ಇದು ವಿಷು ಹಬ್ಬ (ಸೌರಮಾನ ಯುಗಾದಿಯೂ ಹೌದು) ಬಗ್ಗೆಯೂ ಮಾಹಿತಿ ನೀಡುವ ಪ್ರಸಂಗ. ಕಥೆ ಅಂತ ಹೆಸರಿಸಬಹುದೇ? ಅಂತ ಓದಿದ ನಂತರ ಹೇಳಿ! 🙂
ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವ ಜಾತಕೆ
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೋ..
–ದ.ರಾ.ಬೇಂದ್ರೆ
“ಅಮ್ಮ ನಂಗೆ ಈ ಬಾರಿ ಯುಗಾದಿಗೆ ಹೊಸ ಅಂಗಿ ಚಡ್ಡಿ ತೆಗೆಸಿಕೊಡ್ತಾಳಂತೆ”
“ಹೌದಾ?”
“ನಿಂಗೆ ಇಲ್ವಾ?”
“ಇಲ್ಲ”
“ಯಾಕೆಯಾ?”
“ಅಪ್ಪನಲ್ಲಿ ಕೇಳಿದ್ದಕ್ಕೆ ಜೋರು ಮಾಡಿದ್ರು. ಕಣಿ ಇಡ್ಲಿಕ್ಕೆ ಅಕ್ಕಿಗೆ ದುಡ್ಡಿಲ್ಲ, ಹೊಸ ಬಟ್ಟೆಯಂತೆ ಹೊಸ ಬಟ್ಟೆ… ಅಂತ ಅಪ್ಪ ಕೂಗಾಡಿದ್ರು”
“ಹಾಗಾದ್ರೆ ಒಂದು ಕೆಲಸ ಮಾಡು. ಮೊನ್ನೆ ಶಾಲೆಗೆ ಹೊಲಿಸಿದ ಯುನಿಫಾರ್ಮ್ ಇದೆಯಲ್ಲ… ಅದು ಹೊಸದರ ಥರಾನೇ ಉಂಟು. ಅದನ್ನೇ ಹಾಕಿಕೋ.”
ಈ ಸಲಹೆ ಬಂದಾಗ ಒಂದು ಹನ್ನಿ ಕಣ್ಣೀರು ಕೆನ್ನೆಯನ್ನು ಒರಸಿಕೊಂಡು ನನಗರಿವಿಲ್ಲದಂತೆಯೇ ಜಾರಿತ್ತು.
ಹೌದಲ್ವಾ? ನನ್ನ ಅಕ್ಕ ಪಕ್ಕದ ಮನೆಯಲ್ಲಿ ನನ್ನ ವಯಸ್ಸಿನ ಹುಡುಗ್ರು ಯುಗಾದಿಯಂದು, ವಿಷು ಕಣಿ ನೋಡಿ ಹೊಸ ಬಟ್ಟೆ ತೊಟ್ಟು ನಲಿದಾಡುವುದಕ್ಕೆ, ಅವರ ಫ್ರೆಂಡ್ಸಿಗೆಲ್ಲಾ ತೋರಿಸೋದಿಕ್ಕೆ ಎಷ್ಟೊಂದು ಸಂಭ್ರಮದಲ್ಲಿದ್ದಾರೆ! ಸಡಗರ, ಪುಳಕ, ಮನಸ್ಸಿನ ತುಂಬಾ ಹೊಸ ಅಂಗಿ ಚಡ್ಡಿಯ ಕನಸು… ಯುಗಾದಿಗೆ ಒಂದು ವಾರ ಇರುವಾಗಲೇ ಅವರ ಕಣ್ಣುಗಳಲ್ಲದೇನು ಹೊಳಪು!
ನಾನು ಯೋಚಿಸಿಕೊಳ್ಳುತ್ತೇನೆ… ಈ ಹಬ್ಬ ಅಂದ್ರೇನು? ಬೆಂದ ಅನ್ನಕ್ಕೇ ಒಂದಷ್ಟು ಬೆಲ್ಲ ಹಾಕಿ, ತೆಂಗಿನ ಕಾಯಿ ಇದ್ದರೆ ಅದನ್ನು ಅರೆದು ಹಾಲು ತೆಗೆದು, ಅದನ್ನೂ ಸೇರಿಸಿದರೆ ಒಂದು ಮಧ್ಯಾಹ್ನದೂಟಕ್ಕೆ ಅರ್ಧ ಲೋಟದಲ್ಲಿ ಪಾಯಸ ಎಂಬ ಸಿಹಿ ಪದಾರ್ಥ ತಿಂದರೆ ಅದೇ ಹಬ್ಬವಾಗಿಬಿಡುತ್ತಿತ್ತು ನನಗೆ. ಹೊಸ ಅಂಗಿ-ಚಡ್ಡಿಯ ಬಗ್ಗೆ ನಾನಂತೂ ಕನಸು ಕಂಡದ್ದಿಲ್ಲ, ಕಾಣುವಂತೆಯೂ ಇರಲಿಲ್ಲ.
