ಸ್ಮಾರ್ಟ್‌ಫೋನ್ ಬಳಸುತ್ತಿದ್ದೀರಾ? ಇನ್ಯಾಕೆ Privacy ಬಗ್ಗೆ ಚಿಂತೆ, ಮರೆತುಬಿಡಿ!

0
583

ಕಳೆದ ವಾರದಿಂದ ‘ವಾಟ್ಸ್ಆ್ಯಪ್ ಬಳಕೆ ನಿಲ್ಲಿಸೋಣ, ಬೇರೆ ಆ್ಯಪ್‌ಗಳನ್ನು ಬಳಸಲು ಆರಂಭಿಸೋಣ’ ಅಂತೆಲ್ಲ ಒಂದು ಅಭಿಯಾನ ಆರಂಭವಾಗಿಬಿಟ್ಟಿದೆ. ಇದಕ್ಕೆ ಕಾರಣವೆಂದರೆ, ವಾಟ್ಸ್ಆ್ಯಪ್ ಮೂಲಕ ನಡೆಯುವ ಸಂವಹನಗಳನ್ನು, ಮಾಹಿತಿಯನ್ನು ವಾಟ್ಸ್ಆ್ಯಪ್ ಒಡೆತನ ಹೊಂದಿರುವ ಫೇಸ್‌ಬುಕ್ ಆ್ಯಪ್ ಕೂಡ ಬಳಸಬಹುದಾಗಿದೆ ಅಂತ ಆ ಸಂಸ್ಥೆಯು ಬಹಿರಂಗವಾಗಿ ಪ್ರಚಾರ ಮಾಡಿದ್ದು.

ನಮಗೆ ಗೊತ್ತೇ ಇಲ್ಲದ ವಿಷಯವನ್ನು ಯಾರಾದರೂ ಜಗಜ್ಜಾಹೀರು ಮಾಡಿದಾಗಲಷ್ಟೇ ಎಚ್ಚೆತ್ತುಕೊಳ್ಳುವವರು ನಾವು. ಇಲ್ಲೂ ಆಗಿದ್ದು ಇದೇ. ಸ್ಮಾರ್ಟ್ ಫೋನ್ ಬಳಸುವವರು ಯಾವುದೇ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳುವಾಗ ಕೆಲವೊಂದು ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಲೇಬೇಕಾಗುತ್ತದೆ. ಇಲ್ಲವಾದಲ್ಲಿ ಅದರ ಬಳಕೆ ಮಾಡುವಂತಿಲ್ಲ.

ಉದಾಹರಣೆಗೆ, ಒಂದು ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳಬೇಕೆಂದರೆ, ಅದು ನಿಮ್ಮ ಸಾಧನದ ಸ್ಟೋರೇಜ್‌ಗೆ, ಕ್ಯಾಮೆರಾಕ್ಕೆ, ಸೋಷಿಯಲ್ ಮೀಡಿಯಾಗಳೊಂದಿಗೆ ಸಂವಹನಕ್ಕೆ, ಜೊತೆಗೆ ನಿಮ್ಮ ಮೊಬೈಲ್ ಫೋನ್‌ನಲ್ಲಿ ಸಂಗ್ರಹವಾಗಿರುವ ಸಂಪರ್ಕ ಸಂಖ್ಯೆಗಳಿಗೆ (ಸ್ನೇಹಿತರ ಪಟ್ಟಿ), ಬ್ರೌಸರ್ ಮುಂತಾದವುಗಳಿಗೆ ಪ್ರವೇಶಾನುಮತಿ (ಆ್ಯಕ್ಸೆಸ್) ಕೇಳುತ್ತದೆ. ಆದರೆ ನಮಗೆಲ್ಲರಿಗೂ ಒಂದೇ ಚಾಳಿ. ಆ್ಯಪ್ ಮಾಡುವ ಪ್ರಧಾನ ಕೆಲಸವೊಂದೇ ಮುಖ್ಯವಾಗಿಬಿಡುವಾಗ, ಈ ಷರತ್ತುಗಳನ್ನು ಓದದೆಯೇ ಎಲ್ಲದಕ್ಕೂ ‘Yes, Accept, Agree’ ಅಂತ ಏನೆಲ್ಲಾ ಬಟನ್‌ಗಳು ಕಾಣಿಸುತ್ತವೆಯೋ, ಎಲ್ಲವನ್ನು ಒತ್ತಿಬಿಟ್ಟಿರುತ್ತೇವೆ.

