ಈ ದೇಶಕ್ಕೆ ಏನು ಗಂಡಾಂತರ ಕಾದಿದೆಯೋ ಗೊತ್ತಿಲ್ಲ… ಒಂದು ಕಾಲದಲ್ಲಿ ಭಾರತ ಸೂಪರ್ ಪವರ್ ಆಗುವತ್ತ ದಾಪುಗಾಲಿಟ್ಟಿದೆ ಎಂಬ ಮಾತು ಕೇಳಿಬರುತ್ತಿತ್ತು. ಹೆಚ್ಚೇನಿಲ್ಲ, ಕೇವಲ ಆರೇಳು ವರ್ಷಗಳ ಹಿಂದೆ. ಈಗೇನಾಗಿದೆ? ರಾಜಕಾರಣಿಗಳ ಹಣದ ದಾಹ, ಭ್ರಷ್ಟಾಚಾರ ಮುಚ್ಚಿಹಾಕಲು ಏನೇನೆಲ್ಲಾ ಪ್ರಯತ್ನಗಳು, ಒಬ್ಬರ ಮೇಲೊಬ್ಬರು ಕೆಸರೆರಚಾಟ, ಭ್ರಷ್ಟರನ್ನು ಬಯಲಿಗೆಳೆದವರೇ ಹತ್ಯೆಗೀಡಾಗುತ್ತಿದ್ದಾರೆ, ಅಷ್ಟೇಕೆ, ಎಲ್ಲ ರೀತಿಯಲ್ಲಿಯೂ ತಪ್ಪು ಮಾಡಿರುವ, ಭಯೋತ್ಪಾದಕರನ್ನು ದೇಶದೊಳಗೆ ತೂರಿಸುತ್ತಿರುವ ಪಾಕಿಸ್ತಾನವೇ ಭಾರತವನ್ನು ದೂಷಿಸುವ ಮಟ್ಟಕ್ಕೆ ಬೆಳೆದುಬಿಟ್ಟಿದೆ. ನಾವು ಅಸಹಾಯಕರಾಗಿ ಕೈಚೆಲ್ಲಿ ಕೂತಿದ್ದೇವೆ. ಚಕ್ರವ್ಯೂಹ, ಇದು ಚಕ್ರವ್ಯೂಹ, ಹಣದಾ ಮೋಹ, ಅಧಿಕಾರದ ದಾಹ ಎಂಬ ಕನ್ನಡ ಚಿತ್ರಗೀತೆ ನೆನಪಾಗುತ್ತಿದೆ. ದೇಶದ ಮಾನ ಹರಾಜಾಗುತ್ತಿದೆ!
ಸೋನಿಯಾ ಗಾಂಧಿ ಬಗೆಗೆ ಯಾಕೀ ನಿಗೂಢತೆ?
ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವನ್ನು ಆಳುತ್ತಿರುವ ಯುಪಿಎ ಸರಕಾರದ ನೇತೃತ್ವ ವಹಿಸಿರುವ ಪರಮೋಚ್ಚ ನಾಯಕಿ ಸೋನಿಯಾ ಗಾಂಧಿ ಅದ್ಯಾವುದೋ ನಿಗೂಢವಾದ ಕಾಯಿಲೆಗಾಗಿ ಒಂದು ತಿಂಗಳು ಯಾರಿಗೂ ತಿಳಿಯದಂತೆ ವಿದೇಶಕ್ಕೆ ಹೋಗಿದ್ದಾರೆ ಮತ್ತು ಇನ್ನೂ ವಾಪಸ್ ಬಂದಿರುವ ಕುರಿತಾಗಿಯೂ ಸಂದೇಹಗಳಿವೆ. ಅವರು ಹೇಗಿದ್ದಾರೆ, ಆರೋಗ್ಯ ಹೇಗಿದೆ ಎಂಬಿತ್ಯಾದಿ ವಿಷಯ ಇನ್ನೂ ಹೊರಬರುತ್ತಿಲ್ಲ. ಅವರು ಮನೆಯೊಳಗೇ ಕುಳಿತು ಮಂತ್ರಿಗಳೊಂದಿಗೆ ಮಾತುಕತೆ ನಡೆಸುತ್ತಾ, ಸರಕಾರವನ್ನು ‘ಮುನ್ನಡೆಸುತ್ತಿದ್ದಾರೆ’ ಎಂಬಂತಹಾ ಭಾವನೆಯನ್ನು ಉಂಟು ಮಾಡಲಾಗುತ್ತಿದೆ.
