‘ಉತ್ತರಾಯಣ’ದಲ್ಲಿ ‘ಹೆಜ್ಜೆ ಗುರುತು’ ಉಳಿಸಿ ಹೋದ ನಿ.ವ್ಯಾಸರಾಯ ಬಲ್ಲಾಳ

3
582

ಕತೆ, ಕಾದಂಬರಿಗಳ ಮೂಲಕ ವಾಸ್ತವ ಜಗತ್ತಿನ ಚಿತ್ರಣವನ್ನು ಅದ್ಭುತವಾಗಿ ಬಿಡಿಸಿಡುತ್ತಿದ್ದ, ಮಾನವೀಯ ಆದರ್ಶಗಳನ್ನು ಮನಮುಟ್ಟುವಂತೆ ಬಿಂಬಿಸುತ್ತಿದ್ದ, ಕನ್ನಡ ಸಾಹಿತ್ಯ ಲೋಕದಲ್ಲಿ “ಬಂಡಾಯ ಬಲ್ಲಾಳರು” ಎಂದೇ ಜನಜನಿತರಾಗಿದ್ದ ಕವಿ ಮನಸಿನ ನಿ.ವ್ಯಾಸರಾಯ ಬಲ್ಲಾಳರೀಗ ನಮ್ಮೊಂದಿಗಿಲ್ಲ. ಅವರು ಕಟ್ಟಾ ಬಂಡಾಯ ಸಾಹಿತಿ ಅಂತ ಇದರರ್ಥವಲ್ಲ. ಅವರ ‘ಬಂಡಾಯ’ ಎಂಬ ಕಾದಂಬರಿಯು ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟಿತ್ತು.

ಬಡತನವನ್ನು ಒಡಲಲ್ಲಿ ಕಟ್ಟಿಕೊಂಡು ಅನ್ನಕ್ಕಾಗಿ ಉದ್ಯೋಗ ಅರಸುತ್ತಾ ಮುಂಬಯಿ ಎಂಬ ಮಾಯಾನಗರಿ ಸೇರಿಕೊಂಡಿದ್ದ ಬಲ್ಲಾಳರು, ತೈಲ ಕಂಪನಿಯೊಂದರಲ್ಲಿ ಉದ್ಯೋಗಕ್ಕೆ ಸೇರಿದರೂ, ಅದರ ಜೊತೆಗೇ ಸಾಹಿತ್ಯದ ಹಸಿವನ್ನು ನೀಗಿಸುವ ಕಾರ್ಯದಲ್ಲೂ ತಮ್ಮನ್ನು ಮುಳುಗಿಸಿಕೊಂಡರು. ಮುಂಬಯಿ ಬದುಕಿನ ತಳಮಳಗಳನ್ನು ಅತ್ಯಂತ ಸಮೀಪದಿಂದ ಕಂಡು ಜೀವಂತವಾಗಿಯೇ ಅವರು ತಮ್ಮ ಕೃತಿಗಳಲ್ಲೂ ಸೆರೆಹಿಡಿದು ಸೈ ಅನ್ನಿಸಿಕೊಂಡರು.

ಮುಂಬಯಿಯ ಸಾಂಸ್ಕೃತಿಕ, ಸಾಹಿತ್ಯಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿ, ಅಲ್ಲಿನ ಕರ್ನಾಟಕ ಸಂಘ, ಸಾಹಿತ್ಯ ಕೂಟ ಮುಂತಾದ ಸಂಘಗಳ ಬೆನ್ನೆಲುಬಾಗಿಬಿಟ್ಟಿದ್ದರು. ನಿವೃತ್ತರಾದ ನಂತರ ಬೆಂಗಳೂರಿಗೆ ಬಂದು ನೆಲಸಿದರೂ, ಮುಂಬಯಿ ಅವರನ್ನು ಸದಾ ಕಾಡುತ್ತಲೇ ಇತ್ತು. ಅಷ್ಟು ಕಾಲ ಮುಂಬಯಿಯೊಂದಿಗಿನ ಸಹವಾಸ ಅವರ ವ್ಯಕ್ತಿತ್ವವನ್ನೇ ತಿದ್ದಿ ರೂಪಿಸಿತ್ತು. ಅವರೇ ಒಂದು ಕಡೆ ಹೇಳಿದ್ದಾರೆ :”ಮುಂಬಯಿಯು ನನ್ನ ಜೀವನದೃಷ್ಟಿಯನ್ನು ನಿಖರವಾಗಿಸಿದ, ಒಳನೋಟವನ್ನು ಹರಿತವಾಗಿಸಿದ ನಗರ”.

