ಇವರ ದುಂದುವೆಚ್ಚದ ‘ಮಿತ’ವ್ಯಯ ಅನಗತ್ಯ!

0
290

ಇವೆಲ್ಲ ಬೊಗಳೆ, ಬೂಟಾಟಿಕೆ, ಗಿಮ್ಮಿಕ್ ಅಥವಾ ಆಷಾಢಭೂತಿತನ. ಕಳೆದ ಸರಿ ಸುಮಾರು ಒಂಬತ್ತು ತಿಂಗಳಿಂದೀಚೆಗೆ ಜಾಗತಿಕವಾಗಿ ಹಣಕಾಸು ಬಿಕ್ಕಟ್ಟು ಎದುರಾದಾಗಲೇ ನಾವು ಎಚ್ಚೆತ್ತುಕೊಳ್ಳಬೇಕಿತ್ತು. ಆ ಬಳಿಕ ದೇಶದ ಕೆಲವೆಡೆ ಅನಾವೃಷ್ಟಿಯೂ, ಮತ್ತೆ ಕೆಲವೆಡೆ ಅತಿವೃಷ್ಟಿಯೂ ಕಾಣಿಸಿಕೊಂಡು, ದೇಶದ ಬೆನ್ನೆಲುಬಾದ ಅನ್ನದಾತ ರೈತ ಕಂಗಾಲಾಗಿದ್ದಾನೆ. ಒಂದು ಹೊತ್ತಿನ ತುತ್ತು ಉಣ್ಣಲು ಮುಗಿಲು ಮುಟ್ಟಿದ ಅಕ್ಕಿ-ಬೇಳೆ-ತರಕಾರಿ ಬೆಲೆಗಳೇ ಅಡ್ಡಿ. ಇವೆಲ್ಲವುಗಳಿಂದ ಜನ ಜರ್ಝರಿತವಾಗಿರುವಾಗ, ಕೋಟ್ಯಂತರ ರೂಪಾಯಿ ದುಂದುವೆಚ್ಚದ ನಡುವೆ ನೂರಾರು ರೂಪಾಯಿ ಉಳಿಸುವ ಈ ರಾಜಕಾರಣಿಗಳ ‘ಇಕಾನಮಿ ಕ್ಲಾಸ್’ ಪ್ರಯಾಣ ಎಂಬ ಮಹಾನ್ ನಾಟಕ! ಅದಕ್ಕೆ ‘ಆಸ್ಟೆರಿಟಿ ಡ್ರೈವ್’ ಎಂಬೊಂದು ಭಯಂಕರ ಹೆಸರು!

ಜನರಿಗೆ ಹೇಗಾಗಬೇಡ! ವಿಮಾನ ಬಿಟ್ಟು ರೈಲಿನಲ್ಲಿ ಪ್ರಯಾಣಿಸುವುದು ಮಹಾನ್ ತ್ಯಾಗವೋ ಎಂಬಂತೆ ಬಿಂಬಿಸಲಾಗುತ್ತಿದೆ. ವಾಸ್ತವಿಕವಾಗಿ ಇದು ತ್ಯಾಗವೇ ಅಲ್ಲ. ಜನಸೇವಕರು ಅನ್ನಿಸಿಕೊಳ್ಳುವವರ ಕರ್ತವ್ಯ. ದೇಶದ ಖಜಾನೆಯ ಹಣವನ್ನು ಐಷಾರಾಮದ ಬದಲು ಜನ ಕಲ್ಯಾಣಕ್ಕಾಗಿ ಉಪಯೋಗಿಸುವುದು ರಾಜಕಾರಣಿಗಳ ಬದ್ಧತೆಯ ಸೂಚಕ. ಆದರೆ ಪ್ರತಿ ವರ್ಷವೂ ವೇತನದ ಹೆಸರಲ್ಲಿ, ಭತ್ಯೆಯ ಹೆಸರಲ್ಲಿ ಲಕ್ಷ ಲಕ್ಷ ಆದಾಯ ಹೆಚ್ಚಿಸಿಕೊಳ್ಳುತ್ತಿರುವಾಗ, ನೂರಿನ್ನೂರೋ… ಹೆಚ್ಚೆಂದರೆ ಒಂದೈದು-ಹತ್ತು ಸಾವಿರ ರೂಪಾಯಿಯೋ… ಉಳಿಸುವ ಈ ಯೋಜನೆ ‘ಕಣ್ಣುಕಟ್ಟು’ ಅಷ್ಟೆ.

