ಇಂಟರ್ನೆಟ್ ಸುರಕ್ಷತೆ: ಎಲ್ಲ ಖಾಸಗಿ ಮಾಹಿತಿಯನ್ನೂ ಶೇರ್ ಮಾಡಿಕೊಳ್ಳದಿರಿ!

Internet Privacy and securityಸಂವಹನ ವ್ಯವಸ್ಥೆಯಲ್ಲಿ ಕ್ರಾಂತಿಯನ್ನೇ ಮಾಡಿದೆ ಇಂಟರ್ನೆಟ್ ಸೌಕರ್ಯ. ಅದಕ್ಕೆ ಬೆಸೆದುಕೊಂಡಿರುವ ಸಾಮಾಜಿಕ ಜಾಲತಾಣಗಳನ್ನು ಸಕಾರಾತ್ಮಕವಾಗಿ ಬಳಸಿಕೊಂಡಲ್ಲಿ ಲಾಭ ಹೆಚ್ಚು. ಉದ್ಯೋಗಕ್ಕೆ ನೇಮಿಸಿಕೊಳ್ಳುವಾಗ, ಅಭ್ಯರ್ಥಿಯ ಸಾಮಾಜಿಕ ಜಾಲತಾಣದ ಪ್ರೊಫೈಲ್‌ಗಳನ್ನು ಸವಿವರವಾಗಿ ಪರಿಶೀಲಿಸಿ, ಏನೆಲ್ಲಾ ಪೋಸ್ಟ್ ಮಾಡಿದ್ದಾರೆ, ಸ್ನೇಹಿತರು ಯಾರು ಎಂಬಿತ್ಯಾದಿ ಮಾಹಿತಿಯನ್ನೂ, ಅವರ ಗುಣಾವಗುಣಗಳನ್ನು ವಿಶ್ಲೇಷಿಸಿ, ಬಳಿಕವೇ ಮುಂದುವರಿಸುವ ಪ್ರಕ್ರಿಯೆಯೂ ಈಗ ಹಲವು ಕಂಪನಿಗಳಲ್ಲಿವೆ. ನಮ್ಮ ಪ್ರೊಫೈಲ್ ಚೆನ್ನಾಗಿದ್ದರೆ ಈ ಲಾಭವಾಗುತ್ತದೆಯಾದರೂ, ನೆಟ್ ಕಿಡಿಗೇಡಿಗಳು ಇಂಥ ತಾಣಗಳನ್ನು ದುರ್ಬಳಕೆ ಮಾಡುತ್ತಿರುವುದರಿಂದ ಹಲವು ಮಂದಿ ಬಾಧೆಗೀಡಾಗಿದ್ದಾರೆ. ವಿಶೇಷವಾಗಿ ಮಹಿಳೆಯರಿಗೆ ಇಂಟರ್ನೆಟ್‌ನಲ್ಲಿ ಕಾಟ ಹೆಚ್ಚು. ಅದೇ ರೀತಿ, ಬ್ಲೂವೇಲ್‌ನಂತಹಾ ಸಾವಿನಾಟಗಳ ನಿರ್ಮಾತೃಗಳು ಇಲ್ಲಿಂದಲೂ ಹರೆಯದ ಮಕ್ಕಳ ಫೋನ್ ನಂಬರ್ ಪಡೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಹೀಗಿರುವಾಗ, ಆನ್‌ಲೈನ್ ಪ್ರೈವೆಸಿ ಎಂಬ ವಿಚಾರವು ಸುಪ್ರೀಂ ಕೋರ್ಟ್ ಮೆಟ್ಟಿಲವರೆಗೂ ಹೋಗಿದೆ. ನಮ್ಮ ಬಗೆಗಿನ ಮಾಹಿತಿಯ ಗೋಪ್ಯತೆ ನಮ್ಮ ಕೈಯಲ್ಲೇ ಇದೆ, ಪ್ರೈವೆಸಿ ಕಾಪಾಡಿಕೊಂಡರೆ ಹೆಚ್ಚು ಸುರಕ್ಷಿತವಾಗಿರಬಲ್ಲೆವು.

