ಕ್ಲಬ್‌ಹೌಸ್ ಬಳಸುವುದು ಹೇಗೆ? ಹಣ ಮಾಡಬಹುದೇ?: ಮಾಹಿತಿ ಇಲ್ಲಿದೆ

0
352

ಸಾಮಾಜಿಕ ಮಾಧ್ಯಮಗಳ ಸಾಲಿನಲ್ಲಿ ಈಗಿನ ಟ್ರೆಂಡ್ ‘ಕ್ಲಬ್‌ಹೌಸ್’. ಈ ಧ್ವನಿ ಮೂಲಕ ಸಂವಹನ ನಡೆಸುವ ಆ್ಯಪ್ ವರ್ಷದ ಹಿಂದೆಯೇ ಆ್ಯಪಲ್ ಸಾಧನಗಳಲ್ಲಿ ಕಾರ್ಯನಿರ್ವಹಿಸುತ್ತಿತ್ತಾದರೂ, ಯಾವಾಗ ಆಂಡ್ರಾಯ್ಡ್ ಸಾಧನಗಳಿಗೆ (ಮೇ 9ರಂದು) ಬಂದಿತೋ, ಅಂದಿನಿಂದ ಫೇಮಸ್ ಆಗಿಬಿಟ್ಟಿತು. ಕಾರಣವೆಂದರೆ, ಭಾರತದಲ್ಲಿ ಆ್ಯಪಲ್‌ಗಿಂತಲೂ ಆಂಡ್ರಾಯ್ಡ್ ಬಳಕೆದಾರರೇ ಹೆಚ್ಚಿರುವುದು. ಆದರೆ, ಈ ಬಗ್ಗೆ ಜನರಲ್ಲಿನ್ನೂ ಸಾಕಷ್ಟು ಸಂದೇಹಗಳು, ಹೇಗೆ ಸೇರಿಕೊಳ್ಳುವುದು ಎಂಬ ಭಯಮಿಶ್ರಿತ ಆತಂಕವೂ ಇದೆ. ಈ ಕಿರು ಮಾಹಿತಿ ಓದಿದರೆ ನಿಮ್ಮ ಬಹುತೇಕ ಸಂದೇಹಗಳು ನಿವಾರಣೆಯಾಗಬಹುದು.

ಸದ್ಯ ಆಹ್ವಾನಿತರಿಗೆ ಮಾತ್ರ
ಇದು ಸದ್ಯಕ್ಕೆ ಆಹ್ವಾನಿತರಿಗೆ ಮಾತ್ರ. ಹಾಗಂತ, ಒಮ್ಮೆ ಒಬ್ಬಾತ ಕ್ಲಬ್‌ಹೌಸ್ ಸೇರಿಕೊಂಡು ಬಿಟ್ಟರೆ, ಆತನಿಗೆ ಮತ್ತಷ್ಟು ಮಂದಿಯನ್ನು ಆಹ್ವಾನಿಸುವ ಅವಕಾಶ ದೊರೆಯುತ್ತದೆ. ನಿಮ್ಮಲ್ಲಿ ಕ್ಲಬ್‌ಹೌಸ್ ಖಾತೆ ಇಲ್ಲದಿದ್ದರೆ, ಈಗಾಗಲೇ ಅದರಲ್ಲಿ ಸಕ್ರಿಯವಾಗಿರುವ ಸ್ನೇಹಿತರನ್ನು ವಿನಂತಿಸಬಹುದು. ಪ್ರಸ್ತುತ ಒಬ್ಬ ಸದಸ್ಯ ಮತ್ತಷ್ಟು ಮಂದಿಯನ್ನು ಕ್ಲಬ್‌ಹೌಸ್‌ಗೆ ಸೇರಿಸಬಹುದೆಂಬ ನಿಯಮವಿದೆ. ಆದರೆ, ಈ ‘ಆಹ್ವಾನಿತರಿಗೆ ಮಾತ್ರ’ ವೈಶಿಷ್ಟ್ಯವನ್ನು ರದ್ದುಪಡಿಸಿ, ಮುಕ್ತ ಅವಕಾಶ ನೀಡುವುದಾಗಿ ಕ್ಲಬ್‌ಹೌಸ್ ಇತ್ತೀಚೆಗೆ ಹೇಳಿದೆ.