ಅದಿರಲಿ, ದಿನ ಬೆಳಗಾದರೆ, ಸೋನಿಯಾ ನಿವಾಸವಿರುವ ದೆಹಲಿಯ 10, ಜನಪಥ್ ನಿವಾಸದ ಮುಂದೆಯೇ ಏನು ಸುದ್ದಿ ಸಿಗುತ್ತದೆ ಎಂದು ಕಾದುಕೊಂಡು ಕುಳಿತಿರುವ ಮಾಧ್ಯಮಗಳು ಕೂಡ, ಸೋನಿಯಾ ಗಾಂಧಿಯ ಮುಖವನ್ನು ಈ ದೇಶದ ಜನತೆಗೆ ತೋರಿಸುವ ಧೈರ್ಯ ಮಾಡಿಲ್ಲ. ಹಾಗಾದರೆ, ನಿಜಕ್ಕೂ ಏನು ನಡೆದಿದೆ? ಸೋನಿಯಾ ಗಾಂಧಿ ಅನಾರೋಗ್ಯ ಎಂಬುದು ಅವರ “ಖಾಸಗಿ” ವಿಷಯ ಎಂದು ಕಾಂಗ್ರೆಸ್ ಸ್ಪಷ್ಟನೆ ನೀಡಿ ಸುಮ್ಮನೆ ಕುಳಿತಿದೆಯಾದರೂ, ಒಂದು ದೇಶದ ಆಡಳಿತದ ಮುಖ್ಯಸ್ಥೆ, ಪ್ರಧಾನಿಗಿಂತಲೂ ಹೆಚ್ಚಿನ ಅಧಿಕಾರವಿರುವ ನಾಯಕಿಯ ಬಗ್ಗೆ ಎಲ್ಲವನ್ನೂ ಇಷ್ಟೊಂದು ಗೌಪ್ಯವಾಗಿ ಮುಚ್ಚಿಡುವುದೇತಕ್ಕೆ? ಏನು ಗಂಡಾಂತರ ಕಾದಿದೆ? ಎಂಬ ಶಂಕೆ ಮೂಡಲು ಕಾರಣವಾಗದಿರದೇ?
ಪ್ರತಿಭಟಿಸೋ ಶಕ್ತಿ ಕಳೆದುಕೊಂಡ ಆಮ್ ಆದ್ಮೀ
ಒಂದು ಕಡೆ ಕಾಮನ್ವೆಲ್ತ್ ಹಗರಣ, 2ಜಿ ಸ್ಪೆಕ್ಟ್ರಂ ಹಂಚಿಕೆ ಹಗರಣ, ಸಿವಿಸಿ ನೇಮಕಾತಿ, ಪದೇ ಪದೇ ಬೆಲೆ ಏರಿಕೆ, ಹಣದುಬ್ಬರ, ಈ ದೇಶದ ಜನತೆಯ ನರಕಯಾತನೆ…. ಇವೆಲ್ಲವುಗಳ ನಡುವೆ ಕಾಂಗ್ರೆಸ್ ಪಕ್ಷದೊಳಗಿನ, ಸರಕಾರದೊಳಗಿನ ಗೊಂದಲಗಳು. ಅತ್ತಕಡೆಯಿಂದ ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿನ ವೈಫಲ್ಯ, ಮತ್ತೊಂದೆಡೆ ಶಾಂತಿಯುತವಾಗಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದವರ ಮೇಲೆ ಲಾಠಿ ಪ್ರಯೋಗ… ಎಲ್ಲ ವಿಷಯದಲ್ಲಿಯೂ ಭಾರತದ ಹೆಸರನ್ನು ಲೋಕ ಮುಖದೆದುರು ಸಂಪೂರ್ಣವಾಗಿ ಹಾಳು