ಶಾಲೆ ಶುರುವಾಯ್ತು! ಅಮ್ಮಂದಿರಿಗೆ ‘ಮಕ್ಕಳು ಚೆನ್ನಾಗಿ ಓದಲಪ್ಪಾ’ ಎಂಬ ತಳಮಳವಾದರೆ, ಅಪ್ಪಂದಿರಿಗೆ, ‘ಉಫ್, ಈ ಶಾಲೆಗಳೂ ಉದ್ಯಮಗಳಾಗುತ್ತಿವೆ, ಬೆಲೆ ಏರಿಕೆಯ ದಿನಗಳಲ್ಲಿ ಫೀಸು ಎಷ್ಟೂಂತ ಹೊಂದಿಸಲಿ. ಪೈಪೋಟಿಯ ಈ ಯುಗದಲ್ಲಿ ಶಾಲೆಗಳ ಫೀಸಿನಲ್ಲಿಯೇ ಪೈಪೋಟಿ ಇರುವಂತಿದೆ’ ಎಂಬ ಚಿಂತೆ. ಆದರೆ ಅದೇ, ಶಾಲೆಗೆ ಹೋಗಲೇಬೇಕಾದ ಮಕ್ಕಳಿಗೆ ಮಾತ್ರ, ಮನಸ್ಸಿನೊಳಗಿನ ತಳಮಳದ ನಡುವೆಯೇ ಹೊಸ ಗೆಳೆಯರು, ಹೊಸ ಪುಸ್ತಕ, ಹೊಸ ಪೆನ್ನು, ಹೊಸಾಹೊಸ ಡ್ರೆಸ್ಸು… ಇವುಗಳ ಕನಸು.
ಬಿರು ಬೇಸಿಗೆ ಕಳೆದು, ಮಳೆಗಾಲ ಶುರುವಾಗುವುದರೊಂದಿಗೇ ಆರಂಭವಾಗುವ ಶಾಲೆಯ ದಿನಗಳಲ್ಲಿ ಕರಾವಳಿ, ಮಲೆನಾಡು ಭಾಗದ ಮಕ್ಕಳ ಆತಂಕಕ್ಕೆ ಕಾರಣವಾಗಲು ಇನ್ನೊಂದು ಕಾರಣವೂ ಇದೆ. ಆಗಸವಿಡೀ ಕತ್ತಲ ಕಾರ್ಮೋಡ. ಹೀಗಾಗಿ ಬೆಳಗ್ಗೆ ಏಳಲು ತ್ರಾಸ ಪಡುವ ಮಕ್ಕಳು, ಬಲವಂತವಾಗಿ ಎದ್ದು ಸ್ನಾನ ಮುಗಿಸಿ ಶಾಲೆಗೆ ಹೊರಟು ಕುಳಿತರೆ, ನಿದ್ದೆಯ ಗುಂಗು ಇನ್ನೂ ಇಳಿದಿರುವುದಿಲ್ಲ. ಮತ್ತಷ್ಟು ಹೊತ್ತು ಮಲಗಬಹುದಿತ್ತು, ಮಳೆ ಜೋರಾಗಿ ಬರಲಪ್ಪಾ, ಶಾಲೆಗೆ ರಜೆ ಸಿಗಲಪ್ಪಾ ಅಂತ ಮನಸ್ಸಿನೊಳಗೇ ಮಂಡಿಗೆ ಮೆಲ್ಲುವುದು ಈ ಭಾಗದ ಮಕ್ಕಳ ನಿತ್ಯಕರ್ಮಗಳಲ್ಲಿ ಒಂದು.
ಇದಕ್ಕೆ ಕಾರಣವೂ ಇಲ್ಲದಿಲ್ಲ. ರಜೆ ಎಂದರೆ ಯಾವ ಮಕ್ಕಳಿಗೆ ತಾನೇ ಇಷ್ಟ ಇಲ್ಲ? ರಜಾ ದಿನಗಳಲ್ಲಿರುವ ರಜೆಗಿಂತಲೂ, ಶಾಲಾ ದಿನಗಳಲ್ಲಿ ದೊರೆಯುವ ರಜೆಗೆ ಹೆಚ್ಚಿನ ಮಹತ್ವ, ಅದರಲ್ಲಿರುವ ಆನಂದವೂ ಹೆಚ್ಚು. ಶಾಲೆಗೆ ಹೊರಟಾಗ, ಹೊಸ ಅಂಗಿ ಬಟ್ಟೆ ಕೊಳೆಯಾಗುವುದು, ನಡೆದುಕೊಂಡು ಹೊರಟಾಗ ವಾಹನಗಳು ಭರ‌್ರನೇ ಸಾಗುತ್ತಾ, ಮಾರ್ಗದಲ್ಲಿದ್ದ ಕೆಸರನ್ನು ಸಮವಸ್ತ್ರಗಳ ಮೇಲೆ ರಾಚಿಸುವುದು, ಜೋರಾದ ಮಳೆ ಗಾಳಿಗೆ ಕೊಡೆಯು ಕೈಯಿಂದಲೇ ಹಾರಿಹೋಗುವುದು ಅಥವಾ ಉಲ್ಟಾ ಆಗಿ ಮಡಚಿಕೊಳ್ಳುವುದು… ಇವೆಲ್ಲವೂ ಈ ಭಾಗದಲ್ಲಿ ಸರ್ವೇ ಸಾಮಾನ್ಯ. ಹೊಸ ಕೊಡೆ ಖರೀದಿಸಿದ್ದರೂ ಕೂಡ, ಬಿರು ಮಳೆಯನ್ನು ಅದು ತಾಳಿಕೊಳ್ಳಲಾಗದೆ, ಮೈಯೆಲ್ಲಾ ಒದ್ದೆಯಾಗುವಾಗ ಮಕ್ಕಳಿಗೆ ಪುಳಕವಾಗುತ್ತದೆಯಾದರೂ, ಹೆತ್ತವರಿಗೆ ಮಾತ್ರ ‘ಮಗು ಒದ್ದೆಯಾಗಿಬಿಡುತ್ತದೆ, ಶೀತ-ಜ್ವರ ಬಂದರೆ?’ ಎಂಬ ಆತಂಕ.
