ಗೂಗಲ್‌ನಿಂದ ನಮಗೆ ಬೇಕಿದ್ದನ್ನು ತಿಳಿದುಕೊಳ್ಳುವುದು ಹೇಗೆ?

0
642

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-27 (ಮಾರ್ಚ್ 11, 2013)
ಅಂತರ್ಜಾಲ ಎಂದರೆ ಏನು ಬೇಕಾದರೂ ತಿಳಿಸಬಲ್ಲ, ಮಾಹಿತಿಯ ವಿಶ್ವಕೋಶವೆಂದು ‘ತಿಳಿದವರು’ ಹೇಳುತ್ತಾರೆ ಅಂತ ಗ್ರಾಮೀಣ ಪ್ರದೇಶದಲ್ಲಿರುವವರು ಸುಮ್ಮನಿರಬೇಕಾಗಿಲ್ಲ. ಇದಕ್ಕೆ ಸರಿಯಾಗಿ ಇಂಗ್ಲಿಷ್ ಗೊತ್ತಿರುವುದು ಕಡ್ಡಾಯ ಅಂತಲೂ ಕೊರಗಬೇಕಾಗಿಲ್ಲ. ಅಲ್ಪಸ್ವಲ್ಪ ಇಂಗ್ಲಿಷ್ ಗೊತ್ತಿದ್ದರೆ, ಕನ್ನಡ ಟೈಪ್ ಮಾಡಲು ಗೊತ್ತಿದ್ದರೆ ಯಾರು ಕೂಡ ಮಾಹಿತಿ ವಿಶ್ವಕೋಶದಿಂದ ತಮಗೆ ಬೇಕಾದ್ದನ್ನು ತಿಳಿದುಕೊಳ್ಳಬಹುದು.

ನಾವು ಕೇಳಿದ್ದನ್ನು ಇಂಟರ್ನೆಟ್‌ನಿಂದ ಹುಡುಕಿ ತಂದುಕೊಡುವುದು ಸರ್ಚ್ ಎಂಜಿನ್‌ಗಳು ಎಂದು ಕರೆಯಲಾಗುವ ಕೆಲವೊಂದು ಜಾಲ ತಾಣಗಳು. ಬ್ರೌಸರ್ ಮೂಲಕ ನಮಗೆ ಬೇಕಾದ ಮಾಹಿತಿ ಹುಡುಕಬೇಕಿದ್ದರೆ ಪ್ರಮುಖವಾಗಿ ಮೂರು ಸರ್ಚ್ ತಾಣಗಳಿವೆ. ಮುಂಚೂಣಿಯಲ್ಲಿರುವುದು ಗೂಗಲ್ (google.com), ಬಳಿಕ ಬಿಂಗ್ (ಮೈಕ್ರೋಸಾಫ್ಟ್ ಕಂಪನಿಯದು) (bing.com) ಹಾಗೂ ಯಾಹೂ (search.yahoo.com) ಸರ್ಚ್ ಎಂಜಿನ್‌ಗಳು.

ಇವುಗಳು ಕೇವಲ ಸರ್ಚ್ ಎಂಜಿನ್‌ಗಳಲ್ಲ, ಸರ್ಚ್ ಮಾಡಿ ಎಲ್ಲವನ್ನೂ ನಿಮ್ಮ ಮುಂದೆ ತಂದಿರಿಸುವ ಸಾಧನಗಳು. ಈಗ, ಗೂಗಲ್‌ನಲ್ಲಿ ಅತ್ಯಂತ ಹೆಚ್ಚು ಉಪಯೋಗವಾಗುವ ಕೆಲವು ತಂತ್ರಗಳು ಇಲ್ಲಿವೆ. Google.co.in ಓಪನ್ ಮಾಡಿ, ಸರ್ಚ್ ಬಾಕ್ಸ್‌ನಲ್ಲಿ ನೀವು ಕೆಲವೇ ಇಂಗ್ಲಿಷ್ ಪದಗಳನ್ನು ಟೈಪ್ ಮಾಡಿದರಾಯಿತು (ಸಂಖ್ಯೆಗಳು ಉದಾಹರಣೆ ಮಾತ್ರ) :

* ಯುಎಇಯ ದಿರ್ರಂ ಕರೆನ್ಸಿಯನ್ನು ರೂಪಾಯಿಗೆ ಪರಿವರ್ತಿಸಲು “900 AED to Rs”, ಡಾಲರನ್ನು ರೂಪಾಯಿಗೆ ಪರಿವರ್ತಿಸಲು “1000 Dollar in Rs”, ರೂಪಾಯಿಯನ್ನು ಡಾಲರ್‌ಗೆ ಪರಿವರ್ತಿಸಲು “120 Rs in USD”, ಸ್ವಿಸ್ ಫ್ರ್ಯಾಂಕ್ ಅನ್ನು ರೂಪಾಯಿಗೆ ಪರಿವರ್ತಿಸಲು, “150 Swiss Franc in Rs” ಟೈಪ್ ಮಾಡಿ.