ಸದಾ ಕಾಲ ದುಡಿಯುವ ಅಪ್ಪ, ತಂದು ಹಾಕಿದ್ದನ್ನು ಅಚ್ಚುಕಟ್ಟಾಗಿ ಬೇಯಿಸಿ ಎಲ್ಲರಿಗೂ ಸಮಪಾಲು ವಿತರಿಸುತ್ತಿದ್ದ ಅಮ್ಮ, ಅದರ ಜತೆಗೆ, “ಮಗೂ, ನಾಳೆ ಯುಗಾದಿ ಹಬ್ಬ, ಆವತ್ತು ನೀನು ಯಾವುದಕ್ಕೂ ಹಠ ಮಾಡಬಾರದು, ದೊಡ್ಡವರಿಂದ ಬೈಸಿಕೊಳ್ಳಬಾರದು. ಯಾಕಂದ್ರೆ, ಹೊಸ ವರ್ಷದ ಮೊದಲ ದಿನವೇ ಬೈಸಿಕೊಂಡರೆ, ಇಡೀ ವರ್ಷ ಅದು ಮುಂದುವರೀತದೆ. ಹಾಗಾಗಿ ಹೇಗಾದ್ರೂ ಲೂಟಿ ಮಾಡ್ಬಾರ್ದು. ಆಯ್ತಾ ಪುಟ್ಟಾ…” ಅಂತ ಮನಸಿನೊಳಗಿನ ಆತಂಕದ ನಡುವೆಯೇ ಸಲಹೆ ನೀಡುತ್ತಿದ್ದ ದೊಡ್ಡಮ್ಮ…
ಇವರ ನಡುವೆ ಹಬ್ಬ ಎಂಬ ಅದೆಂಥದನ್ನೋ ಆಚರಿಸುತ್ತಿದ್ದ ನನಗೆ, ನೆರೆಕರೆಯ ನನ್ನ ಗೆಳೆಯರ ಸಂತಸವನ್ನು ಹಂಚಿಕೊಳ್ಳುವುದಷ್ಟೇ ಪರಮಾನ್ನವಾಗಿತ್ತು. ಇದ್ದದ್ದರಲ್ಲಿಯೇ ಅಮ್ಮ ಗುಡ್ಡೆಗೆ ಹೋಗಿ ಗೇರು ಹಣ್ಣು, ಮಾವಿನ ಕಾಯಿ, ಗೇರು ಬೀಜ, ಮುಳ್ಳುಸೌತೆ… ಸಿಕ್ಕಿದ್ರೆ ಬಾಳೆ ಹಣ್ಣು… ಮತ್ತು ಇದ್ದ ಒಂದೇ ಒಂದು ತೆಂಗಿನ ಮರದಲ್ಲಿದ್ದ ತೆಂಗಿನಕಾಯಿ ತೆಗೆದು, ಅದನ್ನು, ಹರಿವಾಣದಲ್ಲಿ ಹರಡಿದ್ದ ಅರೆಪಾವು ಅಕ್ಕಿಯ ಮೇಲಿರಿಸಿ, ಅದಕ್ಕೊಂದು ಕನ್ನಡಿ ಇರಿಸಿ, ಅವಳ ಮದುವೆ ಕಾಲಕ್ಕೆ ನನ್ನ ಸೋದರ ಮಾವ (ಅಮ್ಮನ ಅಣ್ಣ) ಕೊಟ್ಟ ಕಾಲು ಪವನಿನ ಚಿನ್ನದುಂಗುರವನ್ನೂ ಇರಿಸಿ ‘ವಿಷು ಕಣಿ’ ಪ್ರತಿಷ್ಠಾಪಿಸುತ್ತಿದ್ದಳು. ಅದಕ್ಕೆ ನಮ್ಮ ಮನೆಯಂಗಳದಲ್ಲಿ ಬೆಳೆಸಿದ್ದ ಅಬ್ಬಲ್ಲಿಗೆ (ಕನಕಾಂಬರ), ಗುಲಾಬಿ, ಕೇಪುಳ ಹೂವುಗಳನ್ನು ಅಚ್ಚುಕಟ್ಟಾಗಿ ಕೊಯ್ದು, ಬಾಳೆಯ ದಾರದಲ್ಲಿ ನೆಯ್ದ ಹೂವಿನ ಹಾರದ ಅಲಂಕಾರ. ಒಂದಷ್ಟು ಕುಂಕುಮ ಲೇಪನ. ಅಪ್ಪನ ಎಲೆ-ಅಡಿಕೆ ಪೆಟ್ಟಿಗೆಯಿಂದ ಎಬ್ಬಿಸಿದ ವೀಳ್ಯದೆಲೆ ಮತ್ತು ಅಡಿಕೆ ತುಂಡುಗಳು.
