ಫೋನ್ ವಿನಿಮಯಕ್ಕೆ ಕೊಡುವ ಮುನ್ನ ಎಲ್ಲ ಫೈಲುಗಳನ್ನು ಅಳಿಸಿ

0
568

ಮಾಹಿತಿ@ತಂತ್ರಜ್ಞಾನ – 98: ವಿಜಯ ಕರ್ನಾಟಕ ಸೋಮವಾರ ಅಕ್ಟೋಬರ್ 20, 2014

ಹಬ್ಬದ ಸೀಸನ್. ಸಾಕಷ್ಟು ಕೊಡುಗೆಗಳಿಂದ ಆಕರ್ಷಿತರಾಗಿ ಫೋನ್ ಬದಲಾಯಿಸುವ, ವಿನಿಮಯ ಮಾಡುವ, ಹಳೆಯದನ್ನು ಮಾರಿ ಹೊಸತು ತೆಗೆದುಕೊಳ್ಳುವ ಪ್ರಕ್ರಿಯೆಗೆ ಕೆಲವರು ಚಾಲನೆ ನೀಡಿರಬಹುದು. ಆದರೆ ಹಳೆಯ ಫೋನ್‌ನಲ್ಲಿದ್ದ, ನಮಗೆ ಗೊತ್ತಾಗದಂತೆ ಉಳಿದುಕೊಳ್ಳಬಹುದಾದ ಫೈಲ್, ಡಾಕ್ಯುಮೆಂಟ್, ಫೋಟೋ, ವೀಡಿಯೋ ಹಾಗೂ ಲಾಗಿನ್ ಐಡಿ, ಪಾಸ್‌ವರ್ಡ್ ಮುಂತಾದ ಇತರ ಯಾವುದೇ ಸೂಕ್ಷ್ಮ ಮಾಹಿತಿಗಳು ಅದರಲ್ಲೇ ಉಳಿದುಕೊಂಡಿದ್ದರೆ, ಭವಿಷ್ಯದಲ್ಲಿ ತೊಂದರೆಯಾಗುವ ಸಾಧ್ಯತೆಗಳು ಹೆಚ್ಚು.

ಯಾಕೆಂದರೆ, ಆ ಫೋನನ್ನು ಇನ್ನೊಬ್ಬರು ಬಳಸಿದಾಗ, ನಿಮ್ಮೆಲ್ಲಾ ಫೈಲುಗಳು ಅದರಲ್ಲೇ ಇದ್ದರೆ ಮತ್ತು ಅವರು ನಿಮ್ಮದೇ ಅಕೌಂಟ್ ಮೂಲಕ ಲಾಗಿನ್ ಆದರೆ (ಪಾಸ್‌ವರ್ಡ್ ಸೇವ್ ಆಗಿರುತ್ತದೆ) ಎದುರಿಸಬೇಕಾದ ತೊಂದರೆಗಳು ಸಾಕಷ್ಟು. ಈ ತೊಂದರೆ ತಪ್ಪಿಸಲು, ವಿಂಡೋಸ್ 8 ಫೋನ್‌ಗಳನ್ನು ಗಮನದಲ್ಲಿಟ್ಟುಕೊಂಡು ಈ ಮಾಹಿತಿ ನೀಡಲಾಗುತ್ತಿದೆಯಾದರೂ, ಆಂಡ್ರಾಯ್ಡ್ ಫೋನ್‌ಗಳಿಗೂ ಇದುವೇ ಹೆಚ್ಚೂಕಡಿಮೆ ಅನ್ವಯವಾಗುತ್ತದೆ.

