JioPhone Next Review: ಬೇರೆ ಸಿಮ್ ಕೂಡ ಬಳಸಬಹುದು, ಓದುತ್ತದೆ, ಅನುವಾದಿಸುತ್ತದೆ ಈ ಫೋನ್

0
541

ದೇಶದ ಜನರಿಗೆ ಅಗ್ಗದ ದರದಲ್ಲಿ ಇಂಟರ್ನೆಟ್ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದ ರಿಲಯನ್ಸ್ ಜಿಯೋ, ಇತ್ತೀಚೆಗೆ ಜಿಯೋಫೋನ್ ನೆಕ್ಸ್ಟ್ ಎಂಬ ‘ಆಂಡ್ರಾಯ್ಡ್ ಗೋ’ ಕಾರ್ಯಾಚರಣಾ ವ್ಯವಸ್ಥೆಯಿರುವ, ಅಗ್ಗದ ದರದ ಸ್ಮಾರ್ಟ್‌ಫೋನನ್ನು ಮಾರುಕಟ್ಟೆಗೆ ಪರಿಚಯಿಸಿದೆ. ವಿಶೇಷವೆಂದರೆ, ಆರಂಭಿಕ ಮೊತ್ತ ₹1999 ನೀಡಿ ಇದನ್ನು ಖರೀದಿಸಬಹುದಾಗಿದೆ. ಡೇಟಾ ಬಳಕೆಗೆ ಪ್ರತೀ ತಿಂಗಳಿಗೆ ವ್ಯಯಿಸುವ ಹಣವನ್ನೇ ಸಮಾನ ಮಾಸಿಕ ಕಂತು (ಇಎಂಐ) ರೂಪದಲ್ಲಿ ನೀಡಿ ಪಡೆಯಬಹುದು. ಇದರಲ್ಲಿ 4ಜಿ ಡೇಟಾ (ಇಂಟರ್ನೆಟ್ ಸೌಕರ್ಯ) ಮತ್ತು ಕರೆ ಅವಧಿಯ ಪ್ರಯೋಜನವೂ ಇದೆ. ಒಂದು ವಾರ ಜಿಯೋಫೋನ್ ನೆಕ್ಸ್ಟ್ ಉಪಯೋಗಿಸಿ ನೋಡಿದಾಗ, ಹೇಗನಿಸಿತು? ಇಲ್ಲಿದೆ ಮಾಹಿತಿ.

ವಿನ್ಯಾಸ ಮತ್ತು ನೋಟ
ಪಕ್ಕನೇ ನೋಡುವಾಗ ಆರಂಭದ ನೋಕಿಯಾ ಆಂಡ್ರಾಯ್ಡ್ ಫೋನ್‌ಗಳಂತೆಯೇ ಜಿಯೋಫೋನ್ ನೆಕ್ಸ್ಟ್ ಕೂಡ ಕಾಣಿಸುತ್ತದೆ. ಡಿಸ್‌ಪ್ಲೇಯ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಬೆಝೆಲ್ (ಖಾಲಿ ಜಾಗ) ಹೆಚ್ಚೇ ಇದೆ. ಹಿಂಭಾಗದಲ್ಲಿ ಮ್ಯಾಟ್ ಫಿನಿಶ್ ಇರುವ ಪ್ಲಾಸ್ಟಿಕ್ ಕವಚವಿದ್ದು, ಜಿಯೋ ಲೋಗೋ ಮತ್ತು ಚುಕ್ಕಿಗಳಿರುವ ವಿನ್ಯಾಸವಿದೆ. ತೀರಾ ಹಗುರವೂ ಇದೆ.

ಇದೊಂದು ಬಜೆಟ್ ಫೋನ್. 5.45 ಇಂಚಿನ ಐಪಿಎಸ್ ಡಿಸ್‌ಪ್ಲೇ ಇದ್ದು, HD+ ರೆಸೊಲ್ಯುಶನ್ ಇದೆ. ಆದರೆ, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆ ಇರುವುದು ವಿಶೇಷ. ಬೆರಳಚ್ಚುನಿರೋಧಕ ಕೋಟಿಂಗ್ ಇದೆ ಎನ್ನಲಾಗುತ್ತಿದೆಯಾದರೂ, ಬೆರಳಚ್ಚು ಮೂಡುತ್ತದೆ. ಒಟ್ಟಾರೆಯಾಗಿ ಫೋನ್‌ನ ಬಿಲ್ಡ್ ಚೆನ್ನಾಗಿದೆ.

