How To: Google Lens ಬಳಸುವುದು ಹೇಗೆ?

0
233

ತಂತ್ರಜ್ಞಾನ ಯುಗದಲ್ಲಿ ನಮ್ಮಲ್ಲಿರಲೇಬೇಕಾದ ಡಿಜಿಟಲ್ ಸಹಾಯಕ

Google Lens: ಸ್ಮಾರ್ಟ್‌ಫೋನ್ ಇದ್ದವರಿಗೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅಥವಾ ಆ್ಯಪಲ್ ಸ್ಟೋರ್‌ಗಳಲ್ಲಿ ಲಭ್ಯವಿರುವ ಲಕ್ಷಾಂತರ ಆ್ಯಪ್‌ಗಳಲ್ಲಿ (ಅಪ್ಲಿಕೇಶನ್‌ಗಳು ಅಥವಾ ಕಿರು ತಂತ್ರಾಂಶಗಳು) ಯಾವುದನ್ನು ಬಳಸಬೇಕು, ಯಾವುದು ಬೇಕಾಗಿಲ್ಲ ಎಂಬುದೇ ಗೊಂದಲದ ವಿಷಯ. ಇದರ ಮಧ್ಯೆ, ಈ ತಂತ್ರಜ್ಞಾನ ಯುಗದಲ್ಲಿ ನಮಗೆ ಪ್ರತಿಕ್ಷಣವೂ ನೆರವಾಗಬಲ್ಲ ಆ್ಯಪ್‌ಗಳಲ್ಲಿ ಪ್ರಮುಖವಾದದ್ದು Google Lens. ಇದರ ಕೆಲಸವನ್ನು ಒಂದೇ ವಾಕ್ಯದಲ್ಲಿ ವಿವರಿಸಬಹುದಾದರೆ, ನಾವೇನು ನೋಡುತ್ತೇವೆಯೋ, ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಮ್ಮ ಮುಂದೆ ಧುತ್ತನೇ ಮುಂದಿಡಬಲ್ಲ ಆ್ಯಪ್ ಇದು.

ಇದು ಆ್ಯಪ್ ಬಹುತೇಕ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಅಂತರ್-ನಿರ್ಮಿತವಾಗಿಯೇ ಇರುತ್ತದೆ ಮತ್ತು ಫೋನ್‌ನ ಕ್ಯಾಮೆರಾ ಬಳಸಿ ಕೆಲಸ ಮಾಡುತ್ತದೆ. ಆ್ಯಪ್ ಸ್ಟೋರ್‌ನಿಂದಲೂ ಅಳವಡಿಸಿಕೊಳ್ಳಬಹುದು.

ಎಲ್ಲಿರುತ್ತದೆ?
ಹೆಚ್ಚಿನ ಆಧುನಿಕ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್ ಸರ್ಚ್ ಆ್ಯಪ್ ಇರುತ್ತದೆ. ಹೋಂ ಸ್ಕ್ರೀನ್‌ನಲ್ಲೇ ಗೂಗಲ್ ಸರ್ಚ್ ಬಾರ್ (ಪಟ್ಟಿ) ಇರುತ್ತದೆಯಲ್ಲವೇ? ಅದರಲ್ಲಿ ಒಂದು ಮೈಕ್ ಐಕಾನ್ ಇದೆ, ಮತ್ತೊಂದು ಕ್ಯಾಮೆರಾ ಐಕಾನ್ ಇದೆ. ಇವೆರಡರ ಪ್ರಯೋಜನವೇನು ಎಂದು ಹಲವರು ನನ್ನ ಬಳಿ ವಿಚಾರಿಸಿದ್ದಾರೆ. ಕ್ಯಾಮೆರಾ ಐಕಾನ್ ಇರುವುದೇ ಗೂಗಲ್ ಲೆನ್ಸ್. ಇದೊಂದು ಭೂತಕನ್ನಡಿಯಿದ್ದಂತೆ, ಇದಕ್ಕಾಗಿಯೇ ಲೆನ್ಸ್ (ಮಸೂರ) ಎಂಬ ಹೆಸರು.