ಈಗೀಗ ಸಣ್ಣ ಮಕ್ಕಳೂ ಫೇಸ್‌ಬುಕ್ ಖಾತೆ ಹೊಂದಿರುತ್ತಾರೆ ಮತ್ತು ಎಗ್ಗಿಲ್ಲದೆ ಬಳಸತೊಡಗಿದ್ದಾರೆ. ಹೊಸ ಭ್ರಮಾವಾಸ್ತವಿಕ ಲೋಕಕ್ಕೆ ಬಂದಿರುವ ಟೀನೇಜ್ ಮಂದಿ ಇಂಟರ್ನೆಟ್‌ನಲ್ಲಿ ಕಿಡಿಗೇಡಿಗಳ ಬಲೆಗೆ ಸುಲಭವಾಗಿ ಬೀಳುತ್ತಾರೆ. ಇದಕ್ಕೆ ಕಾರಣ, ಪ್ರೈವೆಸಿಯ ಕುರಿತು ಅವರ ಜ್ಞಾನದ ಕೊರತೆ. ದೊಡ್ಡವರಲ್ಲಿಯೂ ಹೆಚ್ಚಿನವರು ಆನ್‌ಲೈನ್‌ನಲ್ಲಿ ನಮ್ಮ ಸುರಕ್ಷತೆ ಬಗ್ಗೆ ಅರಿವಿಲ್ಲದ ಕಾರಣದಿಂದಾಗಿ, ನಿಂದನೆಗೆ, ವಂಚನೆಗೆ ಈಡಾಗುವ ಅದೆಷ್ಟೋ ಘಟನೆಗಳನ್ನು ಕೇಳಿದ್ದೇವೆ. ಇದಕ್ಕಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಲೇಖನ. ನೀವೂ ಓದಿ, ಮಕ್ಕಳಿಗೂ, ಗೊತ್ತಿಲ್ಲದ ಆತ್ಮೀಯರಿಗೂ ತಿಳಿಹೇಳಿ.

ಸಾಮಾಜಿಕ ತಾಣಗಳ ಪ್ರೊಫೈಲ್: ಫೇಸ್‌ಬುಕ್, ಟ್ವಿಟರ್ ಮುಂತಾದ ತಾಣಗಳಲ್ಲಿ ಖಾತೆ ತೆರೆಯುವಾಗ ಅಲ್ಲಿ ನಿಮ್ಮಿಂದ ಸಾಕಷ್ಟು ಮಾಹಿತಿ ಪಡೆಯಲಾಗುತ್ತದೆ. ಯಾಕೆ? ನಿಮ್ಮ ಊರು, ಯಾವ ಶಾಲೆ-ಕಾಲೇಜು ಓದಿದಿರಿ, ಎಲ್ಲೆಲ್ಲಾ ಹೋಗಿದ್ದೀರಿ ಅಂತೆಲ್ಲಾ ತಿಳಿದುಕೊಂಡು, ಅದಕ್ಕೆ ತಕ್ಕಂತೆ ನಿಮ್ಮ ಇಷ್ಟಾನಿಷ್ಟಗಳನ್ನು ತಿಳಿದು ಪರ್ಸನಲೈಸ್ಡ್ ಕಂಟೆಂಟ್ ಅನ್ನು ನಿಮಗೆ ಒದಗಿಸುವುದಕ್ಕಾಗಿ ಈ ಮಾಹಿತಿಗಳನ್ನು ಪಡೆದುಕೊಳ್ಳಲಾಗುತ್ತದೆ.

ನೀವೇನು ಮಾಡಬಹುದು? ಇವುಗಳಲ್ಲಿ ಯಾವುದು ಕಡ್ಡಾಯವಿಲ್ಲವೋ ಅವನ್ನು ಭರ್ತಿ ಮಾಡಲೇಬೇಡಿ. ಉಳಿದಂತೆ ಫೋನ್ ನಂಬರ್, ಜನ್ಮದಿನಾಂಕ ಹಾಗೂ ಇಮೇಲ್ ವಿಳಾಸ ಕಡ್ಡಾಯವಾಗಿ (ಕೆಲವೆಡೆ) ದಾಖಲಿಸಬೇಕಾಗಬಹುದು. ಅಂಥ ಸಂದರ್ಭದಲ್ಲಿ, ಅದನ್ನು ಸಾರ್ವಜನಿಕವಾಗಿ ತೋರಿಸದಂತೆ ಗೌಪ್ಯವಾಗಿರಿಸುವ ಆಯ್ಕೆ ಇರುತ್ತದೆ. ಅದನ್ನು ಪರಿಶೀಲಿಸಿಕೊಳ್ಳಿ.