ಸ್ಕ್ರೀನ್ ಮೇಲ್ಭಾಗದಲ್ಲಿ 8 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫೀ ಕ್ಯಾಮೆರಾ ಇದ್ದು, ಇಯರ್‌ಪೀಸ್ ಅಡಕವಾಗಿದೆ. ಕೆಳಭಾಗದಲ್ಲಿ ಮೈಕ್ರೋ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಪುಟ್ಟ ಮೈಕ್ ರಂಧ್ರದ ಹೊರತಾಗಿ ಬೇರೇನೂ ಇಲ್ಲ. ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾ ಲೆನ್ಸ್, ಎಲ್‌ಇಡಿ ಫ್ಲ್ಯಾಶ್ ಇದೆ. ಪುಟ್ಟ ಸೆಕೆಂಡರಿ ಮೈಕ್ ಕೂಡ ಇದೆ. ಮಧ್ಯಭಾಗದಲ್ಲಿ ಜಿಯೋ ಬ್ರ್ಯಾಂಡಿಂಗ್ ಮತ್ತು ಕೆಳಭಾಗದಲ್ಲಿ ಸ್ಪೀಕರ್ ಗ್ರಿಲ್ ಇದೆ. ಮೇಲ್ಭಾಗದಲ್ಲಿ 3.5 ಮಿಮೀ ಆಡಿಯೋ ಜಾಕ್ ಇದೆ.

ಹಿಂಭಾಗದ ಕವಚ ತೆಗೆದರೆ, ಬ್ಯಾಟರಿ, ಸಿಮ್ ಕಾರ್ಡ್‌ಗಳು ಮತ್ತು ಮೈಕ್ರೋಎಸ್‌ಡಿ ಮೆಮೊರಿ ಕಾರ್ಡ್ ಅಳವಡಿಸಬಹುದು. ಕವಚ ತೆಗೆಯುವುದಕ್ಕಾಗಿ ಬಲಭಾಗದಲ್ಲಿ ಒಂದು ಪುಟ್ಟ ಗ್ರೂವ್ ಇದೆ. ಇತ್ತೀಚಿನ ದಿನಗಳಲ್ಲಿ, ತೆಗೆಯಬಹುದಾದ ಬ್ಯಾಟರಿ ಇರುವ ಫೋನ್‌ಗಳು ಬರುವುದು ತೀರಾ ಅಪರೂಪ.

ಗಮನಿಸಬೇಕಾದ ಅಂಶವೆಂದರೆ, ಪ್ರಧಾನ ಸಿಮ್ ಸ್ಲಾಟ್‌ನಲ್ಲಿ ರಿಲಯನ್ಸ್ ಜಿಯೋ ಸಿಮ್ ಕಾರ್ಡ್ ಇರುವುದು ಕಡ್ಡಾಯವಾದರೂ, ಎರಡನೇ ಸಿಮ್ ಸ್ಲಾಟ್‌ನಲ್ಲಿ ಬೇರೆ ಯಾವುದೇ ಕಂಪನಿಯ ಸಿಮ್ ಅಳವಡಿಸಬಹುದು. ಆದರೆ, ಇಲ್ಲಿಯೂ ಒಂದು ನಿರ್ಬಂಧವಿದೆ. ಬೇರೆ ಸಿಮ್ ಕಾರ್ಡ್‌ನಿಂದ ಡೇಟಾ (ಇಂಟರ್ನೆಟ್ ಸೌಕರ್ಯ) ಬಳಸುವುದು ಸಾಧ್ಯವಿಲ್ಲ. ರಿಲಯನ್ಸ್ ಜಿಯೋ ಡೇಟಾ ಮಾತ್ರ ಬಳಸಬೇಕಾಗುತ್ತದೆ. ವೈಫೈ ಹಾಟ್‌ಸ್ಪಾಟ್ ಆಗಿಯೂ ಫೋನನ್ನು ಅನುಕೂಲಕರವಾಗಿ ಬಳಸಬಹುದಾಗಿದೆ.