ಹೇಗೆ ಆಹ್ವಾನ ಪಡೆಯುವುದು?
ಈಗಾಗಲೇ ಸದಸ್ಯತ್ವ ಇರುವವರಿಂದ ಆಹ್ವಾನ ಪಡೆಯಬಹುದು. ಕ್ಲಬ್‌ಹೌಸ್ ಸದಸ್ಯತ್ವ ಸಿಕ್ಕಿದವರು ಮೇಲ್ಭಾಗದಲ್ಲಿರುವ ಅಂಚೆ ಲಕೋಟೆಯ ಐಕಾನ್ ಒತ್ತಿದಾಗ, ತನ್ನ ಬಳಿ ಎಷ್ಟು ಆಹ್ವಾನಗಳಿವೆ ಎಂದು ತಿಳಿಯುತ್ತದೆ (ನಮ್ಮ ಕ್ಲಬ್‌ಹೌಸ್ ಚಟುವಟಿಕೆಯ ಆಧಾರದಲ್ಲಿ ಈ ಆಹ್ವಾನಗಳ ಸಂಖ್ಯೆ ನಿರ್ಧಾರವಾಗುತ್ತದೆ). ಅಲ್ಲೇ ಕೆಳಗೆ, ತನ್ನ ಸ್ನೇಹಿತರ ಮೊಬೈಲ್ ಸಂಖ್ಯೆಯನ್ನು ದಾಖಲಿಸಿದಾಗ, ಕೆಳಗೆ ‘Invite’ ಎಂಬ ಬಟನ್ ಒತ್ತಿದರೆ ಸಾಕು. ನೇರವಾಗಿ ಎಸ್ಸೆಮ್ಮೆಸ್ ಕಳುಹಿಸುವ ಆಯ್ಕೆ ಗೋಚರಿಸುತ್ತದೆಯಾದರೂ, ಆ ಎಸ್ಸೆಮ್ಮೆಸ್ಸನ್ನು ಕಳುಹಿಸಲೇಬೇಕೆಂದಿಲ್ಲ. ಆ ನಂಬರ್ ಕ್ಲಬ್‌ಹೌಸ್‌ನಲ್ಲಿ ನೋಂದಣಿಯಾಗಿಬಿಡುತ್ತದೆ. ಸ್ನೇಹಿತನಿಗೆ ಲಾಗಿನ್ ಆಗುವಂತೆ ಹೇಳಿದಾಗ, ಆತನ ಮೊಬೈಲ್ ಫೋನ್‌ಗೆ ಒಟಿಪಿ ಬರುತ್ತದೆ. ಅದನ್ನು ಕ್ಲಬ್‌ಹೌಸ್ ಆ್ಯಪ್‌ನಲ್ಲಿ ದಾಖಲಿಸಿದರೆ, ಕ್ಲಬ್‌ಹೌಸ್ ಸದಸ್ಯತ್ವ ಪಡೆದಂತೆಯೇ! ನಿಮ್ಮದೇ ನಿಜವಾದ ಫೊಟೊ ಹಾಕಿಕೊಳ್ಳಿ. ಹಾಗಂತ, ಫೇಕ್ ಫೋಟೋಗಳು, ಫೇಕ್ ಪ್ರೊಫೈಲ್‌ಗಳೂ ಇಲ್ಲಿ ಇರುತ್ತವೆ. ನಮಗೆ ಅವುಗಳನ್ನು ಪತ್ತೆ ಹಚ್ಚಲಾಗುವುದಿಲ್ಲ ಎಂಬುದು ನೆನಪಿರಲಿ.

