Memory Card ಖರೀದಿಸುವ ಮುನ್ನ ನೀವು ತಿಳಿದಿರಬೇಕಾದ ವಿಚಾರಗಳು

0
235

‘ಅಂಗೈಯಲ್ಲಿ ಜಗತ್ತು’ ಎಂಬುದಕ್ಕೆ ಸ್ಮಾರ್ಟ್ ಫೋನ್‌ಗಳು ಪರ್ಯಾಯವಾಗಿಬಿಟ್ಟಿವೆ ಮತ್ತು ಅವುಗಳಲ್ಲಿರುವ ಅತ್ಯಾಧುನಿಕ ಕ್ಯಾಮೆರಾಗಳ ಮೂಲಕ ಈಗ ಎಲ್ಲರೂ ಫೋಟೋಗ್ರಾಫರುಗಳೇ ಆಗಿಬಿಟ್ಟಿದ್ದಾರೆ. ಇದರ ಜತೆಗೆ ಸೆಲ್ಫೀ, ಲೈವ್ ವೀಡಿಯೋ ಇತ್ಯಾದಿತ್ಯಾದಿ. ಹೀಗಿರುವುದರಿಂದ ಆಡಿಯೋ, ವೀಡಿಯೋ, ಫೋಟೋ ಫೈಲುಗಳನ್ನು ಸೇವ್ ಮಾಡಿಟ್ಟುಕೊಳ್ಳಲು ಸ್ಮಾರ್ಟ್‌ಫೋನ್‌ಗಳಲ್ಲಿ ಇರುವ ಜಾಗ ಸಾಲುತ್ತಿಲ್ಲ. ಈ ಫೈಲುಗಳನ್ನು ಪದೇ ಪದೇ ಕಂಪ್ಯೂಟರಿಗೆ ವರ್ಗಾಯಿಸಿ ಫೋನಲ್ಲಿ ಸ್ಥಳಾವಕಾಶ ಮಾಡಿಕೊಳ್ಳುವುದು ಕಷ್ಟದ ಕೆಲಸ. ಈ ಸಮಸ್ಯೆ ಪರಿಹಾರಕ್ಕೆ ಬಂದವು ಎಕ್ಸ್‌ಟರ್ನಲ್ ಮೆಮೊರಿ ಕಾರ್ಡುಗಳು.

ಫೋನ್, ಕ್ಯಾಮೆರಾ ಅಥವಾ ಯಾವುದೇ ಅನ್ಯ ಡಿಜಿಟಲ್ ಸಾಧನದಲ್ಲಿ ಮೆಮೊರಿ ಎಂದರೆ ಡಿಜಿಟಲ್ ಫೈಲುಗಳನ್ನು ಸೇವ್ ಮಾಡಿಟ್ಟುಕೊಳ್ಳುವ ಜಾಗ ಅಥವಾ ಸ್ಥಳಾವಕಾಶ ಅಥವಾ ಸಂಗ್ರಹಣಾ (ಸ್ಟೋರೇಜ್) ಸ್ಥಳ. ವಾಟ್ಸಾಪ್ ಮತ್ತಿತರ ಸಾಮಾಜಿಕ ತಾಣಗಳು, ಸೆಲ್ಫೀ ಇತ್ಯಾದಿಗಳನ್ನೊಳಗೊಂಡಂತೆ ಈಗಿನ ಬಳಕೆಯ ಪ್ರಕಾರ, ಸ್ಮಾರ್ಟ್‌ಫೋನ್‌ಗಳಲ್ಲಿ ಕನಿಷ್ಠ 16 ಜಿಬಿ ಆಂತರಿಕ ಮೆಮೊರಿ ಬೇಕೇ ಬೇಕು. ಹೆಚ್ಚು ಫೈಲುಗಳನ್ನು ಸೇವ್ ಮಾಡಿಟ್ಟುಕೊಳ್ಳಲು ನೆರವಾಗುವಂತೆ ಫೋನ್‌ಗಳಲ್ಲಿ ಬಾಹ್ಯ ಮೆಮೊರಿ ಕಾರ್ಡ್ ಅಳವಡಿಸಿಕೊಳ್ಳುವ ಆಯ್ಕೆಯಿದೆ. ಇಂಥಹ ಬಾಹ್ಯ ಮೆಮೊರಿ ಕಾರ್ಡುಗಳಲ್ಲಿ ಹಲವಾರು ವಿಧಗಳಿವೆ, ಅವುಗಳನ್ನು ತಿಳಿದುಕೊಳ್ಳುವುದು ಹೇಗೆ, ಯಾವುದನ್ನು ಖರೀದಿಸಬೇಕು ಎಂಬ ಮೂಲಭೂತ ಮಾಹಿತಿ ಇಲ್ಲಿದೆ.