ಕಾರ್ಯಾಚರಣಾ ತಂತ್ರಾಂಶ
ಬೇರೆ ಫೋನ್ ತಯಾರಿಕಾ ಕಂಪನಿಗಳೆಲ್ಲವೂ ಗೂಗಲ್‌ನ ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಯನ್ನು ಬಳಸಿ, ಅದನ್ನು ತಮಗೆ ಬೇಕಾದಂತೆ ಬದಲಾಯಿಸಿಕೊಂಡು, ಬೇರೆಯೇ ಹೆಸರಿನ ಕಾರ್ಯಾಚರಣೆ ವ್ಯವಸ್ಥೆಯಾಗಿ ಬದಲಾಯಿಸುತ್ತವೆ. ಉದಾಹರಣೆಗೆ ಸ್ಯಾಮ್‌ಸಂಗ್‌ನ ಒನ್ ಯುಐ, ಶವೊಮಿಯ ಮಿ ಯುಐ, ಒನ್‌ಪ್ಲಸ್‌ನ ಆಕ್ಸಿಜನ್ ಒಎಸ್ ಹೀಗೆ. ಇದೇ ರೀತಿ, ರಿಲಯನ್ಸ್ ಜಿಯೋ ಕೂಡ ಆಂಡ್ರಾಯ್ಡ್ 11ರ ಮೂಲಭೂತ ಆವೃತ್ತಿ (ಆಂಡ್ರಾಯ್ಡ್ ಗೋ) ಬಳಸಿ, ಅದನ್ನು ಬದಲಾಯಿಸಿಕೊಂಡು, ‘ಪ್ರಗತಿ ಒಎಸ್’ ಅನ್ನು ಜಿಯೋಫೋನ್ ನೆಕ್ಸ್ಟ್‌ನಲ್ಲಿ ಅಳವಡಿಸಿದೆ.

ಬಹುತೇಕವಾಗಿ ಪ್ಯೂರ್ ಆಂಡ್ರಾಯ್ಡ್ ಅಥವಾ ಸ್ಟಾಕ್ ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಯನ್ನೇ ಈ ಒಎಸ್ ಹೋಲುತ್ತದೆ. ಕನಿಷ್ಠ ಪ್ರಮಾಣದಲ್ಲಿ, ಈಗಿನ ಅಗತ್ಯಕ್ಕೆ ಅನುಗುಣವಾಗಿ ಫೇಸ್‌ಬುಕ್ ಲೈಟ್, ವಾಟ್ಸ್ಆ್ಯಪ್, ಇನ್‌ಸ್ಟಾಗ್ರಾಂ ಮುಂತಾದ ಥರ್ಡ್ ಪಾರ್ಟಿ ಆ್ಯಪ್‌ಗಳನ್ನಷ್ಟೇ ಮುಂಚಿತವಾಗಿ ಅಳವಡಿಸಲಾಗಿದೆ. ಗೂಗಲ್‌ನಿಂದ ಕಡಿಮೆ ತೂಕದ ಆಂಡ್ರಾಯ್ಡ್ ಗೋ ಆವೃತ್ತಿಯ ಕೆಲವು ಆ್ಯಪ್‌ಗಳೂ ಇದರಲ್ಲಿವೆ.