ಹೆಸರು: ಪ್ರೊಫೈಲ್, ಹ್ಯಾಂಡಲ್, ಕ್ಲಬ್
ಇಲ್ಲಿ ಮೂರು ಹೆಸರುಗಳು ಪ್ರಮುಖವಾಗುತ್ತವೆ. ಒಂದು ಎಲ್ಲರಿಗೂ ಕಾಣಿಸುವ ನಮ್ಮದೇ ಹೆಸರು. ಇದನ್ನು ಪದೇ ಪದೇ ಬದಲಾಯಿಸಿಕೊಳ್ಳುವಂತಿಲ್ಲ. ಎರಡನೆಯದು ಹ್ಯಾಂಡಲ್. ಇದು ನಮ್ಮ ಗುರುತು. ಉದಾಹರಣೆಗೆ ಪ್ರಜಾವಾಣಿ ಎಂಬುದು ಹೆಸರು. @prajavani ಎಂಬುದು ಪ್ರಜಾವಾಣಿ ಕ್ಲಬ್‌ಹೌಸ್ ಪ್ರೊಫೈಲ್‌ನ ಗುರುತು (ಹ್ಯಾಂಡಲ್). ಪ್ರೊಫೈಲ್‌ನ ಕೆಳಭಾಗದಲ್ಲಿ ಇರುವ + (ಪ್ಲಸ್) ಗುರುತು ಕ್ಲಿಕ್ ಮಾಡಿ, ಹೊಸ ಕ್ಲಬ್ ತೆರೆಯಬಹುದು. ಉದಾಹರಣೆಗೆ, ಪ್ರಜಾವಾಣಿ ಕ್ಲಬ್ (clubhouse.com/club/prajavani). ಪ್ರತ್ಯೇಕ ಕ್ಲಬ್ ತೆರೆದು, ಅದರಲ್ಲಿ ಯಾವುದಾದರೂ ಕೊಠಡಿ (room) ತೆರೆದು, ಜನರನ್ನು ಆಹ್ವಾನಿಸಿ ಯಾವುದೇ ವಿಷಯದ ಕುರಿತು ಚರ್ಚಿಸಬಹುದು. ಚರ್ಚೆ ಆರಂಭಿಸಿದ ಬಳಿಕ end room ಎಂಬುದನ್ನು ಒತ್ತಬೇಕಾಗುತ್ತದೆ. ಇಲ್ಲವಾದಲ್ಲಿ, ಅದರಲ್ಲಿ ಇರುವ ಜನರು ಮಾತುಕತೆ ಮುಂದುವರಿಸಬಹುದು. ಕ್ಲಬ್ ಹೆಸರುಗಳನ್ನು ಕನ್ನಡದಲ್ಲಿಯೂ ನೀಡಬಹುದು. ಆದರೆ, ಕ್ಲಬ್ ವಿಳಾಸವನ್ನು ಹಂಚಿಕೊಳ್ಳುವಾಗ, URL ನಲ್ಲಿ ಕನ್ನಡ ಹೆಸರುಗಳು ಸಂಕೇತಾಕ್ಷರಗಳಾಗಿ ಬದಲಾಗುತ್ತವೆ. ಹೀಗಾಗಿ, ಹೆಚ್ಚಿನವರು ಇಂಗ್ಲಿಷ್ ಹೆಸರನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

