿ ಸಾಮರ್ಥ್ಯ ಇರಿಸಬಹುದಿತ್ತು ಅನಿಸುತ್ತದೆ. ಕಾರಣವೆಂದರೆ, ಈಗಾಗಲೇ 5000- 6000mAh ಬ್ಯಾಟರಿ ಸಾಮರ್ಥ್ಯದ ಚಿಕ್ಕ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತಿವೆ. ಆದರೆ, ಇದರ ಪ್ರಸ್ತುತ ಸಾಮರ್ಥ್ಯ ಗಮನಿಸಿದರೆ, ನಾನು ಬಳಸಿದ ಯಾವುದೇ ಸ್ಯಾಮ್‌ಸಂಗ್ ಸಾಧನಗಳಿಗಿಂತಲೂ ಹೆಚ್ಚು ದೀರ್ಘ ಕಾಲ ಬ್ಯಾಟರಿ ಚಾರ್ಜ್ ಬಳಕೆಗೆ ಲಭ್ಯವಾಗಿದೆ. ಇದಕ್ಕೆ ಪ್ರಧಾನ ಕಾರಣವೆಂದರೆ ಇದರ ಚಿಪ್‌ಸೆಟ್ ಹಾಗೂ ತತ್ಸಂಬಂಧಿತ ಹಾರ್ಡ್‌ವೇರ್-ಸಾಫ್ಟ್‌ವೇರ್ ಸಂಯೋಗ.

ಒಟ್ಟಾರೆ ಹೇಗಿದೆ?
ವೈವಿಧ್ಯಮಯವಾದ ಟಾಸ್ಕ್‌ಗಳಿಗೆ, ದೊಡ್ಡ ಪರದೆಯಲ್ಲಿ ಚಿತ್ರ, ವಿಡಿಯೊಗಳನ್ನು ಸೆರೆಹಿಡಿಯಲು, ವೀಕ್ಷಣೆಯ ಆನಂದ ಪಡೆಯಲು ಶಕ್ತಿಶಾಲಿಯಾದ ಐಷಾರಾಮಿ ಫೋನ್ ಇದು. ನಿಜವಾದ ಫ್ಲ್ಯಾಗ್‌ಶಿಪ್ ಫೋನ್ ಎನ್ನಬಹುದು. ಇದರ ಗರಿಷ್ಠ ಮಾರಾಟ ಬೆಲೆ ₹1,54,999 ರಿಂದ ಆರಂಭವಾಗುತ್ತದೆ. 512GB ಗೆ ₹1,64,999 ಹಾಗೂ 1TB ಸಾಮರ್ಥ್ಯದ ಫೋನ್ ಬೆಲೆ ₹1,84,999 (ಸಾಕಷ್ಟು ಕೊಡುಗೆಗಳೂ ಇವೆ). ಖರೀದಿಸಬಹುದೇ ಎಂಬುದು ಈ ಸ್ಮಾರ್ಟ್‌ಫೋನನ್ನು ನಾವು ಎಷ್ಟರ ಮಟ್ಟಿಗೆ ಉತ್ಪಾದಕ ಸಾಧನವಾಗಿ (ಪವರ್‌ಫುಲ್ ಬಳಕೆದಾರರ ಮಾದರಿಯಲ್ಲಿ) ಬಳಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿದೆ. ಅಥವಾ ಅತ್ಯುತ್ತಮವಾದ, ಶಕ್ತಿಶಾಲಿ ಐಷಾರಾಮಿ ಆಂಡ್ರಾಯ್ಡ್ ಫೋನ್ ತನ್ನಲ್ಲೂ ಇರಬೇಕು ಎಂದುಕೊಳ್ಳುವವರಿಗೆ ಇದು ಸೂಕ್ತ. ಮತ್ತು ಇದರ ನಿಜವಾದ ಸಾಮರ್ಥ್ಯ ಕಾಣಸಿಗುವುದು ನಮಗೆ 5ಜಿ ಇಂಟರ್ನೆಟ್ ತಂತ್ರಜ್ಞಾನ ಲಭ್ಯವಾದಾಗ.

Samsung Galaxy Z Fold 4 Gadget Review by Avinash B in Prajavani on 03rd (Web) and 07th (Print Edition) Sept 2022


LEAVE A REPLY

Please enter your comment!
Please enter your name here