ಫೇಸ್‌ಬುಕ್‌ನ ವಿಡಿಯೊ, ಫೋಟೊಗಳನ್ನು Googleಗೆ ವರ್ಗಾಯಿಸುವುದು ಹೇಗೆ?

0
268

ಫೇಸ್‌ಬುಕ್ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಅಮೂಲ್ಯ ಕ್ಷಣಗಳನ್ನು ಚಿತ್ರ ಹಾಗೂ ವಿಡಿಯೊ ರೂಪದಲ್ಲಿ ನಾವು ಈಗಾಗಲೇ ಅಪ್‌ಲೋಡ್ ಮಾಡಿಬಿಟ್ಟಿದ್ದೇವೆ. ಫೇಸ್‌ಬುಕ್ ಲಾಗಿನ್ ಕ್ರೆಡೆನ್ಷಿಯಲ್‌ಗಳು ಕಳೆದುಹೋದರೆ ಅಥವಾ ಅಪ್ಪಿ ತಪ್ಪಿ ಬ್ಲಾಕ್ ಆಗಿಬಿಟ್ಟರೆ, ಈ ಅಮೂಲ್ಯ ಕ್ಷಣಗಳನ್ನೂ ಕಳೆದುಕೊಳ್ಳದಂತಿರಲು ಒಂದು ನೂತನ ಟೂಲ್ ಬಿಡುಗಡೆಯಾಗಿದೆ. ಫೇಸ್‌ಬುಕ್‌ನಲ್ಲಿರುವ ಫೋಟೋ, ವಿಡಿಯೊಗಳನ್ನು ನಾವು ಬೇರೆ ಕಡೆ ಸಮರ್ಪಕವಾಗಿ ಸೇವ್ ಮಾಡಿಟ್ಟುಕೊಳ್ಳಲು ಈ ಟೂಲ್ ನೆರವಾಗುತ್ತದೆ.

ಇದುವರೆಗೆ, ನಮ್ಮ ಫೇಸ್‌ಬುಕ್ ಪುಟ ಅಥವಾ ಪ್ರೊಫೈಲ್‌ನಲ್ಲಿ ಪೋಸ್ಟ್ ಮಾಡಲಾಗಿರುವ ಫೋಟೋ, ವಿಡಿಯೊಗಳನ್ನು ಕಂಪ್ಯೂಟರಿಗೆ ಇಲ್ಲವೇ ಮೊಬೈಲ್ ಫೋನ್‌ಗೆ ಡೌನ್‌ಲೋಡ್ ಮಾಡಿಕೊಳ್ಳಬೇಕಿತ್ತು. ಹೀಗೆ ಮಾಡಿದರೆ, ಈ ಫೈಲ್‌ಗಳ ಸಂಗ್ರಹಣೆಗೆ ಸ್ಥಳಾವಕಾಶದ ಸಮಸ್ಯೆಯಾಗಬಹುದು. ಇಂಥ ಸಂದರ್ಭದಲ್ಲಿ ನೆರವಿಗೆ ಬರುವುದೇ ಕ್ಲೌಡ್ ಸ್ಟೋರೇಜ್. ಗೂಗಲ್‌ನ ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆ ಬಳಸುತ್ತಿರುವವರೆಲ್ಲರಿಗೂ ಜಿಮೇಲ್ ಖಾತೆಗೆ ಲಿಂಕ್ ಆಗಿರುವ ‘ಗೂಗಲ್ ಫೋಟೋಸ್’ ಗೊತ್ತಿರುತ್ತದೆ. ಗೂಗಲ್‌ನ ಕ್ಲೌಡ್‌ನಲ್ಲಿ ನಮ್ಮೆಲ್ಲ ಫೋಟೋ, ವಿಡಿಯೊಗಳನ್ನು ಸುರಕ್ಷಿತವಾಗಿ ಸೇವ್ ಮಾಡಿಟ್ಟುಕೊಂಡು, ಬೇಕಾದಾಗ ಡೌನ್‌ಲೋಡ್ ಮಾಡಿಕೊಂಡು ಬಳಸಿಕೊಳ್ಳಬಹುದು. ಇಲ್ಲಿ ವ್ಯವಸ್ಥಿತವಾಗಿ ಸಂಗ್ರಹಿಸಿಟ್ಟುಕೊಳ್ಳುವ ಸ್ವಯಂಚಾಲಿತ ವ್ಯವಸ್ಥೆ ಇರುವುದರಿಂದ, ಬೇಕಾದಾಗ ಹುಡುಕಲು ಅನುಕೂಲ.