ಕಾರ್ಯಾಚರಣೆ ಹೇಗಿದೆ?
ಹೊಸದಾಗಿ ಸ್ಮಾರ್ಟ್ ಫೋನ್ ಹೊಂದುವವರಿಗೆ ಇದು ತುಂಬ ಇಷ್ಟವಾಗಬಹುದು. ಸಾಮಾನ್ಯ ಬಳಕೆಗೆ ಸೂಕ್ತ. 1.3GHz ಕ್ವಾಲ್‌ಕಂ ಸ್ನ್ಯಾಪ್‌ಡ್ರ್ಯಾಗನ್ 215 ಕ್ವಾಡ್ ಕೋರ್ ಪ್ರೊಸೆಸರ್ ಮತ್ತು 2ಜಿಬಿ RAM ಇದರಲ್ಲಿರುವುದರಿಂದ, ಹೆಚ್ಚಿನ ವೇಗ ನಿರೀಕ್ಷಿಸಲಾಗದು. ಬಹುತೇಕ ಎಲ್ಲ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್‌ಗಳಂತೆಯೇ ಈ ಫೋನ್ ಕೂಡ ಕಾರ್ಯಾಚರಿಸುತ್ತದೆ. ಗೇಮಿಂಗ್‌ಗೆ ಇದು ಪೂರಕವಲ್ಲದಿದ್ದರೂ ವಿಡಿಯೊಗಳನ್ನು ಟಿವಿಗೆ ಸ್ಟ್ರೀಮ್ ಮಾಡಲು ಸಮಸ್ಯೆಯಾಗಲಿಲ್ಲ.

ಅನುವಾದ, ಸ್ಕ್ರೀನ್ ಓದುವ ತಂತ್ರಾಂಶ
ಬಳಕೆಗೆ ಸುಲಭವಾದ ಇಂಟರ್‌ಫೇಸ್ ಇದೆ. ಇಂಟರ್ನೆಟ್ ಸಂಪರ್ಕವಿರುವಾಗ ಹಲವು ಸ್ಕ್ರೀನ್‌ಗಳಲ್ಲಿ ಇದು ನಮಗೆ ಭಾಷಾಂತರವನ್ನೂ ಮಾಡಿಕೊಡುತ್ತದೆ. ಇದು ಸಾಧ್ಯವಾಗಿದ್ದು ಗೂಗಲ್ ಲೆನ್ಸ್ ಮತ್ತು ಗೂಗಲ್ ಟ್ರಾನ್ಸ್‌ಲೇಟ್ ಎಂಬ ತಂತ್ರಾಂಶಗಳಿಂದಾಗಿ. ಗೂಗಲ್‌ನ ಅನುವಾದದ ತಂತ್ರಜ್ಞಾನವು ಇನ್ನೂ ಸುಧಾರಣೆಯಾಗಬೇಕಿದೆ. ಆದರೆ, ಸ್ಕ್ರೀನ್ ರೀಡರ್ ತಂತ್ರಾಂಶ ಕನ್ನಡವನ್ನು ಚೆನ್ನಾಗಿಯೇ ಓದುತ್ತದೆ. ಬ್ರೌಸರಿನ ವಿಷಯ ಓದಬೇಕಿದ್ದರೆ, ಉದಾಹರಣೆಗೆ, prajavani.net ಜಾಲತಾಣದ ಒಂದು ಸುದ್ದಿ ತೆರೆದು, ಬಳಿಕ ಇತ್ತೀಚಿನ ಆ್ಯಪ್‌ಗಳನ್ನು ತೆರೆಯುವ ಬಟನ್ (ಸ್ಕ್ರೀನ್ ಕೆಳಭಾಗದಲ್ಲಿ ಚೌಕಾಕಾರದ ಗುರುತಿರುವ ಬಟನ್) ಒತ್ತಿದಾಗ, ಆ ಸ್ಕ್ರೀನ್ ಚಿಕ್ಕದಾಗುತ್ತದೆ ಮತ್ತು ಕೆಳಗೆ ಅನುವಾದದ (Translate), ಆಲಿಸಬಹುದಾದ (Listen) ಮತ್ತು ಸ್ಕ್ರೀನ್ ಶಾಟ್ ತೆಗೆದುಕೊಳ್ಳುವ ಬಟನ್‌ಗಳು ಗೋಚರಿಸುತ್ತವೆ. ಬೇಕಾಗಿರುವುದನ್ನು ಒತ್ತಿದರಾಯಿತು.

