ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-15 (ಡಿಸೆಂಬರ್ 03, 2012)
* ನೀವು ಪದೇ ಪದೇ ಸಂಚಾರದಲ್ಲಿರುವವರಾದರೆ ಮತ್ತು ಯಾವುದಾದರೂ ಒಂದು ಲೇಖನವನ್ನು ಅರ್ಧ ಮಾಡಿ ಮುಗಿಸಿರುತ್ತೀರಿ, ಅದನ್ನು ಹೋದಲ್ಲಿ ಮುಂದುವರಿಸುವ ಇರಾದೆ ನಿಮ್ಮದಾಗಿರುತ್ತದೆ. ನಿಮ್ಮ ಬಳಿ ಲ್ಯಾಪ್‌ಟಾಪ್ ಇರುವುದಿಲ್ಲ. ಇಲ್ಲವೇ ಹೋದಲ್ಲೆಲ್ಲಾ ಫೈಲ್‌ಗಳನ್ನು ಕೊಂಡೊಯ್ಯಲು ಅನುಕೂಲವಾಗುವ ಪೆನ್‌ಡ್ರೈವ್ ಇಲ್ಲ, ಅಥವಾ ಅದರ ಬಳಕೆಗೆ ಆಸ್ಪದವಿರುವುದಿಲ್ಲ.
* ನಿಮ್ಮ ಮನೆಯ ದೊಡ್ಡ ಸಮಾರಂಭವೊಂದರ ಚಿತ್ರ, ವೀಡಿಯೋಗಳನ್ನು ದೂರದಲ್ಲಿರುವ ಸ್ನೇಹಿತರು, ಕುಟುಂಬಿಕರೊಂದಿಗೆ ಹಂಚಿಕೊಳ್ಳಲು ಬಯಸುತ್ತೀರಿ. ಆದರೆ ಅವುಗಳ ಗಾತ್ರ ದೊಡ್ಡದಿರುವುದರಿಂದ ಇ-ಮೇಲ್ ಮೂಲಕ ಹಂಚುವುದು ಅಸಾಧ್ಯ. ಏನು ಮಾಡಬೇಕೆಂಬ ಚಿಂತೆ ನಿಮ್ಮದು.
* ನೀವೊಂದಷ್ಟು ಗೆಳೆಯರು ದೀರ್ಘ ಲೇಖನವನ್ನು, ಸಂಶೋಧನಾ ಪ್ರಬಂಧವನ್ನು ಅಥವಾ ಕಥೆಯನ್ನು ಒಟ್ಟಾಗಿ ಬರೆಯಬೇಕೆಂದುಕೊಂಡಿದ್ದೀರಿ. ಗೆಳೆಯರೆಲ್ಲರೂ ಎಲ್ಲೆಲ್ಲೋ ಇರುವವರು. ನಿಮ್ಮೆಲ್ಲರ ಅಭಿಪ್ರಾಯವನ್ನು ಒಂದೇ ಫೈಲಿನಲ್ಲಿ ಸೇರಿಸುವುದು ಹೇಗೆ ಎಂಬುದು ನಿಮಗೆ ಸಮಸ್ಯೆ.
ಈ ಮೇಲಿನ ಮೂರೂ ಸಮಸ್ಯೆಗಳಿಗೆ ಸರಳವಾದ ಪರಿಹಾರವಿದೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಅದುವೇ ಕ್ಲೌಡ್ ಸ್ಟೋರೇಜ್. ಇದಕ್ಕೆ ಇಂಟರ್ನೆಟ್ ಸಂಪರ್ಕ ವೆಚ್ಚದ ಹೊರತಾಗಿ ಬೇರಾವುದೇ ಖರ್ಚಿಲ್ಲ. ವರ್ಚುವಲ್ ಸ್ಥಳದಲ್ಲಿ ನಿಮ್ಮ ಫೈಲುಗಳನ್ನು ಸೇವ್ ಮಾಡಿಟ್ಟುಕೊಂಡು, ಹೋದಲ್ಲೆಲ್ಲಾ ಎಡಿಟ್ ಮಾಡಬಹುದು, ಹೊಸದಾಗಿ ಕ್ರಿಯೇಟ್ ಮಾಡಬಹುದು, ಬೇರೆಯವರೊಂದಿಗೆ ಹಂಚಿಕೊಳ್ಳಬಹುದು. ದೊಡ್ಡ ಪ್ರಮಾಣದಲ್ಲಿ ಫೈಲುಗಳನ್ನು (ಫೋಟೋ, ವೀಡಿಯೋ, ಆಡಿಯೋ, ಇತರ ಡಾಕ್ಯುಮೆಂಟ್ ಫೈಲ್‌ಗಳು) ಬೇರೆಯವರೊಂದಿಗೆ ಶೇರ್ ಮಾಡಿಕೊಳ್ಳಬಹುದು.
