ಆಂಡ್ರಾಯ್ಡ್‌ನಿಂದ ವಿಂಡೋಸ್ ಫೋನ್‌ಗೆ ಸಂಪರ್ಕಗಳ ವರ್ಗಾವಣೆ ಹೇಗೆ?

0
741

ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ -102: ನವೆಂಬರ್ 17, 2014
Avinash Column-Newಆಂಡ್ರಾಯ್ಡ್ ಫೋನ್ ಬಳಸುತ್ತಿರುವ ಕೆಲವರಿಗೆ ಮೈಕ್ರೋಸಾಫ್ಟ್ ವಿಂಡೋಸ್ ಫೋನ್‌ನಲ್ಲಿನ ವೈಶಿಷ್ಟ್ಯಗಳಿಂದಾಗಿ ಮತ್ತು ಕಂಪ್ಯೂಟರ್, ಲ್ಯಾಪ್‌ಟಾಪ್ ಜತೆಗೆ ಸಿಂಕ್ರನೈಸ್ ಮಾಡುವ ಅವಕಾಶವಿರುವುದರಿಂದಾಗಿ ಅದು ಇಷ್ಟವಾಗಿರಬಹುದು. ಆಂಡ್ರಾಯ್ಡ್‌ನಿಂದ ವಿಂಡೋಸ್ ಫೋನ್‌‌ಗೆ ಬದಲಾಯಿಸುವಾಗ ಮುಖ್ಯವಾಗಿ ತೊಡಕಾಗುವುದು ಸಂಪರ್ಕ ವಿವರಗಳನ್ನು (ಕಾಂಟ್ಯಾಕ್ಟ್) ವರ್ಗಾಯಿಸುವುದು. ಹೊಸ ವಿಂಡೋಸ್ ಫೋನ್‌ಗೆ ಒಂದೊಂದೇ ಸಂಖ್ಯೆಯನ್ನು ಪುನಃ ಫೀಡ್ ಮಾಡುವುದು ತೀರಾ ಕಷ್ಟ. ಸುಲಭವಾಗಿ ಸಂಪರ್ಕ ಸಂಖ್ಯೆಗಳನ್ನು ಹೇಗೆ ವರ್ಗಾಯಿಸಬಹುದೆಂಬ ಮಾಹಿತಿ ಇಲ್ಲಿದೆ.

ಆಂಡ್ರಾಯ್ಡ್ ಫೋನ್‌ಗಳಿಗೆ ಗೂಗಲ್ ಖಾತೆ ಹೇಗೆ ಅತ್ಯಗತ್ಯವೋ, ವಿಂಡೋಸ್ ಫೋನ್ ತೆಗೆದುಕೊಂಡವರಿಗೆ ಮೈಕ್ರೋಸಾಫ್ಟ್‌ನ ಇಮೇಲ್ ಖಾತೆ (ಲೈವ್, ಔಟ್‌ಲುಕ್, ಹಾಟ್‌ಮೇಲ್) ಅಷ್ಟೇ ಅಗತ್ಯ. ವಿಂಡೋಸ್ ಸ್ಟೋರ್‌ನಿಂದ ಯಾವುದೇ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳಬೇಕಿದ್ದರೆ ಬೇಕಾಗುತ್ತದೆ. ಇಲ್ಲದಿದ್ದರೆ Live.com ಮೂಲಕ ಹೊಸ ಮೇಲ್ ಐಡಿ ರಚಿಸಿಕೊಳ್ಳಬಹುದು.

ಫೋನ್ ಬದಲಿಸುವ ಮುನ್ನ, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಸಂಪರ್ಕಗಳನ್ನು ಜಿಮೇಲ್ ಖಾತೆಯ ಜತೆ ಸಿಂಕ್ರನೈಜ್ ಮಾಡಿರಬೇಕು. ಇದಕ್ಕೆ ಇಂಟರ್ನೆಟ್ ಆನ್ ಆಗಿರಬೇಕು. ಎಲ್ಲ ಆಂಡ್ರಾಯ್ಡ್ ಫೋನ್‌ಗಳಲ್ಲಿರುವ People ಎಂಬ ಆ್ಯಪ್‌ನಲ್ಲಿ, Accounts ಎಂಬಲ್ಲಿ, Sync ಎಂಬ ಆಯ್ಕೆ ದೊರೆಯುತ್ತದೆ. ನಿಮ್ಮ ಪ್ರಧಾನ ಜಿಮೇಲ್ ಐಡಿ ಆಯ್ಕೆ ಮಾಡಿಕೊಂಡು ಅದರಲ್ಲಿ Contacts ಆಯ್ಕೆ ಮಾಡಿದಾಗ, ಕೆಲವು ನಿಮಿಷಗಳಲ್ಲಿ ಸಂಪರ್ಕ ಸಂಖ್ಯೆಗಳು ಜಿಮೇಲ್ ಖಾತೆಯ ಜತೆಗೆ ಸಿಂಕ್ರನೈಸ್ ಆಗುತ್ತದೆ. ಹಳೆಯ ಆವೃತ್ತಿಗಳಲ್ಲಿ, ಮುಖ್ಯ ಮೆನುವಿನ Settings ನಲ್ಲಿ Accounts & Sync ಕ್ಲಿಕ್ ಮಾಡಿ. ಜಿಮೇಲ್ ಐಡಿ ಕ್ಲಿಕ್ ಮಾಡಿ, Sync Contacts ಆಯ್ದುಕೊಳ್ಳಿ. ಸ್ವಲ್ಪ ಹೊತ್ತಿನಲ್ಲಿ ಸಂಪರ್ಕ ಸಂಖ್ಯೆಗಳು ಜಿಮೇಲ್‌ಗೆ ಅಪ್‌ಡೇಟ್ ಆಗುತ್ತವೆ.

