PUBG ಹಾಗೂ Mobile Games ವ್ಯಸನ: ಅವಕಾಶ ಸಿಕ್ಕಿದೆ, ಬಳಸಿಕೊಳ್ಳಿ!

0
452

“ಮೊಬೈಲ್ ಫೋನ್ ಕೊಡಿಸಲಿಲ್ಲವೆಂದು ಬಾಲಕಿ ಆತ್ಮಹತ್ಯೆ”

“ಪಬ್‌ಜಿ ಆಡಲು ಬಿಡಲಿಲ್ಲವೆಂದು ತಂದೆಗೇ ಇರಿದ ಪುತ್ರ”

ನಿಮಗೆ ಅನಾಮಿಕ ಆಟಗಾರನ ಯುದ್ಧಕ್ಷೇತ್ರ ಗೊತ್ತೇ? ಪ್ಲೇಯರ್ ಅನ್‌ನೋನ್ಸ್ ಬ್ಯಾಟಲ್ ಗ್ರೌಂಡ್? ಅರ್ಥವಾಗಲಿಲ್ವೇ? ಪಬ್ಜಿ? ಓಹ್, ತಕ್ಷಣ ಗೊತ್ತಾಯಿತಲ್ಲವೇ?

ಅದೆಷ್ಟೋ ಮಕ್ಕಳನ್ನು ಮಾನಸಿಕ ಆಸ್ಪತ್ರೆಗೆ ತಳ್ಳಿದ, ಅದೆಷ್ಟೋ ಮುಗ್ಧರನ್ನು ವ್ಯಗ್ರರನ್ನಾಗಿಸಿ ಹೆತ್ತ ತಂದೆ ತಾಯಿಗೇ ಇರಿಯುವಂತೆ ಮಾಡಿದ, ಅದೆಷ್ಟೋ ಬೆಳೆಯಬೇಕಾದ, ಓದಿ ಬೆಳಗಬೇಕಾದ ಮಕ್ಕಳ ಮನಸ್ಸಿಗೆ ಮಂಕು ಬಡಿಯುವಂತೆ ಮಾಡಿದ, ಓದಿನಲ್ಲಿ ಮುಂದಿದ್ದ ಇನ್ನೆಷ್ಟೋ ಮಕ್ಕಳನ್ನು ಫೇಲ್ ಆಗುವಂತೆ ಮಾಡಿದ, ಒಟ್ಟಾರೆಯಾಗಿ ಭಾರತದಂತಹಾ ಪ್ರತಿಭಾ ಸಂಪನ್ನರ ಆಡುಂಬೊಲದಲ್ಲಿ ಪ್ರತಿಭಾನಾಶಕ್ಕೆ ಕಾರಣವಾದ ಈ ಆಟದ ಹೆಸರೇ ಅನಾಮಿಕ ಆಟಗಾರನ ಯುದ್ಧ ಕ್ಷೇತ್ರ – PUBG.