ಮಾಡಲು ಇಷ್ಟು ಸಾಕಲ್ಲವೇ? ಕೆಲವೇ ವರ್ಷಗಳ ಹಿಂದೊಮ್ಮೆ ಕಣ್ಣು ಹಾಯಿಸಿ ನೋಡಿ. ಭಾರತವು ಈ ಶತಮಾನದ ಬಲಿಷ್ಠ ರಾಷ್ಟ್ರವಾಗಿ, ಸೂಪರ್ ಪವರ್ ಆಗಿ ಮೂಡಿಬರಲಿದೆ ಎಂಬ ಅದೆಂಥಹಾ ಆಶಾವಾದ ನಮ್ಮಲ್ಲಿತ್ತು? ಈಗಿನ ಪರಿಸ್ಥಿತಿ ಹೇಗಿದೆ? ಬೆಲೆ ಏರಿಕೆಯಿಂದ ತತ್ತರಿಸಿ, ತಲೆ ಎತ್ತದಂತಹಾ ಪರಿಸ್ಥಿತಿಯಲ್ಲಿದ್ದಾನೆ ಜನ ಸಾಮಾನ್ಯ. ಇನ್ನು ಕಳೆದ ನಾಲ್ಕೈದು ವರ್ಷಗಳಲ್ಲಿ ಪೆಟ್ರೋಲ್ ಬೆಲೆ ದುಪ್ಪಟ್ಟಾದರೂ ಸಹ ಪ್ರತಿಭಟಿಸುವ ಶಕ್ತಿ ಈ ಜನಸಾಮಾನ್ಯನಲ್ಲಿದ್ದಂತೆ ತೋರುತ್ತಿಲ್ಲ. ದೈನಂದಿನ ಖರ್ಚು ವೆಚ್ಚಗಳನ್ನು ಸರಿದೂಗಿಸುವುದರಲ್ಲೇ ಹೈರಾಣಾಗಿದ್ದಾನೆ ಈ ಆಮ್ ಆದ್ಮಿ.
ಸುಪ್ರೀಂ ಕೋರ್ಟ್ – ಕಗ್ಗತ್ತಲಲ್ಲಿ ಆಶಾಕಿರಣ
ಪ್ರತಿಯೊಬ್ಬರೂ ಕೂಡ ಈ ದೇಶವನ್ನು ಲೂಟಿ ಮಾಡುತ್ತಿದ್ದಾರೆಯೋ ಎಂಬಂತೆ ತೋರುತ್ತಿದೆ. ಈ ನ್ಯಾಯಾಲಯವೇನಾದರೂ ಇಲ್ಲದಿದ್ದರೆ, ದೇಶದ ಗತಿಯೇನಾಗಿರುತ್ತಿತ್ತು? ಭಾರತದಲ್ಲಿ ಲೂಟಿ ಮಾಡಿ ವಿದೇಶದಲ್ಲಿ, ಸ್ವಿಸ್ ಬ್ಯಾಂಕುಗಳಲ್ಲಿ ಅಕ್ರಮವಾಗಿ ರಾಶಿ ಹಾಕಿರುವ ಕಪ್ಪುಹಣವೇ ಇರಲಿ, ಕಾಮನ್ವೆಲ್ತ್, 2ಜಿ ಹಗರಣಗಳೇ ಇರಲಿ; ಸುಪ್ರೀಂ ಕೋರ್ಟು ಏನಾದರೂ ಇಲ್ಲದೇ ಹೋಗಿದ್ದರೆ, ಒಬ್ಬನೂ ಕೂಡ ಈ ಪರಿಯಾಗಿ ಜೈಲಿಗೆ ಸಾಲುಗಟ್ಟಿ ಹೋಗುತ್ತಿರಲಿಲ್ಲ. ಕೇಂದ್ರ ಮಟ್ಟದಲ್ಲಿ ಭ್ರಷ್ಟಾಚಾರ ಆರೋಪದಲ್ಲಿ ಎ.