ಐಪಿಎಲ್ ಕವರೇಜ್‌: ವೆಬ್‌ಸೈಟುಗಳಿಗೆ ಕಡಿವಾಣ!

0
344

ಟ್ವೆಂಟಿ20 ಕ್ರಿಕೆಟ್ ಪಂದ್ಯವೊಂದು ಎಷ್ಟು ವೇಗವಾಗಿ ಮುಕ್ತಾಯಗೊಳ್ಳುತ್ತದೆಯೋ, ಅಷ್ಟೇ ವೇಗದಲ್ಲಿ ಹಣದ ಹೊಳೆಯೂ ಹರಿಯುತ್ತದೆ. ತತ್ಫಲವಾಗಿ ಹುಟ್ಟಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟನ್ನು ಪಕ್ಕಾ ವ್ಯಾಪಾರವಾಗಿಸುತ್ತಿದೆ. ಕ್ರಿಕೆಟನ್ನು ಸಂಪೂರ್ಣ ಹಣಮಯವಾಗಿಸಿದ ಐಪಿಎಲ್, ಕ್ರಿಕೆಟ್ ಪಂದ್ಯಗಳನ್ನೂ, ಕ್ರಿಕೆಟಿಗರನ್ನೂ ಹರಾಜು ಹಾಕಿದೆ… ಕ್ರಿಕೆಟಿಗರೆಲ್ಲರೂ ಹಣದ ಹೊಳೆಯಲ್ಲಿ ತೇಲಾಡುತ್ತಿದ್ದಾರೆ.

ಆದರೆ ಕ್ರಿಕೆಟಿಗೆ ಸಂಬಂಧಿಸಿದ ಸುದ್ದಿಗಳನ್ನು, ಚಿತ್ರಗಳನ್ನು ಪ್ರಸಾರ ಮಾಡುವುದರ ಬಗ್ಗೆ ಮಾಧ್ಯಮಗಳ ಮೇಲೆ ನಿರ್ಬಂಧ ವಿಧಿಸಲಾಗಿರುವುದು ಎಷ್ಟು ಸರಿ? ತಮ್ಮ ಹಕ್ಕುಗಳನ್ನು ರಕ್ಷಿಸುವ ನೆಪದಲ್ಲಿ ಮಾಧ್ಯಮಗಳಿಗೆ ಸಾಕಷ್ಟು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲಾಗಿದ್ದು, ಅವುಗಳ ಪ್ರಕಾರ, ವೆಬ್‌ಸೈಟುಗಳು ಐಪಿಎಲ್ ಪಂದ್ಯಾವಳಿಯ ಕವರೇಜ್ ನೀಡುವಂತಿಲ್ಲ. ಪತ್ರಿಕೆಗಳು ಅಥವಾ ಸುದ್ದಿ ಏಜೆನ್ಸಿಗಳು ತೆಗೆದ ಚಿತ್ರಗಳನ್ನು ಕೂಡ ಆನ್‌ಲೈನ್‌ನಲ್ಲಿ ಅವುಗಳು ಬಳಸುವಂತೆ ಇಲ್ಲ ಎಂಬುದು ಮತ್ತೊಂದು ನಿರ್ಬಂಧ.

ಇದಲ್ಲದೆ, ಇಂತಿಷ್ಟೇ ಚಿತ್ರಗಳನ್ನು ಪ್ರಕಟಿಸಬೇಕು, ವೆಬ್‌ಸೈಟುಗಳು ಪಂದ್ಯಕ್ಕೆ ಮೊದಲು ಮತ್ತು ಪಂದ್ಯದ ನಂತರದ ಪತ್ರಿಕಾ ಗೋಷ್ಠಿಯ ವರದಿಯನ್ನಷ್ಟೇ ಪ್ರಕಟಿಸಬೇಕು, ವೆಬ್‌ಸೈಟುಗಳ ಪ್ರತಿನಿಧಿಗಳು, ಛಾಯಾಗ್ರಾಹಕರಿಗೆ ಪ್ರೆಸ್ ಗ್ಯಾಲರಿಗೆ ಪ್ರವೇಶ ಇರುವುದಿಲ್ಲ, ಇತರ ಮಾಧ್ಯಮಗಳು ತಮ್ಮದೇ ಛಾಯಾಗ್ರಾಹಕರ ಮೂಲಕ ತೆಗೆದ, ತಮ್ಮದೇ ಎಕ್ಸ್‌ಕ್ಲೂಸಿವ್ ಛಾಯಾಚಿತ್ರಗಳನ್ನು ಐಪಿಎಲ್ ಕೇಳಿದರೆ ಯಾವುದೇ ಶುಲ್ಕವಿಲ್ಲದೆ, ತಮ್ಮದೇ ಖರ್ಚಿನಲ್ಲಿ ನೀಡಬೇಕು, ಸುದ್ದಿ ಏಜೆನ್ಸಿಗಳು ಕೂಡ ವೆಬ್‌ಸೈಟುಗಳಿಗೆ ಚಿತ್ರಗಳನ್ನು ವಿತರಿಸುವಂತಿಲ್ಲ…

