ವಿರೋಧ ಪಕ್ಷವಾಗೋದು ಬೇಡ, ಪ್ರತಿ-ಪಕ್ಷವಾಗಿ!

0
284

ಜನ ಸಾಮಾನ್ಯರು ಬಹುಶಃ ರಾಜಕೀಯ ಅನ್ನುವುದನ್ನು ಅರ್ಥೈಸಿಕೊಂಡಿದ್ದೇ ಹೀಗೆ: ಹೊಲಸು, ಗಬ್ಬೆದ್ದು ಹೋದ, ನಾತ ಬೀರುತ್ತಿರುವ ರಾಜಕೀಯ ಮತ್ತು ಇಲ್ಲಿ ಸಭ್ಯರಿಗೆ ಪ್ರವೇಶ ಇಲ್ಲ, ಸಲ್ಲ. ಅದನ್ನೇ ಶಿಷ್ಟ ಭಾಷೆಯಲ್ಲಿ ಹೇಳಬಹುದಾದರೆ ಬೇಜವಾಬ್ದಾರಿ ಜನಪ್ರತಿನಿಧಿಗಳು ಲಂಗುಲಗಾಮಿಲ್ಲದ ನಾಲಿಗೆ ಹರಿಯಬಿಡುವ ಉದ್ಯೋಗ ತಾಣ.

ಹೌದೇ? ಈ ನಮ್ಮನ್ನಾಳುವವರ ಬಾಯಲ್ಲಿ ಕಳೆದೊಂದು ವಾರದಿಂದ ಏನೆಲ್ಲಾ ಪವಿತ್ರ ಶಬ್ದಗಳು ಹೊರಬರುತ್ತಿವೆ ಎಂಬುದನ್ನು ಗಮನಿಸಿದರೆ ಇವರ ವಾದದಲ್ಲಿ ಹುರುಳಿಲ್ಲದಿಲ್ಲ ಎಂಬುದಂತೂ ಮನಸ್ಸಿಗೆ ನಾಟುತ್ತದೆ.

ತಮ್ಮೆಲ್ಲಾ ನಡೆ-ನುಡಿಗಳನ್ನು ತಮ್ಮನ್ನಾರಿಸಿ ಕಳುಹಿಸಿದವರು ಗಮನಿಸುತ್ತಿರುತ್ತಾರೆ ಎಂಬುದನ್ನು ಒಂದಿನಿತು ಯೋಚಿಸುವ ವ್ಯವಧಾನವೂ ಇಲ್ಲವೇ? ಅಥವಾ ಅಧಿಕಾರವಿಲ್ಲದೆ ಒಂದರೆಕ್ಷಣವೂ ಇರಲಾಗದ ಚಡಪಡಿಕೆಯೇ ಇದು? ಇಂತಹ ಅಸಹನೆ ಯಾಕೆ? “ರ‌್ಯಾಸ್ಕಲ್ ಸರಕಾರ, ಚಪ್ಪಲಿಯಲ್ಲಿ ಹೊಡೀಬೇಕು, ಆತ ನಾಲಾಯಕ್, ನಾಲಿಗೆ ಬಿಗಿ ಹಿಡಿದು ಮಾತಾಡಿ, ಸುಳ್ಳುಗಳ ಮಹಾರಾಜ, ಸರಕಾರವೇನು ಅವರಪ್ಪಂದಾ?, ದೇಶ ಕಂಡ ಅತಿ ದುರ್ಬಲ ಮುಖ್ಯಮಂತ್ರಿ, ಪಾಪದ ಕೊಡ ತುಂಬಿದೆ, ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ (ವಾಸ್ತವಿಕವಾಗಿ ಹುಚ್ಚ ಎಂದೇ ಅರ್ಥ!)” ಅಬ್ಬಬ್ಬಾ…. ಎಂತೆಂತಹಾ ಅಲಂಕಾರಿಕ ಪದಗಳು! ನಾಚಿಕೆಯಾಗಬೇಕು.