ಫೇಸ್‌ಬುಕ್ ಮಾಡುವುದೂ ಇದನ್ನೇ; ಟ್ವಿಟರ್, ಇನ್‌ಸ್ಟಾಗ್ರಾಂ, ವಾಟ್ಸ್ಆ್ಯಪ್ ಮುಂತಾದ ಸಾಮಾಜಿಕ ಕಿರುತಂತ್ರಾಂಶಗಳೂ ಕೇಳುವುದು ಇದನ್ನೇ. ಅವರಿಗೆ ಒಟ್ಟಾರೆಯಾಗಿ ನಾವೇನು ಮಾಡುತ್ತಿದ್ದೇವೆಯೋ, ಆ ಚಲನವಲನಗಳ ಮಾಹಿತಿಯೆಲ್ಲವೂ ಬೇಕು. ಯಾಕೆ ಬೇಕು?

ಉದಾಹರಣೆಗೆ ನೀವೊಂದು ಬೈಕ್ ಖರೀದಿಸಬೇಕೆಂದುಕೊಂಡು, ಬ್ರೌಸರ್‌ನಲ್ಲಿ ‘ಬೆಸ್ಟ್ ಬೈಕ್’ ಅಂತ ಗೂಗಲ್‌ನಲ್ಲಿ ಹುಡುಕುತ್ತೀರಿ. ಅಂದರೆ, ನಿಮಗೀಗ ಬೈಕ್ ಇಷ್ಟ, ಅದರ ಅಗತ್ಯವಿದೆ ಎಂಬುದು ಬ್ರೌಸರ್‌ಗೆ ಗೊತ್ತಾಯಿತು. ನಿಮ್ಮ ಬ್ರೌಸರ್ ಚಲನವಲನ ತಿಳಿಯುವುದಕ್ಕಾಗಿ ನೀವು ಫೇಸ್‌ಬುಕ್ ಆ್ಯಪ್‌ಗೆ ಯಾವತ್ತೋ ‘Agree’ ಅಂತ ಒತ್ತಿಬಿಟ್ಟಿರುತ್ತೀರಿ. ವಿಷಯ ಇರೋದೇ ಇಲ್ಲಿ.

ಮುಂದಿನ ಬಾರಿ ನೀವು ಫೇಸ್‌ಬುಕ್ ಜಾಲಾಡಿದಾಗ, ಬೈಕ್‌ಗೆ ಸಂಬಂಧಿಸಿದ ಜಾಹೀರಾತೇ ಕಾಣಿಸುತ್ತದೆ. ಅರೆ! ನನ್ನ ಇಷ್ಟವೇನೆಂದು ಫೇಸ್‌ಬುಕ್‌ಗೆ ಹೇಗೆ ತಿಳಿಯಿತು ಅಂತ ಅಚ್ಚರಿಗೊಳ್ಳುತ್ತೀರಿ. ಆದರೆ, ನಾವೇ ‘Agree’ ಒತ್ತಿದಾಗಲೇ ನಮ್ಮ ಪ್ರೈವೆಸಿಯನ್ನು ನಾವು ಧಾರೆ ಎರೆದಾಗಿದೆ, ಇದರಿಂದಾಗಿಯೇ ನಮ್ಮ ಇಷ್ಟವನ್ನು ಅರಿತುಕೊಳ್ಳುವ ಫೇಸ್‌ಬುಕ್ ಅಲ್ಗಾರಿದಂ, ಮತ್ತೆ ಮತ್ತೆ ಅಂಥದ್ದೇ ಜಾಹೀರಾತನ್ನು ಹೆಚ್ಚು ತೋರಿಸುತ್ತದೆ. ನೀವು ಇಲ್ಲಿ ಜಾಹೀರಾತು ಕ್ಲಿಕ್ ಮಾಡಿದರೆ, ಜಾಹೀರಾತು ನೀಡಿದವರ ಮೂಲಕ ಫೇಸ್‌ಬುಕ್‌ಗೂ ಒಂದಿಷ್ಟು ಕಮಿಶನ್ ಹಣ ಹೋಗುತ್ತದೆ.

ಇದು ಅಂತರಜಾಲವು ನಡೆಯುವ ಪರಿ. ಫೇಸ್‌ಬುಕ್ ಕೂಡ ಇಷ್ಟು ದೊಡ್ಡ ಉದ್ಯಮವಾಗಿ ಬೆಳೆಯಲು ಹಣ ಬೇಕಲ್ಲವೇ? ಸುಖಾ ಸುಮ್ಮನೇ ಉಚಿತ ಸೇವೆ ನೀಡುವುದು ಹೇಗೆ ಸಾಧ್ಯ ಅಂತ ಯೋಚಿಸಿದಾಗ ನಿಮಗೆ ಇದು ಅರಿವಿಗೆ ಬರುತ್ತದೆ.