ಫೇಸ್‌ಬುಕ್‌ನ ಉದಾಹರಣೆ ತೆಗೆದುಕೊಳ್ಳುವುದಾದರೆ, ಅಲ್ಲಿ ನಿಮ್ಮ ಪ್ರೊಫೈಲ್ ಎಡಿಟ್ ಮಾಡಿ, ನೀವಿರುವ ಸ್ಥಳ, ಇಮೇಲ್ ವಿಳಾಸ ಹಾಗೂ ಫೋನ್ ನಂಬರ್ ಬೇರೆಯವರಿಗೆ ಕಾಣಿಸದಂತೆ ಮಾಡಿಕೊಳ್ಳಬಹುದು. ಸೆಟ್ಟಿಂಗ್ ಮೇಲೆ ಕ್ಲಿಕ್ ಮಾಡಿ. ಗೊತ್ತಾಗದಿದ್ದರೆ, facebook.com/settings ಎಂಬಲ್ಲಿ ಹೋದರೆ, ಪ್ರೈವೆಸಿ ವಿಭಾಗವು ಎಡಭಾಗದ ಪಟ್ಟಿಯಲ್ಲಿ ಕಾಣಿಸುತ್ತದೆ.

ನೀವು ಪೋಸ್ಟ್ ಮಾಡುವುದನ್ನು ಯಾರು ನೋಡಬಹುದು, ನಿಮ್ಮ ಫ್ರೆಂಡ್ಸ್ ಪಟ್ಟಿಯನ್ನು ಯಾರು ನೋಡಬಹುದು ಅಂತ ಸೆಟ್ ಮಾಡುವ ಆಯ್ಕೆಯೂ ಅಲ್ಲೇ ದೊರೆಯುತ್ತದೆ. ಬಲಭಾಗದಲ್ಲಿ ‘ಎಡಿಟ್’ ಬಟನ್ ಕ್ಲಿಕ್ ಮಾಡಿದರೆ, ಪಬ್ಲಿಕ್ (ಸಾರ್ವಜನಿಕರೆಲ್ಲರಿಗೆ), ಫ್ರೆಂಡ್ಸ್ (ನಿಮ್ಮ ಫೇಸ್‌ಬುಕ್ ಸ್ನೇಹಿತರಿಗೆ ಮಾತ್ರ), ಫ್ರೆಂಡ್ಸ್ ಎಕ್ಸೆಪ್ಟ್ (ನಿಮ್ಮ ಸ್ನೇಹಿತರಲ್ಲಿ ಯಾರಿಗೆ ಕಾಣಿಸಬಾರದು ಅಂತ ಇಲ್ಲಿ ಆಯ್ಕೆ ಮಾಡಿಕೊಳ್ಳಬಹುದು), ಸ್ಪೆಸಿಫಿಕ್ ಫ್ರೆಂಡ್ಸ್ (ಸ್ನೇಹಿತರ ಪಟ್ಟಿಯಲ್ಲಿ ಕೆಲವರಿಗೆ ಮಾತ್ರ ಕಾಣಿಸುವಂತೆ) ಹಾಗೂ ಓನ್ಲೀ ಮಿ (ನಿಮಗೆ ಮಾತ್ರ) ಎಂದು ಹೊಂದಿಸುವ ಆಯ್ಕೆಗಳಿರುತ್ತವೆ. ಬೇಕಾದುದನ್ನು ಆಯ್ಕೆ ಮಾಡಿಕೊಳ್ಳಿ. ಮುಂದೆ, ‘ಸೀ ಆಲ್’ ಕ್ಲಿಕ್ ಮಾಡಿದರೆ, ‘ಕಸ್ಟಮ್’ ಅಂದರೆ, ಪಟ್ಟಿಗೆ ಯಾರನ್ನು ಸೇರಿಸಬೇಕು, ಯಾರನ್ನು ಸೇರಿಸಬಾರದು ಅಂತ ನೀವೇ ಹೊಂದಿಸಿಕೊಳ್ಳುವ ಅವಕಾಶ ದೊರೆಯುತ್ತದೆ.