ಅವರನ್ನು ತೀರಾ ಇತ್ತೀಚೆಗೆ ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಕಂಡಿದ್ದು ಮೂಡುಬಿದಿರೆಯ ಆಳ್ವಾಸ್ ನುಡಿಸಿರಿ-07 ಕಾರ್ಯಕ್ರಮದಲ್ಲಿ. ಉಡುಪಿಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಹುದ್ದೆಗೆ ಅವರ ಹೆಸರು ಕೊನೆಯ ಕ್ಷಣದವರೆಗೂ ಕೇಳಿಬಂದು, ಅಂತಿಮ ಕ್ಷಣದಲ್ಲಿ ಅವಕಾಶ ವಂಚಿತರಾದ ಬಗ್ಗೆ ಬಹಳ ನೊಂದುಕೊಂಡಿದ್ದರು. ಅತ್ಯಂತ ಭಾವ ಜೀವಿ ಅವರು. ಅಧ್ಯಕ್ಷತೆ ವಹಿಸಬೇಕು ಎಂಬುದು ಅವರ ಹಠವಲ್ಲ, ಆದರೆ “ನಿಮಗೇ ಅಧ್ಯಕ್ಷತೆ” ಎಂದು ಬಿಂಬಿಸುತ್ತಲೇ ಕೊನೆ ಕ್ಷಣದಲ್ಲಿ ಮಾತಿಗೆ ತಪ್ಪಿದ ಬಗ್ಗೆ ನೊಂದವರವರು. ‘ನುಡಿಸಿರಿ’ ಸಮ್ಮೇಳನದಲ್ಲಿ 85ನೇ ಹುಟ್ಟುಹಬ್ಬವನ್ನು ಸಂಘಟಕರು ವೇದಿಕೆಯಲ್ಲೇ ಏರ್ಪಡಿಸಿ, ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು “ಬಲ್ಲಾಳರೆ ನಿಮಗೆ ಶುಭಾಶಯ” ಅಂತ ಹಾಡಿ ಹಾರೈಸಿದಾಗ ಮನತುಂಬಿ ಬಂದು ಬಿಕ್ಕಳಿಸಿತ್ತು ಆ ಹಿರಿ ಜೀವ. ನೆರೆದಿದ್ದ ಸಭಿಕರ ಅಕ್ಷಿಗಳೂ ಮಂಜಾಗಿದ್ದವು. ಅದೊಂದು ಅತ್ಯಂತ ಭಾವನಾತ್ಮಕ ಕ್ಷಣವಾಗಿತ್ತು.

ಹಾಗಾಗಿ ಆಳ್ವಾಸ್ ನುಡಿಸಿರಿ ಎಂಬ ಪರ್ಯಾಯ ಸಾಹಿತ್ಯ ಸಮ್ಮೇಳನದಂತೆಯೇ ಇದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ, ಅದರ ಎಲ್ಲಾ ಕಾರ್ಯಕ್ರಮಗಳಲ್ಲಿ ಉಲ್ಲಾಸದಿಂದ ಓಡಾಡಿ ತಮಗಾದ ನೋವು ಮರೆತಿದ್ದರು ಬಲ್ಲಾಳರು. ‘ನುಡಿಸಿರಿ’ ಸಂಘಟಕ ಡಾ.ಮೋಹನ್ ಆಳ್ವ ಅವರೇ ಹೇಳುವಂತೆ “ಇಳಿವಯಸ್ಸಿನಲ್ಲಿ ಅವರ ಉಲ್ಲಾಸ ಕಂಡು ನಮಗೇ ಅಚ್ಚರಿಯಾಗುತ್ತದೆ. ಇಂಥ ಹಿರಿಯ ಚೇತನಕ್ಕೆ ಅನ್ಯಾಯವಾಗಬಾರದಿತ್ತು. ಅವರದು ಮಗುವಿನಷ್ಟು ಮುಗ್ಧ ಮನಸು. ಅಪರೂಪದ ವ್ಯಕ್ತಿತ್ವ”.

ಕನ್ನಡ ಸಾಹಿತ್ಯ ಲೋಕವನ್ನು ಸಮೃದ್ಧಗೊಳಿಸಿದ ಇಂಥ ಸರಳ ಮತ್ತು ಸಜ್ಜನಿಕೆಯ ಸಾಕಾರ ರೂಪವಾಗಿದ್ದ ಬಲ್ಲಾಳರು ಅಗಲಿರುವುದು ಕನ್ನಡ ಸಾರಸ್ವತ ಲೋಕಕ್ಕೊಂದು ಬಲುದೊಡ್ಡ ನಷ್ಟ.