ಅದೇ, ಗ್ರಾಮೀಣ ಪ್ರದೇಶದಲ್ಲಿ ನಡೆದು ಶಾಲೆಗೆ ಹೋಗುತ್ತಿರುವಾಗ ನದಿ ತೊರೆಗಳೆಲ್ಲ ಕಂಡುಬರುವುದು ಸರ್ವೇ ಸಾಮಾನ್ಯ. ಕೆಲವು ಊರಿನ ನದಿಗಳಲ್ಲಿ ಮಳೆಗಾಲದಲ್ಲಿ ಪ್ರವಾಹ ಉಕ್ಕೇರಿ ಹರಿಯುವುದುಂಟು. ಸೇತುವೆ ಇರುವ ಜಾಗದಲ್ಲಿ ನೀರು ಎಷ್ಟು ಅಡಿ ಮೇಲಕ್ಕೆ ಬಂದಿದೆ ಎಂಬುದನ್ನು ಸೂಚಿಸುವ ಸ್ಕೇಲುಗಳನ್ನು ಅಳವಡಿಸಿರುತ್ತಾರೆ. ಅಪಾಯದ ಮಟ್ಟಕ್ಕೆ ಕೆಂಪು ಗೆರೆ ಎಳೆಯಲಾಗಿರುತ್ತದೆ. ಆ ಕೆಂಪು ಗೆರೆಯ ಸಮೀಪದಲ್ಲಿ ನೀರು ಬಂದರೆ, ಶಾಲೆಗೆ ಆ ದಿನ ರಜೆ ಸಿಗುವುದು ಗ್ಯಾರಂಟಿ. ಹೀಗಾಗಿ ಶಾಲೆಗೆ ಹೋಗುವಾಗ ಆ ಮಟ್ಟವನ್ನೇ ನೋಡಿ ಮುಂದುವರಿಯುವುದು ಕೆಲವು ಮಕ್ಕಳಿಗಂತೂ ದೈನಂದಿನ ಕೆಲಸ ಕಾರ್ಯಗಳಲ್ಲೊಂದು.
ಹಿಂದೆಲ್ಲಾ ಜೂನ್ 15ಕ್ಕೆ ಆರಂಭವಾಗುತ್ತಿದ್ದ ಶಾಲೆಗಳು ಈಗೀಗ ಮಕ್ಕಳ ರಜಾ ಕಾಲದ ಮೋಜುಗಳ ದಿನಗಳನ್ನು ಕಡಿತಗೊಳಿಸಿ, ಸ್ಫರ್ಧಾತ್ಮಕ ಯುಗದಲ್ಲಿ ಬಲು ಬೇಗನೇ ಆರಂಭ ಕಾಣುತ್ತಿವೆ. ಗ್ರಾಮೀಣ ಭಾಗದಲ್ಲಿ ಶಾಲೆಗಳು ಎಂದಿನಂತೆಯೇ ಕಾರ್ಯಾಚರಿಸುತ್ತಿದ್ದರೂ, ನಗರ ಭಾಗದ ಮಕ್ಕಳು ಒಂದೆರಡು ವಾರಗಳ ಮುಂಚಿತವಾಗಿಯೇ ಸ್ಲೇಟು, ಚೀಲ, ಬಳಪ ಹಿಡಿದು ಶಾಲೆಗೆ ಸಿದ್ಧವಾಗಬೇಕಾಗುತ್ತದೆ.
