ಇದು ಡಿಜಿಟಲ್ ಇಂಡಿಯಾ ಯುಗ. ಸ್ಮಾರ್ಟ್‌ಫೋನ್‌ಗಳಿಗೆ ಜನ ಮಾರು ಹೋಗಿದ್ದಾರೆ ಮತ್ತು ಕೋಟ್ಯಂತರ ಆ್ಯಪ್‌ಗಳ ನಡುವೆ ನಮಗೆ ನಿಜಕ್ಕೂ ಉಪಯುಕ್ತ ಆ್ಯಪ್‌ಗಳು ಯಾವುವು ಎಂದೆಲ್ಲಾ ಗುರುತಿಸುವುದು ಕಷ್ಟ. ಜಾಸ್ತಿ ಆ್ಯಪ್‌ಗಳನ್ನು ಹಾಕಿಕೊಂಡಷ್ಟೂ ಸ್ಮಾರ್ಟ್‌ಫೋನ್ ಸ್ಲೋ ಆಗುವ ಸಮಸ್ಯೆಗಳು ಕೆಲವರಿಗೆ ಕಾಣಿಸಿಕೊಳ್ಳಬಹುದು. ಹೀಗಾಗಿ ಕಡಿಮೆ ಆ್ಯಪ್‌ಗಳಲ್ಲಿ ಹೆಚ್ಚು ಕೆಲಸ ಮಾಡಿಸಿಕೊಳ್ಳಬಲ್ಲ ವ್ಯವಸ್ಥೆ ಈಗಿನ ಟ್ರೆಂಡ್. ಈ ಮೊದಲು ಕರ್ನಾಟಕ ಸರಕಾರವು ಮೊಬೈಲ್ ಒನ್ ಎಂಬ ಆ್ಯಪ್‌ಗಳ ಗುಚ್ಛವವನ್ನು ಪರಿಚಯಿಸಿ, ರಾಜ್ಯದಲ್ಲಿ ಲಭ್ಯವಿರುವ ವಿವಿಧ ಸೇವೆಗಳನ್ನು ಒಂದೇ ಕಡೆ ಪಡೆಯುವ ವ್ಯವಸ್ಥೆ ಕಲ್ಪಿಸಿರುವುದು ನಿಮಗೆಲ್ಲ ಗೊತ್ತು. ಈಗ ಕೇಂದ್ರ ಸರಕಾರ ಹೊರತಂದಿರುವ ಉಮಂಗ್ ಹೆಸರಿನ ಆ್ಯಪ್ ಕೂಡ ಮತ್ತಷ್ಟು ವೈವಿಧ್ಯಗಳೊಂದಿಗೆ ಗಮನ ಸೆಳೆಯುತ್ತಿದೆ. ಶೀಘ್ರದಲ್ಲೇ ಕರ್ನಾಟಕಕ್ಕೆ ಸಂಬಂಧಿಸಿದ ಆ್ಯಪ್‌ಗಳು ಕೂಡ ಇದರಲ್ಲೇ ಲಭ್ಯವಾಗಲಿದೆ. ವಿಶೇಷವೆಂದರೆ, ಕನ್ನಡವೂ ಸೇರಿದಂತೆ ನಮಗೆ ಬೇಕಾದ ಭಾಷೆಗಳಲ್ಲಿ ಇದರ ಸೇವೆಯನ್ನು ಪಡೆಯಬಹುದಾಗಿದೆ.
ಉಮಂಗ್ ಆ್ಯಪ್ ಅನ್ನು ನಾನು ಅಳವಡಿಸಿಕೊಂಡಿದ್ದು, ಇದರ ಪ್ರಯೋಜನಗಳೇನು ಎಂಬುದರ ಕುರಿತು ವಿಕ ಓದುಗರಿಗೂ ತಿಳಿಯಲಿ ಎಂಬ ಕಾರಣಕ್ಕೆ ಇಲ್ಲಿದೆ ವಿಸ್ತೃತ ಮಾಹಿತಿ. ತುಂಬಾ ಇಷ್ಟವಾದ ವಿಷಯವೆಂದರೆ, ನಮ್ಮ ಭಾಷೆಯಲ್ಲಿಯೇ ಅದರಲ್ಲಿ ಕಸ್ಟಮರ್ ಕೇರ್ ಜತೆ ಚಾಟಿಂಗ್ ನಡೆಸುವ ವ್ಯವಸ್ಥೆಯಿದೆ. ಬೇಕಾದಾಗ ಭಾಷೆ ಬದಲಾಯಿಸಿಕೊಳ್ಳಬಹುದು. ಇಲ್ಲಿ ಹಲವು ಸೇವೆಗಳು ಒಂದೇ ಸ್ಥಳದಲ್ಲಿ ಲಭ್ಯ.