ರಾಜಾ, ಕನಿಮೋಳಿ, ಸುರೇಶ್ ಕಲ್ಮಾಡಿ, ಅಮರ್ ಸಿಂಗ್, ಸುಧೀಂದ್ರ ಕುಲಕರ್ಣಿ ಮುಂತಾದ ಘಟಾನುಘಟಿಗಳು ಮತ್ತು ಕಾರ್ಪೊರೇಟ್ ಕಂಪನಿಗಳ ಒಡೆಯರು ತಿಹಾರ್ ಜೈಲಿನಲ್ಲಿದ್ದರೆ, ರಾಜ್ಯದಲ್ಲಿಯೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಜೈಲಿಗೆ ಹೋಗಿದ್ದಾರೆ. ಇನ್ನಿಬ್ಬರು ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಜೈಲು ಪಾಲಾಗದಂತೆ ತಡೆಯಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಾ, ಕೋರ್ಟಿಗೆ ಅಲೆದಾಡುತ್ತಿದ್ದಾರೆ. ರಾಜಕಾರಣಿಗಳ ಹಣದ ದುರಾಸೆ ಎಂಬುದು ಈ ದೇಶವನ್ನು ಯಾವ ಮಟ್ಟಕ್ಕೆ ತಲುಪಿಸಿದೆ!
ಇನ್ನು ಈ ದೇಶದ ಆಳ್ವಿಕೆಯ ಮುಖ್ಯ ರೂವಾರಿ, ಸಚ್ಚಾರಿತ್ರ್ಯವಂತ, ಸದ್ಗುಣ ಸಂಪನ್ನ, ಮೌನವೇ ಮೂರ್ತಿವೆತ್ತಂತಿರುವ ನಮ್ಮ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಅವರ ಸರಕಾರದ ಸದಸ್ಯರು. ಒಬ್ಬರಿಗಿಂತ ಒಬ್ಬರು ಮಿಗಿಲಾಗಿ ಚಾರಿತ್ರ್ಯವಧೆಯಲ್ಲಿ ನಿರತರಾದರೇ ಹೊರತು, ಆಡಳಿತದಲ್ಲಿ ಕ್ಷಮತೆ ತರುವತ್ತ ಅಷ್ಟೇ ಫೋರ್ಸ್‌ನಿಂದ ಗಮನ ಹರಿಸುವ ಬಗ್ಗೆ ಆಲೋಚಿಸುತ್ತಲೇ ಇಲ್ಲ! ಈಗ ಭ್ರಷ್ಟಾಚಾರದ ಬಗೆಗೆ ದೊಡ್ಡ ಕೋಲಾಹಲವೇರ್ಪಟ್ಟಿರುವುದು ಚುನಾವಣೆಗಳನ್ನು ಶೀಘ್ರವಾಗಿ ಹೇರಲು ಪ್ರತಿಪಕ್ಷಗಳ ಕುತಂತ್ರವೆಂದು ಪ್ರಧಾನಿಗಳೇ ಹೇಳತೊಡಗಿದ್ದಾರೆ! ನಮ್ಮ ಪ್ರಧಾನಿಯವರು ಹೀಗೇಕಾದರು? ಬೆಲೆ ಏರಿಕೆ ಬಗೆಗಾಗಲೀ, ತಮ್ಮ ಸಚಿವ ಸಂಪುಟ ಸದಸ್ಯರ ಬಗೆಗೆ ಆರೋಪಗಳು ಬಂದಿರುವ ಬಗೆಗಾಗಲೀ, ಅವರೇಕೆ ದೃಢ ನಿರ್ಧಾರ ಕೈಗೊಳ್ಳುವುದು ಸಾಧ್ಯವಾಗುತ್ತಿಲ್ಲ?
