ವಿಂಡೋಸ್ ಎಕ್ಸ್‌ಪಿಗೆ ನಿವೃತ್ತಿ: ನಮಗೇನು ನಷ್ಟ?

0
575

ಮಾಹಿತಿ@ತಂತ್ರಜ್ಞಾನ, ವಿಜಯ ಕರ್ನಾಟಕ ಅಂಕಣ, ಜೂನ್ 17, 2013

ಬಹುತೇಕ ಮಂದಿ ಮೈಕ್ರೋಸಾಫ್ಟ್‌ನ ವಿಂಡೋಸ್ ಎಂಬ ಕಾರ್ಯಾಚರಣಾ ವ್ಯವಸ್ಥೆಯಿರುವ ಕಂಪ್ಯೂಟರ್‌ಗಳನ್ನು ಹೊಂದಿದ್ದಾರೆ. ವಿಂಡೋಸ್ 98 ಆವೃತ್ತಿಯು ಈಗ ಹೇಗೆ ಮೂಲೆಗುಂಪಾಗಿದೆಯೋ ವಿಂಡೋಸ್ ಎಕ್ಸ್‌ಪಿ ಆವೃತ್ತಿಯೂ 2014ರ ಏಪ್ರಿಲ್ 8ರಂದು ‘ನಿವೃತ್ತಿ’ಯಾಗಲಿದೆ. ಇದರೊಂದಿಗೆ ‘ಆಫೀಸ್ 2003’ (ಮೈಕ್ರೋಸಾಫ್ಟ್ ವರ್ಡ್, ಎಕ್ಸೆಲ್, ಪವರ್‌ಪಾಯಿಂಟ್ ಮುಂತಾದವುಗಳ 2003ರ ಆವೃತ್ತಿ) ಎಂಬ ಪಠ್ಯ ಪರಿಷ್ಕರಣೆ ತಂತ್ರಾಂಶವೂ ನಿಂತ ನೀರಾಗಲಿದೆ.

ಇದರ ಪರಿಣಾಮವೇನು? ಹಾಗಿದ್ದರೆ ವಿಂಡೋಸ್ ಎಕ್ಸ್‌ಪಿ ಇರುವ ನಮ್ಮ ಕಂಪ್ಯೂಟರುಗಳು ಕೆಲಸ ಮಾಡುವುದಿಲ್ಲವೇ? ಎಂದು ಆತಂಕ ವ್ಯಕ್ತಪಡಿಸಿದವರಿಗಾಗಿ ಇಲ್ಲಿದೆ ಕೊಂಚ ಮಾಹಿತಿಯ ನೆರವು ಇಲ್ಲಿದೆ.

ಎಕ್ಸ್‌ಪಿ ಆಪರೇಟಿಂಗ್ ಸಿಸ್ಟಂ ಹಾಗೂ ‘ಆಫೀಸ್ 2003’ ಗಳು 2014ರ ಏಪ್ರಿಲ್ ನಂತರ ಕಾರ್ಯನಿರ್ವಹಿಸುವಿದಿಲ್ಲ ಎಂಬುದು ಇದರರ್ಥ ಅಲ್ಲ. ಇವು ಕೆಲಸ ಮಾಡುತ್ತವೆ, ಆದರೆ ಇವುಗಳನ್ನು ಅಭಿವೃದ್ಧಿಪಡಿಸಿರುವ ಸಾಫ್ಟ್‌ವೇರ್ ದಿಗ್ಗಜ ‘ಮೈಕ್ರೋಸಾಫ್ಟ್’ ಅದಕ್ಕೆ ತಾನು ಇದುವರೆಗೆ ನೀಡುತ್ತಿದ್ದ ಆನ್‌ಲೈನ್ ನೆರವನ್ನು, ಸುಧಾರಿತ ಪ್ರೋಗ್ರಾಂ ತಂತ್ರಾಂಶಗಳ ಪೂರೈಕೆಯನ್ನು ನಿಲ್ಲಿಸುತ್ತದೆ ಎಂದರ್ಥ.