ಹೊಸ ವಿಂಡೋಸ್ 8.1 ಕಾರ್ಯಾಚರಣಾ ವ್ಯವಸ್ಥೆಯಿರುವ ಫೋನ್‌ಗಳಲ್ಲಿ ಸಂಪರ್ಕ ವಿವರಗಳನ್ನು ಆಮದು ಮಾಡಿಕೊಳ್ಳುವುದು ತೀರಾ ಸುಲಭ. ಅದೇ ಫೋನ್‌ನಲ್ಲಿ ಸೆಟ್ಟಿಂಗ್ಸ್‌ನಲ್ಲಿ email+Accounts ಅಂತ ಇರುವಲ್ಲಿ ಗೂಗಲ್ ಖಾತೆ ಸೇರಿಸಿದರೆ ಸಾಕು. ಸಂಪರ್ಕ ಸಂಖ್ಯೆಗಳು ಸ್ವಯಂಚಾಲಿತವಾಗಿ ಸಿಂಕ್ರನೈಸ್ ಆಗಿಬಿಡುತ್ತದೆ. ಬಳಿಕ People ಆ್ಯಪ್‌ನ ಸೆಟ್ಟಿಂಗ್‌ಗೆ ಹೋಗಿ, Display Preference ನಲ್ಲಿ ಯಾವ ಖಾತೆಯ ಸಂಪರ್ಕ ವಿವರಗಳನ್ನು ತೋರಿಸಬೇಕೆಂಬುದನ್ನು ಆಯ್ಕೆ ಮಾಡಿಕೊಳ್ಳಬಹುದು.

ಮತ್ತೊಂದು ಆಯ್ಕೆಯೆಂದರೆ, ನಿಮ್ಮ ವಿಂಡೋಸ್ ಫೋನ್‌ನಲ್ಲಿಯೂ People ಎಂಬ ಆ್ಯಪ್‌ನಲ್ಲಿ add contacts ಆಯ್ಕೆ ಮಾಡಿಕೊಂಡು, ಮೈಕ್ರೋಸಾಫ್ಟ್ ಖಾತೆಗೆ ಲಾಗಿನ್ ಆಗುವ ಮೂಲಕ ನೇರವಾಗಿ ಈ ಮೇಲಿನ ಹಂತವನ್ನೂ ಮಾಡಬಹುದು. ಮೈಕ್ರೋಸಾಫ್ಟ್ ಖಾತೆಗೆ ಲಾಗಿನ್ ಆಗುವಾಗಲೇ, ನಿಮಗೆ Import Contacts from ಎಂಬ ಆಯ್ಕೆ ದೊರೆಯುತ್ತದೆ.