ಪ್ರಾವಿಡೆಂಟ್ ಫಂಡ್ (ಭವಿಷ್ಯ ನಿಧಿ) ವಿವರಗಳನ್ನು ನೋಡುವುದರಿಂದ ಹಿಡಿದು, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ, ಗ್ಯಾಸ್ ಸಿಲಿಂಡರ್ ಬುಕ್ ಮಾಡುವುದು, ನಮ್ಮ ವಾಹನದ ಆರ್‌ಸಿ, ಆಧಾರ್ ಮತ್ತು ಇತರ ದಾಖಲೆಗಳವನ್ನು ಇರಿಸಬಲ್ಲ ಡಿಜಿಲಾಕರ್, ಪಾಸ್‌ಪೋರ್ಟ್ ಸೇವೆ, ರೈತರಿಗೆ ಅನುಕೂಲವಾಗುವ ಸರಕಾರದ ಆ್ಯಪ್‌ಗಳೂ ಇದರಲ್ಲಿ ಮಿಳಿತವಾಗಿದೆ. ಇದನ್ನು ಅಳವಡಿಸಿಕೊಂಡು ಬಿಟ್ಟರೆ, ಹಲವು ಆ್ಯಪ್‌ಗಳ ಕೆಲಸಗಳನ್ನು ಇದೊಂದೇ ಮಾಡುವುದರಿಂದಾಗಿ, ನಿಮ್ಮ ಸ್ಮಾರ್ಟ್ ಫೋನ್‌ನಲ್ಲಿ ಸ್ಪೇಸ್ ಉಳಿತಾಯವಾಗುತ್ತದೆ ಎಂಬುದು ಇದರ ಹೆಚ್ಚುಗಾರಿಕೆ.
ಡಿಜಿಟಲ್ ಇಂಡಿಯಾ ಘೋಷಣೆಗೆ ಅನುಗುಣವಾಗಿ ಮೊಬೈಲ್ ಆಡಳಿತವನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ‘ಯೂನಿಫೈಡ್ ಮೊಬೈಲ್ ಅಪ್ಲಿಕೇಶನ್ ಫಾರ್ ನ್ಯೂ-ಏಜ್ ಗವರ್ನೆನ್ಸ್’ (ಇದರ ಹೃಸ್ವರೂಪವೇ UMANG) ಅಪ್ಲಿಕೇಶನ್ ಅನ್ನು ಕೇಂದ್ರ ಸರಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ರಾಷ್ಟ್ರೀಯ ಇ-ಆಡಳಿತ ಇಲಾಖೆಯು ಅಭಿವೃದ್ಧಿಪಡಿಸಿದೆ.
ಅಳವಡಿಸುವುದು: ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ‘ಉಮಂಗ್’ ಎಂದು ಸರ್ಚ್ ಮಾಡಿ, ಇನ್‌ಸ್ಟಾಲ್ ಮಾಡಿಕೊಳ್ಳಿ. ಆ ಸಂದರ್ಭದಲ್ಲಿಯೇ ಭಾಷೆಯ ಆಯ್ಕೆಗೆ ಅವಕಾಶ ದೊರೆಯುತ್ತದೆ. ಮೂಲತಃ ಇಂಗ್ಲಿಷಿನಲ್ಲಿದ್ದು, ಕನ್ನಡಕ್ಕೂ ಬದಲಾಯಿಸಿಕೊಳ್ಳಬಹುದು. ಅದೇ ರೀತಿ, ನಿಮ್ಮ ಆಧಾರ್ ಸಂಖ್ಯೆಯನ್ನು ಇದಕ್ಕೆ ಜೋಡಿಸಬಹುದು. ಇದು ಐಚ್ಛಿಕವಾಗಿದೆ. ಲಿಂಕ್ ಮಾಡಿಬಿಟ್ಟರೆ, ಆಧಾರ್‌ಗೆ ಸಂಪರ್ಕಗೊಂಡಿರುವ ಆ್ಯಪ್‌ಗಳಲ್ಲಿ (ಉದಾಹರಣೆಗೆ ಅಡುಗೆ ಅನಿಲ ಪೂರೈಕೆದಾರ) ಸ್ವಯಂಚಾಲಿತವಾಗಿ ಮಾಹಿತಿ ಅಪ್‌ಡೇಟ್ ಆಗುತ್ತದೆ.