* ಇಂಚನ್ನು ಸೆಂಟಿಮೀಟರಿಗೆ ಪರಿವರ್ತಿಸಲು “12 inch in cm”, ಅಡಿಯನ್ನು ಮೀಟರ್‌ಗೆ ಪರಿವರ್ತಿಸಲು “12 feet in meters” ಅಂತ ಟೈಪ್ ಮಾಡಿ.

* ಆಸ್ಟ್ರೇಲಿಯನ್ ಓಪನ್ ಟೆನಿಸ್ ಕೂಟದ ಆಟಗಳ ಫಲಿತಾಂಶ ತಿಳಿಯಲು “australian open” ಅಂತ ಟೈಪ್ ಮಾಡಿದರೆ ಸಾಕು.

* ಕೊಡಗಿನಿಂದ ಬೆಂಗಳೂರಿಗೆ ಹೋಗಬೇಕಿದ್ದರೆ ದೂರವೆಷ್ಟು, ಹೇಗೆ ಹೋಗಬೇಕೆಂದು ತಿಳಿಯಬೇಕಿದ್ದರೆ, “how far is coorg from bangalore” ಟೈಪ್ ಮಾಡಿ ಗೂಗಲ್‌ನಲ್ಲಿ ಸರ್ಚ್ ಮಾಡಿ. ಇವುಗಳನ್ನು ಟೈಪ್ ಮಾಡುವಾಗ ಮೊದಲ ಫಲಿತಾಂಶವಾಗಿ ಕಾಣಿಸುವುದನ್ನು ನೋಡಿ.

* ಇನ್ನು ಕ್ಯಾಲ್ಕುಲೇಟರ್ ಆಗಿಯೂ ಗೂಗಲ್ ಸರ್ಚ್ ಎಂಜಿನನ್ನು ಬಳಸಬಹುದು. ಉದಾಹರಣೆಗೆ ಹೀಗೆ ಮಾಡಿ ನೋಡಿ: ಗುಣಿಸಲು 530 x 106, ಭಾಗಿಸಲು 900 / 300, ಕೂಡಿಸಲು 400 + 12, ಕಳೆಯಲು 10000 – 12 ಬರೆದು ನೋಡಿ.

* ನಿಘಂಟು ಆಗಿಯೂ, ಪದಗಳ ವಿವರಣೆ ನೀಡಬಲ್ಲ ಗ್ರಂಥವಾಗಿಯೂ ಗೂಗಲ್ ಕೆಲಸ ಮಾಡುತ್ತದೆ. ಉದಾ: dog meaning in kannada ಅಂತ ಕೇಳಿದ್ರೆ, http://kannada.indiandictionaries.com/ ಗೆ ಅದು ಕರೆದೊಯ್ಯುತ್ತದೆ. What is the Kannada word for walnut ಅಂತ ಕೇಳಿದ್ರೆ ನಿಮ್ಮನ್ನು Answer.com ಎಂಬ ಜಾಲತಾಣಕ್ಕೆ ಕರೆದೊಯ್ಯುತ್ತದೆ.

* ಇಷ್ಟು ಮಾತ್ರವೇ ಅಲ್ಲ, ನೀವು ಕೇಳುವ ಪ್ರಶ್ನೆಗಳಿಗೂ ಅದು ಉತ್ತರಿಸಬಲ್ಲುದು. ಉದಾಹರಣೆಗೆ ಈ ಕೆಳಗಿನ ಪ್ರಶ್ನೆಗಳನ್ನು ಟೈಪ್ ಮಾಡಿ ನೋಡಿ: * Where is bangalore * Who is Indian prime minister * which is the best school in Bangalore * which is best Kannada movie * what is the score of india now

