ಪರಮ ಕಳ್ಳ ಪೊಲೀಸರು!

0
434

ಕಳ್ಳರ ಪೋಷಕರೂ, ಅವರನ್ನು ಪೋಷಿಸುವವರೂ….

ಹೌದು, ಈಗಷ್ಟೇ ನನಗರ್ಥವಾಗತೊಡಗಿದೆ. ಯಾವುದೇ ಒಂದು ಊರಿನಲ್ಲಿ ದೊಡ್ಡದೊಂದು ಅಪರಾಧ, ಕಳ್ಳತನ, ದರೋಡೆ ಇತ್ಯಾದಿ ಸಂಭವಿಸಿದರೆ ಆ ಊರಿನ ಪೊಲೀಸ್ ಇನ್ಸ್ ಪೆಕ್ಟರನ್ನೇಕೆ ಸಸ್ಪೆಂಡ್ ಮಾಡಬೇಕು ಎಂಬ ಯಕ್ಷಪ್ರಶ್ನೆಗೆ ನಿಧಾನವಾಗಿ ಉತ್ತರ ದೊರೆಯಲಾರಂಭಿಸಿದೆ.ಮೊನ್ನೆ ಮೊನ್ನೆ (ಮಾ.13 ಮಂಗಳವಾರ, 2006) ಬೆಂಗಳೂರಿನಲ್ಲಿ ಲೋಕಾಯುಕ್ತರು ದಾಳಿ ನಡೆಸಿ ಪೊಲೀಸ್ ವೇಷದಲ್ಲಿದ್ದ ಕಳ್ಳರನ್ನು ಹಿಡಿದು 70-80 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿ ವಶಪಡಿಸಿಕೊಂಡರಲ್ಲ… ಆ ಪ್ರಕರಣದ ಹಿಂದೆ-ಮುಂದಿನ ಸಸ್ಪೆನ್ಸ್ ಥ್ರಿಲ್ಲರ್ ಭಾಗವನ್ನೇ ನೋಡಿ…

ಲೋಕಾಯುಕ್ತರು ವಶಪಡಿಸಿಕೊಂಡ ಚಿನ್ನಾಭರಣಗಳಲ್ಲಿ (ಆ ಪೊಲೀಸಪ್ಪ ಬ್ಯಾಂಕ್ ಲಾಕರ್ ನಲ್ಲಿ ಕೂಡಿಟ್ಟಿದ್ದ !) 2001ರಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬರ ಮನೆಯಿಂದ ಕಳವಾಗಿದ್ದ ಆಭರಣಗಳೂ ಇದ್ದವು ಎಂಬುದು ನಾಗರಿಕ ಸಮಾಜ ಯೋಚಿಸಬೇಕಾದ ಸಂಗತಿ.ಅಂದು ಇದೇ ಇನ್ ಸ್ಪೆಕ್ಟರ್ ಇದ್ದ ಠಾಣೆಗೆ ದೂರು ಸಲ್ಲಿಸಿದ್ದ ಸಾಫ್ಟ್ ವೇರ್ ಎಂಜಿನಿಯರ್ ಗೆ ಈ ಪೊಲೀಸ್ ಮಹಾಶಯ “ನಿಮ್ಮ ಕದ್ದ ಮಾಲುಗಳು ಪತ್ತೆಯಾಗಿಲ್ಲ” ಎಂದು ನೋಟಿಸ್ ಕಳುಹಿಸಿ, ಆತ ಮತ್ತೆ ಠಾಣೆಯತ್ತ ತಲೆಹಾಕದಂತೆ ಮಾಡಿಬಿಟ್ಟಿದ್ದ. ಈ ಪೊಲೀಸ್ ಯಾರು ಗೊತ್ತೇ? ಇಂಥ ಅದೆಷ್ಟೋ “ಅಮೂಲ್ಯ” ಸೇವೆಗಾಗಿ ಮೂರು ಬಾರಿ ನಮ್ಮ ಘನ ರಾಜ್ಯದ ಮುಖ್ಯಮಂತ್ರಿಗಳ ಚಿನ್ನದ ಪದಕ “ಗಿಟ್ಟಿಸಿ”ಕೊಂಡಿದ್ದ ಕೋರಮಂಗಲ ಇನ್ಸ್ ಪೆಕ್ಟರ್ ಅಮೀರ್ ಅಲಿ! ಇವನ ಬಳಿ ಪತ್ತೆಯಾದ ಆಸ್ತಿ ಪಾಸ್ತಿಯ ಮೊತ್ತವನ್ನು ಸರಿಯಾಗಿ ಲೆಕ್ಕ ಮಾಡಿ ಹೇಳಲು ಅದೆಷ್ಟು ವರ್ಷಗಳು ಬೇಕೋ! (ಸಿಕ್ಕಿದ್ದು ಬರೇ 10 ಕೋಟಿ ಮೌಲ್ಯದ ಸೊತ್ತು ಮಾತ್ರ) ಕಳ್ಳರೊಂದಿಗೆ, ಧಗಾಕೋರರೊಂದಿಗೆ ಒಪ್ಪಂದ ಮಾಡಿಕೊಂಡು, ಇಂಥ ಮನೆಯಲ್ಲಿ ಭಾರಿ ಚಿನ್ನ, ಹಣ ಇದೆ, ಅಲ್ಲಿಂದ ಒಂದಷ್ಟು ತೆಗೆದುಕೊಂಡು ಬಂದು ನನಗೂ ಒಪ್ಪಿಸು ಎಂದು ಆರ್ಡರ್ ಮಾಡುವ ಪೊಲೀಸರಿರುವಷ್ಟರವರೆಗೆ ಲೋಕಾಯುಕ್ತರಿಗೆ ಕೆಲಸ ಇದ್ದೇ ಇದೆ. (ಆದರೆ ಸರಕಾರ ಲೋಕಾಯುಕ್ತರ ಕೈಯನ್ನು ಕಟ್ಟಿ ಹಾಕಬಾರದು ಮತ್ತು ಶಿಕ್ಷೆ ವಿಧಿಸುವ ಅಧಿಕಾರವನ್ನು, ಅಂದರೆ ಪರಮಾಧಿಕಾರವನ್ನೇ ಕೊಟ್ಟುಬಿಡಬೇಕು).ಬಹುಶಃ ಇದೇ ಕಾರಣಕ್ಕೆ ಪೊಲೀಸರು ಅತಿಹೆಚ್ಚು ಅಪರಾಧ ನಡೆಯುವ ಪ್ರದೇಶಗಳಿಗೇ ವರ್ಗಾವಣೆಯಾಗಲು ಲಾಬಿ ನಡೆಸುತ್ತಿರುತ್ತಾರೆ. ಅಪರಾಧ ನಡೆಯದ ಊರಿನಲ್ಲಿ ಅಪರಾಧಿಗಳು ಕಡಿಮೆ, ಇದರಿಂದಾಗಿ ತಮ್ಮ ಕಮಾಯಿಯೂ ಕಡಿಮೆ ಎಂಬ ಸರಳವಾದ “ವೇದವಾಕ್ಯ”ವನ್ನು ಈ ದುರ್ಬುದ್ಧಿಯ ಪೊಲೀಸರು ಅನುಸರಿಸುತ್ತಾರೆ.

