ಇತ್ತೀಚೆಗೆ ವಾಟ್ಸ್ಆ್ಯಪ್ ಬಳಕೆ ಹೆಚ್ಚಾಗುತ್ತಿದೆ. ಅದರಲ್ಲೂ ಮನೆಯಿಂದಲೇ ಕೆಲಸ ಮಾಡುವವರಿಗಂತೂ ಕಚೇರಿ ಸಂಬಂಧಿತ ಮತ್ತು ಕೆಲವೊಂದು ವೈಯಕ್ತಿಕ ಆಸಕ್ತಿ – ಹೀಗೆ ಹತ್ತಾರು ಗ್ರೂಪುಗಳಲ್ಲಿ ಇರುವುದು ಅನಿವಾರ್ಯ. ಗ್ರೂಪುಗಳಲ್ಲಿ ಕೆಲವರು ಅಗತ್ಯವೋ, ಅನಗತ್ಯವೋ ತಿಳಿಯದೆ ಫಾರ್ವರ್ಡ್ ಫೈಲ್‌ಗಳನ್ನೂ ಕಳುಹಿಸುತ್ತಿರುತ್ತಾರೆ. ಹೀಗಾಗಿ ಫೋಟೊ, ವಿಡಿಯೊ, ಜಿಫ್ ಮುಂತಾದ ಫೈಲ್‌ಗಳು ನಮ್ಮ ಮೊಬೈಲ್ ಫೋನ್‌ನಲ್ಲಿ ಡೌನ್‌ಲೋಡ್ ಆಗಿ ಅದರಲ್ಲಿ ಸ್ಟೋರೇಜ್ ಸ್ಥಳಾವಕಾಶ ಕೊರತೆಗೆ ಕಾರಣವಾಗುತ್ತಿದೆ.
ವಾಟ್ಸ್ಆ್ಯಪ್‌ನಿಂದ ಬರುವ ಫೈಲ್‌ಗಳನ್ನು ನೇರವಾಗಿ ಮೆಮೊರಿ ಕಾರ್ಡ್‌ಗೆ ಡೌನ್‌ಲೋಡ್ ಆಗುವಂತೆ ಮಾಡುವ ವ್ಯವಸ್ಥೆಯಿನ್ನೂ ಬಂದಿಲ್ಲ. ಹೀಗಾಗಿ ಅದು ಫೋನ್ ಮೆಮೊರಿಯನ್ನೇ ಕಬಳಿಸುತ್ತದೆ. ಆದರೆ, ಈ ಸಮಸ್ಯೆಯಾಗದಂತೆ ಮಾಡಲು ಫೇಸ್‌ಬುಕ್ ಒಡೆತನದ ವಾಟ್ಸ್ಆ್ಯಪ್ ಕಂಪನಿಯು ಬಳಕೆದಾರರಿಗೆ ಎರಡು ಸೌಕರ್ಯಗಳನ್ನು ಒದಗಿಸಿದೆ. ಅದರ ಉಪಯೋಗ ಹೇಗೆಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ತಿಳಿಯದೇ ಇರುವವರಿಗಾಗಿ ಈ ವಿವರ.
ಮೊದಲನೆಯದು, ವಾಟ್ಸ್ಆ್ಯಪ್‌ನಲ್ಲಿ ಬರುವ ಫೈಲ್‌ಗಳು ಸ್ವಯಂಚಾಲಿತವಾಗಿ ನಿಮ್ಮ ಫೋನ್‌ಗಳಿಗೆ ಡೌನ್‌ಲೋಡ್ ಆಗದಂತೆ ತಡೆಯುವುದು. ಹೀಗೆ ಮಾಡಿದರೆ ಸ್ಪೇಸ್ ಉಳಿತಾಯವಾಗುತ್ತದೆ. ಬೇಕಾದ ಫೋಟೊ, ವಿಡಿಯೊಗಳನ್ನಷ್ಟೇ ನಾವು ಡೌನ್‌ಲೋಡ್ ಮಾಡಿಕೊಂಡು ನೋಡಬಹುದು.