ಈಗ ಕಾಡುವ ನಾಲ್ಕು ಪ್ರಶ್ನೆಗಳು
1. 2008ರಲ್ಲಿ ಪತನದ ಅಂಚಿನಲ್ಲಿದ್ದ ಮನಮೋಹನ್ ಸಿಂಗ್ ಸರಕಾರವನ್ನು ಉಳಿಸಲು ನಡೆದಿದೆ ಎನ್ನಲಾಗುತ್ತಿರುವ “ಓಟಿಗಾಗಿ ನೋಟು” ಪ್ರಕರಣದಲ್ಲಿ ಹಣದ ವ್ಯವಹಾರವೇ ನಡೆದಿಲ್ಲ ಎಂದು ಸಂಸತ್ತಿನಲ್ಲೇ ಘೋಷಿಸಿದರು ನಮ್ಮ ಪ್ರಾಮಾಣಿಕ ಪ್ರಧಾನಿ ಮನಮೋಹನ್ ಸಿಂಗ್. ಆದರೆ ಘಟಾನುಘಟಿಗಳಾದ ಅಮರ್ ಸಿಂಗ್, ಸುಧೀಂದ್ರ ಕುಲಕರ್ಣಿ, ಸೊಹೇಲ್ ಹಿಂದೂಸ್ತಾನಿ, ಮಹಾವೀರ್ ಭಗೋಡಾ, ಫಗ್ಗಾನ್ ಸಿಂಗ್ ಕುಲಾಸ್ಥೆ ಜೈಲಿಗೆ ಹೋಗಿದ್ದು ಯಾಕಾಗಿ?
2. ದೆಹಲಿಯ ರಾಮಲೀಲಾ ಮೈದಾನದಲ್ಲಿ ಶಾಂತಿಯುತವಾಗಿ ಮಲಗಿ ನಿದ್ರಿಸುತ್ತಿದ್ದ ಸತ್ಯಾಗ್ರಹಿಗಳ ಮೇಲೆ ಮಕ್ಕಳು ಮರಿಗಳು ವೃದ್ಧರೆಂದು ಲೆಕ್ಕಿಸದೆ ಪೊಲೀಸರು ಎರಗಿದ್ದು ಎಲ್ಲ ಮಾಧ್ಯಮಗಳಲ್ಲಿ ಚಿತ್ರ, ವೀಡಿಯೋ ಸಮೇತ ಬಂದರೂ, ಲಾಠೀ ಚಾರ್ಜನ್ನೇ ನಡೆಸಿಲ್ಲ ಎಂದಿತು ಯುಪಿಎ. ಆದರೆ ರಾಜಬಾಲಾ ಎಂಬ ಮಹಿಳೆ ತೀವ್ರವಾಗಿ ಗಾಯಗೊಂಡು ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟ ಮಾಡಿ, ಕೊನೆಗೆ ಸಾವನ್ನಪ್ಪಿದ್ದಾರೆ. ಅದು ಹೇಗೆ?
3. 2ಜಿ ಹಗರಣದಲ್ಲಿ ಶೂನ್ಯ ನಷ್ಟ (ಝೀರೋ ಲಾಸ್) ಅಂತ ಘೋಷಿಸಿದ್ರು ಕಪಿಲ್ ಸಿಬಲ್ ಎಂಬ ಮಂತ್ರಿವರೇಣ್ಯರು. ಆದರೆ, ಎ.ರಾಜಾ, ಕನಿಮೋಳಿ, ಹಾಗೂ ಕಾರ್ಪೊರೇಟ್ ಕುಳಗಳೆಲ್ಲ ಜೈಲಿನಲ್ಲಿದ್ದಾರೆ. ದಯಾನಿಧಿ ಮಾರನ್ ಕೇಸು ಏನಾಯಿತೆಂದೇ ಗೊತ್ತಾಗ್ತಾ ಇಲ್ಲ, ಗೃಹ ಸಚಿವರ ಪದವಿಯೇ ಅಲುಗಾಡುತ್ತಿದೆ. ಇದೆಲ್ಲಾ ಆಗುತ್ತಿರುವುದು ಹೇಗೆ?
