ಜಗತ್ತಿನ ಬದಲು ಮನಸ್ಸು ಸಂಕುಚಿತವಾಗುವುದೇಕೆ?

0
299

ಜಗತ್ತು ವಿಶಾಲವಾಗಿದೆ ಎಂಬುದೊಂದು ಕಡೆಯಾದರೆ, ಆಧುನಿಕ ತಂತ್ರಜ್ಞಾನಗಳ ಕಾರಣದಿಂದ ಜಗತ್ತು ಕಿರಿದಾಗುತ್ತಿದೆ ಎಂಬ ಮಾತೂ ಅಷ್ಟೇ ಸತ್ಯ. ಆದರೆ ಅದರ ಜತೆ ಜತೆಗೆಯೇ ಸಮಾಜದ ಮನಸ್ಸುಗಳೂ ಇಷ್ಟೊಂದು ಸಂಕುಚಿತವಾಗುತ್ತಿವೆಯೇ? ಅಥವಾ ನಮ್ಮಲ್ಲಿನ ತಾಳುವಿಕೆಯ ಮನೋಭಾವ ಕುಗ್ಗುತ್ತಿದೆಯೇ? ಅಥವಾ ಮನುಷ್ಯ ಮನುಷ್ಯರನ್ನು ಹಲವಾರು ದೃಷ್ಟಿಕೋನಗಳ ಮೂಲಕ ಬೆಸೆಯುವ ಈ ‘ಪ್ರೀತಿ’ ಎಂಬುದರ ಮಾಯೆ ಇಷ್ಟು ಸಾಮರ್ಥ್ಯವುಳ್ಳದ್ದೇ?

ತೀರಾ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸುತ್ತಿದ್ದರೆ, ಬಹುತೇಕ ದೊರೆಯುವ ಉತ್ತರ ‘ಹೌದು’. ಮನೆಮಗಳು ದಲಿತ ಕುಟುಂಬಕ್ಕೆ ಸೇರಿದ ವ್ಯಕ್ತಿಯೊಬ್ಬನನ್ನು ಪ್ರೇಮಿಸಿ ಓಡಿ ಹೋದಳು ಎಂಬುದೇ ಕಾರಣವಾಗಿ ಇಡೀ ಕುಟುಂಬವೇ ಸ್ವಯಂ ನಾಶ ಮಾಡಿಕೊಂಡ ಘಟನೆಯನ್ನು ನೀವು ಇಲ್ಲಿ ಓದಿದ್ದೀರಿ. ಇದು ಕೇಳಿದಾಗ ಆಘಾತವಾಗುವುದು, ಮಾನವೀಯ ಸಂಬಂಧಗಳು ಇಷ್ಟೊಂದು ದುರ್ಬಲ ಕೊಂಡಿಯಿಂದ ಬೆಸೆದುಕೊಂಡಿವೆಯೇ ಎಂಬ ಸಂದೇಹ ಏಳುವುದು ಸಹಜ.

ಹೊಸ ಸಂಸ್ಕೃತಿಗಳು, ಹೊಸತನ ನಮ್ಮ ಜೀವನದಲ್ಲಿ ಯಾವತ್ತೂ ಹಾಸುಹೊಕ್ಕಾಗಿರುತ್ತದೆ. ಅದಕ್ಕೆ ಹೊಂದಿಕೊಂಡು ನಾವು ಬೆಳೆಯುವುದು ನಮ್ಮ ಜಾಯಮಾನವೂ ಹೌದು, ಜಾಣತನವೂ ಹೌದು. ಬದಲಾಗುತ್ತಿರುವ ಜಗತ್ತಿನೊಂದಿಗೆ ಹೊಂದಿಕೊಂಡರೆ ಏಳಿಗೆ ಸಾಧಿಸಬಹುದು ಎಂಬ ಹಿರಿಯರ, ಅನುಭವಿಗಳ ಮಾತುಗಳನ್ನು ಮನದಲ್ಲಿಟ್ಟುಕೊಂಡರೆ ಇಂಥಹಾ ಅವಿವೇಕದ ನಿರ್ಧಾರಗಳಿಗೆ ಕಡಿವಾಣ ಹಾಕಬಹುದಿತ್ತು.