ಬಹುಶಃ ಆಡುವ ಮಕ್ಕಳಿಗೂ ಇದರ ಪೂರ್ಣ ರೂಪ ಗೊತ್ತೇ ಇಲ್ಲವೇನೋ? ಆಡಲು ಗೊತ್ತಿಲ್ಲದಿದ್ದರೂ, ಯಾರೂ ಹೇಳದಿದ್ದರೂ, ಮೊಬೈಲ್ ಸಿಕ್ಕಾಕ್ಷಣ ಕೇಳಿ ತಿಳಿದುಕೊಂಡು, ಒಂದು ವಾರ ಅಭ್ಯಾಸ ಮಾಡಿ, ಕಷ್ಟಪಟ್ಟು ಈ ಮೊಬೈಲ್ ಗೇಮ್ ಆಡುವ ವಿದ್ಯೆಯನ್ನು ಕಲಿತು, ಪಬ್‌ಜಿ ವ್ಯಸನಿಗರ ವಲಯದಲ್ಲಿ ಸೈ ಅನ್ನಿಸಿಕೊಳ್ಳಲು ಹೊರಡುತ್ತಾರೆ ಇಂದಿನ ಮಕ್ಕಳು. ತಪ್ಪಿಲ್ಲದೆ, ಸೋಲಿಲ್ಲದೆ ಆಟವಾಡಲು ತೊಡಗುತ್ತಾರೆ. ಅದೇ, ಗಣಿತದ ಸಮಸ್ಯೆಯೊಂದನ್ನು ಸಾಲ್ವ್ ಮಾಡಲು ಹೇಳಿ ನೋಡೋಣ, ಅಪ್ಪ, ಅಮ್ಮ, ಅಣ್ಣ, ಸ್ನೇಹಿತರು, ಮೇಷ್ಟ್ರು – ಹೀಗೆ ಎಲ್ಲರಲ್ಲೂ ಕೇಳುತ್ತಾರೆ, ಹೇಳಿಕೊಟ್ಟರೂ ಅರ್ಥವಾಗದೆ ಮತ್ತದೇ ತಪ್ಪುಗಳನ್ನು ಮಾಡುತ್ತಾರೆ.

ಇದು ಮಕ್ಕಳ ತಪ್ಪಲ್ಲ. ಏನೂ ಅರಿಯದ ಪುಟಾಣಿಗಳ ಸಹಜ ನಡವಳಿಕೆಯಷ್ಟೇ. ಆದರೆ ಮಕ್ಕಳ ಈ ಕುತೂಹಲವನ್ನೇ ಸಕಾರಾತ್ಮಕವಾದ ಮಾರ್ಗಕ್ಕೆ ಕೊಂಡೊಯ್ಯಬೇಕಾದ ಪಾಲಕರು, ಇದರ ಅರಿವಿಲ್ಲದೆ-ಪರಿವೆಯಿಲ್ಲದೆ, ಮಗು ಒಮ್ಮೆ ಬಾಯಿ ಮುಚ್ಚಿದರೆ ಸಾಕು, ತನ್ನ ಪಾಡಿಗೆ ತಾನಿರಬಹುದೆಂಬ ಕಾರಣಕ್ಕೆ ಮೊಬೈಲ್ ಕೊಟ್ಟುಬಿಡುತ್ತಾರೆ, ತಮ್ಮ ಲೋಕದಲ್ಲಿ ತಾವಿರುತ್ತಾರೆ. ಹೊರಗೆ ಹೋಗಿ ಓರಗೆಯವರೊಂದಿಗೆ ಆಡುತ್ತಾಡುತ್ತಾ, ಮಾತನಾಡುತ್ತಾ, ಬೌದ್ಧಿಕ, ಮಾನಸಿಕ, ಸಾಮಾಜಿಕ ಮೌಲ್ಯಗಳನ್ನು ಕಲಿಯಬೇಕಾದ ಮಕ್ಕಳ ಕೈಗೆ, ಈ ಪರಿಯಾಗಿ ಬುದ್ಧಿಗೆ ಮಂಕುಬಡಿಸುವ ಸಾಮರ್ಥ್ಯವುಳ್ಳ ಮೊಬೈಲ್ ದಯಪಾಲಿಸಿ, ತಾವೂ ಮೊಬೈಲ್‌ನಲ್ಲೇ ಮುಳುಗುವ ಪೋಷಕರ ಕೃಪೆಯಿಂದಾಗಿ ಪ್ರತಿಭೆಗಳು ಕಮರುತ್ತಿವೆ.