“ನೋಡು ಮಗಾ, ನಾಳೆ ಬೆಳಿಗ್ಗೆ ಎದ್ದ ತಕ್ಷಣ ವಿಷು ಕಣಿ ನೋಡು, ಕನ್ನಡಿಯಲ್ಲಿ ನಿನ್ನ ಮುಖ ನೋಡಿದ ನಂತ್ರವೇ ಹಲ್ಲುಜ್ಬೇಕು… ಎದ್ದ ಕೂಡ್ಲೇ ಬೇರೇನನ್ನೂ ನೋಡ್ಬಾರ್ದು… ಸೀದಾ ದೇವರ ಫೋಟೋದ ಹತ್ತಿರ ಹೋಗಿ ಅಲ್ಲಿಟ್ಟಿರುವ ಕಣಿಯನ್ನೇ ನೋಡ್ಬೇಕು ತಿಳೀತಾ…?” ಅಂತ ಅಕ್ಕರೆ ತುಂಬಿದ, ಮುಖದ ಮೂಲೆಯಲ್ಲೆಲ್ಲೋ ಸಡಗರದ ಭಾವ ಮಿಂಚಿಸುತ್ತಾ ಹೇಳ್ತಾ ಇದ್ದಳು.
“ಆಯ್ತಮ್ಮಾ… ಅದ್ರಲ್ಲಿರೋ ಗೋಂಕು… (ಗೇರು ಹಣ್ಣು) ನಂಗೆ ತಿನ್ಲಿಕ್ಕೆ ಕೊಡ್ತೀಯಲ್ಲ…” ಅಂತ ಕನ್ಫರ್ಮ್ ಮಾಡಿಕೊಂಡೇ ನಾನು ಶರ್ತಬದ್ಧವಾಗಿಯೇ ಒಪ್ಪಿಗೆ ಕೊಡುತ್ತಿದ್ದೆ.
“ಪುಟ್ಟಾ… ನಾಳೆ ತುಂಬಾ ಒಳ್ಳೇ ದಿನ. ಯಾರ ಹತ್ರಾನೂ ಜಗಳ ಆಡ್ಬಾರ್ದು, ನಗು ನಗ್ತಾ ಇರ್ಬೇಕು. ಅಳ್ಬಾರ್ದು…” ಇದು ದೊಡ್ಡಮ್ಮನ ಹಿತೋಪದೇಶ. ಆಯ್ದು ದೊಡ್ಡಮ್ಮ, ಆದ್ರೆ ಅಲ್ಲಿ ‘ಕಣಿ’ಗೆ ಇಟ್ಟಿರೋ ಗೇರು ಹಣ್ಣು ಮಾತ್ರ ನಂಗೆ ಕೊಡ್ಬೇಕು… ಆಯ್ತಾ… ಅಂತ ದೊಡ್ಡಮ್ಮನ ಕುತ್ತಿಗೆಯ ಸುತ್ತ ಎರಡೂ ಕೈ ಬಳಸಿ, ಒಂದು ಪ್ರೀತಿಯ ಅಪ್ಪುಗೆಯೊಂದಿಗೆ… ಆಡಲು ಕರೆದ ಪಕ್ಕದ್ಮನೆಯ ಮಾಣಿಯ ಜತೆ ಚೆಂಡಾಟಕ್ಕೆ ದೌಡಾಯಿಸ್ತಾ ಇದ್ದೆ. ಮನಸ್ಸಿನಲ್ಲಿ, ನಾಳೆ ಇಡೀ ದಿನ ಯಾರಿಂದ್ಲೂ ಬೈಸಿಕೊಳ್ಳದಿರುವುದು ಹೇಗೆ ಎಂಬ ಯೋಚನೆ ಕಾಡ್ತಾನೇ ಇತ್ತು.