ಮೊದಲು, ವಿಲೇವಾರಿ ಮಾಡುವ ಮುನ್ನ, ಅದರಲ್ಲಿರುವ ನಮ್ಮ ಫೈಲುಗಳನ್ನು ಬ್ಯಾಕ್ಅಪ್ ಇರಿಸಿಕೊಳ್ಳಬೇಕು. ಅದಕ್ಕೆ ಹೀಗೆ ಮಾಡಿ: ಇಂಟರ್ನೆಟ್ ಕನೆಕ್ಷನ್ ಇದ್ದರೆ ಮತ್ತು ನೀವು ಮೈಕ್ರೋಸಾಫ್ಟ್‌ನ (ಹಾಟ್‌ಮೇಲ್, ಲೈವ್, ಔಟ್‌ಲುಕ್ ಮುಂತಾದ) ಖಾತೆ ಹೊಂದಿದ್ದರೆ, ಆನ್‌ಲೈನ್‌ನಲ್ಲಿ ಬ್ಯಾಕಪ್ ಇರಿಸುವ ವ್ಯವಸ್ಥೆ ಇದೆ. ಜತೆಯಲ್ಲೇ ಮೈಕ್ರೋಸಾಫ್ಟ್‌ನವರೇ ಒದಗಿಸಿದ ಒನ್‌ಡ್ರೈವ್ ಎಂಬ ಕ್ಲೌಡ್ ಸ್ಟೋರೇಜ್ ಇದೆ. ಅದರ ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡಿಲ್ಲವಾದರೆ, onedrive.com ಗೆ ಹೋಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಬ್ಯಾಕ್ಅಪ್ ಇರಿಸುವುದು: Settings > Backup > App list + settings > Backup ಎಂದಿರುವಲ್ಲಿ On ಇರುವಂತೆ ನೋಡಿಕೊಳ್ಳಿ. ಅದೇ ರೀತಿ ಎಸ್‌ಎಂಎಸ್ ಸಂದೇಶಗಳನ್ನು ಮತ್ತು ಫೋಟೋ-ವೀಡಿಯೋಗಳನ್ನು ಕೂಡ ಬ್ಯಾಕಪ್ ಮಾಡಿಕೊಳ್ಳಲು ಪ್ರತ್ಯೇಕ ವಿಭಾಗಗಳು ಅಲ್ಲೇ ಕಾಣಿಸುತ್ತವೆ. Backup Now ಅಂತ ಇರುವಲ್ಲಿ ಒತ್ತಿಬಿಡಿ.

ರೀಸೆಟ್ ಮಾಡುವುದು: ಈಗ ಅದರಲ್ಲಿರುವ ಫೈಲ್‌ಗಳನ್ನು ಡಿಲೀಟ್ ಮಾಡಬೇಕಲ್ಲವೇ? ಮೊದಲು ಫೋನ್‌ನಲ್ಲಿರುವ ಮೆಮೊರಿ ಕಾರ್ಡನ್ನು ತೆಗೆದು ಬೇರೆಡೆ ಇರಿಸಿಕೊಳ್ಳಿ. ಬಳಿಕ ಫೋನ್‌ನಲ್ಲಿ Settings > About > Reset ಎಂಬಲ್ಲಿ ಹೋಗಿ ರೀಸೆಟ್ ಮಾಡಿಬಿಡಿ. ಫೈಲುಗಳೆಲ್ಲಾ ಡಿಲೀಟ್ ಆಗುತ್ತವೆ ಮತ್ತು ನಮ್ಮ ಕಣ್ಣಿಗೆ ಅವುಗಳು ಕಾಣಿಸುವುದಿಲ್ಲ ಅಷ್ಟೆ. ಅವೆಲ್ಲವೂ ಫೋನ್‌ನಲ್ಲೇ ಅಗೋಚರವಾಗಿ ಇರುತ್ತವೆ ಎಂಬುದು ನೆನಪಿರಲಿ. ಹಿಂದೆಯೇ ಹೇಳಿದಂತೆ, ಫೋನ್‌ನಿಂದ ಡಿಲೀಟ್ ಮಾಡುವುದು ಎಂದರೆ, ಅದನ್ನು ಪುನಃ ರಿಕವರ್ ಮಾಡಲಾಗದು ಎಂದೇನಿಲ್ಲ. ಡಿಲೀಟ್ ಮಾಡುವುದೆಂದರೆ, ಹೊಸ ಫೈಲುಗಳು ಓವರ್‌ರೈಟ್ ಆಗಲು ಜಾಗ ಮಾಡಿಕೊಡುವುದು ಎಂದಷ್ಟೇ ಅರ್ಥ.