ಏನೆಲ್ಲಾ ಉಪಯೋಗಗಳು?
ವಸ್ತು, ಗಿಡ, ಪ್ರಾಣಿ

ರಸ್ತೆಯಲ್ಲಿ ನಡೆಯುತ್ತಿರುವಾಗ ಏನೋ ಆಕರ್ಷಕ ವಸ್ತು ನಿಮ್ಮ ಕಣ್ಣಿಗೆ ಕಾಣಿಸುತ್ತದೆ ಅಥವಾ ಹೊಸ ಗಿಡ ಇಲ್ಲವೇ ಹೊಸ ಹಣ್ಣು, ಪ್ರಾಣಿ ಏನಾದರೂ ನಿಮ್ಮ ಗಮನ ಸೆಳೆಯುತ್ತದೆ. ಅದೇನೆಂದು ತಿಳಿದುಕೊಳ್ಳಬೇಕೇ? ಈ ಗೂಗಲ್ ಲೆನ್ಸ್ ತೆರೆದು ಫೋನ್‌ನ ಕ್ಯಾಮೆರಾವನ್ನು ಅದಕ್ಕೆ ಫೋಕಸ್ ಮಾಡಿದರೆ, ಅಂತರಜಾಲದಿಂದ ಮಾಹಿತಿಯನ್ನು ಹೆಕ್ಕಿ ನಿಮ್ಮ ಮುಂದಿಡುತ್ತದೆ.

ಕ್ಯೂಆರ್ ಕೋಡ್
ಅದೇ ರೀತಿ, ಇತ್ತೀಚೆಗೆ ಪತ್ರಿಕೆಗಳು, ಆಮಂತ್ರಣ ಪತ್ರಗಳು, ಜಾಲತಾಣಗಳು, ಹಣಕಾಸು ಆ್ಯಪ್‌ಗಳೇ ಮೊದಲಾದವುಗಳಲ್ಲಿ ಕ್ಯೂಆರ್ ಕೋಡ್ ಹೆಚ್ಚಾಗಿ ಬಳಕೆಯಾಗುತ್ತದೆ. ಜೊತೆಗೆ ಬಾರ್ ಕೋಡ್ ಕೂಡ. ಅವುಗಳನ್ನೂ ಲೆನ್ಸ್ ಬಳಸಿ ಸ್ಕ್ಯಾನ್ ಮಾಡಿ, ಸಂಬಂಧಪಟ್ಟ ಕೆಲಸವನ್ನು ಮಾಡಬಹುದು. ಅಂದರೆ, ವಿಡಿಯೊ, ಗೂಗಲ್ ಫಾರ್ಮ್, ಲೇಖನ, ಹಣಪಾವತಿ (ಯುಪಿಐ) ಇವುಗಳಿಗೆಲ್ಲ ನೇರವಾಗಿ ಸಂಪರ್ಕಿಸಬಹುದು.

ಪಠ್ಯ, ಅನುವಾದ
ಯಾವುದಾದರೂ ನಾಮ ಫಲಕ, ವಿಸಿಟಿಂಗ್ ಕಾರ್ಡ್‌ನಲ್ಲಿ ನಿಮಗೆ ತಿಳಿಯದ ಭಾಷೆಯ ಶಬ್ದಗಳಿದ್ದರೆ ಅಥವಾ ಒಂದು ಫೊಟೋ ಇಲ್ಲವೇ ಪುಸ್ತಕದಲ್ಲಿರುವ ಪಠ್ಯವನ್ನು ನಕಲಿಸಬೇಕೆಂದಿದ್ದರೆ, ಗೂಗಲ್ ಲೆನ್ಸ್ ಮೂಲಕ ಅದರ ಮೇಲೆ ಫೋಕಸ್ ಮಾಡಿ, ಪಠ್ಯವನ್ನು ಕಾಪಿ ಮಾಡಬಹುದು, ಅನುವಾದವನ್ನೂ ನೋಡಬಹುದು.

ಖರೀದಿಗೆ
ನೀವು ನೋಡಿದ ಯಾವುದೇ ತಿಂಡಿ, ಉಡುಪು, ಪೀಠೋಪಕರಣ ನಿಮಗಿಷ್ಟವಾಯಿತೇ? ಅದನ್ನು ಮನೆಗೆ ತರಿಸಿಕೊಳ್ಳಬೇಕಿದ್ದರೆ, ಗೂಗಲ್ ಲೆನ್ಸ್ ಮೂಲಕ ಸ್ಕ್ಯಾನ್ ಮಾಡಿದರೆ, ಆ ವಸ್ತು ಲಭ್ಯವಾಗುವ ಆನ್‌ಲೈನ್ ಮಳಿಗೆಗೆ ನಿಮ್ಮನ್ನು ಸಂಪರ್ಕಿಸುತ್ತದೆ. ಅಲ್ಲಿಂದಲೇ ಖರೀದಿ ಮಾಡಬಹುದು ಅಥವಾ ಎಲ್ಲಿ ಸಿಗುತ್ತದೆ ಎಂಬುದನ್ನು ಗೂಗಲ್ ಸರ್ಚ್ ಎಂಜಿನ್ ಸಹಾಯದಿಂದ ನೇರವಾಗಿ ಕಂಡುಕೊಳ್ಳಬಹುದು.