ಅಂದು ಕತ್ತಲೆಯಾಗುತ್ತಿದ್ದಂತೆಯೇ, ಕೈಕಾಲು ತೊಳೆದು, ದೇವರ ದೀಪವನ್ನು ಚೆನ್ನಾಗಿ ಹುಣ್ಸೆ ಹುಳಿ ಹಾಕಿ ಉಜ್ಜಿ, ನಳನಳಿಸುವಂತೆ ಮಾಡಿ, ಅದಕ್ಕೆ ಎಂಟಾಣೆ ನೀಡಿ ಖರೀದಿಸಿ ತಂದಿದ್ದ ಎಳ್ಳೆಣ್ಣೆ ಹುಯ್ಡು ಹಚ್ಚಿದ ಅಮ್ಮ, ಹರಿವಾಣದಲ್ಲಿ ‘ವಿಷು ಕಣಿ’ ಜೋಡಿಸಲು ತೊಡಗುತ್ತಾಳೆ. ನಾನೂ, ಅಣ್ಣನೂ ಅಮ್ಮ ಏನು ಮಾಡ್ತಾಳೆ ಅಂತ ಬೆರಗುಗಣ್ಣಿನಿಂದಲೇ ನೋಡ್ತಾ… ಕೆಂಪು ಮತ್ತು ಹಳದಿ ಬಣ್ಣದಿಂದ ಕಂಗೊಳಿಸುತ್ತಾ, ಆಕರ್ಷಿಸುತ್ತಿದ್ದ ರಸ ತುಂಬಿದ್ದ ಗೇರು ಹಣ್ಣಿನ ರುಚಿಯ ಬಗ್ಗೆ ಮನದಲ್ಲೇ ಮಂಡಿಗೆ ಮೆಲ್ಲುತ್ತಿದ್ದೆವು.
ಅಷ್ಟು ಸಣ್ಣ ಕನ್ನಡಿಯಲ್ಲಿ ಮುಖ ನೋಡೋದು ಹೇಗೆ? ಅಂತ ನನ್ನ ಪ್ರಶ್ನೆ. ಹೇಯ್, ಸುಮ್ನಿರು… ಸರೀ ನೋಡು… ಕಾಣ್ತದೆ ಅಂತ ಅಮ್ಮನ ಸಮಜಾಯಿಷಿ. ‘ಈಗ್ಲೇ ನೋಡ್ಲಾ?’ ನನ್ನ ಕೀಟಲೆ ಮಾತಿಗೆ, ಅಮ್ಮ, ಥೋ… ಹೋಗಾಚೆ… ಅದು ನಾಳೆ ಬೆಳಿಗ್ಗೆ ನೋಡ್ಲಿಕ್ಕೆ… ಅಂತ ಜೋರು ಮಾಡಿದ್ಳು.
ಎಲ್ಲವೂ ಜೋಡಿಸಿದ ನಂತ್ರ… ‘ಅದೆಂತದ್ದಮ್ಮಾ?’ ಅಂತ ನಾನು ಕಣಿಯನ್ನು ತೋರಿಸಿ ಕೇಳಿದೆ. ಪಕ್ಕದಲ್ಲೇ ಅಮ್ಮನಿಗೆ ಸಹಾಯ ಮಾಡುತ್ತಿದ್ದ ದೊಡ್ಡಮ್ಮ ಹೇಳಿದ್ಳು- ಪುಟ್ಟೂ, ಅದು ದೇವರ ಇದ್ದ ಹಾಗೆಯೇ. ಹೊಸ ವರ್ಷ ಅಲ್ವಾ, ಹೊಸ ಬೆಳೆ, ಹೊಸ ಕಳೆ, ಒಟ್ನಲ್ಲಿ ಹೊಸ ಜೀವನದ ಸಂಕೇತ ಅದು ಅಂತ ನಮ್ಮ ತುಳುಭಾಷೆಯಲ್ಲೇ ದೊಡ್ಡಮ್ಮ ವಿವರಿಸಿದಾಗ, ಈ ಕಣಿಯ ಬಗೆಗೊಂದಿಷ್ಟು ಭಕ್ತಿಯ ಭಾವ. ಹೌದಾ ಅಂತ ಕೇಳಿ ಅಣ್ಣನತ್ತ ತಿರುಗಿದೆ.