ಕ್ಯಾಮೆರಾ
13 ಮೆಗಾಪಿಕ್ಸೆಲ್ ಪ್ರಧಾನ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾಗಳಿವೆ. ಪ್ರಧಾನ ಕ್ಯಾಮೆರಾದಲ್ಲಿ, ಪೋರ್ಟ್ರೇಟ್ ಮೋಡ್, ರಾತ್ರಿ ಮೋಡ್ ಮತ್ತು HDR ಮೋಡ್‌ಗಳಿವೆ. ಜೊತೆಗೆ, ಭಾರತೀಯರ ಅಭಿರುಚಿಗೆ ಹೊಂದುವ ಆಗ್ಮೆಂಟೆಡ್ ರಿಯಾಲಿಟಿ ಫಿಲ್ಟರ್‌ಗಳು ಫೋಟೋಗಳಿಗೆ ವಿಶೇಷ ಎಫೆಕ್ಟ್ ನೀಡುತ್ತದೆ. ಸ್ನ್ಯಾಪ್‌ಚಾಟ್‌ಗೆ ಇಂಟರ್ನೆಟ್ ಮೂಲಕ ನೇರವಾಗಿ ಸಂಪರ್ಕಿಸುವುದರಿಂದ, ಅದರಲ್ಲಿರುವ ಸೆಲ್ಫೀ ಫಿಲ್ಟರ್‌ಗಳು ಕೂಡ ದೊರೆಯುತ್ತವೆ.

3500 mAh ಸಾಮರ್ಥ್ಯದ ಬ್ಯಾಟರಿ ಇದ್ದು, ಅದನ್ನು ತೆಗೆದು ಬದಲಾಯಿಸಬಹುದು ಎಂಬುದು ಇದರ ವಿಶೇಷತೆಗಳಲ್ಲೊಂದು. ಸಾಮಾನ್ಯ ಬಳಕೆಯಲ್ಲಿ ಬ್ಯಾಟರಿ ಚಾರ್ಜ್ ಒಂದು ದಿನಕ್ಕೇನೂ ಸಮಸ್ಯೆಯಿಲ್ಲ. ಪೂರ್ತಿ ಚಾರ್ಜ್ ಆಗಲು ಸುಮಾರು ಎರಡು ಗಂಟೆ ಬೇಕಾಗುತ್ತದೆ.

ಬೆಲೆ
ಜಿಯೋಫೋನ್ ನೆಕ್ಸ್ಟ್ ಬೆಲೆ ₹6499. ಆದರೆ, ₹1999 ಆರಂಭಿಕ ಹಣ ಪಾವತಿ ಮಾಡಿದರೆ ಸುಲಭವಾಗಿ ಇಎಂಐ (ಸಮಾನ ಮಾಸಿಕ ಕಂತು) ಪಾವತಿಸಬಹುದು. 18 ಅಥವಾ 24 ತಿಂಗಳ ಕಾಲ ತಿಂಗಳಿಗೆ ₹300, ₹350, ₹450, ₹500, ₹550, ಅಥವಾ ₹600 ಪಾವತಿ ಮಾಡಿಯೂ ಖರೀದಿಸಬಹುದು. ಈ ಶುಲ್ಕವನ್ನು ಬಳಕೆದಾರರು ಬಳಸುವ 4ಜಿ ಡೇಟಾಕ್ಕೆ ಅನುಗುಣವಾಗಿ ನಿಗದಿಪಡಿಸಲಾಗಿದೆ. ಎಂದರೆ ಡೇಟಾಕ್ಕೆ ನೀಡುವ ಶುಲ್ಕವನ್ನೇ ಇಎಂಐಗೆ ನೀಡಿದರೆ, ನಿಗದಿತ ಅವಧಿ ಮುಗಿದ ತಕ್ಷಣ ಫೋನ್ ನಮ್ಮದಾಗುತ್ತದೆ. ತಿಂಗಳಿಗೆ 2.5ಜಿಬಿಯಿಂದ 5 ಜಿಬಿವರೆಗಿನ ಡೇಟಾಕ್ಕೆ ಅನುಗುಣವಾದ ಶುಲ್ಕ ಪದ್ಧತಿಯದು. ಇಎಂಐ ಆಯ್ಕೆ ಮಾಡಿಕೊಂಡರೆ, ಪ್ರಕ್ರಿಯಾ ಶುಲ್ಕವಾಗಿ ₹501 ನೀಡಬೇಕಾಗುತ್ತದೆ.