4. ಸಿಬಿಐ – ಒಂದು ಸ್ವತಂತ್ರ ಸ್ವಾಯತ್ತ ಸಂಸ್ಥೆ, ಸರಕಾರದ ನಿಯಂತ್ರಣವೇ ಇಲ್ಲ, ಅದು ತಾನಾಗಿಯೇ ಕ್ರಮ ಕೈಗೊಳ್ಳುತ್ತದೆ ಎಂದು ಯುಪಿಎ ಸರಕಾರ ಪದೇ ಪದೇ ಘೋಷಿಸುತ್ತಿದೆ. ಆದರೆ, 2ಜಿ ಹಗರಣದಲ್ಲಿ ಪಾತ್ರದ ಬಗೆಗೆ ಸಾಕ್ಷ್ಯಾಧಾರಗಳೆಲ್ಲಾ ದೊರಕಿ, ಕ್ಲೀನ್ ಪ್ರಧಾನಿಯ ಇಮೇಜು ನಷ್ಟವಾಗುವ ಹಂತದಲ್ಲಿರುವಾಗ, ನಮ್ಮದೇ ಗೃಹ ಸಚಿವರ ಮೇಲೆ ತನಿಖೆ ನಡೆಸುವುದೇ ಇಲ್ಲ ಎನ್ನುತ್ತಿದೆ ಅತ್ಯುತ್ತಮ ತನಿಖೆ ನಡೆಸುವ ಸರ್ವತಂತ್ರ ಸ್ವತಂತ್ರ ಸಿಬಿಐ! ಕೇವಲ ಶಂಕೆಯ ಸುಳಿ ಸಿಕ್ಕರೂ ಸಾಕು, ಯಾರನ್ನೂ ಬಂಧಿಸಬಲ್ಲ ಛಾತಿಯುಳ್ಳ ಸಿಬಿಐ, ಬೋಫೋರ್ಸ್ ಪ್ರಕರಣದಲ್ಲಿ ಒಟ್ಟಾವಿಯೋ ಕ್ವಟ್ರೋಚಿ ವಿರುದ್ಧ ಸಾಕ್ಷ್ಯಾಧಾರಗಳೇ ಇಲ್ಲ, ಕೇಸು ಮುಚ್ಚಿಬಿಡಿ ಎಂದು ಕೋರ್ಟಿನಲ್ಲಿ ವಾದಿಸಿದ ಸಿಬಿಐ, ಇಷ್ಟೊಂದು ದೊಡ್ಡ ಮಟ್ಟದ ಗದ್ದಲ ಕೇಳಿಬರುತ್ತಿರುವಾಗಲೂ ಚಿದಂಬರಂ ಮೇಲೆ ತನಿಖೆ ನಡೆಸುವುದೇ ಇಲ್ಲ ಎಂದು ಹಠ ಹಿಡಿದು ಕೂತಿರುವುದು ಏಕೆ?
2ಜಿ ಹಗರಣ ಹಿಂದಿದೆಯೇ ಭಯಾನಕ ಸತ್ಯಗಳು?
