ಓಂಕಾರೇಶ್ವರ

6
281

ಭಾರತದಲ್ಲಿರುವ 12 ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿOnkareshwar shikhar ಎರಡು ಜ್ಯೋತಿರ್ಲಿಂಗಗಳು ಮಧ್ಯಪ್ರದೇಶದಲ್ಲೇ ಇವೆ. ಅವು ಕೂಡ ಮಧ್ಯಭಾರತದ ಇಂದೋರ್ ಆಸುಪಾಸಿನಲ್ಲಿ. ಒಂದು ಇಂದೋರಿನಿಂದ 60 ಕಿ.ಮೀ. ದೂರದಲ್ಲಿರುವ ಉಜ್ಜಯಿನಿ ಮಹಾಕಾಲೇಶ್ವರ, ಇನ್ನೊಂದು ಇಂದೋರಿನಿಂದ 80 ಕಿ.ಮೀ. ದೂರ  ಇರುವ ಓಂಕಾರೇಶ್ವರ.

ಕಚೇರಿ ಕಾರ್ಯಕ್ಕಾಗಿ ಒಂದು ತಿಂಗಳ ಕಾಲ ಚೆನ್ನೈ ತೊರೆದು ಮಧ್ಯಭಾರತಕ್ಕೆ ತೆರಳಿದ ಸಂದರ್ಭದಲ್ಲಿ ದೊರೆತ ವಾರದ ರಜೆಯನ್ನು ಉಪಯೋಗಿಸಿ ಸುತ್ತಾಟಕ್ಕೆ ತೆರಳಿದ್ದಾಯಿತು. ಕೈಯಲ್ಲೊಂದು ಇತ್ತೀಚೆಗಷ್ಟೇ ಕೊಂಡುಕೊಂಡ ಡಿಜಿಟಲ್ ಕ್ಯಾಮರಾ ಇತ್ತು. ಅದನ್ನು ಪ್ರಯೋಗಕ್ಕೊಳಪಡಿಸಲು ಒಂದು ಅವಕಾಶವೂ ದೊರೆಯಿತು. ಆದರೆ ನನಗೆ ಈ ಕ್ಯಾಮರಾ ಬಂದಮೇಲೆಯೇ ಫೋಟೋಗ್ರಫಿ ಪರಿಚಯ ಆಗಿದ್ದು ಅಂತ ಹೇಳಿಯೇ ಬಿಡುತ್ತೇನೆ!

ಓಂಕಾರೇಶ್ವರ ಮಂದಿರ ನರ್ಮದಾ ತಟದಲ್ಲಿ ತನ್ನದೇ ಆದ ಸ್ನಿಗ್ಧ ಸೌಂದರ್ಯದಿಂದ ಕಂಗೊಳಿಸುತ್ತಿದೆ. ಮೈತುಂಬಿ ಹರಿಯುತ್ತಿರುವ ನರ್ಮದೆ ಇಲ್ಲಿ ಭಕ್ತಕೋಟಿಯ ಪಾಪಗಳನ್ನು ತೊಳೆಯುತ್ತಾಳೆಂಬ ಪ್ರತೀತಿ.

Onkareshwar-Narmada river

ಇಲ್ಲಿ ಜ್ಯೋತಿರ್ಲಿಂಗದ ಎರಡು ವಿಭಾಗಗಳಿವೆ. ಓಂಕಾರೇಶ್ವರ ಮತ್ತು ಮಮಲೇಶ್ವರ. ಇವುಗಳನ್ನು ಒಂದು ತೂಗು ಸೇತುವೆಯು ಬೆಸೆಯುತ್ತದೆ. ಅಂದರೆ ಎರಡೂ ಲಿಂಗಗಳನ್ನು ನೋಡಿದರೆ ಪೂರ್ಣ ಜ್ಯೋತಿರ್ಲಿಂಗ ನೋಡಿದ ಪುಣ್ಯ ಎಂಬ ಪ್ರತೀತಿ.