ಇದನ್ನು ಈ ರೀತಿ ವ್ಯಾಖ್ಯಾನಿಸದೆ ವಿಧಿಯೇ ಇಲ್ಲ. ಯಾಕೆಂದರೆ, ಸರಾಸರಿ ಹತ್ತು ಲಕ್ಷ ಮಂದಿಯನ್ನು ಪ್ರತಿನಿಧಿಸುವ ಸಂಸತ್ ಸದಸ್ಯನೊಬ್ಬ, ತನ್ನ ಕ್ಷೇತ್ರ ಹೇಗಿದೆ ಅಂತ ನೋಡಲು, ಅದರ ಸ್ಥಿತಿ-ಗತಿ ಬಗ್ಗೆ ತಿಳಿದುಕೊಳ್ಳಲು, ತನಗೆ ಓಟು ನೀಡಿ ಶಾಸನಸಭೆಗೆ ಕಳುಹಿಸಿದವರು ಹೇಗಿದ್ದಾರೆ ಎಂದು ತಿಳಿದುಕೊಳ್ಳಲು ಖಾಸಗಿ ವಿಮಾನ, ಖಾಸಗಿ ಹೆಲಿಕಾಪ್ಟರ್ ಬಳಕೆಯೇ ಅನಗತ್ಯ. ಇದೇನಿದ್ದರೂ ಕರ್ತವ್ಯ ನಿಭಾವಣೆಯಷ್ಟೆ.

ಕರ್ನಾಟಕದ ಅದೆಷ್ಟೋ ಹಳ್ಳಿಗಳನ್ನೇ ನೋಡಿ. ಅಲ್ಲಿಗೆ ರಸ್ತೆ ಮೂಲಕ ಹೋಗುವುದೂ ಅಸಾಧ್ಯ. ಇಂಥ ಪರಿಸ್ಥಿತಿಯಲ್ಲಿ ಜನಸೇವಕರು, ಜನ ನಾಯಕರು, ಜನಪ್ರತಿನಿಧಿಗಳು ಹೆಲಿಕಾಪ್ಟರ್ ಬಳಸಲೇಬೇಕೆಂಬ ಅನಿವಾರ್ಯತೆ. ಯಾಕೆಂದರೆ ಆ ರಸ್ತೆಗಳಲ್ಲಿ ಪ್ರಯಾಣಿಸಿದರೆ ಅವರು ಮರುದಿನ ಮತ್ತೊಂದೂರಿಗೆ ಹೋಗಬೇಕಲ್ಲ! ಅಂಥ ಪರಿಸ್ಥಿತಿ ರಸ್ತೆಗಳದು. (ಈಗ ಇಂಥವನ್ನೆಲ್ಲಾ ನೋಡಲು ಹಳ್ಳಿಗಳೇನೂ ಬೇಕಾಗಿಲ್ಲ, ಒಂದು ಬಾರಿ ಬೆಂಗಳೂರು-ಮಂಗಳೂರು ರಸ್ತೆ ಅಥವಾ ಮಂಗಳೂರು-ಉಡುಪಿ ರಸ್ತೆಯಲ್ಲಿ ಓಡಾಡಿದರೂ ಸಾಕು!) ಇದಕ್ಕೆ ಕಾರಣ ತಮ್ಮದೇ ನಿರ್ಲಕ್ಷ್ಯ ಎಂಬ ಭಾವನೆ ಜನಪ್ರತಿನಿಧಿಗಳಿಗೆ ಬಂದರೆ ಸಾಕು. ಅಲ್ಲಿಂದಲೇ ಲೋಕೋದ್ಧಾರ ಪ್ರಕ್ರಿಯೆ ಆರಂಭವಾಗಬಹುದೇನೋ…