ಇವೆಲ್ಲವೂ ಮಾಧ್ಯಮ ಸ್ವಾತಂತ್ರ್ಯದ ಮೇಲೆ ಹಿಡಿತ ಸಾಧಿಸುವ ಯತ್ನವೇ? ಯಾವ ಚಿತ್ರ ಅಥವಾ ಸುದ್ದಿ ಪ್ರಕಟಿಸಬೇಕು, ಯಾವುದನ್ನು ತಿರಸ್ಕರಿಸಬೇಕು ಎಂಬುದೆಲ್ಲಾ ಸಂಪಾದಕರ ವಿವೇಚನೆಗೆ ಬಿಟ್ಟ ವಿಷಯವಾಗಿರುವಾಗ, ಇಂಥ ನಿರ್ಬಂಧಗಳೇಕೆ? ಈ ಚಿತ್ರ ವಿಚಿತ್ರ ಷರತ್ತುಗಳ ಮೂಲಕ ಏನು ಸಾಧಿಸಲು ಯತ್ನಿಸಲಾಗುತ್ತಿದೆ? ಹಣವಿದ್ದರೆ ಏನೂ ಮಾಡಬಹುದು ಎಂಬುದು ಇದರರ್ಥವೇ?

ಭಾರತೀಯ ಸಂಪಾದಕರ ಗಿಲ್ಡ್ ಈ ಬಗ್ಗೆ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿಗೆ ಪತ್ರ ಬರೆದು, ಈ ಷರತ್ತುಗಳು ಅಸ್ವೀಕಾರಾರ್ಹ ಎಂದು ತಿಳಿಸಿತ್ತು. ನಂತರ ಏಪ್ರಿಲ್ 7ರಂದು ದೇಶದ ಕ್ರೀಡಾ ಪತ್ರಕರ್ತರ ಫೆಡರೇಶನ್ ಪ್ರತಿನಿಧಿಗಳೊಂದಿಗೆ ಮುಂಬಯಿಯಲ್ಲಿ ಸಭೆ ನಡೆಸಿದ ಮೋದಿ, ಐಪಿಎಲ್ ಈ ನೀತಿಗಳ ಮರುಪರಿಶೀಲನೆ ಮಾಡಲಿದೆ ಎಂದು ಭರವಸೆ ನೀಡಿದ್ದರು. ಆದರೆ, ಐಪಿಎಲ್‌ನ ವೆಬ್‌ಸೈಟಿನಲ್ಲಿ ಇರುವ ಪರಿಷ್ಕೃತ ನಿಬಂಧನೆಗಳು ಕೂಡ ಸಮ್ಮತಾರ್ಹವಲ್ಲ ಎಂದು ಇದೀಗ ಸಂಪಾದಕರ ಗಿಲ್ಡ್, ಮೋದಿಗೆ ಮತ್ತೊಮ್ಮೆ ಪತ್ರ ಬರೆದಿದೆ. ಗಿಲ್ಡ್ ಅಧ್ಯಕ್ಷ ಅಲೋಕ್ ಮೆಹ್ತಾ ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಸಚ್ಚಿದಾನಂದ ಮೂರ್ತಿ ಬರೆದಿರುವ ಪತ್ರದ ಪ್ರತಿಯನ್ನು ಬಿಸಿಸಿಐ ಅಧ್ಯಕ್ಷ ಶರದ್ ಪವಾರ್‌ಗೂ ಕಳುಹಿಸಲಾಗಿದೆ.

ಒಟ್ಟಿನಲ್ಲಿ, ಮಾಧ್ಯಮಗಳ ಬೆಂಬಲ, ಸಹಕಾರವಿಲ್ಲದೆ ಯಾವುದೇ ವೃತ್ತಿಪರ ಕ್ರೀಡೆ ಹೇಗಿರಬಹುದು? ಮಾಧ್ಯಮಗಳ ಮೇಲೆಯೇ ನಿರ್ಬಂಧಗಳನ್ನು, ಷರತ್ತುಗಳನ್ನು ವಿಧಿಸುವ ದುರಾಸೆಗೂ ಒಂದು ಮಿತಿ ಇರಲಿ.

LEAVE A REPLY

Please enter your comment!
Please enter your name here