ಇದೇ ನರ್ಮದಾ ನದಿಗೆ ಇಲ್ಲಿ ಅಣೆಕಟ್ಟು ಕಟ್ಟಲಾಗುತ್ತಿದೆ. ಇದರ ಕಾಮಗಾರಿ ಆರಂಭವಾಗಿದ್ದು 2003ರಲ್ಲಿ. 2007ರ ಜುಲೈ ತಿಂಗಳಲ್ಲಿ ಈ ಓಂಕಾರೇಶ್ವರ ವಿದ್ಯುತ್ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.Narmada Dam @ Onkareshwar

ನರ್ಮದಾ ನದಿಗೆ ಓಂಕಾರೇಶ್ವರ ಹೊರತಾಗಿ ಮಧ್ಯಪ್ರದೇಶದಲ್ಲಿ ಇನ್ನೂ ಎರಡು ಅಣೆಕಟ್ಟುಗಳಿವೆ. ಇಂದಿರಾಸಾಗರ ಜಲಾಶಯ ಮತ್ತು ಮಹೇಶ್ವರ್ ಜಲಾಶಯ. (ವಿವಾದಕ್ಕೊಳಗಾಗಿ ವಿಶ್ವವಿಖ್ಯಾತವಾಗಿರುವ ಸರ್ದಾರ್ ಸರೋವರ ಅಣೆಕಟ್ಟು ಇರುವುದು ಗುಜರಾತಿನಲ್ಲಿ).

ಮಧ್ಯಪ್ರದೇಶದ ಮೂರು ಜಲಾಶಯಗಳಿಂದ ಒಟ್ಟು 1980 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಇದೆ. ಓಂಕಾರೇಶ್ವರ ಇರುವುದು ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ. ಇಲ್ಲಿ 520 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ ಇದ್ದು, ಜಲಾಶಯ ನಿರ್ಮಾಣ ಹೊಣೆ ನರ್ಮದಾ ಹೈಡ್ರೋಎಲೆಕ್ಟ್ರಿಕ್ ಡೆವಲಪ್‌ಮೆಂಟ್ ಕಾರ್ಪೊರೇಶನ್ (ಎನ್ಎಚ್‌ಡಿಸಿ)ಯದು.

ಈ ಯೋಜನೆಗೆ 1996ರಲ್ಲಿ 1846.77 ಕೋಟಿ ರೂ. ಶಾಸನಾತ್ಮಕ ಅಂಗೀಕಾರ ದೊರೆತಿತ್ತು. ಈ ಅಣೆಕಟ್ಟಿನಲ್ಲಿ ನೀರು ಶೇಖರಣಾ ಸಾಮರ್ಥ್ಯ 0.987 ಮಿಲಿಯನ್ ಘನ ಮೀಟರ್.Mamaleshwar Floating bridge

ಓಂಕಾರೇಶ್ವರ ಯೋಜನೆಯಿಂದ ಖಾಂಡ್ವಾ, ದೇವಾಸ್ ಮತ್ತು ಖರ್ಗೋನ್ ಜಿಲ್ಲೆಗಳ ಭೂಮಿ ಮುಳುಗಡೆಯಾಗಲಿದೆ. ಖಾಂಡ್ವಾ ಜಿಲ್ಲೆಯ 22 ಹಳ್ಳಿಗಳು ಪ್ರಭಾವಿತವಾಗಿ 7931 ಹೆಕ್ಟೇರ್ ಭೂಮಿ ಮುಳುಗಡೆಯಾಗುವ ಅಂದಾಜಿದೆ. ದೇವಾಸ್ ಜಿಲ್ಲೆಯ 8 ಗ್ರಾಮಗಳ 1251 ಹೆಕ್ಟೇರ್, ಖರ್ಗೋನ್ ಜಿಲ್ಲೆಯ 154 ಹೆಕ್ಟೇರ್ ವನಪ್ರದೇಶ ಮುಳುಗಡೆ ಭೀತಿಯಲ್ಲಿದೆ.

ಈ ಯೋಜನೆಯಿಂದ ವಾರ್ಷಿಕ 2.83 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರುಣಿಸಲಾಗುತ್ತದೆ. 529 ಗ್ರಾಮಗಳಿಗೆ ಲಾಭವಾಗಲಿದೆ.