ಕ್ಲಬ್ ಆರಂಭಿಸುವಾಗ, ಸೆಟ್ಟಿಂಗ್ಸ್‌ನಲ್ಲಿ ಆ ಕ್ಲಬ್ ಬಗ್ಗೆ ವಿವರಣೆ, ವಿಷಯ, ಕ್ಲಬ್ ನಿಯಮಗಳನ್ನು ರೂಪಿಸಲು ಆಯ್ಕೆ ದೊರೆಯುತ್ತದೆ. ನಾವು ಆರಂಭಿಸುವುದು ಶಾಶ್ವತ ಕ್ಲಬ್ ಆಗಿದ್ದು, ಒಮ್ಮೆ ತೆರೆದದ್ದನ್ನು ಡಿಲೀಟ್ ಮಾಡುವ ಆಯ್ಕೆ ಇಲ್ಲ. ಹೀಗಾಗಿ ನಮ್ಮ ಬ್ರ್ಯಾಂಡ್, ವಿಷಯದ ಬಗ್ಗೆ ಸ್ಪಷ್ಟವಾದ ಹೆಸರಿನಲ್ಲಿ ಕ್ಲಬ್ ಆರಂಭಿಸಬೇಕು. ಗಮನದಲ್ಲಿರಲಿ, ಕ್ಲಬ್‌ಗೆ ಯಾರು ಸದಸ್ಯರಾಗಬೇಕೆಂಬುದನ್ನು ನಾವೇ ಆಯ್ಕೆ ಮಾಡಬಹುದು, ಆದರೆ ಅನುಯಾಯಿಗಳು (ಫಾಲೋಯರ್ಸ್) ಯಾರು ಬೇಕಿದ್ದರೂ ಆಗಬಹುದು.

ಫಾಲೋ ಮಾಡುವುದು
ಯಾವುದೇ ಕ್ಲಬ್ ಅಥವಾ ವ್ಯಕ್ತಿಯ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿದಾಗ, ಫಾಲೋ ಮಾಡುವ ಆಯ್ಕೆ ಕಾಣಿಸುತ್ತದೆ. ಜೊತೆಗೆ, ಅವರೊಂದಿಗೆ ಹಿಂಬಾಗಿಲ ಮಾತುಕತೆಗೂ ಅವಕಾಶವಿರುತ್ತದೆ. ಬೆಲ್ ಐಕಾನ್ ಒತ್ತಿದರೆ (ಫಾಲೋ ಮಾಡುತ್ತಿದ್ದರೆ ಮಾತ್ರ), ಆತ ಅಥವಾ ಆ ಕ್ಲಬ್ ಇರುವ ಯಾವುದೇ ಕಾರ್ಯಕ್ರಮ ಆರಂಭವಾದಾಗ ನೋಟಿಫಿಕೇಶನ್ ಬರುತ್ತದೆ.

ಹಿಂಬಾಗಿಲಲ್ಲಿ ಚಾಟಿಂಗ್
ಇತ್ತೀಚೆಗೆ ಕ್ಲಬ್‌ಹೌಸ್ ಹಿಂಬಾಗಿಲಲ್ಲಿ (ಬ್ಯಾಕ್ ಚಾನೆಲ್) ಚಾಟ್ ಮಾಡುವ ಆಯ್ಕೆ ನೀಡಿದೆ. ಅಂದರೆ ಕ್ಲಬ್‌ಹೌಸ್‌ನೊಳಗಿದ್ದವರನ್ನು ಪ್ರತ್ಯೇಕವಾಗಿ ಚಾಟಿಂಗ್‌ಗೆ ಆಹ್ವಾನಿಸಿ, ಅಲ್ಲೇ ಟೆಕ್ಸ್ಟ್ ರೂಪದಲ್ಲಿ ಸಂದೇಶ ವಿನಿಮಯ ಮಾಡಿಕೊಳ್ಳಬಹುದು. ಮಾಡರೇಟರ್‌ಗಳು ಮುಂದೇನು ಮಾಡಬೇಕೆಂದು ಪರಸ್ಪರ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಕ್ಕೂ ಇದು ಸೂಕ್ತ.