ಇಂಥವರು ಕಳ್ಳ-ಸುಳ್ಳರನ್ನು ಸಾಕುತ್ತಿರುವಂತೆಯೇ ಇವರನ್ನು ಕೂಡ ಜನಸೇವೆಯ ಮುಖವಾಡ ಹಾಕಿಕೊಂಡು ಮಂತ್ರಿ ಮಾಗಧರಾಗಿ, ಶಾಸಕರಾಗಿ ಮೆರೆಯುತ್ತಿರುವವರು ಸಾಕುತ್ತಿರುತ್ತಾರೆ ಎಂಬುದಕ್ಕೆ ಈ ಮೀರ್ ಅಲಿಗೆ ಮೂರು ಬಾರಿ ಮುಖ್ಯಮಂತ್ರಿ ಪದಕ ದೊರೆತದ್ದೇ ಸಾಕ್ಷಿ.

ಇನ್ನು ದೊಡ್ಡಬಳ್ಳಾಪುರ ಡಿವೈಎಸ್ಪಿ ಎನ್. ಕೃಷ್ಣಪ್ಪ ಕಥೆ ಇನ್ನಷ್ಟು ವಿಚಿತ್ರ. ತಾನೂ ಒಬ್ಬ ಪೊಲೀಸನಾಗಿದ್ದುಕೊಂಡು, ಮನೆಗೆ ದಾಳಿ ಮಾಡಲು ಬಂದ ಲೋಕಾಯುಕ್ತ ಪೊಲೀಸರ ಮೇಲೆ ಪಕ್ಕಾ ಕಳ್ಳನಂತೆ ನಾಯಿಯನ್ನು ಛೂಬಿಟ್ಟಿದ್ದನೆಂದರೆ ಇದಕ್ಕಿಂತ ಹಾಸ್ಯಾಸ್ಪದ ಪ್ರಸಂಗ ಇನ್ನೇನಿದ್ದೀತು? ಈತನ ಬಳಿ ದೊರೆತದ್ದು 15 ಕೋಟಿ ಮೌಲ್ಯದ ಸೊತ್ತು. ಅದರಲ್ಲಿ ಮನೆಯಲ್ಲಿ ದೊರೆತದ್ದೇ 23 ಲಕ್ಷದ ನೋಟಿನ ಕಂತೆ.