ಫೇಸ್‌ಬುಕ್ ಖಾತೆಯ ಫೋಟೊ, ವಿಡಿಯೊಗಳನ್ನು ಗೂಗಲ್ ಫೋಟೋಸ್‌ಗೆ ನೇರವಾಗಿ ವರ್ಗಾಯಿಸುವ ಈ ಸೌಕರ್ಯವನ್ನು ಕಳೆದ ವಾರವಷ್ಟೇ ಭಾರತದಲ್ಲಿ ಪರಿಚಯಿಸಲಾಗಿದೆ. ಆರಂಭದಲ್ಲಿ ಐರ್ಲೆಂಡ್‌ನಲ್ಲಿ ಈ ವ್ಯವಸ್ಥೆ ಲಭ್ಯವಾಗಿದ್ದು, ಯೂರೋಪ್, ಅಮೆರಿಕ, ಕೆನಡಾಗಳ ಬಳಿಕ ಭಾರತದ ಬಳಕೆದಾರರಿಗೆ ದೊರೆಯುತ್ತಿದೆ.

ಹೇಗೆ ಮಾಡುವುದು:
ಫೇಸ್‌ಬುಕ್ ಖಾತೆಗೆ ಲಾಗಿನ್ ಆಗಿ, ಬಲಭಾಗದಲ್ಲಿರುವ ಮೆನು ಐಕಾನ್ ಕ್ಲಿಕ್ ಮಾಡಿ, ‘ಸೆಟ್ಟಿಂಗ್ಸ್’ ಎಂಬುದನ್ನು ಕ್ಲಿಕ್ ಮಾಡಿ. ಎಡ ಮೇಲ್ಭಾಗದಲ್ಲಿ Your Facebook Information ಎಂಬುದನ್ನು ಕ್ಲಿಕ್ ಮಾಡಿದಾಗ, ಬಲ ಭಾಗದಲ್ಲಿ ಕಾಣಿಸುವ Transfer a copy of Your Photos or Videos ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. ಮುಂದೆ Choose Destination ಒತ್ತಿದಾಗ, ‘ಗೂಗಲ್ ಫೋಟೋಸ್’ ಕಾಣಿಸುತ್ತದೆ. ನಂತರ ಫೋಟೋ ಮಾತ್ರ ಅಥವಾ ವಿಡಿಯೊ ಮಾತ್ರವೇ ಎಂಬುದನ್ನು ಆಯ್ದುಕೊಳ್ಳಿ. ‘ನೆಕ್ಸ್ಟ್’ ಕ್ಲಿಕ್ ಮಾಡಿದಾಗ, ಗೂಗಲ್ (ಜಿಮೇಲ್) ಖಾತೆಗೆ ಲಾಗಿನ್ ಆಗಬೇಕಾಗುತ್ತದೆ. ನಂತರ ನೀವು ಅನುಮತಿ ನೀಡಿದ ಬಳಿಕ ಫೋಟೋ, ವಿಡಿಯೊಗಳು ‘ಗೂಗಲ್ ಫೋಟೋಸ್’ಗೆ ನಕಲಾಗುತ್ತವೆ. ಅವು ಫೇಸ್‌ಬುಕ್‌ನಲ್ಲೂ ಉಳಿದಿರುತ್ತವೆ ಎಂಬುದನ್ನು ಗಮನಿಸಿ.

ಇಂಟರ್ನೆಟ್ ದಿಗ್ಗಜ ಕಂಪನಿಗಳಾದ ಫೇಸ್‌ಬುಕ್, ಗೂಗಲ್, ಮೈಕ್ರೋಸಾಫ್ಟ್, ಟ್ವಿಟರ್ ಹಾಗೂ ಆ್ಯಪಲ್ ಸೇರಿಕೊಂಡು ಆರಂಭಿಸಿದ್ದ ದತ್ತಾಂಶ ವರ್ಗಾವಣೆ ಯೋಜನೆಯ ಭಾಗವೇ ಈ ಫೋಟೋ ವರ್ಗಾವಣೆ ಟೂಲ್. ಸದ್ಯಕ್ಕೆ ಫೇಸ್‌ಬುಕ್ ಮತ್ತು ಗೂಗಲ್ ನಡುವೆ ದತ್ತಾಂಶ ವರ್ಗಾವಣೆಗೆ ಅವಕಾಶ ಲಭ್ಯವಾಗಿದ್ದು, ಮುಂದೆ ಉಳಿದ ಕಂಪನಿಗಳೂ ಪರಸ್ಪರ ಡೇಟಾ ವರ್ಗಾವಣೆಗೆ ಅವಕಾಶ ನೀಡಲಿವೆ.

ಪ್ರಜಾವಾಣಿಯಲ್ಲಿ ಪ್ರಕಟಿತ by ಅವಿನಾಶ್ ಬಿ.

LEAVE A REPLY

Please enter your comment!
Please enter your name here