ಹಾಗಿದ್ದರೆ ಭಯ ಯಾಕೆ ಪಡಬೇಕು, ಇದ್ದುದರಲ್ಲಿಯೇ ನಾವು ಮುಂದುವರಿಯಬಹುದಲ್ಲವೇ ಅಂತ ನೀವು ಕೇಳಬಹುದು. ಇಲ್ಲ. ತೊಂದರೆಯಿರುವುದು ಇಲ್ಲೇ.

ಇಂಟರ್ನೆಟ್ ಎಕ್ಸ್‌ಪ್ಲೋರರ್ ಎಂಬ ಅಂತರ್ಜಾಲ ಪುಟಗಳನ್ನು ಜಾಲಾಡುವ ವ್ಯವಸ್ಥೆಗೆ ‘ಮೈಕ್ರೋಸಾಫ್ಟ್ ಕಂಪನಿಯು ಹಲವಾರು ಸೆಕ್ಯುರಿಟಿ ಪ್ಯಾಚ್‌ಗಳನ್ನು ಕಳುಹಿಸಿದೆ, ಅದನ್ನು ತನ್ನ ಬಳಕೆದಾರರಿಗೆ ಉಚಿತ ಅಪ್‌ಡೇಟ್‌ಗಳ ರೂಪದಲ್ಲಿ ಒದಗಿಸುತ್ತಿದೆ’ ಎಂಬ ಸುದ್ದಿಯನ್ನು ಬಹುಶಃ ನೀವು ಓದಿರಬಹುದು. ಈ ರೀತಿಯ, ವಿಶೇಷವಾಗಿ ಇಂಟರ್ನೆಟ್ ಬಳಸುತ್ತಿರುವ ಎಕ್ಸ್‌ಪಿ ಕಂಪ್ಯೂಟರುಗಳಿಗೆ ಅಗತ್ಯವಾಗಿರುವ ತಂತ್ರಾಂಶದ ಬೆಂಬಲ (ಅಪ್‌ಡೇಟ್‌ಗಳ ಮೂಲಕ ತಂತ್ರಾಂಶಗಳ ಸುಧಾರಿತ ರೂಪಗಳು, ದೋಷ/ಸಮಸ್ಯೆಗಳಿಗೆ ಮೈಕ್ರೋಸಾಫ್ಟ್ ತಜ್ಞರಿಂದ ಪರಿಹಾರಗಳು, ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಸೆಕ್ಯುರಿಟಿ ಅಪ್‌ಡೇಟ್‌ಗಳು) ದೊರೆಯುವುದಿಲ್ಲ.

ಸೆಕ್ಯುರಿಟಿ ಅಪ್‌ಡೇಟ್‌ಗಳು ದೊರೆಯುವುದಿಲ್ಲ ಎಂದಾದರೆ, ಎಕ್ಸ್‌ಪಿಯಲ್ಲಿ ಇರುವ ತೀರಾ ಇತ್ತೀಚಿನ ಪ್ರೋಗ್ರಾಂಗಳು, ಹಾಗೂ ಅಪ್ಲಿಕೇಶನ್‌ಗಳಿಗೆ ಹೊಸದಾಗಿ ಹುಟ್ಟಿಕೊಳ್ಳುವ ನಾನಾ ತೆರನಾದ ಕಂಪ್ಯೂಟರ್ ವೈರಸ್‌ಗಳು, ಮಾಲ್‌ವೇರ್‌ಗಳು, ಸ್ಪೈವೇರ್‌ಗಳಿಂದ ಸುರಕ್ಷತೆ ಪಡೆದುಕೊಳ್ಳುವುದು ಸಾಧ್ಯವಿಲ್ಲ ಎಂದರ್ಥ. ಅವುಗಳು ನಿಮ್ಮ ಕಂಪ್ಯೂಟರನ್ನು, ಅದರಲ್ಲಿರುವ ಮಾಹಿತಿಯನ್ನು ಹಾಳುಗೆಡವಬಹುದಾಗಿದೆ. ಅಂತೆಯೇ, ತಂತ್ರಾಂಶದಲ್ಲೇನಾದರೂ ದೋಷವಿದ್ದರೆ, ಅದನ್ನು ಸರಿಪಡಿಸಲು ಮೈಕ್ರೋಸಾಫ್ಟ್ ಕಂಪನಿಯು ಕಳುಹಿಸುತ್ತಿದ್ದ ಅಪ್‌ಡೇಟ್‌ಗಳು ಕೂಡ ಮುಂದಿನ ವರ್ಷದಿಂದ ದೊರೆಯುವುದಿಲ್ಲ.