ಯಶವಂತಪುರ ಇನ್ ಸ್ಪೆಕ್ಟರ್ ಶಿವಣ್ಣನಂತೂ ಪೊಲೀಸರ ಪೊಲೀಸ್ ಎಂಬ ಗೌರವಕ್ಕೆ ಪಾತ್ರವಾಗಿರುವ ಲೋಕಾಯುಕ್ತಕ್ಕೇ ನೇಮಕಗೊಳ್ಳಲು ಭಾರಿ ಲಾಬಿ ನಡೆಸಿದ್ದ. ಅದರೆ ಇದುವರೆಗೆ ಮಾಡಿದ್ದೆಲ್ಲವನ್ನೂ ಬಚ್ಚಿಡಬಹುದು, ಇನ್ನು ಮುಂದೆ ಮಾಡುವ ಕೃತ್ಯಗಳಿಂದಲೂ ಪಾರಾಗಬಹುದು, ಕೊನೆಗೊಮ್ಮೆ ವ್ಯವಸ್ಥೆಯನ್ನೇ ಹಾಳು ಮಾಡಿಬಿಟ್ಟರೆ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳಿಗಾಗುವಷ್ಟು ಆಸ್ತಿ ಪಾಸ್ತಿ ಮಾಡಿಡಬಹುದು ಎಂಬ ದೂರಾಲೋಚನೆ ಫಲಿಸಲಿಲ್ಲ! ಈತ ಕೂಡ ಪಕ್ಕಾ ಕಳ್ಳನಂತೆ ಪೊಲೀಸ್ ವ್ಯಾನ್ ನಿಂದ ತಪ್ಪಿಸಿಕೊಂಡಿದ್ದನೆಂದರೆ ಇವರಿಗೆಲ್ಲ ಚತುರ ಚೋರಚತುಷ್ಟಯರು ಎಂಬ ಮತ್ತೊಂದು ಮುಖ್ಯಮಂತ್ರಿ ಪ್ರಶಸ್ತಿಯನ್ನೂ ನೀಡಬಹುದೋ ಏನೋ?

ಇವರೊಂದಿಗೆ ಸಿಸಿಬಿ ವಂಚನೆ ತಡೆ ಪತ್ತೆ ದಳದ ಸಮೀವುಲ್ಲಾ ರಹಮಾನ್- 48 ಸೈಟುಗಳ ಒಡೆಯನಾಗಿ ರಾಜಭೋಗ ಅನುಭವಿಸುತ್ತಿರುವ ನಾಲಾಯಕ್ ಮನುಷ್ಯ. ಮತ್ತೊಂದೆಡೆ ಅತಿಗಣ್ಯರ ಭದ್ರತಾ ವಿಭಾಗದ ಇನ್ ಸ್ಪೆಕ್ಟರ್ ನಾರಾಯಣ ಸ್ವಾಮಿ ಕೂಡ ಎಷ್ಟು ಸಾಧ್ಯವೊ ಅಷ್ಟು ಭಕ್ಷಿಸಿಕೊಂಡಿರುವ ಆರಕ್ಷಕ!

ಒಟ್ಟಿನಲ್ಲಿ ಈ ದುಷ್ಟ ಚತುಷ್ಟಯರು “ಏನೂ ಅರಿಯದ ಮುಗ್ಧರು, ಅವರ ಮೇಲೆ ಸೇಡಿನಿಂದ ಸುಳ್ಳು ಆರೋಪ ಹೊರಿಸಲಾಗಿದೆ” ಎಂಬ ಪರಮವಾಕ್ಯದೊಂದಿಗೆ ಅವರು ಇನ್ನೇನು ಕೆಲವೇ ದಿನಗಳಲ್ಲಿ ಖುಲಾಸೆಗೊಳ್ಳುತ್ತಾರೆ. ಅಷ್ಟರವರೆಗೆ ಏನೂ ಅರಿಯದವರಂತೆ ಸುಮ್ಮನಿದ್ದುಬಿಡುವ ಈ ಪಾಖಂಡಿಗಳು, ಹೊರಬಂದ ತಕ್ಷಣ ಬಾಚಿಕೊಳ್ಳಲು ಕುಳಿತುಬಿಡುತ್ತಾರೆ.
“ಭ್ರಷ್ಟಾಚಾರದ ಅಧಿದೇವತೆ”ಗೆ ಜಯವಾಗಲಿ!  

 

LEAVE A REPLY

Please enter your comment!
Please enter your name here