Samsung Galaxy Buds 2 Pro: ಸುಧಾರಿತ ವಿನ್ಯಾಸ, ಉತ್ತಮ ಧ್ವನಿ

0
299

Samsung Galaxy Buds 2 Pro Review: ಆಡಿಯೋ ಬಗ್ಗೆ ಹೆಚ್ಚು ಆಸ್ಥೆ ವಹಿಸಿರುವ ಸಂಗೀತಪ್ರಿಯ ಭಾರತೀಯರಿಗೆ ಕಿವಿಯೊಳಗೆ ಇರಿಸಬಹುದಾದ ಇಯರ್ ಬಡ್ಸ್ ಬಗ್ಗೆ ಹೆಚ್ಚು ಆಸಕ್ತಿಯಿದೆ. ಇದನ್ನು ಮನಗಂಡು ಸ್ಯಾಮ್‌ಸಂಗ್ ಕಂಪನಿಯು ಗ್ಯಾಲಕ್ಸಿ ಬಡ್ಸ್ 2 ಪ್ರೊ ಅನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಹಿಂದಿನ ಇಯರ್ ಬಡ್ಸ್‌ಗೆ ಹೋಲಿಸಿದರೆ ಇದರ ವಿನ್ಯಾಸವು ಬದಲಾಗಿದೆ ಮತ್ತು ಚಿಕ್ಕದಾಗಿಯೂ, ಹಗುರವೂ ಆಗಿದೆ. ಎರಡು ವಾರ ಇದನ್ನು ಬಳಸಿ ನೋಡಿದಾಗಿನ ಅನುಭವ ಇಲ್ಲಿದೆ.

ವಿನ್ಯಾಸ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಫ್ಲಿಪ್-4 ಹಾಗೂ ಗ್ಯಾಲಕ್ಸಿ ಝಡ್ ಫೋಲ್ಡ್ 4 ಎಂಬ ಎರಡು ಐಷಾರಾಮಿ ಸ್ಮಾರ್ಟ್‌ಫೋನ್‌ಗಳ ಜೊತೆಗೇ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ 2 ಪ್ರೊ ಬಿಡುಗಡೆಯಾದಾಗ ಜನರಿಗೆ ಇದ್ದ ನಿರೀಕ್ಷೆ ಎಂದರೆ, ವಿನ್ಯಾಸದಲ್ಲಿ ಬದಲಾವಣೆಯಾಗಿದೆಯೇ ಎಂಬುದೇ. ಯಾಕೆಂದರೆ ಹಿಂದಿನ ಇಯರ್ ಬಡ್ಸ್ ಕಿವಿಯಲ್ಲಿ ಸರಿಯಾಗಿ ಕೂರುತ್ತಿರಲಿಲ್ಲ ಎಂಬ ಅಪವಾದ ಜೋರಾಗಿ ಕೇಳಿಬಂದಿತ್ತು. ಆದರೆ, ಈ ಬಾರಿ ವಿನ್ಯಾಸ ಬದಲಾಗಿದೆ ಮತ್ತು ಸರಿಯಾಗಿ, ನಿಖರವಾಗಿ ಕಿವಿಯಲ್ಲಿ ಕೂರುವಂತೆ ಈ ಬಡ್ಸ್ ಅನ್ನು ವಿನ್ಯಾಸಪಡಿಸುವಲ್ಲಿ ಸ್ಯಾಮ್‌ಸಂಗ್ ಯಶಸ್ವಿಯಾಗಿದೆ.

ಸ್ಯಾಮ್‌ಸಂಗ್ ಹೇಳುವಂತೆ, ಹಿಂದಿನ ಮಾದರಿಗಿಂತ ಇದು ಶೇ.15ರಷ್ಟು ಗಾತ್ರದಲ್ಲಿ ಕಿರಿದಾಗಿಯೂ, ಕಡಿಮೆ ತೂಕವನ್ನೂ ಹೊಂದಿದೆ. (ಹಿಂದಿನ ಮಾದರಿಯಲ್ಲಿ ಒಂದು ಇಯರ್‌ಬಡ್ 6.3 ಗ್ರಾಂ ಇದ್ದರೆ, ಗ್ಯಾಲಕ್ಸಿ ಬಡ್ಸ್ 2 ಪ್ರೊದಲ್ಲಿ ಇದರ ತೂಕ ಕೇವಲ 5.5 ಗ್ರಾಂ). ಎರಡೂ ಬಡ್ಸ್ ಹಾಗೂ ಇದರ ಕೇಸ್ (ಪುಟ್ಟಪೆಟ್ಟಿಗೆ) ಕೂಡ ಮ್ಯಾಟ್ ಫಿನಿಶ್ ಹೊಂದಿದ್ದು, ಕೈಯಿಂದ ಜಾರಿ ಬೀಳದಂತಿದೆ. ಬೋರಾ ಪರ್ಪಲ್ (ತಿಳಿ ನೇರಳೆ) ಬಣ್ಣದ ಬಡ್ಸ್ ರಿವ್ಯೂಗೆ ದೊರೆತಿದ್ದು, ಉಳಿದಂತೆ ಬಿಳಿ ಮತ್ತು ಗ್ರಾಫೈಟ್ (ಸೀಸ) ಬಣ್ಣಗಳಲ್ಲಿ ಬಡ್ಸ್ ಲಭ್ಯವಿದೆ.