ಅದು ಬಿಡಿ, ನಮ್ಮ ನಾಡಿಗೆ ನಾಡೇ ಹೆಮ್ಮೆ ಪಡುವ ವಿಶ್ವವಿಖ್ಯಾತ ಮೈಸೂರು ದಸರಾ ನಡೀತಿದೆ. ನಮ್ಮದೇ ನಾಡ ಹಬ್ಬ. ನಮಗೆ ನಾವೇ ಹೆಮ್ಮೆ ಪಡಬೇಕಾದ ರಾಜ್ಯದ ಹಬ್ಬದಲ್ಲಿ ಭಾಗವಹಿಸದ ಪ್ರತಿಪಕ್ಷದವರದು ಎಂಥಾ ರಾಜಕೀಯ?

ಹಾಗಿದ್ದರೆ ರಾಜ್ಯದ ರಾಜಕೀಯ ಎತ್ತ ಸಾಗುತ್ತಿದೆ? ಕಾಂಗ್ರೆಸ್ ಅಥವಾ ಜನತಾ ದಳ ಆಳ್ವಿಕೆಯ ಅವಧಿಯತ್ತ ಒಂದೊಮ್ಮೆ ಪೂರ್ವಗ್ರಹವಿಲ್ಲದೆ ಕಣ್ಣೋಟ ಹರಿಸಿ ನೋಡಿದರೆ, ಆಗಲೂ ಜನರ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ ಎಂಬುದು ಪ್ರತಿಯೊಬ್ಬ ಜನ ಸಾಮಾನ್ಯ ಒಪ್ಪಿಕೊಳ್ಳಬಹುದಾದ ಸತ್ಯ.

ಕಾರಣವಿಷ್ಟೆ. ಇಲ್ಲಿನ ರಾಜಕಾರಣಿಗಳು ಬರೇ ಮೇಲೆ ಹೇಳಿರುವ ವ್ಯಾಖ್ಯಾನವಿರುವ ‘ರಾಜಕೀಯ’ ಮಾಡುತ್ತಾರೆಯೇ ಹೊರತು, ಯಾರಿಗೂ ಕೂಡ ರಾಜ್ಯದ ಹಿತ, ಜನರ ಏಳಿಗೆಯ ಬಗ್ಗೆ ಕಾಳಜಿಗಾಗಿ ಇರುವ ರಾಜಕೀಯದ ಪರಿಚಯ ಇಲ್ಲ.

ದಕ್ಷಿಣದ ರಾಜ್ಯದಲ್ಲಿ ಬಿಜೆಪಿ ನೆಲೆಯೂರಿದ್ದಕ್ಕೆ ಒಳಗಿನ ಅಸಹನೆ ಹತ್ತಿಕ್ಕಲಾಗುತ್ತಿಲ್ಲ. ಅದಕ್ಕೆ ತಮ್ಮೊಳಗಿನ ಯಾದವೀ ಕಲಹವೇ ಕಾರಣ ಎಂಬುದರ ಅರಿವೂ ಈ ವಿಪಕ್ಷಗಳಿಗಿಲ್ಲ. ಹೀಗಾಗಿ, ಸರಕಾರಕ್ಕೆ ಕಳಂಕ ತರಬೇಕು ಎಂಬ ಹತಾಶೆಯ ಪ್ರದರ್ಶನವಿದು ಎಂದೇ ಹೇಳಬಹುದು.

