ಫೋನ್ ನೀರಿಗೆ ಬಿತ್ತೇ? ಆತುರ ಪಡಬೇಡಿ

0
718

Avi-Mahiti@Tantrajnanaಸ್ನೇಹಿತರೊಬ್ಬರು ಕರೆ ಮಾಡಿ, ‘ನನ್ನ ಫೋನ್ ನೀರಿಗೆ ಬಿತ್ತು, ಏನು ಮಾಡಬೇಕು’ ಅಂತ ಕೇಳಿದರು. ಸದಾ ಕಾಲ ಅಂಗೈಯಲ್ಲಿರುವ ಸ್ಮಾರ್ಟ್ ಫೋನ್, ಅನುಕ್ಷಣದ ಸಂಗಾತಿಯಾಗಿ ಕೆಲಸ ಮಾಡುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ. ಕಚೇರಿ ಕಾರ್ಯ ನಿಮಿತ್ತವೋ, ಸ್ವ ಕಾರ್ಯ ನಿಮಿತ್ತವೋ ತುರ್ತು ಕರೆ ಅಥವಾ ಸಂದೇಶವೊಂದರ ನಿರೀಕ್ಷೆಯಲ್ಲಿರುವಾಗ ಎಲ್ಲೇ ಹೋದರೂ ಅದನ್ನು ಒಯ್ಯಬೇಕೆಂಬ ತುಡಿತವಿರುವುದು ಸಹಜ.

ಇಂತಹಾ ಸಂದರ್ಭಗಳಲ್ಲಿ ಮೊಬೈಲ್ ಫೋನ್ ಆಕಸ್ಮಿಕವಾಗಿ ನೀರಿಗೆ ಬೀಳುವುದೋ ಅಥವಾ ಮಳೆಗೆ ನನೆಯುವುದೋ – ನಡೆಯುತ್ತಿರುತ್ತದೆ. ಹಾಗಿದ್ದರೆ, ನಿಮಗೂ ಇಂತಹಾ ಅನುಭವವಾದರೆ, ಏನು ಮಾಡಬೇಕೆಂಬ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಫೋನು ನೀರಿನ ಬಕೆಟಿಗೆ ಬಿದ್ದಿತೆಂದಾದರೆ ಅಷ್ಟೊಂದು ಜತನದಿಂದ ಕಾಯ್ದುಕೊಂಡಿದ್ದ ನಮ್ಮ ಆತ್ಮೀಯ ಸಂಗಾತಿ ಪುನಃ ಕೆಲಸ ಮಾಡುವಂತೆ ಮಾಡಲು ನಾವು ಏನು ಬೇಕಾದರೂ ಮಾಡುತ್ತೇವೆ.

ಸ್ಮಾರ್ಟ್ ಫೋನ್‌ನ ಒಳಗೆ ನೀರು ಹೋದರೆ ಏನಾಗುತ್ತದೆ? ಮುಖ್ಯವಾಗಿ ಅದರೊಳಗೆ ಹರಿಯುತ್ತಿರುವುದು ಬ್ಯಾಟರಿ ಚಾಲಿತ ವಿದ್ಯುತ್ಪ್ರವಾಹ. ನೀರು ವಿದ್ಯುದ್ವಾಹಕವೇ ಆಗಿರುವುದರಿಂದ, ವಿದ್ಯುತ್ತು ಮೊಬೈಲ್‌ನ ನಿಗದಿತ ಸರ್ಕ್ಯೂಟ್ ಬಿಟ್ಟು, ಶಾರ್ಟ್ ಸರ್ಕ್ಯೂಟ್ ಮೂಲಕ ಬೇರೆಡೆ ಪ್ರವಹಿಸಿದರೆ, ಹಾನಿಯಾಗುವ ಸಾಧ್ಯತೆಗಳು ಅಧಿಕವಾಗಿರುತ್ತದೆ.