ಇದಲ್ಲದೆ, ಪ್ರತ್ಯೇಕವಾಗಿ ಒಬ್ಬರನ್ನು ಕರೆದು, ಧ್ವನಿ ಮೂಲಕ ಮಾತನಾಡಿಸುವ ಆಯ್ಕೆಯೂ ಇದೆ. ಆರಂಭಿಕ ಸ್ಕ್ರೀನ್‌ನಲ್ಲಿ ಎಡದಿಂದ ಬಲಕ್ಕೆ ಸ್ವೈಪ್ ಮಾಡಿದಾಗ, ಯಾರೆಲ್ಲ ಅನುಯಾಯಿಗಳಿರುತ್ತಾರೋ, ಅವರನ್ನು ಗೌಪ್ಯ ಕೊಠಡಿಗೆ ಆಹ್ವಾನಿಸಿ, ಅಲ್ಲಿ ಮಾತನಾಡಬಹುದು. ಬೇರೆಯವರಿಗೆ ಪ್ರವೇಶ ಇರುವುದಿಲ್ಲ. ಇದೇ ಕೊಠಡಿಯನ್ನು ನಂತರದಲ್ಲಿ ಮುಕ್ತಪ್ರವೇಶಕ್ಕೆ ತೆರೆದಿಡಬಹುದು.

ಹಾಲ್ ವೇ
ಕ್ಲಬ್‌ಹೌಸ್ ಒಳಗೆ ಪ್ರವೇಶಿಸಿದ ತಕ್ಷಣ ನಮಗೆ Hallway ಅಂತ ಕಾಣಿಸುತ್ತದೆ. ಇದೊಂಥರಾ ವಸ್ತುಪ್ರದರ್ಶನಕ್ಕೆ ಹೊಕ್ಕಾಗ ಅಲ್ಲಿ ನೂರಾರು ಮಳಿಗೆಗಳಿರುತ್ತವೆಯಲ್ಲ? ಆ ರೀತಿಯ ಅನುಭವ. ಈ ಮಳಿಗೆ ಅಥವಾ ಕೊಠಡಿಗಳಿಗೆ (ವಿಭಿನ್ನ ಕಾರ್ಯಕ್ರಮಗಳು ನಡೆಯುತ್ತಿರುವ ಕ್ಲಬ್ ಹೌಸ್ ತಾಣಗಳು) ನಾವು ಹೊಕ್ಕು ನೋಡಬಹುದು, ಕೇಳಬಹುದು. ಪರಿಚಯಸ್ಥರಿದ್ದರೆ ಅವರು ನಮ್ಮನ್ನು ವೇದಿಕೆಗೆ ಕರೆಯಬಲ್ಲರು, ಒಪ್ಪಿಕೊಳ್ಳುವ ಅಥವಾ ನಿರಾಕರಿಸುವ ಅಧಿಕಾರ ನಮ್ಮ ಕೈಯಲ್ಲಿರುತ್ತದೆ. ಹಾಲ್ ವೇಯಲ್ಲಿ ಹೀಗೆ ಅಡ್ಡಾಡುವಾಗ (ಸ್ಕ್ರಾಲ್ ಮಾಡುವಾಗ) ನಾವು ಫಾಲೋ ಮಾಡುವವರು ಯಾವ ಕ್ಲಬ್‌ನಲ್ಲಿದ್ದಾರೆ ಎಂಬುದನ್ನು ಹೊರಭಾಗದಲ್ಲೇ ತೋರಿಸಲಾಗುತ್ತದೆ. ಯಾರೆಲ್ಲ ಇರುತ್ತಾರೆ ಎಂಬುದು ಒಬ್ಬೊಬ್ಬರ ಖಾತೆಯಲ್ಲಿ ಇದು ಒಂದೊಂದು ರೀತಿ ಕಾಣಿಸುತ್ತದೆ. ನಮ್ಮ ಪರಿಚಿತರನ್ನೇ ಅದು ಸ್ವಯಂಚಾಲಿತವಾಗಿ ತೋರಿಸುತ್ತದೆ. ಅಂದರೆ ಈ ವ್ಯಕ್ತಿ ಈ ಕ್ಲಬ್‌ನೊಳಗಿದ್ದಾನೆ, ನೀವೂ ನೋಡಬಹುದು ಎಂದು ಪ್ರಚೋದಿಸುವುದಕ್ಕಾಗಿ ಈ ಅಲ್ಗಾರಿದಂ!