ಮಿತವ್ಯಯ ಹೆಸರಲ್ಲಿ ದೇಶದ ಖಜಾನೆಯ ಹಣ ಉಳಿಸಲು ಸಾಕಷ್ಟು ಮಾರ್ಗಗಳಿವೆ. ಅದು ಬಿಟ್ಟು ವಿಮಾನ ಪ್ರಯಾಣ ತ್ಯಾಗ ಮಾಡುವುದು, ಹೆಲಿಕಾಪ್ಟರ್ ಯಾನವನ್ನು ‘ಬಲಿದಾನ’ ಮಾಡುವುದು ಎಂಬಿತ್ಯಾದಿಯೆಲ್ಲ ಶುದ್ಧ ಗಿಮಿಕ್. ನಿಮ್ಮ ಈ ರೀತಿಯ ಗಿಮಿಕ್‌ಗಳು, ಜನಮರುಳು ತಂತ್ರಗಳು ಜನರಿಗೆ ಬೇಕಾಗಿಲ್ಲ. ಮೊದಲು ಏರಿದ ಬೆಲೆಗಳ ಇಳಿಕೆಗೆ ಕ್ರಮ ಕೈಗೊಂಡರೆ ನಾವು ನಿಮ್ಮನ್ನು ಆರಿಸಿ ಕಳುಹಿಸಿದ್ದು ಸಾರ್ಥಕವಾಗುತ್ತದೆ ಎಂಬ ಕೂಗು ಪ್ರತಿಯೊಬ್ಬ ಜನಸಾಮಾನ್ಯನದು.

ನಮ್ಮ ಸಂಸದರು, ಶಾಸಕರು ಬೃಹತ್ ಬಂಗಲೆಯಂತಹ ಸರಕಾರಿ ಮನೆ ಪಡೆಯುತ್ತಾರೆ. ಅದರ ನವೀಕರಣಕ್ಕೆ, ಅದನ್ನು ತಮ್ಮ ಅಭಿರುಚಿಗೆ ಅನುಗುಣವಾಗಿ, ವಾಸ್ತು ಪ್ರಕಾರ, ಅಥವಾ ಬೇರಾವುದೋ ಕಾರಣಕ್ಕೆ ಬದಲಾಯಿಸಲು ಆಗಾಗ್ಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಾರೆ, ಅವರಿಗೆ ಪೆಟ್ರೋಲ್ ಭತ್ಯೆ, ಕಾರು ಚಾಲಕ, ಸಹಾಯಕರು, ದೂರವಾಣಿ, ಪ್ರಯಾಣ ಭತ್ಯೆ, ಊಟ-ವಸತಿ, ಪ್ರದೇಶಾಭಿವೃದ್ಧಿ ನಿಧಿ… ಹೀಗೆ ಅವರಿಗೆ ದೊರೆಯುವ ಭತ್ಯೆಗಳ ಪಟ್ಟಿ ಬೆಳೆಯುತ್ತಲೇ ಇರುತ್ತದೆ. ಇದರ ಮೇಲೆ ಇಷ್ಟು ಮಾತ್ರ ಎಂದು ಹೇಳಿಕೊಳ್ಳಲು ಒಂದಷ್ಟು ವೇತನ. ಇವೆಲ್ಲ ಸೌಲಭ್ಯ-ಸೌಕರ್ಯಗಳು ಅವರಿಗೆ ದೊರೆಯುವುದು ಜನ ಸಾಮಾನ್ಯರು ತೆರಿಗೆ ನೀಡಿದ ಹಣದಿಂದಾಗಿ ಮತ್ತು ನಾವು ಅವರನ್ನು ಆರಿಸಿ ಕಳುಹಿಸಿದ ಪರಿಣಾಮವಾಗಿ ಎಂಬುದನ್ನು ಅರಿತುಕೊಂಡರೆ ಸಾಕು.

ಸರಿ, ಇಷ್ಟೆಲ್ಲಾ ಸಕಲ ಸವಲತ್ತುಗಳಿದ್ದಾಗ್ಯೂ ಬಡ ಪ್ರಜೆಗಳಿಗೆ ಸಮಾಧಾನ ಎಂಬುದು ದೊರೆಯುತ್ತದೆಯೇ? ಒಂದೊಂದು ಕ್ಷೇತ್ರಕ್ಕೆ ಹೋದಲ್ಲಿ ಒಬ್ಬೊಬ್ಬನದು ಒಂದೊಂದು ಕಥೆ. ಇಲ್ಲಿಯೂ ರಾಜಕೀಯ ಮತ್ತು ಭ್ರಷ್ಟಾಚಾರ.