ಶಾಲಾರಂಭದ ಮೊದಲ ದಿನ ಹೊಸ ಫ್ರೆಂಡ್ಸ್ ಪರಿಚಯಕ್ಕೆ ಸೀಮಿತ. ಆ ದಿನ ಟೀಚರ್ ಪಾಠ ಮಾಡುವುದಿಲ್ಲ ಎಂಬುದು ಎಲ್ಲ ವಿದ್ಯಾರ್ಥಿಗಳಿಗೆ ಪಕ್ಕಾ ಆಗಿಬಿಟ್ಟಿದೆ. ಪರಸ್ಪರ ಪರಿಚಯ ಮಾಡಿಕೊಳ್ಳುವುದು, ಯಾವ ತರಗತಿ, ಯಾವ ವಿಭಾಗ ಎಂದು ಹುಡುಕುವುದು, ರಜಾ ದಿನಗಳಲ್ಲಿ ಯಾರ್ಯಾರು ಏನೇನು ಮಾಡಿದರು ಎಂಬ ವಿಚಾರಣೆಯಲ್ಲೇ ಕಳೆದುಹೋಗುತ್ತದೆ. ಹಿಂದಿನ ತರಗತಿಯಲ್ಲಿ ಗಳಿಸಿದ ಅಂಕಗಳು ಕೂಡ ಚರ್ಚೆಗೆ ಬರುವುದುಂಟು.
ಓದಿನ ಮೇಲೆ ಸಂಪೂರ್ಣವಾಗಿ ಗಮನ ಕೇಂದ್ರೀಕರಿಸಿದ ಮಕ್ಕಳು ಮತ್ತು ತಂದೆ-ತಾಯಿಯ ‘ಚೆನ್ನಾಗಿ ಓದಲೇಬೇಕು, ಎಲ್ಲರಿಗಿಂತ ಫಸ್ಚು ಬರಬೇಕು’ ಎಂಬೆಲ್ಲಾ ಉಪದೇಶಕ್ಕೆ ತುತ್ತಾಗಿ ಕುಗ್ಗಿ ಹೋಗುವ ಮಕ್ಕಳು ಮೊದಲ ಸಾಲಿನ ಬೆಂಚಿನಲ್ಲೇ ತಮ್ಮ ಜಾಗ ಭದ್ರಪಡಿಸಿಕೊಳ್ಳುವ ಧಾವಂತದಲ್ಲಿದ್ದರೆ, ಪೋಕರಿ ಮಕ್ಕಳು, ವಯೋಸಹಜವಾದ ತುಂಟತನ ಹೊಂದಿರುವವರು ಹಿಂದಿನ ಬೆಂಚನ್ನೇ ಗಟ್ಟಿ ಮಾಡಿಕೊಳ್ಳಲು ಮುಂದಾಗುತ್ತಾರೆ. ಇನ್ನು ಅತ್ತಲೂ ಇಲ್ಲ, ಇತ್ತಲೂ ಇಲ್ಲ ಎಂಬ ಮನಸ್ಥಿತಿಯವರು ಮತ್ತು ಜಾಗ ಯಾವುದಾದರೇನು, ಕಲಿಯುವುದು ವಿದ್ಯೆಯೇ ಅಲ್ಲವೇ ಎಂಬ ಭಾವನೆಯುಳ್ಳ ಮಕ್ಕಳು ಮಧ್ಯದ ಬೆಂಚುಗಳಲ್ಲಿಯೋ, ಜಾಗ ಸಿಗುವಲ್ಲಿಯೋ, ಕೂರುತ್ತಾರೆ. ಕೊಂಚ ಸೀರಿಯಸ್ ಆಗಿಯೇ ಇರುವವರು ತಮ್ಮ ಸ್ನೇಹಿತರನ್ನು ಅನುಸರಿಸುತ್ತಾರೆ.
ಶಾಲೆಯ ಮೊದಲ ದಿನವಂತೂ ಬಹುತೇಕರಿಗೆ ಅವಿಸ್ಮರಣೀಯ. ಆ ಪುಳಕವೇ ಮಕ್ಕಳ ಕಲಿಕೆಗೆ ಹೇತುವಾಗುತ್ತದೆ. ಆ ದಿನ ಚೆನ್ನಾಗಿಯೇ ಕಳೆದರೆ ಮಗು ಉತ್ಸಾಹದಿಂದ ಮುಂದುವರಿಯುತ್ತದೆ, ಆ ದಿನ ಏನಾದರೂ ಉತ್ಸಾಹ ಕುಗ್ಗುವಂತಹಾ ಚಟುವಟಿಕೆ ಇದ್ದರೆ ಮಗು ಮಾನಸಿಕವಾಗಿ ಕುಗ್ಗುತ್ತದೆ. ಅದೇ ಹೇಳ್ತಾರಲ್ಲಾ, ಫಸ್ಟ್ ಇಂಪ್ರೆಷನ್ ಈಸ್ ದ ಬೆಸ್ಟ್ ಇಂಪ್ರೆಷನ್ ಅಂತಾ. ಹಾಗೆ. ಹೊಸ ಕನಸು, ಹೊಸ ಮನಸು, ಹೊಸ ಹೊಸ ಭರವಸೆಗಳೊಂದಿಗೆ ಶಾಲೆಗೆ ಹೊರಟಿರುವ ಮಕ್ಕಳಿಗೆ ಒಂದು ಪ್ರೀತಿ ತುಂಬಿದ ಶುಭಾಶಯ.
‘ಅಭಿ’
[ವಿಜಯ ಕರ್ನಾಟಕ ಲವಲವಿಕೆಯಲ್ಲಿ ಪ್ರಕಟ]