ಕ್ಲಬ್ ಒಳಗೆ
ಯಾವುದೇ ಕ್ಲಬ್ ಒಳಗೆ ಪ್ರವೇಶಿಸುವಾಗ ಮೂರು ವಿಭಾಗಗಳಿರುತ್ತವೆ. ಮೇಲ್ಭಾಗದಲ್ಲಿ ಮಾತನಾಡುವವರು (ಸ್ಪೀಕರ್‌ಗಳು) ಹಾಗೂ ಮಾಡರೇಟರ್‌ಗಳು ಇರುವ ವಿಭಾಗ. ಅದರ ಕೆಳಗೆ, ಮಾತನಾಡುವವರು ಫಾಲೋ ಮಾಡುತ್ತಿರುವ ವ್ಯಕ್ತಿಗಳಿರುವ ಸ್ಥಳ. ಎಲ್ಲಕ್ಕಿಂತ ಕೆಳಗೆ, ಸಾದಾ ಕೇಳುಗರು. ಕೇಳುಗರಲ್ಲಿ ಯಾರನ್ನೇ ಆದರೂ, ಮೇಲ್ಭಾಗದ ವೇದಿಕೆಗೆ ಕರೆಯುವ ಅಧಿಕಾರವು ಮಾಡರೇಟರ್‌ಗಳಿಗೆ ಇರುತ್ತದೆ. ಕೇಳುಗರು ಇದನ್ನು ಒಪ್ಪಬಹುದು ಅಥವಾ ನಯವಾಗಿ ನಿರಾಕರಿಸಬಹುದು. ‘Dismiss’ ಎಂಬುದನ್ನು ಒತ್ತಿದರೆ, ‘ಅವರೀಗ ಸದ್ಯ ಮಾತನಾಡಲು ಇಚ್ಛಿಸುತ್ತಿಲ್ಲ’ ಎಂಬ ಸಂದೇಶವು ಮಾಡರೇಟರ್‌ಗೆ ಹೋಗುತ್ತದೆ.

ಚರ್ಚಾ ಕೊಠಡಿ ಆರಂಭಿಸುವುದು
ಮೊದಲ ಸ್ಕ್ರೀನ್‌ನಲ್ಲೇ ಇರುವ “Start Room” ಒತ್ತಿದರೆ, ಮುಕ್ತ, ಸೋಷಿಯಲ್, ಗುಪ್ತ ಮತ್ತು ನಾವು ಸದಸ್ಯರಾಗಿರುವ ಕ್ಲಬ್‌ಗಳವರಿಗೆ ಮಾತ್ರ ಎಂಬ ಆಯ್ಕೆಗಳು ಕಾಣಿಸುತ್ತವೆ. ಮೇಲ್ಭಾಗದಲ್ಲಿ ‘Add a Topic’ ಅಂತ ಇರುವಲ್ಲಿ ಯಾವ ವಿಷಯದ ಬಗ್ಗೆ ಚರ್ಚೆ ಎಂಬುದನ್ನು ನಮೂದಿಸಬೇಕು. “Open” ಒತ್ತಿದರೆ ಯಾರು ಬೇಕಾದರೂ ಸೇರಿಕೊಳ್ಳಬಹುದು. ‘Social’ ಒತ್ತಿದರೆ, ನಾವು ಫಾಲೋ ಮಾಡುವವರು ಮಾತ್ರ ಬರುತ್ತಾರೆ. ‘Closed’ ಒತ್ತಿದರೆ, ಯಾರು ಬೇಕೋ ಅವರನ್ನಷ್ಟೇ ಕರೆದು ಗೌಪ್ಯ ಮಾತುಕತೆ ನಡೆಸಬಹುದು. ಇದು ಆ ಕ್ಷಣದಲ್ಲಿಯೇ ಚರ್ಚಾ ಕೊಠಡಿ ತೆರೆಯಲು ಅವಕಾಶ ಮಾಡುತ್ತದೆ.