ಈಗೀಗಲಂತೂ ಕೆಲವು ಜಲ ನಿರೋಧಕ (ವಾಟರ್ ಪ್ರೂಫ್) ಫೋನ್‌ಗಳೂ ಬಂದಿವೆ. ಒಳ್ಳೆಯ ಗುಣಮಟ್ಟದ ಬ್ರ್ಯಾಂಡ್‌ನ ಸ್ಮಾರ್ಟ್ ಫೋನ್‌ಗಳಲ್ಲಾದರೆ ಕವಚವು ಗಟ್ಟಿಯಾಗಿಯೇ ಇದ್ದು, ಸಾಮಾನ್ಯ ಮಳೆಯಲ್ಲಿ ನೀರು ಒಳಹೋಗುವುದನ್ನು ತಡೆಯುವಷ್ಟು ಶಕ್ತವಾಗಿರುತ್ತವೆ. ಯಾವುದಕ್ಕೂ ಮುನ್ನೆಚ್ಚರಿಕೆ ಕ್ರಮವಾಗಿ ಒಂದು ಮೊಬೈಲ್ ಕವರ್ (ಹಿಂಭಾಗದ ಕವಚ ಮಾತ್ರ ಬದಲಿಸಬಹುದಾದ ಬ್ಯಾಕ್ ಕವರ್ ಸೇರಿದಂತೆ ವಿಭಿನ್ನ ಮಾದರಿಗಳು ದೊರೆಯುತ್ತವೆ) ಅಳವಡಿಸಿಕೊಳ್ಳುವುದು ಸೂಕ್ತ. ಇದು ನಿಮ್ಮ ಸ್ಮಾರ್ಟ್ ಫೋನನ್ನು ಧೂಳು, ಮಳೆ, ಗಾಳಿಯಿಂದ ರಕ್ಷಿಸಬಲ್ಲುದು. ಮಳೆ ಹೆಚ್ಚು ಬರುವ ಪ್ರದೇಶಗಳಲ್ಲಿ ನೀವಿದ್ದೀರೆಂದಾದರೆ, ವಾಟರ್-ಪ್ರೂಫ್ ಪೌಚ್‌ಗಳನ್ನು (ಕವಚ) ಖರೀದಿಸುವುದೊಳಿತು.

ತಕ್ಷಣವೇ ನೀರಿನಿಂದ ತೆಗೆದು ಅದರ ಸ್ವಿಚ್ ಆಫ್ ಮಾಡಿದರೆ ಮೊಬೈಲ್ ಫೋನ್‌ಗೆ ಯಾವುದೇ ರೀತಿಯ ಹಾನಿಯಾಗದಿರಲೂಬಹುದು. ಸ್ವಿಚ್ ಆಫ್ ಮಾಡಿದ ಬಳಿಕ, ತೆಗೆಯಬಹುದಾಗಿದ್ದರೆ ಬ್ಯಾಟರಿಯನ್ನೂ, ಉಳಿದಂತೆ ಸಿಮ್ ಕಾರ್ಡ್, ಮೆಮೊರಿ ಕಾರ್ಡ್, ಸ್ಟೈಲಸ್, ಎಲ್ಲವನ್ನೂ ತೆಗೆದು, ಮೆದುವಾದ ಹತ್ತಿ ಬಟ್ಟೆಯಿಂದ ಅಥವಾ ಪೇಪರ್ ನ್ಯಾಪ್‌ಕಿನ್‌ನಿಂದ ಸಾಧ್ಯವಿರುವಲ್ಲೆಲ್ಲಾ ಮೆಲ್ಲನೆ ಒರೆಸಿ ತೇವಾಂಶ ತೆಗೆಯಬೇಕು. ಚಾರ್ಜಿಂಗ್ ಪೋರ್ಟ್, ಹೆಡ್‌ಫೋನ್ ಜಾಕ್ ಮುಂತಾದೆಡೆ ಎಲ್ಲ ನೀರು ನಿಂತಿರಬಹುದಾಗಿದ್ದು, ಅದನ್ನು ಹೋಗಲಾಡಿಸಲು ಫೋನನ್ನು ಮೆಲ್ಲನೆ ಶೇಕ್ ಮಾಡಿ. ನೆನಪಿಡಿ, ಯಾವುದೇ ಕಾರಣಕ್ಕೂ ಹೇರ್ ಡ್ರೈಯರ್ ಮೂಲಕ ಫೋನ್‌ನ ತೇವಾಂಶ ನೀಗಿಸಲು ಪ್ರಯತ್ನಿಸಲೇಬೇಡಿ. ಅಲ್ಲದೆ, ಕೆಲವರು ಸುಡು ಬಿಸಿಲಿಗೆ ಫೋನ್ ಇರಿಸಿದ್ದನ್ನು ನೋಡಿದ್ದೇನೆ. ಫೋನ್‌ನ ಒಳಗೆ ಅತ್ಯಂತ ಸೂಕ್ಷ್ಮ ಭಾಗಗಳಿರುವುದರಿಂದ, ಬಿರು ಬಿಸಿಲಿನಲ್ಲಂತೂ ಇಡಲೇಬಾರದು.