ಮಗು ಅಲ್ಲವೇ, ಆಡಲಿ; ಬೇರೆ ಯಾವಾಗ ಆಡೋದು ಅಂತ ಮುದ್ದುಗರೆಯುವ ಪೋಷಕರಿಗೆ ತನ್ನ ಮಗು ವ್ಯಸನಕ್ಕೆ ತುತ್ತಾಗಿ, ತಮ್ಮ ಮೇಲೆಯೇ ಕೈ ಮಾಡುವಷ್ಟರ ಹಂತಕ್ಕೆ ವ್ಯಗ್ರತೆಯನ್ನು ಬೆಳೆಸಿಕೊಂಡಾಗ ಎಚ್ಚೆತ್ತುಕೊಂಡು, ಕೊನೆಗೆ ಮಾನಸಿಕ ತಜ್ಞರಲ್ಲಿಗೆ ಕರೆದೊಯ್ದ ಅದೆಷ್ಟು ಉದಾಹರಣೆಗಳಿಲ್ಲ! ಕೆಲವು ಪೋಷಕರಿಗೆ ತಾವೇ ಮಾಡಿದ ತಪ್ಪಿನ ಅರಿವಾಗದೆ, ಮಕ್ಕಳನ್ನು ದಂಡಿಸಲು ಮುಂದಾಗುತ್ತಾರೆ. ಇದೆಲ್ಲವೂ ನಾನು ನಿಜ ಜೀವನದಲ್ಲಿ ನೋಡಿದ ವಿಷಯ.

ಮಕ್ಕಳು ಮಾತ್ರವೇ?
ಖಂಡಿತಾ ಇಲ್ಲ. ಬುದ್ಧಿ ಬೆಳೆದವರೂ, ಉದ್ಯೋಗದಲ್ಲಿರುವವರೂ, ನವ ದಂಪತಿಗಳೂ, ಈ ವ್ಯಸನಕ್ಕೆ ಬಲಿಬಿದ್ದಿದ್ದನ್ನು ಕಣ್ಣಾರೆ ಕಂಡವ ನಾನು. ಸ್ವಲ್ಪವೇ ಸ್ವಲ್ಪ ಬಿಡುವು ಸಿಕ್ಕಿತೆಂದಾದರೆ, ಮೊಬೈಲ್ ಹಿಡಿದು ಒಂದು ಆಟ ಮುಗಿಸ್ತೀನಿ ಅಂತ ಮರೆಯಾಗುವವರನ್ನೂ ನೋಡಿದ್ದೇನೆ.

ಪಬ್‌ಜಿ ಏನು ಮಾಡುತ್ತದೆ?
ಮೊಬೈಲ್ ಎಂಬುದು ಅನಿವಾರ್ಯ ಅನಿಷ್ಟ. ಹೀಗನ್ನದೇ ವಿಧಿಯಿಲ್ಲ. ತಂತ್ರಜ್ಞಾನವು ಬೆಳೆದಷ್ಟೂ ಅದರಿಂದ ಒಳಿತೆಷ್ಟೋ, ಅದಕ್ಕಿಂತ ಹೆಚ್ಚು ಕೆಡುಕುಂಟು ಮಾಡುವ ಕಂದಕವೊಂದು ಸಿದ್ಧವಾಗಿರುತ್ತದೆ ಎಂಬ ಪರಿಜ್ಞಾನ ಪೋಷಕರಿಗೆ ಬೇಕೇಬೇಕು.