ಇದೀಗ ಮಗಳು ಬೇರೆಯವರ ಜೊತೆ ಓಡಿ ಹೋದಳು ಎಂಬ ಕಾರಣಕ್ಕೆ, ಕುಟುಂಬದಲ್ಲಿ ಪ್ರಾಯಕ್ಕೆ ಬಂದ ಮಗ, ಮಗಳು ಜೊತೆಗೆ ಅಪ್ಪ ಅಮ್ಮ ಕೈಯಾರೆ ತಮ್ಮ ಜೀವನವನ್ನೇ ಕೊನೆಗೊಳಿಸಿದ್ದರಿಂದ ಆದ ಲಾಭವಾದರೂ ಏನು? ಸಮಾಜಕ್ಕೇನಾದರೂ ಇದರಿಂದ ಒಳ್ಳೆಯ ಸಂದೇಶ ದೊರೆಯಿತೇ? ಅದೂ ಇಲ್ಲ.

ಇಂದಿನ ಪೀಳಿಗೆ ಹಿಂದಿನ ಪೀಳಿಗೆಯಂತಲ್ಲ. ಅವರಿಗೆ ಬೇಗನೇ ಜೀವನಾನುಭವ ದೊರೆಯುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಭವಿಷ್ಯ ನಿರ್ಧಾರದ ವಿಷಯದಲ್ಲಿ ಆತುರ ತೋರುತ್ತಾರೆ ಎಂದೇನೂ ಹೇಳುವಂತಿಲ್ಲ. ಇಲ್ಲಿ ಹೆತ್ತವರು ಆತುರ ಪಟ್ಟರು ಎಂಬ ವಾದ ಒಂದು ಕಡೆಯಾದರೆ, ಮಗಳು ಕೂಡ ಹೆತ್ತವರನ್ನು ಧಿಕ್ಕರಿಸಿ ಹೋಗುವ ಮೊದಲು ಒಂದಿಷ್ಟು ಯೋಚಿಸಬೇಕಾಗಿತ್ತು ಎಂಬುದು ಮತ್ತೊಂದು ವಾದ. ಓಡಿ ಹೋದ ಮಾತ್ರಕ್ಕೆ ಇಡೀ ಜೀವನ ಸಾರ್ಥಕ್ಯವಾಗುವುದಿಲ್ಲ. ಅದು ಹೊಸದೊಂದು ಜೀವನದ ಆರಂಭವಷ್ಟೇ. ನಿಜವಾದ, ಬಿಟ್ಟಿರಲಾಗದ ಪರಿಶುದ್ಧ ಪ್ರೇಮದಿಂದಲೋ, ಹರೆಯದ ಮತ್ತಿನಲ್ಲಿಯೋ, ಇಂಥದ್ದೊಂದು ನಿರ್ಧಾರಗಳನ್ನು ಯುವ ಮನಸ್ಸುಗಳು ತೆಗೆದುಕೊಳ್ಳುತ್ತವೆಯೆಂದಾದರೆ, ಮುಂದೆ ಬರುವ ಸವಾಲುಗಳನ್ನು ಎದುರಿಸಲೂ ಸಿದ್ಧರಿರಬೇಕಾಗುತ್ತದೆ. ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು ಎಂಬ ಸಾಲುಗಳು ಈಗಿನ ಹುಡುಗರ ಬಾಯಲ್ಲಿ ಹರಿದಾಡುತ್ತಿದ್ದರೂ, ನಮ್ಮನ್ನು ಹೆತ್ತು ಹೊತ್ತು ಸಾಕಿ ಸಲಹಿ, ದೊಡ್ಡವರನ್ನಾಗಿಸಿದ ದೇವತಾ ಸಮಾನರಾದ ತಂದೆ ತಾಯಿಗಳಿದ್ದಾರಲ್ಲಾ… ಅವರ ಮನಸ್ಸೂ ನೋಯಿಸಿದೇ ಮುಂದುವರಿಯುವುದು ಜಾಣತನವೂ ಹೌದು. ಒಂದು ಸಣ್ಣ ತಪ್ಪು, ಇಡೀ ಕುಟುಂಬವನ್ನು ದುಃಖದ ಮಡುವಿಗೆ ನೂಕುತ್ತದೆ ಎಂದಾದರೆ, ಈ ಕುರಿತು ಮಗದೊಮ್ಮೆ ಆಲೋಚಿಸುವುದು ಒಳಿತು.