ಅದರ ಕೆಳಗೆ, ನೀವು ಫೇಸ್‌ಬುಕ್‌ಗೆ ನೀಡಿದ ಮಾಹಿತಿ ಪ್ರಕಾರ, ನಿಮ್ಮ ಊರಿನವರಿಗೆ ಮಾತ್ರವೋ, ನೀವು ಓದಿದ ಕಾಲೇಜಿನ ಸ್ನೇಹಿತರಿಗೆ ಮಾತ್ರವೋ ಅಂತೆಲ್ಲ ಹೊಂದಿಸಿಕೊಳ್ಳುವ ಆಯ್ಕೆಯ ಗ್ರೂಪುಗಳು ದೊರೆಯುತ್ತವೆ. ಇದನ್ನು ಮಾಡಲು ಸೆಟ್ಟಿಂಗ್ಸ್‌ಗೇ ಹೋಗಬೇಕೆಂದಿಲ್ಲ, ಪೋಸ್ಟ್ ಮಾಡುವಾಗಲೇ ಕಾಣಿಸುವ ‘Public’ ಎಂದು ಡೀಫಾಲ್ಟ್ ಆಗಿ ತೋರುವ ಬಟನ್ ಮೇಲೆ ಕ್ಲಿಕ್ ಮಾಡಿದಾಗಲೂ ಈ ಆಯ್ಕೆ ದೊರೆಯುತ್ತದೆ.

ಅದಕ್ಕೂ ಕೆಳಗೆ, ಯಾರೆಲ್ಲ ನಿಮ್ಮನ್ನು ಸಂಪರ್ಕಿಸಬಹುದು, ನಿಮ್ಮ ಇಮೇಲ್ ವಿಳಾಸ, ಫೋನ್ ನಂಬರ್ ಆಧಾರದಲ್ಲಿ ಯಾರು ಹುಡುಕಬಹುದು, ಸರ್ಚ್ ಎಂಜಿನ್‌ಗಳಲ್ಲಿಯೂ ನಿಮ್ಮ ಪ್ರೊಫೈಲ್ ಕಾಣಿಸಿಕೊಳ್ಳಬೇಕೇ ಎಂಬುದನ್ನು ಕೂಡ ಸೆಟ್ ಮಾಡಿಕೊಳ್ಳಬಹುದು. ಹೊಸಬರಿಗಾದರೆ ಇವೆಲ್ಲವನ್ನೂ ಆದಷ್ಟೂ ಸೀಮಿತಗೊಳಿಸಬಹುದು. ಉಳಿದಂತೆ ನಮ್ಮ ಅನುಭವ ಮತ್ತು ಅಗತ್ಯದ ಆಧಾರದಲ್ಲಿ ಒಂದೊಂದನ್ನೇ ಬೇಕಾದಂತೆ ಹೊಂದಿಸಿಕೊಳ್ಳಬಹುದು.

ನಿಮ್ಮ ವೈಯಕ್ತಿಕ ಮಾಹಿತಿ: ಫೇಸ್‌ಬುಕ್ ಲಾಗಿನ್ ಆದ ಬಳಿಕ, ಮೇಲ್ಭಾಗದಲ್ಲಿರುವ ಕವರ್ ಫೋಟೋದ ಕೆಳ-ಬಲಭಾಗದಲ್ಲಿ FB Options‘ಎಡಿಟ್ ಪ್ರೊಫೈಲ್’ ಎಂಬ ಬಟನ್ ಕಾಣಿಸುತ್ತದೆ. ಅದರಲ್ಲಿ ನಿಮ್ಮ ಯಾವ ಖಾಸಗಿ ಮಾಹಿತಿಗಳು ಯಾರಿಗೆ ಕಾಣಿಸಬೇಕು, ಕಾಣಿಸಬಾರದು ಅಂತೆಲ್ಲ ಹೊಂದಿಸಿಕೊಳ್ಳುವ ಆಯ್ಕೆಯಿರುತ್ತದೆ. ಒಂದು ಸಲ ಕ್ಲಿಕ್ ಮಾಡಿದರೆ, ಪಾಪ್-ಅಪ್ ವಿಂಡೋದಲ್ಲಿ, ತಳಭಾಗದಲ್ಲಿ, ‘ಎಡಿಟ್ ಯುವರ್ ಎಬೌಟ್ ಇನ್ಫೋ’ ಮೇಲೆ ಕ್ಲಿಕ್ ಮಾಡಿ. ನಿರ್ದಿಷ್ಟ ಉದ್ಯೋಗವನ್ನೋ, ಶಿಕ್ಷಣದ ಕುರಿತ ಮಾಹಿತಿಯನ್ನೋ ಬೇರೆಯವರಿಂದ ಅಡಗಿಸಬೇಕೆಂದಿದ್ದರೆ ಎಲ್ಲಿ ಎಡಿಟ್ (ತಿದ್ದುಪಡಿ) ಮಾಡುವುದು ಎಂಬ ಬಗ್ಗೆ ಗೊಂದಲ ಆಗುವುದು ಸಹಜ. ಒಂದೊಂದೇ ವಿಭಾಗದ ಮೇಲೆ ಮೌಸ್ ಪಾಯಿಂಟರ್ ಇರಿಸಿದಾಗ (ಹೋವರ್ ಮಾಡಿ, ಕ್ಲಿಕ್ ಮಾಡಬೇಡಿ), ಬಲಭಾಗದಲ್ಲಿ ‘ಎಡಿಟ್’ ಐಕಾನ್ ಕಾಣಿಸುತ್ತದೆ, ಅದನ್ನು ಕ್ಲಿಕ್ ಮಾಡಿ. ಇಲ್ಲಿ, ನಿಮ್ಮ ಜನ್ಮ ದಿನಾಂಕ, ಫೋನ್ ನಂಬರ್, ಇಮೇಲ್ ವಿಳಾಸ ಮುಂತಾದ ತೀರಾ ಖಾಸಗಿ ವಿಚಾರಗಳನ್ನು ‘ಓನ್ಲಿ ಮಿ’ (ನಿಮಗೆ ಮಾತ್ರ) ಕಾಣಿಸುವಂತೆ ಹೊಂದಿಸಿಕೊಳ್ಳಬಹುದು. ಟ್ವಿಟರ್, ಗೂಗಲ್ ಖಾತೆಗಳಲ್ಲಿಯೂ ಇಂತಹ ಸೆಟ್ಟಿಂಗ್‌ಗಳಿರುತ್ತವೆ.