ಸ್ಮಾರ್ಟ್ ಫೋನ್, ಡಿಜಿಟಲ್ ಕ್ಯಾಮೆರಾ, ಟ್ಯಾಬ್ಲೆಟ್, ಮ್ಯೂಸಿಕ್ ಪ್ಲೇಯರ್ ಮಾತ್ರವಲ್ಲದೆ ಕೆಲವು ಲ್ಯಾಪ್‌ಟಾಪ್‌ಗಳಲ್ಲಿಯೂ ಸೆಕ್ಯೂರ್ ಡಿಜಿಟಲ್ (ಎಸ್‌ಡಿ) ಕಾರ್ಡ್‌ಗಳನ್ನು ಬಳಸಲಾಗುತ್ತವೆ. ಇವೇ ನಮ್ಮ ನಿಮ್ಮ ಪರಿಭಾಷೆಯಲ್ಲಿ ಮೆಮೊರಿ ಕಾರ್ಡ್‌ಗಳು. ಸ್ಟೋರೇಜ್ ಸಾಮರ್ಥ್ಯ, ಅವುಗಳಿಗೆ ಫೈಲುಗಳು ಕಾಪಿ ಆಗಬಹುದಾದ ವೇಗ, ಗಾತ್ರ ಅನುಸರಿಸಿ ವಿಭಿನ್ನ ವಿಧಗಳಿವೆ. ಕ್ಯಾಮೆರಾಗಳಿಗಾದರೆ, ಈ ಎಸ್‌ಡಿ ಕಾರ್ಡ್‌ಗಳೇ ಪ್ರಧಾನ ಸ್ಟೋರೇಜ್ ಸ್ಥಳ. ಬೇರೆ ಬೇರೆ ಡಿಜಿಟಲ್ ಸಾಧನಗಳಿಗೆ ವಿಭಿನ್ನ ಎಸ್‌ಡಿ ಕಾರ್ಡ್‌ಗಳು ಬೇಕು.