ತಾಳುವಿಕೆಗಿಂತನ್ಯ ತಪವು ಇಲ್ಲ ಎಂದಿದ್ದಾರೆ ದಾಸವರೇಣ್ಯರು. ಇಲ್ಲಿ ಯೋಚಿಸಬೇಕಾದ ಸಂಗತಿಯೆಂದರೆ ಮನುಷ್ಯನ ತಾಳುವಿಕೆ ಮಿತಿ ಇಷ್ಟು ದುರ್ಬಲ ಹಂತಕ್ಕೆ ಬಂದು ನಿಂತಿದೆಯೇ? ಮಗಳು ಇಷ್ಟಪಟ್ಟವಳನ್ನು ಮದುವೆಯಾಗಿದ್ದಾಳೆ, ಅವಳೇ ನೋಡಿಕೊಂಡ ಮಾರ್ಗದಿಂದ ಸುಖವಾಗಿರುತ್ತಾಳೆ ಎಂದುಕೊಂಡು ಮುಗುಮ್ಮಾಗಿರುವುದು ಬಿಟ್ಟು, ಅವಳಿಗೆ ಪಾಠ ಕಲಿಸಬೇಕು ಎಂಬ ಹಠಕ್ಕೆ ಬಿದ್ದಂತೆ ತಮ್ಮ ಜೀವನವನ್ನೇ ಕೊನೆಗೊಳಿಸುವುದೆಂದರೆ? ಅದಕ್ಕೆ ಬದಲು, ಒಂದಿಷ್ಟು ಕೂತು ಚರ್ಚಿಸಿದ್ದಿದ್ದರೆ, ಸರ್ವರ ಬಾಳೂ ಸುಂದರವಾಗಿರುತ್ತಿತ್ತಲ್ಲಾ? ಆ ಒಂದೇ ಒಂದು ದುರದೃಷ್ಟಕರ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರ ಅದೆಂತು ಒಂದಿಡೀ ಕುಟುಂಬವನ್ನು ಬಲಿ ತೆಗೆದುಕೊಂಡಿತು? ಇಷ್ಟಾದರೆ ಆ ಹೆಣ್ಣು ಮಗಳಾದರೂ ಮುಂದಿನ ಜೀವನವನ್ನು ನೆಮ್ಮದಿಯಿಂದ ಕಳೆಯುವುದು ಸಾಧ್ಯವೇ? ಮತ್ತೊಂದು ದಾರುಣ ಸಂಗತಿಯೆಂದರೆ ಇಬ್ಬರು ಯುವ ಜೀವಿಗಳು- 22ರ ದಾಲಿನಿ ಮತ್ತು 21ರ ಹರೆಯದ ಪಾಂಡ್ಯನ್ ದುರಂತ ಸಾವನ್ನಪ್ಪಿದ್ದು.