ಅಮ್ಮ ಅವಳ ಕೆಲಸ ಮುಂದುವರಿಸ್ತಿದ್ಳು. ನಾನು-ಅಣ್ಣನ ಯೋಚನೆಯೇ ಬೇರೆ. ‘ಏ… ಆ ಹಳದಿ ಬಣ್ಣದ ಗೋಂಕು ನಂಗೆ’ ಅಂತ ನಾನಂದ್ರೆ, ‘ಬೇಡ… ಬೇಡ… ಅದು ನಂಗೆ, ನೀನು ಕೆಂಪಿದ್ದು ಇಟ್ಕೋ…’ ಅಂತ ಅಣ್ಣನ ಅಧಿಕಾರಯುತ ಆದೇಶ. ಏನ್ ಮಾಡೋದು… ಸಣ್ಣವನಾಗಿದ್ರಿಂದ… ಹೂಂ ಅಂತ ಒಪ್ಪಿಕೊಂಡೆ. ನಮ್ಮಿಬ್ಬರ ಈ ಮಾತುಕತೆಗಳು ಅಪ್ಪ-ಅಮ್ಮನ ಕಿವಿಗೆ ಬೀಳದಂತೆ ಎಚ್ಚರ ವಹಿಸಿದ್ದೆವು. ಏನೋ ಅದು… ಅಂತ ನಮ್ಮ ಗುಸುಗುಸು ಕೇಳಿದ ಅಮ್ಮ ನುಡಿದಾಗ, ಏನಿಲ್ಲಮ್ಮಾ… ಆ ಕೆಂಪು ಮತ್ತು ಹಳದಿ ಗೋಂಕು ಹಣ್ಣು ಎಷ್ಟು ಚೆನ್ನಾಗಿದೆಯಲ್ಲ… ಬಣ್ಣ ತುಂಬ ಚೆನ್ನಾಗಿದೆ ಅಂತ ಹೇಳಿ ಇಬ್ಬರೂ ಜಾರಿಕೊಂಡಿದ್ವು!
ಅಪ್ಪ, ಮುಂದಿನ ವರ್ಷಕ್ಕೇಂತ ಕೊಡಿಸಿದ್ದ ಶಾಲೆಯ ಯುನಿಫಾರ್ಮನ್ನು ನಾಳೆ ತೊಡಬೇಕಲ್ಲ… ಅದನ್ನು ತೊಟ್ಟು ನಲಿದಾಡಬೇಕು. ಹೊಸ ಅಂಗಿ-ಚಡ್ಡಿ… ಆ ನಂತ್ರ ಗೋಂಕು ಹಣ್ಣು ತಿನ್ಬೇಕು, ಅಮ್ಮ ಪರಮಾನ್ನ ಮಾಡಿರ್ತಾಳೆ… ಅಂತೆಲ್ಲಾ ಯೋಚಿಸಿ ಮೇಲೆಯೂ ಕೆಳಗೂ ಹರಿದಿದ್ದ ಚಾಪೆಯ ಮಧ್ಯೆ ಇರುವ ಜಾಗದಲ್ಲಿ, ಅಮ್ಮನ ಹಳೆ ಸೀರೆಯನ್ನೇ ಹೊದಿಕೆಯಾಗಿಸಿಕೊಂಡು ಅದರೊಳಗೆ ತೂರಿಕೊಂಡ ನನಗೆ ಇದೇ ಕನಸು. ನಿದ್ದೆ ಬಂದದ್ದು ತಿಳಿಯಲಿಲ್ಲವಾದರೂ, ಯಾವಾಗ್ಲೂ ಆರೇಳು ಗಂಟೆಗೆ ಏಳುತ್ತಿದ್ದ ನನಗೆ ಮರುದಿನ ಬೆಳಿಗ್ಗೆ ಐದು ಗಂಟೆಗೇ ಎಚ್ಚರಾಗಿತ್ತು.
‘ಆ ಮಕ್ಕಳನ್ನು ಎಬ್ಬಿಸು’ ಅಂತ ಅಮ್ಮನಿಗೆ ಅಪ್ಪ ಹೇಳ್ತಾ ಇದ್ದದ್ದು ಕೇಳಿಸಿತು… ಎಚ್ಚರವಾಗಿದ್ರೂ, ಅಮ್ಮನೇ ಪ್ರೀತಿಯಿಂದ ಎಬ್ಬಿಸಲಿ ಎಂಬ ಆಸೆ ನಂಗೆ. ಏಳಮ್ಮಾ ಅಂತ ಅಮ್ಮ ಕರೆದಾಗ, ಭರ್ಜರಿ ನಿದ್ದೆಯಲ್ಲಿದ್ದಂತೆ ಒಂದಷ್ಟು ನಾಟಕವಾಡಿ, ನಿಧಾನವಾಗಿ ಕಣ್ಣುಜ್ಜಿಕೊಂಡು, ಎಂತಮ್ಮ… ಇಷ್ಟು ಬೇಗ ಎಬ್ಬಿಸಿದ್ಯಾಕೆ ಅಂತ ಕೇಳಿದೆ! ಏಯ್, ಮೊದ್ಲು ಹೋಗಿ ವಿಷು ಕಣಿ ನೋಡು… ಆಮೇಲೆ ಮಾತು ಅಂತ ಅಮ್ಮನ ಹಿತನುಡಿ.