ಕೆಲವು ಸೇವೆಗಳ ಪರಿಚಯ:
ಗ್ಯಾಸ್ ಬುಕಿಂಗ್: ಇದರಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಹಾಗೂ ಇಂಡೇನ್ ಸಿಲಿಂಡರನ್ನು ಆಯಾ ಕಂಪನಿಗಳ ಅಂತರ್ನಿರ್ಮಿತ ಆ್ಯಪ್ ಮೂಲಕ ಬುಕ್ ಮಾಡಬಹುದು ಮತ್ತು ಹಣವನ್ನೂ ಈ ಆ್ಯಪ್ ಮೂಲಕವೇ ಪಾವತಿಸಬಹುದು.
ಇಪಿಎಫ್‌ಒ ಆ್ಯಪ್ ಮೂಲಕ ಯುಎಎನ್ ನಂಬರ್ ಇದ್ದರೆ ನಮ್ಮ ಪಿಎಫ್ ಖಾತೆಯ ವಿವರಗಳನ್ನು ತಿಳಿದುಕೊಳ್ಳಬಹುದು. ‘ಇ-ರಾಹಿ’ ಮೂಲಕ ನಮ್ಮ ಊರಿನ ಹೆದ್ದಾರಿಗಳಲ್ಲಿ ಕಟ್ಟಬೇಕಾದ ಟೋಲ್ ದರಗಳು ಕಾಣಿಸುತ್ತದೆ.
ಶೈಕ್ಷಣಿಕವಾಗಿ, ಸಿಬಿಎಸ್‍ಇ, ಎಐಸಿಟಿಇ, ರಾಷ್ಟ್ರೀಯ ಸ್ಕಾಲರ್‌ಶಿಪ್ ಯೋಜನೆಯ ಆ್ಯಪ್‌ಗಳು ಇದರೊಳಗೇ ಇದ್ದು, ಆನ್‌ಲೈನ್ ಮೂಲಕ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದಾದ ವ್ಯವಸ್ಥೆಯೂ ಇದೆ. ಇ-ಪಾಠಶಾಲಾ ಎಂಬ ಉಪಯುಕ್ತ ಆ್ಯಪ್ ಇದರಲ್ಲಿ ಮಿಳಿತವಾಗಿರುವುದರೊಂದಿಗೆ ಮಕ್ಕಳಿಗೆ ಪಠ್ಯ ಪುಸ್ತಕಗಳು ಕೂಡ ಇಲ್ಲೇ ದೊರೆಯುತ್ತದೆ.
‘ಮೈ ಪ್ಯಾನ್’ ಮೂಲಕ ಹೊಸ ಪ್ಯಾನ್ ಕಾರ್ಡ್‍ಗೆ ಅರ್ಜಿ ಸಲ್ಲಿಸಬಹುದು. ‘ಎನ್‌ಪಿಎಸ್’ ಮೂಲಕ ರಾಷ್ಟ್ರೀಯ ಪಿಂಚಣಿ ನಿಧಿಯ ವಿವರಗಳನ್ನು ನೋಡಬಹುದು, ವಿಳಾಸ ಬದಲಾವಣೆಯನ್ನೂ ಇಲ್ಲಿ ಮಾಡಬಹುದು. ‘ಪಾಸ್‌ಪೋರ್ಟ್ ಸೇವಾ’ ಮೂಲಕ, ಪಾಸ್‌ಪೋರ್ಟ್ ಮಾಡಿಸಲು ಅಪಾಯಿಂಟ್‌ಮೆಂಟ್ ನಿಗದಿಪಡಿಸಬಹುದು. ಏನೆಲ್ಲಾ ದಾಖಲೆಗಳು ಬೇಕೆಂಬುದನ್ನು ತಿಳಿದುಕೊಳ್ಳಬಹುದು, ಅರ್ಜಿಯ ಸ್ಥಿತಿಗತಿಯನ್ನು ತಿಳಿದುಕೊಳ್ಳಬಹುದು. ‘ಪರಿವಹನ್ ಸೇವಾ’ ಮೂಲಕ ನಿಮ್ಮ ವಾಹನದ ಆರ್‌ಸಿ ಪುಸ್ತಕದ ಪ್ರತಿ ಹಾಗೂ ಡ್ರೈವಿಂಗ್ ಲೈಸೆನ್ಸ್ ಪ್ರತಿಯನ್ನು ಡಿಜಿಲಾಕರ್ ಆ್ಯಪ್ ಮೂಲಕವಾಗಿ ನೋಡಬಹುದು. ‘ಭಾರತ್ ಬಿಲ್ ಪೇ’ ಮೂಲಕ, ನೀರು, ವಿದ್ಯುತ್, ಮೊಬೈಲ್ ಇತ್ಯಾದಿ ಬಿಲ್ ಪಾವತಿಗೆ ಅವಕಾಶಗಳಿವೆ. ಹೊಸದಾಗಿರುವುದರಿಂದಾಗಿ ಎಲ್ಲ ಸೇವೆಗಳು ಇನ್ನಷ್ಟೇ ಲಭ್ಯವಾಗಬೇಕಿದೆ.