ಹೋಂ ವರ್ಕ್
ಕೆಲವೊಂದು ಗಣಿತದ ಸೂತ್ರ ಅಥವಾ ಲೆಕ್ಕಾಚಾರಗಳನ್ನು ಲೆನ್ಸ್ ಮೂಲಕ ಸ್ಕ್ಯಾನ್ ಮಾಡಿದರೆ, ಅದರ ಉತ್ತರವನ್ನೂ ನಮ್ಮ ಮುಂದೆ ತೋರಿಸುತ್ತದೆ.

ಗೂಗಲ್ ಲೆನ್ಸ್ ಹೇಗೆ ಉಪಯೋಗಿಸುವುದು?
ಗೂಗಲ್ ಲೆನ್ಸ್‌ನ ಬಹುತೇಕ ಕಾರ್ಯಗಳಿಗೆ ಅಂತರಜಾಲ ಸಂಪರ್ಕ ಇರಬೇಕಾಗುತ್ತದೆ. ಹೋಂ ಸ್ಕ್ರೀನ್‌ನಲ್ಲಿರುವ ಗೂಗಲ್ ಸರ್ಚ್ ಬಾರ್‌ನಲ್ಲಿರುವ ಕ್ಯಾಮೆರಾ ಐಕಾನ್ ಕ್ಲಿಕ್ ಮಾಡಿ, ಮೊಬೈಲ್‌ನ ಕ್ಯಾಮೆರಾವನ್ನು ಯಾವುದೇ ಫಲಕ/ವಸ್ತುವಿನ ಮೇಲೆ ಹಿಡಿದಾಗ, ಸ್ಕ್ರೀನ್‌ನ ಕೆಳಭಾಗದಲ್ಲಿ ನಮಗೆ ಸಾಕಷ್ಟು ಆಯ್ಕೆಗಳು ಗೋಚರಿಸುತ್ತವೆ. ಟ್ರಾನ್ಸ್‌ಲೇಟ್, ಟೆಕ್ಸ್ಟ್, ಸರ್ಚ್, ಹೋಮ್ ವರ್ಕ್, ಶಾಪಿಂಗ್, ಪ್ಲೇಸಸ್, ಡೈನಿಂಗ್ ಇತ್ಯಾದಿ. ನಮಗೆ ಬೇಕಾಗಿರುವುದನ್ನು ಕ್ಲಿಕ್ ಮಾಡಿದರೆ ಸ್ಕ್ರೀನ್ ಮೇಲೆ ಪೂರ್ಣ ಮಾಹಿತಿ ಕಾಣಿಸುತ್ತದೆ. ಪಠ್ಯವನ್ನಾದರೆ, ಧ್ವನಿ ಮೂಲಕ ಆಲಿಸುವ ಆಯ್ಕೆಯೂ ಇರುತ್ತದೆ. ಬೇಕಾದ ಪದಗಳನ್ನಷ್ಟೇ ಆಯ್ಕೆ ಮಾಡಿ ಗೂಗಲ್ ಸರ್ಚ್ ಕೂಡ ಮಾಡಬಹುದು, ಭಾಷಾಂತರಿಸಿಕೊಳ್ಳಬಹುದು.

ಇನ್ನು ಗೂಗಲ್ ಸರ್ಚ್ ಬಾರ್‌ನಲ್ಲಿರುವ ಮೈಕ್ ಬಟನ್ ಒತ್ತಿ, ನಾವು ಯಾವುದೇ ಪದ ಅಥವಾ ವಾಕ್ಯವನ್ನು ಹೇಳಿದರೆ, ಮೊಬೈಲ್ ಫೋನ್ ಅದನ್ನು ಅರ್ಥೈಸಿಕೊಂಡು, ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಅಂತರಜಾಲವನ್ನು ಜಾಲಾಡಿ ನಮ್ಮ ಮುಂದಿಡುತ್ತದೆ.

ಇಷ್ಟೆಲ್ಲ ಕೆಲಸ ಕಾರ್ಯಗಳನ್ನು ಮಾಡಬಲ್ಲ, ವಿಶೇಷವಾಗಿ ಗೂಗಲ್ ಎಂಬ ಸರ್ಚ್ ಎಂಜಿನ್ ಮಾಡಬಹುದಾದ ಕೆಲಸಗಳನ್ನು ಸುಲಭವಾಗಿಸುವ ಈ ಗೂಗಲ್ ಲೆನ್ಸ್ ನಮಗೆ ಆಪ್ತ ಸಹಾಯಕನಿದ್ದಂತೆ. ಗೂಗಲ್ ಅಸಿಸ್ಟೆಂಟ್ ಎಂಬ ಧ್ವನಿ ಸಹಾಯಕ ತಂತ್ರಾಂಶದ ಮತ್ತೊಂದು ರೂಪವಿದು.

My Tech Article Published in Prajavani on 12/13 April 2022

LEAVE A REPLY

Please enter your comment!
Please enter your name here