ನಿಧಾನವಾಗಿ ಎದ್ದು ವಿಷು ಕಣಿಯತ್ತ ನೋಡಿದೆ. ಪಕ್ಕದಲ್ಲಿದ್ದ ಗೇರು ಹಣ್ಣುಗಳೇ ಕಣ್ಣಿಗೆ ರಾಚುತ್ತಿದ್ದರೂ, ಎಳ್ಳೆಣ್ಣೆ ದೀಪದ ಹೊಂಬೆಳಕಿನಲ್ಲಿ ಕನ್ನಡಿಯ ಅಕ್ಕಪಕ್ಕ, ಸುತ್ತ ಮುತ್ತಲಿರುವ ಫಲ ವಸ್ತುಗಳು, ಅಕ್ಕಿ, ಹೂವು, ಒಂದು ಪುಟ್ಟ ಚಿನ್ನದುಂಗುರ… ಇವೆಲ್ಲವೂ ದೈವೀ ಸಾನ್ನಿಧ್ಯವನ್ನು ನೆನಪಿಸುವಂತಿತ್ತು. ಮೈಗರಿವಲ್ಲದಂತೆಯೇ ಮನಸು ತಲೆಬಾಗಿತು, ಕೈಗಳು ಜೋಡಿಸಿಕೊಂಡವು. ‘ಸ್ವಾsssಮಿ ದೇವ್ರೆ, ಒಳ್ಳೇದು ಮಾಡು’ ಅಂತ ಮನಸ್ಸು ನುಡಿಯಿತು.
ಅಪ್ಪ ಪೂಜೆ ಮಾಡ್ತಾ ಇದ್ದಾಗ, ಓಹ್! ವಿಷು ಕಣಿಯಲ್ಲಿ ಒಂದು ಪುಸ್ತಕವೂ ಇದೆ. ಅದೆಂತ ಅಂತ ದೊಡ್ಡಮ್ಮನಲ್ಲಿ ಕೇಳಿದಾಗ, ಅದು ಪಂಚಾಂಗ ಎಂಬ ಉತ್ತರ ಬಂತು.
‘ಅದೆಂತಕೆ?’
‘ಪ್ರತಿ ವರ್ಷ ಯುಗಾದಿ ಅಂದ್ರೆ ಹೊಸ ವರ್ಷದ ಆರಂಭದ ದಿನ, ಪಂಚಾಗ ಶ್ರವಣ ಮಾಡ್ತಾರೆ. ಅಂದ್ರೆ ಅದನ್ನು ಓದುತ್ತಾರೆ’ ಅಂತ ನಮ್ಮ ತಿಳಿಯದ ಮಂಡೆಗೆ ತನಗೆ ತಿಳಿದದ್ದನ್ನು ಹೇಳಿದಳು ದೊಡ್ಡಮ್ಮ.
ಚಕಚಕನೆ ಹಲ್ಲುಜ್ಜಿ, ಸ್ನಾನ ಮಾಡಿ, ಅಮ್ಮಾ ನನ್ನ ಹೊಸ ಅಂಗಿ ಎಲ್ಲಿ ಅಂತ ಕೂಗಿ ಕೇಳಿ, ಅದನ್ನು ತೊಟ್ಟುಕೊಂಡ ಮೇಲೆ, ಅದೇನೋ ಪುಳಕ. ಆತ್ಮವಿಶ್ವಾಸ ನೂರ್ಮಡಿ ಹೆಚ್ಚಾದಂತಿತ್ತು. ದೊಡ್ಡ ಜನ ಆದ ಅನುಭವ. ಪಕ್ಕದ್ಮನೆ ಹುಡುಗ್ರೆದುರು ‘ಮಿಂಚುವ’ ಹಿರಿದಾಸೆ. ಹಿರಿಯರಿಗೆ ನಮಸ್ಕಾರ ಮಾಡ್ರೋ ಅಂತ ದೊಡ್ಡಮ್ಮ ಹೇಳಿದ್ರು. ಅಪ್ಪ-ಅಮ್ಮ-ದೊಡ್ಡಮ್ಮನ ಕಾಲ ಬಳಿ ತಲೆ ಬಾಗಿಸಿದಾಗ, ‘ದೇವರು ಒಳ್ಳೇದು ಮಾಡ್ಲಿ’ ಅವರೆಲ್ಲಾ ಪ್ರೀತಿಯಿಂದ ತಲೆ ನೇವರಿಸಿದ್ರು.