ಈ 2ಜಿ ಹಗರಣ ಎಂಬುದು ನಾವು ನೀವು ಅಂದುಕೊಂಡಷ್ಟು ಸಣ್ಣ ಪ್ರಮಾಣದ್ದೇನಲ್ಲ. ಜನತಾ ಪಾರ್ಟಿ ಎಂಬ ಏಕ ಸಂಸದ ಪಕ್ಷದ ಮುಖ್ಯಸ್ಥ, ಆಕ್ಸ್‌ಫರ್ಡ್ ಪ್ರೊಫೆಸರ್ ಡಾ.ಸುಬ್ರಹ್ಮಣ್ಯಂ ಸ್ವಾಮಿ ಅವರು 2ಜಿ ಹಗರಣ ಬಯಲಿಗೆಳೆಯುತ್ತಾ, ಒಬ್ಬೊಬ್ಬರ ಹೆಸರನ್ನೇ ಕೋರ್ಟಿಗೆ ಹೋಗಿ ಆಚೆಗೆ ತರುತ್ತಿದ್ದಾರೆ. ಎ.ರಾಜಾ, ದಯಾನಿಧಿ ಮಾರನ್, ಮತ್ತು ಈಗ ಚಿದಂಬರಂ ಅವರ ಹೆಸರೆಲ್ಲಾ ಬಂದಿದೆ. ಈಗ ಈ ಸ್ಪೆಕ್ಟ್ರಂ ಹಂಚಿಕೆಯಲ್ಲಿ ಯಾವುದೇ ನಿರ್ಧಾರ ಕೈಗೊಂಡಿರುವುದು ಒಂದು ಸರಕಾರದ ಸಾಮೂಹಿಕ ಹೊಣೆಗಾರಿಕೆ ಎಂಬುದಕ್ಕೆ ಎರಡು ಮಾತಿಲ್ಲ. ಹೀಗಾಗಿ ಸರಕಾರದ ಮುಖ್ಯಸ್ಥರಾಗಿರುವ ಪ್ರಧಾನಿಯೂ ಹೊಣೆಗಾರಿಕೆ ಹೊರಬೇಕಾಗುತ್ತದೆ. ಆನಂತರ, ಡಾ.ಸ್ವಾಮಿ ಈಗಾಗಲೇ ಹೇಳಿರುವಂತೆಯೇ…. ಮುಂದಿನ ಸರದಿ… ಸೋನಿಯಾ ಗಾಂಧಿ ಮನೆ ಬಾಗಿಲಿಗೆ. ಅಂದರೆ ಸೋನಿಯಾ ಗಾಂಧಿಯ ಅಳಿಯ, ಪ್ರಿಯಾಂಕಾ ವಾದ್ರಾಳ ಪತಿ, ಭಾರೀ ಸಾಮ್ರಾಜ್ಯವುಳ್ಳ ಉದ್ಯಮಿ ರಾಬರ್ಟ್ ವಾದ್ರಾ ಅವರು ಕೂಡ 2ಜಿ ಹಗರಣದಲ್ಲಿ ಪಾಲುದಾರರು, ಈ ಬಗ್ಗೆ ದಾಖಲೆ ಒಪ್ಪಿಸುತ್ತೇನೆ ಎಂದಿದ್ದಾರೆ ಡಾ.ಸ್ವಾಮಿ.
ಭ್ರಷ್ಟಾಚಾರ ಬಯಲಿಗೆಳೆದವರೂ ಜೈಲು ಪಾಲಾಗುತ್ತಿದ್ದಾರೆ, ಶಾಂತಿಯುತವಾಗಿ ಸತ್ಯವನ್ನು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರನ್ನು ಛೂಬಿಡಲಾಗುತ್ತದೆ, ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರನ್ನು ಕೇಳುವವರಿಲ್ಲವಂತಾಗಿದೆ, ಮತ್ತು ಕೇವಲ 25 ರೂಪಾಯಿಗಿಂತ ಹೆಚ್ಚು ಖರ್ಚು ಮಾಡಬಲ್ಲವರು ಬಡವರಲ್ಲ ಎಂದು ನಮ್ಮ ಯೋಜನಾ ಆಯೋಗವೇ ಸುಪ್ರೀಂ ಕೋರ್ಟಿಗೆ ಬರೆದುಕೊಡುತ್ತದೆ… ಹಾಗಿದ್ದರೆ ಸೂಪರ್ ಪವರ್ ಆಗಹೊರಟಿರುವ ಭಾರತಕ್ಕೆ ಏನಾಗುತ್ತಿದೆ?
[ವೆಬ್‌ದುನಿಯಾಕ್ಕಾಗಿ]