ವಿನ್ಯಾಸ ಬದಲಾವಣೆಯೊಂದಿಗೆ, ನಾಯ್ಸ್ ಕ್ಯಾನ್ಸಲಿಂಗ್ (ಸುತ್ತಮುತ್ತಲಿನ ಸದ್ದುಗಳು ಕೇಳಿಸದಂತೆ ಮಾಡುವ) ವೈಶಿಷ್ಟ್ಯವೂ ಸುಧಾರಿಸಿದೆ. ಅದೇ ರೀತಿ, ಹೆಚ್ಚು ಗುಣಮಟ್ಟದ ಆಡಿಯೋ ಕೇಳಲು ಅತ್ಯಂತ ಹಿತಕರವಾಗಿದೆ. ಆಂಡ್ರಾಯ್ಡ್ ಮಾತ್ರವಲ್ಲದೆ ಐಫೋನ್‌ನಲ್ಲಿ ಕೂಡ ಗ್ಯಾಲಕ್ಸಿ ಬಡ್ಸ್ 2 ಪ್ರೊ ಚೆನ್ನಾಗಿ ಕೆಲಸ ಮಾಡುತ್ತದೆ. ಆದರೆ, ಸ್ಯಾಮ್‌ಸಂಗ್ ಸಾಧನಗಳಲ್ಲಿ ಬ್ಲೂಟೂತ್ ಮೂಲಕ ಬಡ್ಸ್ ಪ್ರೊ ಸಂಪರ್ಕಿಸಿ ಗ್ಯಾಲಕ್ಸಿ ವೇರೆಬಲ್ ಆ್ಯಪ್ ಬಳಸಿದರೆ ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಇನ್ನಷ್ಟು ಹೆಚ್ಚಿನ ಗುಣಮಟ್ಟದಲ್ಲಿ ಸಂಗೀತವನ್ನು ಆಲಿಸಬಹುದಾಗಿದೆ.

ಸ್ಯಾಮ್‌ಸಂಗ್‌ನ ಧ್ವನಿ ಸಹಾಯಕ ಆ್ಯಪ್ ಬಿಕ್ಸ್‌ಬಿ ಇದರಲ್ಲಿ ಚೆನ್ನಾಗಿ ಕೆಲಸ ಮಾಡುತ್ತದೆ (ಆ್ಯಪಲ್‌ನ ಸಿರಿ, ಗೂಗಲ್‌ನ ಗೂಗಲ್ ಅಸಿಸ್ಟೆಂಟ್ ಮಾದರಿ). ಸ್ಯಾಮ್‌ಸಂಗ್‌ನ 360 ಡಿಗ್ರಿ ಆಡಿಯೊ ವೈಶಿಷ್ಟ್ಯ ಬಳಸಿದರೆ, ವರ್ಚುವಲ್ ಸರೌಂಡ್ ಸೌಂಡ್ ವ್ಯವಸ್ಥೆಯು ಥಿಯೇಟರ್‌ನಲ್ಲಿನ ಅನುಭವವನ್ನು ನೀಡುತ್ತದೆ. ಐಪಿಎಕ್ಸ್7 ಆವೃತ್ತಿಯ ಜಲನಿರೋಧಕತೆ ಇರುವುದರಿಂದ 1 ಮೀಟರ್ ಆಳದವರೆಗಿನ ನೀರಲ್ಲಿ ಏನೂ ಆಗಲಾರದು.