* ಇಷ್ಟು ಟೈಪ್ ಮಾಡಲು ಅಪಾರ ಇಂಗ್ಲಿಷ್ ಜ್ಞಾನವೇನೂ ಬೇಕಾಗಿಲ್ಲ. ಸ್ಪೆಲ್ಲಿಂಗ್ ಸರಿಯಾಗಿ ಟೈಪ್ ಮಾಡಬೇಕು. ಸ್ಪೆಲ್ಲಿಂಗ್ ಗೊತ್ತಿಲ್ಲದಿದ್ದರೆ, ಅದುವೇ ನಿಮಗೆ ಸಲಹೆ ಮಾಡುತ್ತದೆ ಎಂಬುದು ಗೊತ್ತೇ? schwarzenegger ಎಂಬುದರ ಸ್ಪೆಲ್ಲಿಂಗನ್ನು ನೀವು shwazene ಅಂತ ಬರೆಯಲು ಹೊರಟರೆ, ಡ್ರಾಪ್‌ಡೌನ್ ಮೆನುವಿನಲ್ಲಿ ನಿಮಗೆ ಸರಿಯಾದ ಸ್ಪೆಲ್ಲಿಂಗನ್ನೂ ಅದೂ ತೋರಿಸುತ್ತದೆ. ಅಷ್ಟೇ ಅಲ್ಲ, ಇದನ್ನು ಹೇಗೆ ಉಚ್ಚರಿಸುವುದು ಅಂತ ತಿಳಿಯಬೇಕಿದ್ದರೆ, schwarzenegger pronunciation ಅಂತ ಬರೆದುಬಿಡಿ. ಆಡಿಯೋ ಅಥವಾ ವೀಡಿಯೋಗೆ ಅದು ನಿಮ್ಮನ್ನು ಒಯ್ಯುತ್ತದೆ.

ಇವೆಲ್ಲವೂ ಬಳಕೆದಾರರಿಂದಲೇ ಸಮೃದ್ಧಗೊಂಡಿರುವ ಮಾಹಿತಿಕೋಶ. ಇಂಟರ್ನೆಟ್‌ನಲ್ಲಿ ಇಂಗ್ಲಿಷ್ ಎಂಬುದು ಏಕಸ್ವಾಮ್ಯ ಹೊಂದಿದ್ದಾಗ ಮತ್ತು ಪ್ರಾದೇಶಿಕ ಭಾಷೆಗಳಿಗೆ ಫಾಂಟ್‌ಗಳ ಸಮಸ್ಯೆಯಿದ್ದಾಗ ಎಲ್ಲರೂ ಇಂಗ್ಲಿಷಿನಲ್ಲೇ ಅವುಗಳನ್ನು ಬಳಸಿದ ಕಾರಣದಿಂದಾಗಿ ಈ ಮಾಹಿತಿಕೋಶವು ಸಮೃದ್ಧವಾಗಿಬಿಟ್ಟಿದೆ. ಈಗ ಪ್ರಾದೇಶಿಕ ಭಾಷೆಗಳಿಗೆ ಏಕರೂಪದ ಯುನಿಕೋಡ್ ಫಾಂಟ್ ಬಂದ ಬಳಿಕ ಕನ್ನಡದಲ್ಲಿಯೂ ಮಾಹಿತಿ ಭರಪೂರವಾಗಿ ಲಭಿಸತೊಡಗಿದೆಯಾದರೂ ಸಾಕಾಗುತ್ತಿಲ್ಲ. ಕನ್ನಡಿಗರು ಸಾಕಷ್ಟು ಮಾಹಿತಿಯನ್ನು ವೆಬ್‌ಗೆ ಊಡಿಸಿದಲ್ಲಿ ಮಾತ್ರವೇ ಅದು ನಾವು ಅಥವಾ ಮುಂದಿನ ಪೀಳಿಗೆಯವರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಕನ್ನಡದಲ್ಲೇ ಉತ್ತರಿಸಬಲ್ಲುದು.

ಅಂದರೆ, ಕನ್ನಡದಲ್ಲಿ ಪ್ರಶ್ನೆಗಳನ್ನು ಹಿಂದೆ ಕೇಳಿದ್ದಿದ್ದರೆ, ಅದಕ್ಕೆ ಸಮರ್ಥರಾದವರು ಉತ್ತರಿಸಿದ್ದಿದ್ದರೆ ಅಥವಾ ಇಂತಹಾ ಮಾಹಿತಿಯನ್ನೇ ನೀಡುವ kanaja.in, Wikipedia ಮುಂತಾದವುಗಳಲ್ಲಿ ಸಮರ್ಪಕ ದತ್ತಾಂಶಗಳಿದ್ದರೆ ಮಾತ್ರವೇ ಅದು ಗೂಗಲ್ ಮೂಲಕ ನಮ್ಮೆದುರು ಬಂದು ನಿಲ್ಲುತ್ತದೆ.

LEAVE A REPLY

Please enter your comment!
Please enter your name here