ಇದೇ ಚರ್ಚೆಯನ್ನು ನಾಳೆಯೋ, ನಾಡಿದ್ದೋ ನಿಗದಿಪಡಿಸಬೇಕಿದ್ದರೆ, ಆರಂಭಿಕ ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ಕ್ಯಾಲೆಂಡರ್ ಐಕಾನ್ ಒತ್ತಬೇಕು. ಅಲ್ಲಿ ಮುಂದೆ ಬರಲಿರುವ ಕಾರ್ಯಕ್ರಮಗಳ ವಿವರ ಇರುತ್ತದೆ. ಬಲ ಮೇಲ್ತುದಿಯಲ್ಲಿ ಕ್ಯಾಲೆಂಡರ್‌ಗೆ ಪ್ಲಸ್ ಗುರುತು ಇರುವ ಐಕಾನ್ ಒತ್ತಿದರೆ, ಕಾರ್ಯಕ್ರಮದ ಹೆಸರು, ಯಾರೆಲ್ಲಾ ಇರುತ್ತಾರೆ (ಅವರನ್ನು Co-Host ಅಥವಾ ಅತಿಥಿಯಾಗಿ ಆಯ್ಕೆ ಮಾಡಿಕೊಳ್ಳಬಹುದು), ದಿನಾಂಕ, ಸಮಯ ಆಯ್ಕೆ ಮಾಡಿದ ಬಳಿಕ, ನಾವು ಸದಸ್ಯರಾಗಿರುವ ಯಾವ ಕ್ಲಬ್‌ನ ಆತಿಥ್ಯದಲ್ಲಿ ಈ ಕಾರ್ಯಕ್ರಮ ಏರ್ಪಡಿಸಬೇಕೆಂದು ಆಯ್ಕೆ ಮಾಡಿಕೊಳ್ಳಬಹುದು. ಕೊನೆಯಲ್ಲಿ ವಿವರ ಬರೆಯಲು (200 ಅಕ್ಷರ ಮಿತಿ) ಅವಕಾಶವಿರುತ್ತದೆ.

ಸದಸ್ಯರು ಚರ್ಚಾ ಕೊಠಡಿ ಆರಂಭಿಸಬಹುದೇ?
ಚರ್ಚಾ ಕೊಠಡಿ ಆರಂಭಿಸಲು ನಿರ್ದಿಷ್ಟ ಕ್ಲಬ್‌ನ ಒಡೆಯರು ಅನುಮತಿ (ಸೆಟ್ಟಿಂಗ್ಸ್‌ನಲ್ಲಿ Let Members Start Room ಆಯ್ಕೆ) ಕೊಟ್ಟರೆ ಮಾತ್ರ ಆ ಕ್ಲಬ್ ಹೆಸರಲ್ಲಿ ಆದರ ಸದಸ್ಯರು ಕಾರ್ಯಕ್ರಮ ಅಥವಾ ಗೋಷ್ಠಿ ಆರಂಭಿಸಬಹುದು. ಈ ವೈಶಿಷ್ಟ್ಯವನ್ನು ಆಫ್ ಮಾಡುವ ಆಯ್ಕೆಯೂ ಇರುತ್ತದೆ. ಇಲ್ಲವೆಂದಾದರೆ, ತಾವಾಗಿಯೇ ಖಾಸಗಿ ಗೋಷ್ಠಿಗಳನ್ನು ಆಯೋಜಿಸಬಹುದು.