ರೀಸೆಟ್ ಮಾಡಿದ ಬಳಿಕ, ದೊಡ್ಡ ಗಾತ್ರದ (ಉದಾಹರಣೆಗೆ ಚಲನಚಿತ್ರದ ವೀಡಿಯೋ, ಫೋಟೋ ಇತ್ಯಾದಿ) ಫೈಲುಗಳನ್ನು ನಿಮ್ಮ ಕಂಪ್ಯೂಟರ್‌ನಿಂದ ಇದೇ ಫೋನ್‌ಗೆ ವರ್ಗಾಯಿಸಿಬಿಡಿ. ಅದರ ಇಂಟರ್ನಲ್ ಮೆಮೊರಿ ಭರ್ತಿಯಾಗುವಂತೆ ನೋಡಿಕೊಳ್ಳಿ. ಹೀಗಾದಾಗ, ಫೋನ್‌ನಲ್ಲಿ ಅಗೋಚರ ಸ್ಥಿತಿಯಲ್ಲಿರುವ ನಿಮ್ಮ ವೈಯಕ್ತಿಕ ಫೈಲ್‌ಗಳನ್ನು ಇವುಗಳು ರೀಪ್ಲೇಸ್ ಮಾಡುತ್ತವೆ. ಈ ಮೂಲಕ ನಿಮ್ಮ ಹಿಂದಿನ ಫೈಲುಗಳು ಮತ್ತೆಂದೂ ರೀಕವರ್ ಆಗಲಾರವು. ಒಂದು ಸಲ ಇಂಟರ್ನಲ್ ಮೆಮೊರಿ ಭರ್ತಿಯಾದ ಬಳಿಕ, ಅವೆಲ್ಲಾ ಫೈಲುಗಳನ್ನು ಪುನಃ ಡಿಲೀಟ್ ಮಾಡಿಬಿಡಿ. ಇದೇ ಪ್ರಕ್ರಿಯೆ ಪುನರಾವರ್ತಿಸಿ. ಈ ರೀತಿ ಮಾಡುವುದರಿಂದ ಹಳೆಯ ಫೈಲುಗಳ ಕುರುಹು ಕೂಡ ಉಳಿಯುವುದಿಲ್ಲ, ಯಾರಿಗೂ ರೀಕವರ್ ಮಾಡುವುದು ಸಾಧ್ಯವಾಗುವುದೂ ಇಲ್ಲ.

ಮೈಕ್ರೋ ಎಸ್‌ಡಿ ಕಾರ್ಡನ್ನು (ಅಂದರೆ ಮೆಮೊರಿ ಕಾರ್ಡನ್ನು) ಕೂಡ ನೀವು ಕೊಡುತ್ತಿದ್ದೀರಿ ಎಂದಾದರೆ, ಅದಕ್ಕೂ ಇದೇ ಹಂತಗಳನ್ನು ಪುನರಾವರ್ತಿಸಿ.

ಬ್ಯಾಕಪ್ ಮಾಡಿರುವ ಫೈಲುಗಳನ್ನು ಮರಳಿ ಪಡೆಯುವುದು: ಹೊಸ ಫೋನನ್ನು ಕೊಳ್ಳುತ್ತೀರಿ ಅಥವಾ ಹಳೆಯ ಫೋನ್‌ನಲ್ಲಿ ಸಮಸ್ಯೆ ಬಂದು ಅದನ್ನು ಫ್ಯಾಕ್ಟರಿ ಡೇಟಾ ರೀಸೆಟ್ ಮಾಡಿರುತ್ತೀರಿ. ಮೊದಲೇ ನೀವು ಬ್ಯಾಕಪ್ ಮಾಡಿಟ್ಟುಕೊಂಡಿರುವ ಫೈಲುಗಳನ್ನು, ಈಗ ಮರಳಿ ಫೋನ್‌ಗೆ ಸೇರಿಸಬೇಕಲ್ಲಾ? ಎಲ್ಲ ಫೈಲುಗಳೂ ಒನ್‌ಡ್ರೈವ್‌ನಲ್ಲಿ ಸ್ಟೋರ್ ಆಗಿರುತ್ತವೆ. ಅವುಗಳನ್ನು ಮರಳಿ ಪಡೆಯಲು ಹೀಗೆ ಮಾಡಿ:

ನಿಮ್ಮ ಅದೇ ಮೈಕ್ರೋಸಾಫ್ಟ್ ಖಾತೆಯೊಂದಿಗೆ ಫೋನ್‌ಗೆ ಲಾಗಿನ್ ಆಗಿ. ಸ್ವಲ್ಪ ಹೊತ್ತು ಕಾದಾಗ, ಮೈಕ್ರೋಸಾಫ್ಟ್ ಅಕೌಂಟಿನೊಂದಿಗೆ ಹೊಂದಿಕೊಂಡಿರುವ ಎಲ್ಲ ಮಾಹಿತಿಯನ್ನೂ ಸಿಂಕ್ರನೈಜ್/ರೀಸ್ಟೋರ್ ಮಾಡಬೇಕೇ ಎಂದು ಆ ಫೋನೇ ನಿಮ್ಮನ್ನು ಕೇಳುತ್ತದೆ. ಸೂಚನೆಗಳನ್ನು ಅನುಸರಿಸಿದರೆ, ಕೆಲವೇ ಸಮಯದಲ್ಲಿ ನಿಮ್ಮೆಲ್ಲ ಆ್ಯಪ್‌ಗಳು, ಸೆಟ್ಟಿಂಗ್‌ಗಳು ನಿಮ್ಮ ಫೋನ್‌ನಲ್ಲಿ ಬಂದಿರುತ್ತವೆ.
ಟೆಕ್-ಟಾನಿಕ್: DuckDuckGo
ಇಂಟರ್ನೆಟ್‌ನಲ್ಲಿ ಶೋಧ ನಡೆಸುವುದೆಂದರೆ ಗೂಗಲ್ ಮಾಡುವುದೆಂದೇ ಜನಜನಿತವಾಗಿಬಿಟ್ಟಿದೆ. ಅಂದರೆ ಗೂಗಲ್ ಕಂಪನಿಯೇ ಸರ್ಚ್ ಎಂಜಿನ್ ಒದಗಿಸುತ್ತಿದ್ದು, ಅದನ್ನೇ ಹೆಚ್ಚಿನವರು ಬಳಸುತ್ತಿರುವುದರಿಂದ ಈ ಮಾತು. ಮೈಕ್ರೋಸಾಫ್ಟ್‌ನ Bing ಕೂಡ ಉತ್ತಮ ಸರ್ಚ್ ಆಯ್ಕೆ ನೀಡುತ್ತದೆ. ಆದರೆ DuckDuckGo ಎಂಬ ಸರ್ಚ್ ತಾಣವೂ ಇತ್ತೀಚೆಗೆ ಗಮನ ಸೆಳೆಯುತ್ತಿದೆ. ಗೂಗಲ್‌ನಲ್ಲಿ ನಿರ್ದಿಷ್ಟ ಪದದ ಮೂಲಕ ವಿಷಯ ಹುಡುಕಿದರೆ, ಎಲ್ಲ ಕಡೆ ಒಂದೇ ರೀತಿಯ ಮಾಹಿತಿ ದೊರೆಯುವುದಿಲ್ಲ; ಒಬ್ಬರಿಗೊಂದೊಂದು ರೀತಿಯಲ್ಲಿ, ಅಂದರೆ ಆಯಾ ವ್ಯಕ್ತಿಯು ಏನೆಲ್ಲಾ ಬ್ರೌಸ್ ಮಾಡುತ್ತಾರೆ ಎಂಬುದರ ಆಧಾರದಲ್ಲಿ ಫಲಿತಾಂಶ ದೊರೆಯುತ್ತದೆ. ಅದರಲ್ಲಿ ನಮ್ಮ ಪ್ರೈವೆಸಿಗೆ ಕನ್ನ ಹಾಕಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದ್ದರೆ, ಡಕ್‌ಡಕ್‌ಗೋದಲ್ಲಿ ಹಾಗಲ್ಲ. ಎಲ್ಲ ಕಡೆಯೂ ಒಂದೇ ರೀತಿಯ ಫಲಿತಾಂಶವಿರುತ್ತದೆ.

LEAVE A REPLY

Please enter your comment!
Please enter your name here