ಈ ಹಠವನ್ನು, ಈ ಹತಾಶೆಯನ್ನು, ಈ ಆಕ್ರೋಶವನ್ನು, ಅಸಹನೆಯನ್ನು ರಚನಾತ್ಮಕ ದಿಕ್ಕಿಗೆ ತಿರುಗಿಸಿ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ತಮ್ಮದೇ ಸರಕಾರದಿಂದ ರಾಶಿಗಟ್ಟಲೆ ಅನುದಾನಗಳನ್ನು ರಾಜ್ಯದ ಅಭಿವೃದ್ಧಿಗಾಗಿ ಹರಿದುಬರುವಂತೆ ಒತ್ತಡ ಹೇರಿ ನೋಡಲಿ. ಖಂಡಿತವಾಗಿಯೂ ಬಿಜೆಪಿ ಸರಕಾರಕ್ಕೆ ಸಾಕಷ್ಟು ನಿಧಿ ಒದಗಿಸಲು ಕೇಂದ್ರೀಯ ನಾಯಕರು ಹಿಂದೆ-ಮುಂದೆ ನೋಡುತ್ತಾರೆ ಎಂಬುದು ನಿಮಗೆ ತಿಳಿದಿದೆ. ಹೀಗಾಗಿ ಬಲವಂತವಾಗಿ ನಿಧಿ ತರಿಸಿಕೊಟ್ಟರೆ, ಅದರ ಶ್ರೇಯಸ್ಸು ಕೂಡ ಪ್ರತಿಪಕ್ಷಗಳಿಗೆ ಸಲ್ಲುತ್ತದೆ. ಅದರ ಸದುಪಯೋಗವಾಗದೇ ಹೋದಾಗ ಬಿಜೆಪಿ ಸರಕಾರದ ಕುತ್ತಿಗೆ ಪಟ್ಟಿ ಹಿಡಿಯಬಹುದು. ಇಂಥ ರಾಜಕೀಯವಿರಲಿ. ಜನರಿಗೂ ಒಳಿತು, ಪ್ರತಿಪಕ್ಷಗಳಿಗೂ ಹೆಮ್ಮೆ.

ಇದು ಬಿಟ್ಟು, ಯಾವ್ಯಾವುದೋ ನೆಪ ಮುಂದಿಟ್ಟುಕೊಂಡು, ‘ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ’ ಎಂದು ಗೌರವಾನ್ವಿತ ರಾಜ್ಯಪಾಲರ ಮೂಲಕ ಹೇಳಿಕೆ ಕೊಡಿಸಿ, ‘ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಸ್ತಬ್ಧವಾಗಿದೆ, ಯಾವುದೇ ಕೆಲಸ ಕಾರ್ಯ ನಡೆಯುತ್ತಿಲ್ಲ’ ಎನ್ನುತ್ತಾ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಪ್ರಯತ್ನ… ಇದೆಲ್ಲ ಯಾತಕ್ಕೆ? ಪ್ರತಿಭಟನೆ ಮಾಡಿ, ಅಲ್ಲಲ್ಲಿ ಸಭೆಗಳನ್ನು ಆಯೋಜಿಸಿ, ಜನರನ್ನು ಸೇರಿಸಿ, ಯಾತಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದೇವೆ, ಬಿಜೆಪಿ ಸರಕಾರದಿಂದ ಏನು ಅನ್ಯಾಯ ಆಗಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡುವ ಆಂದೋಲನ ನಡೆಯಲಿ. ಆದರೆ, ಇಂತಹ, ಸುದ್ದಿಗಾಗಿ ಸದ್ದು ಮಾಡುವ ತಂತ್ರಗಳ ಮೂಲಕ, ಆ ಮೂಲಕ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂಬ ಭಾವನೆ ಬರುವಂತೆ ಮಾಡುವ ತಂತ್ರಗಳು ಅರ್ಥಹೀನ. ಇವರು ಆಡುವ ಒಂದೊಂದು ಮಾತು ಕೂಡ ಅವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಎಂಬ ಪರಿಜ್ಞಾನವೂ ಇಲ್ಲದಿದ್ದರೆ ಹೇಗೆ? ಇಷ್ಟೊಂದು ದಶಕಗಳಿಂದ ಇವರು ರಾಜಕೀಯದಲ್ಲಿದ್ದು ಸಾಧಿಸಿದ್ದಾದರೂ ಏನನ್ನು? ಈ ರೀತಿ ಅಸಭ್ಯ ಟೀಕೆ ಮಾಡುವುದನ್ನೇ? ಎಂದೇ ಪ್ರಶ್ನಿಸಬೇಕಾಗುತ್ತದೆ.