ವೇಗ/ಕ್ಲಾಸ್
ಯಾವುದೇ ಫೈಲುಗಳನ್ನು (ಆಡಿಯೋ, ವೀಡಿಯೋ, ಫೋಟೋ ಮತ್ತಿತರ) ಎಷ್ಟು ವೇಗವಾಗಿ ನಕಲಿಸಬಹುದು ಅಂದರೆ ಕಾಪಿ ಮಾಡಬಹುದು ಎಂಬುದು ಕೂಡ ಮುಖ್ಯವಾಗುತ್ತದೆ. ವೃತ್ತಿಪರ ಫೋಟೋಗ್ರಾಫರುಗಳಾದರೆ, ಹೈ ರೆಸೊಲ್ಯುಶನ್ ಇರುವ ಚಿತ್ರಗಳನ್ನು ತೆಗೆದು ಆಗಾಗ್ಗೆ ಕಾಪಿ ಮಾಡಬೇಕಾಗುತ್ತದೆ. ಇದಕ್ಕೆ ಗರಿಷ್ಠ ವೇಗದ ಎಸ್‌ಡಿ ಕಾರ್ಡ್ ಬೇಕು. ಹೈ ರೆಸೊಲ್ಯುಶನ್ ವೀಡಿಯೋ ರೆಕಾರ್ಡಿಂಗ್‌ಗೂ ವೇಗದ ಕಾರ್ಡ್ ಬೇಕಾಗುತ್ತದೆ. ಕೆಲವೇ ಕೆಲವು ಫೋಟೋ, ವೀಡಿಯೋ ತೆಗೆಯುವವರಾದರೆ ಸ್ಪೀಡ್ ಮುಖ್ಯವಾಗಲಾರದು. ಈ ರೀತಿ ಕಾರ್ಡ್‌ಗಳ ಸ್ಪೀಡ್ ನಿರ್ಧರಿಸಲು ‘ಸ್ಪೀಡ್ ಕ್ಲಾಸ್’ ನಮೂದಿಸಲಾಗುತ್ತದೆ. ಸದ್ಯಕ್ಕೆ 10, 6, 4 ಮತ್ತು 2 ಕ್ಲಾಸ್ (ದರ್ಜೆ) ವಿಭಾಗಗಳಿವೆ. 10 ನಂಬರ್ ಇದ್ದರೆ ಅತ್ಯಂತ ವೇಗವಾಗಿ ಕಾಪಿ ಆಗಬಲ್ಲುದು ಅಂತ ತಿಳಿದುಕೊಳ್ಳಬಹುದು. ಫುಲ್ ಹೆಚ್‌ಡಿ ಗುಣಮಟ್ಟದ ವೀಡಿಯೋ ರೆಕಾರ್ಡಿಂಗ್‌ಗೆ ಇದು ಅಗತ್ಯ. ಸಾಮಾನ್ಯ ಬಳಕೆದಾರರಿಗಾದರೆ ಡಿಜಿಟಲ್ ಕ್ಯಾಮೆರಾ, ಸ್ಮಾರ್ಟ್ ಫೋನು ಅಥವಾ ಟ್ಯಾಬ್ಲೆಟ್‌ಗಳಿಗೆ ಕ್ಲಾಸ್ 4 ಅಥವಾ ಕ್ಲಾಸ್ 6 ಸಾಕಾಗುತ್ತದೆ. ಇದರ ಜತೆಗೆ ವೃತ್ತಿಪರರಿಗಾಗಿಯೇ ಅಲ್ಟ್ರಾ ಹೈಸ್ಪೀಡ್ (ಯುಹೆಚ್‌ಎಸ್) ಸ್ಪೀಡ್ ಕ್ಲಾಸ್ 1 ಮತ್ತು 3 ಅಂತ ಇದೆ. ಬೆಂಬಲಿಸುವ ಸಾಧನಗಳಲ್ಲಿ ಮಾತ್ರ ಅವು ಕೆಲಸ ಮಾಡಬಲ್ಲವು. ಕ್ಲಾಸ್ 10 ಹಾಗೂ ಯುಹೆಚ್ಎಸ್ ಕಾರ್ಡ್‌ಗಳ ಬೆಲೆ ಹೆಚ್ಚು. ಮೆಮೊರಿ ಕಾರ್ಡ್‌ಗಳ ಮೇಲೆ ಅವು ಯಾವ ರೀತಿಯವು ಎಂಬ ಬಗ್ಗೆ ಸಾಂಕೇತಿಕ ರೂಪದಲ್ಲಿ ಮುದ್ರಿಸಿರಲಾಗುತ್ತದೆ.