ಜನನ: 1923 ಡಿಸೆಂಬರ್ 1 ; ಮರಣ: 2008 ಜನವರಿ 30
ಜನ್ಮಸ್ಥಳ: ಉಡುಪಿ
ತಾಯಿ: ಕಲ್ಯಾಣಿ
ತಂದೆ: ರಾಮದಾಸ.
ಕೃತಿಗಳು
ಕಾದಂಬರಿ: ಅನುರಕ್ತೆ, ವಾತ್ಸಲ್ಯಪಥ, ಉತ್ತರಾಯಣ, ಹೇಮಂತಗಾನ, ಬಂಡಾಯ, ಆಕಾಶಕ್ಕೊಂದು ಕಂದೀಲು, ಹೆಜ್ಜೆ, ಹೆಜ್ಜೆ ಗುರುತು.
ಕಥಾಸಂಕಲನಗಳು: ಸಂಪಿಗೆ, ಮಂಜರಿ, ಕಾಡು ಮಲ್ಲಿಗೆ, ತ್ರಿಕಾಲ.
ನಾಟಕ: ಗಿಳಿಯು ಪಂಜರದೊಳಿಲ್ಲ (ಮೂಲ:ಇಬ್ಸನ್), ಮುಳ್ಳೆಲ್ಲಿದೆ ಮಂದಾರ (ಮೂಲ:ಬರ್ನಾಡ್ ಶಾ).
ಮಕ್ಕಳ ಸಾಹಿತ್ಯ: ಖುರ್ಶಿದ್ ನರಮನ್
ಲೇಖನ ಸಂಗ್ರಹ: ಮುಂಬೈ ಡೈರಿ, ಮುಂಬಯಿಯ ನಂಟು ಮತ್ತು ಕನ್ನಡ

ಪುರಸ್ಕಾರಗಳು
“ಬಂಡಾಯ” ಕಾದಂಬರಿಗೆ 1986ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
“ಕಾಡು ಮಲ್ಲಿಗೆ” ಕಥಾಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ
ಅ.ನ.ಕೃ. ಪ್ರಶಸ್ತಿ, ನಿರಂಜನ ಪ್ರಶಸ್ತಿ ಮತ್ತು ಮಾಸ್ತಿ ಪ್ರಶಸ್ತಿ
“ಅನುರಕ್ತೆ” ಕಾದಂಬರಿಗೆ ಕರ್ನಾಟಕ ಸರಕಾರದ ಗೌರವ.
1983ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಸನ್ಮಾನ.
ಮಹಾರಾಷ್ಟ್ರ ಸರ್ಕಾರದ ಗೌರವ ಪ್ರಶಸ್ತಿ.

3 COMMENTS

  1. ಬಲ್ಲಾಳರನ್ನು ಅಗಲಿದ ನೋವು ಕನ್ನಡ ನಾಡನ್ನು ಅಷ್ಟಾಗಿ ತಟ್ಟಲೇ ಇಲ್ಲವೇನೊ!
    ಕನ್ನಡಿಗರು ಅವರನ್ನು ಹೊರಗಿನವೇ ಅಂದುಕೊಂಡದ್ದರಿಂದ ಅವರಿಗೆ ಮುಂಬಯಿ ಹತ್ತಿರವಾಯಿತೇನೊ! ದಿನಪತ್ರಿಕೆಗಳಲ್ಲಿ ಎಲ್ಲೋ ಒಳಗಿನ ಪುಟದಲ್ಲಿ ಅವರ ನಿಧನ ವಾರ್ತೆ ಪ್ರಕಟವಾದಾಗಲೇ ಕರ್ನಾಟಕದಲ್ಲಿ ಅವರ ಸ್ಥಾನ ಏನು ಎನ್ನುವುದು ತಿಳಿಯಿತು.

    http://uniquesupri.wordpress.com

  2. ಸುಪ್ರೀತರೆ,

    ಹೌದು. ನೀವು ಹೇಳೋದು ಖಂಡಿತಾ ಖರೆ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ನೀಡದೇ ಅವಮಾನಿದರು. ಅವರದು ಅದೆಷ್ಟು ಮುಗ್ಧ ಮನಸಾಗಿತ್ತು…ಹಾಳು ರಾಜಕೀಯ ಕಣ್ರೀ… 🙁

LEAVE A REPLY

Please enter your comment!
Please enter your name here