ಒಟ್ಟಾರೆ ಹೇಗಿದೆ?
ಹೊಸದಾಗಿ ಸ್ಮಾರ್ಟ್ ಫೋನ್ ಅನುಭವ ಪಡೆಯುವವರಿಗೆ, ಜಿಯೊ ಟಿವಿ, ಜಿಯೋ ಸಿನಿಮಾ ಆ್ಯಪ್‌ಗಳ ಮೂಲಕ ಸ್ಮಾರ್ಟ್ ಟಿವಿಯಲ್ಲಿ ಮನರಂಜನಾ ಕಾರ್ಯಕ್ರಮ ಸ್ಟ್ರೀಮ್ ಮಾಡಲು ಈ ಫೋನ್ ಅನುಕೂಲಕರ. ಜಿಯೋ ಸಿಮ್ ಅನ್ನು ಡೇಟಾಕ್ಕಾಗಿ ಮತ್ತು ಬೇರೆ ದೂರವಾಣಿ ಸೇವಾದಾತರ ಸಿಮ್ ಕಾರ್ಡನ್ನು ಕರೆಗಾಗಿ ಒಂದೇ ಫೋನ್‌ನಲ್ಲಿ ಬಳಸಬಹುದು. ಇಎಂಐ ಆಯ್ಕೆಯಿರುವುದರಿಂದ ಅನುಕೂಲಕರವೇ ಆಗಿದೆ. ಇಎಂಐ ಆಯ್ದುಕೊಂಡರೆ, ಸಕಾಲಕ್ಕೆ ಕಂತು ಪಾವತಿಸದಿದ್ದರೆ ಫೋನ್ ಲಾಕ್ ಆಗುವ ಮೂಲಕ ಅದು ನಿಮಗೆ ಕಂತು ಪಾವತಿಗೆ ನೆನಪಿಸುತ್ತದೆ.

ವೈಶಿಷ್ಟ್ಯಗಳು
ಡಿಸ್‌ಪ್ಲೇ: 5.45-ಇಂಚು IPS HD+ (1440 x 720 ಪಿಕ್ಸೆಲ್ ರೆಸೊಲ್ಯುಶನ್),ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ
ತಂತ್ರಾಂಶ: ಆಂಡ್ರಾಯ್ಡ್ 11 ‘ಗೋ’ ಆವೃತ್ತಿ ಆಧಾರಿತ ಪ್ರಗತಿ ಒಎಸ್
ಸಿಪಿಯು: 28nm 1.3 GHz ಕ್ವಾಲ್‌ಕಂ ಸ್ನ್ಯಾಪ್‌ಡ್ರ್ಯಾಗನ್ 215 ಕ್ವಾಡ್-ಕೋರ್ ಪ್ರೊಸೆಸರ್
ಜಿಪಿಯು: ಅಡ್ರಿನೋ 308 ಗ್ರಾಫಿಕ್ಸ್
ಮೆಮೊರಿ: 2 GB RAM
ಸ್ಟೋರೇಜ್: 32 GB ಆಂತರಿಕ ಸ್ಟೋರೇಜ್, ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 512 GB ವರೆಗೆ ವಿಸ್ತರಿಸಬಹುದು
ಪ್ರಧಾನ ಕ್ಯಾಮೆರಾ: 13 MP
ಸೆಲ್ಫೀ ಕ್ಯಾಮೆರಾ: 8 MP
ಸಂಪರ್ಕ: ಮೈಕ್ರೋ USB, 3.5 ಮಿಮೀ ಪೋರ್ಟ್, Wi-Fi 802.11 b/g/n, ಬ್ಲೂಟೂತ್ 4.1, ಜಿಪಿಎಸ್
ಸೆಲ್ಯುಲಾರ್: ಡ್ಯುಯಲ್ 4G ನೆಟ್‌ವರ್ಕ್
ಬ್ಯಾಟರಿ: 3,500 mAh
ಬೆಲೆ: ₹1,999 + EMI ಅಥವಾ ₹6,499

My Gadget Review Published in Prajavani on 16/17 November 2021

LEAVE A REPLY

Please enter your comment!
Please enter your name here