ತೀರಾ ಹಳೆಯ ಆವೃತ್ತಿಯ ವಿಂಡೋಸ್ (7 ಅಥವಾ 7.5) ಫೋನುಗಳಲ್ಲಾದರೆ ಸ್ವಲ್ಪ ಹೆಚ್ಚುವರಿ ಕೆಲಸ ಇರುತ್ತದೆ. ಕಂಪ್ಯೂಟರಿನಲ್ಲಿ ನಿಮ್ಮ ಜಿಮೇಲ್ ಖಾತೆಗೆ ಲಾಗಿನ್ ಆಗಿ. ಅಲ್ಲಿ ಎಡಭಾಗದಲ್ಲಿ Gmail ಬಟನ್ ಕ್ಲಿಕ್ ಮಾಡಿದಾಗ, ಕಾಣಿಸಿಕೊಳ್ಳುವ ಡ್ರಾಪ್‌ಡೌನ್ ಮೆನುವಿನಲ್ಲಿ Contacts ಎಂಬಲ್ಲಿ ಎಲ್ಲ ಸಂಪರ್ಕ ಸಂಖ್ಯೆಗಳು ಹಾಗೂ ಇಮೇಲ್ ಐಡಿ ಕಾಣಿಸಿಕೊಳ್ಳುತ್ತವೆ. ಪ್ರತಿಯೊಬ್ಬರ ಸಂಪರ್ಕ ವಿವರಗಳನ್ನೂ ಇಲ್ಲೇ ತಿದ್ದುಪಡಿ ಮಾಡಿಕೊಳ್ಳಬಹುದು. ನಂತರ ಮೇಲ್ಭಾಗದ More ಬಟನ್ ಕ್ಲಿಕ್ ಮಾಡಿದಾಗ ಕಾಣಿಸುವ ಡ್ರಾಪ್‌ಡೌನ್ ಮೆನುವಿನಿಂದ Export ಎಂಬುದನ್ನು ಆಯ್ಕೆ ಮಾಡಿಕೊಳ್ಳಿ. All Contacts ಎಂಬ ರೇಡಿಯೋ ಬಟನ್ ಕ್ಲಿಕ್ ಆಗಿರುವಂತೆ ನೋಡಿಕೊಳ್ಳಿ. Which export format ಎಂದಿರುವಲ್ಲಿ, Google CSV format ಅಂತ ಆಯ್ಕೆ ಮಾಡಿದ ಬಳಿಕ Export ಬಟನ್ ಕ್ಲಿಕ್ ಮಾಡಿ. ಒಂದು ಸಿಎಸ್‌ವಿ ಫಾರ್ಮ್ಯಾಟ್‌ನ ಫೈಲ್ (Google.csv) ಕಂಪ್ಯೂಟರಿಗೆ ಡೌನ್‌ಲೋಡ್ ಆಗುತ್ತದೆ.

ಲಾಗೌಟ್ ಆಗಿ, ಬಳಿಕ live.com ಎಂಬಲ್ಲಿ ಮೈಕ್ರೋಸಾಫ್ಟ್ ಇಮೇಲ್ ಐಡಿ ಮೂಲಕ ಲಾಗಿನ್ ಆಗಿ. ಮೇಲ್ಭಾಗದ ಎಡ ಮೂಲೆಯಲ್ಲಿರುವ ಮೆನು ಬಟನ್ ಮತ್ತು ಅದರಲ್ಲಿ People ಕ್ಲಿಕ್ ಮಾಡಿ. Add People to your contact list ಎಂದಿರುವಲ್ಲಿ ಕೆಳಭಾಗದಲ್ಲಿ Start import ಕ್ಲಿಕ್ ಮಾಡಿ. ಆಗ ಕಾಣಿಸುವ ಹಲವು ಆಯ್ಕೆಗಳಿಂದ Google ಆಯ್ಕೆ ಮಾಡಿ, Choose file ಬಟನ್ ಒತ್ತಿ, ನೀವು ಸೇವ್ ಮಾಡಿಕೊಂಡಿರುವ google.csv ಫೈಲ್ ಕ್ಲಿಕ್ ಮಾಡಿದರೆ, ಸಂಪರ್ಕಗಳು ಸಿಂಕ್ ಆಗುತ್ತವೆ.

ಟೆಕ್ ಟಾನಿಕ್: ಬಿಎಸ್ಸೆನ್ನೆಲ್ ಪೋರ್ಟಲ್
ಕರ್ನಾಟಕದಲ್ಲಿರುವ ತನ್ನ ಬಳಕೆದಾರರಿಗಾಗಿ ಬಿಎಸ್ಸೆನ್ನೆಲ್ ಹೊಸ ವೆಬ್ ಪೋರ್ಟಲ್ ಒಂದನ್ನು ತೆರೆದಿದೆ. ಅದರಲ್ಲಿ ಹೆಸರು ನೋಂದಾಯಿಸಿಕೊಂಡರೆ, ಇಂಟರ್ನೆಟ್ ಮೂಲಕವೇ ನಮ್ಮ ಬಿಎಸ್ಸೆನ್ನೆಲ್ ಸಿಮ್ ಕಾರ್ಡಿಗೆ ರೀಚಾರ್ಜ್ ಮಾಡಿಸಿಕೊಳ್ಳಬಹುದು, ವ್ಯಾಲಿಡಿಟಿ, ಎಷ್ಟು ಉಚಿತ ಕರೆ, ಎಸ್ಸೆಮ್ಮೆಸ್, ಡೇಟಾ ಬಾಕಿ ಇದೆ ಅಂತೆಲ್ಲಾ ತಿಳಿದುಕೊಳ್ಳಬಹುದು. http://gsmprepaid.genext.bsnl.co.in/

LEAVE A REPLY

Please enter your comment!
Please enter your name here