ತಕ್ಷಣವೇ ನಾನು-ಅಣ್ಣ ಹೊರಗೋಡಿದೆವು. ನಮ್ಮ ಜೋಸ್ತಿ (ದೋಸ್ತ್)ಗಳಿಗೆ ಹೊಸ ಅಂಗಿ-ಚಡ್ಡಿ ತೋರಿಸ್ಬೇಕಲ್ಲ…! ಆದ್ರೆ, ಅವರೆಲ್ಲ ಬಣ್ಣ ಬಣ್ಣದ ಅಂಗಿ-ಚಡ್ಡಿ ತೊಟ್ಟಿದ್ದರು…
‘ಏನೋ, ಈಗ ರಜೆ ಅಲ್ವಾ, ಶಾಲೆಗೆ ಯಾಕೆ ಹೊರಟಿದ್ದೀ?’ ಅಂತ ಅವ್ರೆಲ್ಲಾ ರೇಗಿಸುವುದಕ್ಕೋ… ಅಥವಾ ತಿಳಿಯದೆಯೋ… ಕೇಳಿಯೇ ಬಿಟ್ರು… ಮನಸ್ಸು ಮುದುಡಿತಾದರೂ, ಸಾವರಿಸಿಕೊಂಡು… ಇಲ್ಲ, ಇದು ಹೊಸ ಅಂಗಿ-ಚಡ್ಡಿ. ಹಬ್ಬ ಅಲ್ವಾ ಅದ್ಕೆ ಹಾಕ್ಕೊಂಡೆ ಅಂತಂದು ಮತ್ತೆ ಮನೆಗೆ ಬಂದು… ‘ಅಮ್ಮಾ ಗೇರು ಹಣ್ಣು…’ ಅಂತ ಕೇಳಿದೆವು. ಪೂಜೆ ಎಲ್ಲಾ ಆಗ್ಲಿ, ಆಮೇಲೆ ಕೊಡ್ತೀನಿ… ಹೋಗಿ ಆಡ್ಕೊಳ್ಳಿ ಈಗ… ಬಟ್ಟೆ ಮಣ್ಣು ಮಾಡ್ಕೋಬೇಡಿ… ಅಮ್ಮನಿಂದ ಸಲಹೆ ಬಂತು.
ಮತ್ತೆ ನಿರಾಶೆಯಾಯಿತು. ತಿಂಡಿ ತಿಂದು ಮನೆ ಹಿಂದಿದ್ದ ಗುಡ್ಡೆಗೆ ಓಡಿದೆವು. ಅಲ್ಲಿ ಗೇರು ಹಣ್ಣು, ಮಾವಿನ ಕಾಯಿಗಳನ್ನು ಮನಸೋ ಇಚ್ಛೆ ತಿಂದೆವು. ಗೇರು ಮರದಲ್ಲಿ ಆಟ ಆಡ್ತಾ ಆಡ್ತಾ… ಮಧ್ಯಾಹ್ನವಾಯಿತು. ಪೂಜೆಗೇಂತ ಅಪ್ಪ ಕರೆದಾಗ ಹೋಗಲೇಬೇಕಾಯ್ತು… ಯಾಕಂದ್ರೆ, ವಿಷು ಕಣಿಯ ಮೇಲೆ ಇಟ್ಟಿದ್ದ ಗೇರು ಹಣ್ಣಿನ ಆಕರ್ಷಣೆ ಇನ್ನೂ ಮನಸ್ಸಿನಿಂದ ದೂರವಾಗಿರಲಿಲ್ಲ. ಇವತ್ತು ಬೈಸಿಕೊಳ್ಳಬಾರದೂಂತ ದೊಡ್ಡಮ್ಮ ಬೇರೆ ಮೊದ್ಲೇ ಹೇಳಿದ್ದರಲ್ಲ…
ಪೂಜೆ ಮುಗಿದು ಹೊರಗೆ ಬಂದಾಗ… ದಾನೆ ಬಾಣಾರ್ರೆ… ಪೊಸ ಅಂಗಿಯಾ? ಎಂಕ್ಲೆಗ್ ದಾಲ ಇಜ್ಜಾ? (ಏನು ಯಜಮಾನ್ರೆ, ಹೊಸ ಅಂಗಿಯಾ? ನಮಗೇನೂ ಇಲ್ವಾ) ಅಂತ ಪಕ್ಕದ ಮನೆಯ ತೋಟದ ಕೆಲಸಕ್ಕೆ ಬರ್ತಾ ಇದ್ದ ಚೀಂಕ್ರ ಕೇಳಿದ. ಅವನಿಗೆ ನಾವಂದ್ರೆ ತುಂಬಾ ಪ್ರೀತಿ. ಆಗಾಗ ಚಾಕ್ಲೇಟು, ಮಿಠಾಯಿ ತಂದುಕೊಡ್ತಾ ಇದ್ದ.