ಮೆಮೊರಿ ಕಾರ್ಡ್ ಗಾತ್ರ
ಎಸ್‌ಡಿ ಕಾರ್ಡ್‌ಗಳಲ್ಲಿ ಗಾತ್ರಕ್ಕನುಗುಣವಾಗಿ ಸ್ಟ್ಯಾಂಡರ್ಡ್, ಮಿನಿ-ಎಸ್‌ಡಿ ಕಾರ್ಡ್ ಹಾಗೂ ಮೈಕ್ರೋ-ಎಸ್‌ಡಿ ಕಾರ್ಡ್‌ಗಳೆಂಬ ವಿಧಗಳಿವೆ. ಹೆಚ್ಚಿನ ಡಿಜಿಟಲ್ ಕ್ಯಾಮೆರಾಗಳು ಎಲ್ಲಕ್ಕಿಂತ ದೊಡ್ಡದಿರುವ ಸ್ಟ್ಯಾಂಡರ್ಡ್ ಎಸ್‌ಡಿ ಕಾರ್ಡ್‌ಗಳನ್ನೂ, ಈಗಿನ ಬಹುತೇಕ ಎಲ್ಲ ಸ್ಮಾರ್ಟ್ ಫೋನ್‌ಗಳು ಚಿಕ್ಕದಾಗಿರುವ ಮೈಕ್ರೋ ಎಸ್‌ಡಿ ಕಾರ್ಡ್‌ಗಳನ್ನೂ ಬಳಸುತ್ತವೆ. ಮಧ್ಯಮ ಗಾತ್ರದ ಮಿನಿ ಎಸ್‌ಡಿ ಕಾರ್ಡ್‌ಗಳ ಬಳಕೆ ಈಗ ತೀರಾ ಕಡಿಮೆ. ಆಯಾ ಡಿಜಿಟಲ್ ಸಾಧನಗಳಲ್ಲಿರುವ ಎಸ್‌ಡಿ ಕಾರ್ಡ್ ಸ್ಲಾಟ್‌ಗಳಿಗೆ ಹೊಂದಿಕೆಯಾಗುವುದನ್ನು ಖರೀದಿಸಬೇಕಾಗುತ್ತದೆ.

ಮೆಮೊರಿ ಸಾಮರ್ಥ್ಯ
ಯುಎಸ್‌ಬಿ ಫ್ಲ್ಯಾಶ್ ಡ್ರೈವ್ ಅಂದರೆ ಸರಳವಾಗಿ ಹೇಳಲಾಗುವ ಪೆನ್ ಡ್ರೈವ್‌ಗಳಂತೆಯೇ, ಎಸ್‌ಡಿ ಕಾರ್ಡ್‌ಗಳಲ್ಲಿಯೂ ಇಂತಿಷ್ಟು ಸ್ಟೋರೇಜ್ (ಫೈಲ್‌ಗಳ ಸಂಗ್ರಹಣೆ) ಸಾಮರ್ಥ್ಯ ಅಂತ ಇರುತ್ತದೆ. ಉದಾಹರಣೆಗೆ 1 ಜಿಬಿ, 2 ಜಿಬಿ, 4 ಜಿಬಿ, 8, 16, 32, 64, 128 ಜಿಬಿ ಅಂತೆಲ್ಲ ಇರುತ್ತವೆ. ನಿಮ್ಮ ಫೋನ್/ಕ್ಯಾಮೆರಾದಲ್ಲಿ ಎಷ್ಟು ಜಿಬಿವರೆಗಿನ ಕಾರ್ಡ್ ಅಳವಡಿಸಬಹುದು ಅಂತ ನೋಡಿಕೊಂಡು ಖರೀದಿಸಬೇಕಾಗುತ್ತದೆ.