ಇನ್ನೊಂದು ವಿದ್ಯಮಾನ ಗಮನಿಸಿ. ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರಕಾರವೇ ಹಲವಾರು ವರ್ಷಗಳ ಹಿಂದೆ ಜಾರಿಗೆ ತಂದಿರುವ ನೀತಿಯಾಗಿರುವ ಜನಸಂಖ್ಯಾ ನಿಯಂತ್ರಣದ ಬಗ್ಗೆ ಮುಖ್ಯಮಂತ್ರಿ ಹೇಳಿಕೆ ನೀಡಿದರೆ, ಅದು ‘ಸಮಾಜದ ಒಂದು ವರ್ಗವನ್ನು ಗುರಿಯಾಗಿಸಿಕೊಂಡಿದ್ದಾರೆ’ ಎಂಬ ಆರೋಪ ಬರುತ್ತದೆ. ಅಂದರೆ ಪ್ರತಿಯೊಂದು ವಿಷಯವನ್ನೂ ಕೋಮು ಭಾವನೆಯತ್ತ ಹೊರಳಿಸುವ ಹುನ್ನಾರವಿದೆಂದು ಅರ್ಥವಾಗದೇ?

ಆಹಾರ ಧಾನ್ಯ ಬೆಲೆ ಏರಿಕೆಯಿಂದಾಗಿ ತಿನ್ನಲು ಉಣ್ಣಲು ಜನ ತ್ರಾಸ ಪಡುತ್ತಿದ್ದಾರೆ. ಈ ಬಗ್ಗೆ ಈ ವಿರೋಧ ಪಕ್ಷಗಳೇಕೆ ಪ್ರತಿಭಟಿಸುತ್ತಿಲ್ಲ? ವಿಶ್ವದ ಹಣಕಾಸು ಬಿಕ್ಕಟ್ಟಿನ ಪರಿಣಾಮ ಇಲ್ಲಿದೆಯಾದರೂ, ಅಲ್ಲಲ್ಲಿ ಅಕ್ಕಿ, ಬೇಳೆಯನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಂಡೋ, ಅಥವಾ ಪಡಿತರ ವಿತರಣೆಗೆ ರವಾನೆಯಾಗುವ ಆಹಾರವಸ್ತುಗಳ ಕಳ್ಳ ದಂಧೆಯೋ…. ಇತ್ಯಾದಿಗಳ ಮೂಲಕವೂ ‘ನಕಲಿ ಕೊರತೆ’ ಸೃಷ್ಟಿ ಮಾಡಿ, ಬೆಲೆ ಏರಿಕೆಯ ಬಿಸಿಗೆ ತುಪ್ಪ ಸುರಿಯಲಾಗುತ್ತಿದೆ. ಇದರ ಬಗ್ಗೆ ಹೋರಾಟ ಮಾಡಿದರೆ, ಜನ ಕೂಡ ಮೆಚ್ಚುತ್ತಾರೆ, ಪಕ್ಷಭೇದವಿಲ್ಲದೆ ಬೆಂಬಲವನ್ನೂ ಕೊಡಬಹುದು. ಮಂತ್ರಿಗಳು, ಶಾಸಕರು ತಮ್ಮ ಕ್ಷೇತ್ರಾಭಿವೃದ್ಧಿಯತ್ತ ಗಮನ ಹರಿಸುತ್ತಿಲ್ಲ ಎನ್ನುವುದರ ಬಗ್ಗೆ ಪ್ರತಿಭಟಿಸಬಹುದಲ್ಲ… ಇನ್ನೊಂದೆಡೆ, ಹಂದಿ ಜ್ವರವು ದೇಶದಲ್ಲೇ ಅತೀ ಹೆಚ್ಚು ಬಲಿ ತೆಗೆದುಕೊಂಡದ್ದು ಬೆಂಗಳೂರಿನಲ್ಲಿ. ಅದಕ್ಕೇನು ಕ್ರಮ ಕೈಗೊಳ್ಳಲಾಗಿದೆ? ಸರಕಾರ ಎಲ್ಲಿ ಎಡವಿದೆ ಅಂತ ಕೂಗೆಬ್ಬಿಸಿ. ಅತ್ತ ಕಡೆ ಊರೂರಲ್ಲಿ ರಸ್ತೆಗಳು ಕುಲಗೆಟ್ಟು ಹೋಗಿವೆ, ಅದಕ್ಕೊಂದು ಪ್ರಬಲ ಪ್ರತಿಭಟನೆ ಮಾಡಿ. ಎಲ್ಲರೂ ಬೆಂಬಲಿಸುತ್ತಾರೆ.