ಅವನತ್ತ ಒಂದು ನಗು ಚೆಲ್ಲಿ… ನಮ್ಮ ಪುಟಾಣಿ ಪಡೆಯನ್ನು ಸೇರಿಕೊಂಡೆ.
ಆಗ್ಲೇ ಹೇಳಲು ಏನೋ ಮರೆತಿದ್ದ ಅಮ್ಮ, ಏಯ್, ಇಲ್ಲಿ ಬನ್ರೋ… ಈವತ್ತು ಯುಗಾದಿಯಲ್ವ… ಹಾಗೇ ದೇವಸ್ಥಾನಕ್ಕೆ ಹೋಗ್ಬರ್ಬೇಕು. ಬನ್ನಿ ಬನ್ನಿ… ಅಂತ ಕರೆದ್ಳು… ಒಲ್ಲದ ಮನಸ್ಸಿಂದಲೇ ಹೋದೆವು. ಯಾಕಂದ್ರೆ ಹಿರಿಯರ ಆಜ್ಞಾ ಪರಿಪಾಲಕರಾಗಿದ್ದೆವು.
ಮಧ್ಯಾಹ್ನ ಊಟ ಮಾಡಿ ಮತ್ತೆ ಹೋದದ್ದು ಗುಡ್ಡೆಗೆ. ಅಲ್ಲಿ ಅಣ್ಣನಿಗಿಂತ ಹೆಚ್ಚು ಹಳದಿ ಗೇರು ಹಣ್ಣು ತಿನ್ಬೇಕು ಅನ್ನೋ ಹಠದಿಂದ, ಸಾಕಷ್ಟನ್ನು ಕೊಯ್ದು ಕೊಯ್ದು ತಿನ್ನುತ್ತಿದ್ದೆ.
ಗೇರು ಹಣ್ಣಿನಿಂದ ಸುರಿದ, ಒಗರು ಸಿಹಿಗಳ ಸಮ್ಮಿಶ್ರಣವುಳ್ಳ…
ರುಚಿಯಾದ ರುಚಿಯಾದ ರಸ…
ಕೆನ್ನೆಯಿಂದ ಜಾರಿದ ಕಂಬನಿಯಂತೆ….
ನನ್ನ ಅಚ್ಚ ಬಿಳಿ ಬಣ್ಣದ ಹೊಚ್ಚ ಹೊಸ ಶರ್ಟಿನ ಮೇಲೆ ಚಿತ್ತಾರ ಬಿಡಿಸಿತ್ತು…
ಬಾಲ್ಯದಂತಿಲ್ಲದ ಬಾಲ್ಯ ಕಳೆದು ಹೋದ ಆ ನೆನಪು ಎಂದೆಂದೂ ಅಚ್ಚಳಿಯದಂತೆ…
ಬಿಳಿ ಬಣ್ಣದ ಹೊಸ ಶರ್ಟಿನಲ್ಲಿ ಅಳಿದು ಹೋಗದ…
ಗೇರು ಕಲೆ!
ಬರವಣಿಗೆ ಸರಳವಾಗಿ ವಿಷು-ಕಣಿಯ ಬಗ್ಗೆ ಮಾಹಿತಿಪೂರ್ಣವಾಗಿದೆ. ಆತ್ಮೀಯವಾಗಿ ಓದಿಸಿಕೊಂಡಿತು.
ಹೊಸ ಬಟ್ಟೆಯ ಯೂನಿಫಾರ್ಮ್, ವಿಷುಕಣಿಯಲ್ಲಿ ಗೇರುಹಣ್ಣು… ಲೇಖನದ ಕೊನೆಯ ಸಾಲನ್ನು ಮೊದಲೇ ಊಹಿಸಿಕೊಳ್ಳುವಂತೆ ಮಾಡಿದ್ದವು. ಹಳ್ಳಿಯಲ್ಲಿ ಅಂಥದ್ದೇ ವಾತಾವರಣದಲ್ಲಿ ಬೆಳೆದದ್ದಕ್ಕಾ ಏನಾ, ಗೊತ್ತಿಲ್ಲ.
ಸುಪ್ತದೀಪ್ತಿಯವರೆ,
ಇದು ಕಳೆದು ಹೋದ ಬಾಲ್ಯ. ಆಗ ಹಲ್ಲಿತ್ತು, ಕಡಲೆಯಿರ್ಲಿಲ್ಲ, ಈಗ ಹಲ್ಲು ಇದೆ, ಕಡಲೆಯೂ ಇದೆ… ಆದ್ರೆ ಕಡಲೆ ತಿನ್ನಲು ಮನಸ್ಸು/ಸಮಯ ಇಲ್ಲ! 🙂