ಇಷ್ಟಾದ ಮೇಲೆ, ಏರ್ ಟೈಟ್ ಕಂಟೇನರ್ ತೆಗೆದುಕೊಂಡು, ಅದರಲ್ಲಿ ಅಕ್ಕಿಯನ್ನು ತುಂಬಿಸಿರಿ, ಅಕ್ಕಿಯ ಒಳಗೆ ಫೋನ್ ಇರಿಸಿ. ಯಾವುದೇ ತೇವಾಂಶವನ್ನು ಹೀರಿ ಹೊರತೆಗೆಯುವಂತೆ ಮಾಡಲು ಇದು ಒಳ್ಳೆಯ ಉಪಾಯ. ಅಕ್ಕಿಯ ಬದಲಾಗಿ, ಸಿಲಿಕಾ ಜೆಲ್ ಪ್ಯಾಕ್‌ಗಳು ಅಥವಾ ಓಟ್ ಮೀಲ್ ಕೂಡ ಬಳಸಬಹುದಾಗಿದೆ. ಆದರೆ, ನೀವು ಕನಿಷ್ಠ ಒಂದು ದಿನ ಅದರಲ್ಲೇ ಇರಿಸಬೇಕು. ಫೋನ್ ಈಗಲಾದರೂ ಸರಿಯಾಯಿತೇ ಎಂಬ ಕುತೂಹಲಕ್ಕೂ ತೆಗೆದು ನೋಡದಿರಿ. 30-40 ಗಂಟೆಗಳ ಬಳಿಕವಷ್ಟೇ ತೆಗೆದು ನೋಡಿ. ತಕ್ಷಣವೇ ಚಾರ್ಜ್ ಮಾಡಲು ಇಡಬೇಡಿ. ಸ್ವಿಚ್ ಆನ್ ಮಾಡಿ, ಎಲ್ಲವೂ ಸರಿಯಾಗಿ ಕೆಲಸ ಮಾಡುತ್ತದೆ ಎಂದು ತಿಳಿದುಕೊಂಡ ಬಳಿಕವಷ್ಟೇ, ಚಾರ್ಜ್ ಪೂರ್ತಿ ಮುಗಿದ ಬಳಿಕ ಚಾರ್ಜಿಂಗ್‌ಗೆ ಇರಿಸಿ.

ನೀರಿಗೆ ಬಿದ್ದ ಮೇಲೆ ಸ್ಮಾರ್ಟ್ ಫೋನ್ ಮತ್ತೆ ಕೆಲಸ ಮಾಡುತ್ತದೆ ಅಥವಾ ಮಾಡುವುದಿಲ್ಲ ಎಂದು ಇದಮಿತ್ಥಂ ಹೇಳಲಾಗದು. ಹೀಗಾಗಿ, ಇಷ್ಟು ಮಾಡಿದ ಮೇಲೂ ನಿಮ್ಮ ಫೋನ್ ಕೆಲಸ ಮಾಡುವುದಿಲ್ಲವೆಂದಾದರೆ, ಅಧಿಕೃತ ಸರ್ವಿಸ್ ಸೆಂಟರ್‌ಗೆ ಒಯ್ಯುವುದು ಉತ್ತಮ. ಒಂದಂತೂ ನೆನಪಿಡಿ. ನೀರಿನಿಂದಾಗುವ ಹಾನಿಗೆ ವಾರಂಟಿ ಅನ್ವಯಿಸುವುದಿಲ್ಲ.

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಜಯ ಕರ್ನಾಟಕ ಏಪ್ರಿಲ್ 13, 2015

LEAVE A REPLY

Please enter your comment!
Please enter your name here