ಮೂರು ವರ್ಷಗಳ ಹಿಂದೆ ಪಬ್‌ಜಿ ಎಂಬ ಗೇಮ್ ಬಿಡುಗಡೆಯಾದಾಗಲೂ, ಅದು ಜನಪ್ರಿಯತೆ ಗಿಟ್ಟಿಸಿಕೊಂಡಿದ್ದಷ್ಟೇ ಅಲ್ಲ, ಎಲ್ಲ ರೀತಿಯ ನೇತ್ಯಾತ್ಮಕ ಕಾರಣಗಳಿಗೆ ಸುದ್ದಿಯಾಗಲಾರಂಭಿಸಿತು. ತೀರಾ ವ್ಯಸನಕಾರಿಯಾಗಿಯೂ, ಮಾನಸಿಕ ಅಸ್ವಾಸ್ಥ್ಯದ ಮೂಲವಾಗಿಯೂ ಇದು ಸದ್ದು ಮಾಡತೊಡಗಿದಾಗ, ಎಚ್ಚೆತ್ತ ಪೋಷಕರು ಕೋರ್ಟ್ ಮೊರೆ ಹೋಗಿ, ಅದನ್ನು ನಿಷೇಧಿಸುವಲ್ಲಿ ಅಲ್ಪ ಮಟ್ಟಿನ ಯಶಸ್ಸು ಪಡೆದರು. ಹಲವೆಡೆ ಜಿಲ್ಲಾಡಳಿತಗಳು ಎಚ್ಚೆತ್ತುಕೊಂಡು ನಿಷೇಧಿಸಿದವು. ನಿಷೇಧವಾದರೂ ಆಡಿದ ಹತ್ತಾರು ಮಂದಿಯ ಬಂಧನವೂ ಆಯಿತು. ನಿಷೇಧದಿಂದ ನೊಂದವರು ಆತ್ಮಹತ್ಯೆಯನ್ನೂ ಮಾಡಿಕೊಳ್ಳುವ ಘಟನೆಗಳನ್ನು ಓದಿದೆವು. ಇದು ಹಿಂಸಾಪ್ರವೃತ್ತಿಯನ್ನು ಪ್ರಚೋದಿಸುತ್ತದೆ, ಮಕ್ಕಳನ್ನು ವ್ಯಸನಕ್ಕೆ ತಳ್ಳುತ್ತದೆ ಎಂಬ ಕಾರಣಕ್ಕೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಧವು ಕೂಡ, ಪಬ್‌ಜಿ ನಿಷೇಧಕ್ಕೆ ಒತ್ತಾಯಿಸಿತು.

ಅಷ್ಟೇನೂ ಗೀಳು ಹಿಡಿಸದ ಮತ್ತು ಹಿಂಸಾಪ್ರವೃತ್ತಿ ಪ್ರಚೋದಿಸದ ಕೌಂಟರ್ ಸ್ಟ್ರೈಕ್, ಕಾಲ್ ಆಫ್ ಡ್ಯೂಟಿ, ಗ್ರ್ಯಾಂಡ್ ಥೆಫ್ಟ್ ಆಟೋ, ಮ್ಯಾಡ್ ಮ್ಯಾಕ್ಸ್, ಮ್ಯಾಕ್ಸ್ ಪೈನೇ, ಮಾಡರ್ನ್ ವಾರ್‌ಫೇರ್ ಮುಂತಾದ ಗೇಮ್‌ಗಳಿದ್ದರೂ, ಜನರಿಗೆ ಇದರ ಬದಲು ಪಬ್‌ಜಿಯ ಹಿಂಸೆಯೇ ಮುಖ್ಯವಾಯಿತು.