ಹಣ ಮಾಡಬಹುದೇ?
ಹೊಚ್ಚ ಹೊಸ ವೈಶಿಷ್ಟ್ಯ ಪ್ರಾಯೋಗಿಕ ಹಂತದಲ್ಲಿ ಪರಿಚಯಿಸಲಾಗಿದೆ. ಕೇಳುಗರು ಕ್ಲಬ್ ಕಾರ್ಯಕ್ರಮ ನಡೆಸುತ್ತಿರುವವರ ಖಾತೆಗೆ ಎಷ್ಟು ಬೇಕಿದ್ದರೂ ಉದಾರವಾಗಿ ಹಣ ಕಳುಹಿಸಬಹುದು. ಈ ವೈಶಿಷ್ಟ್ಯ ಲಭ್ಯ ಇದ್ದವರ ಪ್ರೊಫೈಲ್ ನೋಡಿದಾಗ ‘Send Money’ ಆಯ್ಕೆ ಕಾಣಿಸುತ್ತದೆ. ಅಮೆರಿಕದಲ್ಲಿ ಈಗಾಗಲೇ ಪರಿಚಯಿಸಲಾಗಿದೆ.

ರೆಕಾರ್ಡ್ ಮಾಡಬಹುದೇ?
ಕ್ಲಬ್ ಹೌಸ್ ಆ್ಯಪ್ ನಿಯಮದ ಪ್ರಕಾರ, ಅಲ್ಲಿ ಬಂದು ಮಾತನಾಡುವ ಎಲ್ಲರ ಅನುಮತಿಯಿದ್ದರೆ ಮಾತ್ರವೇ ಕ್ಲಬ್‌ಹೌಸ್ ಚಟುವಟಿಕೆಯನ್ನು ರೆಕಾರ್ಡ್ ಮಾಡಬಹುದು. ಆ್ಯಪ್ ಮೂಲಕವೇ ರೆಕಾರ್ಡ್ ಮಾಡುವ ಆಯ್ಕೆ ಇಲ್ಲ. ಬದಲಾಗಿ, ಇದಕ್ಕಾಗಿ ಬಾಹ್ಯ ತಂತ್ರಜ್ಞಾನ ಬಳಸಬಹುದು. ಉದಾಹರಣೆಗೆ, ನಿಶ್ಶಬ್ಧ ಕೊಠಡಿಯಲ್ಲಿ ಕ್ಲಬ್‌ಹೌಸ್ ಕೇಳುತ್ತಾ, ಬೇರೊಂದು ಮೊಬೈಲ್ ಅಥವಾ ರೆಕಾರ್ಡರ್ ಬಳಸಿ ರೆಕಾರ್ಡ್ ಮಾಡಿಕೊಳ್ಳಬಹುದು.

ಕಂಪ್ಯೂಟರಿನಲ್ಲಿ
ಪ್ರಸ್ತುತ ಕಂಪ್ಯೂಟರಿನಿಂದ ಕಾರ್ಯಾಚರಿಸುವ ಆಯ್ಕೆಯನ್ನು ಕ್ಲಬ್‌ಹೌಸ್ ನೀಡಿಲ್ಲ. ಆದರೆ ಬಾಹ್ಯ ತಂತ್ರಜ್ಞಾನಗಳ ಮೂಲಕ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಮೂಲಕ ನಿಭಾಯಿಸಬಹುದು. ಕ್ಲಬ್‌ಡೆಕ್ ಎಂಬ ಕಿರು ತಂತ್ರಾಂಶವಿದ್ದು, ಅಲ್ಲೂ ನಮ್ಮ ಫೋನ್ ನಂಬರ್, ಇಮೇಲ್ ವಿಳಾಸ ನೀಡಲು ಸಿದ್ಧರಿದ್ದರೆ, ರೆಕಾರ್ಡಿಂಗ್ ಆಯ್ಕೆಯೂ ಅಲ್ಲೇ ದೊರೆಯುತ್ತದೆ. ಇದರ ಇಂಟರ್ಫೇಸ್ ಅನುಕೂಲಕರವಾಗಿಲ್ಲ.

Clubhouse explained article published in Prajavani on 20 Jul 2021

LEAVE A REPLY

Please enter your comment!
Please enter your name here