ಇದರಿಂದ ಮುಖ್ಯ ಪ್ರಯೋಜನವೆಂದರೆ, ಬೇರೆ ಯಾವುದಾದರೂ ವೆಬ್ ತಾಣಗಳಿಗೆ, ಆ್ಯಪ್‌ಗಳಿಗೆ ಲಾಗಿನ್ ಆಗಲು ನೀವು ಫೇಸ್‌ಬುಕ್ ಐಡಿಯನ್ನು ಬಳಸುತ್ತೀರಿ. ಆ ತಾಣ ಅಥವಾ ಆ್ಯಪ್‌ಗೆ ಲಾಗಿನ್ ಆಗುವಾಗ, ಫೇಸ್‌ಬುಕ್‌ನಲ್ಲಿ ನೀವು ‘ಪಬ್ಲಿಕ್’ ಎಂದು ಹೊಂದಿಸಿಟ್ಟ ವಿಷಯಗಳೆಲ್ಲವನ್ನೂ ಅವುಗಳು ತಿಳಿದುಕೊಳ್ಳುತ್ತವೆ. ಅದೇ ರೀತಿ, ಕೆಲವರು ಆನ್‌ಲೈನ್ ಕಿಡಿಗೇಡಿಗಳು ಇವುಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳೂ ಇವೆ.

ಎಲ್ಲಕ್ಕೂ ಮುಖ್ಯವಾಗಿ, ಯಾರನ್ನು ಫ್ರೆಂಡ್ ಮಾಡಿಕೊಳ್ಳಬೇಕು, ಯಾವ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಕು ಅಂತ ವಿವೇಚನೆಯಿಂದ ಮುಂದಡಿಯಿಟ್ಟರೆ ಆನ್‌ಲೈನ್ ಸುರಕ್ಷಿತ. ಮಕ್ಕಳ ಖಾತೆಗಳ ಮೇಲೆ ಕಣ್ಣಿಡಬೇಕಾಗುತ್ತದೆ ಮತ್ತು ಯಾವುದೇ ಸಂದೇಹವಿದ್ದರೂ ಕೇಳುವಂತೆ ಮಕ್ಕಳಿಗೆ ತಿಳಿಹೇಳಬೇಕಾಗಿದೆ.

ಮಾಹಿತಿ@ತಂತ್ರಜ್ಞಾನ ಅಂಕಣ: ಅವಿನಾಶ್ ಬಿ, ವಿಜಯ ಕರ್ನಾಟಕ, 18 ಸೆಪ್ಟೆಂಬರ್ 2017

Leave a Reply

Your email address will not be published. Required fields are marked *