ನಾಡಿನ ಅಭಿವೃದ್ಧಿಗೆ ಆಡಳಿತ ಪಕ್ಷಗಳು ಎಷ್ಟು ಮುಖ್ಯವೋ, ವಿರೋಧ ಪಕ್ಷಗಳಿಗೆ ಅದಕ್ಕಿಂತಲೂ ಹೆಚ್ಚು ಜವಾಬ್ದಾರಿಯಿದೆ. ಹದ್ದಿನ ಕಣ್ಣಿಟ್ಟಿರಬೇಕು ಅವುಗಳು- ಎಲ್ಲಿ ಖಜಾನೆ ಸೋರಿ ಹೋಗುತ್ತದೆ, ಎಲ್ಲೆಲ್ಲಿ ಜನರ ಬೆವರು ಸುರಿಸಿದ ಹಣ ವ್ಯಯವಾಗುತ್ತದೆ ಎಂಬುದನ್ನು ಗಮನಿಸಿ, ಸರಕಾರವನ್ನು ಸರಿದಾರಿಗೆಳೆಯುವ ಅತ್ಯಮೂಲ್ಯ ಕರ್ತವ್ಯವಿದೆ ಅವುಗಳಿಗೆ. ಆದರೆ ನಮ್ಮಲ್ಲೇನಾಗುತ್ತಿದೆ?

ರಾಜ್ಯದ ವಿರೋಧ ಪಕ್ಷಗಳು ಹೀಗಾದರೆ, ಕೇಂದ್ರದಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಪ್ರಧಾನ ಪ್ರತಿಪಕ್ಷ ಬಿಜೆಪಿ ಎಂಬುದು ಹೆಸರಿಗೆ ಮಾತ್ರ. ಆಂತರಿಕ ವೈರುಧ್ಯಗಳಿಂದಾಗಿ ದೇಶದ ಆಡಳಿತ ಪಕ್ಷವನ್ನು ಸಮರ್ಥವಾಗಿ ಸರಿದಾರಿಗೆ ತರುವಲ್ಲಿ ಎಡವುತ್ತಿದೆ ಅದು. ಎಡಪಕ್ಷಗಳೇ ಒಂದಷ್ಟು ಪ್ರತಿಪಕ್ಷಗಳ ಕಾರ್ಯ ನಿಭಾಯಿಸುತ್ತಿವೆ. ಜನಪರ ವಿಷಯಗಳಿಗಾಗಿಯಾದರೂ ಅವುಗಳು ಆವಾಗಾವಾಗ ಎದ್ದು ನಿಲ್ಲುತ್ತವೆ.

ರಾಜ್ಯದಲ್ಲಾಗಲೀ, ದೇಶದಲ್ಲಾಗಲೀ ಆಡಳಿತ ಯಂತ್ರವು ಹಳಿ ತಪ್ಪಿದರೂ, ಅದನ್ನು ಸರಿದಾರಿಗೆ ತರುವ ಮನೋಭಾವ ವಿರೋಧ ಪಕ್ಷಗಳಿಗೆ ಇರುವುದಿಲ್ಲ, ಬದಲಾಗಿ ಕಾಲೆಳೆಯುವುದೇ ಪ್ರಮುಖ ಉದ್ದೇಶ ಎಂಬಂತಹ ಮನಸ್ಥಿತಿ ಇರುವುದು ಬೇಸರದ ವಿಷಯ.