ಓಂಕಾರೇಶ್ವರ ಯೋಜನೆ ಇಷ್ಟು ಶೀಘ್ರವಾಗಿ ಪೂರ್ಣಗೊಳ್ಳಲು ಇದಕ್ಕೆ ವಿರೋಧ ಬಂಧಿರುವುದು ಕಡಿಮೆ ಎಂಬ ಅಂಶವು ಪ್ರಧಾನ ಕಾರಣವಾಗಿದ್ದರೆ, ಈ ಯೋಜನೆ ಅನುಷ್ಠಾನದಲ್ಲಿ ಯಾವುದೇ ರಾಜಕಾರಣ ತಲೆ ಹಾಕದಿರುವುದೂ ಮತ್ತೊಂದು ಕಾರಣ. ಇದು ಇಂದಿರಾ ಸಾಗರ ಜಲಾಶಯದಿಂದ ಬಿಟ್ಟ ನೀರನ್ನು ಬಳಸುವ ಉಪ ವಿದ್ಯುತ್ ಉತ್ಪಾದನೆ ಯೋಜನೆಯೂ ಹೌದು.

6 COMMENTS

  1. ನಿಮ್ಮ ಓಂಕಾರೇಶ್ವರದ ಅನುಭವ ತುಂಬಾ ಚೆನ್ನಾಗಿದೆ. ಅಲ್ಲಿನ ಸ್ಥಿತಿಯನ್ನು ತುಂಬಾ ಚೆನ್ನಾಗಿ ವರ್ಣಿಸಿದ್ದೀರಿ.

  2. ವಿಷಯಭರಿತ ಸಚಿತ್ರ ಸುಂದರ ಲೇಖನ. ಇನ್ನೂ ಹೆಚ್ಚಿನ ಚಿತ್ರಗಳನ್ನು ಏರಿಸಿ, ಅವುಗಳ ಬಗ್ಗೆಯೂ ಬರೆಯಿರಿ.
    ಓಂಕಾರೇಶ್ವರ ಬಗ್ಗೆ ಇಷ್ಟೆಲ್ಲಾ ವಿಷಯಗಳಿವೆ ಎಂದು ನನಗೆ ತಿಳಿದಿರಲಿಲ್ಲ.

  3. ಅವೀ,

    ಓಂಕಾರೇಶ್ವರ ಪಯಾಣ ಆರಂಭ ಆಣೆಕಟ್ಟಿನಿಂದ ಆರಂಭವಾಗಿದೆ..ಆಣೆಕಟ್ಟುಗಳ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿರೋ ಹಾಗಿದೆ..ಪ್ರವಾಸದ ಮುಂದಿನ ಭಾಗಕ್ಕೆ ಎದುರು ನೋಡುತ್ತಿದ್ದೇನೆ.

  4. ಗಿರೀಶ್ ಅವರೆ,
    ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದ.

    @ ಶ್ರೀನಿವಾಸ್
    ಧನ್ಯವಾದ. ಹೆಚ್ಚು ಚಿತ್ರಗಳನ್ನು ಏರಿಸಲು ವರ್ಡ್‌ಪ್ರೆಸ್ ಬ್ಲಾಗಲ್ಲಿ alignmentಗೆ ತುಂಬಾ ಕಷ್ಟ. ಹಾಗಾಗಿ ಆಯ್ದ ಚಿತ್ರಗಳನ್ನು ಮಾತ್ರವೇ ಹಾಕಿದ್ದೇನೆ.

    @ ಶಿವ್
    ಯಾವುದೇ ಪೂರ್ವ ತಯಾರಿ ಇಲ್ಲದೆ, ಅಚಾನಕ್ ಆಗಿ ಅವಸರದಲ್ಲಿ ಹೋಗಿ ಬಂದ ಕಾರಣ ಹೆಚ್ಚು ತಿಳಿದುಕೊಳ್ಳಲು ಮತ್ತು ಪೂರ್ತಿಯಾಗಿ ಓಂಕಾರೇಶ್ವರ ನೋಡಲು ಅಸಾಧ್ಯವಾಗಿತ್ತು. ನಿಮ್ಮ ಕಳಿಂಗ ರಾಜ್ಯ ಪ್ರವಾಸದಷ್ಟು ಹಿತಕರವೂ ಆಗಿರಲಿಲ್ಲ. 🙂

LEAVE A REPLY

Please enter your comment!
Please enter your name here