ಪಬ್‌ಜಿ ಗೇಮ್‌ನ ಆಟಾಟೋಪ
2017ರ ಮಾರ್ಚ್ ತಿಂಗಳಲ್ಲಿ, ವಿಂಡೋಸ್ ಕಂಪ್ಯೂಟರ್‌ಗಾಗಿ ಬೀಟಾ ಗೇಮ್ ಆಗಿ ಬೆಳಕಿಗೆ ಬಂದ ಅದು, ಅದೇ ವರ್ಷದ ಡಿಸೆಂಬರ್ ತಿಂಗಳಲ್ಲಿ ಪೂರ್ಣಪ್ರಮಾಣದಲ್ಲಿ ಬಿಡುಗಡೆಯಾಯಿತು. 2018ರಲ್ಲಿ Xbox, Playstaion ಮುಂತಾದ ಗೇಮಿಂಗ್ ಕನ್ಸೋಲ್‌ಗಳಿಗೆ, ಆಂಡ್ರಾಯ್ಡ್, ಐಒಎಸ್ ಮೊಬೈಲ್‌ಗಳಿಗೂ ಇದು ವಕ್ಕರಿಸಿತು. ಇದುವರೆಗೆ ಜಾಗತಿಕವಾಗಿ 73 ಕೋಟಿಗೂ ಹೆಚ್ಚು ಡೌನ್‌ಲೋಡ್ ಕಂಡಿರುವ ಪಬ್‌ಜಿ, 2018ರ ಬಳಿಕ ಹಲವು ಬಾರಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಗರಿಷ್ಠ ಡೌನ್‌ಲೋಡ್ ಆದ ಆ್ಯಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಭಾರತದಲ್ಲಿ ಅದರ ಡೌನ್‌ಲೋಡ್ ಪ್ರಮಾಣ ಸುಮಾರು 17.5 ಕೋಟಿ! ಜಗತ್ತಿನಲ್ಲಿ ದಿನಕ್ಕೆ 4 ಕೋಟಿ ಸಕ್ರಿಯ ಬಳಕೆದಾರರು ಈ ಆನ್‌ಲೈನ್ ಗೇಮ್ ಅನ್ನು ಆಡುತ್ತಿದ್ದರೆಂದರೆ, ಇದರ ಖ್ಯಾತಿಯೋ, ಕುಖ್ಯಾತಿಯೋ ಎಷ್ಟಿತ್ತೆಂಬುದನ್ನು ನೀವೇ ನಿರ್ಧರಿಸಿ. ಒಂದು ಅಂದಾಜಿನ ಪ್ರಕಾರ, ಪಬ್‌ಜಿ ಸಂಪಾದಿಸಿದ ಹಣ ಸುಮಾರು 300 ಕೋಟಿ ಡಾಲರ್ (ಸುಮಾರು 22,500 ಕೋಟಿ ರೂ.)

ಅನಾಹುತಗಳೇನು?
ಮಕ್ಕಳು, ಹದಿಹರೆಯದವರು, ಯುವ ಜನಾಂಗವನ್ನು ಇದು ಯಾವ ಮಟ್ಟಿಗೆ ಹುಚ್ಚೆಬ್ಬಿಸಿದೆಯೆಂದರೆ ಕೆಲವು ಉದಾಹರಣೆಗಳನ್ನು ನಾವು ಮಾಧ್ಯಮಗಳಲ್ಲಿ ನೋಡಿದ್ದೇವೆ. 45 ದಿನಗಳ ಕಾಲ ತೆಲಂಗಾಣದ 20ರ ಯುವಕನೊಬ್ಬ ಪಬ್‌ಜೀ ಆಟವಾಡಿದ. ಮೊಬೈಲ್ ನೋಡುತ್ತಲೇ ಆಟವಾಡಬೇಕಾದ ಕಾರಣದಿಂದ ತೀವ್ರ ಕತ್ತು ನೋವು ಬಂದು, ಆಸ್ಪತ್ರೆಗೆ ಸೇರಿಸಲಾಯಿತು, ಚಿಕಿತ್ಸೆ ಫಲಕಾರಿಯಾಗದೆ ಪ್ರಾಣ ಕಳೆದುಕೊಂಡ. ಪದವಿಪೂರ್ವ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಪಬ್‌ಜಿ ಹೇಗೆ ಆಡುವುದು ಅಂತನೇ ಬರೆದು ಬರೆದು ಫೇಲ್ ಆದ, ಮಧ್ಯಪ್ರದೇಶದ ಛಿಂದ್ವಾರದಲ್ಲಿ ಪಬ್‌ಜಿ ಆಡುತ್ತಲೇ ನೀರು ಕುಡಿಯುವ ಬದಲು ಆ್ಯಸಿಡ್ ಸೇವಿಸಿದ, ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ರೈಲ್ವೇ ಹಳಿ ಮೇಲೆ ಪಬ್‌ಜಿ ಆಡುತ್ತಿದ್ದ ಇಬ್ಬರು ಯುವಕರ ಮೇಲೆ ರೈಲು ಹರಿದು ಸಾವಿಗೀಡಾದ ಘಟನೆಗಳನ್ನೆಲ್ಲ ನಾವು ಓದಿದ್ದೇವೆ. ಅಂತೆಯೇ, ಜಮ್ಮುವಿನಲ್ಲಿ ಫಿಟ್ನೆಸ್ ತರಬೇತುದಾರನೊಬ್ಬ 10 ದಿನ ಪಬ್‌ಜಿ ಆಡಿ, ಅದರಲ್ಲಾದ ಸೋಲಿನಿಂದ ತಲೆಕೆಟ್ಟು, ತನ್ನ ತಲೆಗೆ ಬಡಿದುಕೊಂಡು ಸ್ಮರಣಶಕ್ತಿಯನ್ನೇ ಕಳೆದುಕೊಂಡ ಕಥೆಯೂ ವರದಿಯಾಗಿದೆ.