ಇಂಥದ್ದೊಂದು ಸೌಲಭ್ಯ ನೀಡುವ ಸಾಕಷ್ಟು ವೆಬ್ ತಾಣಗಳಿದ್ದರೂ, ನಮಗೆಲ್ಲಾ ಚಿರಪರಿಚಿತವಾಗಿರುವುದು ಜಿಮೇಲ್‌ನಲ್ಲಿ ಗೂಗಲ್ ಡ್ರೈವ್ (drive.google.com), ಮತ್ತು ಹಾಟ್‌ಮೇಲ್ (ಈಗ ಔಟ್‌ಲುಕ್)ನಲ್ಲಿ ಸ್ಕೈ ಡ್ರೈವ್ (skydrive.live.com) ಎಂಬ ಸೌಲಭ್ಯಗಳು. ಇವೆರಡನ್ನು ಕೂಡ ವೆಬ್‌ನಲ್ಲಿ ಮಾತ್ರವಲ್ಲದೆ, ಮೊಬೈಲ್ ಮೂಲಕವೂ ಆಕ್ಸೆಸ್ ಮಾಡಬಹುದಾಗಿದೆ.
ಗೂಗಲ್‌ಡ್ರೈವ್‌ನ ಡೆಸ್ಕ್‌ಟಾಪ್ ಅಥವಾ ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್, ಇನ್‌ಸ್ಟಾಲ್ ಮಾಡಿಕೊಳ್ಳಿ. ನಿಮ್ಮ ಸಾಧನದಲ್ಲಿ ಪ್ರತ್ಯೇಕವಾದ ಗೂಗಲ್‌ಡ್ರೈವ್ (ಫೋಲ್ಡರ್) ರಚನೆಯಾಗುತ್ತದೆ. ಈ ಫೋಲ್ಡರ್‌ಗೆ ಹಾಕುವ ಯಾವುದೇ ಐಟಂ ಆನ್‌ಲೈನ್ ಜತೆಗೆ ಸಮ್ಮಿಳಿತಗೊಳಿಸಬಹುದು. ಅಂದರೆ ಸಿಂಕ್ ಮಾಡಬಹುದು. ನೀವು ನಿಮ್ಮ ಕಂಪ್ಯೂಟರಿನಲ್ಲಿ ಏನೇ ಡಾಕ್ಯುಮೆಂಟ್ ಕ್ರಿಯೇಟ್ ಮಾಡಿ ತಿದ್ದಿದರೂ, ಅದು ಆನ್‌ಲೈನ್ ಸರ್ವರ್‌ನ ಪ್ರತಿಯಲ್ಲಿಯೂ ಯಥಾವತ್ ತಿದ್ದುಪಡಿಯಾಗುವುದೇ ಸಿಂಕಿಂಗ್ (Syncing ಅಥವಾ Sync ಮಾಡುವುದು).