ರೈತರಿಗೆ ಅನುಕೂಲ: ಇದಲ್ಲದೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಕೌಶಲ್ಯ ಅಭಿವೃದ್ಧಿ ಯೋಜನೆ, ಕಂದಾಯ ಇಲಾಖೆ ಮುಂತಾದ ಆ್ಯಪ್‌ಗಳು ಇದರಲ್ಲಿವೆ. ಮುಖ್ಯವಾಗಿ ಕೃಷಿಕರಿಗೆ ಅಗತ್ಯವಾದ ಮೊಬೈಲ್ ನಂಬರ್ ಆಧರಿತ ‘ಸಾಯಿಲ್ ಹೆಲ್ತ್ ಕಾರ್ಡ್’, ಕಿಸಾನ್ ಸುವಿಧಾ, ಕೃಷಿ ಯಂತ್ರೋಪಕರಣಗಳನ್ನು ಎಲ್ಲಿ ಖರೀದಿಸಬೇಕೆಂಬ ಮಾಹಿತಿಯುಳ್ಳ ‘ಫಾರ್ಮ್ ಮೆಕ್ಯಾನೈಸೇಶನ್’, ಬೆಳೆ ವಿಮೆ, ಅನ್ನಪೂರ್ಣ ಕೃಷಿ ಪ್ರಸಾರ ಸೇವೆ ಇತ್ಯಾದಿಗಳು ಒಂದೇ ಆ್ಯಪ್ ಮೂಲಕ ಲಭ್ಯ. ಇದರೊಂದಿಗೆ, ಕೃಷ್ಯುತ್ಪನ್ನ ಬೆಳೆಗಾರರು ಹಾಗೂ ಮಾರಾಟಗಾರರ ಮಧ್ಯೆ ನೇರ ಸಂವಹನ ಏರ್ಪಡಿಸುವ ‘ಎಂ-ಕಿಸಾನ್’ ಆ್ಯಪ್ ಮೂಲಕ ಭತ್ತ, ಕಬ್ಬು, ಅಕ್ಕಿ, ಟೊಮೆಟೋ ಮುಂತಾದ ಕೃಷ್ಯುತ್ಪನ್ನಗಳನ್ನು ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು. ಮಾರುಕಟ್ಟೆ ಬೆಲೆ ತಿಳಿದುಕೊಳ್ಳುವ ವ್ಯವಸ್ಥೆಯೂ ಇಲ್ಲಿದೆ.
ಗಮನಿಸಬೇಕಾದ ಅಂಶವೆಂದರೆ, ಇದರಲ್ಲಿ ಪ್ರತಿಯೊಂದು ಬಹುತೇಕ ಆ್ಯಪ್‌ಗಳಿಗೆ ನೀವು ನೋಂದಾವಣೆ ಮಾಡಿಕೊಳ್ಳಬೇಕಾಗುತ್ತದೆ. ಮೊಬೈಲ್ ನಂಬರ್, ಆಧಾರ್ ಜೋಡಿಸಿದರೆ ಮುಂದುವರಿಯುವುದು ಸುಲಭ. ಅದೇ ರೀತಿ, ಏನಾದರೂ ಸಮಸ್ಯೆಗಳು ಕಂಡುಬಂದರೆ (ಕನ್ನಡದಲ್ಲೂ) ಚಾಟ್ ಮಾಡುತ್ತಲೇ ಸಹಾಯ ಮಾಡಬಲ್ಲ ‘ಡಿಜಿಸೇವಕ’ ಆ್ಯಪ್ ಇದೆ. ಈಗಾಗಲೇ ನೂರಕ್ಕೂ ಹೆಚ್ಚು ಆ್ಯಪ್‌ಗಳು ಈ ಉಮಂಗ್‌ನಲ್ಲಿ ಮಿಳಿತವಾಗಿದ್ದು, ಮತ್ತಷ್ಟು ಆ್ಯಪ್‌ಗಳು ಸೇರಿಕೊಳ್ಳಲಿವೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವ ರವಿಶಂಕರ್ ಪ್ರಸಾದ್ ಈಗಾಗಲೇ ಭರವಸೆ ನೀಡಿದ್ದಾರೆ. ಹೀಗಿರುವಾಗ ಇದು ಆಂಡ್ರಾಯ್ಡ್ ಸಾಧನಗಳಿರುವ ಪ್ರತಿಯೊಬ್ಬರು ಹೊಂದಿರಬೇಕಾದ ಆ್ಯಪ್.