ಸಂಸತ್ತಿನ ಕಲಾಪಗಳ ಸಂದರ್ಭ ಇಲ್ಲ-ಸಲ್ಲದ ಆರೋಪ-ಪ್ರತ್ಯಾರೋಪಗಳಿಗಾಗಿ ಜಗಳ ಮಾಡಿ ಕಲಾಪ ಮುಂದೂಡಲಾಗುತ್ತದೆ. ಆದರೆ, ಸಂಸದರ ವೇತನ ಏರಿಕೆ ವಿಷಯ ಬಂದಾಗ ಎಲ್ಲರೂ ಒಗ್ಗಟ್ಟು, ಕೆಲವೇ ನಿಮಿಷಗಳಲ್ಲಿ ಆ ಕುರಿತ ಮಸೂದೆ ಮಂಡನೆಯಾಗುತ್ತದೆ, ಕಾಯಿದೆಯಾಗಿ ಪರಿವರ್ತನೆಯೂ ಆಗುತ್ತದೆ. ಯಾರೂ ಸೊಲ್ಲೆತ್ತುವುದಿಲ್ಲ. ಅಂದರೆ, ಸಂಸತ್ತಿನಲ್ಲಿ ಯಾವುದೇ ಚರ್ಚೆಯಾಗದೆ, ವಾಗ್ವಿವಾದಗಳಿಲ್ಲದೆ ಅಂಗೀಕಾರಗೊಳ್ಳುವ ಮಸೂದೆ ಜನಪ್ರತಿನಿಧಿಗಳ ವೇತನ-ಭತ್ಯೆ ಹೆಚ್ಚಳ ಮಸೂದೆ ಮಾತ್ರ.

ಸಂಸದರ ವೇತನ, ಭತ್ಯೆಯತ್ತ ಒಂದು ಇಣುಕುನೋಟ ಹರಿಸಿದರೆ:
ಮಾಸಿಕ ವೇತನ 12,000, ಕ್ಷೇತ್ರದ ಖರ್ಚುವೆಚ್ಚಕ್ಕೆ ತಿಂಗಳಿಗೆ 10 ಸಾವಿರ, ಕಚೇರಿ/ಸಿಬ್ಬಂದಿ ವೆಚ್ಚ ತಿಂಗಳಿಗೆ 14 ಸಾವಿರ, ಅಧಿವೇಶನ ಸಂದರ್ಭ ದಿನಕ್ಕೆ 500 ರೂ., ಎಲ್ಲಿಗೇ ಆದರೂ ಎಷ್ಟೇ ಬಾರಿ ಪ್ರಥಮ ದರ್ಜೆ ರೈಲ್ವೇ ಪ್ರಯಾಣ ಉಚಿತ,
ಬಿಸಿನೆಸ್ ಕ್ಲಾಸ್ ವಿಮಾನ ಪ್ರಯಾಣ ವರ್ಷಕ್ಕೆ ಪತ್ನಿ ಅಥವಾ ಸಹಾಯಕನೊಂದಿಗೆ 40 ಟ್ರಿಪ್ ಉಚಿತ, ದೆಹಲಿಯಲ್ಲಿ ಐಷಾರಾಮಿ ಬಂಗಲೆಗೆ ಕೇವಲ 2 ಸಾವಿರ ರೂ. ಮಾಸಿಕ ಬಾಡಿಗೆ, ಆದರೆ ಪೀಠೋಪಕರಣ, ಅವುಗಳ ನಿರ್ವಹಣೆಯೆಲ್ಲವೂ ಸರಕಾರಿ ವೆಚ್ಚದಲ್ಲಿ. ಮನೆಯ ವಿದ್ಯುತ್ ವೆಚ್ಚ 50 ಸಾವಿರ ಯುನಿಟ್‌ವರೆಗೆ ಉಚಿತ, 1.70 ಲಕ್ಷ ಸ್ಥಳೀಯ ದೂರವಾಣಿ ಕರೆಗಳು ಉಚಿತ
. ಒಟ್ಟಾರೆಯಾಗಿ ವರ್ಷಕ್ಕೆ ಸುಮಾರು 32 ಲಕ್ಷ, ಅಂದರೆ ತಿಂಗಳಿಗೆ ಅಂದಾಜು ಎರಡೂವರೆ ಲಕ್ಷ ರೂಪಾಯಿ ಪ್ರತೀ ಸಂಸದನ ಖರ್ಚು ವೆಚ್ಚ. ಇದರ ಜೊತೆಗೆ ತನ್ನ ಕ್ಷೇತ್ರದ ಉದ್ಧಾರಕ್ಕಾಗಿ, ಸಂಸದರ ಪ್ರದೇಶಾಭಿವೃದ್ಧಿ ನಿಧಿಯಡಿ ವಾರ್ಷಿಕ 2 ಕೋಟಿ ರೂ. ಪ್ರತ್ಯೇಕ (ಇದು ಸಂಬಂಧಿತ ಯೋಜನೆಗಳಿಗೆ ನೇರವಾಗಿ ಜಮೆಯಾಗುತ್ತದೆ).