ಗೂಗಲ್ ಡ್ರೈವ್‌ನಲ್ಲಿ ನೀವು ಕ್ರಿಯೇಟ್ ಮಾಡುವ ಯಾವುದೇ ಡಾಕ್ಯುಮೆಂಟ್ ಅನ್ನು ಪಿಡಿಎಫ್, ವರ್ಡ್/ಎಕ್ಸೆಲ್/ಪವರ್‌ಪಾಯಿಂಟ್, ಹೆಚ್‌ಟಿಎಂಎಲ್, ಆರ್‌ಟಿಎಫ್ ಫೈಲ್ ಆಗಿ ಡೌನ್‌ಲೋಡ್ ಮಾಡಿಟ್ಟುಕೊಳ್ಳುವ ಅವಕಾಶವೂ ನಿಮಗೆ ಲಭ್ಯ.
ಇನ್ನೂ ಒಂದು ಅನುಕೂಲವಿದೆ. ಗೂಗಲ್ ಡ್ರೈವ್‌ನಲ್ಲಿ 5 ಗಿಗಾಬೈಟ್ (ಜಿಬಿ) ಸ್ಥಳಾವಕಾಶವಿದೆ. ಸ್ಕೈಡ್ರೈವ್‌ನಲ್ಲಾದರೆ 7 ಜಿಬಿ ಉಚಿತ ಸ್ಥಳಾವಕಾಶವಿದೆ. ಹೆಚ್ಚು ಸ್ಥಳಾವಕಾಶ ಬೇಕಿದ್ದರೆ ನೀವು ಹಣಕೊಟ್ಟು ಖರೀದಿಸಬಹುದು. ನಿಮ್ಮ ಪ್ರಮುಖ ದಾಖಲೆಗಳನ್ನೆಲ್ಲಾ ಇದರಲ್ಲಿಯೇ ಇಟ್ಟುಕೊಂಡರೆ, ಬೇಕಾದಾಗ ಅದನ್ನು ರವಾನಿಸಬಹುದು, ಹೋದಲ್ಲೆಲ್ಲಾ ವೀಕ್ಷಿಸಬಹುದು.
ದೊಡ್ಡದೊಡ್ಡ ಫೈಲುಗಳನ್ನು ಇಮೇಲ್‌ನಲ್ಲಿ ಅಟ್ಯಾಚ್ ಮಾಡುವುದು ಅಸಾಧ್ಯ. ಇದಕ್ಕೆ ಪರಿಹಾರವಿದು. ಫೋಟೋ ಅಥವಾ ವೀಡಿಯೋ ಫೈಲುಗಳನ್ನು ಈ ವರ್ಚುವಲ್ ಡ್ರೈವ್‌ಗೆ ಅಪ್‌ಲೋಡ್ ಮಾಡಿ, ಅದರ ಲಿಂಕ್ ಅನ್ನು ನಿಮ್ಮ ಸ್ನೇಹಿತರಿಗೆ ಅಲ್ಲಿಂದಲೇ ನೇರವಾಗಿ ಇಮೇಲ್ ಮೂಲಕ ಕಳುಹಿಸುವ ಆಯ್ಕೆಯಿದೆ. ಅವರಿಗೆ ತಿದ್ದುಪಡಿ ಮಾಡುವ ಅಥವಾ ವೀಕ್ಷಿಸುವ ಅನುಮತಿಯನ್ನು ಮಾತ್ರವೇ ನೀಡುವ ಆಯ್ಕೆಯೂ ಲಭ್ಯ. ನೀವು ಜಿಮೇಲ್ ಹೊಂದಿದವರಾದರೆ, ಅದಕ್ಕೆ ಲಾಗಿನ್ ಆದಾಗ, ಮೇಲ್ಭಾಗದಲ್ಲಿ ಡ್ರೈವ್ ಅನ್ನೋ ಒಂದು ಲಿಂಕ್ ಇರುತ್ತದೆ.
ಒಟ್ಟಿನಲ್ಲಿ ಇದು ನಿಮ್ಮ ಫೈಲುಗಳ ವರ್ಚುವಲ್ ಸೂಟ್‌ಕೇಸ್ ಇದ್ದಂತೆ. ಕೈಯಲ್ಲೇನೂ ಇಲ್ಲದೆಯೇ ಹೋದಲ್ಲೆಲ್ಲಾ ಒಯ್ಯಬಹುದು, ಬಳಸಬಹುದು.