2020 ರ ಸೆಪ್ಟೆಂಬರ್ 02ರಂದು ಭಾರತ ಸರ್ಕಾರವು ಚೀನಾ ಮೂಲದ ಆ್ಯಪ್‌ಗಳನ್ನು ನಿಷೇಧಿಸುವಾಗ, ಇದರ ಮೂಲ ವಿತರಕ, ಚೀನಾದ ಟೆನ್ಸೆಂಟ್ ಹೋಲ್ಡಿಂಗ್ ಲಿ. ಎಂಬ ಕಾರಣಕ್ಕೆ ಚೀನಾ ವಿರೋಧಿ ಅಲೆಯೊಂದಿಗೆ ಪಬ್‌ಜಿಯನ್ನೂ ನಿಷೇಧಿಸಿತು. ಸರ್ಕಾರ ನೀಡಿದ ಕಾರಣ ಬೇರೇಯೇ ಆದರೂ, ನಮ್ಮನ್ನು ಆಳುವ ಸರ್ಕಾರಗಳೂ ಪಬ್‌ಜಿಯಂತಹಾ ಗೇಮ್‌ಗಳು ಉಂಟು ಮಾಡುತ್ತಿರುವ ಪ್ರತಿಭಾಶೂನ್ಯ ವಾತಾವರಣದ ಬಗ್ಗೆ ಗಮನ ಹರಿಸದಿರುವುದು ಆತಂಕಕಾರಿ. ಈಗ ಪಬ್‌ಜಿ ಗೇಮ್‌ನ ಒಡೆಯನಾಗಿರುವ ದಕ್ಷಿಣ ಕೊರಿಯಾದ ಪಬ್‌ಜಿ ಕಾರ್ಪ್ ಸಂಸ್ಥೆಯು, ಚೀನಾದ ಟೆನ್ಸೆಂಟ್‌ಗೆ ನೀಡಲಾಗಿರುವ ಹಕ್ಕುಗಳನ್ನು ಹಿಂತೆಗೆದುಕೊಂಡಿದೆ. ಆ ಹಕ್ಕುಗಳನ್ನು ಬೇರೆಯವರಿಗೆ ವಿತರಿಸಿದಲ್ಲಿ, ಪಬ್‌ಜಿ ಎಂಬ ವ್ಯಸನವು ಮತ್ತೆ ಭಾರತದೊಳಕ್ಕೆ ಪ್ರವೇಶಿಸುವ ಸಾಧ್ಯತೆಗಳನ್ನೇನೂ ಅಲ್ಲಗಳೆಯುವಂತಿಲ್ಲ.