ಸರಿ, ಸಮಾಜದಲ್ಲಿ ಜಾತಿ ಎಂಬುದು ಈಗಲೂ ಮನುಷ್ಯರನ್ನು ಬೇರ್ಪಡಿಸುವ ಅಡ್ಡ ಗೋಡೆಯಾಗಿಯೇ ಉಳಿದಿದೆ ಎಂಬುದು ನಿಜ. ಸಮಾಜದ ಎದುರು ತಲೆ ತಗ್ಗಿಸಿ ನಡೆಯಬೇಕಾಗುತ್ತದೆ ಎಂಬ ಹಳೇ ತಲೆಮಾರಿನ ಭಾವನೆ ಅವರ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆನಿಂತಿದ್ದಿರಬೇಕು. ಆದರೆ, ಈಗೀಗ ಟೀವಿ ನೋಡಿ, ಪತ್ರಿಕೆಗಳನ್ನು ಓದಿ, ಓದಿದ್ದು ಕೇಳಿ, ಜನರ ಮನಸ್ಸು ಕೂಡ ಬದಲಾಗಿಲ್ಲವೇ? ಪ್ರೀತ್ಸೋದು ತಪ್ಪಲ್ಲ ಎಂಬ ಭಾವನೆ ಸಮಾಜದಲ್ಲಿ ನಿಧಾನವಾಗಿ ನೆಲೆಯೂರುತ್ತಿದ್ದರೆ, ಲವ್ ಮಾಡೋದು ಅಂದರೆ ಕೆಟ್ಟ ಸಂಗತಿ ಎಂಬ ಭಾವನೆಯಂತೂ ದೂರವಾಗಿಬಿಟ್ಟಿದೆ. ಇದು ಬದಲಾದ ಜಗತ್ತಿನ ಈಗಿನ ಪರಿಸ್ಥಿತಿಯೂ ಹೌದು,

ಆದರೆ ಇಲ್ಲಿ ಆಗಿರುವುದು, ಜಗತ್ತಿನ ಬದಲಾವಣೆಯ ಧಾವಂತಕ್ಕೆ ನಾವು ಮತ್ತು ನಮ್ಮ ಮನಸ್ಸುಗಳಿನ್ನೂ ಅದೇ ವೇಗದಲ್ಲಿ ಹೊಂದಿಕೊಂಡಿಲ್ಲ ಅಥವಾ ಆ ಧಾವಂತದೊಂದಿಗೆ ಧಾವಿಸಲು ನಮ್ಮ ಮನಸ್ಸುಗಳು ಒಪ್ಪುತ್ತಿಲ್ಲ.

ಇಲ್ಲಿ ಯಾರು ಎಡವಿದ್ದಾರೆ, ಪ್ರೀತ್ಸೋದು ತಪ್ಪೇ ಎಂಬುದೆಲ್ಲಾ ಪ್ರಶ್ನೆಯಲ್ಲ. ಜೀವಕ್ಕೆ ಬೆಲೆ ಇಷ್ಟೇನಾ ಎಂಬುದು ಪ್ರಶ್ನೆ. ಇದು ಆತುರದ ನಿರ್ಧಾರವಲ್ಲವೇ? ಪ್ರಾಣಕ್ಕಿಂತಲೂ ಮಾನವೇ ಮುಖ್ಯ ಎಂಬುದು ನಿಜವೇ ಆಗಿದ್ದರೂ, ಪ್ರೀತಿಯಿಂದ ಮನಸ್ಸು ಕುರುಡಾಗಿಸಿಕೊಂಡ ಮಗಳು ಮನೆಬಿಟ್ಟಳು ಎಂಬುದು ಅವಮಾನ ಹೇಗಾಗುತ್ತದೆ? ಎಂಬುದೂ ಯೋಚಿಸಬೇಕಾದ ಸಂಗತಿಯಲ್ಲವೇ? ನೀವೇನಂತೀರಿ?
[ವೆಬ್ ದುನಿಯಾಕ್ಕಾಗಿ]

LEAVE A REPLY

Please enter your comment!
Please enter your name here