ಇಂಟರ್ನೆಟ್ ಇಲ್ಲದೆಯೇ ಕೆಲಸ ಮಾಡಿಕೊಂಡುಹೋಗಿಬಿಡೋಣ ಎಂದುಕೊಳ್ಳುವವರಿಗೆ ಚಿಂತೆ ಇಲ್ಲ. ಆದರೆ, ಹೊಸದಾಗಿ ಬರುವ ತಂತ್ರಾಂಶಗಳು, ‘ಆಫೀಸ್ 2013’ ಫೈಲ್‌ಗಳನ್ನು (ವರ್ಡ್, ಎಕ್ಸೆಲ್ ಇತ್ಯಾದಿ) ಎಕ್ಸ್‌ಪಿ ಇರುವ ಸಿಸ್ಟಂಗಳಲ್ಲಿ ತೆರೆಯುವುದು ಅಸಾಧ್ಯ. ಅದಕ್ಕಾಗಿ ಮತ್ತು ಸಂಪೂರ್ಣ ಸುರಕ್ಷತೆ ಹೊಂದಿರುವುದಕ್ಕಾಗಿ ಕಾರ್ಯಾಚರಣಾ ವ್ಯವಸ್ಥೆಯನ್ನು ತೀರಾ ಇತ್ತೀಚಿನ ವಿಂಡೋಸ್ 7 ಅಥವಾ ವಿಂಡೋಸ್ 8 ಆವೃತ್ತಿಗೆ ಅಪ್‌ಗ್ರೇಡ್ ಮಾಡಿಕೊಳ್ಳುವುದು ಒಳಿತು. ಈ ಸುಧಾರಿತ ಆವೃತ್ತಿಗಳಿಗೆ ನವೀನ ಹಾರ್ಡ್‌ವೇರ್‌ಗಳೂ ಬೇಕಾಗುತ್ತವೆಯಾದುದರಿಂದ, ಈಗಿಂದಲೇ ಅದಕ್ಕಾಗಿ ಸಿದ್ಧರಾಗುವುದೊಳಿತು.

ತಂತ್ರಜ್ಞಾನವೆಂಬುದು ನಿಂತ ನೀರಲ್ಲ. ಅದು ದಿನದಿಂದ ದಿನಕ್ಕೆ ಬದಲಾಗುತ್ತಲೇ ಇರುತ್ತದೆ. ಅಂದರೆ ಹೆಚ್ಚಿನ ಸೌಕರ್ಯಗಳೊಂದಿಗೆ ಮೇಲ್ದರ್ಜೆಗೆ ಏರುತ್ತಲೇ ಇರುತ್ತದೆ. ಹೀಗಾಗಿ, ಕಾಲಕ್ಕೆ ತಕ್ಕ ಬದಲಾವಣೆಗಳೊಂದಿಗೆ ನಮ್ಮ ಕಂಪ್ಯೂಟರ್ ತಂತ್ರಾಂಶಗಳು ಕೂಡ ಅಪ್‌ಗ್ರೇಡ್ ಆಗಿ ಅಪ್ ಟು ಡೇಟ್ ಆಗಿದ್ದಿದ್ದರೆ, ಅವುಗಳಿಗೆ ಯಾವುದೇ ಅಪಾಯವಿರುವುದಿಲ್ಲ.

LEAVE A REPLY

Please enter your comment!
Please enter your name here