ಇಷ್ಟು ಯಾಕೆ ಹೇಳಬೇಕಾಯಿತೆಂದರೆ, ನಾವು ನಮ್ಮ ಪ್ರೈವೆಸಿ (ಖಾಸಗಿತನ) ಬಟಾಬಯಲಾಯ್ತು ಅಂತ ಇದೀಗ ವಾಟ್ಸ್ಆ್ಯಪ್‌ಗೆ ಸೆಡ್ಡು ಹೊಡೆಯಲು ನಿರ್ಧರಿಸಿದ್ದೇವೆ. ಆದರೆ, ಸ್ಮಾರ್ಟ್ ಫೋನ್ ಬಳಸುವ ಎಲ್ಲರೂ ಆ್ಯಪ್ ಮೂಲಕವೇ ವ್ಯವಹರಿಸುತ್ತೇವೆ, ಎಲ್ಲ ಆ್ಯಪ್‌ಗಳಿಗೂ ನಮ್ಮ ಖಾಸಗಿ ಮಾಹಿತಿಯನ್ನು ನಮಗರಿವಿಲ್ಲದಂತೆಯೇ (ಷರತ್ತುಗಳನ್ನು ಓದದೆ) ಕೊಟ್ಟಿರುತ್ತೇವೆ. ವಾಟ್ಸ್ಆ್ಯಪ್ ಇದನ್ನು ಬಹಿರಂಗವಾಗಿ ಪ್ರಚಾರ ಮಾಡಿದೆಯಷ್ಟೇ.

ಇಷ್ಟೆಲ್ಲ ಪ್ರೈವೆಸಿ ಬಗ್ಗೆ ಕಾಳಜಿ ವಹಿಸುವ ನಾವು, ಫೇಸ್‌ಬುಕ್, ವಾಟ್ಸ್ಆ್ಯಪ್ ಮತ್ತಿತರ ಕಡೆಗಳಲ್ಲಿ ನಮ್ಮ ಮೊಬೈಲ್ ಸಂಖ್ಯೆಯೇನು, ಯಾವ ಊರಿನವರು, ಇಮೇಲ್ ವಿಳಾಸ, ಏನು ತಿಂದೆವು, ಯಾವ ಫ್ರೆಂಡ್ಸ್ ಜೊತೆ ಸುತ್ತಾಡಿದೆವು ಅಂತೆಲ್ಲ ಪೋಸ್ಟ್ ಮಾಡುವುದಿಲ್ಲವೇ? ಈಗ ವಾಟ್ಸ್ಆ್ಯಪ್ ನಮ್ಮ ಮಾಹಿತಿಯನ್ನು ಫೇಸ್‌ಬುಕ್ ಜೊತೆ ಹಂಚಿಕೊಳ್ಳುತ್ತದೆ ಎಂದಾಗಲೂ ಅಷ್ಟೇ, ಅದನ್ನು ಅಲ್ಲಿಗೇ ಬಿಟ್ಟು ವಾಟ್ಸ್ಆ್ಯಪ್ ‘ಸ್ಟೇಟಸ್’ ಅಥವಾ ಫೇಸ್‌ಬುಕ್ ‘ಸ್ಟೋರಿ’ ಅಪ್‌ಡೇಟ್ ಮಾಡುತ್ತಾ ಇರಬಹುದು!

ನಾವು ಯಾವತ್ತು ಸ್ಮಾರ್ಟ್ ಫೋನ್ ಬಳಕೆಗೆ ಆರಂಭಿಸಿದೆವೋ, ಅಂದೇ ನಮ್ಮ ಪ್ರೈವೆಸಿ ಅಥವಾ ಅಲ್ಲಿ ಹಂಚಿಕೊಳ್ಳುವ ಖಾಸಗಿ ವಿಚಾರಗಳ ಸುರಕ್ಷತೆ ಬಗ್ಗೆ ಕಾಳಜಿ ಬಿಟ್ಟೆವು ಅರ್ಥ ಮಾಡಿಕೊಳ್ಳತಕ್ಕದ್ದು. ಹಾಗಂತ, ಎಲ್ಲವೂ ಅಸುರಕ್ಷಿತ ಅಂತ ಭಯ ಬೀಳಬೇಕಿಲ್ಲ. ನಮ್ಮ ದೇಶದ ಕಾನೂನು ಗಟ್ಟಿಯಿದೆ. ವಿಶ್ವಾಸಾರ್ಹವಲ್ಲದ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವಾಗ ಎಚ್ಚರ ವಹಿಸುವುದು ನಮ್ಮ ಆದ್ಯ ಕರ್ತವ್ಯ ಅಂದುಕೊಂಡು ಮುಂದುವರಿಯಬಹುದು.

My Article Published in Prajavani on 10/11 Jan 2021

LEAVE A REPLY

Please enter your comment!
Please enter your name here