ಎಸ್‌ಡಿ ಸ್ಟ್ಯಾಂಡರ್ಡ್ ಕೆಪಾಸಿಟಿ (SDSC) ಕಾರ್ಡ್‌ಗಳು ಈಗ ಹಳತಾಗಿವೆ. ಅವುಗಳ ಮಿತಿ 1 ಎಂಬಿಯಿಂದ 2 ಜಿಬಿವರೆಗೆ ಮಾತ್ರ. ನಂತರ, 2 ಜಿಬಿಯಿಂದ 32 ಜಿಬಿವರೆಗೂ ಸಾಮರ್ಥ್ಯವಿರುವ SDHC (ಹೈ ಕೆಪಾಸಿಟಿ) ಕಾರ್ಡ್‌ಗಳಿವೆ. ತೀರಾ ಇತ್ತೀಚೆಗೆ ಬಂದವು ಗರಿಷ್ಠ ಸಾಮರ್ಥ್ಯದ SDXC (ಎಕ್ಸ್‌ಟೆಂಡೆಡ್ ಕೆಪಾಸಿಟಿ) ಕಾರ್ಡ್‌ಗಳು. ಇವುಗಳ ಸಾಮರ್ಥ್ಯ 32ಜಿಬಿಯಿಂದ 2 ಟೆರಾಬೈಟ್ (ಟಿಬಿ)ವರೆಗೂ ಇರಬಹುದಾಗಿವೆ. SDSC ಅಥವಾ SDXC ಬಳಸಬೇಕಿದ್ದರೆ, ನಿಮ್ಮ ಫೋನ್ ಅವುಗಳನ್ನು ಸಪೋರ್ಟ್ ಮಾಡುತ್ತದೆಯೇ ಎಂದು ಮೊದಲೇ ತಿಳಿದುಕೊಂಡಿರಬೇಕು. ಈಗ ಹೆಚ್ಚಿವರು ಬಳಸುತ್ತಿರುವುದು SDSC ಮೆಮೊರಿ ಕಾರ್ಡ್‌ಗಳನ್ನು.

ಸಲಹೆ: MicroSD ಕಾರ್ಡ್ ಇದ್ದರೆ, ಬೆಂಬಲಿಸಬಲ್ಲ ಸಾಧನಗಳಿಗೆ ಅಳವಡಿಸಲು ಮಿನಿ ಅಥವಾ ಸ್ಟ್ಯಾಂಡರ್ಡ್ ಗಾತ್ರಕ್ಕೆ ದೊಡ್ಡದಾಗಿಸಬಲ್ಲ ಅಡಾಪ್ಟರ್‌ಗಳು ದೊರೆಯುತ್ತವೆ.
—-
ಗಮನಿಸಿ: ಎಸ್ಸೆಮ್ಮೆಸ್ ಕಳುಹಿಸುವ ಮೂಲಕ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ಕುರಿತು ಕಳೆದ ವಾರ ಮಾಹಿತಿ ನೀಡಿದ್ದೆ. ಇದರ ಬಗ್ಗೆ ಕೆಲವು ಓದುಗರು ಕರೆ ಮಾಡಿ ಸಂದೇಹ ವ್ಯಕ್ತಪಡಿಸಿದ್ದಾರೆ. ಉಳಿದವರಿಗೂ ತಿಳಿದಿರಲೆಂಬ ಉದ್ದೇಶದಿಂದ ಈ ಮಾಹಿತಿ. ಆಧಾರ್-ಪ್ಯಾನ್ ಕಾರ್ಡ್ ಲಿಂಕ್ ಮಾಡುವಾಗ ಮೊಬೈಲ್ ನಂಬರು ಆಧಾರ್‌ಗೆ ಮತ್ತು ಪ್ಯಾನ್ ನಂಬರ್‌ಗೆ ಮೊದಲೇ ನೋಂದಾವಣೆಗೊಂಡಿರಬೇಕು. ರಿಜಿಸ್ಟರ್ಡ್ ಮೊಬೈಲ್ ನಂಬರ್‌ನಿಂದ ಎಸ್ಸೆಮ್ಮೆಸ್ ಕಳುಹಿಸಿದರೆ ಮಾತ್ರ, ಆಧಾರ್-ಪಾನ್ ಕಾರ್ಡ್ ಲಿಂಕ್ ಆಗಿರುವ ದೃಢೀಕರಣ ಸಂದೇಶ ಬರುತ್ತದೆ.

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. (12 ಜೂನ್ 2017 ವಿಜಯ ಕರ್ನಾಟಕ ಸಂಚಿಕೆ)

LEAVE A REPLY

Please enter your comment!
Please enter your name here