ಇವೆಲ್ಲವೂ ಯಾಕಾಗಿ? ಜನರಿಗೆ ಸಹಾಯವಾಗಲು, ಜನರ ಉದ್ಧಾರವಾಗಲು, ದೇಶದ ಉದ್ಧಾರವಾಗಲು. ಹೀಗಾಗುತ್ತಿದೆಯೇ? ಈ ಪ್ರಶ್ನೆಗೆ ಉತ್ತರ ನಿಮ್ಮ ನಿಮ್ಮ ಊರಿನ ಸ್ಥಿತಿ-ಗತಿ ನೋಡಿದರೆ ತಿಳಿಯಬಹುದು! ಮತ್ತೆ, ಇಷ್ಟೆಲ್ಲ ಸಕಲ ಸೌಲಭ್ಯಗಳು ಸಿಗೋದಿಕ್ಕೆ ಯಾವುದೇ ಅರ್ಹತೆಗಳು ಬೇಕಿಲ್ಲ ಎಂಬುದನ್ನೂ ನಾವು ಗಮನಿಸಬೇಕು. ಚುನಾವಣೆಯಲ್ಲಿ ಗೆಲ್ಲುವುದೊಂದೇ ಅರ್ಹತೆ. ಕಷ್ಟಪಟ್ಟು ಓದಿ, ಲಕ್ಷಗಟ್ಟಲೆ ಡೊನೇಶನ್ ಹೆಸರಿನ ಸುಲಿಗೆ ಶುಲ್ಕ ನೀಡಿ ಪದವಿ ಪಡೆದರೂ, ಸಾಕಷ್ಟು ಪ್ರತಿಭೆ ಇದ್ದರೂ ಇಂತಹ ಒಂದು ‘ಉದ್ಯೋಗ’ ದೊರೆಯುವುದು ಸಾಧ್ಯವೇ?

ಲಭ್ಯ ಮಾಹಿತಿ ಪ್ರಕಾರ, ರಾಷ್ಟ್ರಪತಿಯ ವೇತನ ವರ್ಷಕ್ಕೆ 12 ಲಕ್ಷ ಆದರೂ, ಮನೆಯ ನಿರ್ಹಹಣೆಗೆ ವಾರ್ಷಿಕ 7 ಕೋಟಿ, ಉದ್ಯಾನಕ್ಕೆ ವಾರ್ಷಿಕ 2 ಕೋಟಿ, ಕಚೇರಿ ಸಿಬ್ಬಂದಿ ವೇತನಕ್ಕೆ ವಾರ್ಷಿಕ 6 ಕೋಟಿ, ಲಾಂಡ್ರಿ ಕೆಲಸಕ್ಕೆ ತಿಂಗಳಿಗೆ 18 ಲಕ್ಷ, ಊಟ-ಉಪಚಾರಕ್ಕಾಗಿ ವಾರ್ಷಿಕ 64 ಲಕ್ಷ ಮತ್ತು ಹೈದರಾಬಾದ್ ಮತ್ತು ಸಿಮ್ಲಾಗಳಲ್ಲಿರುವ ರಾಷ್ಟ್ರಪತಿ ನಿವಾಸಗಳ ನಿರ್ವಹಣೆಗೆ ವಾರ್ಷಿಕ 1.5 ಕೋಟಿ ಸರಕಾರದಿಂದ ನೀಡಲಾಗುತ್ತದೆ.