ಹಾಗಿದ್ದರೆ ಈ ಪರಿಯ ಮೊಬೈಲ್ ವ್ಯಸನ ನಿವಾರಣೆಗೆ ಮದ್ದೇನು?
ಸರ್ಕಾರವೇ ಮಾಡದಿದ್ದರೆ, ಈ ವ್ಯಸನಕಾರಿ ಗೇಮ್‌ಗಳಿಂದಾಗುವ ಅನಾಹುತ ತಪ್ಪಿಸಲು ನಾವೇ ಮುಂದಾಗಬೇಕಷ್ಟೇ. ಮೊದಲು, ಇದು ಸಮಸ್ಯೆಯಾಗಿ ಬೆಳೆಯುತ್ತಿದೆ, ದಾರಿ ತಪ್ಪಿ ನಡೆಯುವ ಮಕ್ಕಳನ್ನು ಸನ್ಮಾರ್ಗದಲ್ಲಿ ಮುನ್ನಡೆಸಬೇಕಾಗಿದೆ ಎಂದು ಗುರುತಿಸುವ ಮನಸ್ಸು ಪೋಷಕರಾದ ನಮ್ಮದಾಗಿರಬೇಕು. ಬರೇ ಆಡಿದರೆ ಪರವಾಗಿರಲಿಲ್ಲ, ಆದರೆ ಅವರಲ್ಲಿ ಹಿಂಸಾಪ್ರವೃತ್ತಿಯೂ ಹೆಚ್ಚಾಗುವಲ್ಲಿ ಇಂಥ ವ್ಯಸನಕಾರಿ, ವ್ಯಗ್ರತೆ ಕೆರಳಿಸುವ ಗೇಮ್‌ಗಳ ಪಾತ್ರ ಮಹತ್ವದ್ದು ಎಂಬುದರ ಬಗ್ಗೆ ಮನೋವೈದ್ಯರು ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಈಗ ಹೇಗಿದ್ದರೂ ಪಬ್‌ಜಿ ನಿಷೇಧವಾಗಿದೆ, ಅದು ಮರಳಿ ಬರುವ ಮುಂಚೆ ದೊರೆತಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳೋಣ. ಇದಕ್ಕಾಗಿ ಈ ಕೆಳಗಿನ ಅಂಶಗಳನ್ನು ಪರಿಗಣಿಸಬಹುದು.

  • ಪಬ್‌ಜಿಯಂತಹಾ ಗೇಮ್ ಅನ್ನು ಮೊಬೈಲ್ ಫೋನ್‌ನಿಂದಲೇ ಅನ್-ಇನ್‌ಸ್ಟಾಲ್ ಮಾಡುವುದು.
  • ವ್ಯಸನಿಗಳ ಮೊಬೈಲ್ ಫೋನ್ ಬಳಕೆಯನ್ನು ಉಪಾಯದಿಂದ, ನಿಧಾನವಾಗಿ ಕಡಿಮೆ ಮಾಡಿಸುವುದು.
  • ವ್ಯಸನ ಜಾಸ್ತಿಯಾಗಿ, ವ್ಯಗ್ರರಾಗುತ್ತಿದ್ದಾರೆ, ಮೊಬೈಲ್ ಕಿತ್ತುಕೊಂಡಾಗ ವಿಚಿತ್ರವಾಗಿ ವರ್ತಿಸುತ್ತಾರೆ ಎಂದಾದರೆ ಅವರನ್ನು ಮಾನಸಿಕ ತಜ್ಞರಲ್ಲಿಗೆ ಕರೆದೊಯ್ದು ಆಪ್ತ ಸಮಾಲೋಚನೆ ನಡೆಸುವುದು.
  • ಮಕ್ಕಳ ಕೈಗೆ ಮೊಬೈಲ್ ಕೊಡುವ ಬದಲಾಗಿ, ಅನ್ಯ ಗೇಮ್‌ಗಳತ್ತ, ಬೇರೆ ಮಕ್ಕಳೊಂದಿಗೆ ಆಡುವುದರತ್ತ, ಆಡುತ್ತಾಡುತ್ತಲೇ ವಿಜ್ಞಾನ, ಗಣಿತದ ಬಿಡಿಸುವಂತೆ ಅವರ ಮನಸ್ಸನ್ನು ತಿರುಗಿಸುವುದು. ಇದು ಪೋಷಕರು ಮತ್ತು ಶಿಕ್ಷಕರು ಈ ತಂತ್ರಜ್ಞಾನ ಯುಗದಲ್ಲಿ ಹೊಸದಾಗಿ ವಹಿಸಿಕೊಳ್ಳಬೇಕಾದ ಜವಾಬ್ದಾರಿ.

My Exclusive Article Published in Prajavani on 18 Sept 2020

LEAVE A REPLY

Please enter your comment!
Please enter your name here