ಜನಪ್ರತಿನಿಧಿಗಳು ನಮ್ಮ ನಾಯಕರು. ಭವಿಷ್ಯದ ನಾಯಕರೆಂದು ಪರಿಗಣಿಸಲ್ಪಟ್ಟಿರುವ ನಮ್ಮ ಮಕ್ಕಳು ಅವರನ್ನು ಅನುಸರಿಸುತ್ತಾರೆ. ಆದರೆ ಹೀಗಾದರೆ ಹೇಗೆ?
ಕರ್ನಾಟಕದ ಜನರ ತೆರಿಗೆ ಹಣದಿಂದ ಅವರಿಗೆ ವೇತನ ಕೊಡುವುದು ರಾಜ್ಯದ ಅಭಿವೃದ್ಧಿಗಾಗಿಯೇ ಅಲ್ಲವೇ? ‘ರಾಜಕೀಯ’ ಮಾಡಬೇಕಾದಲ್ಲಿ ಮಾಡಬೇಕು. ಆದರೆ ಅದು ರಚನಾತ್ಮಕವಾಗಿರಬೇಕು. ಹೀಗಾಗಿ ಬರೇ ರಾಜಕೀಯಕ್ಕಾಗಿ ರಾಜಕೀಯ ಬೇಡ, ವಿರೋಧಿಸಲೆಂದೇ ರಾಜಕೀಯ ಬೇಡ. ಜನರ ಹಿತ ಗಮನದಲ್ಲಿರಲಿ. ವಿರೋಧಿಸಲೆಂದೇ ಇರುವವರು ವಿರೋಧ ಪಕ್ಷದವರೇ? ಹೀಗಾಗಬಾರದು. ಅವರು ವಿರೋಧಿಗಳಲ್ಲ, ಆಡಳಿತ ಪಕ್ಷಕ್ಕೆ ಸಮರ್ಥವಾದ ಪ್ರತಿಪಕ್ಷವಾಗಬೇಕು. ರಚನಾತ್ಮಕ ಟೀಕೆಯಿರಬೇಕು. ವ್ಯಕ್ತಿಗತ, ಪಕ್ಷಗತವಾದ ಬದ್ಧತೆಗಳನ್ನು ಮೀರಿ ಕರ್ನಾಟಕದ ಪರಿಪೂರ್ಣ ಅಭಿವೃದ್ಧಿಯೇ ಮೂಲ ಮಂತ್ರವಾದಲ್ಲಿ ಜನ ಸಾಮಾನ್ಯರು ಮನಸ್ಸಿನೊಳಗೇ ಮರುಗುವ ಮತ್ತು ಆಕ್ರೋಶದ ಬೆಂಕಿಯನ್ನು ಒಳಗೊಳಗೇ ನುಂಗಿಕೊಳ್ಳಲೇಬೇಕಾದ ಪ್ರಮೇಯ ಬಾರದು. ಅದಕ್ಕೇ ಹೇಳಿದ್ದು, ವಿರೋಧ ಪಕ್ಷ ಆಗೋದು ಬೇಡ, ಆಡಳಿತ ಪಕ್ಷಕ್ಕೆ ಸಮದಂಡಿಯಾದ ಪ್ರತಿ-ಆಡಳಿತ ಪಕ್ಷವಾಗಲಿ!

ಇನ್ನೂ ತಿದ್ದಿಕೊಳ್ಳದಿದ್ದರೆ, ದಾಸರು ಹೇಳಿದ್ದಾರಲ್ಲ, “ನಿಂದಕರಿರಬೇಕು, ಹಂದಿಯಿದ್ದರೆ ಕೇರಿ ಹೇಗೆ ಶುದ್ಧಿಯೋ… ಹಾಗೆ”!
[ವೆಬ್‌ದುನಿಯಾದಲ್ಲಿ ಪ್ರಕಟಿತ]

LEAVE A REPLY

Please enter your comment!
Please enter your name here