ಈ ರೀತಿ ರಾಷ್ಟ್ರಪತಿ, ರಾಜ್ಯಪಾಲರು, ಸಂಸದರು, ಸಚಿವರು, ಶಾಸಕರು ಇವರೆಲ್ಲರ ವೇತನಗಳತ್ತ ಗಮನ ಹರಿಸಿದರೆ ಕಣ್ಣು ಕುಕ್ಕುವುದು ಸಹಜವೇ. ಹೌದು. ರಾಜಕೀಯ ಎಂಬುದು ಅಥವಾ ಜನಸೇವೆಯೆಂಬುದು ಯಥಾರ್ಥಕ್ಕೆ ಬೆಳಗ್ಗೆ 10ರಿಂದ ಸಂಜೆ 6ರವರೆಗಿನ ಉದ್ಯೋಗವಲ್ಲ. ಇದು 24×7 ಕೆಲಸ. ನಮ್ಮನ್ನು ಪ್ರತಿನಿಧಿಸುವವರಿಗೆ ದೇಶವನ್ನು ಕಟ್ಟುವ, ಉತ್ತಮ ಚಿಂತನೆಯ ಮೂಲಕ ದೇಶವನ್ನು ಅಭಿವೃದ್ಧಿಪಥದಲ್ಲಿ ಮುನ್ನಡೆಸುವ ಹೊಣೆಗಾರಿಕೆ ಇದೆ. ಇದಕ್ಕಾಗಿ, ಅವರು ತಮ್ಮ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿದರೆ ಅವರಿಗೆ ಈ ಮಟ್ಟದ ಸೌಲಭ್ಯಗಳು ನೀಡಬೇಕಾದದ್ದು ಸಕಾರಣವೂ, ಸಮ್ಮತವೂ ಹೌದು. ಆದರೆ ಅವರು ತಮ್ಮ ಜವಾಬ್ದಾರಿಯನ್ನು ಎಷ್ಟರ ಮಟ್ಟಿಗೆ ನಿಭಾಯಿಸುತ್ತಿದ್ದಾರೆ? ಆರಿಸಿಹೋದವರೆಲ್ಲರೂ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದೇ ಆಗಿದ್ದರೆ, ದೇಶದ ಜನತೆ ಇಂತಹ ಸಮಸ್ಯೆಯ ಸುಳಿಯಲ್ಲಿ ಸಿಲುಕಬೇಕಿತ್ತೇ? ಎಂದೊಮ್ಮೆ ಯೋಚಿಸಿ ನೋಡಿ.

ಇವರೆಲ್ಲ ದೇಶದ ಜನರ ರಕ್ತ, ಬೆವರು ಬಸಿದು ಬಂದ ಹಣವನ್ನು ವ್ಯಯ ಮಾಡುತ್ತಿರುವುದು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಇವರು ಜನಸೇವಕರೇ ಹೊರತು, ಜನರ ಒಡೆಯರು ಅಲ್ಲ. ವಸ್ತು ಸ್ಥಿತಿ ಹೀಗಿರುವಾಗ, ಅವರು ಪಡೆಯುವ ವೇತನ, ಭತ್ಯೆ ಇತ್ಯಾದಿಗೆ ಹೋಲಿಸಿದರೆ ಪುಡಿಗಾಸು ಎಂದಷ್ಟೇ ಹೇಳಿಕೊಳ್ಳಬಹುದಾದ ವಿಮಾನ ಪ್ರಯಾಣದಲ್ಲಿ ಎಕಾನಮಿ ದರ್ಜೆಯಲ್ಲಿ ಪ್ರಯಾಣ ಮಾಡುತ್ತೇವೆ ಅಥವಾ ಮಾಡಬೇಕು ಎಂಬ ಹೇಳಿಕೆಗಳೆಲ್ಲ ಬರೇ ಬೂಟಾಟಿಕೆಯವು ಅಂತಲೇ ಪರಿಗಣಿಸಬೇಕಾಗುತ್ತದೆ.

ಇವರಿಗೆ ನಿಜಕ್ಕೂ ದೇಶ ಸೇವೆಯ ಬಗ್ಗೆ ಕಾಳಜಿ ಇದ್ದರೆ, ತಮ್ಮನ್ನು ಈ ಸ್ಥಾನಕ್ಕೆ ಏರಿಸಿ, ಆರಿಸಿ ಕಳುಹಿಸಿದ ಜನರು ಪಡಬಾರದ ಪಾಡು ಪಡುತ್ತಿರುವ ಬಗ್ಗೆ ಸ್ವಲ್ಪವಾದರೂ ಕನಿಕರ ಎಂಬುದು ಇದ್ದಿದ್ದರೆ, ಎಲ್ಲರೂ ಕೂಡ ದೆಹಲಿಯಲ್ಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಕೈಗೊಂಡ ಸಣ್ಣ ಕ್ರಮವನ್ನು ಮತ್ತಷ್ಟು ಮುಂದುವರಿಸಿ ದೇಶದ ಬರ ಪೀಡಿತರಿಗೆ ನೆರವಾಗುವತ್ತ ಯೋಚಿಸಬಹುದು.