ಸ್ವಯಂಚಾಲಿತ ಡೌನ್‌ಲೋಡ್ ತಡೆಯುವುದು
ವಾಟ್ಸ್ಆ್ಯಪ್ ತೆರೆದು, ಬಲ ಮೇಲ್ಭಾಗದಲ್ಲಿರುವ ಮೂರು ಚುಕ್ಕೆಗಳಿರುವಲ್ಲಿ ಒತ್ತಿದಾಗ, ಸೆಟ್ಟಿಂಗ್ಸ್ ಕಾಣಿಸುತ್ತದೆ. ನಂತರ ‘Data and Storage Usage’ ಅಂತ ಇರುತ್ತದೆ. ಅದನ್ನು ಸ್ಪರ್ಶಿಸಿದಾಗ, ‘Media auto-download’ ಎಂಬಲ್ಲಿ ಮೂರು ಆಯ್ಕೆಗಳಿರುತ್ತವೆ. ಮೊಬೈಲ್ ಡೇಟಾ ಬಳಸುವಾಗ, ವೈಫೈ ಬಳಸುವಾಗ ಹಾಗೂ ರೋಮಿಂಗ್ ಇರುವಾಗ ಎಂಬ ಈ ಆಯ್ಕೆಗಳನ್ನು ಒಂದೊಂದಾಗಿ ಒತ್ತಿ. ಪ್ರತಿಯೊಂದರಲ್ಲಿಯೂ ಫೋಟೋ, ವಿಡಿಯೊ, ಆಡಿಯೊ, ಡಾಕ್ಯುಮೆಂಟ್ ಎಂಬ ನಾಲ್ಕೂ ಆಯ್ಕೆಗಳಿರುತ್ತವೆ. ಅವುಗಳ ಪಕ್ಕದ ಬಾಕ್ಸ್‌ನಲ್ಲಿ ಟಿಕ್ ಗುರುತನ್ನು ತೆಗೆಯಿರಿ (ಅನ್-ಚೆಕ್ ಮಾಡಿ). ಹೀಗೆ ಮಾಡಿದರೆ, ವಾಟ್ಸ್ಆ್ಯಪ್ ಸಂದೇಶಗಳಲ್ಲಿ ಬರುವ ಯಾವುದೇ ಫೈಲ್‌ಗಳು ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗುವುದಿಲ್ಲ.
ಗ್ಯಾಲರಿಯಲ್ಲಿ ಸೇವ್ ಆಗದಂತೆ ಮಾಡುವುದು
ಫೈಲ್‌ಗಳನ್ನು ಡೌನ್‌ಲೋಡ್ ಮಾಡಿಯೇ ನಾವು ನೋಡಬೇಕಾಗಿರುವುದರಿಂದ ಅವುಗಳು ನಮ್ಮ ಮೊಬೈಲ್‌ನ ಗ್ಯಾಲರಿಯಲ್ಲಿ ಸೇವ್ ಆಗಿ, ಸ್ಪೇಸ್ ಕಬಳಿಸುತ್ತವೆ. ಹೀಗಾಗದಂತೆ ಮಾಡಲು ಮತ್ತೊಂದು ಟ್ರಿಕ್ ಇದೆ. ಮೂರು ಚುಕ್ಕಿಗಳನ್ನು ಒತ್ತಿ, ಸೆಟ್ಟಿಂಗ್ಸ್ ತೆರೆದಾಗ, ‘ಚಾಟ್ಸ್’ ಒತ್ತಿ. ಸ್ವಲ್ಪ ಕೆಳಗೆ ‘Media Visibility’ ಎಂಬ ಬಟನ್ ಇರುತ್ತದೆ. ಆಫ್‌ಗೆ ಸ್ಲೈಡ್ ಮಾಡಿದರೆ, ವಾಟ್ಸ್ಆ್ಯಪ್‌ನಿಂದ ಬಂದ ಫೈಲ್‌ಗಳು ಗ್ಯಾಲರಿಯಲ್ಲಿ ಕಾಣಿಸುವುದಿಲ್ಲ. ಈ ಸೆಟ್ಟಿಂಗ್ ಅನ್ನು ನಿರ್ದಿಷ್ಟ ಗ್ರೂಪ್‌ಗಳಿಗೂ ಸೀಮಿತಗೊಳಿಸಬಹುದು. ಗ್ರೂಪಿನ ಮೇಲ್ಭಾಗದಲ್ಲಿ ‘Group info’ ಒತ್ತಿದಾಗ, ಕೆಳಗೆ ‘Media Visibility’ ಸೆಟ್ಟಿಂಗ್ ಕಾಣಿಸುತ್ತದೆ. ಅಲ್ಲಿ ಆಫ್ ಮಾಡಿದರಾಯಿತು.
ಅಗತ್ಯ ಫೈಲ್‌ಗಳನ್ನು ಆಗಾಗ್ಗೆ ಕಂಪ್ಯೂಟರ್ ಅಥವಾ ಮೆಮೊರಿ ಕಾರ್ಡ್‌ಗೆ ವರ್ಗಾಯಿಸುವುದನ್ನೂ ರೂಢಿಸಿಕೊಂಡರೆ ಉತ್ತಮ.
ಪ್ರಜಾವಾಣಿಯಲ್ಲಿ ಪ್ರಕಟ by ಅವಿನಾಶ್ ಬಿ.