ಬ್ಯಾಟರಿ ಬಾಳಿಕೆಯೂ ಚೆನ್ನಾಗಿದೆ. ನಾಯ್ಸ್ ಕ್ಯಾನ್ಸಲಿಂಗ್ ಆನ್ ಮಾಡಿಟ್ಟರೆ ಸುಮಾರು 5 ಗಂಟೆ, ಆಫ್ ಮಾಡಿಟ್ಟರೆ ಸಾಮಾನ್ಯ ಧ್ವನಿ ಮಟ್ಟದಲ್ಲಿ ಸತತವಾಗಿ 8 ಗಂಟೆಗಳ ಕಾಲ ಹಾಡುಗಳನ್ನು ಆಲಿಸಬಹುದಾಗಿದೆ. ಬಡ್‌ಗಳನ್ನು ಅದರ ಕೇಸ್‌ನಲ್ಲಿಟ್ಟ ತಕ್ಷಣ ವೇಗವಾಗಿ ಚಾರ್ಜ್ ಆಗತೊಡಗುತ್ತದೆ. 10 ನಿಮಿಷದ ಚಾರ್ಜ್‌ನಲ್ಲಿ ಎರಡು ಗಂಟೆ ಹಾಡು ಕೇಳುವುದು ಸಾಧ್ಯವಾಗುತ್ತದೆ.

ಎರಡೂ ಕಿವಿಗಳಿಂದ ಬಡ್ ತೆಗೆದಾಗ ಹಾಡು ತಾನಾಗಿ ನಿಲ್ಲುವ ವೈಶಿಷ್ಟ್ಯವಿದೆ. ಆದರೆ, ಮರಳಿ ಕಿವಿಗಳಲ್ಲಿರಿಸಿದಾಗ ಪುನಃ ಹಾಡು ಆರಂಭವಾಗಬೇಕಿದ್ದರೆ, ಒಂದನ್ನು ಮೆದುವಾಗಿ ತಟ್ಟಬೇಕಾಗುತ್ತದೆ.

ಆ್ಯಪಲ್‌ನ ಏರ್‌ಪಾಡ್‌ಗಳಂತೆಯೇ, ಸ್ಯಾಮ್‌ಸಂಗ್ ಬಡ್ಸ್ 2 ಪ್ರೊದಲ್ಲಿ ಕೂಡ, ‘ಫೈಂಡ್ ಮೈ ಬಡ್ಸ್’ ಎಂಬ ಆಯ್ಕೆಯಿದೆ. ಅಂದರೆ, ಬಡ್ಸ್ ಎಲ್ಲಾದರೂ ಮರೆತು ಬಂದಿದ್ದರೆ, ಕಳೆದುಹೋದರೆ, ಅದು ಎಲ್ಲಿದೆ ಎಂಬುದನ್ನು ಮ್ಯಾಪ್ ಮೂಲಕ ತೋರಿಸುವ ವ್ಯವಸ್ಥೆಯದು.

ಇದರ ಬೆಲೆ ₹19,999 ಇದ್ದು, ಹಬ್ಬದ ಕೊಡುಗೆಗಳು, ಕಾರ್ಡ್ ಮತ್ತು ಮಳಿಗೆಗಳ ಕೊಡುಗೆಗಳೂ ಇವೆ.

ಒಟ್ಟಾರೆಯಾಗಿ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ 2 ಪ್ರೊ – ಇದು ವಿಶೇಷವಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋನ್ ಜೊತೆ ಅತ್ಯುತ್ತಮ ಸಂಗಾತಿ. ಇತರ ಆಂಡ್ರಾಯ್ಡ್ ಹಾಗೂ ಐಒಎಸ್ (ಆ್ಯಪಲ್) ಫೋನ್‌ಗಳೊಂದಿಗೆ ಸ್ಯಾಮ್‌ಸಂಗ್ ವೇರೆಬಲ್ ಆ್ಯಪ್ ಮೂಲಕ ಚೆನ್ನಾಗಿ ಕೆಲಸ ಮಾಡುತ್ತದೆ. ಹಿತವಾದ ಧ್ವನಿ, ಹಗುರ ಮತ್ತು ಕಿವಿಯೊಳಗೆ ಗಟ್ಟಿಯಾಗಿ ಕೂರುವ ವಿನ್ಯಾಸದಿಂದ ಗಮನ ಸೆಳೆಯುತ್ತದೆ.

My (Avinash B) Gadget Review in Prajavani Published on 28 Oct 2022

LEAVE A REPLY

Please enter your comment!
Please enter your name here