ತಮ್ಮೆಲ್ಲ ಸಚಿವರು, ಕಾಂಗ್ರೆಸ್ ಶಾಸಕರು ಕನಿಷ್ಠಪಕ್ಷ ಮುಂದಿನ ಒಂದು ವರ್ಷದವರೆಗೆ ಸ್ವಯಂಸ್ಫೂರ್ತಿಯಿಂದ ಶೇ.20ರಷ್ಟು ವೇತನವನ್ನು ಕಡಿಮೆ ಪಡೆಯುವಂತೆ ಶೀಲಾ ದೀಕ್ಷಿತ್ ಸೂಚಿಸಿದ್ದಾರೆ. ಶಾಸಕರು, ಸಂಸದರ ಸುತ್ತಮುತ್ತ ನಡೆಯುವ ಕೋಟ್ಯಂತರ ರೂಪಾಯಿಯ ಭ್ರಷ್ಟಾಚಾರಕ್ಕೆ ಹೋಲಿಸಿದರೆ ಶೇ.20 ವೇತನ ಯಾವ ಲೆಕ್ಕಕ್ಕೂ ಇಲ್ಲ ಎಂಬುದು ಒತ್ತಟ್ಟಿಗಿರಲಿ. ಇಂಥದ್ದೊಂದು ಕ್ರಮವಿದೆಯಲ್ಲ, ಅದು ಮತ್ತಷ್ಟು ಪೂರಕ ಕ್ರಮಗಳಿಗೆ ನಾಂದಿಯಾಗಬೇಕು.

ಅದೆಷ್ಟೋ ದಶಕಗಳಲ್ಲಿ ಇಲ್ಲದೇಹೋದ, ಮನಬಂದಂತೆ ಶಾಸಕರು/ಸಂಸದರು/ಸಚಿವರ ವೇತನ ಹೆಚ್ಚಿಸುತ್ತಲೇ ಇದ್ದಾಗ ಒಂದಿಷ್ಟೂ ಸುಳಿವಿಲ್ಲದ ಈ ‘ಮಿತವ್ಯಯ’ ಎಂಬ ವೇದ ಮಂತ್ರ ಇದುವರೆಗೆ ಎಲ್ಲಿ ಹೋಗಿತ್ತು? ಈಗ ದಿಢೀರ್ ಆಗಿ ಈ ಮಂತ್ರ ಪಠಿಸುವುದೇತಕ್ಕೆ? ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರ ಆಕ್ರೋಶದ ಬೆಂಕಿಯನ್ನು ಶಮನಗೊಳಿಸುವುದಕ್ಕಾಗಿಯೇ? ಮೊದಲು ಈ ಪ್ರಯಾಣದ ಐಷಾರಾಮ ತ್ಯಾಗದ ಬದಲು, ಉಳಿದ ಐಷಾರಾಮಗಳ ತ್ಯಾಗ ಆಗಬೇಕಿದೆ, ಭ್ರಷ್ಟಾಚಾರ ನಿಲ್ಲಬೇಕಿದೆ, ಬೆಲೆ ಏರಿಕೆ ತಡೆಯಬೇಕಿದೆ ಮತ್ತು ಜನಪ್ರತಿನಿಧಿಗಳಿಗೆ ದೇಶದ ಹಣದಲ್ಲಿ ಐಷಾರಾಮ, ದುಂದುವೆಚ್ಚಕ್ಕೆ ಅವಕಾಶವಿಲ್ಲ ಎಂಬ ಕುರಿತ ಕಾನೂನು ಜಾರಿಯಾಗಬೇಕಿದೆ. ಹಾಗಿದ್ದರೆ ಜನ ಒಪ್ಪುತ್ತಾರೆ.

ನೀವೇನಂತೀರಿ?
[ವೆಬ್‌ದುನಿಯಾದಲ್ಲಿ ಪ್ರಕಟಿತ]

LEAVE A REPLY

Please enter your comment!
Please enter your name here